ಸಾಮಾಜಿಕ ಕ್ರಾಂತಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ವಿಶ್ವ ಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರೊಂದಿಗೆ ಜಿನೀವಾದಲ್ಲಿ ಜೂನ್‌ 6, 1974 ರಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ನಾವು ಮಾಡುತ್ತಿರುವಂತೆ ಜಗತ್ತಿನಾದ್ಯಂತ ಯಾವ ಭಾಗದಲ್ಲಿಯಾದರೂ ನೀವು ಈ ಪ್ರಯೋಗವನ್ನು ಮಾಡಬಹುದು. ಸರಳವಾಗಿ ಬದುಕಿ, ಸ್ವಾವಲಂಬಿತರಾಗಿ, ನಿಮ್ಮ ಅಗತ್ಯಗಳನ್ನು ಕಾರ್ಖಾನೆಯಿಂದ ಅಲ್ಲ, ಕೃಷಿ ಭೂಮಿಯಿಂದ ಪಡೆಯಿರಿ, ಮತ್ತು ಭಗವತ್‌ ನಾಮವನ್ನು ಕೊಂಡಾಡಿ.

ಬಂಡವಾಳಶಾಹಿಯಾಗಲಿ ಅಥವಾ ಸಮುದಾಯ ಸ್ವಾಮ್ಯವಾದವಾಗಲಿ ಈ ಕೈಗಾರಿಕೋದ್ಯಮ ವ್ಯವಸ್ಥೆಯಲ್ಲಿ ಕೆಲವೇ ದೊಡ್ಡ ವ್ಯಕ್ತಿಗಳು ಇತರರಿಗೆ ಆಗುವ ನಷ್ಟದಲ್ಲಿ ಸುಖವಾಗಿರಬಹುದು. ಇತರರು ಈ ಕೆಲ ಭ್ರಷ್ಟರಿಂದ ಶೋಷಣೆಗೆ ಒಳಗಾಗುವುದರಿಂದ ಅಥವಾ ನಿರುದ್ಯೋಗಿಗಳಾಗುವುದರಿಂದ, ಉಳಿದವರೂ ಭ್ರಷ್ಟರಾಗುತ್ತಾರೆ. ಅವರು ಎಲ್ಲ ಕೆಲಸಗಳಿಂದ ತಪ್ಪಿಸಿಕೊಳ್ಳುತ್ತಾರೆ ಮತ್ತು ಸೋಮಾರಿಯಾಗಿರುತ್ತಾರೆ. ಅಥವಾ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲ. ಹೀಗೆ ಅನೇಕ ವಿಷಯಗಳು.

ಆದುದರಿಂದ ಏಕೈಕ ಪರಿಹಾರವೆಂದರೆ, ಎಲ್ಲರೂ ಸಹಜವಾಗಿ ಬದುಕಬೇಕು ಮತ್ತು ಭಗವಂತನ ಪವಿತ್ರ ನಾಮಗಳ ಪಠಣ ಮಾಡಬೇಕು. ದೈವ ಪ್ರಜ್ಞೆ ಉಳ್ಳವರಾಗಿ. ಈ ಪರಿಹಾರ ಸರಳ ಮತ್ತು ಇಲ್ಲಿ ನೀವು ಸ್ವಲ್ಪ ಫಲಿತಾಂಶವನ್ನು ಕಾಣಬಹುದು. ಯೂರೋಪ್‌ ಮತ್ತು ಅಮೆರಿಕದ ನನ್ನ ಯುವ ಶಿಷ್ಯರು ಮಾದಕ ವಸ್ತು, ಧೂಮಪಾನ, ಕುಡಿತ ಮತ್ತು ಇತರ ಅನೇಕ ಆಧುನಿಕ ಚಟಕ್ಕೆ ಒಳಗಾಗಿದ್ದರು. ಆದರೆ, ಈಗ ನೋಡಿ ಅವರು ಹೇಗಾಗಿದ್ದಾರೆ. ಅವರು ಹೇಗೆ ದೇವರ ಪವಿತ್ರ ನಾಮಗಳನ್ನು ಕೊಂಡಾಡುತ್ತಿದ್ದಾರೆ, ನೋಡಿ.

ನೀವು ಜಗತ್ತನ್ನು ಬದಲಿಸಬಹುದು ಮತ್ತು ಎಲ್ಲವನ್ನೂ ಸರಿಪಡಿಸಬಹುದು. ನೀವು ಈ ಬೋಧನೆಯನ್ನು ಸ್ವೀಕರಿಸಬೇಕಷ್ಟೆ. ಬೇರೆ ಯಾವುದೇ ಪರಿಹಾರವಿಲ್ಲ. ಕೇಳಿಸಿಕೊಳ್ಳ- ಬಾರದೆಂದು ನೀವು ಇಚ್ಛಿಸಿದರೆ ಏನು ಮಾಡಲು ಸಾಧ್ಯ? ಪರಿಹಾರ, ಸೂಕ್ತವಾದ ಔಷಧವಿದೆ. ಆದರೆ ನೀವು ಔಷಧ ತೆಗೆದುಕೊಳ್ಳದಿದ್ದರೆ ರೋಗ ಹೇಗೆ ಗುಣಮುಖವಾಗುತ್ತದೆ?

ವಿಶ್ವ ಆರೋಗ್ಯ ಸಂಸ್ಥೆ ಸದಸ್ಯ : ನಗರದತ್ತ ಗ್ರಾಮೀಣ ಜನರ ದುರ್ದೈವ ನಿರ್ಗಮನದ ಬಗೆಗೆ ನೀವು ಈ ಮೊದಲು ಪ್ರಸ್ತಾವಿಸಿದಿರಿ. ನಗರ ಜೀವನದಲ್ಲಿ ಹಳ್ಳಿಗರು ಕಾರ್ಖಾನೆ ಕಾರ್ಮಿಕರಾಗುತ್ತಾರೆ ಮತ್ತು ಅನಂತರ ಅನೇಕ ಕೇಡುಗಳು ಉಂಟಾಗುತ್ತವೆ ಎಂದು ನೀವು ಹೇಳಿದಿರಿ. ನಾವು ಗ್ರಾಮದಲ್ಲಿಯೇ ಇದ್ದು ಕೇವಲ ಮೂರು ತಿಂಗಳು ಭೂಮಿಯಲ್ಲಿ ಕೆಲಸ ಮಾಡಿದರೆ ಇಡೀ ವರ್ಷ ಉಣ್ಣುವಷ್ಟು ಆಹಾರ ಲಭ್ಯವಾಗುತ್ತದೆಂದು ನೀವು ಪರಿಹಾರವನ್ನು ಸೂಚಿಸಿದಿರಿ.

ಆದರೆ ನಮ್ಮ ಪಟ್ಟಣ ಮತ್ತು ಗ್ರಾಮಗಳಲ್ಲಿ ಅಪಾರವಾಗಿ ನಿರುದ್ಯೋಗವಿದೆ ಎಂಬುವುದನ್ನು ನಾನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಅಲ್ಲಿ ಅನೇಕ ಜನರು ಇದು ತಮ್ಮ ಹಣೆಬರೆಹವೆಂದು ಭಾವಿಸಿದ್ದಾರೆ. ಅವರಿಗೆ ಭೂಮಿ ಹಕ್ಕು ಇಲ್ಲವಾದ ಕಾರಣ ತಮಗೆ ಅಗತ್ಯವಾದಷ್ಟು ಕೂಡ ಆಹಾರವನ್ನು ಉತ್ಪಾದಿಸುವುದು ಅವರಿಗೆ ಸಾಧ್ಯವಿಲ್ಲ. ವ್ಯಾಪಾರಿಗಳು ಅದನ್ನು ತಮ್ಮದೇ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ಆದುದರಿಂದಲೇ ಅನೇಕ ಸಾಮಾನ್ಯ ಜನರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಅವರು ನಗರಗಳಿಗೆ ಹೋಗುತ್ತಾರೆ. ನಗರದ `ಒಳ್ಳೆಯ ಜೀವನ’ ಅವರನ್ನು ಆಕರ್ಷಿಸುತ್ತದೆ ಎನ್ನುವುದಲ್ಲ, ಆದರೆ ಅವರಿಗೆ ಭೂಮಿ ಹಕ್ಕು ಇಲ್ಲ. ಭೂಮಿಯನ್ನು ವ್ಯಾಪಾರಿ ಗುಂಪು ಬಳಸಿಕೊಳ್ಳುತ್ತಿಲ್ಲ ಮತ್ತು ಜನ ಸಾಮಾನ್ಯರು ಸ್ವತಂತ್ರ ವ್ಯಕ್ತಿಗಳಾಗಿ ಹಳ್ಳಿಗಳಲ್ಲಿ ಇದ್ದು ತಮಗಾಗುವಷ್ಟು ಆಹಾರವನ್ನು ಬೆಳೆದುಕೊಳ್ಳುವುದು ಸಾಧ್ಯವಿಲ್ಲವಾಗಿದೆ.

ವ್ಯಾಪಾರಿ ಗುಂಪು ಶೋಷಿಸುತ್ತಿದೆ. ಈ ವ್ಯಾಪಾರಿಗಳ ಅಧಿಕಾರಕ್ಕೆ ಕಡಿವಾಣಹಾಕುವಂತಹ ಕ್ರಾಂತಿಯೊಂದಿಲ್ಲದಿದ್ದರೆ, ಎಂದಾದರೊಂದು ದಿನ ಜನರು ತಮ್ಮ ಹಳ್ಳಿಗಳಲ್ಲಿದ್ದು ಭೂಮಿಯಲ್ಲಿ ತಮ್ಮದೇ ಆಹಾರವನ್ನು ಬೆಳೆದುಕೊಳ್ಳುತ್ತಾರೆಂದು ನೀವು ಹೇಗೆ ಆಶಿಸುವಿರಿ?

ಶ್ರೀಲ ಪ್ರಭುಪಾದ : ವಿಷಯ ಏನೆಂದರೆ, ಯಾರೂ ಕೂಡ ನಿರುದ್ಯೋಗಿಗಳಾಗಿ ಇರಬಾರದು. ಅದನ್ನು ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.

ವೈದಿಕ ಪದ್ಧತಿಯಲ್ಲಿ, ಸಮಾಜದಲ್ಲಿ ನಾಲ್ಕು ಸಹಜ ವರ್ಗಗಳಿವೆ. ಬ್ರಾಹ್ಮಣರು ಅಥವಾ ಚಿಂತಕರ ವರ್ಗವು ಬೋಧಿಸುತ್ತದೆ ಮತ್ತು ಸಲಹೆ ನೀಡುತ್ತದೆ. ಕ್ಷತ್ರಿಯರು ಅಥವಾ ಕ್ರಿಯಾತ್ಮಕ ವರ್ಗವು ರಕ್ಷಿಸುತ್ತದೆ ಮತ್ತು ಸಂಘಟಿಸುತ್ತದೆ. ವೈಶ್ಯರು ಅಥವಾ ವ್ಯಾಪಾರಿ ವರ್ಗವು ಭೂಮಿ ಮತ್ತು ಹಸುಗಳನ್ನು ನೋಡಿಕೊಳ್ಳುತ್ತದೆ ಮತ್ತು ಆಹಾರ ಉತ್ಪಾದನೆಯತ್ತ ನಿಗಾ ವಹಿಸುತ್ತದೆ. ಶೂದ್ರರು ಅಥವಾ ಕಾರ್ಮಿಕ ವರ್ಗವು ಇತರ ವರ್ಗಗಳಿಗೆ ನೆರವಾಗುತ್ತದೆ.

ಇದರರ್ಥ ಏನೆಂದರೆ, ಎಲ್ಲರನ್ನೂ ರಕ್ಷಿಸುವ ಮತ್ತು ಇತರ ವರ್ಗಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಭರವಸೆ ನೀಡುವಂತಹ ಕ್ರಿಯಾಶೀಲ ಕ್ಷತ್ರಿಯರಿರುವ ಸರ್ಕಾರವನ್ನು ರಚಿಸಬೇಕು. ಸರ್ಕಾರವು ಪ್ರತಿಯೊಬ್ಬರೂ ಸೂಕ್ತವಾದ ಉದ್ಯೋಗದಲ್ಲಿರುವಂತೆ ಮಾಡಬೇಕು. ಆಗ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.

ಆರೋಗ್ಯ ಸಂಸ್ಥೆ ಸದಸ್ಯ : ಆದರೆ ಈಗ ವ್ಯಾಪಾರಿ ವರ್ಗವು ಸರ್ಕಾರದಲ್ಲಿದೆ. ವಾಸ್ತವವಾಗಿ ಅವರು ಭದ್ರವಾಗಿ ತಳವೂರಿದ್ದಾರೆ. ಸರ್ಕಾರದಲ್ಲಿ ಅವರಿಗೆ ಬಲವಾದ ಧ್ವನಿ ಇದೆ. ಅನೇಕ ಸಂದರ್ಭಗಳಲ್ಲಿ ಸರ್ಕಾರದಲ್ಲಿ ಅವರೇ ಪೂರ್ಣ ಪ್ರಮಾಣದ ಅಧಿಕಾರಿಗಳಾಗಿಬಿಡುತ್ತಾರೆ.

ಶ್ರೀಲ ಪ್ರಭುಪಾದ : ಇಲ್ಲ, ಅದರರ್ಥ ಕೆಟ್ಟ ಸರ್ಕಾರ.

ಆರೋಗ್ಯ ಸಂಸ್ಥೆ ಸದಸ್ಯ : ಹೌದು, ಅದು… ಅದು ನಿಜ.

ಶ್ರೀಲ ಪ್ರಭುಪಾದ : ಅದು ಕೆಟ್ಟ ಸರ್ಕಾರ. ವ್ಯಾಪಾರಿ ಗುಂಪಿಗೆ ಸರ್ಕಾರದಲ್ಲಿ ಮಾಡಲು ಏನೂ ಇಲ್ಲ. ಇಲ್ಲವಾದರೆ, ಎಲ್ಲರ ಉದ್ಯೋಗದ ಬಗೆಗೆ ಸರ್ಕಾರವು ಹೇಗೆ ಗಮನ ಹರಿಸುವುದು ಸಾಧ್ಯ?

ವ್ಯಾಪಾರಿ ಗುಂಪು ತನ್ನ ಬಿಚ್ಚು ಮನಸ್ಸನ್ನು ಮುಕ್ತವಾಗಿ ಬಳಸುವಂತೆ ಸರ್ಕಾರವು ಪ್ರೋತ್ಸಾಹಿಸಬೇಕು. ಆದರೆ ಅವರು ಆರಂಭಿಸುವ ಮತ್ತು ಮುಚ್ಚುವ ಅಸಹಜ ಉದ್ದಿಮೆಗಳನ್ನು ರೂಪಿಸಿ ಜನರು ನಿರುದ್ಯೋಗಿಗಳಾಗುವಂತೆ ಮಾಡಬಾರದು. ಸರ್ಕಾರವು ಈ ಬಗೆಗೆ ಎಚ್ಚರದಿಂದ ಇರಬೇಕು. ಸರ್ಕಾರವು ಎಲ್ಲರಿಗೂ ಸೂಕ್ತ ಉದ್ಯೋಗ ದೊರೆಯುವಂತೆ ಮಾಡಬೇಕು.

ಆರೋಗ್ಯ ಸಂಸ್ಥೆ ಸದಸ್ಯ : ಅದನ್ನೇ ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ – ಯಾವ ದಿನ? ಕೃಷ್ಣ ಪ್ರಜ್ಞಾ ಆಂದೋಲನವು ಸಮಾಜದ ಮುಖವನ್ನು ಬದಲಿಸುವ ನಿಜವಾದ ಕ್ರಾಂತಿಕಾರಿ ಆಂದೋಲನವಾಗುವ ದಿನವನ್ನು ನಿರೀಕ್ಷಿಸುತ್ತಿರುವೆ.

ಶ್ರೀಲ ಪ್ರಭುಪಾದ : ಹೌದು. ಇದು ಕ್ರಾಂತಿಯನ್ನು ತರಬಲ್ಲದೆಂದು ನಾನು ಭಾವಿಸುವೆ. ಏಕೆಂದರೆ, ಅಮೆರಿಕ ಮತ್ತು ಯೂರೋಪಿನ ಜನರು ಇದನ್ನು ತಮ್ಮ ಹೃದಯಾಂತರಾಳಕ್ಕೆ ಸ್ವೀಕರಿಸುತ್ತಿದ್ದಾರೆ. ಇದನ್ನು ನಾನು ಅವರಿಗೆ ಪರಿಚಯಿಸಿದೆ. ಅವರು ತುಂಬ ಬುದ್ಧಿವಂತರು, ಅವರು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವರು.

ನಾವು ಕೆಲವೇ ವರ್ಷಗಳಿಂದ ತೊಡಗಿಕೊಂಡಿದ್ದೇವೆ, ಆದರೂ ನಾವು ವಿಶ್ವಾದ್ಯಂತ ಈ ಆಂದೋಲನವನ್ನು ಹರಡಿದ್ದೇವೆ. ಜನರು ಗಂಭೀರವಾಗಿ ಪರಿಗಣಿಸಿದರೆ ಅದು ಸಾಗುತ್ತಲಿರುತ್ತದೆ ಮತ್ತು ಕ್ರಾಂತಿ ಉಂಟಾಗುತ್ತದೆ. ಏಕೆಂದರೆ ನಾವು ಮನಸೋಇಚ್ಛೆ ಕೆಲಸ ಮಾಡುತ್ತಿಲ್ಲ. ನಾವು ಶಾಸ್ತ್ರಗಳಿಂದ ಅಧಿಕೃತ ನಿರ್ದೇಶನ ಪಡೆಯುತ್ತಿದ್ದೇವೆ. ಇಲ್ಲಿ ಎಷ್ಟೊಂದು ಮಾಹಿತಿ ಇದೆ. ಜನರು ಈ ಎಲ್ಲ ಪುಸ್ತಕಗಳನ್ನು ಓದಿ ಮಾಹಿತಿ ಪಡೆಯಬಹುದು. ಅವರು ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಅದು ಕ್ರಾಂತಿಯನ್ನು ತರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi