“ಹಗ್ಗಜಗ್ಗಾಟ ಆಡೋಣ!” ಎಂದು ಕೃಷ್ಣ ಕೂಗಿದ. ಅವನು ವೃಂದಾವನ ಗ್ರಾಮದ ಸಮೀಪವಿದ್ದ ಕಾಡಿನ ಅಂಚಿನಲ್ಲಿ ತನ್ನ ಸ್ನೇಹಿತರೊಡನೆ ಆಡುತ್ತಿದ್ದ. ಅವನ ಅಣ್ಣ ಬಲರಾಮ ಈ ಆಯ್ಕೆಯನ್ನು ಒಪ್ಪಿಕೊಂಡ. “ಆಗಲಿ! ಕೃಷ್ಣನ ತಂಡದಲ್ಲಿ ಸೇರಬೇಕು ಅನ್ನೋರು ಆ ಕಡೆ ಹೋಗಿ ಹಗ್ಗ ಹಿಡಕೊಳ್ಳಿ. ಉಳಿದವರು ನನ್ನ ತಂಡ ಸೇರಿಕೊಳ್ಳಿ!”
ಹೀಗೆ ಮಕ್ಕಳು ಎರಡು ತಂಡವಾದರು. ಆಟ ಪ್ರಾರಂಭವಾಯಿತು. ಮಕ್ಕಳ ಗುಂಪಿನಲ್ಲಿ ಒಂದು ಹೊಸ ಮುಖ ಇರುವುದನ್ನು ಕೃಷ್ಣ ಗಮನಿಸಿದ. ಈ ಅಪರಿಚಿತ ಹುಡುಗ ಅಂದು ಬೆಳಗ್ಗೆ ತಮ್ಮ ಜೊತೆ ಹಳ್ಳಿಯಿಂದ ಬಂದಿರಲಿಲ್ಲ ಎಂದು ಅವನಿಗೆ ತಿಳಿದಿತ್ತು. ಇರಲಿ ನೋಡೋಣ, ಸಮಯ ಬಂದರೆ ಎಲ್ಲ ಗೊತ್ತಾಗುತ್ತೆ ಎಂದುಕೊಂಡ ಮನಸ್ಸಿನಲ್ಲಿಯೇ.

ಹಗ್ಗದ ಎರಡೂ ಕಡೆ ಮಕ್ಕಳು ಹಿಡಿದುಕೊಂಡು ಜೋರಾಗಿ ಎಳೆಯತೊಡಗಿದರು. ಕೆಲವು ಸಲ ಯಾವ ತಂಡವೂ ಗೆಲ್ಲುವಂತೆ ಕಾಣುತ್ತಿರಲಿಲ್ಲ. ಆಗ ಇದ್ದಕ್ಕಿದ್ದಂತೆಯೇ ಬಲರಾಮ ತನ್ನೆಲ್ಲ ಶಕ್ತಿಯನ್ನೂ ಬಿಟ್ಟು ಕೊನೆಯ ಬಾರಿ ಎಂಬಂತೆ ಜೋರಾಗಿ ಹಗ್ಗವನ್ನು ಜಗ್ಗಿದ. ಅವನ ತಂಡದವರು ಕೃಷ್ಣನ ತಂಡವನ್ನು ಗೆಲುವಿನ ಗೆರೆಯವರೆಗೆ ಎಳೆದುಕೊಂಡು ಹೋದರು!
“ಬನ್ನಿ, ಈಗ ಸೋತವರು ಗೆದ್ದವರನ್ನು ಹೊತ್ತುಕೊಂಡು ಕಾಡಿನವರೆಗೆ ಓಡಬೇಕು!” ಎಂದು ಬಲರಾಮ ಗೆದ್ದ ಧ್ವನಿಯಲ್ಲಿ ಕೂಗಿದ. ಗೆದ್ದ ತಂಡದ ಬಾಲಕರು ಸಂತೋಷದಿಂದ ಕೇಕೆ ಹಾಕಿದರು.
ಕೃಷ್ಣನು ತನ್ನ ಭುಜದ ಮೇಲೆ ಸುಬಲನನ್ನು ಕೂಡಿಸಿಕೊಂಡ. ಮಧುಮಂಗಲನು ಶ್ರೀಧಾಮನನ್ನು ಕೂಡಿಸಿಕೊಂಡ. ಬಲರಾಮನದು ಕೊನೆಯ ಸರದಿ. ಆ ಅಪರಿಚಿತ ಹುಡುಗ ಅವನನ್ನು ಲೀಲಾಜಾಲವಾಗಿ ಮೇಲಕ್ಕೆ ಎತ್ತಿದ. ಬಲರಾಮನಿಗೆ ಅವನ ಗುರುತು ಸಿಗಲಿಲ್ಲ. ಸೋತ ತಂಡದ ಬಾಲಕರು ಹೀಗೆ ಗೆದ್ದವರನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಮೀಪದ ಮುಂಜವನ ಕಾಡಿನ ಕಡೆಗೆ ಓಡಿದರು. ಅವರ ಹಸುಗಳು ಅಲ್ಲಿ ಹುಲ್ಲು ಮೇಯುತ್ತಿದ್ದವು. ಅವು ಸರಿಯಾಗಿವೆಯೇ ಎಂದು ನೋಡಿದ ಹಾಗೂ ಆಯಿತು ಎಂದು ಆ ಕಡೆಗೆ ಹೋದರು.

“ಲೋ, ಎಲ್ಲಿಗೆ ಎತ್ಕೊಂಡು ಹೋಗ್ತಾ ಇದೀಯ?” ಎಂದು ಕೂಗಿದ ಬಲರಾಮ. ಅವನನ್ನು ಹೊತ್ತುಕೊಂಡಿದ್ದವನು ಬೇರೆಯವರಿಗೆ ವಿರುದ್ಧ ದಿಕ್ಕಿನಲ್ಲಿ ಓಡುತ್ತಿದ್ದ. ಅವನು ಏದುಸಿರು ಬಿಡುತ್ತಿದ್ದ. ಬಲರಾಮನ ಭಾರ ಹೊತ್ತುಕೊಳ್ಳುವುದು ಅವನಿಗೆ ಕಷ್ಟವಾಗಿದ್ದಂತೆ ತೋರುತ್ತಿತ್ತು.
ನಿಜವಾದ ಸಂಗತಿಯೆಂದರೆ ಬಲರಾಮನನ್ನು ಹೊತ್ತುಕೊಂಡಿದ್ದವನು ಒಬ್ಬ ಹುಡುಗನಾಗಿರಲಿಲ್ಲ. ಅವನೊಬ್ಬ ರಾಕ್ಷಸ. ಅವನ ಹೆಸರು ಪ್ರಲಂಬಾಸುರ. ಕ್ರೂರಿ ರಾಜ ಕಂಸನು ಕೃಷ್ಣನನ್ನು ಕೊಲ್ಲಲು ಅವನನ್ನು ಕಳಿಸಿದ್ದ.
ಪ್ರಲಂಬಾಸುರನು ಗೊಲ್ಲ ಬಾಲಕನಂತೆ ವೇಷ ತಾಳಿ ಆಟದಲ್ಲಿ ಸೇರಿಕೊಂಡಾಗ ಕೃಷ್ಣನ ತಂಡದಲ್ಲಿದ್ದ. ಆದ್ದರಿಂದ ಅವನು ಕೃಷ್ಣನನ್ನು ಹೊತ್ತುಕೊಂಡು ಹೋಗಲು ಆಗಲಿಲ್ಲ. ಆದರೆ ಬಲರಾಮನನ್ನು ಹೊತ್ತುಕೊಂಡು ಹೋಗಿ ಕೊಂದು ಹಾಕಿದರೆ ಕೃಷ್ಣನು ಖಂಡಿತ ಹಿಂಬಾಲಿಸಿಕೊಂಡು ಬರುತ್ತಾನೆ. ಆಗ ಅವನನ್ನೂ ಕೊಲ್ಲಬಹುದು ಎಂದು ಅವನು ಯೋಚಿಸಿದ. ಆದರೆ ಬಲರಾಮನು ಕೃಷ್ಣನಷ್ಟೇ ಬಲಶಾಲಿ ಎನ್ನುವುದು ಆ ರಾಕ್ಷಸನಿಗೆ ತಿಳಿದಿರಲಿಲ್ಲ. ಹೀಗೆ ಕೃಷ್ಣನ ಅಣ್ಣನನ್ನು ತನ್ನ ಭುಜದ ಮೇಲೆ ಹೊತ್ತುಕೊಂಡಾಗ ಆ ರಾಕ್ಷಸನಿಗೆ ಬಲರಾಮನ ಭಾರವನ್ನು ತಾಳಿಕೊಳ್ಳಲಾಗಲಿಲ್ಲ. ಸಂಸ್ಕೃತದಲ್ಲಿ ಬಲ ಎಂದರೆ ಶಕ್ತಿ. ಹೀಗೆ ಬಲರಾಮನು ಬಹಳ ಶಕ್ತಿವಂತನಾಗಿದ್ದ. ಬಲರಾಮನ ಭಾರದಿಂದ ಬಳಲಿದ ರಾಕ್ಷಸ ಪ್ರಲಂಬಾಸುರನು ತನ್ನ ನಿಜರೂಪವನ್ನು ತಾಳಲು ಪ್ರಾರಂಭಿಸಿದ. ಹೀಗೆ ಅವನು ವಿಕಾರವಾದ ಬೃಹದಾಕಾರ ತಾಳಿದ.
ಬಲರಾಮನ ಪ್ರಶ್ನೆಗೆ ಅವನು ಉತ್ತರ ಕೊಡಲಿಲ್ಲ. ಇದ್ದಕ್ಕಿದ್ದಂತೆಯೇ ಅವನನ್ನು ಹೊತ್ತುಕೊಂಡು ಆಕಾಶಕ್ಕೆ ನೆಗೆದುಬಿಟ್ಟ. ಅವನ ಆಕಾರವೇ ಬದಲಾಗಿರುವುದನ್ನು ಬಲರಾಮ ನೋಡಿದ. ಬಾಲಕನಂತೆ ಇದ್ದವನು ಈಗ ನೂರಾರು ಅಡಿ ಎತ್ತರದ ದೊಡ್ಡ ರಾಕ್ಷಸನಾಗಿದ್ದ. ಅವನ ಕೂದಲು ಜ್ವಾಲೆಯಂತೆ ಕೆಂಪಗೆ ಹೊಳೆಯುತ್ತಿತ್ತು. ತಲೆಯ ಮೇಲೆ ಒಂದು ಕಿರೀಟ ಧರಿಸಿದ್ದ.
ತನಗೆ ತೊಂದರೆ ಕೊಡುವುದು ರಾಕ್ಷಸನ ಉಪಾಯ ಎಂದು ಬಲರಾಮನಿಗೆ ಗೊತ್ತಾಗಿ ಹೋಯಿತು. ಬಲರಾಮನು ಮುಷ್ಟಿಯಿಂದ ರಾಕ್ಷಸನ ತಲೆಯ ಮೇಲೆ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಜೋರಾಗಿ ಹೊಡೆದ. ಆಗಲೇ ಬಳಲಿ ಬೆಂಡಾಗಿದ್ದ ಪ್ರಲಂಬಾಸುರ ನೆಲದ ಮೇಲೆ ಧೊಪ್ಪನೆ ಬಿದ್ದು ಸತ್ತುಹೋದ.

ರಾಕ್ಷಸನು ಬಿದ್ದ ಭಯಂಕರ ಶಬ್ದವನ್ನು ಕೇಳಿ ಗೋಪಾಲ ಬಾಲಕರು ತಮ್ಮ ಹಸುಗಳನ್ನು ಮೇಯಲು ಬಿಟ್ಟು ಕಾಡಿನಿಂದ ಓಡಿಬಂದರು. ನೆಲದ ಮೇಲೆ ಸತ್ತು ಬಿದ್ದಿದ್ದ ಪ್ರಲಂಬಾಸುರನ ದೇಹವನ್ನು ನೋಡುತ್ತಿದ್ದಂತೆಯೇ ಅವರು ಬಲರಾಮನ ಶಕ್ತಿ ಸಾಮರ್ಥ್ಯವನ್ನು ಕೊಂಡಾಡಿ ಜಯಘೋಷ ಮಾಡಿದರು.






Leave a Reply