ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನ, ಸೊಂಡೇಕೊಪ್ಪ

ನೆಲಮಂಗಲದಿಂದ ತಾವರೆಕೆರೆ ಮಾರ್ಗವಾಗಿ ಮಾಗಡಿಗೆ ಹೋಗುವ ರಸ್ತೆಯಲ್ಲಿ ಸುಮಾರು ಆರು ಮೈಲಿಗಳ ದೂರದಲ್ಲಿ ಸಿಕ್ಕುವ ಒಂದು ಸಣ್ಣ ಹಳ್ಳಿ ಸೊಂಡೇಕೊಪ್ಪ. ಇಲ್ಲಿಯೇ ಇರುವುದು ಶ್ರೀ ಚೆನ್ನಕೇಶವನ ದಿವ್ಯ ಸನ್ನಿಧಿ. ಈ ದೇವಸ್ಥಾನವು ಸುಮಾರು ಮೂರು ಎಕರೆಗಳಷ್ಟು ಜಾಗದಲ್ಲಿ ಹರಡಿಕೊಂಡಿದೆ. ದೇವಸ್ಥಾನದ ಬಾಗಿಲಲ್ಲಿ ಶ್ರೀ ವೀರಾಂಜನೆಯ ಸ್ವಾಮಿಯನ್ನು ಕಾಣಬಹುದು. ಇಲ್ಲಿನ ಅಂಗಳದ ಮಧ್ಯದಲ್ಲಿ ಸುಮಾರು 25 ಅಡಿ ಎತ್ತರದ ಕಲ್ಲಿನ ಧ್ವಜಸ್ತಂಭವಿದೆ. ಧ್ವಜಸ್ತಂಭದ ಬಲಗಡೆಯಲ್ಲಿ ಒಂದು ದೊಡ್ಡ ಕಲ್ಯಾಣಿ. ಎಡಗಡೆಯಲ್ಲಿ ಶ್ರೀ ಚೆನ್ನಕೇಶವ ದೇವಾಲಯ. ಅದರ ಹಿಂಭಾಗದಲ್ಲಿ ಮತ್ತು ಪಕ್ಕಕ್ಕೆ ಒಂದು ಹೂತೋಟ. ತೋಟದಲ್ಲಿ ಅಶ್ವತ್ಥಕಟ್ಟೆ, ನಾಗರಮಂಟಪಗಳು, ತುಳಸೀಕಟ್ಟೆ, ತೋಟದ ಪಕ್ಕಕ್ಕೆ, ಧ್ವಜಸ್ತಂಭದ ಎದುರಿಗೆ ಒಂದು ವಿಶಾಲವಾದ ಕಲ್ಯಾಣ ಮಂಟಪ.

ಸೊಂಡೇಕೊಪ್ಪದಲ್ಲಿ ದೇವಸ್ಥಾನದ ಕಟ್ಟಡಕ್ಕಾಗಿ ಅಗೆಯುವ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ, ಗಡಾರಿಯಿಂದ ಅಗೆಯುತ್ತಿದ್ದ ಕೆಲಸಗಾರನಿಗೆ ಠಣ್‌ ಎಂಬ ಶಬ್ದ ಕೇಳಿಬಂದಿತು. ಅವನು ಎಷ್ಟು ಬಾರಿ ಗಡಾರಿಯಿಂದ ಅಗೆದರೂ ಅದೇ ರೀತಿಯ ಶಬ್ದ ಕೇಳಿಬಂತು. ಅನಂತರ ಆ ಕೆಲಸದವನು ಶಬ್ದ ಬರುತ್ತಿದ್ದ ಜಾಗದಲ್ಲಿದ್ದ ಮಣ್ಣನ್ನು ತೆಗೆಯಲು, ಕಲ್ಲಿನ ಹಲಗೆಯಿಂದ ಮುಚ್ಚಿದ್ದ ಒಂದು ತೊಟ್ಟಿ ಗೋಚರಿಸಿತು. ಅವನು ಆ ಕಲ್ಲಿನ ಹಲಗೆಯನ್ನು ತೆಗೆದು ನೋಡಿದಾಗ, ಆ ತೊಟ್ಟಿಯಲ್ಲಿ ರಾಧಾರುಕ್ಮಿಣಿಯರ ಸಮೇತ ಶ್ರೀ ಚೆನ್ನಿಗರಾಯಸ್ವಾಮಿಯ ಉತ್ಸವ ಮೂರ್ತಿಗಳು ದೊರೆತವು.

ಸೊಂಡೇಕೊಪ್ಪದ ಚೆನ್ನಕೇಶವ ಸ್ವಾಮಿಯ ಪ್ರೀತ್ಯರ್ಥ ನಡೆಯುವ ಕೇಶವ ನವರಾತ್ರಿ ಮತ್ತು ತೆಪ್ಪೋತ್ಸವಗಳು ಬಲು ವೈಭವಯುತವೂ, ಆಕರ್ಷಕವೂ ಆಗಿರುತ್ತವೆ. ಕೇಶವ ನವರಾತ್ರಿಯಂದು ಗ್ರಾಮದುದ್ದಕ್ಕೂ ದೇವರ ಮೆರವಣಿಗೆ, ಹವನ, ಹೋಮ, ಭಜನೆ, ಮಹಾಭಾರತ ವಾಚನ ಕಾರ್ಯಕ್ರಮ, ಮಹಾಮಂಗಳಾರತಿ ಮತ್ತು ಸಂತರ್ಪಣೆ. ಫಾಲ್ಗುಣ ದ್ವಾದಶಿಗೆ ಎರಡು ಮೂರು ದಿನ ಮುಂಚೆ ತೆಪ್ಪೋತ್ಸವದ ಸಿದ್ಧತೆ ನಡೆಯುತ್ತದೆ. ತೆಪ್ಪೋತ್ಸವದ ದಿನ, ತೆಪ್ಪವನ್ನು, ಮಾವಿನ ಸೊಪ್ಪು, ವಿವಿಧ ಪತ್ರ ಪುಷ್ಪ ಮತ್ತು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿ ನೀರಿನಲ್ಲಿ ನಿಲ್ಲಿಸಲಾಗುತ್ತದೆ. ಅನಂತರ ಚೆನ್ನಕೇಶವಸ್ವಾಮಿ ಮತ್ತು ರಾಧಾ-ರುಕ್ಮಿಣಿಯರ ಉತ್ಸವಮೂರ್ತಿಗಳನ್ನು ಹೂ ಮತ್ತು ವಸ್ತ್ರಗಳಿಂದಲಂಕರಿಸಿ, ಭಜನೆ ಮತ್ತು ವಾದ್ಯಗೋಷ್ಠಿ ಸಮೇತ ತೆಪ್ಪದಲ್ಲಿರಿಸಲಾಗುತ್ತದೆ. ಇದಾದನಂತರ, ಮೊದಲು ದೇವರಿಗೆ ಮಂಗಳಾರತಿ ಮಾಡುತ್ತಾರೆ ಮತ್ತು ಆಮೇಲೆ, ತೆಪ್ಪವನ್ನು ಕಲ್ಯಾಣಿಯ ಸುತ್ತಲೂ ತೆಗೆದುಕೊಂಡು ಹೋಗಲಾಗುತ್ತದೆ.

ಶ್ರೀ ಚೆನ್ನಕೇಶವನ ದಿವ್ಯಸನ್ನಿಯಲ್ಲಿ ವಿಜೃಂಭಿಸುವ ಮತ್ತೊಂದು ಹಬ್ಬ, ದೇವರ ಪ್ರತಿಷ್ಠೆಯಾದ ವಾರ್ಷಿಕೋತ್ಸವ. ಪ್ರತಿವರ್ಷ ಆಷಾಢ ಬಹುಳ ಪಂಚಮಿಯ ದಿವಸ, ರಾಧಾರುಕ್ಮಿಣಿಯರ ಸಮೇತ ಶ್ರೀ ಚೆನ್ನಕೇಶವಸ್ವಾಮಿಯ ಪ್ರತಿಷ್ಠಾಪನಾರ್ಥ ದಿನ ನಡೆಯುವ ವಾರ್ಷಿಕೋತ್ಸವವು ವೈಭವಯುತವಾಗಿರುತ್ತದೆ. ಅದಕ್ಕೆ ಎರಡು ಮೂರು ದಿನ ಮೊದಲೇ ಎಲ್ಲ ಸಿದ್ಧತೆಗಳೂ ನಡೆದಿರುತ್ತವೆ. ಪಂಚಮಿಯ ದಿವಸ ಬೆಳಗ್ಗೆ ಮಂಗಳ ವಾದ್ಯಗಳ ಸಮೇತ ದೇವರ ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭವಾಗಿ, ಗ್ರಾಮದುದ್ದಕ್ಕೂ ಬಂದು, ಮತ್ತೆ ದೇವಸ್ಥಾನದ ಆವರಣಕ್ಕೆ ಮರಳುತ್ತದೆ. ಅನಂತರ ಮಧ್ಯಾಹ್ನದವರೆಗೆ ಹವನ ಹೋಮಾದಿಗಳು ನಡೆಯುತ್ತವೆ. ಅನಂತರ ಮಹಾಭಾರತವಾಚನ, ಭಜನೆ ಕಾರ್ಯಕ್ರಮ ಜರುಗುತ್ತವೆ. ಆಮೇಲೆ ಮಹಾಮಂಗಳಾರತಿ ಮತ್ತು ಸಂತರ್ಪಣೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi