ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

“ಈ ಯುಗದ ಎಲ್ಲ ಪತಿತ ಆತ್ಮಗಳನ್ನು ಮುಕ್ತಗೊಳಿಸುವುದೇ ನನ್ನ ಧ್ಯೇಯ” ಎಂದು ಶ್ರೀ ಚೈತನ್ಯ ಮಹಾಪ್ರಭು ಯೋಚಿಸಿ, ಅದನ್ನು ಸಾಕಾರಗೊಳಿಸಿದರು.

ಚೈತನ್ಯ ಮಹಾಪ್ರಭುಗಳು ಜಗತ್ತಿಗೆ ಕೃಷ್ಣ-ಪ್ರೇಮವನ್ನು ನೀಡಲೆಂದೇ ಬಂದರು. ಅವರು ಬೋಧಿಸಿದ  ರೀತಿಯು ಧ್ಯಾನದ್ದಲ್ಲ. ಕಾಮ್ಯಕರ್ಮವಲ್ಲ ಅಥವಾ ಗ್ರಂಥಪಾರಾಯಣವೂ ಅಲ್ಲ. ಅದು ಶುದ್ಧಪ್ರೇಮ. ಜನರಿಗೆ ಕೃಷ್ಣಪ್ರಜ್ಞೆಯನ್ನು ಬೋಧಿಸಿದರು.

ಆಧ್ಯಾತ್ಮಿಕ ಬದುಕಿನ ನಿತ್ಯ ನಿರಂತರತೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಶ್ರೀ ಚೈತನ್ಯರ ಧ್ಯೇಯವಾಗಿತ್ತು. ಭಗವತ್‌ ನಾಮಗಳ ಸಂಕೀರ್ತನೆಯ ಮೂಲಕ ಅದು ಸಾಧ್ಯ ಎಂದು  ತೋರಿಸಿಕೊಟ್ಟರು. ಇಂದು ಜಗತ್ತಿನ ಮನೆಮನೆಗಳಲ್ಲಿ, ನಗರಗಳಲ್ಲಿ ಸಂಕೀರ್ತನೆಯ ಧ್ವನಿ ಮೊಳಗುತ್ತಿದೆ. ಜಾತಿ, ಮತ, ವರ್ಗಗಳ ಭೇದವಿಲ್ಲದೆ ಜವರು ಪವಿತ್ರನಾಮದ ಕೀರ್ತನೆಯಲ್ಲಿ ತೊಡಗಿದ್ದಾರೆ.

ಚೈತನ್ಯರನ್ನು ನಮ್ಮಲ್ಲಿ ಒಬ್ಬರೇ?  ಹಾಗೆ ಭಾವಿಸಬಾರದು. ಅವರು ಸಾಕ್ಷಾತ್‌ ಕೃಷ್ಣನೇ ಆಗಿದ್ದಾರೆ. ಕೃಷ್ಣಭಕ್ತಿ ಅಥವಾ ಕೃಷ್ಣಪ್ರೇಮವನ್ನು ಬೋಧಿಸುವ ಉದ್ದೇಶದಿಂದ ಅವರು ಅವತರಿಸಿದರು. ಕೃಷ್ಣನಾಗಿ ಅವತರಿಸದೆ ಕೃಷ್ಣಭಕ್ತರಾಗಿ ಬಂದ ಅವರು ಕೃಷ್ಣ ಸನ್ನಿಧಿಯನ್ನು ಸೇರಲು ಸೂಕ್ತ ಮಾರ್ಗವನ್ನು ಜೀವಿಗಳಿಗೆ ಉಪದೇಶಿಸಿದರು. ಭಗವಂತನು ಭಕ್ತರ ಪ್ರೇಮಿ ಎನ್ನುವುದನ್ನು ತಿಳಿಸಿಕೊಟ್ಟವರು ಶ್ರೀ ಚೈತನ್ಯರು.

ಪರಿಶುದ್ಧ ಭಕ್ತಿಯಿಂದ ಭಗವಂತನನ್ನು ಪೂಜಿಸಬೇಕು ಎಂದು ಅವರು ಸಾರಿದರು. ಅದಕ್ಕಾಗಿ ಅವರು ಗೋಪಿಯರ ಉದಾಹರಣೆಯನ್ನು ನೀಡುತ್ತಾರೆ. ಅತ್ಯುನ್ನತ ಪರಿಪೂರ್ಣ‌ ಹಂತದಲ್ಲಿ ಅತ್ಯುನ್ನತ ಆರಾಧನೆಯು ಎಂದರೆ ವ್ರಜದ ಗೋಪಿಯರು ಆಚರಿಸಿದ ವಿಧಾನವೆಂದು ಅವರು ಹೇಳುತ್ತಾರೆ.

ಈ ಗೋಪಿಯರು ಯಾವುದೇ ಐಹಿಕ ಅಥವಾ ಆಧ್ಯಾತ್ಮಿಕ ಉದ್ದೇಶ ಅಥವಾ ಆಸೆಯಿಲ್ಲದೆ ಕೃಷ್ಣನನ್ನು ಪರಿಶುದ್ಧ ಪ್ರೇಮದಿಂದ ಪೂಜಿಸಿದರು. ಮಾನವ ಬದುಕಿನ ಅತ್ಯುಚ್ಚ ಧ್ಯೇಯವು ದೇವೋತ್ತಮ ಪರಮ ಪುರುಷ ಕೃಷ್ಣನಲ್ಲಿ ಅಪ್ಪಟ ಪ್ರೇಮ ಬೆಳೆಸಿಕೊಳ್ಳುವುದೇ ಆಗಿದೆ, ಅದನ್ನು ಗೋಪಿಯರು ತೋರಿಸಿಕೊಟ್ಟಿದ್ದಾರೆ  ಎಂದು ಮಹಾಪ್ರಭು ತಿಳಿಸುತ್ತಾರೆ.

ಚೈತನ್ಯ ಮಹಾಪ್ರಭುಗಳು ರೂಪ ಗೋಸ್ವಾಮಿಯವರಿಗೆ ಭಕ್ತಿಸೇವೆಯ ಮೂಲತತ್ತ್ವಗಳನ್ನು ಕುರಿತು ಉಪದೇಶಿಸಿದರು. ಮುಂದೆ ರೂಪ ಗೋಸ್ವಾಮಿ ಅವರು ಜನರ ಒಳಿತಿಗಾಗಿ ಆ ಭಕ್ತಿಸೇವೆ ವಿಜ್ಞಾನವನ್ನು ಭಕ್ತಿ ರಸಾಮೃತ ಸಿಂಧುವಿನಲ್ಲಿ ಮತ್ತು ಇತರ ಗ್ರಂಥಗಳಲ್ಲಿ ವಿವರಿಸಿ ಅದನ್ನು ಪ್ರಚುರ ಪಡಿಸಿದರು.

ಸನಾತನ ಗೋಸ್ವಾಮಿ ಅವರಿಗೂ ಮಹಾಪ್ರಭುಗಳು ಶುದ್ಧ ಭಕ್ತಿಸೇವೆಯನ್ನು ಕುರಿತು ಉಪದೇಶಿಸಿದರು. ಹೀಗೆ ಮಹಾಪ್ರಭುಗಳ ಬೋಧನೆಯನ್ನು ಅವರ ಶಿಷ್ಯವೃಂದವು ಉಪನ್ಯಾಸ, ಬೋಧನೆ ಮತ್ತು ಸಾಹಿತ್ಯ ರಚನೆ ಮೂಲಕ ಪ್ರಚುರಪಡಿಸಿತು.

ಚೈತನ್ಯರ ಶಿಕ್ಷಾಷ್ಟಕ

ಚೈತನ್ಯರು ತಮ್ಮ ತಾರುಣ್ಯದಲ್ಲಿ ದೊಡ್ಡ ವಿದ್ವಾಂಸರೆಂದು ಖ್ಯಾತಿಗಳಿಸಿದ್ದರು. ಆದರೆ ಅವರು ಬಿಟ್ಟುಹೋಗಿರುವುದು ಶಿಕ್ಷಾಷ್ಟಕ ಎನ್ನುವ ಎಂಟು ಶ್ಲೋಕಗಳನ್ನು ಮಾತ್ರ. ಈ ಎಂಟು ಶ್ಲೋಕಗಳು ಚೈತನ್ಯರ ದೈವಿಕ ಮನೋಧರ್ಮವನ್ನೂ‌ , ಅವರ ಬದುಕಿನ ಧ್ಯೇಯವನ್ನೂ ನಿಚ್ಚಳವಾಗಿ ನಿರೂಪಿಸುತ್ತವೆ. ಅವರು ರಚಿಸಿದ ಎಂಟು ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು.

ಶ್ಲೋಕ 1 : ಸಹಸ್ರಾರು ವರ್ಷಗಳಿಂದ ಹೃದಯದಲ್ಲಿ ಸಂಗ್ರಹವಾಗಿರುವ ಅಜ್ಞಾನವೆಂಬ ಧೂಳನ್ನು ಕೊಡವಿ ಹಾಕುವ ಹಾಗೂ ಮತ್ತೆ ಮತ್ತೆ ಘಟಿಸುವ ಜನನ ಮರಣ ತುಂಬಿದ ಐಹಿಕ ಜೀವನವೆಂಬ ಕಿಚ್ಚನ್ನು ನಂದಿಸುವ ಶ್ರೀ ಕೃಷ್ಣ ನಾಮ ಸಂಕೀರ್ತನೆಯ ಭವ್ಯತೆಯು ಚಿರವಾಗಲಿ.

ಪ್ರಸ್ತುತ ಸಂಕೀರ್ತನ ಚಳವಳಿಯು, ಮನುಕುಲಕ್ಕೆ ನೀಡಲಾಗಿರುವ ಒಂದು ಮುಖ್ಯ ವರವಾಗಿದೆ. ಏಕೆಂದರೆ ಅದು ಸಕಲ ದಿವ್ಯಜ್ಞಾನದ ಜೀವನಾಡಿಯಾಗಿದೆ. ದಿವ್ಯಾನಂದವೆಂಬ ಕಡಲಿನಾಳವನ್ನು ಅದು ವರ್ಧಿಸುತ್ತದೆ. ಯಾವುದನ್ನು ಸವಿಯಲು ನಾವು ಸದಾ ಹಾತೊರೆಯುವೆವೋ ಆ ಮಧುವನ್ನು ಪ್ರಭುನಾಮ ಸಂಕೀರ್ತನೆಯು ನಮಗೆ ಸುಲಭವಾಗಿ ನೀಡುತ್ತದೆ.

ಶ್ಲೋಕ 2 :  ಪ್ರಭುವೇ, ನಿನ್ನ ಪವಿತ್ರ ನಾಮವೊಂದು ಮಾತ್ರವೇ ಸಕಲ ಜೀವಿಗಳಿಗೂ ವರಪ್ರದಾಯಕವಾಗಿದೆ. ಆದುದರಿಂದಲೇ ನಿನಗೆ ಕೃಷ್ಣ, ಗೋವಿಂದ ಎಂದು ಅಸಂಖ್ಯ ಹೆಸರುಗಳು. ಈ ದಿವ್ಯ ನಾಮಗಳಲ್ಲಿ ನೀನು ನಿನ್ನ ದಿವ್ಯ ಶಕ್ತಿಯನ್ನೆಲ್ಲಾ ಹೂಡಿರುವೆ. ನಿನ್ನ ನಾಮ ಸಂಕೀರ್ತನೆಯಲ್ಲಿ ತೊಡಗಲು  ಕಟ್ಟುನಿಟ್ಟಿನ ನಿಯಮಗಳು ಇಲ್ಲ.  

ಪ್ರಭುವೇ, ನಿನ ಪವಿತ್ರ ನಾಮಗಳನ್ನು ಉದಾರವಾಗಿ ಬೋಧಿಸುತ್ತಾ ಪತಿತರ ಮೇಲೆ ಕರುಣೆ ತೋರಿದರೂ ನಾನೆಂತಹ ದುರ್ದೈವಿಯೆಂದರೆ‌ ನಿನ್ನ ನಾಮಗಳನ್ನು ಜಪಿಸುವಾಗ  ಅಪರಾಧಗಳನ್ನು ಮಾಡುತ್ತೇನೆ. ಆದುದರಿಂದ ನಾನು ಏನನ್ನೂ ಸಾಧಿಸುವುದಿಲ್ಲ.

ಶ್ಲೋಕ 3 : ಹುಲ್ಲುಕಡ್ಡಿಗಿಂತಲೂ ಕೀಳೆಂದು ಭಾವಿಸುವ, ಮರಕ್ಕಿಂತಲೂ ಸಹನೆ ಉಳ್ಳವ ಮತ್ತು ಸ್ವತಃ ಗೌರವ ನಿರೀಕ್ಷಿಸದೆ ಬೇರೆಯವರಿಗೆ ಗೌರವ ನೀಡುವ ವ್ಯಕ್ತಿಯು ಸದಾ ಭಗವಂತನ ಪವಿತ್ರ ನಾಮವನ್ನು ಸುಲಭವಾಗಿ ಜಪಿಸಬಲ್ಲನು.

ಶ್ಲೋಕ 4 : ಐಹಿಕ ಸಂಪತ್ತಿನ ಅಪೇಕ್ಷೆ ನನಗಿಲ್ಲ. ಐಹಿಕ ಅನುಯಾಯಿಗಳೂ ಕೂಡ ನನಗೆ ಬೇಕಾಗಿಲ್ಲ, ಸುಂದರ ಪತ್ನಿಯೂ ಬೇಡ  ಅಥವಾ ವರ್ಣಮಯವಾಗಿ ವರ್ಣಿಸುವ ಕಾಮ್ಯಕರ್ಮಗಳೂ ಬೇಕಾಗಿಲ್ಲ.  ಜನ್ಮಜನ್ಮದಲ್ಲಿಯೂ ನಿನ್ನ ಅವ್ಯಾಜ ಭಕ್ತಿಸೇವೆಯ ಭಾಗ್ಯವು ನನಗೆ ಲಭಿಸಿದರೆ ಸಾಕು.

ಶ್ಲೋಕ 5 : ಹೇ ನಂದಕುಮಾರ (ಕೃಷ್ಣ),  ನಾನು ನಿನ್ನ ದಾಸ. ಆದರೂ ಹೇಗೋ ಈ ಜನನ ಮರಣದ ಕಡಲಿನಲ್ಲಿ ಬಿದ್ದುಬಿಟ್ಟಿದ್ದೇನೆ.  ಈ ಅಜ್ಞಾನದ ಸಾಗರದಿಂದ ನನ್ನನ್ನು ಉದ್ಧರಿಸು. ನಿನ್ನ ಪಾದಾರವಿಂದಗಳಲ್ಲಿ ಧೂಳಿನ ಒಂದು ಕಣವಾಗಿರುವಂತೆ ಅನುಗ್ರಹಿಸು.

ಶ್ಲೋಕ 6 : ನಿನ್ನ ಪವಿತ್ರನಾಮ ಸ್ಮರಣೆಯಲ್ಲಿ ತೊಡಗಿರುವಾಗ ಆನಂದಬಾಷ್ಪಗಳು ನನ್ನ ಕಣ್ಣುಗಳನ್ನು ಅಲಂಕರಿಸಿ , ತುಂಬುಹರಿಯುವುದೆಂದು?  ನನ್ನ ಗಂಟಲು ಗದ್ಗದಿತವಾಗುವುದೆಂದು? ನಿನ್ನ ನಾಮಸ್ಮರಣೆ ಮಾಡುತ್ತಾ ಮಾಡುತ್ತಾ ನನಗೆ ರೋಮಾಂಚನವಾಗುವುದೆಂದು?

ಶ್ಲೋಕ 7 : ಹೇ ಗೋವಿಂದಾ, ನಿನ್ನನ್ನು ಅಗಲಿರುವುದೇ ಕಾರಣವಾಗಿ ಒಂದು ನಿಮಿಷದ ಕಾಲವು ಹನ್ನೆರಡು ವರ್ಷಗಳಷ್ಟು ದೀರ್ಘವಾಗಿಬಿಟ್ಟಿದೆ. ನನ್ನ ಕಣ್ಣುಗಳಿಂದ ವರ್ಷಧಾರೆಯಂತೆ ಶೋಕಜಲವು ಸ್ರವಿಸುತ್ತಿದೆ. ನೀನಿಲ್ಲದ ಈ ಇಡೀ ಜಗತ್ತು ಬರಿದೋ ಬರಿದಾಗಿ ತೋರುತ್ತಿದೆ.

ಶ್ಲೋಕ 8 :  ಅವನ ಚರಣ ಕಮಲಗಳಡಿ ಇರುವ ಈ ಸೇವಕನನ್ನು ಕೃಷ್ಣನು ಆಲಿಂಗಿಸಿಕೊಳ್ಳಲಿ. ನನ್ನ ಹೃದಯವನ್ನು ಛಿದ್ರ ಛದ್ರ ಮಾಡಿಟ್ಟರೂ ಸರಿಯೇ. ತನಗಿಷ್ಟದಂತೆ ಮಾಡಲು ಅವನು ಸರ್ವ‌ ಸ್ವತಂತ್ರ. ಏಕೆಂದರೆ ಅವನು ಸದಾ ನನ್ನ ಆರಾಧ್ಯ ದೈವ.

ಶ್ರೀ ಚೈತನ್ಯರು ನುಡಿದರು, “ನಾನು ನಿಮಗೆ ಈ ಮಹಾಮಂತ್ರವನ್ನು ನೀಡುತ್ತಿರುವೆ – ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ.

ಪ್ರಾಮಾಣಿಕ ಉತ್ಸಾಹದಿಂದ ಜಪಿಸಿ. ಈ ಮಂತ್ರವನ್ನು ಜಪಿಸುವುದರಿಂದ ಬದುಕಿನ ಪರಿಪೂರ್ಣತೆಯನ್ನು ಪಡೆಯುವಿರಿ. ನಿರಂತರವಾಗಿ ಜಪಿಸಿ. ಪ್ರಜ್ಞೆಯ ಕನ್ನಡಿಯನ್ನು ಮುಚ್ಚಿರುವ ಕಲ್ಮಶಗಳು ಪವಿತ್ರ ನಾಮಗಳ ಜಪದಿಂದ  ಮಾಯವಾಗುತ್ತವೆ. “

ಜಪದ ಏಳು ಪರಿಪೂರ್ಣತೆಗಳು :

1) ಹೃದಯದ ಕನ್ನಡಿಯನ್ನು ಶುದ್ಧಗೊಳಿಸುತ್ತದೆ.

2) ಭಕ್ತರನ್ನು ಐಹಿಕ ಅಸ್ತಿತ್ವದಿಂದ ರಕ್ಷಿಸಲಾಗುತ್ತದೆ.

3) ಪವಿತ್ರ ನಾಮವು ಅತ್ಯುನ್ನತ ವರದ ಬಗೆಗೆ ಹೇಳುತ್ತದೆ.

4) ಎಲ್ಲ ಅಲೌಕಿಕ ಜ್ಞಾನದ ಮೂಲ

5) ಪರಮಾನಂದ ಸಾಗರವನ್ನು ವಿಸ್ತರಿಸುತ್ತದೆ.

6) ಐಹಿಕ ಅಸ್ತಿತ್ವದ ರೋಗವನ್ನು ಗುಣಪಡಿಸುತ್ತದೆ.

7) ಎಲ್ಲ ಭಕ್ತಿಸೇವೆಯಲ್ಲಿ ಅಗತ್ಯವಾದ ಪದಾರ್ಥ.‌

ಬೋಧನೆ : ಶ್ರೀ ಚೈತನ್ಯ ಮಹಾಪ್ರಭು ತಮ್ಮದೇ ಉದಾಹರಣೆಯ ಮೂಲಕ ಸಂನ್ಯಾಸಿಗಳು ಭಕ್ತಿಸೇವೆಯ ಅತ್ಯುನ್ನತ ಮೌಲ್ಯವನ್ನು ಹೇಗೆ ಎತ್ತಿ ಹಿಡಿಯಬೇಕೆನ್ನುವುದನ್ನು ಬೋಧಿಸಿದರು.  “ಪರಮ ಪ್ರಭುವು ತನ್ನ ಸೃಷ್ಟಿಯಿಂದ ಏಕಕಾಲದಲ್ಲಿ ಭಿನ್ನನೂ ಅಭಿನ್ನನೂ ಆಗಿರುತ್ತಾನೆ. “

ಅಚಿಂತ್ಯಭೇದಾಭೇದ ತತ್ತ್ವವನ್ನು ಚೈತನ್ಯರು ಜನರಿಗೆ ಉಪದೇಶಿಸಿದರು.  ಚೈತನ್ಯರು ಈ ತತ್ತ್ವೋಪದೇಶವನ್ನು ಭಗವಂತನ ನಾಮ ಸಂಕೀರ್ತನೆಯ ಮೂಲಕ  ಉಪದೇಶಿಸಿದರು. ಆದುದರಿಂದಲೇ ನಾಮ ಸಂಕೀರ್ತನೆಯು ಈ ಯುಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹರಡಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi