ಲೈಂಗಿಕತೆ ಮತ್ತು ಕಷ್ಟ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ 1974ರಲ್ಲಿ, ಕ್ಯಾಲಿಫೋರ್ನಿಯಾದ ವೆನಿಸ್‌ ಬೀಚ್‌ನಲ್ಲಿ ಬೆಳಗಿನ ವಾಯು ಸಂಚಾರದ ವೇಳೆ ನಡೆದ ಸಂವಾದ.

ಭಕ್ತ: ಶ್ರೀಲ ಪ್ರಭುಪಾದರೇ, ಇಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ವಿಚ್ಛೇದನ ಪ್ರಮಾಣ ಶೇಕಡ 50 ರಷ್ಟಿದೆ. ಇದು ಯಾಕೆ ಹೀಗೆ?

ಶ್ರೀಲ ಪ್ರಭುಪಾದ: ಭಾರತದಲ್ಲಿ ನಾಣ್ಣುಡಿಯೊಂದು ಇದೆ, ವಿವಾಹಿತರು ಮತ್ತು ಅವಿವಾಹಿತರು ಇಬ್ಬರೂ ಪ್ರಲಾಪಿಸುತ್ತಾರೆ. ವಿವಾಹಿತ, `ನಾನ್ಯಾಕೆ ಮದುವೆಯಾದೆ? ನಾನು ಸ್ವತಂತ್ರನಾಗಿ ಇರಬಹುದಿತ್ತು.’ ಎಂದು ಗೋಳಾಡುತ್ತಾನೆ! ಮದುವೆಯಾಗದವ, `ಅಯ್ಯೋ, ನಾನ್ಯಾಕೆ ಹೆಂಡತಿಯನ್ನು ಸ್ವೀಕರಿಸಲಿಲ್ಲ? ನಾನು ಸಂತೋಷವಾಗಿರುತ್ತಿದ್ದೆ!’ ಎಂದು ವಿಷಾದಿಸುತ್ತಾನೆ. (ನಗು). ಲೈಂಗಿಕ ಕ್ರಿಯೆಯಿಂದ ಮಗುವಾಗುತ್ತದೆ. ಶಿಶುವಿನ ಜನನವಾದ ಕೂಡಲೇ ಸಂಕಟ ಶುರುವಾಗುತ್ತದೆ. ಮಗುವಿಗೂ ನೋವು, ಅದನ್ನು ಬೆಳೆಸುವ ಪೋಷಕರಿಗೂ ಸಂಕಷ್ಟ. ಆದರೆ ಅವರಿಗೆ ಮತ್ತೊಂದು ಮಗುವಾಗುತ್ತದೆ. ಆದುದರಿಂದ ಶ್ರೀಮದ್‌ ಭಾಗವತದಲ್ಲಿ ಹೇಳಲಾಗಿದೆ (7.9.45),  ತೃಪ್ತ್ಯಂತಿ ನೇಹ ಕೃಪಣಾ ಬಹು ದುಃಖ ಭಾಜಃ. ಶಿಶು ಜನನ, ಪಾಲನೆಯಲ್ಲಿ ಸಂಕಷ್ಟ, ತೊಂದರೆಗಳಿವೆ ಎಂದು ಗೊತ್ತಿದ್ದರೂ ಜನರು ಮತ್ತೆ ಅದನ್ನೇ ಮಾಡುತ್ತಾರೆ.

ಲೌಕಿಕ ಜಗತ್ತಿನಲ್ಲಿ ಲೈಂಗಿಕತೆಯೇ ಪ್ರಮುಖ ಸುಖ, ಸಂತೋಷದ ಅಂಶವಾಗಿದೆ. ಅದು ಪ್ರಮುಖ ಆನಂದ. ಮತ್ತು ಅದು ಜಿಗುಪ್ಸೆ ಉಂಟುಮಾಡುತ್ತದೆ. ಈ ಸುಖ ಎಂತದು? ಕಂಡುಯನೇನ ಕರೆಯೋರಿವ ದುಃಖ-ದುಃಖಂ. ಇದು ಹೇಗೆಂದರೆ, ತುರಿತವಾದಾಗ, ಎರಡು ಕೈಗಳನ್ನು ಉಜ್ಜಿಕೊಂಡಂತೆ. ಲೈಂಗಿಕತೆಯು ಕೆಟ್ಟ ಪರಿಣಾಮಗಳನ್ನೇ ಉಂಟುಮಾಡಿದರೂ ಯಾರಿಗೂ ತೃಪ್ತಿ ಇಲ್ಲ. ಈಗಂತೂ ಅನೇಕ ರೀತಿಯ ಗರ್ಭ ನಿರೋಧಕ ಸಾಧನಗಳಿವೆ, ಗರ್ಭಪಾತವಿದೆ. ಮಾಯಾ ಎಷ್ಟು ಶಕ್ತಿಶಾಲಿ ಎಂದರೆ, ಅವಳು ಹೇಳುತ್ತಾಳೆ, `ಹಾ, ಇದನ್ನು ಮಾಡಿ ಅನಂತರ ಸಿಕ್ಕಿ ಹಾಕಿಕೊಳ್ಳಿ.’

ಆದುದರಿಂದ ಭಾಗವತ ಹೇಳುತ್ತದೆ, ಕಂಡುತಿವನ್‌ ಮನಸಿಜಂ ವಿಷಹೇತ ಧೀರಃ. ಧೀರ, ಸಮಚಿತ್ತ ಮತ್ತು ವಿವೇಕಿಯಾದವನು ಲೈಂಗಿಕ ಆಸೆಯ ತುರಿತದ ಉದ್ರೇಕವನ್ನು ಸಹಿಸಿಕೊಳ್ಳುತ್ತಾನೆ. ಆ ರೀತಿ ಸಹನೆ ಉಳ್ಳವರು ಅನೇಕ ತೊಂದರೆಗಳಿಂದ ಪಾರಾಗುತ್ತಾರೆ. ಆದರೆ ಸಹಿಸಿಕೊಳ್ಳಲಾಗದವರು ತತ್‌ಕ್ಷಣ ಅದರಲ್ಲಿ ಸಿಲುಕುತ್ತಾರೆ. ಕ್ರಮವೋ ಅಕ್ರಮವೋ ಲೈಂಗಿಕತೆಯು ಸಂಕಟ ತರುವಂತಹುದೇ.

ಭಕ್ತ: ಶ್ರೀಲ ಪ್ರಭುಪಾದರೆ, ಈ ದಾರಿಯಲ್ಲಿ ನಾವು ಇದೇ ಮೊದಲ ಬಾರಿಗೆ ನಡೆದಿದ್ದೇವೆ. ಎಲ್ಲವೂ ಭಿನ್ನವಾಗಿ ಕಾಣುತ್ತಿದೆ ಮತ್ತು ಏನೋ ಹೊಸತನ.

ಶ್ರೀಲ ಪ್ರಭುಪಾದ: (ನಗು) ಇದು ಲೌಕಿಕ ಬದುಕು. ನಾವು ಕೆಲ ಸಮಯ ಈ ಕಡೆ, ಕೆಲ ಸಮಯ ಆ ಕಡೆ ಅಲೆದಾಡುತ್ತಿರುತ್ತೇವೆ. ಆದರೆ, ಯೋಚಿಸುತ್ತೇವೆ, `ಓ! ಇದು ಹೊಸತು.’ ಬ್ರಹ್ಮಾಂಡ ಭ್ರಮತೇ : ಏನಾದರೂ ಹೊಸತನ್ನು ಕಂಡು ಹಿಡಿಯುವ ಪ್ರಯತ್ನವಾಗಿ ನಾವು ಜಗತ್ತಿನಾದ್ಯಂತ ಅಲೆದಾಡುತ್ತಿದ್ದೇವೆ. ಆದರೆ ಯಾವುದೂ ಹೊಸತಲ್ಲ, ಎಲ್ಲವೂ ಹಳೆಯದೇ.

ಒಬ್ಬ ಮನುಷ್ಯ ವೃದ್ಧನಾದಾಗ, `ಈ ಬದುಕು ಎಷ್ಟೊಂದು ಕಷ್ಟಮಯ’ ಎಂದು ಯೋಚಿಸುತ್ತಾನೆ. ಆಗ ಅವನಿಗೆ ಹೊಸ ದೇಹಕ್ಕೆ ಬದಲಾಗಲು ಅವಕಾಶ ನೀಡಲಾಗುತ್ತದೆ. ಮಗುವಿನ ದೇಹ ಅವನಿಗೆ ಸಿಗುತ್ತದೆ. ಮಗುವನ್ನು ಚೆನ್ನಾಗಿ ಪೋಷಿಸುತ್ತಾರಲ್ಲವೇ? ಆಗ ಅವನು ಯೋಚಿಸುತ್ತಾನೆ, `ಓ! ಬದುಕು ಎಷ್ಟು ಸೌಲಭ್ಯಮಯವಾಗಿದೆ!’. ಆದರೆ ಪುನಃ ವೃದ್ಧನಾಗುತ್ತಾನೆ ಮತ್ತು ಅವನಿಗೆ ಬದುಕು ಪುನಃ ರೋಸಿಹೋಗುತ್ತದೆ. ಆದುದರಿಂದ ದಯಾಳುವಾದ ಕೃಷ್ಣ ಹೇಳುತ್ತಾನೆ, `ಸರಿ, ನಿನ್ನ ದೇಹ ಬದಲಿಸಿಕೋ’. ಇದು ಚರ್ವಿತ ಚರ್ವಣನಂ ಆಗುತ್ತದೆ. ಕೃಷ್ಣ ಜೀವಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದಾನೆ. ಆಗಲಿ, `ಮರವಾಗು. ಸರ್ಪವಾಗು. ದೇವತೆಯಾಗು. ರಾಜನಾಗು. ಚಪ್ಪಲಿ ಹೊಲೆಯುವವನಾಗು. ಸ್ವರ್ಗದಂತಹ ಗ್ರಹಗಳಿಗೆ ಹೋಗು. ನರಕದಂತಹ ಗ್ರಹಗಳಿಗೆ ಹೋಗು.’ ಎಷ್ಟೊಂದು ಬಗೆಯ ಬದುಕುಗಳಿವೆ! ಆದರೆ, ಇದೆಲ್ಲದರಲ್ಲಿಯೂ ಜೀವಿಯು ಈ ಲೌಕಿಕ ಜಗತ್ತಿನಲ್ಲಿ ಸುತ್ತಲ್ಪಟ್ಟಿದ್ದಾನೆ. ಅವನು ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಾನೆ. ಆದರೆ ಕೃಷ್ಣನ ಆಶ್ರಯದಲ್ಲಿ ಮಾತ್ರ ಸ್ವಾತಂತ್ರ್ಯ ಲಭ್ಯ ಎನ್ನುವುದು ಅವನಿಗೆ ಗೊತ್ತಿಲ್ಲ. ಅವನು ಅದನ್ನು ಒಪ್ಪಿಕೊಳ್ಳುವುದಿಲ್ಲ.

ಈ ಲೌಕಿಕ ಜಗತ್ತಿನ ಸಂಕಷ್ಟಗಳನ್ನು ನೋಡಿ ಮಾಯಾವಾದಿಗಳು (ನಿರಾಕಾರವಾದಿಗಳು) ಬದುಕನ್ನು ವೈವಿಧ್ಯರಹಿತಗೊಳಿಸಲು (ನಿರ್ವಿಶೇಷ) ಇಷ್ಟಪಡುತ್ತಾರೆ. ಬೌದ್ಧರಂತೂ ಇದನ್ನು ಶೂನ್ಯ ಮಾಡಲು ಬಯಸುತ್ತಾರೆ. ಆದರೆ ಈ ಎರಡು ಪ್ರಸ್ತಾವಗಳೂ ಸಾಧ್ಯವಿಲ್ಲ. ನಿರ್ವಿಶೇಷವಾಗಿ ನೀವು ಸ್ವಲ್ಪ ಸಮಯ ಇರಬಹುದು. ಆದರೆ ಪುನಃ ನಿಮಗೆ ವೈವಿಧ್ಯಮಯ ಬದುಕು ಬೇಕೆನಿಸುತ್ತದೆ. ದೊಡ್ಡ ದೊಡ್ಡ ಸಂನ್ಯಾಸಿಗಳು ಬ್ರಹ್ಮ ಸತ್ಯಂ ಜಗನ್‌ ಮಿಥ್ಯ (ನಿರಾಕಾರ ಪರಾತ್ಪರವು ಸತ್ಯ; ಈ ವಿಶ್ವವು ಮಿಥ್ಯ) ಕುರಿತಂತೆ ಬೋಧಿಸುತ್ತಾರೆ. ಆದರೆ ಅವರು ರಾಜಕೀಯ ಮತ್ತು ಸಾಮಾಜಿಕ ಸೇವೆಗಾಗಿ ಪುನಃ ಬ್ರಹ್ಮನ್‌ನಿಂದ ಕೆಳಗಿಳಿದು ಬರುತ್ತಾರೆ. ಅವರು ಬ್ರಹ್ಮನ್‌ನಲ್ಲಿ ದೀರ್ಘಕಾಲ ಇರಲಾರರು. ಆದುದರಿಂದ ಅವರು ಈ ಲೌಕಿಕ ವೈವಿಧ್ಯವನ್ನು ಒಪ್ಪಿಕೊಳ್ಳಬೇಕು. ಏಕೆಂದರೆ, ವೈವಿಧ್ಯವೇ ಸುಖ ಸಂತೋಷದ ಮಾತೆ. ಆದುದರಿಂದ ನಮ್ಮ ಪ್ರಸ್ತಾವ ಏನೆಂದರೆ ನಿಜವಾದ ವೈವಿಧ್ಯಕ್ಕೆ ಬನ್ನಿ. ಅದೇ ಕೃಷ್ಣ ಪ್ರಜ್ಞೆ. ಆಗ ನಿಮ್ಮ ಬದುಕು ಯಶಸ್ವಿಯಾಗುತ್ತದೆ.

ಭಕ್ತ: ಬಹಳಷ್ಟು ಜನರು ಮುಂದಿನ ಬದುಕಿನ ಬಗೆಗೆ ಕಿಂಚಿತ್ತೂ ಚಿಂತೆ ಇಲ್ಲದೆ ಈಗಿನ ಬದುಕನ್ನು ಆನಂದಿಸಲು ಪ್ರಯತ್ನಿಸುತ್ತಾರೆ.

ಶ್ರೀಲ ಪ್ರಭುಪಾದ: ಅವರಿಗೆ ಮುಂದಿನ ಬದುಕು ಏನೆಂದು ಗೊತ್ತಿಲ್ಲ. ಆದುದರಿಂದ ಅವರು ಅದನ್ನು ಶೂನ್ಯವಾಗಿಸುತ್ತಾರೆ. `ಮುಂದಿನ ಬದುಕೆಂಬುದಿಲ್ಲ’ ಎಂದು ಹೇಳುತ್ತಲೇ ಅವರು ತೃಪ್ತಿಪಟ್ಟುಕೊಳ್ಳುತ್ತಾರೆ. ಇದು ನೋಡಿ, ಮೊಲವೊಂದು ಅಪಾಯವನ್ನು ನೋಡಿದಾಗ ಕಣ್ಣು ಮುಚ್ಚಿಕೊಂಡು ಅಪಾಯ ಇಲ್ಲ ಎಂದು ಭಾವಿಸುತ್ತದೆ. ಈ ಮೂರ್ಖರೂ ಹಾಗೆಯೇ. ಇವೆಲ್ಲ ಮೌಢ್ಯ.

ಭಕ್ತ: ಸ್ಟೋಯಿಕ್‌ ಸಿದ್ಧಾಂತ ಎಂಬುದಿದೆ. ಅದು ಹೇಳುವುದೇನೆಂದರೆ, ಬದುಕು ಸಂಕಟಪಡಲೆಂದೇ ಇರುವುದರಿಂದ ನೀವು ಬಲಿಷ್ಠರಾಗಬೇಕು ಮತ್ತು ಸಂಕಷ್ಟ ಅನುಭವಿಸಬೇಕು.

ಶ್ರೀಲ ಪ್ರಭುಪಾದ: ಅಂದರೆ, ಯಾವುದೇ ಪ್ರತಿಭಟನೆ ಇಲ್ಲದೆ ಕಷ್ಟ ಅನುಭವಿಸುವವರು ಅತ್ಯುತ್ತಮ ಜೀವಗಳು. ಇಂತಹ ಸಿದ್ಧಾಂತದಲ್ಲಿ ನಂಬಿಕೆ ಎಂದರೆ ಏನು? ಸಂಕಷ್ಟವನ್ನು ಸ್ಥಗಿತಗೊಳಿಸುವುದು ಹೇಗೆ ಎಂಬುದು ಅವರಿಗೆ ಗೊತ್ತಿಲ್ಲ ಎಂದೇ ಅರ್ಥವಾಗುತ್ತದೆ. ಕಷ್ಟಗಳನ್ನು ತಡೆಯಲಾಗದ ಕಾರಣ ಅದನ್ನು ಸಹಿಸಿಕೊಳ್ಳಲು ನಾವು ಬಲಿಷ್ಠರಾಗಬೇಕು ಎಂದು ತತ್ತ್ವಜ್ಞಾನಿಗಳ ವರ್ಗವೊಂದು ಹೇಳುತ್ತದೆ. ಈ ಬದುಕು ಸಂಕಷ್ಟಗಳಿಂದ ತುಂಬಿರುವುದರಿಂದ ನಾವು ಅದನ್ನು ಶೂನ್ಯಗೊಳಿಸಬೇಕೆಂದು ಮತ್ತೊಂದು ತತ್ತ್ವಜ್ಞಾನಿಗಳ ವರ್ಗ ಹೇಳುತ್ತದೆ. ಆದರೆ ಕಷ್ಟಮಯವಲ್ಲದ ಬದುಕಿದೆ ಎಂಬ ಬಗ್ಗೆ ಇವರಾರಿಗೂ ಮಾಹಿತಿ ಇಲ್ಲ. ಅದು ಕೃಷ್ಣ ಪ್ರಜ್ಞೆ. ಇಲ್ಲಿ ಬದುಕಿದೆ, ಅದರೆ ಸಂಕಷ್ಟಗಳಿಲ್ಲ.

ಆನಂದಮಯೋಽಭ್ಯಾಸಾತ್‌ : ಬರೀ ಪರಮಾನಂದ. ಏನೂ ಸಂಕಷ್ಟಗಳಿಲ್ಲದೆ ನೃತ್ಯ, ಭೋಜನ ಮತ್ತು ಪಠಣ. ಇದನ್ನು ಯಾರಾದರೂ ನಿರಾಕರಿಸುವರೇ? ಅಂತಹ ಮೂರ್ಖರಿದ್ದಾರೆಯೇ?

ಭಕ್ತ: ಅಂತಹ ಬದುಕಿದೆ ಎಂಬುದನ್ನು ಜನರು ಒಪ್ಪಿಕೊಳ್ಳುವುದಿಲ್ಲ.

ಶ್ರೀಲ ಪ್ರಭುಪಾದ: ಆದರೆ ಅಂತಹ ಬದುಕಿದ್ದರೆ? ನೀವು ಶಾಶ್ವತವಾಗಿ ನೃತ್ಯ, ಭೋಜನ ಮತ್ತು ಪಠಣದಲ್ಲಿ ತೊಡಗಿಕೊಂಡು ಸುಖವಾಗಿರುವ ಬದುಕಿದ್ದರೆ… ನೀವು ಅದನ್ನು ಒಪ್ಪಿಕೊಳ್ಳುವುದಿಲ್ಲವೇ?

ಭಕ್ತ: ಯಾರು ಬೇಕಾದರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಬದುಕಿಲ್ಲ ಎಂದು ಜನರು ಯೋಚಿಸುತ್ತಾರೆ.

ಶ್ರೀಲ ಪ್ರಭುಪಾದ: ಆದುದರಿಂದ, ಸಂಕಟಗಳಿಲ್ಲದ ಸಂತೋಷದ ಬದುಕಿದೆ ಎಂಬುವುದು ನಮ್ಮ ಮೊದಲ  ಪ್ರಸ್ತಾವನೆಯಾಗಬೇಕು. ಎಲ್ಲರು ಇದನ್ನು ಇಷ್ಟಪಟ್ಟು ಒಪ್ಪಿಕೊಳ್ಳುತ್ತಾರೆ. ಆದರೆ, ದುರದೃಷ್ಟವೆಂದರೆ, ಜನರು ಪದೇ ಪದೇ ಮೋಸಕ್ಕೆ ಒಳಗಾಗಿರುತ್ತಾರೆ. ಇದೂ ಕೂಡ ಇನ್ನೊಂದು ಮೋಸ ಎಂದು ಅವರು ಬಗೆದಾರು. ಆದುದರಿಂದ ಕೃಷ್ಣ ಪ್ರಜ್ಞೆಯ ಬೋಧನೆ ಎಂದರೆ ಸಂಕಷ್ಟಗಳಿಲ್ಲದ ಬದುಕಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದಾಗಿದೆ.

ಭಕ್ತ: ನಾವು ಮೋಸ ಮಾಡುತ್ತಿಲ್ಲ ಎನ್ನುವುದು ಅವರಿಗೆ ಹೇಗೆ ಮನವರಿಕೆಯಾಗುತ್ತದೆ?

ಶ್ರೀಲ ಪ್ರಭುಪಾದ: ಅವರನ್ನು ನಮ್ಮ ಮಂದಿರಗಳಿಗೆ ಆಹ್ವಾನಿಸಿ. ಅವರು ನಮ್ಮ ಭಕ್ತರನ್ನು ನೋಡಲಿ. ನಾವು ಚೆನ್ನಾಗಿ ಪಠಿಸುತ್ತಿರುತ್ತೇವೆ, ನರ್ತಿಸುತ್ತಿರುತ್ತೇವೆ ಮತ್ತು ಉಣ್ಣುತ್ತಿರುತ್ತೇವೆ. ಇದೇ ಅವರಿಗೆ ಸಾಕ್ಷಿ.

ಭಕ್ತ: ಆದರೆ, ಇದನ್ನೆಲ್ಲ ಗ್ರಹಿಸಿಕೊಳ್ಳುವ ಮುನ್ನ ಅವರು ಪರಿಶುದ್ಧರಾಗಬೇಕಲ್ಲವೇ?

ಶ್ರೀಲ ಪ್ರಭುಪಾದ: ಇಲ್ಲ. `ಬನ್ನಿ, ನಮ್ಮೊಡನೆ ಹರೇ ಕೃಷ್ಣ ಪಠಿಸಿ, ನೀವು ಪರಿಶುದ್ಧರಾಗುತ್ತೀರಿ. ನಿಮ್ಮಿಂದ ನಮಗೆ ಏನೂ ಬೇಡ. ನಾವು ನಿಮಗೆ ಊಟ-ಎಲ್ಲವನ್ನೂ ಕೊಡುತ್ತೇವೆ. ಸುಮ್ಮನೆ ಬಂದು ನಮ್ಮ ಜೊತೆ ಪಠಿಸಿ’, ಎಂದಷ್ಟೇ ಅವರಿಗೆ ಹೇಳುತ್ತೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi