ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ನಿಮ್ಮಿಂದ ವರಮಾನ ತೆರಿಗೆಯನ್ನು ವಸೂಲು ಮಾಡುವ ಹಕ್ಕು ಸರಕಾರಕ್ಕೆ ಇದ್ದರೆ ವರಮಾನ ತೆರಿಗೆಯನ್ನು ವಸೂಲು ಮಾಡುವ ಹಕ್ಕು ಕೃಷ್ಣನಿಗೆ ಇಲ್ಲವೇ? (ನಗು.) ಅವನು ನಿಮಗೆ ಎಷ್ಟೊಂದು ವಸ್ತುಗಳನ್ನು ಪೂರೈಸುತ್ತಿದ್ದಾನೆ. ಕೃಷ್ಣನು ನಿಮಗೆ ಸೂರ್ಯನ ಬೆಳಕನ್ನು ಪೂರೈಸುತ್ತಿದ್ದಾನೆ. ಕೃಷ್ಣನು ನಿಮಗೆ ಚಂದ್ರನ ಬೆಳಕನ್ನು ಪೂರೈಸುತ್ತಿದ್ದಾನೆ. ಕೃಷ್ಣನು ನಿಮಗೆ ಗಾಳಿಯನ್ನು ಪೂರೈಸುತ್ತಿದ್ದಾನೆ. ಕೃಷ್ಣನು ನಿಮಗೆ ಆಹಾರವನ್ನು ಪೂರೈಸುತ್ತಿದ್ದಾನೆ.

ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಂ
ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್‌

(ಕಠ ಉಪನಿಷದ್‌ 2.2.13)

ಕೃಷ್ಣನು ನಿಮ್ಮ ಎಲ್ಲ ಅಪೇಕ್ಷೆಗಳನ್ನು ಪೂರೈಸುತ್ತಿದ್ದಾನೆ. ನೀವು ಅವನಿಗೆ ಏನಾದರೂ ತೆರಿಗೆ ನೀಡಲು ಇಷ್ಟಪಡುವುದಿಲ್ಲವೇ?

* * *

ವೈಷ್ಣವರು ಸ್ವಾರ್ಥಿಗಳಲ್ಲ. ವೈಷ್ಣವರ ನಿಜವಾದ ಅರ್ಹತೆ ಎಂದರೆ ಅವರು ಪರ-ದುಃಖ-ದುಃಖಿ. ಇತರರ ದುಃಖವನ್ನು ನೋಡಿ ಅವರೂ ದುಃಖಿಗಳು. ವೈಯಕ್ತಿಕವಾಗಿ ಅವರು ದುಃಖಿಗಳಲ್ಲ. ಅವರೇಕೆ ಅಸಮಾಧಾನಹೊಂದಬೇಕು? ಅವರಿಗೆ ಕೃಷ್ಣನಿದ್ದಾನೆ. ಆದರೆ ತಾವು ಕೃಷ್ಣನನ್ನು ಪಡೆದು ಸಂತೋಷದಿಂದ ಇರುವಂತೆ, ಇತರರೂ ಸಂತೋಷದಿಂದ ಇರಬೇಕೆಂದು ಬಯಸುತ್ತಾರೆ. ಆದುದರಿಂದ ಅವರು ಕೃಷ್ಣಪ್ರಜ್ಞೆಯನ್ನು ಹರಡಲು ಪ್ರಯತ್ನಿಸುತ್ತಾರೆ. ಇದನ್ನೇ ಪರ-ದುಃಖ-ದುಃಖಿ ಎಂದು ಕರೆಯುವುದು. ಈ ಎಲ್ಲ ಬದ್ಧಾತ್ಮರು ಈ ಭೌತಿಕ ಲೋಕದಲ್ಲಿ ಕೊಳೆಯುತ್ತಿದ್ದಾರೆ ಮತ್ತು ನೋವನ್ನು ಅನುಭವಿಸುತ್ತಿದ್ದಾರೆ ಎಂದು  ಅವರಿಗೆ ಗೊತ್ತು. ಅದಕ್ಕೆ ಕೃಷ್ಣಪ್ರಜ್ಞೆಯೊಂದೇ ಪರಿಹಾರ.

* * *

ದೇವೋತ್ತಮ ಪರಮ ಪುರುಷನನ್ನು ಪ್ರೇಮಿಸಲು ಯಾವ ಧಾರ್ಮಿಕ ಪದ್ಧತಿ ಅನುವು ಮಾಡಿಕೊಡುತ್ತದೆಯೋ, ಅದೇ ನಿಜವಾದ ಧಾರ್ಮಿಕ ಪದ್ಧತಿ. ಭಾಗವತದ ಮಾತಿನಲ್ಲಿಯೇ ಹೇಳುವುದಾದರೆ (1.2.6),

“ಪರಮ ಪುರುಷನ ಪ್ರೇಮಪೂರ್ಣ ಭಕ್ತಿಸೇವೆಯ ನೆಲೆಗೆ ಕೊಂಡೊಯ್ಯುವ ವೃತ್ತಿಯೇ ಮಾನವರೆಲ್ಲರಿಗೂ ಪರಮ ವೃತ್ತಿ (ಧರ್ಮ) ಎನ್ನಿಸಿಕೊಳ್ಳುತ್ತದೆ. ಆತ್ಮಕ್ಕೆ ಸಂಪೂರ್ಣ ತೃಪ್ತಿ ನೀಡಬೇಕಾದಲ್ಲಿ ಅಂತಹ ಭಕ್ತಿಸೇವೆಯು ಬೇರೆ ಯಾವುದರಿಂದಲೂ ಪ್ರೇರಿತವಲ್ಲದ್ದೂ ನಿರಂತರವಾದದ್ದೂ ಆಗಿರಬೇಕು.”

ಈ ವೇದಿಕೆಯಲ್ಲಿ ಭಗವಂತನ ಸೇವೆಯಲ್ಲದೆ ಬೇರೆ ಏನೂ ಇಲ್ಲ. ಒಬ್ಬ ವ್ಯಕ್ತಿಗೆ ಗುಪ್ತ ಉದ್ದೇಶಗಳು ಇಲ್ಲದಿದ್ದರೆ, ನಿಶ್ಚಿತವಾಗಿಯೂ ಅಲ್ಲಿ ತತ್ತ್ವಗಳನ್ನು ಕುರಿತಂತೆ ಏಕತ್ವ ಮತ್ತು ಏಕಾಭಿಪ್ರಾಯವಿರುತ್ತದೆ. ಪ್ರತಿಯೊಬ್ಬರಿಗೂ ಭಿನ್ನವಾದ ದೇಹ ಮತ್ತು ಮನಸ್ಸು ಇರುವುದರಿಂದ ವಿವಿಧ ರೀತಿಯ ಧರ್ಮಗಳು ಅಗತ್ಯ. ಆದರೆ ವ್ಯಕ್ತಿಯು ಆಧ್ಯಾತ್ಮಿಕ ವೇದಿಕೆಯಲ್ಲಿ ನೆಲೆಸಿದಾಗ, ಅಲ್ಲಿ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳಿರುವುದಿಲ್ಲ. ತತ್‌ಪರಿಣಾಮವಾಗಿ ಪರಮ ವೇದಿಕೆಯ ಮೇಲೆ ಧರ್ಮದ ಸಾಮರಸ್ಯವಿದೆ.

* * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi