ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ 1975ರ ಮೇ ತಿಂಗಳಿನಲ್ಲಿ, ಆಸ್ಟ್ರೇಲಿಯಾದ ಪರ್ತ್ನಲ್ಲಿ, ಬೆಳಗಿನ ವಾಯು ಸಂಚಾರ ಸಮಯದಲ್ಲಿ ನಡೆದ ಸಂವಾದ.

ಭಕ್ತ : ಶ್ರೀಲ ಪ್ರಭುಪಾದ, ಭಕ್ತರು ಪ್ರತಿಬಂಧಿತ ಮತ್ತು ನಿಯಂತ್ರಿತರಾಗಿರುತ್ತಾರೆ – ಅವರಿಗೆ ಯಾವ ಸುಖವೂ ದೊರೆಯುವುದಿಲ್ಲ, ಎಂದು ಜನ ಯೋಚಿಸುತ್ತಾರೆ.
ಶ್ರೀಲ ಪ್ರಭುಪಾದ : ಎಲ್ಲರೂ ಆನಂದವನ್ನೇ ಅರಸುತ್ತಾರೆ, ಏಕೆಂದರೆ ನಾವು ಇರುವುದೇ ಅದಕ್ಕಾಗಿ. ಆದರೆ ಜನರು ಆನಂದ ಸಾಗರವಾದ ಕೃಷ್ಣನನ್ನು ಮರೆತಿರುವುದರಿಂದ ಅವರು ಕೃಷ್ಣನನ್ನು ಬಿಟ್ಟು ಉಳಿದ ಕಡೆ ಆನಂದವನ್ನು ಅರಸುತ್ತಿದ್ದಾರೆ. ಆದುದರಿಂದ ಅವರು ಹತಾಶರಾಗುತ್ತಿದ್ದಾರೆ. ಕೃಷ್ಣ ಪ್ರಜ್ಞೆಗೆ ಬರದೆ ಅವರಿಗೆ ನಿಜವಾದ ಆನಂದ ದೊರೆಯದೆಂಬುವುದು ಅವರಿಗೆ ಗೊತ್ತಿಲ್ಲ.
ಮಗುವೊಂದು ಅಳುತ್ತಿದೆ ಎಂದುಕೊಳ್ಳಿ. ತಾಯಿಯಲ್ಲದೆ ಬೇರೆ ಮಹಿಳೆ ಅದನ್ನು ಎತ್ತಿಕೊಂಡು ತೊಡೆಯ ಮೇಲೆ ಮಲಗಿಸಿಕೊಂಡರೆ ಅದರ ಅಳು ನಿಲ್ಲುವುದಿಲ್ಲ. ಆದರೆ ತಾಯಿಯ ತೊಡೆ ಸಿಕ್ಕ ಕೂಡಲೇ ಅದು ಅಳು ನಿಲ್ಲಿಸುತ್ತದೆ. ಏಕೆ? “ನನಗೆ ನೈಜವಾದುದು ಸಿಕ್ಕಿದೆ” ಎಂದು ಅದಕ್ಕೆ ಅರ್ಥವಾಗುತ್ತದೆ. ಅದು ತನ್ನ ತಾಯಿಯ ಸ್ತನ ಚೀಪಿ ಸಂತೃಪ್ತಗೊಳ್ಳುತ್ತದೆ.
ಅದೇ ರೀತಿ, ಅಂತಿಮವಾಗಿ ನಾವು ಕೃಷ್ಣನಲ್ಲಿಗೆ ಬಂದಾಗ, ತೃಪ್ತರಾಗುತ್ತೇವೆ. ನಮಗೆ ಇನ್ನು ಏನೂ ಬೇಕೆನಿಸುವುದಿಲ್ಲ.
ಭಕ್ತ : ಶ್ರೀಲ ಪ್ರಭುಪಾದ, ನೀವು ಈ ಮೊದಲು ಕುತೂಹಲದ ಪ್ರಾಮುಖ್ಯ ಕುರಿತು ಮಾತನಾಡುತ್ತಿದ್ದಿರಿ.
ಶ್ರೀಲ ಪ್ರಭುಪಾದ : ಸಂತೋಷದ ಅಂತಿಮ ಮೂಲದ ಬಗೆಗೆ ಕುತೂಹಲ ಪ್ರವೃತ್ತಿ ಇರುವುದು ಮಾನವ ಜೀವನದ ಒಂದು ಗುಣ ಮಟ್ಟ. ಅಂತಹ ಅನ್ವೇಷಣೆ ಮನೋಭಾವ ಬೆಕ್ಕು, ನಾಯಿಗಳಲ್ಲಿರುವುದಿಲ್ಲ. ಆದುದರಿಂದ ಆನಂದದ ಅಂತಿಮ ಮೂಲದ ಬಗೆಗೆ ವಿಚಾರ ಮಾಡದವ ಪ್ರಾಣಿ, ಅವನು ಮಾನವ ಜೀವಿಯಲ್ಲ. ಶೇಕಡ 99.99 ರಷ್ಟು ಜನರು ಈ ರೀತಿಯ ಅನ್ವೇಷಕರಲ್ಲ. ಅವರು ಸಂತೋಷವನ್ನು ಅರಸುತ್ತಿರಬಹುದು, ಆದರೆ ಅವರು ಆನಂದದ ಅಂತಿಮ ಮೂಲದ ಬಗೆಗೆ ವಿಚಾರ ಮಾಡುವುದಿಲ್ಲ. ಆದುದರಿಂದ ಅವರು ದಿಗ್ಭ್ರಮೆಗೊಳ್ಳುತ್ತಾರೆ.
ಭಕ್ತ : ತಮ್ಮನ್ನು ಸಂತೋಷಪಡಿಸುತ್ತದೆ ಎಂಬ ವಿಷಯಗಳೇ ಸಂಕಷ್ಟಕ್ಕೆ ಕಾರಣವಾಗಬಹುದು.

ಶ್ರೀಲ ಪ್ರಭುಪಾದ : ಹೌದು. ಉದಾಹರಣೆಗೆ, ಸುಖ ಸಂತೋಷದ ಹೆಸರಿನಲ್ಲಿ ಮೋಟಾರ್ ಕಾರ್ ಅನ್ನು ರೂಪಿಸಿದರು. ಆದರೆ ಎರಡು ಕಾರುಗಳು ಡಿಕ್ಕಿ ಹೊಡೆದಾಗ ಜೀವ ಹಾನಿ. ಆದರೂ ಜನರು, “ನಾವು ಈ ಯಂತ್ರವನ್ನು ನಮ್ಮ ಸಂತೋಷಕ್ಕಾಗಿ ಕಂಡುಹಿಡಿದೆವು. ಆದರೂ ಈ ದುರಂತ ಏಕಾಯಿತು?” ಎಂದು ಕುತೂಹಲದ ಪ್ರಶ್ನೆ ಕೇಳುವುದಿಲ್ಲ. ಈ ಪ್ರಶ್ನೆ ಕೇಳುವಷ್ಟು ಅವರು ಬುದ್ಧಿವಂತರಲ್ಲ. ಅವರು ಲೌಕಿಕ ಲೋಕದಲ್ಲಿ ಸಂತೋಷವನ್ನು ಹುಡುಕುತ್ತಾ ಹೋಗುತ್ತಾರೆ. “ಇಲ್ಲ. ಆ ಮಾರ್ಗದಲ್ಲಿ ಅಲ್ಲ. ಈ ಮಾರ್ಗಕ್ಕೆ, ಕೃಷ್ಣ ಪ್ರಜ್ಞೆಗೆ, ಬನ್ನಿ, ನೀವು ನಿಜವಾದ ಸುಖ ಸಂತೋಷವನ್ನು ಕಾಣಬಹುದು” ಎಂದು ನಾವು ಹೇಳಿದರೆ ಅವರು ನಗುತ್ತಾರೆ.
ಭಕ್ತ : ಶ್ರೀಲ ಪ್ರಭುಪಾದರೇ, ವಿಜ್ಞಾನಿಗಳ ವಿಚಾರವೇನು? ಅವರು ಶೋಧಕರು. ಅವರು ಲೌಕಿಕ ಜಗತ್ತಿನ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಶ್ರೀಲ ಪ್ರಭುಪಾದ : ಹೌದು. ಅದಕ್ಕಾಗಿ ನಾವು ಅವರಿಗೆ ಅದರ ಮಾನ್ಯತೆ ಸಲ್ಲಿಸೋಣ. ಆದರೆ ಅವರು ಈ ಜಗತ್ತಿನ ಕಾರಣವನ್ನು ತಪ್ಪು ಸ್ಥಳದಲ್ಲಿ ಅರಸುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ನೀಡಿದರೆ ಅವರು ಅದನ್ನು ಸ್ವೀಕರಿಸುವುದಿಲ್ಲ. ನಾವು ವಿಜ್ಞಾನಿಗಳಿಗೆ ಹೇಳುತ್ತೇವೆ, “ನೀವು ಜಗತ್ತಿನ ಕಾರಣವನ್ನು ಹುಡುಕುತ್ತಿದ್ದೀರಲ್ಲವೆ? ಇಲ್ಲಿ ನೋಡಿ, ಕೃಷ್ಣ, ಎಲ್ಲದರ ಮೂಲ.” ಆದರೆ ಅವರು ಅದನ್ನು ಸ್ವೀಕರಿಸುವುದಿಲ್ಲ. ಅದು ಅವರ ಮೂರ್ಖತನ.
ಭಕ್ತ : ಎಲ್ಲರೂ ಸಂತೋಷವನ್ನು ಅಪೇಕ್ಷಿಸುತ್ತಿದ್ದಾರೆಂದು ನೀವು ಈಗಷ್ಟೆ ಹೇಳಿದಿರಿ. ಆ ಆಸೆಯನ್ನು ಶುದ್ಧೀಕರಿಸಬೇಕಲ್ಲವೇ? ನಾವು ಸಂತೋಷಪಡುವ ಆಸೆಯನ್ನೇ ಬಿಡಬೇಕೆ?
ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ. ಸುಖ ಸಂತೋಷವೇ ಬದುಕು. ಅದನ್ನು ನೀವು ಹೇಗೆ ಬಿಡಲಾದೀತು?
ಭಕ್ತ : ಆದರೆ ನಾವು ಸಂತೋಷದ ಆಸೆಪಟ್ಟರೆ ನಾವು ಸ್ವಾರ್ಥಿಗಳು.
ಶ್ರೀಲ ಪ್ರಭುಪಾದ : ಸಮಸ್ಯೆ ಏನೆಂದರೆ, ನಿಮ್ಮ ಸ್ವಾಥರ್ದ ಅಂತಿಮ ಧ್ಯೇಯವು ಕೃಷ್ಣನನ್ನು ಅರಿಯುವುದೆಂಬುದು ನಿಮಗೆ ಗೊತ್ತಿಲ್ಲ. ಪ್ರತಿಯೊಬ್ಬರೂ ಸ್ವಹಿತಾಸಕ್ತಿ ಉಳ್ಳವರು. ಆದರೆ ನಿಜವಾದ ಸ್ವಹಿತಾಸಕ್ತಿಯನ್ನು ಫಲಪ್ರದಗೊಳಿಸುವುದು ಹೇಗೆಂದು ಯಾರಿಗೂ ಗೊತ್ತಿಲ್ಲ.
ಭಕ್ತ : ಆದರೆ ಅಹಂ ಅನ್ನು ಪೂರ್ಣವಾಗಿ ಬಿಡುವುದು ಒಳ್ಳೆಯದಲ್ಲವೇ?

ಶ್ರೀಲ ಪ್ರಭುಪಾದ : ಏಕೆ? ಅದು ಮಾಯಾವಾದ ತತ್ತ್ವ. ನಾವು ನಮ್ಮ ಅಹಂ ಅನ್ನು ಶುದ್ಧೀಕರಿಸಬೇಕು. “ನಾನು ಕೃಷ್ಣನ ಸೇವಕ” ಎಂಬುವುದು ಅರ್ಥವಾಗಬೇಕು, ಆ ಅಹಂ ಅಗತ್ಯ- ನಾನು ನನ್ನ ಅಹಂ ಅನ್ನು ಶೂನ್ಯ ಮಾಡುತ್ತೇನೆಂಬುದಲ್ಲ.
ಭಕ್ತ : ಮಾಯಾವಾದಿಗಳೇಕೆ ಅಹಂ ಅನ್ನು ನಿರ್ಮೂಲನೆ ಮಾಡಲು ಬಯಸುತ್ತಾರೆ?
ಶ್ರೀಲ ಪ್ರಭುಪಾದ : ಮಾಯಾವಾದಿಗಳು ಬದುಕಿನಲ್ಲಿ ಹತಾಶರಾಗಿದ್ದಾರೆ. ಆದುದರಿಂದ ಅವರು “ನನ್ನ ಅಹಂ ಅನ್ನು ಅಂತ್ಯಗೊಳಿಸೋಣ, ನಾನು ಶೂನ್ಯವಾಗುವೆ” ಎಂದು ಯೋಚಿಸುತ್ತಾರೆ. ಆದರೆ ಅಹಂ ಅನ್ನು ಅಂತ್ಯಗೊಳಿಸಲಾಗದು. ಏಕೆಂದರೆ, ನೀವು ವೈಯಕ್ತಿಕ ಆತ್ಮ, ನಿಮಗೆ ಯಾವಾಗಲೂ `ನಾನು’ ಎಂಬ ಭಾವನೆ ಇರುತ್ತದೆ. ಈಗ ನಾನು `ನಾನು ಭಾರತೀಯ’ ಎಂದು ಯೋಚಿಸುತ್ತಿರುವೆ. ನೀವು ಅಮೆರಿಕದವ ಎಂದು ಯೋಚಿಸುವಿರಿ. ಆದರೆ ನಾನು ಭಾರತೀಯನಲ್ಲ, ನೀವು ಅಮೆರಿಕನಲ್ಲ. ನಾವೆಲ್ಲಾ ಕೃಷ್ಣನ ಭಾಗ. “ನಾನು ಕೃಷ್ಣನ ಶಾಶ್ವತ ಸೇವಕ”- ನಾವು ಈ ಅಹಂಗೆ, ನೈಜ ಅಹಂಗೆ ಬರಬೇಕು.
ಭಕ್ತ : ಶ್ರೀಲ ಪ್ರಭುಪಾದ, ಲೌಕಿಕ ವಿಜ್ಞಾನಿಗಳು ಅನ್ವೇಷಕರು. ಕೃಷ್ಣನೇ ಎಲ್ಲದರ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಹಂತಕ್ಕೆ ಅವರೇಕೆ ಬಂದಿಲ್ಲ?
ಶ್ರೀಲ ಪ್ರಭುಪಾದ : ಏಕೆಂದರೆ ಅವರಿಗೆ ಕೃಷ್ಣನ ಬಗೆಗೆ ಅಸೂಯೆ. ಅವರು ಅವನ ಬೋಧನೆಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ನೀವು ಕೃಷ್ಣನಿಂದ ನಿರ್ದೇಶನ ಪಡೆಯಬೇಕು. ಅವನು ಹೇಳುತ್ತಾನೆ, “ನಾನು ಜ್ಞಾನದ ಧ್ಯೇಯ. ನಾನೇ ಗುರಿ. ನನ್ನ ಬಳಿಗೆ ಬನ್ನಿ.” ನೀವು ಈ ಬೋಧನೆಯನ್ನು ಸ್ವೀಕರಿಸದಿದ್ದರೆ ನೀವು ದುರದೃಷ್ಟವಂತರು. ಜ್ಞಾನ ಪಡೆಯುವ ನಿಮ್ಮ ಪ್ರಯತ್ನದಲ್ಲಿ ನೀವು ನಿಯಂತ್ರಣಕ್ಕೊಳಪಡುತ್ತೀರ.

ಭಕ್ತ : ಶ್ರೀಲ ಪ್ರಭುಪಾದ, ಸಾಮಾನ್ಯ ಜನರಿಗಿಂತ ವಿಜ್ಞಾನಿಗಳಲ್ಲಿ ಹೆಚ್ಚು ನಾಸ್ತಿಕತೆ ಕಂಡು ಬರುವ ವರದಿಯನ್ನು ನೋಡಿದೆ. ಮತ್ತು ವಿಜ್ಞಾನಿಗಳು ವಿಶ್ವವಿದ್ಯಾಲಯ, ಪ್ರೌಢಶಾಲೆ, ಸರಕಾರ, ಉದ್ದಿಮೆ ಹೀಗೆ ಎಲ್ಲ ಕಡೆ ಪ್ರಭಾವಶಾಲಿಗಳು.
ಶ್ರೀಲ ಪ್ರಭುಪಾದ : ಆದುದರಿಂದ ನಾವು ಹೇಳುತ್ತೇವೆ, “ನೀವು ಅಂಧ ನಾಯಕರೇ, ಮೂರ್ಖರೆ, ಕೃಷ್ಣನ ಬೋಧನೆಗಳನ್ನು ಸ್ವೀಕರಿಸದಿದ್ದರೆ ನೇತೃತ್ವ ವಹಿಸುವ ಪ್ರಯತ್ನ ಮಾಡಬೇಡಿ.” ನಾವು ಕೃಷ್ಣನಲ್ಲಿ ನಮ್ಮ ವಿಚಾರಣೆಗಳನ್ನು ಮಾಡಬೇಕು ಮತ್ತು ಅವನ ನಿರ್ದೇಶನಗಳನ್ನು ಸ್ವೀಕರಿಸಬೇಕು. ಆಗ ನಾವು ಸಂತೋಷದಿಂದ ಇರುತ್ತೇವೆ.






Leave a Reply