ಡಾರ್ವಿನ್ ಮಹನೀಯವನ್ನು ನಂಬಬೇಕೆ

ಶ್ರೀಲ ಪ್ರಭುಪಾದರು ತಮ್ಮ ಶಿಷ್ಯರೊಡನೆ ನಡೆಸಿದ ಸಂವಾದ, ಸ್ಥಳ: ಡರ್ಬಾನ್, ದಕ್ಷಿಣ ಆಫ್ರಿಕಾ, ಅಕ್ಟೋಬರ್ 1975

ಶ್ರೀ ಪ್ರಭುಪಾದ: ಮಂಗನಿಂದ ಮಾನವ ಬಂದ, ಆದರೆ ಈಗೇಕೆ ಮಂಗನಿಂದ ಮಾನವ ಬರುತ್ತಿಲ್ಲ?

ಒಬ್ಬ ಭಕ್ತ: ಹೀಗಾದದ್ದು ಒಮ್ಮೆ ಮಾತ್ರ. ಮಾನವ ಸೃಷ್ಟಿ ಪ್ರಕ್ರಿಯೆ ಆರಂಭವಾಗಲು ಆ ಒಂದು ಸಂದರ್ಭ ಸಾಕಾಗಿತ್ತು.

ಶ್ರೀಲ ಪ್ರಭುಪಾದ: ಹೀಗಾದದ್ದು ಒಂದೇ ಸಲ ಮಾತ್ರವೆ? ಈ ಮಾತು ಶುದ್ಧ ದಡ್ಡತನ. ಫಲಪುಷ್ಪಗಳು ಪ್ರತಿ ಋತುವಿನಲ್ಲಿ ಬರುವುದನ್ನು ನಾವು ಕಾಣುತ್ತಿದ್ದೇವೆ. ಅವು ಒಮ್ಮೆ ಮಾತ್ರ ಬರುತ್ತವೆಯೇ? ಇದು ಉದ್ಧಟತನದ ಮಾತು. ಈ ಮಾತನ್ನು ನಾವು ಒಪ್ಪಿಕೊಳ್ಳಬೇಕೆ? ನಮ್ಮ ಅನುಭವದಂತೆ, ನಿಯಮಿತವಾಗಿ ಒಂದೇ ಬಗೆಯ ಹೂವು ಒಂದೇ ತೋಟದಿಂದ ಬರುತ್ತಿದೆ.

ಭಕ್ತ: ವಾಸ್ತವವಾಗಿ, ಮಂಗನ ಮತ್ತು ಮನುಷ್ಯನ ಮಧ್ಯದಲ್ಲಿರುವ ಒಂದು ಪ್ರಾಣಿ ಜಾತಿಯು ಸಂಧಿಸದೇ ಹೋಗಿದೆ.

ಶ್ರೀಲ ಪ್ರಭುಪಾದ: ಬಿಟ್ಟುಹೋದ ಆ ಜೀವಜಾತಿಯು ಯಾವುದು? ಇದೆಲ್ಲಾ ಬರೀ ಸುಳ್ಳು. ಸಾಲದ್ದಕ್ಕೆ ಇದೆಲ್ಲಾ ವಿಜ್ಞಾನದ ಹೆಸರಿನಲ್ಲಿ ಆಗುತ್ತಿದೆ. ಹೇಗಿದೆ ನೋಡಿ ಈ ತಮಾಷೆ. ಡಾರ್ವಿನ್ನನದು ದಾರಿತಪ್ಪಿಸುವ ಮಾತು. ಆದರೆ ಜನ ಎಂಥ ದಡ್ಡರೆಂದರೆ – ನಾಗರಿಕರು ಎಂದು ಕರೆಸಿಕೊಳ್ಳುವ ಜನ – ಡಾರ್ವಿನ್ನನದು ಒಂದು ಮಹಾ ಸಿದ್ಧಾಂತ ಎಂದು ಒಪ್ಪಿಕೊಳ್ಳುತ್ತಾರೆ. “ಡಾರ್ವಿನ್ ಮಾಡಿದ್ದು ಒಂದು ದೊಡ್ಡ ಶೋಧ’ ಎನ್ನುತ್ತಾರೆ ಈ ಜನ.

ಇದೆಲ್ಲಾ ಬರೀ ಮಕ್ಕಳು ತೋರಿಸುವ ಮೂರ್ಖತನ. ಮಾತಿನಲ್ಲಿ ವಿವೇಕವಿಲ್ಲ. ಬುದ್ಧಿಯ ಬಳಕೆಯೂ ಇಲ್ಲ. ಮನುಷ್ಯನ ಉಗಮ ಮಂಗನಿಂದ ಆಯಿತೆಂದು ಈ ಜನ ಹೇಳಿದ್ದೂ ಹೇಳಿದ್ದೆ. ಸರಿ, ಈಗೇಕೆ ಮಂಗನಿಂದ ಮನುಷ್ಯ ಆಗುತ್ತಿಲ್ಲ?

ಭಕ್ತ: ಕೆಲವು ಸಲ ಪ್ರಕೃತಿಯಲ್ಲಿ ಅಸಹಜತೆಗಳು ಕಾಣಿಸಿಕೊಳ್ಳುವುದುಂಟು.

ಶ್ರೀಲ ಪ್ರಭುಪಾದ: “ಕೆಲವು ಸಲ’ ಇಂಥ ಮಾತೆಲ್ಲಾ ಡಾರ್ವಿನ್‌ಗೆ ಒಪ್ಪುತ್ತದೆ. ಅವನ ಮೂರ್ಖತನಕ್ಕೆ ಪ್ರಕೃತಿ ಅವನ ಆಳಿನಂತೆ ವರ್ತಿಸಬೇಕೆ! ಕೆಲವು ಸಲ ಅಂತೆ. ನೋಡಿ ಹೇಗಿದೆ! ಡಾರ್ವಿನ್‌ನಂಥವರು ಹೇಳಿದನ್ನೆಲ್ಲಾ ನಾವೇಕೆ ನಂಬಬೇಕು? ‘ಕೆಲವು ಸಲ’ ಎನ್ನುವುದು ಪ್ರಕೃತಿಯ ನಿಯಮವಲ್ಲ. ಪ್ರಕೃತಿಯ ನಿಯಮ ಯಾವಾಗಲೂ ಅದೇ.

ಅದು ಪ್ರಮಾಣಬದ್ಧ. ಡಾರ್ವಿನ್‌ನ ಅಡಿಯಾಳಾಗಿದ್ದಕ್ಕೆ ಪ್ರಕೃತಿ ಬದ್ಧವಲ್ಲ. ‘ಕೆಲವು ಸಲ’ ಎಂದು ಅವನು ಹೇಳಿದ. ಆ ಮಾತಿನ ಅರ್ಥ ಅವನಿಗೆ ಮಾತ್ರ ಗೊತ್ತಿತ್ತು. ನಾವೆಲ್ಲಾ ಅವನ ಮಾತು ನಂಬಿ ಸುಮ್ಮನೆ ಕೂತಿರಬೇಕಿತ್ತು. ಕೆಲವು ಸಲ ಹಾಗಾಯಿತು ಮತ್ತು ಹಾಗಾದದ್ದನ್ನು ಪ್ರಕೃತಿ ಅವನಿಗೆ ಹೇಳಿತು. ಇದೆಲ್ಲಾ ಡಾರ್ವಿನ್‌ಗೆ ಹೇಗೆ ತಿಳಿಯಿತು? ಡಾರ್ವಿನ್‌ಗೆ ಹೊರತು ಬೇರೆ ಯಾರಿಗೂ ಅವನ ಮಾತು ಅರ್ಥವಾಗಲಿಲ್ಲವೇಕೆ?

ಭಕ್ತ: ನಮ್ಮ ವಿರುದ್ಧ ಕೂಡ ಅವರು ಇದೇ ವಾದ ಹೂಡುತ್ತಾರೆ. ಎಲ್ಲೋ ಕೆಲವರಿಗೆ ಮಾತ್ರ ದೇವರ ವಿಚಾರ ಅರ್ಥವಾಗುತ್ತದೆ ಎಂದು ಅವರು (ಡಾರ್ವಿನ್‌ನಂಥ ವಿಜ್ಞಾನಿಗಳು) ಹೇಳುತ್ತಾರೆ.

ಶ್ರೀಲ ಪ್ರಭುವಾದ: ಇಲ್ಲ. ನಾವು ಹಾಗೆನ್ನುವುದಿಲ್ಲ. ಭಗವಂತನು ಮೊದಲು ಸೂರ್ಯದೇವನಿಗೆ ಜ್ಞಾನವನ್ನು ಬೋಧಿಸಿದ. ಸೂರ್ಯದೇವ ಅದನ್ನು ತನ್ನ ಮಗ ಮನುವಿಗೆ ಬೋಧಿಸಿದ. ಮನು ಇಕ್ಷಾಕುವಿಗೆ, ಅವನು ತನ್ನ ಮಗನಿಗೆ – ಹೀಗೆ ಜ್ಞಾನ ಹರಿದು ಬಂತು. ಏವಂ ಪರಂಪರಾ ಪ್ರಾಪ್ತಮ್. ಈ ಮಾತು ತತ್ತ್ವತಃ ಒಪ್ಪಬಹುದಾದರೂ ”ದೇವರು ನನಗೆ ಹೇಳಿದ’ ಎಂದು ನಾವು ಘೋಷಿಸಿಕೊಳ್ಳುವುದಿಲ್ಲ.

ಭಗವಂತನು ಬ್ರಹ್ಮನಿಗೆ ಅರುಹಿದ. ಬ್ರಹ್ಮನು ನಾರದರಿಗೆ ಬೋಧಿಸಿದ. ನಾರದರು ವ್ಯಾಸಮಹರ್ಷಿಗೆ ಅರುಹಿದರು. ವ್ಯಾಸರು ಇತರರಿಗೆ ತಿಳಿಯಪಡಿಸಿದರು.

ನನ್ನ ಮುತ್ತಜ್ಜನಿಂದ ನನ್ನ ತಾತನಿಗೆ, ಆ ತಾತನಿಂದ ನನ್ನ ತಂದೆಗೆ ಹಾಗೆಯೇ ನನ್ನ ತಂದೆಯಿಂದ ನನ್ನ ಕುಟುಂಬಕ್ಕೆ ಜ್ಞಾನ ಹರಿದುಬಂದಿದ್ದರೆ ಅದರಲ್ಲಿ ತಪ್ಪೇನಿದೆ? ಏವಂ ಪರಂಪರಾ ಪ್ರಾಪ್ತಮ್ ಕೃಷ್ಣನು ಅರ್ಜುನನಿಗೆ (ಗೀತಾತತ್ತ್ವ) ಬೋಧಿಸಿದ. ಅದನ್ನು ಅರ್ಜುನ ಯಾವ ರೀತಿ ಅರ್ಥಮಾಡಿಕೊಂಡನೋ ಅದೇ ರೀತಿ ಅರ್ಥಮಾಡಿ ಕೊಳ್ಳುತ್ತಿದ್ದೇವೆ. ಅರ್ಜುನನು ತತ್ತ್ವವನ್ನು ಹೇಗೆ ಅರ್ಥಮಾಡಿಕೊಂಡನೋ ಅದನ್ನು ಭಗವದ್ಗೀತೆಯಲ್ಲಿ ಬರೆಯಲಾಗಿದೆ.

“ಡಾರ್ವಿನ್ನನಿಗೆ ಎಲ್ಲವೂ ಚೆನ್ನಾಗಿ ಗೊತ್ತಿತ್ತು” ಎಂಬ ರೀತಿಯಲ್ಲಿ ನಾವು ಜ್ಞಾನವನ್ನು ಒಪ್ಪಿಕೊಳ್ಳುವುದಿಲ್ಲ. ವಿಜ್ಞಾನಿಗಳು ಎಂದು ಕರೆಸಿಕೊಳ್ಳುವ ಈ ಎಲ್ಲ ಜನ ಪ್ರಥಮ ದರ್ಜೆಯ ಅವಿವೇಕಿಗಳು. “ಒಂದು ಪ್ರಾಣಿ ಜಾತಿಯು ಸಂಧಿಸದೇ ಹೋಗಿದೆ. ಒಂದೇ ಒಂದು ಸಲ ಮಾತ್ರ ಮಂಗನಿಂದ ಮನುಷ್ಯ ಬಂದ.”

ಎಂಥ ಹುಚ್ಚು ಮಾತಿದು? ಇದನ್ನು ನಾವು ನಂಬಬೇಕೆ? ಈ ಮಾತಿಗೇನಾದರೂ ಅರ್ಥವಿದೆಯೆ? ಆದರೆ ಈ ಮಾತನ್ನು ಹೇಳುತ್ತಿರುವಾತ ಡಾರ್ವಿನ್. ಆದ್ದರಿಂದ ನಾವು ಅದನ್ನು ಒಪ್ಪಿಕೊಳ್ಳಬೇಕೆಂದು ಅಪೇಕ್ಷಿಸಲಾಗಿದೆ.

ಭಕ್ತ: ಕೆಲವು ಪರಿವರ್ತನೆಗಳು ಆಗುತ್ತಲಿರುತ್ತವೆ. ಉದಾಹರಣೆಗೆ ನೀವು ಎಲ್ಲ ಹೊತ್ತೂ ಸೆಕೆಯ ವಾತಾವರಣದಲ್ಲಿದರೆ ನಿಮ್ಮ ರಕ್ತ ತೆಳ್ಳಗಾಗುತ್ತದೆ. ಈ ವಿಷಯದ ಜಾಡು ಹಿಡಿದು ಮುಂದೆ ನಡೆದರೆ, ಈ ಎಲ್ಲ ಪರಿವರ್ತನಗಳೂ ಒಟ್ಟು ಸೇರಿ ಒಂದು ದೊಡ್ಡ ಭೌತಿಕ ಪರಿವರ್ತನೆಗೆ ಎಡೆಮಾಡಿಕೊಡಬಹುದು.

ಶ್ರೀಲ ಪ್ರಭುಪಾದ: ಯಾವ ಪರಿವರ್ತನೆಯೂ ಆಗುತ್ತಿಲ್ಲ. ಪ್ರಕೃತಿಯು ಪ್ರಮಾಣಬದ್ಧವಾಗಿ ಲಯಬದ್ಧವಾಗಿ ಕೆಲಸ ಮಾಡುತ್ತಿದೆ. ಸೂರ್ಯ ಬೆಳಗಿನ ಹೊತ್ತು ಹುಟ್ಟುತ್ತಾನೆ. ಇದು ಕೋಟಿ ಕೋಟಿ ದಶಲಕ್ಷ ವರ್ಷಗಳಿಂದ ನಡೆಯುತ್ತಿದೆ.

ಭಕ್ತ: ಪರಿವರ್ತನೆ ಕ್ರಮೇಣ ಆಗುತ್ತಿದೆ.

ಶ್ರೀಲ ಪ್ರಭುಪಾದ: ಇಲ್ಲ. ಯಾವುದು ಹೇಗೆ ಪರಿವರ್ತನೆಯಾಗುತ್ತಿದೆ? ಬೆಳಗಿನ ಹೊತ್ತು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ. ಇದು ಹೀಗೇ ನಡೆದಿದೆ. ಒಂದೊಂದು ಗಿಡ ಹೂ ತಳೆಯುತ್ತದೆ. ಚಳಿಗಾಲ, ವಸಂತಋತು, ಬೇಸಗೆ ಹೀಗೆ ಆಯಾ ಕಾಲಕ್ಕೆ ತಕ್ಕ ಹಾಗೆ ಗಿಡ ಹೂ ಬಿಡುತ್ತದೆ. ಈ ಕ್ರಿಯೆ ನಿಯಮಿತವಾಗಿ ನಡೆದಿದೆ.

ಮುಂದಿನ ಫೆಬ್ರವರಿ ತಿಂಗಳು ಇಲ್ಲಿನ ಹವೆ ಹಿತಕರವಾಗಿರುತ್ತದೆ ಎಂದು ನಾವು ಈಗಲೇ ಹೇಳಬಹುದು. ಏಕೆ? ಕಳೆದ ವರ್ಷದ ಫೆಬ್ರವರಿ ತಿಂಗಳು ಹೇಗಿತ್ತೆಂಬುದರ ಅನುಭವ ನಮಗಿದೆ. ಮುಂದಿನ ಫೆಬ್ರವರಿ ತಿಂಗಳೂ ಹಾಗೇ ಆಗುತ್ತದೆ ಎಂಬುದು ನಮಗೆ ಖಚಿತವಾಗಿದೆ. ಆದ್ದರಿಂದ, ಅಂಥ ಬದಲಾವಣೆ ಯಾವುದೂ ಆಗುತ್ತಿಲ್ಲ” ಎಂದು ನಾವು ಹೇಳಬಹುದು.

ಇದು ಪ್ರಕೃತಿಯ ಕಾರ್ಯವಿಧಾನ : ಪ್ರಕೃತೇ ಕ್ರಿಯಾಮಾಣಾನಿ ಗುಣೈ: ಕರ್ಮಾಣಿ ಸರ್ವಶಃ. ಪ್ರಕೃತಿ ಪರಸ್ಪರ ಅನುರೂಪವಾದದ್ದಾಗಿದೆ. ಪ್ರತಿಯೊಂದೂ ಸರಿಯಾಗಿಯೇ ನಡೆಯುತ್ತಿದೆ. ಪ್ರಕೃತಿ ನಿಯಮದಂತೆ.

ಭಕ್ತ: ಡಾರ್ವಿನ್‌ನ ಸಿದ್ಧಾಂತದಲ್ಲಿ ಬರುವ ಒಂದು ಪ್ರಮುಖ ಅಂಶವೆಂದರೆ…

ಶ್ರೀಲ ಪ್ರಭುಪಾದ: ಅವನ ಸಿದ್ಧಾಂತದಲ್ಲಿ ಯಾವ ಪ್ರಮುಖ ಅಂಶವೂ ನನ್ನ ಕಣ್ಣಿಗೆ ಬೀಳುತ್ತಿಲ್ಲ. ಅವನದೆಲ್ಲಾ ಬರೀ ಮೂರ್ಖತನದ ಮಾತು (ನಗು). ನಿನ್ನಂತ ಮೂಢನು ಮಾತ್ರ ಅದನ್ನು ನಂಬುವನು.

ಭಕ್ತ: ಐದು ಸಹಸ್ರ ವರ್ಷಗಳ ಹಿಂದೆ ಎಂಥ ಚರಿತ್ರೆಯೂ ಲಭ್ಯವಿರಲಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಅದಕ್ಕೆ ಮೊದಲು ನಾಗರಿಕತೆಯೇ ಇರಲಿಲ್ಲ ಎಂಬುದು ಅವರ ವಾದ. ಆದ್ದರಿಂದ ಆಗ ಮನುಷ್ಯ ಮಂಗನಂತಿದ್ದ.

ಶ್ರೀಲ ಪ್ರಭುಪಾದ: ನಾವು ಊಹಾಪೋಹದಲ್ಲಿ ತೊಡಗುವುದಿಲ್ಲ. ಕೋಟಿಗಟ್ಟಲೆ ವರುಷಗಳ ಇತಿಹಾಸ ನಮ್ಮಲ್ಲಿದೆ. ಒಂದು ಮಗು ತನ್ನ ಮನಸ್ಸಿಗೆ ಬಂದಂತೆ ಆಲೋಚಿಸಬಹುದು. ಆದರೆ ವಯಸ್ಕನೊಬ್ಬನು ಮಗುವಿನ ಹಾಗೆ ಆಲೋಚನೆ ಮಾಡುವುದಿಲ್ಲ. ಯಾರೋ ವಿವೇಕವಿಲ್ಲದ ಜನ ಹೀಗೆ ಆಲೋಚಿಸುತ್ತಿದ್ದಾರೆಂದು ನಾವು ಅದನ್ನೆಲ್ಲಾ ನಂಬಬೇಕೆ? ವಿಜ್ಞಾನಿಗಳ ಮಾತನ್ನು ನಾನೇಕೆ ಮಾನ್ಯ ಮಾಡಬೇಕು?

ನಾವು ಭಗವಾನ್ ಕೃಷ್ಣನ ಮಾತನ್ನು ಒಪ್ಪುತ್ತೇವೆ. ಅವನನ್ನು ನಾವು ಒಪ್ಪುತ್ತೇವೆ. ಆ ಮೂಢ ಡಾರ್ವಿನ್‌ನನ್ನು ನಾನೇಕೆ ಒಪ್ಪಿಕೊಳ್ಳಬೇಕು? ನಾವು ಅಂಥ ಮೂರ್ಖರಲ್ಲ. ಅವನನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ.

ಭಕ್ತ: “ಕಳೆದ ವರ್ಷ ನಾವು ತಪ್ಪು ಮಾಡಿದೆವು. ಈಗ ಅದೆಲ್ಲಾ ಸರಿಯಾಗಿದೆ’ ಎಂದು ವಿಜ್ಞಾನಿಗಳು ಸರ್ವದಾ ಹೇಳುತ್ತಾರೆ.

ಶ್ರೀಲ ಪ್ರಭುಪಾದ: ಹುಂ, ”ನಾವೀಗ ಮುಂದುವರಿದವರು.” ಈಗ ನೀವು ಇಂದಿನವೆಂದು ಹೇಳುತ್ತಿರುವ ಸಿದ್ಧಾಂತಗಳೆಲ್ಲ ಸರಿಯಾದವು ಎಂಬುದು ಖಾತರಿಯಾಗಿದೆಯೆ? ನೀವು ಪುನಃ ಮುಂದುವರಿಯುತ್ತೀರಿ. ಹೀಗೆಂದರೆ ನೀವು ಸದಾ ತಪ್ಪು ಹೇಳುವವರೇ ಎಂದರ್ಥ.

ಆಕಸ್ಮಿಕವಾಗಿ ಮನುಷ್ಯ ಪ್ರಕೃತಿಯಿಂದ ಜನಿಸಿದ ಎಂದು ನೀವು ಹೇಳುತ್ತೀರಿ. ಆದರೆ ಪ್ರಕೃತಿ ಆಕಸ್ಮಿಕವಾಗಿ ಕೆಲಸ ಮಾಡುತ್ತಿರುವುದನ್ನು ನೋಡುವುದಿಲ್ಲ. ಆದ್ದರಿಂದ ನಿಮ್ಮ ಸಿದ್ಧಾಂತ ಸರಿಯಲ್ಲವೆಂಬುದು ಸಿದ್ಧವಾಯಿತು. ನಿಮ್ಮ ಲೆಕ್ಕಾಚಾರದಲ್ಲಿ ಶೇಕಡ ಒಂದರಷ್ಟು ತಪ್ಪಿದ್ದರೂ ನಿಮ್ಮ ಇಡೀ ಹೇಳಿಕೆ ಅರ್ಥವಿಲ್ಲದ್ದೆಂದು ಹೇಳಬೇಕಾಗಿದೆ.

ಭಕ್ತ: ಬದುಕು ಸದಾ ಉತ್ತಮ ಮಟ್ಟಕ್ಕೆ ಏರುತ್ತಲೇ ಹೋಗುತ್ತಿದೆಯೆಂದು ಜನ ಭಾವಿಸುತ್ತಾರೆ.

ಶ್ರೀಲ ಪ್ರಭುಪಾದ: ಆದ್ದರಿಂದ ಅವರು ಮೂಢರು. ಇದನ್ನು ಮಾಯಾ (ಭ್ರಮೆ) ಎನ್ನುತ್ತಾರೆ. ಅವರು (ಜನ) ಮೂಢರಾಗಿಯೇ ಉಳಿದಿರುತ್ತಾರೆ. ಆದರೂ ತಾವು ಮುಂದುವರಿದವರೆಂದು ಅವರ ಆಲೋಚನೆ ನಡೆದಿರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi