ಶ್ರೀಲ ಪ್ರಭುಪಾದರು ಒಬ್ಬ ಯಹೂದ್ಯ ಪಾದ್ರಿಯೊಡನೆ ನಡೆಸಿದ ಸಂವಾದ, ಸ್ಥಳ: ಮೆಲ್‌ಬೋರ್ನ್, ಮೇ 1975
ಪಾದ್ರಿ : ಧ್ಯಾನ ಸಮಾಧಿ ಎಂದು ಕರೆಯಬಹುದಾದುದರ ಬಗೆಗೆ ನಿಮಗೇನಾದರೂ ತರಬೇತಿ ಸಿಕ್ಕಿದೆಯೆ?

ಶ್ರೀಲ ಪ್ರಭುಪಾದರು : ನಾವು ಒಂಬತ್ತು ವಿಧದಲ್ಲಿ ಭಗವಂತನನ್ನು ಪೂಜಿಸುತ್ತೇವೆ. ಅವುಗಳಲ್ಲಿ ಸ್ಮರಣಮ್, ಎಂದರೆ ಭಗವಂತನ ಕಾರ್ಯಗಳನ್ನು ಕುರಿತ ಚಿಂತನೆ ಒಂದು. ಅದೇ ಧ್ಯಾನ ಸಮಾಧಿ.
ಪಾದ್ರಿ : ನಿಮಗೆ ತಿಳಿದೇ ಇರುತ್ತದೆ – ಕ್ರಿಶ್ಚಿಯನ್ನರ ಆಧ್ಯಾತ್ಮ ಯೋಗದಲ್ಲಿ ಧ್ಯಾನ ಸಮಾಧಿಯ ಒಂದು ಪ್ರಕ್ರಿಯೆ ಇದೆ. ಅದನ್ನು ಅವಿಲ ಎಂಬ ಸ್ಥಳದ ಸೈಂಟ್ ಥೆರೇಸಾ ಎನ್ನುವಾಕೆ ತನ್ನ “ಇಂಟೀರಿಯರ್ ಮ್ಯಾನ್‌ಷನ್” (ಅಂತರಂಗದ ಸೌಧ) ಎಂಬ ಕೃತಿಯಲ್ಲಿ ವರ್ಣಿಸಿದ್ದಾಳೆ. ಒಂದು ಸಾಮಾನ್ಯ ಪ್ರಾರ್ಥನೆಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ದಿಟದ ಆಧ್ಯಾತ್ಮಿಕ ರೂಪದ ಪ್ರಾರ್ಥನೆ ಎಲ್ಲರೂ ಮಾಡಬಹುದಾದಂಥದಲ್ಲ.
ಶ್ರೀಲ ಪ್ರಭುಪಾದರು : ನಮ್ಮ ಆಧ್ಯಾತ್ಮಿಕ ರೂಪದ ಪ್ರಾರ್ಥನೆಯೆಂದರೆ ದೇವರ ಕಾರ್ಯಗಳನ್ನು ಕುರಿತ ಚಿಂತನೆ. ಇದನ್ನು ಯಾರು ಬೇಕಾದರೂ ಮಾಡಬಹುದು.
ಪಾದ್ರಿ : ನಮ್ಮ ಪ್ರಾರ್ಥನಾ ವಿಧಾನ ಅಷ್ಟಾಗಿ ದೇವರ ಲೀಲೆಗಳನ್ನು ಕುರಿತ ಚಿಂತನೆಯಲ್ಲ. ಅದು ಬಹುಮಟ್ಟಿಗೆ ಪ್ರೇಮ ಭಾವನೆಗಳಿಗೆ ತೆರೆದಿರುವಿಕೆ ಅಂದರೆ ಸ್ತಬ್ಧತೆ ಹಾಗೂ ಪ್ರಶಾಂತತೆಯಲ್ಲಿ.
ಶ್ರೀಲ ಪ್ರಭುಪಾದರು : ಹಾಗಲ್ಲ. ಭಕ್ತಿಸೇವೆ ಅಥವಾ ಭಕ್ತಿಯೋಗ ಎಂದರೆ ಸ್ತಬ್ಧತೆ ಅಲ್ಲ. ಸ್ತಬ್ಧತೆ ದೈವಪ್ರೇಮದ ತಟಸ್ಥ ಹಂತ. ಐಹಿಕ ಚಟುವಟಿಕೆಗಳಿಂದ ನಿವೃತ್ತರಾದಾಗ ಈ ಹಂತವನ್ನು ತಲುಪುತ್ತೇವೆ.
ಪಾದ್ರಿ : ಈ ತಟಸ್ಥತೆಯನ್ನು ಮತ್ತಷ್ಟು ವಿವರಿಸುವಿರಾ?
ಶ್ರೀಲ ಪ್ರಭುಪಾದರು : ಇದು ಕೇವಲ ಭಗವಂತನ ಮಹಿಮೆಯನ್ನು ಅರಿವ ಹಂತ. ಇದೇ ತಟಸ್ಥ ಹಂತ. ಆದರೆ ನಿಜವಾದ ಭಕ್ತಿಸೇವೆಯನ್ನು ಪ್ರಾರಂಭಿಸುವ ಹಂತದಲ್ಲಿ ವ್ಯಕ್ತಿಯು ಆಲೋಚಿಸುತ್ತಾನೆ. ”ಭಗವಂತನು ಇಷ್ಟು ಮಹಿಮಾವಂತನಾದ ಕಾರಣ ನಾನು ಅವನ ಸೇವೆ ಮಾಡಬೇಕು. ನಾನೇಕೆ ನಿರರ್ಥಕವಾಗಿ ಈ ಪ್ರಪಂಚದ ಸೇವೆ ಮಾಡುತ್ತಿದ್ದೇನೆ? ನಾನು ಭಗವಂತನ ಸೇವೆ ಏಕೆ ಮಾಡಬಾರದು.” ಆ ಘಟ್ಟವನ್ನು ದಾಸ್ಯ ಅಥವಾ ಸೇವೆಯ ಘಟ್ಟ ಎನ್ನುತ್ತಾರೆ. ಇದೇ ಭಕ್ತಿಯೋಗದ ಆರಂಭ.
ಭೌತಿಕ ಚಟುವಟಿಕೆಗಳು ನಮ್ಮನ್ನು ಮೇಲಿಂದ ಮೇಲೆ ಹುಟ್ಟು ಸಾವುಗಳ ಪಂಜರದಲ್ಲಿ ಸಿಕ್ಕಿಸುತ್ತವೆ. ಇದನ್ನು ಪ್ರವೃತ್ತಿ ಮಾರ್ಗ – “ಇಂದ್ರಿಯ ಸುಖಕ್ಕಾಗಿ ಮಾಡುವ ಕಾರ್ಯ” ಎಂದು ಕರೆಯಲಾಗಿದೆ. ಎಲ್ಲರೂ ಇಂದ್ರಿಯ ಸುಖಕ್ಕಾಗಿ ಪರಿಶ್ರಮಿಸುತ್ತಿದ್ದಾರೆ. ಹುಲಿ ಕಾರ್ಯಮಗ್ನವಾಗಿದೆ. ಹಂದಿ ಕಾರ್ಯಮಗ್ನವಾಗಿದೆ. ನಾಯಿ ಕಾರ್ಯಮಗ್ನವಾಗಿದೆ. ಹಾಗೆ ಮನುಷ್ಯನು ಇಂದ್ರಿಯ ತುಷ್ಟಿಗಾಗಿ ಹುಲಿಗಳಂತೆ ಹಂದಿಗಳಂತೆ, ನಾಯಿಗಳಂತೆ ಮಗ್ನನಾದರೆ ಮುಂದಿನ ಜನ್ಮದಲ್ಲಿ ಅವನು ಆ ಜೀವ ಜಾತಿಗಳ ಪೈಕಿ ಯಾವುದಾದರೊಂದು ಆದಾನು.
ಪಾದ್ರಿ : ವ್ಯಕ್ತಿಯು ಉನ್ನತ ಕಾರ್ಯಗಳನ್ನು ಮಾಡುವ ಘಟ್ಟ ತಲಪಿದಾಗ, ಎಂದರೆ ಇಡೀ ಮನುಕುಲವನ್ನು ಪ್ರೀತಿಸಿದಾಗ…
ಶ್ರೀಲ ಪ್ರಭುಪಾದರು : ಅದು ಕಪೋಲ ಕಲ್ಪಿತ, ನಿಮ್ಮ ಮನೋಕಲ್ಪನೆ ಬರೀ ಮನುಕುಲವನ್ನೇ ಏಕೆ ಪ್ರೀತಿಸಬೇಕು? ಹುಲಿಗಳನ್ನು, ನಾಯಿಗಳನ್ನು ಮತ್ತಿತರ ಎಲ್ಲ ಜೀವಜಾತಿಗಳನ್ನು ಪ್ರೀತಿಸಬಾರದೇಕೆ?
ಪಾದ್ರಿ : ಮನುಷ್ಯ ಜೀವಿಗಳು ನನ್ನ ಸಹೋದರ ಸಹೋದರಿಯರು. ಆದ್ದರಿಂದ ಅವರನ್ನು ಪ್ರೀತಿಸಬೇಕು.
ಶ್ರೀಲ ಪ್ರಭುಪಾದರು : ಹುಲಿಗಳು ಹಾಗೂ ನಾಯಿಗಳು ಕೂಡ ನಿಮ್ಮ ಸಹೋದರ ಸಹೋದರಿಯರೇ. ಏಕೆಂದರೆ ನಿಮಗೆಲ್ಲಾ ಒಬ್ಬನೇ ತಂದೆ. ಆತ ದೇವರು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (5.18) ಹೀಗೆಂದಿದ್ದಾನೆ –
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||
ಪಾದ್ರಿ : ಇದರ ಅರ್ಥವೇನು ?
ಶ್ರೀಲ ಪ್ರಭುಪಾದರು : ನಿಜವಾಗಿಯೂ ಪಂಡಿತನಾದವನು ಪ್ರತಿಯೊಂದು ಜೀವಿಯನ್ನೂ ಸಮದೃಷ್ಟಿಯಿಂದ ಕಾಣುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಒಂದು ನಾಯಿ ಹಾಗೂ ನಿಮ್ಮ ಮಧ್ಯೆ ಅವನು ಯಾವ ಆಧ್ಯಾತ್ಮಿಕ ವ್ಯತ್ಯಾಸವನ್ನೂ ಮಾಡುವುದಿಲ್ಲ. ಮನುಷ್ಯ ದೇಹವನ್ನು ಧರಿಸಿರುವ ಆತ್ಮ ನಿಮ್ಮದಾಗಿದೆ. ನಾಯಿಯ ದೇಹವನ್ನು ಧರಿಸಿರುವ ಆತ್ಮವು ನಾಯಿ ಎಂದೆನಿಸಿಕೊಳ್ಳುತ್ತದೆ. ಆದರೆ ಈ ಎರಡೂ ಆತ್ಮಗಳೇ, ದೇವರ ವಿಭಿನ್ನ ಅಂಶಗಳು.
ಪಾದ್ರಿ : ಬೇರೆ ಬೇರೆ ಆತ್ಮಗಳಿಗೆ ಬೇರೆ ಬೇರೆ ಮೌಲ್ಯಗಳುಂಟೆಂದು ನೀವೆನ್ನುವಿರೋ?
ಶ್ರೀಲ ಪ್ರಭುಪಾದರು : ಇಲ್ಲ ಎಲ್ಲ ಆತ್ಮಗಳಿಗೂ ಒಂದೇ ಮೌಲ್ಯ.
ಪಾದ್ರಿ : ನಿಮ್ಮ ಮಾತಿಗೆ ಸಮ್ಮತಿಸುವುದು ನನಗೆ ಕಷ್ಟವಾಗುತ್ತದೆ. ಏಕೆಂದರೆ ನಾನು ಅರ್ಥಮಾಡಿಕೊಂಡಿರುವ ಮಟ್ಟಿಗೆ ಮನುಷ್ಯನ ಆತ್ಮ ಅಮರವಾದುದು, ಪ್ರಾಣಿಯ ಆತ್ಮ ಹಾಗಲ್ಲ. ನೋಡಿದರೆ ಪ್ರಾಣಿಯ ಆತ್ಮ ನಿಜವಾಗಿ ಆತ್ಮವೇ ಅಲ್ಲ. ಅದು ಜೀವದ ತತ್ತ್ವ. ಇದನ್ನೇ ಅರಿಸ್ಟಾಟಲ್ ‘ಸೈಕ್’ (ಮನಸ್ಸಿಗೆ ಸಂಬಂಧಿಸಿದ್ದು) ಎಂದು ಕರೆದ. ಅದ್ದರಿಂದ ಮನುಷ್ಯನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಮೌಲ್ಯ ಇದೆ.
ಶ್ರೀಲ ಪ್ರಭುಪಾದರು : ಹಾಗಲ್ಲ, ಆಧ್ಯಾತ್ಮಿಕವಾಗಿ ಪ್ರಾಣಿ ಮನುಷ್ಯ ಇಬ್ಬರಿಗೂ ಒಂದೇ ಮೌಲ್ಯ. ಭೌತಿಕವಾಗಿ ಅವರಿಬ್ಬರ ದೇಹಗಳು ಬೇರೆ ಬೇರೆ ಮಟ್ಟಗಳದಾಗಿದ್ದರೂ ಬೆಲೆ ಒಂದೇ. ಕಾರ್‌ಗಳಲ್ಲಿ ಬೇರೆ ಬೇರೆ ದರ್ಜೆಯ ಕಾರ್‌ಗಳಿರುತ್ತವಲ್ಲ ಇದೂ ಹಾಗೆಯೇ. ರೋಲ್ಸ್ ರಾಯ್ ಕಾರಿನಲ್ಲಿ ಕೂತ ಮನುಷ್ಯ ತಾನು ಬಹಳ ಮುಖ್ಯನಾದವನು ಎಂದುಕೊಳ್ಳುತ್ತಾನೆ.
ಅದೇ ಒಂದು ಫೋರ್ಡ್ ಅಥವಾ ಷವರ್ಲೆ ಕಾರ್‌ನಲ್ಲಿ ಕೂತವನು ತಾನು ಬಡವ ಎಂದು ಆಲೋಚಿಸುತ್ತಾನೆ. ಆದರೆ ಮನುಷ್ಯರಾಗಿ ಅವರಿಬ್ಬರೂ ಸರಿಸಮನಾದವರು. ಇದೇ ರೀತಿ ಮನುಷ್ಯನ ದೇಹ ಹಾಗೂ ನಾಯಿಯ ದೇಹ – ಈ ಎರಡೂ ಬೇರೆ ಬೇರೆ ಯಂತ್ರಗಳು ಅಷ್ಟೆ. ಅವರ ಆತ್ಮಗಳು ಮಾತ್ರ ಒಂದೇ ಗುಣದ್ದು – ಪರಮಾತ್ಮ ಕೃಷ್ಣನ ವಿಭಿನ್ನ ಅಂಶ.
ಪಾದ್ರಿ : ನನ್ನ ಆತ್ಮ ಹಾಗೂ ನಿಮ್ಮ ಆತ್ಮ ಎರಡೂ ಪರಮಾತ್ಮನ ವಿಭಿನ್ನ ಅಂಶಗಳು ಎಂಬ ನಿಮ್ಮ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ ಏಕೆಂದರೆ ಪರಮಾತ್ಮನು ಅಪರಿಮಿತ. ನಾವು ಪರಿಮಿತರು. ಆದ್ದರಿಂದ ನಮ್ಮಿಬ್ಬರನ್ನೂ ಸೇರಿಸಿದರೆ ನಾವು ದೇವರಾಗುವುದಿಲ್ಲ.
ಶ್ರೀಲ ಪ್ರಭುಪಾದರು : ಹಾಗಲ್ಲ. ನಾವು ಪರಿಮಿತ. ಭಗವಂತನನ್ನು ಅಪರಿಮಿತ ಎಂದು ನಾನು ಹೇಳುವುದಿಲ್ಲ. ಎಲ್ಲ ಆತ್ಮಗಳನ್ನು ಒಂದುಗೂಡಿಸಿದಾಗಲೂ ಕೂಡ ಅವು ಪರಿಮಿತವೇ ಆಗಿರುತ್ತವೆ, ಅಪರಿಮಿತ ಅಲ್ಲ. ತೊಂಬತ್ತು ಕೋಟಿ ಸೊನ್ನೆಗಳನ್ನು ಕೂಡಿದರೂ ಅದು ಒಂದು ಎಂಬ ಸಂಖ್ಯೆ ಆಗುವುದಿಲ್ಲ.
ಆದ್ದರಿಂದ ನಮ್ಮನ್ನೆಲ್ಲಾ ಒಟ್ಟು ಸೇರಿಸಿದರೆ ನಾವು ದೇವರಿಗೆ ಸಮನಾಗುತ್ತೇವೆಂದು ನಾನು ಹೇಳುವುದಿಲ್ಲ. ಆದರೆ ದೇವರ ಗುಣ ಎಲ್ಲ ಆತ್ಮಗಳಲ್ಲೂ ಇದೆ. ಭಗವಂತನು ಒಂದು ಮಹಾಸಾಗರದಂತೆ. ನಾವಾದರೋ ಆ ಸಮುದ್ರದ ನೀರಿನ ಹನಿಗಳಂತೆ. ಸಮುದ್ರದ ನೀರಿನ ಹನಿಗಳಲ್ಲಿ ಸಮುದ್ರದ ನೀರಿನಲ್ಲಿರುವ ರಾಸಾಯನಿಕಗಳೇ ಇರುತ್ತವೆ. ಆದರೆ ಬಹು ಕಡಮೆ ಪ್ರಮಾಣದಲ್ಲಿ.
ಪಾದ್ರಿ : ಹಾಗಾದರೆ ನಮಗೆ ದೇವರ ಗುಣಗಳು ಅನುಕರಣೆಯಲ್ಲಿ ಮಾತ್ರ ಇದೆ ಎಂದಾಯಿತು.

ಶ್ರೀಲ ಪ್ರಭುಪಾದರು: ಅನುಕರಣೆಯಲ್ಲಿ ಅಲ್ಲ. ವಾಸ್ತವವಾಗಿ ಎಲ್ಲ ಆತ್ಮಗಳೂ ದೇವರ ಗುಣಗಳನ್ನು ಹೊಂದಿವೆ. ಬಂಗಾರದ ಒಂದು ಕಣ ಹೇಗೆ ಬಂಗಾರದ ಗಣಿಯಲ್ಲಿನ ಬಂಗಾರದ ಗುಣಗಳನ್ನು ಹೊಂದಿದೆಯೋ ಹಾಗೆ ಬಂಗಾರದ ಒಂದು ಕಣ ನಿಜವಾಗಿ ಬಂಗಾರವೆ. ಆದರೆ ಅದು ಚಿನ್ನದ ಗಣಿಯಲ್ಲಿನ ಸಮಸ್ತ ಚಿನ್ನಕ್ಕೆ ಸಮನಲ್ಲ.
ನಮ್ಮ ಸಿದ್ಧಾಂತ ಅಚಿಂತ್ಯ ಭೇದಾಭೇದ ತತ್ತ್ವ – ‘ದೇವರು ಮತ್ತವನ ಶಕ್ತಿಗಳು ಏಕಕಾಲದಲ್ಲಿ ಒಂದು ಹಾಗೂ ಭಿನ್ನ ಎಂದು ಊಹಿಸಲಾಗದ ತತ್ತ್ವ’. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಗುಣಾತ್ಮಕವಾಗಿ ನಾವು ಭಗವಂತನ ಜೊತೆ ಒಂದು ಆದರೆ ಪ್ರಮಾಣದಲ್ಲಿ ಅವನಿಗಿಂತ ಭಿನ್ನರು.
ಭಗವಂತನಿಗೆ ಸೃಷ್ಟಿಸುವ ಶಕ್ತಿ ಇದೆ. ಆಕಾಶದಲ್ಲಿ ತೇಲಾಡುವ ಲಕ್ಷಗಟ್ಟಲೆ ಗ್ರಹಗಳನ್ನು ಅವನು ಸೃಷ್ಟಿಸಿದ್ದಾನೆ. ನಾವಾದರೋ ಗಾಳಿಯಲ್ಲಿ ತೇಲುವ 747 ವಿಮಾನವನ್ನು ನಿರ್ಮಾಣ ಮಾಡಿದ್ದೇವೆ. ಆದರೂ ನಾವೇ ಹೆಚ್ಚೆಂಬ ಗಣ್ಯತೆ ನಮಗೆ ಬೇಕಾಗಿದೆ.
ಪಾದ್ರಿ : ಅದು ಜಂಬ ಎಂಬ ಪಾಪ ಕಾರ್ಯ.
ಶ್ರೀಲ ಪ್ರಭುಪಾದರು : ಹೌದು. ಅದು ಹುಸಿ ಜಂಬ. ತಾವು ಸಾಧಿಸಿರುವ ಮಹಾಕಾರ್ಯಗಳ ಬಗೆಗೆ ಆಧುನಿಕ ವಿಜ್ಞಾನಿಗಳು ಹುಸಿ ಹಮ್ಮುಳ್ಳವರಾಗಿದ್ದಾರೆ. ಈ ಹಮ್ಮಿನಲ್ಲೇ ಅವರು ದೇವರ ಅಗತ್ಯ ಮನುಷ್ಯನಿಗಿಲ್ಲವೆಂದು ಹೇಳುತ್ತಾರೆ. ”ದೇವರು ಗೀವರು ಯಾವುದೂ ಇಲ್ಲ. ಎಲ್ಲವನ್ನೂ ನಾವೇ ಮಾಡಬಲ್ಲೆವು.” ಇದು ಅವರ ಮೂರ್ಖತನ.






Leave a Reply