ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆ

‘ದೇವರು’ ಎಂದರೆ ಯಾರೆಂದೇ ಅರಿಯದ ಈ ಯುಗದಲ್ಲಿ ದೈವ ಪ್ರೀತಿಯನ್ನು ಮುಕ್ತವಾಗಿ ಹಂಚಲು ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು.

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಉಪನ್ಯಾಸ, ದಿನಾಂಕ: 2ನೇ ಮಾರ್ಚ್ 1975, ಸ್ಥಳ: ಆಟ್ಲಾಂಟ

– ಅನುವಾದ: ಈಶ್ವರಚಂದ್ರ

ನಮೋ ಮಹಾವದಾನ್ಯಾಯ

ಕೃಷ್ಣಪ್ರೇಮ ಪ್ರದಾಯ ತೇ

ಕೃಷ್ಣಾಯ ಕೃಷ್ಣ ಚೈತನ್ಯ

ನಾಮ್ನೇ ಗೌರತ್ವಿಷೇ ನಮಃ

“ಅತ್ಯಂತ ಉದಾರವಾದ ಅವತಾರ ಪುರುಷರೇ! ನೀವು ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳಾಗಿ ಕಾಣಸಿಕೊಂಡ ಶ್ರೀ ಕೃಷ್ಣನೇ ಆಗಿದ್ದೀರಿ. ನೀವು ಶ್ರೀಮತಿ ರಾಧಾರಾಣಿಯ ಸುವರ್ಣ ದೇಹಕಾಂತಿಯನ್ನು ಪಡೆದಿದ್ದೀರಿ. ಪರಿಶುದ್ಧ ಕೃಷ್ಣ ಪ್ರೇಮವನ್ನು ವ್ಯಾಪಕವಾಗಿ ವಿತರಿಸುತ್ತಿದ್ದೀರಿ. ನಮ್ಮ ಭಕ್ತಿಪೂರ್ವಕ ಪ್ರಣಾಮಗಳನ್ನು ನಿಮಗೆ ಸಲ್ಲಿಸುತ್ತಿದ್ದೇವೆ.” (ಚೈ.ಚ., ಮಧ್ಯ 19.53)

ಶ್ರೀ ಚೈತನ್ಯ ಮಹಾಪ್ರಭುಗಳು ಕೃಷ್ಣ ಪ್ರೇಮವನ್ನು, ದೈವಪ್ರೇಮವನ್ನು ಭಾರತದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಬೋಧಿಸಲು ಬಯಸಿದ್ದರು. ಬೇರೆ ಬೇರೆ ಧರ್ಮಗಳಲ್ಲಿ ದೇವರಿಗೆ ಬೇರೆ ಬೇರೆ ಹೆಸರುಗಳಿವೆ. ವೈದಿಕ ಧರ್ಮಗ್ರಂಥಗಳಲ್ಲಿ ಅನೇಕ ದೇವತೆಗಳೂ, ದೇವರ ಅವತಾರಗಳೂ ಇವೆ.

ಆದರೆ ಕೃಷ್ಣನೆನ್ನುವುದು ದೇವರ ಮೂಲ ಹೆಸರು. ಭಾಗವತದಲ್ಲಿ (1.3.28) ಹೇಳಿದಂತೆ, – ಏತೇ ಚಾಂಶಕಲಾಃ ಪುಂಸ್ಯಂಃ ಕೃಷ್ಣಸ್‌ ತು ಭಗವಾನ್ ಸ್ವಯಮ್ – ಅವತಾರಗಳ ಒಂದು ಪಟ್ಟಿಯೇ ಇದೆ. ಅದರ ಕೊನೆಯಲ್ಲಿ ಭಾಗವತವು ಹೇಳುತ್ತದೆ : “ಈ ದೀರ್ಘಪಟ್ಟಿಯಲ್ಲಿ ಅನೇಕ ಹೆಸರುಗಳಿವೆ. ಆದರೆ ಕೃಷ್ಣನೇ ಮೂಲ ದೇವೋತ್ತಮ ಪರಮ ಪುರುಷ.”

ದೇವರು ನಮ್ಮಂತಲ್ಲ. ಅವನು ತನ್ನನ್ನು ವಿಸ್ತರಿಸಿಕೊಳ್ಳಬಲ್ಲ ಕೆಲವು ಯೋಗಿಗಳು ಕೂಡ (ಈ ಸಾಧಾರಣವಾದ ಮೂರನೆಯ ದರ್ಜೆಯ ಯೋಗಿಗಳಲ್ಲ, ಯೋಗಸಿದ್ಧಿಯನ್ನು ಪಡೆದವರು) ತಮ್ಮ ದೇಹವನ್ನು ಬಹಳವೆಂದರೆ ಎಂಟು ಪಟ್ಟು ವಿಸ್ತರಿಸಿಕೊಳ್ಳಬಲ್ಲರು. ಯೋಗಿಗಳು ಹೀಗೆ ಮಾಡಿದ ನಿದರ್ಶನಗಳಿವೆ. ಎಂದಮೇಲೆ ಒಬ್ಬ ಸಾಧಾರಣ ಯೋಗಿ ಅದನ್ನು ಮಾಡಬಲ್ಲವನಾದರೆ, ಪರಮ ಪ್ರಭುವಿಗೆ ತನ್ನನ್ನು ವಿಸ್ತರಿಸಿಕೊಳ್ಳಲು ಎಷ್ಟು ಶಕ್ತಿ ಇದ್ದೀತು!

ಭಗವದ್ಗೀತೆಯಲ್ಲಿ (18.61) ಕೃಷ್ಣನು ಹೇಳುತ್ತಾನೆ. ಈಶ್ವರಃ ಸರ್ವಭೂತನಾಂ ಹೃದ್ದೇಶಽರ್ಜುನ ತಿಷ್ಠತಿ; “ನನ್ನ ಪ್ರಿಯ ಅರ್ಜುನನೆ, ಪರಮ ಪ್ರಭುವು ಪ್ರತಿಯೊಂದು ಜೀವಿಯ ಹೃದಯದಲ್ಲಿಯೂ ಇದ್ದಾನೆ” ಎಷ್ಟೊಂದು ಜೀವಿಗಳು ಇವೆ ಎಂದು ಒಂದು ಕ್ಷಣ ಯೋಚನೆ ಮಾಡಿ! ಅವುಗಳನ್ನು ಎಣಿಸಲು ಸಾಧ್ಯವಿಲ್ಲ.

ಕೋಟಿ ಕೋಟಿ ಸಂಖ್ಯೆಯಲ್ಲಿವೆ. ಕೋಟೆ ಕೋಟಿಗಳೂ ಎಣಿಸಲು ಸಾಲದು. ಅವು ಅಗಣಿತ. ಆದರೂ ಅವೆಲ್ಲ ದೇವರ ವಿಭಿನ್ನಾಂಶಗಳು. ಅವನು ಆ ಎಲ್ಲ ಜೀವಿಗಳ ಹೃದಯದಲ್ಲಿ ವಾಸಮಾಡುತ್ತಿದ್ದಾನೆ. ಇದು ದೇವೋತ್ತಮ ಪರಮಪುರುಷನ ಅನಂತ ಶಕ್ತಿ.

ಸೂರ್ಯಕಿರಣವನ್ನೂ, ಸೂರ್ಯಗೋಳವನ್ನೂ ಮತ್ತು ಸೂರ್ಯದೇವನನ್ನೂ ಪರಿಗಣಿಸಿ. ಸೂರ್ಯದೇವನು ಸೂರ್ಯಗೋಳದೊಳಗೆ ಇದ್ದಾನೆ. ಸೂರ್ಯಗೋಳದ ನಿವಾಸಿಗಳೂ ಎಲ್ಲ ಥಳಥಳ ಪ್ರಕಾಶಿಸುತ್ತಿದ್ದಾರೆ. ಅವರ ದೇಹಗಳು ಪ್ರಕಾಶಿಸುತ್ತಿರುವುದರಿಂದ ಇಡೀ ಸೂರ್ಯಲೋಕವೇ ಪ್ರಕಾಶಿಸುತ್ತಿದೆ.

ಸೂರ್ಯಲೋಕವು ಪ್ರಕಾಶಿಸುತ್ತಿರುವುದರಿಂದ ಸೂರ್ಯನ ಕಿರಣಗಳು ತೊಂಬತ್ಮೂರು ಮಿಲಿಯನ್ ಮೈಲಿಗಳ ದೂರದಿಂದ ಬಂದು ನಮ್ಮನ್ನು ತಲಪುತ್ತಿವೆ. ನಾವು ಶಾಖವನ್ನೂ ಬೆಳಕನ್ನೂ ಪರಿಭಾವಿಸುತ್ತೇವೆ. ಸೂರ್ಯನು ಒಂದು ಸಾಧಾರಣ ಜಡವಸ್ತು. ಆದರೆ ಅದಕ್ಕೆ ಅಂತಹ ಮಹಾನ್ ಶಕ್ತಿ ಇದೆ.

ಈಗ ದೇವೋತ್ತಮ ಪರಮ ಪುರುಷನಿಗೆ ಎಷ್ಟು ಶಕ್ತಿಯಿರಬೇಕು ಎಂದು ಊಹಿಸಿ! ದಿಟದಲ್ಲಿ ಎಂತಹ ಮಹಾನ್‌ ಶಕ್ತಿ ಅವನಿಗಿದೆ ಎಂದು ನಾವು ಊಹೆ ಮಾಡಲಾರೆವು. ಸೂರ್ಯಗೋಳದ ಶಾಖವನ್ನು ಕೂಡ ನಾವು ಅಂದಾಜು ಮಾಡಲಾರೆವು. ನಮ್ಮ ರಾಕೆಟ್ಟುಗಳನ್ನು ಬಳಸಿ ನಾವು ಸೂರ್ಯಗೋಳವನ್ನು ಸಮೀಪಿಸಲು ಪ್ರಯತ್ನಿಸಬಹುದು. ಆದರೆ ಅದನ್ನು ತಲಪುವ ಮೊದಲೇ ನಾವು ನಾಶವಾಗಿ ಹೋಗಿರುತ್ತೇವೆ. ಅದರ ಶಾಖ ಅಷ್ಟು ಹೆಚ್ಚಾಗಿದೆ. ಪ್ರತಿಯೊಬ್ಬರಿಗೂ ಅದು ಗೊತ್ತು.

ಈಗ, ಸೂರ್ಯಗೋಳದಂತಹ ಒಂದು ಸಾಧಾರಣ ವಸ್ತುವೇ ಅಷ್ಟು ಶಕ್ತಿಶಾಲಿಯಾಗಿರಬೇಕಾದರೆ, ದೇವೋತ್ತಮ ಪರಮಪುರುಷನು ಇನ್ನು ಎಷ್ಟು ಹೆಚ್ಚು ಶಕ್ತಿಶಾಲಿಯಾಗಿರಬೇಕು! “ದೇವರು ಸರ್ವಶಕ್ತ, ಮಹಾ ಬಲಶಾಲಿ” ಎಂದು ನಾವು ಹೇಳುತ್ತೇವೆ. ಆದರೆ “ಮಹಾಬಲಶಾಲಿ” ಎಂದರೆ ಏನು ಎಂಬ ಕಲ್ಪನೆ ನಮಗಿಲ್ಲ.

”ನಾನು ಸ್ವಲ್ಪ ಮಟ್ಟಿಗೆ ಬಲಶಾಲಿ, ಆದ್ದರಿಂದ ದೇವರು ನನಗಿಂತ ಹತ್ತು ಪಟ್ಟು ಬಲಶಾಲಿಯಾಗಿರಬಹುದು” ಎಂದು ನಾವು ಹೇಳಬಹುದು. ಬೇರೆ ಯಾರೋ “ಇಪ್ಪತ್ತು ಪಟ್ಟು” ಎಂದು ಹೇಳಬಹುದು. “ಆಗಲಿ, ಐವತ್ತು ಪಟ್ಟು ಎಂದೇ ಇಟ್ಟುಕೊಳ್ಳೋಣ’ (ನಗು)

ಈ ರೀತಿಯ ಊಹೆಯು ಬಾವಿಯಲ್ಲಿರುವ ಕಪ್ಪೆಯ ಊಹೆಯಂತೆ. ಒಂದಾನೊಂದು ಕಾಲದಲ್ಲಿ ಒಂದು ಬಾವಿಯಲ್ಲಿ ಒಂದು ಕಪ್ಪೆ ಇತ್ತು. ಒಂದು ಸಲ ಅದರ ಸ್ನೇಹಿತನಾದ ಇನ್ನೊಂದು ಕಪ್ಪೆ ಅದನ್ನು ನೋಡಲು ಬಂದಿತು. ಅದು ಹೇಳಿತು,

”ಗೆಳೆಯಾ ನಾನು ಅಟ್ಲಾಂಟಿಕ್ ಸಾಗರವೆಂಬ ಅಪಾರ ಜಲರಾಶಿಯನ್ನು ನೋಡಿದೆ. “ಅಟ್ಲಾಂಟಿಕ್ ಸಾಗರ ಅಂದರೆ ಏನು?” “ಅದು ಬಹಳ ವಿಶಾಲವಾಗಿದೆ.

“ಎಷ್ಟು ವಿಶಾಲ ? ಈ ಬಾವಿಗಿಂತ ಹತ್ತು ಪಟ್ಟು ದೊಡ್ಡದಾಗಿದೆಯೇ ? ಅಥವಾ ಇಪ್ಪತ್ತು ಪಟ್ಟು ದೊಡ್ಡದಾಗಿದೆಯೇ? ಹೇಳು!” (ನಗು)

“ಇಲ್ಲ, ಇಲ್ಲ. ಅದು ಬಹಳ ಬಹಳ ವಿಶಾಲವಾಗಿದೆ.”

ಆದ್ದರಿಂದ ದೇವರನ್ನು ಕುರಿತ ಧೂರ್ತ ಊಹೆಯು ಅಟ್ಲಾಂಟಿಕ್ ಸಾಗರವನ್ನು ಕುರಿತ ಕಪ್ಪೆಯ ಊಹೆಯಂತೆಯೇ. ಈ ಲೌಕಿಕ ತತ್ತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ದೇವರನ್ನು ಕುರಿತು ಆ ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಡಾ. ಮಂಡೂಕ ತತ್ತ್ವಜ್ಞಾನವು ದೇವರೆಂದರೆ ಏನು ಎಂದು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದಿಲ್ಲ.

ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಯು ದೇವರನ್ನು ಕುರಿತ ಪ್ರೀತಿಯ ವಿತರಣೆಯೇ ಆಗಿದೆ. ಈ ಮಾನವ ಜೀವನದ ವಿಶೇಷ ಉದ್ದೇಶವು ದೇವರೆಂದರೆ ಯಾರು ಎಂದು ಅರ್ಥಮಾಡಿಕೊಂಡು ಅವನನ್ನು ಪ್ರೀತಿಸುವುದು ಅಷ್ಟೇ. ಇದೊಂದೇ ನಮ್ಮ ಕೆಲಸ. ನಾಯಿಗಳು ಮತ್ತು ಬೆಕ್ಕುಗಳು ಮತ್ತು ಇತರ ಕೆಳದರ್ಜೆಯ ಪ್ರಾಣಿಗಳಿಗೆ ಕೃಷ್ಣಪ್ರಜ್ಞೆಯನ್ನು ಕುರಿತು ಬೋಧಿಸಿದರೆ, ಅವು ಅರ್ಥಮಾಡಿಕೊಳ್ಳುವುದಿಲ್ಲ.

ಆದರೆ ಮಾನವ ಜೀವಿಗಳು ಅದನ್ನು ಅರ್ಥಮಾಡಿಕೊಳ್ಳಬಲ್ಲರು. ಉದಾಹರಣೆಗೆ, ಈ ಕೃಷ್ಣ  ಪ್ರಜ್ಞಾ ಆಂದೋಲನವನ್ನು ಜಗತ್ತಿನಾದ್ಯಂತ ಪಸರಿಸಲಾಗುತ್ತಿದೆ. ನಿಮ್ಮ ದೇಶದಲ್ಲಿ ಜನರು ಅರ್ಥಮಾಡಿಕೊಳ್ಳುತ್ತಿರುವುದನ್ನು ನೀವೇ ಇಲ್ಲಿ ನೋಡುತ್ತಿದ್ದೀರಿ. ಮಾನವ ಜೀವನದ ವಿಶೇಷ ಸೌಲಭ್ಯವಿದು.

ಬೋಸ್ಟನ್ನಿನ ಒಬ್ಬ ಕ್ರಿಶ್ಚಿಯನ್ ಪಾದ್ರಿಗೆ ನಮ್ಮ ಭಕ್ತರನ್ನು ನೋಡಿ ಆಶ್ಚರ್ಯವಾಯಿತು.

ಅವರು ಒಂದು ಕರಪತ್ರವನ್ನು ಹೊರಡಿಸಿದರು. ಅದರಲ್ಲಿ, “ಈ ಹರೇಕೃಷ್ಣ ತರುಣರು ನಮ್ಮ ಯುವಕರು. ಈ ಆಂದೋಲನಕ್ಕೆ ಸೇರುವ ಮುನ್ನ ಅವರು ಕ್ರೈಸ್ತ ಧರ್ಮದ ಬಗ್ಗೆ ಕಾಳಜಿಯನ್ನು ವಹಿಸುತ್ತಿರಲಿಲ್ಲ. ಆದರೆ ಈಗ ಅವರಿಗೆ ದೇವರ ಹುಚ್ಚು ಹಿಡಿದಿದೆ” ಎಂದು ಹೇಳಿದ್ದರು. ಅಂದರೆ ಈ ಆಂದೋಲನಕ್ಕೆ ಒಬ್ಬ ಕ್ರಿಶ್ಚಿಯನ್ ಪಾದ್ರಿಯಿಂದ ಪ್ರಮಾಣಪತ್ರ ದೊರಕಿದ ಹಾಗಾಯಿತು.

ವಾಸ್ತವದಲ್ಲಿ ನೀವು ಶ್ರೀ ಚೈತನ್ಯ ಮಹಾಪ್ರಭುಗಳ ಆಂದೋಲನದ ಶಕ್ತಿಯನ್ನು ನೋಡಬಹುದು. ನಾನು ಒಬ್ಬ ಬಡ ಭಾರತೀಯ. ನಾನು ಅಮೆರಿಕಕ್ಕೆ ನಲವತ್ತು ರೂಪಾಯಿ ಹಿಡಿದುಕೊಂಡು ಬಂದೆ. ಈ ತರುಣ ಜನಾಂಗಕ್ಕೆ ಲಂಚ ಕೊಡಲು ನನ್ನಲ್ಲಿ ಹಣವಿರಲಿಲ್ಲ (ನಗು). ಆದರೆ ಈಗ ಅವರು ದೇವರ ವಿಷಯದಲ್ಲಿ ಹುಚ್ಚರಾಗಿದ್ದಾರೆ.

ಇದು ಪ್ರಯೋಗಸಿದ್ಧವಾದುದು. ಈಗ ಈ ಆಂದೋಲನವನ್ನು ಬಿಟ್ಟುಹೋಗುವಂತೆ ಅವರಿಗೆ ಲಂಚಕೊಟ್ಟರೆ ಅವರು ಹೋಗುವುದಿಲ್ಲ. ಅನೇಕ ತಂದೆ ತಾಯಿಯರು ಅವರನ್ನು ಮನೆಗೆ ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಹೋಗುತ್ತಿಲ್ಲ.

ಹಾಗಾದರೆ ಇಲ್ಲಿರುವ ಅಮಲು ಯಾವುದು ? ಇಲ್ಲಿರುವ ತರುಣ ತರುಣಿಯರು ಮಾದಕ ವಸ್ತುಗಳ ಸೇವನೆಯನ್ನೆಲ್ಲ ತೊರೆದುಬಿಟ್ಟಿದ್ದಾರೆ. ಆದರೆ ಈಗ ಅವರು “ಹರೇ ಕೃಷ್ಣ, ಹರೇ ಕೃಷ್ಣ” ದಿಂದ ಮತ್ತರಾಗಿದ್ದಾರೆ. ಇದು ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆ. ಒಬ್ಬರು ಡ್ರಾಫ್ಟ್‌ಬೋರ್ಡ್‌ ಅಧಿಕಾರಿ ನಮ್ಮ ಕೇಂದ್ರಗಳಲ್ಲಿ ಒಂದನ್ನು ನೋಡಲು ಬಂದರು.

“ಹರೇ ಕೃಷ್ಣ ಆಂದೋಲನಕ್ಕೆ ಸೇರಿದ ಈ ತರುಣರಿಗೆ ನೀವು ಯಾವ ಸೌಲಭ್ಯಗಳನ್ನು ಕೊಟ್ಟಿದ್ದೀರಿ ? ಸೇನೆಗಿಂತ ಇದು ಬಹಳ ಸುಲಭವಾಗಿರಬೇಕು” ಎಂದು ಕೇಳಿದರು. ಆದರೆ ಅವರು ಪರಿಶೀಲನೆ ಮಾಡಿದಾಗ ಇಲ್ಲಿನ ತರುಣ ತರುಣಿಯರಿಗೆ ನಿಷಿದ್ಧ ಕಾಮ, ಮಾದಕವಸ್ತು ಸೇವನೆ, ಮಾಂಸಾಹಾರ ಸೇವನೆ ಮತ್ತು ಜೂಜಾಟವನ್ನು ನಿಷೇಧಿಸಿರುವುದು ತಿಳಿದುಬಂದಿತು.

ಆದ್ದರಿಂದ ದಿಟದಲ್ಲಿ ಈ ಆಂದೋಲನವು ಸೇನಾ ತರಬೇತಿಗಿಂತ ಕಠಿಣವಾದುದು ಎಂಬ ನಿರ್ಣಯಕ್ಕೆ ಅವರು ಬಂದರು. ಈ ನಿರ್ಬಂಧಗಳನ್ನು ಸೇನೆಯಲ್ಲಿ ವಿಧಿಸಿಲ್ಲ. ಅವನ್ನು ಅನುಸರಿಸುವುದು ಬಹಳ ಕಷ್ಟ. ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆಯಿಂದಾಗಿ ಈ ತರುಣ ತರುಣಿಯರು ಅವುಗಳನ್ನು ಅನುಸರಿಸುತ್ತಿದ್ದಾರೆ.

ಪ್ರತಿಯೊಬ್ಬ ಮಾನವ ಜೀವಿಯೂ ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆಯನ್ನು ಸ್ವೀಕರಿಸಬೇಕು. ರೂಪ ಗೋಸ್ವಾಮಿಯವರು ಮೊದಲಬಾರಿ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಕಂಡಾಗ ಅರ್ಪಿಸಿದ ಶ್ಲೋಕದ ಭಾವಾರ್ಥ ಅದು: ನಮೋ ಮಹಾವದಾನ್ಯಾಯ. ”ನೀವು ದೇವರ ಅತ್ಯಂತ ಉದಾರವಾದ ಅವತಾರ.” ಏಕೆ ? “ನೀವು ಕೃಷ್ಣಪ್ರೇಮವನ್ನು ದೈವ ಪ್ರೇಮವನ್ನು ವಿತರಿಸುತ್ತಿದ್ದೀರಿ. ಜನರಿಗೆ ದೇವರು ಎಂದರೆ ಏನು ಎಂದು ಗೊತ್ತಿಲ್ಲ. ಆದರೂ ನೀವು ದೇವೋತ್ತಮನ ಪ್ರೇಮವನ್ನು ವಿತರಿಸುತ್ತಿದ್ದೀರಿ.”

ಸಾಧಾರಣವಾಗಿ ಒಬ್ಬ ವ್ಯಕ್ತಿಯು ಇನ್ನೊಬ್ಬನನ್ನು ಚೆನ್ನಾಗಿ ತಿಳಿದಿಲ್ಲದಿದ್ದರೆ ಪ್ರೇಮಿಸಲು ಸಾಧ್ಯವಾಗುವುದಿಲ್ಲ. ಆಗ ಮಾತ್ರ ಪ್ರೇಮದ ಪ್ರಶ್ನೆ ಉದ್ಭವಿಸುತ್ತದೆ. ನೀವು ಮತ್ತು ನಾನು ಹತ್ತು ಸಾವಿರ ಮೈಲಿಗಳ ದೂರದಲ್ಲಿ ವಾಸಿಸುತ್ತಿದ್ದರೆ ಪ್ರೇಮದ ಪ್ರಶ್ನೆಯೇ ಏಳುವುದಿಲ್ಲ. ಪ್ರೇಮಕ್ಕೆ ನಿಕಟತೆ ಬೇಕು.

ಆದ್ದರಿಂದ ದೇವರನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ಭಗವದ್ಗೀತೆಯಲ್ಲಿ (7.3) ಕೃಷ್ಣ ಹೇಳುತ್ತಾನೆ:

ಮನುಷ್ಯಾಣಾಂ ಸಹಸ್ರೇಷು

ಕಶ್ಚಿದ್‌ ಯತತಿ ಸಿದ್ಧಯೇ

ಯತತಾಮ್ ಅಪಿ ಸಿದ್ಧಾನಾಂ

ಕಶ್ಚಿನ್‌ ಮಾಂ ವೇತ್ತಿ ತತ್ತ್ವತಃ

”ಸಹಸ್ರಾರು ಜನರಲ್ಲಿ ಒಬ್ಬನು ತನ್ನ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಲು ಆಸಕ್ತನಾಗಿರಬಹುದು. ಹೀಗೆ ವಾಸ್ತವವಾಗಿ ಪರಿಪೂರ್ಣತೆಯನ್ನು ಸಾಧಿಸಿರುವವರಲ್ಲಿ ಒಬ್ಬನು ನನ್ನನ್ನು ನಿಜವಾಗಿ ಅರ್ಥಮಾಡಿಕೊಂಡಿದ್ದಾನೆ ಎಂದು ಹೇಳುವುದೂ ಕಷ್ಟ”

ಪರಿಪೂರ್ಣತೆಯೆಂದರೆ ಯಾವುದೇ ನಿರ್ಬಂಧವಿಲ್ಲದೆ ನನ್ನ ಮನಸ್ಸಿಗೆ ಬಂದದ್ದನ್ನು ತಿನ್ನುವುದೆಂದು ಅರ್ಥವಲ್ಲ. ಅಥವಾ ನನಗೊಂದು ಸೊಗಸಾದ ಕಾರು ಇದೆ, ಬಹಳ ಚೆನ್ನಾಗಿರುವ ಮನೆ ಇದೆ, ಬ್ಯಾಂಕಿನಲ್ಲಿ ಹೇರಳವಾಗಿ ಹಣ ಇದೆ ಎನ್ನುವುದೂ ಅಲ್ಲ. ಇದು ಪರಿಪೂರ್ಣತೆಯಲ್ಲ. ಏಕೆಂದರೆ ನಾನು ಪ್ರಕೃತಿ ಗುಣಗಳ ನಿಯಮಗಳ ಮುಷ್ಟಿಯಲ್ಲಿ ಸಿಲುಕಿಕೊಳ್ಳುತ್ತೇನೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ಪ್ರಕೃತಿ ಗುಣಗಳು ನನ್ನನ್ನು ನಿಯಂತ್ರಿಸುತ್ತಿವೆ.

ಪ್ರಕೃತಿ ಗುಣಗಳು ಹೇಗೆ ನಿಯಂತ್ರಿಸುತ್ತವೆ? ಪ್ರಕೃತಿಯಲ್ಲಿ ಮೂರು ಗುಣಗಳಿಂದಾದ ಒಂದು ಯಂತ್ರವಿದೆ. ಕಾರಣಂ ಗುಣ ಸಙ್ಗೋsಸ್ಯ ಸದ್ ಅಸದ್ ಯೋನಿ ಜನ್ಮಸು. ಜನರು ಈ ಮೂರು ಪ್ರಕೃತಿ ಗುಣಗಳ ಸಂಪರ್ಕಕ್ಕೆ ಬರುತ್ತಾರೆ. ಆದ್ದರಿಂದ ಅವರು “ಸೋಂಕಿಗೊಳಗಾಗುತ್ತಾರೆ.” ನಮಗೆ ತಿಳಿದೋ ತಿಳಿಯದೆಯೋ ಒಂದು ರೋಗದ ಸೋಂಕಿಗೆ ಒಳಗಾದರೆ, ರೋಗವು ಉಲ್ಬಣಿಸುತ್ತದೆ ಎಂದು ನಮಗೆ ಗೊತ್ತು.

ಯಾವಾಗ ಅಥವಾ ಹೇಗೆ ಒಂದು ನಿರ್ದಿಷ್ಟ ರೋಗದ ಸೋಂಕು ತಟ್ಟಿತು ಎಂದು ನಮಗೆ ತಿಳಿಯದಿದ್ದರೂ ಅದಕ್ಕೆ ವಿನಾಯಿತಿ ಇಲ್ಲ. ನಾವು ಸಂಕಟವನ್ನು ಅನುಭವಿಸಲೇಬೇಕು.

ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದಾದಂತಹ ಮೂರು ಪ್ರಕೃತಿಗುಣಗಳಿವೆ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ. ಇವು ಗೊತ್ತಿಲ್ಲ ಎಂದರೆ ಅದಕ್ಕೆ ವಿನಾಯಿತಿಯಿಲ್ಲ. ನ್ಯಾಯಾಲಯದಲ್ಲಿ, “ಮಹಾಸ್ವಾಮಿ, ಕಳ್ಳತನ ಮಾಡಿದರೆ ಶಿಕ್ಷೆಯಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ” ಎಂದು ನೀವು ಹೇಳಿದರೆ ನ್ಯಾಯಾಧೀಶರು ನಿಮ್ಮನ್ನು ಕ್ಷಮಿಸುವುದಿಲ್ಲ. ಸರ್ಕಾರದ ನಿಯಮಗಳೇ ಇಷ್ಟು ಕಟ್ಟುನಿಟ್ಟಾಗಿದ್ದಾಗ, ಇನ್ನು ಐಹಿಕ ಪ್ರಕೃತಿಯ ನಿಯಮಗಳು ಎಷ್ಟು ನಿಷ್ಠುರ ಎಂದು ನೀವು ಕಲ್ಪಿಸಿಕೊಳ್ಳಬಹುದು.

ತಿಳಿದೋ ತಿಳಿಯದೆಯೋ, ಈ ಬದುಕಿನಲ್ಲಿ ನಾವು ಪ್ರಕೃತಿಗುಣಗಳ ಒಂದು ನಿರ್ದಿಷ್ಟ ಸಂಯೋಜನೆಯಿಂದ ಸೋಂಕಿತರಾಗಿದ್ದೇವೆ. ತನ್ಮೂಲಕ ನಮ್ಮ ಮುಂದಿನ ಜನ್ಮದ ದೇಹವನ್ನು ಸೃಷ್ಟಿಸುತ್ತಿದ್ದೇವೆ. 84,00,000 ಬಗೆಯ ಜೀವಜಾತಿಗಳಿವೆ. ಏಕೆ ? ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ: ಕಾರಣಃ ಗುಣ ಸಙ್ಗಃ ನಾನಾ ಬಗೆಯ ಜೀವಜಾತಿಗಳಿವೆ.

ಏಕೆಂದರೆ ಪ್ರತಿಯೊಂದು ಜೀವಿಯೂ ಪ್ರಕೃತಿ ಗುಣಗಳ ಒಂದು ನಿರ್ದಿಷ್ಟ ಸಂಯೋಜನೆಯಿಂದ ಸೋಂಕಿತವಾಗಿದೆ. ಇದು ನಿರಂತರವಾಗಿ ನಡೆಯುತ್ತಲೇ ಇದೆ. “ನಿರಂತರ” ಎಂದರೆ ಈ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು ಅಥವಾ ಯಾವಾಗ ಮುಕ್ತಾಯವಾಗುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ. ಆದ್ದರಿಂದ ಅದನ್ನು ನಾವು ನಿರಂತರ ಎಂದು ಹೇಳುತ್ತೇವೆ.

ಆದ್ದರಿಂದ ಈ ಮಾನವ ರೂಪದ ಜನ್ಮದಲ್ಲಿ ಈ ಎಲ್ಲ ಸಂಗತಿಗಳನ್ನು ಅಧ್ಯಯನ ಮಾಡುವುದು ನಮಗೆ ಸಾಧ್ಯ ಎನ್ನುವುದೇ ಒಂದು ದೊಡ್ಡ ಸೌಲಭ್ಯವಾಗಿದೆ- ಜೀವಿ ಎಂದರೆ ಏನು, ಪ್ರಕೃತಿಗುಣದಿಂದ ಅವನು ಹೇಗೆ ಸೋಂಕಿಗೆ ಒಳಗಾಗುತ್ತಾನೆ, ಅವನು ಹೇಗೆ ವಿವಿಧ ದೇಹಗಳನ್ನು ಧಾರಣೆ ಮಾಡುತ್ತಾನೆ.

ನಾವು ಅರ್ಥಮಾಡಿಕೊಳ್ಳಬೇಕಾದ ಮೊಟ್ಟಮೊದಲನೆಯ ಸಂಗತಿಯೆಂದರೆ ನಾವು ಈ ದೇಹವಲ್ಲ. ಆದ್ದರಿಂದ ಭಗವದ್ಗೀತೆಯ ಪ್ರಾರಂಭದಲ್ಲಿಯೇ ಪ್ರಭುಕೃಷ್ಣನು, ನಾವು ಈ ದೇಹವಲ್ಲ ಬದಲಿಗೆ ಇದರ ಒಡೆಯರು ಅಥವಾ ನಿವಾಸಿಗಳು ಎಂಬ ವಿಷಯವನ್ನು ನಮಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತಾನೆ. ಇದು ಅವನ ಮೊದಲನೆಯ ಬೋಧನೆ. ಈ ಬೋಧನೆಯನ್ನು ನಾವು ಅರ್ಥಮಾಡಿಕೊಂಡರೆ, ಈ ದೇಹವೆಂಬ ವೇದಿಕೆಯಿಂದ ನಾವು ಮೇಲೇರಬಹುದು.

ಶ್ರೀ ಚೈತನ್ಯ ಮಹಾಪ್ರಭುಗಳ ಆಂದೋಲನವು ಈ ದೈಹಿಕ ವೇದಿಕೆಯ ಮೇಲಿಲ್ಲ. ಅದು ಆಧ್ಯಾತ್ಮಿಕ ವೇದಿಕೆಯ ಮೇಲಿದೆ. ಸನಾತನ ಗೋಸ್ವಾಮಿ ಅವರೊಡನೆ ಸಂಭಾಷಿಸುವಾಗ ಇದನ್ನು ಅವರು ವಿವರಿಸಿದರು. ಸನಾತರು ಕೇಳುತ್ತಾರೆ, “ನಾನು ಯಾರು?” ಅವರು ಒಬ್ಬರು ವಿದ್ವಾಂಸರಾಗಿದ್ದರು, ಮಂತ್ರಿಯಾಗಿದ್ದರು, ಬ್ರಾಹ್ಮಣರಾಗಿದ್ದರು.

ಅವರಿಗೆ ಸಂಸ್ಕೃತ ಮತ್ತು ಉರ್ದು ಬಹಳ ಚೆನ್ನಾಗಿ ಬರುತ್ತಿತ್ತು. ಅವರು ವಾಸಿಸುತ್ತಿದ್ದ ಸಾಮ್ರಾಜ್ಯವು ಮಹಮದೀಯರದಾಗಿದ್ದರಿಂದ, ಉರ್ದು ರಾಜ್ಯಭಾಷೆಯಾಗಿತ್ತು – ಬ್ರಿಟಿಷರ ಕಾಲದಲ್ಲಿ ಇಂಗ್ಲಿಷ್ ರಾಜ್ಯಭಾಷೆಯಾಗಿದ್ದ ಹಾಗೆ. ಆದ್ದರಿಂದ ಸನಾತರು ಉರ್ದು, ಫಾರ್ಸಿ ಮತ್ತು ಸಂಸ್ಕೃತಗಳಲ್ಲಿ ಪಾರಂಗತರಾಗಿದ್ದರು.

ಆದ್ದರಿಂದ ಅವರು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಕೇಳಿದರು. ಸಾಮಾನ್ಯ ಮನುಷ್ಯರು ನನ್ನನ್ನು ಪಂಡಿತ್‌ ಜೀ, ಅಂದರೆ ಬಹಳ ವಿದ್ವಾಂಸನಾದ ವ್ಯಕ್ತಿ ಎಂದು ಸಂಬೋಧಿಸುತ್ತಾರೆ. ಆದರೆ ನನಗೆ ನನ್ನ ಸ್ಥಾನ ಗೊತ್ತು. ನಾನು ಯಾರು ಎಂದೇ ನನಗೆ ಗೊತ್ತಿಲ್ಲ. ಇದೇ ನನ್ನ ಪರಿಸ್ಥಿತಿ.”

ಈಗ ನೀವು ಅತ್ಯಂತ ದೊಡ್ಡ ವೈದ್ಯರನ್ನೋ, ವಿಜ್ಞಾನಿಯನ್ನೋ ಅಥವಾ ತತ್ತ್ವಜ್ಞಾನಿಯನ್ನೋ, “ನೀವು ಯಾರು?’ ಎಂದು ಕೇಳಿದರೆ, ಅವರು ಹೇಳುತ್ತಾರೆ, ”ನಾನೊಬ್ಬ ಭಾರತೀಯ”, “ನಾನೊಬ್ಬ ಅಮೆರಿಕನ್”, “ನಾನೊಬ್ಬ ಇದು, ನಾನೊಬ್ಬ ಅದು,” ಇವೆಲ್ಲ ದೈಹಿಕವಾದ ಅಭಿಧಾನಗಳು ಅಷ್ಟೇ. ಅಂಥವರು ಪ್ರಥಮ ದರ್ಜೆಯ ಮೂರ್ಖರು ಅಷ್ಟೇ. ಆದರೂ ಅವರು ಮಹಾ ವಿಜ್ಞಾನಿ, ಮಹಾ ತತ್ತ್ವಜ್ಞಾನಿ ಎಂದು ಮನ್ನಣೆ ಪಡೆಯುತ್ತಾರೆ.

ಒಬ್ಬ ವ್ಯಕ್ತಿಯು ತನ್ನನ್ನೇ ತಾನು ಅರ್ಥಮಾಡಿಕೊಂಡಿಲ್ಲದಿದ್ದರೆ, ಅವನ ಕಲಿಕೆಯ ಮೌಲ್ಯವೇನು? ಒಬ್ಬ ವ್ಯಕ್ತಿಯು ತಾನು ಯಾರು ಎಂದು ಅರಿತಿರಬೇಕು. ಪ್ರತಿಯೊಬ್ಬನೂ ತನ್ನನ್ನು ದೇಹದ ಮೂಲಕ ಗುರುತಿಸುತ್ತಾನೆ: ”ನಾನು ಹಿಂದೂ”, “ನಾನು ಮುಸ್ಲಿಂ’, “ನಾನು ಕ್ರಿಶ್ಚಿಯನ್”, “ನಾನು ಭಾರತೀಯ”, “ನಾನು ಅಮೆರಿಕನ್”, “ನಾನು ಜರ್ಮನ್”, “ನಾನು ಇಂಗ್ಲೆಂಡಿನವನು”, ಇದರಿಂದಾಗಿಯೇ ಇಷ್ಟೆಲ್ಲಾ ಹೋರಾಟಗಳು ನಡೆಯುತ್ತಿರುವುದು.

ಜೀವಿಯು ದೇವರ ವಿಭಿನ್ನಾಂಶ, ಐಹಿಕ ದೇಹದಿಂದ ಆವೃತವಾದ ಒಂದು ಆಧ್ಯಾತ್ಮಿಕ ಕಿಡಿ. ಉದಾಹರಣೆಗೆ, ನಾವೆಲ್ಲ ಬಗೆ ಬಗೆಯ ವಸ್ತ್ರಗಳಿಂದ ಆಚ್ಛಾದಿತರಾದ ಮಾನವ ಜೀವಿಗಳು. ಇದರ ಅರ್ಥ ನಾವು ವಿಭಿನ್ನರು ಎಂದು ಅಲ್ಲ. ನಾವು ಮಾನವರಾಗಿ, ಈ ಭೂಮಿಯ ನಿವಾಸಿಗಳಾಗಿ ಒಂದಾಗಿದ್ದೇವೆ. ಆದರೆ ನಮ್ಮ ವಿವಿಧ ದೇಹ ವಸನಗಳಿಂದಾಗಿ, ನೀವು ನನ್ನ ಶತ್ರು ಎಂದು ನಾನು ಭಾವಿಸುತ್ತೇನೆ, ನಾನು ನಿಮ್ಮ ಶತ್ರು ಎಂದು ನೀವು ಭಾವಿಸುತ್ತೀರಿ.

ಭಾಗವತದ ನಿರ್ಣಯವೆಂದರೆ, ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿಧಾತುಕೇ ಸ್ವಧೀಃ ಕಲತ್ರಾದಿಷು ಭೌಮ ಇಜ್ಯಧೀಃ … ಸ ಏವ ಗೋಖರಃ “ಯಾವ ವ್ಯಕ್ತಿಯು ತನ್ನನ್ನು ತನ್ನ ದೇಹದೊಡನೆ ಗುರುತಿಸಿಕೊಳ್ಳುತ್ತಾನೆಯೋ ಮತ್ತು ತನ್ನ ದೇಹ ಜನ್ಮ ತಳೆದ ಭೂಮಿಯೊಡನೆ ಗುರುತಿಸಿಕೊಳ್ಳುತ್ತಾನೆಯೋ ಅವನು ಒಂದು ಕತ್ತೆ ಅಥವಾ ಹಸುವಿಗಿಂತ ಉತ್ತಮನಲ್ಲ.”

ಈ ಮನೋಧರ್ಮ ದಿಂದಲೇ ರಾಷ್ಟ್ರೀಯತೆ ಅಥವಾ ”ಆ ಇಸಂ” ಅಥವಾ ”ಈ ಇಸಂ”ಬರುತ್ತದೆ. ಆದರೆ ಯಾರೊಬ್ಬರೂ, “ಈ ದೇಹ ಅಥವಾ ಈ ನಾಡಿನ ನಿವಾಸಿಯಾಗಿರಲು ಎಷ್ಟು ಕಾಲ ಅವಕಾಶವನ್ನು ನನಗೆ ನೀಡಲಾಗಿದೆ ?” ಎಂದು ಯೋಚಿಸುವುದಿಲ್ಲ. ಇದು ಅಜ್ಞಾನ.

ಆದ್ದರಿಂದ ಶ್ರೀ ಚೈತನ್ಯ ಮಹಾಪ್ರಭುಗಳ ಆಂದೋಲನವು ಪ್ರಾರಂಭವಾಗುವುದು, ನಾವು ಚೈತನ್ಯ ಆತ್ಮರು, ಕೃಷ್ಣನ ಶಾಶ್ವತ ಸೇವಕರು ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಿಂದ.

ಭಗವದ್ಗೀತೆಯಲ್ಲಿ ಕೃಷ್ಣನು ಬೋಧಿಸಿರುವುದು ಇದೇ. ಅಲ್ಲಿ ಪ್ರಭುವು ಹೇಳುತ್ತಾನೆ: ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜಃ ”ನಿನ್ನ ತಥಾಕಥಿತ ಮನುಷ್ಯ ನಿರ್ಮಿತ ಕರ್ತವ್ಯಗಳು ಅಥವಾ ಧರ್ಮಗಳನ್ನು ಪರಿತ್ಯಜಿಸು, ಕೇವಲ ನನಗೆ ಶರಣಾಗು”, ಇದೇ ನಿಜವಾದ ಧರ್ಮ – ದೇವರಿಗೆ ಶರಣಾಗುವುದು.

ದೇವರು ಒಬ್ಬನೇ. ಅವನು ಹಿಂದೂ ಅಲ್ಲ, ಮುಸ್ಲಿಮನೂ ಅಲ್ಲ ಅಥವಾ ಕ್ರಿಶ್ಚಿಯನ್ನನೂ ಅಲ್ಲ. ವೈದಿಕ ಬೋಧನೆಯ ಪ್ರಕಾರ ಏಕಂ ಬ್ರಹ್ಮ ದ್ವಿತೀಯಃ ನಾಸ್ತಿ: “ದೇವರು ಒಬ್ಬನೇ. ಅವನು ಇಬ್ಬರಾಗಿರುವುದು ಸಾಧ್ಯವಿಲ್ಲ.” ಆದ್ದರಿಂದ ನೀವು ಹಿಂದೂವಾಗಿರಿ, ಮುಸ್ಲಿಮನಾಗಿರಿ ಅಥವಾ ಕ್ರಿಶ್ಚಿಯನ್ ಆಗಿರಿ, ದೇವರು ಮಾತ್ರ ಒಬ್ಬನೇ. ಇದನ್ನು ಅರ್ಥಮಾಡಿಕೊಳ್ಳಬೇಕು.

ಕೃಷ್ಣಪ್ರಜ್ಞೆಯು ದೇವರ ವಿಜ್ಞಾನವಾಗಿದೆ. ನೀವು ಯಾರು, ದೇವರು ಎಂದರೆ ಏನು ಮತ್ತು ಧರ್ಮ ಎಂದರೆ ಏನು ಎಂದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅದು ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ. ಅವರು ಸನಾತನ ಗೋಸ್ವಾಮಿಗಳಿಗೆ ತಮ್ಮ ಬೋಧನೆಯನ್ನು ಹೀಗೆ ಪ್ರಾರಂಭಿಸುತ್ತಾರೆ: ಜೀವೇರ ‘ಸ್ವರೂಪ’ ಹಯ ಕೃಷ್ಣೇರ `ನಿತ್ಯದಾಸ :‘, ‘ಪ್ರತಿಯೊಂದು ಜೀವಿಯೂ ದೇವರ ಶಾಶ್ವತ ಸೇವಕ.”

ಇದು ಧರ್ಮ. ಧರ್ಮವೆಂದರೆ ವ್ಯಕ್ತಿಯು ತಾನು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಂದು ಮುದ್ರೆ ಹೊಡೆದುಕೊಳ್ಳುವುದಲ್ಲ. ಇದು ಸರಿಯಲ್ಲ. ಧರ್ಮವೆಂದರೆ ದೇವರು ದೊಡ್ಡವನು, ನಾವು ಅವನ ಸೇವಕರು, ಅವನು ನಮ್ಮನ್ನು ಪಾಲಿಸುತ್ತಾನೆ ಎಂದು ಅರ್ಥಮಾಡಿಕೊಳ್ಳುವುದು. ಇದು ಧರ್ಮ. ಯಾರಾದರೊಬ್ಬರು ಈ ಅಂಶಗಳನ್ನು ಕೇವಲ ತಿಳಿದರೆ ಸಾಕು – ಅಂದರೆ ದೇವರು ದೊಡ್ಡವನು, ನಾವು ಅವನ ಸೇವಕರು, ದೇವರ ಆಜ್ಞೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯ – ಅವರೇ ಧಾರ್ಮಿಕರು.

ಆಧ್ಯಾತ್ಮಿಕ ವೇದಿಕೆಯ ಮೇಲೆ ಏಕತೆಯನ್ನು ಸಾಧಿಸಬಹುದೇ ವಿನಾ ದೈಹಿಕ ವೇದಿಕೆಯ ಮೇಲಲ್ಲ. ವಿಶ್ವಸಂಸ್ಥೆಯು ಜಗತ್ತಿನ ರಾಷ್ಟ್ರಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದೆ. ಆದರೆ ಪ್ರತಿವರ್ಷ ಧ್ವಜಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ತಥಾಕಥಿತ ಏಕತೆಯು ಎಂದೂ ಯಶಸ್ವಿಯಾಗುವುದಿಲ್ಲ. ರಾಷ್ಟ್ರಗಳ ನಡುವೆ ಏಕತೆಯನ್ನು ಸಾಧಿಸಲು ವಿಶ್ವಸಂಸ್ಥೆಯನ್ನು ಅನೇಕ ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಅದು ಏನು ಮಾಡಿದೆ? ಅದು ಏನೂ ಮಾಡಿಲ್ಲ. ಏನನ್ನು ಮಾಡಲೂ ಅದಕ್ಕೆ ಸಾಧ್ಯವಿಲ್ಲ.

ನೀವು ಒಗ್ಗಟ್ಟಿನಿಂದಿರಬೇಕಾದರೆ, ಆಧ್ಯಾತ್ಮಿಕ ವೇದಿಕೆಯಲ್ಲಿ ಒಗ್ಗಟ್ಟಿನಿಂದಿರಬೇಕು. ಈ ಆಧ್ಯಾತ್ಮಿಕ ವೇದಿಕೆ ಎಂದರೆ ಏನು? ಆಧ್ಯಾತ್ಮಿಕ ವೇದಿಕೆ ಎಂದರೆ, ದೇವರು ದೊಡ್ಡವನು, ನಾವು ಅವನ ಸೇವಕರು ಮತ್ತು ದೇವರು ನಮ್ಮನ್ನು ಪಾಲಿಸುತ್ತಿದ್ದಾನೆ ಎನ್ನುವುದನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳುವುದು. ಎಲ್ಲೆಲ್ಲೂ ಇರುವ ಸಮಸ್ತ ಸ್ವತ್ತೂ ದೇವರಿಗೆ ಸೇರಿದ್ದು, ನಮ್ಮ ತಂದೆಯ ಸ್ವತ್ತನ್ನು ನಮಗೆ ಬೇಕಾದಷ್ಟೇ ಬಳಸುವಂತೆ, ನಾವು ನಮಗೆ ಬೇಕಾದುದಕ್ಕಿಂತ ಹೆಚ್ಚಿನದನ್ನು ತೆಗೆದುಕೊಂಡು ಸಂಗ್ರಹಿಸಿ ಇಡಬಾರದು.

ಹಕ್ಕಿಗಳು ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಇಲ್ಲಿ ನೀವು ಒಂದು ಚೀಲದಷ್ಟು ಅಕ್ಕಿಯನ್ನು ಇಟ್ಟರೆ ಹಕ್ಕಿಗಳು ಬಂದು ಕೆಲವೇ ಕಾಳುಗಳನ್ನು ತಿಂದು ಹಾರಿಹೋಗುತ್ತವೆ. ಆದರೆ ನೀವು ಒಂದು ಸಾವಿರ ಚೀಲಗಳಷ್ಟು ಗೋಧಿಯನ್ನು ಇಟ್ಟು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದೆಂದು ಘೋಷಿಸಿದರೆ, ದೊಡ್ಡ ಹೋರಾಟವೇ ನಡೆಯುತ್ತದೆ.

ಪ್ರತಿಯೊಬ್ಬನೂ ತಾನು ಹೊತ್ತು ಒಯ್ಯುವಷ್ಟು ಗೋಧಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಇದು ಮಾನವನ ನಾಗರಿಕತೆ: “ಓಹ್, ಇಲ್ಲಿ ಎಷ್ಟೊಂದು ಗೋಧಿ ಇದೆ. ನನಗೆ ಸಾಧ್ಯವಾದಷ್ಟು ತೆಗೆದುಕೊಂಡು ಹೋಗಿ ನಾಳೆಗೆ ಅಥವಾ ನಾಡಿದ್ದಿಗೆ ಸಂಗ್ರಹಿಸಿ ಇಡೋಣ. ನನ್ನ ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಸಂಗ್ರಹಿಸಿ ಇಡೋಣ.” (ನಗು)

ಆಧ್ಯಾತ್ಮಿಕ ಪ್ರಜ್ಞೆಯ ಕೊರತೆಯಿಂದಾಗಿ ಈ ಮೂರ್ಖತನದ ನಡವಳಿಕೆ ಮುಂದುವರಿಯುತ್ತಲೇ ಇದೆ. ವೇದಗಳಲ್ಲಿ ಹೇಳಿರುವಂತೆ, ಈಶಾವಾಸ್ಯಮ್ ಇದಂ ಸರ್ವಮ್‌: ” ಪ್ರತಿಯೊಂದು ದೇವರಿಗೆ ಸೇರಿದ್ದು.” ಆಹಾರ ದೇವರಿಗೆ ಸೇರಿದ್ದು, ಗಣಿ ದೇವರಿಗೆ ಸೇರಿದ್ದು, ಸಾಗರ ದೇವರಿಗೆ ಸೇರಿದ್ದು, ಭೂಮಿ ದೇವರಿಗೆ ಸೇರಿದ್ದು, ಗಾಳಿ ದೇವರಿಗೆ ಸೇರಿದ್ದು – ಪ್ರತಿಯೊಂದೂ ದೇವರಿಗೆ ಸೇರಿದ್ದು.

ದೇವರು ನಮ್ಮ ಜೀವನ ಪಾಲನೆಗಾಗಿ ಎಷ್ಟೆಲ್ಲ ಕೊಟ್ಟಿದ್ದಾನಲ್ಲ ಎಂದು ನಾವು ಅವನಿಗೆ ಕೃತಜ್ಞರಾಗಿರಬೇಕು. ನಮಗೆ ಎಷ್ಟು ಬೇಕೋ ಅಷ್ಟನ್ನೇ ತೆಗೆದುಕೊಳ್ಳಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟನ್ನು ಅವನ ಸೇವೆಯಲ್ಲಿ ಬಳಸಬೇಕು. ಇದು ಕೃಷ್ಣಪ್ರಜ್ಞೆ.

ಕೃಷ್ಣಪ್ರಜ್ಞೆಯು ವಾಸ್ತವದಲ್ಲಿ ಪರಿಪೂರ್ಣ ಕಮ್ಯೂನಿಸಮ್, ಕಮ್ಯೂನಿಸ್ಟರು ಒಂದು ರಾಜ್ಯದೊಳಗಿರುವ ಮಾನವ ಜೀವಿಗಳನ್ನು ಕುರಿತು ಆಲೋಚಿಸುತ್ತಾರೆ, ಆದರೆ ಕೃಷ್ಣಪ್ರಜ್ಞಾವಂತ ವ್ಯಕ್ತಿಯು ಎಲ್ಲ ಜೀವಿಗಳನ್ನು ಕುರಿತು ಆಲೋಚಿಸುತ್ತಾನೆ. ಗೃಹಸ್ಥನಾದವನು ತನ್ನ ಭೋಜನವನ್ನು ಸ್ವೀಕರಿಸುವ ಮೊದಲು ಬೀದಿಗೆ ಬಂದು, “ಯಾರಾದರೂ ಹಸಿದವರು ಇದ್ದೀರಾ? ದಯವಿಟ್ಟು ನನ್ನ ಮನೆಗೆ ಬಂದು ಊಟಮಾಡಿ!” ಎಂದು ಕೂಗಬೇಕೆಂದು ಭಾಗವತದಲ್ಲಿ ಹೇಳಲಾಗಿದೆ.

ಅವನ ಮನೆಯಲ್ಲಿ ಒಂದು ಹಲ್ಲಿ ಕೂಡ ಹಸಿದಿರದಂತೆ ಅವನು ನೋಡಿಕೊಳ್ಳಬೇಕು. ಒಂದು ಹಾವು ಕೂಡ ಹಸಿದಿರಬಾರದು. ಇದು ವೈದಿಕ ತತ್ತ್ವ, ದೈವಪ್ರಜ್ಞೆ. ಗೃಹಸ್ಥನು ಹೀಗೆ ಯೋಚಿಸುತ್ತಾನೆ: ”ಹೇಗೋ ಏನೋ ಒಂದು ಜೀವಿಯು ಹಾವಿನ ಜನ್ಮವನ್ನು ಎತ್ತಿದೆ. ಆದ್ದರಿಂದ ನನ್ನ ಮನೆಯಲ್ಲಿ ಅವನು ಏಕೆ ಹಸಿದಿರಬೇಕು? ಅವನಿಗೆ ಸ್ವಲ್ಪ ಆಹಾರ ಕೊಡೋಣ.” ಹಾವುಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಒಂದು ಹಾವು ಕೂಡ ಹಸಿದುಕೊಂಡು ಇರಬಾರದ ಹಾಗೆ ಗೃಹಸ್ಥನು ನೋಡಿಕೊಳ್ಳಬೇಕು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.

ಖಂಡಿತವಾಗಿಯೂ ಇದೇ ಆದರ್ಶ ಕಮ್ಯೂನಿಸಮ್‌ನ ಸಂಪೂರ್ಣ ಆದರ್ಶ ಇದೇ ಆಗಿದೆ. ಮನುಷ್ಯ ಜೀವಿಗಳ ಬಗೆಗೆ ಮಾತ್ರ ರಾಷ್ಟ್ರೀಯ ಮುಖಂಡರು ಕಾಳಜಿ ವಹಿಸಬೇಕು ಎಂದೇನಲ್ಲ. ದೇಶಿಯ ಎಂಬ ಶಬ್ದದ ವ್ಯಾಖ್ಯೆ ಎಂದರೆ, ಒಂದು ನಿರ್ದಿಷ್ಟ ದೇಶದಲ್ಲಿ ಜನ್ಮ ತಳೆದವನು,” ಹಾಗಾದರೆ ಒಂದು ಹಸು ಕೂಡ ದೇಶೀಯವೇ.

ಹಾಗಾದರೆ ಹಸುವನ್ನು ಏಕೆ ವಧಿಸಬೇಕು? ಹಸು ಹಾಲು ಕೊಡುತ್ತದೆ, ಎತ್ತು ನಿಮಗಾಗಿ ಕೆಲಸ ಮಾಡುತ್ತದೆ. ಅಂಥವನ್ನು ನೀವು ವಧಿಸುತ್ತೀರಿ. ಇದೆಂತಹ ತತ್ತ್ವಜ್ಞಾನ? ಕ್ರಿಶ್ಚಿಯನ್ ಧರ್ಮದಲ್ಲಿ “ಕೊಲ್ಲಬೇಡ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಬಹುಪಾಲು ಕಸಾಯಿಖಾನೆಗಳು ಕ್ರಿಶ್ಚಿಯನ್ ರಾಷ್ಟ್ರಗಳಲ್ಲೇ ಇವೆ.

ಇದೆಲ್ಲ ಆಧ್ಯಾತ್ಮಿಕ ಜೀವನವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದರ ಫಲ. ಪ್ರತಿಯೊಂದು ಪ್ರಾಣಿಗೂ ರಕ್ಷಣೆಯನ್ನು ಒದಗಿಸಬೇಕು. ಇದು ವೈದಿಕ ವಿಚಾರ. ಹಾಗೆ ಮಾಡದೆ ಕೇವಲ ಕೊಲ್ಲುವುದರಲ್ಲಿಯೇ ಮಗ್ನರಾದರೆ ನೀವು ಪಾಪ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಈಗ ಸ್ತ್ರೀಯರು ತಮ್ಮ ಮಕ್ಕಳನ್ನೇ ತಾವು, ಗರ್ಭದಲ್ಲಿಯೇ ಕೊಲ್ಲುತ್ತಿದ್ದಾರೆ. ಇದು ನಡೆಯುತ್ತಲೇ ಇದೆ.

ಈ ರೀತಿಯಲ್ಲಿ ನಾವು ಸಂತೋಷವಾಗಿರುವುದು ಸಾಧ್ಯವಿಲ್ಲ. ಇದರಿಂದ ನಾವು ಹೆಚ್ಚು ಹೆಚ್ಚು ಪಾಪ ಕಾರ್ಯಗಳಲ್ಲಿ ತೊಡಗಿಕೊಂಡು ಅದರ ಫಲಗಳಿಗೆ ಭಾಜನರಾಗುತ್ತೇವೆ. ಅನಂತರ ನಾವು ನಿರಂತರವಾಗಿ ಬೇರೆ ಬೇರೆ ದೇಹಗಳಲ್ಲಿ ಜನ್ಮವೆತ್ತುತ್ತಿರಬೇಕಾಗುತ್ತದೆ.

ಆದ್ದರಿಂದ ನಾವು ಈ ಕೃಷ್ಣ ಪ್ರಜ್ಞಾ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಈ ಆಂದೋಲನದ ಪ್ರಯೋಜನವನ್ನು ಪಡೆದು ಜನರು ದೈವ ಪ್ರಜ್ಞೆಯತ್ತ ಜಾಗೃತರಾಗಬಹುದು. ಪಾಪ ಕಾರ್ಯಗಳನ್ನು ನಿಲ್ಲಿಸಬಹುದು. ಪರಿಶುದ್ಧರಾಗಬಹುದು. ಭಗವದ್ಗೀತೆಯಲ್ಲಿ (7.28) ಕೃಷ್ಣನು ಹೇಳುವಂತೆ,

ಯೇಷಾಂ ತ್ವರಿತಗತಂ ಪಾಪಂ

ಜನಾನಾಂ ಪುಣ್ಯಕರ್ಮಣಾಮ್‌

ತೇ ದ್ವಂದ್ವ ಮೋಹನಿರ್ಮುಕ್ತಾ

ಭಜಂತೇ ಮಾಂ ದೃಢವ್ರತಾಃ

“ಯಾರು ಪಾಪ ಜೀವನದಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾನೋ ಅವನು ಭಕ್ತಿಸೇವೆಯಲ್ಲಿ ತೊಡಗಬಹುದು.”

ಅದಕ್ಕಾಗಿಯೇ ನಾವು ನಾಲ್ಕು ನಿಯಂತ್ರಕ ತತ್ತ್ವಗಳನ್ನು ನಿಗದಿಮಾಡಿದ್ದೇವೆ; ನಿಷಿದ್ಧ ಕಾಮವಿಲ್ಲ, ಮಾಂಸಭಕ್ಷಣೆ ಇಲ್ಲ, ಜೂಜಾಟವಿಲ್ಲ, ಮಾದಕವಸ್ತುಗಳ ಸೇವನೆ ಇಲ್ಲ. ವಿಶೇಷವಾಗಿ ನಿಮ್ಮ ದೇಶವಾದ ಅಮೆರಿಕದಲ್ಲಿ ಎಷ್ಟೊಂದು ಸೊಗಸಾದ ತರಕಾರಿಗಳಿವೆ, ಹಣ್ಣುಗಳಿವೆ, ಧಾನ್ಯಗಳಿವೆ ಮತ್ತು ಹಾಲಿನ ಉತ್ಪನ್ನಗಳಿವೆ. ಆದ್ದರಿಂದ ನೀವು ಹಸುವನ್ನು ಏಕೆ ಕೊಲ್ಲಬೇಕು? ನೀವು ನಿಮ್ಮ ಔತಣಕೂಟದಲ್ಲಿ ಪ್ರಸಾದವನ್ನು ಸೇವಿಸಿದ್ದೀರಿ. ಅವು ಎಷ್ಟು ರುಚಿಕರವಾಗಿವೆ! ಆದ್ದರಿಂದ ಹಸುವನ್ನು ಏಕೆ ಕೊಲ್ಲಬೇಕು?

ತರಕಾರಿಗಳಿಗೂ ಜೀವವಿದೆ ಎಂದು ಕೆಲವು ಸಲ ಜನರು ವಾದ ಮಾಡುತ್ತಾರೆ. ಹೌದು, ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿಯೇ ನಾವು ಪ್ರಸಾದವನ್ನು ಮಾತ್ರ ಸೇವಿಸುತ್ತೇವೆ. ಪ್ರಸಾದವೆಂದರೆ ನಾವು ಸೇವಿಸುವ ಮೊದಲು ಕೃಷ್ಣನಿಗೆ ಅರ್ಪಿಸಿದ ಆಹಾರ. ಕೃಷ್ಣನು ಏನನ್ನು ಉಳಿಸುತ್ತಾನೋ ಅದನ್ನು ನಾವು ತೆಗೆದುಕೊಳ್ಳುತ್ತೇವೆ.

ಇದು ನಮ್ಮ ವಿಧಾನ. ನಾವು ನೇರವಾಗಿ ಸೇವಿಸುವುದಿಲ್ಲ. ಆದ್ದರಿಂದ ತರಕಾರಿಗಳಿಗೆ ಜೀವವಿದ್ದರೂ, ಕೃಷ್ಣನು ಹೇಳುತ್ತಾನೆ – ಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ತ್ಯಾ ಪ್ರಯಚ್ಛತಿ ತದ್‌ ಅಹಮ್‌… ಅಶ್ನಾಮಿ: “ನೀವು ಪ್ರೀತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ನೀರನ್ನು ಅರ್ಪಿಸಿದರೂ ನಾನು ಅದನ್ನು ಸ್ವೀಕರಿಸುತ್ತೇನೆ.” ಆದ್ದರಿಂದ ತರಕಾರಿಗಳನ್ನು ತಿನ್ನುವುದರಿಂದ ಪಾಪವಿಲ್ಲ.

ಕೃಷ್ಣನನ್ನು ನಮ್ಮ ಅತಿಥಿಯಾಗಿ ನಾವು ಆಹ್ವಾನಿಸಿದ್ದೇವೆ. ಅವನು ಇಲ್ಲಿಗೆ ಬರಲು ಸಮ್ಮತಿಸಿದ್ದಾನೆ. ಆದ್ದರಿಂದ ನಾವು ಅವನ ಬಯಸುವ ಆಹಾರವನ್ನು ಸಮರ್ಪಿಸಬೇಕು. ಇದೇ ನಿಜವಾದ ಶಿಷ್ಟಾಚಾರ. ಗೌರವಾನ್ವಿತ ಅತಿಥಿಗಳು ಯಾರಾದರೂ ನಿಮ್ಮ ಮನೆಗೆ ಬಂದರೆ, “ತಾವು ಏನು ಭೋಜನ ಮಾಡಲು ಬಯಸುತ್ತೀರಿ ಸ್ವಾಮಿ? ಎಂದು ನೀವು ಕೇಳಬೇಕು. ಇದೇ ಅತಿಥಿಯನ್ನು ಸತ್ಕರಿಸುವ ನಿಜವಾದ ರೀತಿ.

ಆದ್ದರಿಂದ ಕೃಷ್ಣ ಹೇಳುತ್ತಾನೆ: “ ಈ ಕೆಳಕಂಡ ಪದಾರ್ಥಗಳಲ್ಲಿ ಮಾಡಿದ ಆಹಾರವನ್ನು ನನಗೆ ಕೊಡಿ. ಹಣ್ಣುಗಳು, ತರಕಾರಿಗಳು, ಕಾಳುಗಳು ಮತ್ತು ಹಾಲಿನ ಉತ್ಪನ್ನಗಳು. ಇದನ್ನು ಭಕ್ತಿಯಿಂದ ಅರ್ಪಸಿ, ನಿರ್ಲಕ್ಷ್ಯದಿಂದಲ್ಲ. ಆಗ ನಾನು ಅದನ್ನು ಸ್ವೀಕರಿಸುತ್ತೇನೆ.” ಆದ್ದರಿಂದ ನಾವು ಈ ಪದಾರ್ಥಗಳನ್ನು ಬಳಸಿ ನೂರಾರು ಆಹಾರ ವಸ್ತುಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸುತ್ತೇವೆ.

ನೀವು ಕೂಡ ಅದನ್ನು ಮಾಡಬಹುದು. ಅವೆಲ್ಲ ರುಚಿಕರವಾಗಿವೆ, ಜೀವಸತ್ತ್ವಗಳಿಂದ ಸಮೃದ್ಧವಾಗಿವೆ. ಹೀಗಿರುವಾಗ ನೀವು ಏಕೆ ಅನಗತ್ಯವಾಗಿ ಬಡಪಾಯಿ ಪ್ರಾಣಿಗಳನ್ನು ಕೊಂದು ದುರಾಚಾರಿಗಳಾಗಬೇಕು, ಪಾಪಿಗಳಾಗಬೇಕು?

ಇದು ಕೃಷ್ಣ ಚೈತನ್ಯ ಮಹಾಪ್ರಭುಗಳ ಬೋಧನೆ: ಶಾಂತಿಯಿಂದ ಬಾಳಿ, ಸಜ್ಜನರಾಗಿ, ದೇವರನ್ನು ಅರಿತುಕೊಳ್ಳಿ, ಈ ಲೋಕದಲ್ಲಿಯೂ ಮುಂದಿನ ಲೋಕದಲ್ಲಿಯೂ ನಿಮ್ಮ ಜೀವನ ಸುಖವಾಗಿರುವಂತೆ ಮಾಡಿ. ಅವರು ಈ ಬೋಧನೆಯು ಜಗತ್ತಿನ ಪ್ರತಿಯೊಂದು ಹಳ್ಳಿಗೂ ಪಸರಿಸಬೇಕೆಂದು ಬಯಸಿದ್ದರು.

ಹೀಗೆ ಹರೇಕೃಷ್ಣ ಆಂದೋಲನವು ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದೆ. ಈ ಕೃಷ್ಣ ಪ್ರಜ್ಞೆ ಎಷ್ಟು ಲಾಭದಾಯಕ ಎಂದು ನೀವೇ ನೋಡಬಹುದು. ದಯವಿಟ್ಟು ಕುರುಡಾಗಿ ನೋಡಬೇಡಿ. ಕೊಂಚ ಉದಾರವಾಗಿ, ಯಾವುದೇ ರೀತಿಯ – ಏನಂತಾರೆ ಅದಕ್ಕೆ? – ಕುತರ್ಕಗಳಿಲ್ಲದೆ ಇದನ್ನು ಪರಿಗಣಿಸಲು ಪ್ರಯತ್ನಿಸಿ.

ಯಾವುದೇ ರೀತಿಯ ಪಕ್ಷಪಾತ ಅಥವಾ ಪೂರ್ವಗ್ರಹಗಳಿಲ್ಲದೆ ನೋಡಿ. ಪೂರ್ವಗ್ರಹದಿಂದ ದಾರಿತಪ್ಪಬೇಡಿ. ಶ್ರೀ ಚೈತನ್ಯ ಮಹಾಪ್ರಭುಗಳು ತತ್ತ್ವಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಸಂತೋಷವಾಗಿರಿ.

ನಿಮಗೆ ಅಮಿತ ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi