(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಶ್ರೀಮದ್ ಭಾಗವತವು ಶ್ರೀ ಕೃಷ್ಣನ ಸಾಹಿತ್ಯಕ ಅವತಾರ. ಆದುದರಿಂದ ಅದು ಕೃಷ್ಣನಿಗಿಂತ ಭಿನ್ನವಲ್ಲ. ಭಗವಂತನನ್ನು ಆರಾಧಿಸುವಂತೆಯೇ ಭಾಗವತವನ್ನೂ ಗೌರವದಿಂದ ಪೂಜಿಸಬೇಕು. ಅದನ್ನು ಶ್ರದ್ಧೆ ಮತ್ತು ತಾಳ್ಮೆಯಿಂದ ಓದುವ ಮೂಲಕ ಭಗವಂತನ ಅನುಗ್ರಹವನ್ನು ಪಡೆಯಬಹುದು… ದೇವೋತ್ತಮನ ಉಪಸ್ಥಿತಿಯಿಂದ ಪಡೆಯುವ ಎಲ್ಲ ಫಲಗಳನ್ನು ಭಾಗವತದ ಅಧ್ಯಯನದಿಂದ ಪಡೆಯಬಹುದು. ನಾವು ಶ್ರೀ ಕೃಷ್ಣನ ಸಂಪರ್ಕದಿಂದ ನಿರೀಕ್ಷಿಸಬಹುದಾದ ಎಲ್ಲ ಅಲೌಕಿಕ ಅನುಗ್ರಹಗಳನ್ನು ಭಾಗವತವು ತರುತ್ತದೆ.
* * *
ಜ್ಞಾನದ ಅಭಾವವಿರುವ ವ್ಯಕ್ತಿಗಳು ವಿಶ್ವದ ಇತಿಹಾಸವನ್ನು ಬುದ್ಧನ ಕಾಲದಿಂದ ಅಥವಾ ಕ್ರಿಸ್ತ ಪೂರ್ವ 600ರಿಂದ ಮಾತ್ರ ಒಪ್ಪುತ್ತಾರೆ. ಧರ್ಮಗ್ರಂಥಗಳಲ್ಲಿ ಹೇಳಿರುವ, ಅದಕ್ಕೆ ಮುಂಚಿನ ಕಾಲದ ಎಲ್ಲ ಇತಿಹಾಸಗಳನ್ನು ಅವರು ಕಾಲ್ಪನಿಕ, ಕಟ್ಟು ಕಥೆಗಳು ಎಂದು ಲೆಕ್ಕ ಹಾಕುತ್ತಾರೆ. ಅದು ನಿಜವಲ್ಲ. ಪುರಾಣಗಳು ಮತ್ತು ಮಹಾಭಾರತ ಇತ್ಯಾದಿಗಳಲ್ಲಿ ಹೇಳಿರುವ ಕಥೆಗಳು ವಾಸ್ತವವಾದ ಇತಿಹಾಸ. ಅದು ಈ ಗ್ರಹಕ್ಕೆ ಮಾತ್ರವಲ್ಲ, ಬ್ರಹ್ಮಾಂಡದ ಇತರ ಕೋಟಿಗಟ್ಟಲೆ ಗ್ರಹಗಳಿಗೂ ಅನ್ವಯ. ಕೆಲವು ಬಾರಿ ಅಂತಹ ವ್ಯಕ್ತಿಗಳಿಗೆ ಈ ಲೋಕದ ಆಚೆಗಿನ ಗ್ರಹಗಳ ಇತಿಹಾಸವು ನಂಬಲರ್ಹವಾಗಿರುವಂತೆ ಕಾಣದು. ಆದರೆ ಬೇರೆ ಬೇರೆ ಗ್ರಹಗಳು ಎಲ್ಲ ರೀತಿಯಿಂದಲೂ ಸಮಾನವಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ. ಆದುದರಿಂದ ಇತರ ಗ್ರಹಗಳಿಂದ ಪಡೆದುಕೊಂಡಿರುವ ಕೆಲವು ಐತಿಹಾಸಿಕ ಅಂಶಗಳು ಈ ಗ್ರಹದ ಅನುಭವದ ಜೊತೆಗೆ ಸರಿಹೊಂದುವುದಿಲ್ಲ. ಭಿನ್ನವಾದ ಗ್ರಹಗಳ ಭಿನ್ನವಾದ ಪರಿಸ್ಥಿತಿಯನ್ನು ಮತ್ತು ಕಾಲ ಹಾಗೂ ಸಂದರ್ಭಗಳನ್ನು ಪರಿಗಣಿಸಿದಾಗ, ಪುರಾಣದ ಕಥೆಗಳಲ್ಲಿ ಅದ್ಭುತವೇನೂ ಇಲ್ಲ ಮತ್ತು ಅವು ಕಾಲ್ಪನಿಕವೂ ಅಲ್ಲ.
* * * *
ಮೂಲತಃ ಭಗವಂತನು ಎಲ್ಲ ವೈಭವ, ಎಲ್ಲ ಕೌಶಲ, ಎಲ್ಲ ಕೀರ್ತಿ, ಎಲ್ಲ ಸೌಂದರ್ಯ, ಸಕಲ ಜ್ಞಾನ ಮತ್ತು ಸಕಲ ತ್ಯಾಗಗಳಿಂದ ತುಂಬಿದ್ದಾನೆ. ಪೂರ್ಣ ಭಾಗಗಳು ಅಥವಾ ಪೂರ್ಣ ಭಾಗಗಳ ಅಂಶಗಳ ಮೂಲಕ ಅವುಗಳನ್ನು ಭಾಗಶಃ ವ್ಯಕ್ತಪಡಿಸಿದಾಗ, ಆ ಕ್ರಿಯೆಗಳಿಗೆ ಅವನ ಭಿನ್ನ ಶಕ್ತಿಗಳ ನಿರ್ದಿಷ್ಟ ಸ್ವರೂಪಗಳು ಅಗತ್ಯ ಎಂದು ಇಲ್ಲಿ ಗಮನಿಸಬೇಕು. ಕೋಣೆಯಲ್ಲಿ ಸಣ್ಣ ವಿದ್ಯುತ್ ದೀಪಗಳನ್ನು ಪ್ರದರ್ಶಿಸಿದಾಗ, ವಿದ್ಯುತ್ ಶಕ್ತಿಕೇಂದ್ರವು ಸಣ್ಣ ದೀಪಗಳಿಗೆ ಸೀಮಿತ ಎಂದು ಅರ್ಥವಲ್ಲ. ಅದೇ ಶಕ್ತಿಕೇಂದ್ರವು ದೊಡ್ಡ ಪ್ರಮಾಣದ ಕೈಗಾರಿಕೆ ಡೈನಮೋಗಳ ಕಾರ್ಯಾಚರಣೆಗೂ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಭಗವಂತನ ಅವತಾರಗಳು ಸೀಮಿತ ಶಕ್ತಿಗಳನ್ನು ತೋರುತ್ತವೆ. ಏಕೆಂದರೆ, ಆ ನಿರ್ದಿಷ್ಟ ಕಾಲದಲ್ಲಿ ಅಷ್ಟು ಶಕ್ತಿಯ ಅಗತ್ಯ ಮಾತ್ರ ಇರುತ್ತದೆ.
* * * *






Leave a Reply