ಮೃತ್ಯುವಿನ ದವಡೆಯನ್ನು ಸೀಳಿ…

 ಆಂಗ್ಲಮೂಲ : ಬ್ಯಾಕ್‌ ಟು ಗಾಡ್‌ ಹೆಡ್‌

ಅನೇಕ ಯುಗಗಳ ಹಿಂದೆ ಈ ಬ್ರಹ್ಮಾಂಡದ ದೇವಲೋಕವೊಂದರಲ್ಲಿ ತ್ರಿಕೂಟ ಎಂಬ ಹೆಸರಿನ ಪರ್ವತವೊಂದಿತ್ತು. ಈ ಪರ್ವತದ ಸುತ್ತ ಇದ್ದ ಕಣಿವೆಗಳಲ್ಲಿ ಅನೇಕ ಸರೋವರಗಳು ಮತ್ತು ನದಿಗಳು ಇದ್ದವು. ಅವುಗಳ ನೀರು ಸ್ಫಟಿಕದಷ್ಟು ಸ್ವಚ್ಛವಾಗಿತ್ತು. ಅವುಗಳ ದಂಡೆಗಳಲ್ಲಿ ಮರಳಿನ ಬದಲು ಕೋಟ್ಯಂತರ ರತ್ನಗಳು ಹರಡಿದ್ದವು. ಕೆಲವು ಸಲ ಚೆಲುವಾದ ದೇವತಾ ಸ್ತ್ರೀಯರು ಈ ಸರೋವರಗಳಿಗೆ ಮತ್ತು ನದಿಗಳಿಗೆ ಸ್ನಾನಮಾಡಲು ಬರುತ್ತಿದ್ದರು. ಭೂಲೋಕದ ಸ್ತ್ರೀಯರಾದರೋ ಗಂಧಹರಗಳನ್ನು ಮೈತುಂಬ ಬಳಿದುಕೊಳ್ಳಬೇಕಾಗಿತ್ತು. ಆದರೆ ದೇವಲೋಕದ ಸ್ತ್ರೀಯರು ಸ್ನಾನ ಮಾಡಿದರೆ ನೀರಿಗೇ ಹಿತಕರವಾದ ಸೌರಭ ಬರುತ್ತಿತ್ತು, ಮಂದಾನಿಲ ಕಂಪಿನಿಂದ ಇಡುಗುತ್ತಿತ್ತು.

ಈ ತ್ರಿಕೂಟ ಪರ್ವತದ ಒಂದು ಕಣಿವೆಯಲ್ಲಿ ಅತುಮತ್‌ ಎಂಬ ಒಂದು ವನವಿತ್ತು. ಅದರಲ್ಲಿ ಮಾವು, ತೆಂಗು, ಖರ್ಜೂರ, ದಾಳಿಂಬೆ, ಮತ್ತು ಬಾಳೆಯೇ ಮುಂತಾದ ಅನೇಕ ಹಣ್ಣುಗಳು ಸಮೃದ್ಧವಾಗಿ ವರ್ಷಪೂರ್ತಿ ಬಿಡುತ್ತಿದ್ದವು. ಸುವರ್ಣ ಕಮಲಗಳಿಂದ ಮತ್ತು ಇತರ ಅಪೂರ್ವ ಹೂವುಗಳಿಂದ ತುಂಬಿದ ಒಂದು ಸರೋವರ ಅಲ್ಲಿತ್ತು. ಹೆದ್ದುಂಬಿಗಳು ಹೂವುಗಳಿಂದ ಮಕರಂದವನ್ನು ಹೀರಿ ಮತ್ತವಾಗಿ, ಚಿಲಿಪಿಲಿಗುಟ್ಟುವ ಪಕ್ಷಿಗಳೊಡನೆ ತಾವೂ ಝೇಂಕಾರ ಮಾಡುತ್ತಿದ್ದವು. ಸರೋವರದ ಮೇಲ್ಮೈ ಮೇಲೆ ಸುಂದರವಾದ ಹಂಸಗಳು ಲೀಲಾಜಾಲವಾಗಿ ತೇಲಾಡುತ್ತಿದ್ದವು.

ಈ ಪರ್ವತದ ದಟ್ಟಕಾಡಿನ ಗರ್ಭದಲ್ಲಿ ಗಜೇಂದ್ರ ಎಂಬ ಆನೆಗಳ ರಾಜ ವಾಸಮಾಡುತ್ತಿತ್ತು. ಒಂದು ಸಲ ಈ ಗಜೇಂದ್ರ ತನ್ನ ಹೆಣ್ಣು ಮತ್ತು ಗಂಡು ಸಂಗಾತಿಗಳೊಡನೆ ಈ ಸರೋವರದ ಕಡೆಗೆ ಬಂದಿತು. ಬರುವ ದಾರಿಯಲ್ಲಿ ಎದುರಾದ ಎಲ್ಲ ಬಗೆಯ ಗಿಡಗಳು, ಬಳ್ಳಿಗಳು, ಪೊದೆಗಳು ಮತ್ತು ಮರಗಳನ್ನು ಧ್ವಂಸ ಮಾಡಿಕೊಂಡು ಬಂದವು. ಗಜೇಂದ್ರನ ಗಂಧವು ಪ್ರತಿಸ್ಪರ್ಧಿ ಆನೆಗಳು ಮತ್ತು ಸಿಂಹ, ಘೇಂಡಾಮೃಗ ಮುಂತಾದ ಕ್ರೂರ ಪ್ರಾಣಿಗಳಿಗೆ ಬಡಿಯುತ್ತಿದ್ದಂತೆಯೇ ಅವು ಭೀತಿಯಿಂದ ಪಲಾಯನ ಮಾಡಿದವು. ಮುಳ್ಳುಹಂದಿ, ಮೊಲ, ನರಿ ಮತ್ತು ತೋಳಗಳಂತಹ ಚಿಕ್ಕಪುಟ್ಟ ಪ್ರಾಣಿಗಳು ಕಾಡಿನಲ್ಲಿಯೇ ಅವಿತುಕೊಂಡವು. ಗಜೇಂದ್ರನ ಬಗೆಗಿನ ಗೌರವದಿಂದಾಗಿ ಅವು ಅದರ ಮುಂದೆ ಕಾಣಿಸಿಕೊಳ್ಳಲಿಲ್ಲ.

ಗಜೇಂದ್ರನ ಮೈಭಾರಕ್ಕೆ ತ್ರಿಕೂಟ ಪರ್ವತವೇ ತತ್ತರಿಸಿತು. ಗಜೇಂದ್ರ ನಡೆಯುವಾಗ ಮೈಯಿಂದ ಬೆವರು ಸುರಿಯುತ್ತಿತ್ತು. ಬಾಯಿಂದ ಜೊಲ್ಲು ಸುರಿಯುತ್ತಿತ್ತು. ಮದ ಜಲ ಒಸರಿ ಕಣ್ಣುಗಳನ್ನು ಆವರಿಸುತ್ತಿತ್ತು. ದೂರದಿಂದಲೇ ಅದಕ್ಕೆ ಕಮಲ ಪುಷ್ಪಗಳ ನರುಗಂಪು ವೇದ್ಯವಾಯಿತು. ಅದು ತನ್ನ ಹಿಂಡನ್ನು ಕರೆದುಕೊಂಡು ಸರೋವರದ ಕಡೆಗೆ ಧಾವಿಸಿತು. ಅಲ್ಲಿ ತಮ್ಮ ಬಾಯಾರಿಕೆ ಇಂಗುವಷ್ಟು ನೀರನ್ನು ಸಂತೃಪ್ತವಾಗಿ ಕುಡಿಯಬಹುದೆಂದು ಅವು ಅತ್ತಲೇ ಹೊರಟವು.

ಮರುಕ್ಷಣದಲ್ಲಿ ಗಜರಾಜನು ನೀರಿಗೆ ಧುಮಿಕಿದ. ಮನದಣಿಯೆ ಈಜಾಡಿ ಸ್ನಾನಮಾಡಿದ. ತಂಪಾದ, ತಿಳಿಯಾದ ಅಮೃತ ಸದೃಶವಾದ ನೀರನ್ನು ಕುಡಿದ. ಸಂಪೂರ್ಣ ತೃಪ್ತನಾದ ಅವನ ದೇಹದಲ್ಲಿ ಲವಲವಿಕೆ ಮೂಡಿತು. ತಾನು ಮಾಡಿದಂತೆ ತನ್ನ ಪತ್ನಿಯರು ಮತ್ತು ಮಕ್ಕಳು ಸ್ನಾನಮಾಡಿ ನೀರು ಕುಡಿಯಲೆಂದು ಅವರನ್ನು ಆಹ್ವಾನಿಸಿದ. ಪ್ರಯತ್ನಪೂರ್ವಕವಾಗಿ ತನ್ನ ಸೊಂಡಿಲಿನಿಂದ ನೀರನ್ನು ಹೀರಿಕೊಂಡು ಅವುಗಳ ಮೇಲೆಲ್ಲಾ ಸಿಂಪರಣೆ ಮಾಡಿದ.

ಆಗ ಇದ್ದಕ್ಕಿದ್ದಂತೆಯೇ ಒಂದು ಬೃಹದಾಕಾರ ಮೊಸಳೆ ಆ ಶಕ್ತಿಶಾಲಿ ಆನೆಯ ಕಾಲನ್ನು ಹಿಡಿದುಕೊಂಡಿತು. ಗಜೇಂದ್ರನು ಅಸಾಧಾರಣ ಬಲಶಾಲಿ. ಆದರೆ ಅದು ಎಷ್ಟೇ ಪ್ರಯತ್ನಪಟ್ಟರೂ ಮೊಸಳೆಯ ಹಿಡಿತದಿಂದ ಬಿಡಿಸಿಕೊಳ್ಳಲಾಗಲಿಲ್ಲ. ಅವನ ದುಃಖತಪ್ತ ಪತ್ನಿಯರು ಅಳಲಾರಂಭಿಸಿದರು. ಉಳಿದ ಆನೆಗಳು ಗಜೇಂದ್ರನನ್ನು ಹಿಂದಿನಿಂದ ಹಿಡಿದುಕೊಂಡು ಎಳೆದು ರಕ್ಷಿಸಲು ಪ್ರಯತ್ನಿಸಿದವು. ಆದರೆ ಮೊಸಳೆಯ ಅಪಾರ ಶಕ್ತಿಯ ಎದುರು ಅವುಗಳಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹೀಗೆ ಮೊಸಳೆ ಮತ್ತು ಗಜೇಂದ್ರ ಪರಸ್ಪರ ಹೋರಾಡುತ್ತಾ ನೀರಿನ ಒಳಗೂ ಹೊರಗೂ ಎಳೆದಾಡುತ್ತಾ ಒಂದು ಸಾವಿರ ವರ್ಷಗಳೇ ಉರುಳಿಹೋದವು.

ಕಟ್ಟಕಡೆಗೆ ಆನೆಯು ಶಕ್ತಿಹೀನವಾಯಿತು. ಆದರೆ ನೀರಿನಲ್ಲಿ ವಾಸಮಾಡುವ ಪ್ರಾಣಿಯಾದ ಮೊಸಳೆಯು ತನ್ನ ಉತ್ಸಾಹ, ದೈಹಿಕ ಶಕ್ತಿ ಮತ್ತು ಇಂದ್ರಿಯಗಳ ಶಕ್ತಿಯನ್ನು ಹೆಚ್ಚಿಸಿಕೊಂಡಿತು. ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿವಾಗುತ್ತಿದ್ದಂತೆಯೇ ಗಜೇಂದ್ರ ಮರಣಭೀತಿಯಿಂದ ತತ್ತರಿಸಿತು.

“ಇತರ ಗಂಡಾನೆಗಳು, ನನ್ನ ಗೆಳೆಯರು ಮತ್ತು ಬಂಧುಗಳು ನನಗೆ ಸಹಾಯ ಮಾಡಲಾರರು. ಇನ್ನು ನನ್ನ ಪತ್ನಿಯರ ಪಾಡೇನು? ಈ ಮೊಸಳೆಯ ಆಕ್ರಮಣಕ್ಕೆ ನಾನು ತುತ್ತಾಗಿರುವುದು ದೇವರ ಇಚ್ಛೆಯೇ ಇರಬೇಕು” ಎಂದು ಅವನು ಯೋಚಿಸಿದ.

“ಕಾಲವೆಂಬ ಸರ್ಪವು ನಿರಂತರವಾಗಿ ಎಲ್ಲರ ಬೆನ್ನು ಹತ್ತಿರುತ್ತದೆ. ಆದರೆ ಈ ಸರ್ಪಕ್ಕೆ ಹೆದರಿ ಪರಮ ಪ್ರಭುವಿನಲ್ಲಿ ರಕ್ಷಣೆಯನ್ನು ಕೋರುವವನಿಗೆ ಅವನು ರಕ್ಷಣೆಯನ್ನು ನೀಡುತ್ತಾನೆ. ಪ್ರಭುವಿಗೆ ಹೆದರಿ ಮೃತ್ಯು ಕೂಡ ಓಡಿಹೋಗುತ್ತದೆ. ಆದ್ದರಿಂದ ನಾನು ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ಶರಣು ಹೋಗಬೇಕು.”

ಈಗ ಗಜೇಂದ್ರನು ತನ್ನ ಹಿಂದಿನ ಜನ್ಮದಲ್ಲಿ ಕಲಿತಿದ್ದ ದೇವರ ಪ್ರಾರ್ಥನೆಯ ಮೇಲೆ ಮನಸ್ಸಿಟ್ಟು ಹೃತ್ಪೂರ್ವಕವಾಗಿ ಭಜಿಸತೊಡಗಿದ. ಗಜೇಂದ್ರನು ಪ್ರಾರ್ಥಿಸಿದ : “ಪರಮ ಪ್ರಭುವೇ ಪ್ರತಿಯೊಂದೂ ನೆಲೆಸಿರುವ ವೇದಿಕೆ ಪ್ರತಿಯೊಂದೂ ಸೃಷ್ಟಿಯಾಗುವುದು ಅದರ ಅಂಶದಿಂದಲೇ. ಈ ಬ್ರಹ್ಮಾಂಡದ ಪ್ರಕಟರೂಪವನ್ನು ಸೃಷ್ಟಿಸಿದವನು ಆ ಪ್ರಭುವೇ. ತನ್ನ ಶಕ್ತಿಯನ್ನು ವಿಸ್ತರಿಸುತ್ತಾ ಅವನು ಅದನ್ನು ಕೆಲವು ಸಲ ಗೋಚರವಾಗಿಯೂ ಮತ್ತೆ ಕೆಲವುಸಲ ಅಗೋಚರವಾಗಿಯೂ ಇರಿಸುತ್ತಾನೆ.

“ರಂಗಮಂಟಪದಲ್ಲಿರುವ ನಟನು ತನ್ನ ಆಕರ್ಷಕ ವೇಷಭೂಷಣಗಳಿಂದ ಮತ್ತು ನರ್ತನದಿಂದ ಪ್ರೇಕ್ಷಕರಿಗೆ ಗುರುತು ಸಿಗುವುದಿಲ್ಲ. ಅದೇ ರೀತಿಯಲ್ಲಿ ಪರಮ ನಟನ ಚಟುವಟಿಕೆಗಳಾಗಲಿ ಅಥವಾ ಲಕ್ಷಣಗಳಾಗಲಿ ದೇವತೆಗಳಿಗೆ ಮತ್ತು ಮಹರ್ಷಿಗಳಿಗೇ ಅರ್ಥವಾಗುವುದಿಲ್ಲ. ಇನ್ನು ಪ್ರಾಣಿಗಳಂತಿರುವ ಬುದ್ಧಿಹೀನ ಮನುಷ್ಯರ ಪಾಡೇನು? ಆದರೆ ಅಂತಹ ದೇವೋತ್ತಮ ಪರಮ ಪುರುಷನು ನನ್ನಂತಹ ಒಂದು ಪ್ರಾಣಿಗೆ ರಕ್ಷಣೆಯನ್ನು ಕೊಡಲಿ.”

ಆದರೆ ಗಜೇಂದ್ರನು ಸದ್ಯದ ವಿಪತ್ತಿನಿಂದ ಪಾರಾಗುವುದನ್ನಷ್ಟೇ ಬಯಸಲಿಲ್ಲ. ಅವನು ತನ್ನ ಪ್ರಾರ್ಥನೆಯನ್ನು ಮುಂದುವರಿಸಿ ಹೀಗೆ ಬೇಡಿದ : “ಈ ಮೊಸಳೆಯ ಆಕ್ರಮಣದಿಂದ ನಾನು ಪಾರಾದಮೇಲೆ ಈ ಐಹಿಕ ಪ್ರಪಂಚದಲ್ಲಿ ಇನ್ನೂ ಬದುಕಿರಲು ಬಯಸುವುದಿಲ್ಲ. ಅಜ್ಞಾನದಿಂದ ತುಂಬಿರುವ ಈ ಆನೆಯ ಶರೀರದಲ್ಲಿ ಬದುಕಿದ್ದು ಏನು ಪ್ರಯೋಜನ? ಈಗ ಈ ಐಹಿಕ ಜೀವನದಿಂದ ಬಿಡುಗಡೆಯನ್ನು ಪಡೆಯಲು ಸಂಪೂರ್ಣವಾಗಿ ಅಪೇಕ್ಷಿಸುತ್ತಾ, ನಾನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಪರಮ ಪುರುಷನಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ವಾಸ್ತವವಾಗಿ ಎಲ್ಲ ಜೀವಿಗಳಿಗೂ ಚೇತನಾತ್ಮಗಳೆಂದೂ, ದೇವೋತ್ತಮ ಪರಮ ಪುರುಷನ ಅವಿಭಾಜ್ಯ ಅಂಗಗಳೆಂದೂ, ಪರಮ ಸತ್ಯವೆಂಬ ಅಗ್ನಿಯಿಂದ ಹೊರಹೊಮ್ಮುವ ಆಧ್ಯಾತ್ಮಿಕ ಕಿಡಿಗಳಂತೆ ಅವು ಇರುತ್ತವೆಂದೂ ನಾವು ಭಗವದ್ಗೀತೆಯಲ್ಲಿ ತಿಳಿಯುತ್ತೇವೆ. ದುರದೃಷ್ಟವಶಾತ್‌ ಕೆಲವು ಆತ್ಮಗಳು ಪರಮ ಪ್ರಭುವಿನೊಡನೆ ತಮಗಿರುವ ಶಾಶ್ವತ ಸಂಬಂಧವನ್ನು ಮರೆಯಲು ಬಯಸುತ್ತವೆ. ಅದರ ಫಲವಾಗಿ ಅವು ಈ ಐಹಿಕ ಪ್ರಪಂಚದಲ್ಲಿ ದೇವತೆಗಳಾಗಿ, ಮಾನವರಾಗಿ, ಪ್ರಾಣಿಗಳಾಗಿ, ಪಕ್ಷಿಗಳಾಗಿ, ಸಸ್ಯಗಳಾಗಿ ಮತ್ತು ಕೀಟಗಳಾಗಿ ಜನ್ಮ ತಳೆಯುತ್ತವೆ.

ಈ ದೇಹಗಳು – ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳಿಗೆ ಈಡಾಗಿ – ಶಾಶ್ವತ ಆತ್ಮವನ್ನು ಮರೆಮಾಡುತ್ತವೆ. ಹೀಗೆ ಆತ್ಮವು ತನ್ನ ನಿಜವಾದ ಗುರುತನ್ನು ಅರಿಯದೆ ಈ ಐಹಿಕ ಪ್ರಪಂಚದಲ್ಲಿ ಒಂದಾದಮೇಲೊಂದು ಜನ್ಮವನ್ನು ಎತ್ತುತ್ತಾ ಉಳಿದುಬಿಡುತ್ತದೆ. ತನ್ನ ಆಧ್ಯಾತ್ಮಿಕ ಅಸ್ತಿತ್ವವನ್ನು ಮರೆತು ಐಹಿಕ ಬದುಕಿನ ಆಕರ್ಷಣೆಗಳಿಗೆ ತುತ್ತಾಗಿ (ಮನೆ, ದೇಶ, ಸಮಾಜ, ಕುಟುಂಬ, ಬ್ಯಾಂಕ್‌ ಬ್ಯಾಲೆನ್ಸ್‌ ಇತ್ಯಾದಿ) ಉಳಿದುಬಿಡುತ್ತದೆ. ಆತ್ಮವು ನಿರಂತರವಾಗಿ ಹೀಗೆ ಯೋಚಿಸುತ್ತದೆ : “ನಾನು ಈ ದೇಹ. ಈ ದೇಹಕ್ಕೆ ಸಂಬಂಧಿಸಿದ್ದೆಲ್ಲ ನನ್ನದು.” ಜೀವನವನ್ನು ಕುರಿತ ಈ ಪರಿಕಲ್ಪನೆಯನ್ನು ಮೀರುವುದು ಅತ್ಯಂತ ಕಠಿಣವಾದದ್ದು. ಅಹಂ ಬ್ರಹ್ಮಾಸ್ಮಿ – “ನಾನು ಒಂದು ಚೇತನ” ಎಂದು ಗಜೇಂದ್ರನ ಹಾಗೆ ಆತ್ಮವು ಅರಿತುಕೊಂಡು ಪರಮ ಚೇತನವಾದ ದೇವೋತ್ತಮ ಪರಮ ಪುರುಷನಿಗೆ ಶರಣಾಗದಿದ್ದರೆ ಇದು ಸಾಧ್ಯವಿಲ್ಲ. ಆ ಕ್ಷಣದಲ್ಲಿ ಆತ್ಮನು ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಮರಳಿ ಪಡೆಯುತ್ತಾನೆ.

ಗಜೇಂದ್ರನ ಇಕ್ಕಟ್ಟಿನ ಪರಿಸ್ಥಿತಿಯನ್ನು ನೋಡಿದ ಪರಮ ಪ್ರಭುವು ತನ್ನ ಚತುರ್ಭುಜ ವಿಷ್ಣುವಿನ ರೂಪದಲ್ಲಿ ಗರುಡವಾಹನನಾಗಿ ಪರ್ವತದ ಸರೋವರದ ಕಡೆಗೆ ಧಾವಿಸಿ ಬಂದ. ಗಜೇಂದ್ರನ ಕಾಲು ಇನ್ನೂ ಮೊಸಳೆಯ ದವಡೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದಕ್ಕೆ ತೀವ್ರವಾದ ನೋವಾಗುತ್ತಿತ್ತು. ಆದರೆ ಪ್ರಭು ಚಕ್ರವೇ ಮೊದಲಾದ ಆಯುಧಗಳನ್ನು ಧರಿಸಿ ತನ್ನನ್ನು ರಕ್ಷಿಸಲು ಆಕಾಶದಲ್ಲಿ ಹಾರಿ ಬರುತ್ತಿರುವುದನ್ನು ನೋಡಿ ಗಜೇಂದ್ರನಿಗೆ ನೆಮ್ಮದಿಯಾಯಿತು. ನೋವಿನಿಂದ ಅಪಾರವಾದ ಕಷ್ಟವಾಗುತ್ತಿದ್ದರೂ ಅದು ತನ್ನ ಸೊಂಡಿಲಿನಿಂದ ಒಂದು ಕಮಲ ಪುಷ್ಪವನ್ನು ಕಿತ್ತುಕೊಂಡು ಮೇಲಕ್ಕೆ ಎತ್ತಿಹಿಡಿದು ಪ್ರಾರ್ಥಿಸಿತು : “ಓ ನನ್ನ ಪ್ರಭುವೆ, ಓ ದೇವೋತ್ತಮ ಪರಮ ಪುರುಷನೆ, ನನ್ನ ಗೌರವಪೂರ್ವಕ ಪ್ರಣಾಮಗಳನ್ನು ನಿನಗೆ ಅರ್ಪಿಸುತ್ತಿದ್ದೇನೆ.”

ಪ್ರಭುವು ಗರುಡನ ಬೆನ್ನಮೇಲಿಂದ ಕೆಳಗಿಳಿದು ಆನೆ ಮತ್ತು ಮೊಸಳೆಯನ್ನು ನೀರಿನಿಂದ ಹೊರಗೆಳೆದನು. ಅನಂತರ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿದನು. ಅದು ಮೊಸಳೆಯ ತಲೆಯನ್ನು ದೇಹದಿಂದ ತುಂಡರಿಸಿತು. ಅಲ್ಲಿ ಸೇರಿದ್ದ ಎಲ್ಲ ದೇವತೆಗಳು ಮತ್ತು ಋಷಿಗಳು ಈ ಕ್ರಮವನ್ನು ಪ್ರಶಂಸಿಸಿ ಪ್ರಭು ಮತ್ತು ಗಜೇಂದ್ರನ ಮೇಲೆ ಪುಷ್ಪವೃಷ್ಟಿ ಮಾಡಿದರು.

ಗಜೇಂದ್ರ ಮತ್ತು ಮೊಸಳೆ ಎರಡೂ ತಮ್ಮ ಹಿಂದಿನ ಜನ್ಮದಲ್ಲಿ ರಾಜರಾಗಿದ್ದವು. ಮೊಸಳೆಯು ಗಂಧರ್ವಲೋಕದ ದೊರೆ ಹುಹು ಆಗಿದ್ದಿತು. ಆದರೆ ದೇವಲೋಕದ ಸ್ತ್ರೀಯರ ಒಂದು ಗುಂಪಿನೊಡನೆ ಜಲಕ್ರೀಡೆಯಾಡುತ್ತಿರುವಾಗ ಹುಹು ರಾಜನು ಆಕಸ್ಮಿಕವಾಗಿ ದೇವಲ ಎಂಬ ಋಷಿಯ ಕಾಲನ್ನು ಎಳೆದುಬಿಟ್ಟ. ಇದರಿಂದ ಕೋಪಗೊಂಡ ಋಷಿಯು ಹುಹು ರಾಜನಿಗೆ ಒಂದು ಮೊಸಳೆಯಾಗುವಂತೆ ಶಾಪಕೊಟ್ಟ. ಎದೆಗುಂದಿದ ರಾಜನು ತನ್ನನ್ನು ಕ್ಷಮಿಸಬೇಕೆಂದು ಋಷಿಯಲ್ಲಿ ಪ್ರಾರ್ಥನೆ ಮಾಡಿದ. ಪರಮ ಪ್ರಭುವು ಗಜೇಂದ್ರನಿಗೆ ವಿಮುಕ್ತಿ ನೀಡಿದ ಕ್ಷಣದಲ್ಲೇ ಅವನಿಗೂ ಬಿಡುಗಡೆಯಾಗುತ್ತದೆಂದು ಋಷಿಯು ವರವನ್ನು ಕೊಟ್ಟ. ಆದ್ದರಿಂದ ಪ್ರಭುವು ಮೊಸಳೆಯ ತಲೆಯನ್ನು ಕತ್ತರಿಸುತ್ತಿದ್ದಂತೆಯೇ ಆತ್ಮವು ದೇಹದಿಂದ ಹೊರಬಂದು ದೇವಲೋಕದ ದೊರೆ ಹುಹುವಿನ ಸುಂದರ ರೂಪವನ್ನು ತಳೆಯಿತು. ಹುಹು ರಾಜನು ಕೃಷ್ಣನಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಕೂಡಲೇ ಗಂಧರ್ವಲೋಕಕ್ಕೆ ಮರಳಿದನು.

ಗಜೇಂದ್ರನು ತನ್ನ ಹಿಂದಿನ ಜನ್ಮದಲ್ಲಿ ದಕ್ಷಿಣ ಭಾರತದ ಪಾಂಡ್ಯ ದೇಶದ ದೊರೆ ಇಂದ್ರದ್ಯುಮ್ನನಾಗಿದ್ದ. ಅವನು ಪ್ರಭು ಕೃಷ್ಣನ ಮಹಾನ್‌ ಭಕ್ತನಾಗಿದ್ದ. ಇಂದ್ರದ್ಯುಮ್ನನು ತನ್ನ ರಾಜಪದವಿ ಮತ್ತು ಸಾಂಸಾರಿಕ ಜೀವನವನ್ನು ತ್ಯಜಿಸಿ ಮಲಯ ಪರ್ವತಕ್ಕೆ ಹೋಗಿ ಅಲ್ಲಿ ಒಂದು ಪುಟ್ಟ ಆಶ್ರಮದಲ್ಲಿ ವಾಸಮಾಡುತ್ತಾ ವಾನಪ್ರಸ್ಥಾಶ್ರಮವನ್ನು ಆಚರಿಸುತ್ತಿದ್ದ. ಅವನ ಜಟೆ ಉದ್ದವಾಗಿ ಬೆಳೆದು ಗಂಟುಕಟ್ಟಿಕೊಂಡಿತು. ಅವನು ನಿರಂತರವಾಗಿ ಕಠಿಣ ತಪಸ್ಸಿನಲ್ಲಿ ಮಗ್ನನಾದ. ಒಂದು ಸಲ ಅವನು ಮೌನವ್ರತವನ್ನು ಆಚರಿಸುತ್ತಾ ದೇವೋತ್ತಮನ ಪ್ರೀತಿಯ ಭಾವೋತ್ಕರ್ಷದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದ.

ಆ ಸಮಯದಲ್ಲಿ ಮಹರ್ಷಿ ಅಗಸ್ತ್ಯರು ತಮ್ಮ ಶಿಷ್ಯರೊಡನೆ ಅಲ್ಲಿಗೆ ಬಂದರು. ಆದರೆ ದೊರೆ ಇಂದ್ರದ್ಯುಮ್ನನು ತನ್ನ ಧ್ಯಾನದಲ್ಲಿ ಎಷ್ಟು ಗಾಢವಾಗಿ ಮಗ್ನನಾಗಿದ್ದನೆಂದರೆ ಋಷಿಗಳು ಬಂದದ್ದನ್ನು ಗಮನಿಸಲೇ ಇಲ್ಲ. ಇನ್ನು ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸುವುದು ಎಲ್ಲಿ ಬಂತು? ಈ ಶಿಷ್ಟಾಚಾರದ ಉಲ್ಲಂಘನೆಯಿಂದ ಕುಪಿತರಾದ ಅಗಸ್ತ್ಯ ಋಷಿಗಳು ರಾಜನಿಗೆ ಶಾಪವನ್ನು ಕೊಟ್ಟರು.

“ಇಂದ್ರದ್ಯುಮ್ನ ಮಹಾರಾಜನು ಕುಲೀನನಲ್ಲ. ಕೀಳು ಕುಲದವನೂ ಅಶಿಕ್ಷಿತನೂ ಆದ ಅವನು ನನಗೆ ಅಪಮಾನ ಮಾಡಿದ್ದಾನೆ. ಆದ್ದರಿಂದ ಅವನು ಕಗ್ಗತ್ತಲೆಯ ವಲಯವನ್ನು ಪ್ರವೇಶಿಸಲಿ. ಮಂಕಾದ, ಮೂಕವಾದ ಆನೆಯ ದೇಹ ಅವನಿಗೆ ಪ್ರಾಪ್ತವಾಗಲಿ” ಎಂದು ಅಗಸ್ತ್ಯರು ಶಾಪಕೊಟ್ಟರು.

ಇಂದ್ರದ್ಯುಮ್ನನು ಒಬ್ಬ ನಿಜ ಭಕ್ತನಾಗಿದ್ದರಿಂದ ಋಷಿಗಳ ಶಾಪವನ್ನು ವಿನೀತನಾಗಿಯೇ ಸ್ವೀಕರಿಸಿದ. ಇದು ಪ್ರಭುವಿನ ಇಚ್ಛೆ ಎಂದು ಭಾವಿಸಿದ. ಅವನಿಗಿದ್ದ ರಾಜನ ಸ್ವರೂಪವು ಮಾಯವಾಯಿತು. ಆನೆಯ ದೇಹವು ಪ್ರಾಪ್ತವಾಯಿತು. ಆದರೆ ಅವನಲ್ಲಿ ಭಕ್ತಿಪೂರ್ವಕ ಮನೋಧರ್ಮವು ಉಳಿದುಕೊಂಡಿತು. ಪ್ರಭುವಿಗೆ ಪ್ರಾರ್ಥನೆ ಸಲ್ಲಿಸುವುದು ಹೇಗೆ ಎನ್ನುವುದು ಅವನಿಗೆ ನೆನಪಾದದ್ದರಿಂದ ಆಧ್ಯಾತ್ಮಿಕ ವಿಮುಕ್ತಿಯು ಪ್ರಾಪ್ತವಾಯಿತು. ವಾಸ್ತವದಲ್ಲಿ, ಪ್ರಭುವು ತನ್ನ ಪ್ರಿಯ ಭಕ್ತನನ್ನು ಮೊಸಳೆಯ ದವಡೆಯಿಂದ ಪಾರುಮಾಡಿದ ಮೇಲೆ ಹೀಗೆಂದು ಭರವಸೆ ನೀಡಿದನು : “ನಿನ್ನ ಹಾಗೆ ಯಾರು ನನಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೋ ಮತ್ತು ನನ್ನ ರೂಪ, ಈ ಸರೋವರ, ಈ ಪರ್ವತ, ಈ ವನಗಳು, ಈ ದೇವಲೋಕದ ವೃಕ್ಷಗಳು ಮತ್ತು ನನ್ನ ಅನಂತ, ಸರ್ವಮಂಗಳಕರವಾದ ಕಾರ್ಯಗಳನ್ನು ಕುರಿತು ಯಾರು ಧ್ಯಾನ ಮಾಡುತ್ತಾರೋ ಅವರಿಗೆ ಕೊನೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿ ಶಾಶ್ವತವಾದ ನೆಲೆಯು ಪ್ರಾಪ್ತವಾಗುತ್ತದೆ.”

ನಾವು ಗಮನಿಸಿದಂತೆ ಕಾಲವು – ಮೃತ್ಯು – ಪ್ರತಿಯೊಂದನ್ನೂ ಹೊತ್ತುಕೊಂಡು ಹೋಗುತ್ತದೆ. ಮೃತ್ಯುವನ್ನು ಕಂಡರೆ ನನಗೆ ಭಯವಿಲ್ಲ ಎಂದು ಯಾರೊಬ್ಬರೂ ಹೇಳಲಾರರು. ಈಗ ನಾವು ಪ್ರಶ್ನಿಸಬಹುದು – “ಕೃಷ್ಣನ ಭಕ್ತನೂ ಕೂಡ ಸಾಯುತ್ತಾನಲ್ಲವೆ?” ಇದಕ್ಕೆ ಉತ್ತರವೇನೆಂದರೆ ಒಬ್ಬ ಭಕ್ತನು ಕೂಡ ತನ್ನ ಐಹಿಕ ದೇಹವನ್ನು ತೊರೆಯಬೇಕಾಗುತ್ತದೆ. ಆದರೆ ಪ್ರಸ್ತುತ ದೇಹವೇ ಅವನ ಕೊನೆಯ ದೇಹವಾಗಿರುತ್ತದೆ. ಒಬ್ಬ ಭಕ್ತನು ತನ್ನ ಪ್ರಸಕ್ತ ದೇಹವನ್ನು ತೊರೆದಮೇಲೆ ಇನ್ನೊಂದು ದೇಹವನ್ನು ಸ್ವೀಕರಿಸುವುದಿಲ್ಲ. ಅವನು ಭಗವದ್ಧಾಮಕ್ಕೆ ಮರಳುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi