ಶ್ರೀ ಗೋಪಾಲ ಭಟ್ಟ ಗೋಸ್ವಾಮಿ

1510ರಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದಾಗ ಮಳೆಗಾಲದ ನಾಲ್ಕು ತಿಂಗಳ ಕಾಲ ಪ್ರಭುಗಳು ತಂಗುವ ವ್ಯವಸ್ಥೆಯ ಭಾಗ್ಯವು ವೆಂಕಟಭಟ್ಟರ ಕುಟುಂಬಕ್ಕೆ ಒದಗಿತು. ವೆಂಕಟಭಟ್ಟರ ಏಳುವರ್ಷದ ಮಗನಾದ ಗೋಪಾಲ ಶ್ರೀ ಚೈತನ್ಯರ ಸೇವೆಯನ್ನು ನಿರಂತರವಾಗಿ ಮಾಡಿ ಅವರಲ್ಲಿ ಗಾಢ ಭಕ್ತಿಪ್ರೇಮವನ್ನು ಬೆಳೆಸಿಕೊಂಡನು.

ಶ್ರೀ ಚೈತನ್ಯರು ಹೊರಡುವ ಸಮಯದಲ್ಲಿ ವೆಂಕಟಭಟ್ಟರು ಮೂರ್ಛಿತರಾದರು ಮತ್ತು ಗೋಪಾಲ ಭಟ್ಟನ ಕಣ್ಣುಗಳು ಪ್ರೇಮದ ಕಣ್ಣೀರಿನಿಂದ ತುಂಬಿದವು. ಗೋಪಾಲ ಭಟ್ಟನಿಗಾಗಿ ಶ್ರೀ ಚೈತನ್ಯರು ಇನ್ನೂ ಸ್ವಲ್ಪ ಕಾಲ ಅಲ್ಲೇ ಉಳಿಯಲು ಒಪ್ಪಿದರು.

ಆ ಸಮಯದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನಾಗಿ ಕಾಣಿಸಿಕೊಂಡರು. ಗೋಪಾಲನು ಶ್ರೀ ಚೈತನ್ಯರ ಆಂದೋಳನದ ಎರಡು ಅಮೂಲ್ಯ ರತ್ನ ಸ್ವರೂಪಿ ನಾಯಕರಾದ ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿಯವರನ್ನು ಒಂದು ದಿನ ಬೃಂದಾವನದಲ್ಲಿ ಭೇಟಿಯಾಗುತ್ತಾನೆಂದು ಭರವಸೆ ನೀಡಿದರು.

ತನ್ಮಯಾವಸ್ಥೆಯಿಂದ ಗೋಪಾಲಭಟ್ಟ ಎದ್ದು ತತ್‌ಕ್ಷಣವೇ ಬೃಂದಾವನಕ್ಕೆ ಹೋಗಲು ಬಯಸಿದನು. ಶ್ರೀ ಚೈತನ್ಯರು ಅವನಿಗೆ ಅಲ್ಲಿಯೇ ಇದ್ದು ತಂದೆ ತಾಯಿಯರ ಸೇವೆ ಮಾಡಬೇಕೆಂದು ಆದೇಶಿಸಿದರು.

ಗೋಪಾಲ ಭಟ್ಟನು ಶ್ರೀ ಚೈತನ್ಯರ ಪರಮ ಭಕ್ತ, ತನ್ನ ಚಿಕ್ಕಪ್ಪ ಪ್ರಬೋಧಾನಂದ ಸರಸ್ವತಿಯವರಿಂದ ಸಾಹಿತ್ಯ, ಕಾವ್ಯಗಳು ವೇದಾಂತ ಮತ್ತು ಸಂಸ್ಕೃತ ವ್ಯಾಕರಣದ ಅಧ್ಯಯನ ಮಾಡಿದನು.

ತನ್ನ ತಂದೆ ತಾಯಿಯರ ನಿಧನದನಂತರ ಗೋಪಾಲಭಟ್ಟ ಬೃಂದಾವನಕ್ಕೆ ಹೋದನು. ಅಲ್ಲಿ ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿಯರು ಅವನನ್ನು ಪ್ರೀತಿಯಿಂದ ಬರಮಾಡಿಕೊಂಡರು. ಗೋಪಾಲಭಟ್ಟ ಬೃಂದಾವನದಲ್ಲಿದ್ದಾನೆಂದು ತಿಳಿದು ಶ್ರೀ ಚೈತನ್ಯರಿಗೆ ತುಂಬ ಸಂತೋಷವಾಯಿತು.

ಶ್ರೀ ಚೈತನ್ಯರು ತಮ್ಮ ಕೆಲವು ವೈಯಕ್ತಿಕ ವಸ್ತುಗಳನ್ನು ಗೋಪಾಲನಿಗೆ ಕಳುಹಿಸಿದರು. ಗೋಪಾಲ ಭಟ್ಟ ಅದನ್ನು ಜೋಪಾನವಾಗಿಟ್ಟು ಪೂಜಿಸಿದನು. ಅನಂತರ, ರೂಪ ಮತ್ತು ಸನಾತನರಿಗೆ ಗೋಪಾಲಭಟ್ಟನು ಆಧ್ಯಾತ್ಮಿಕ ಗ್ರಂಥಗಳ ಸಂಕಲನಕ್ಕೆ ಸಹಾಯ ಮಾಡಬೇಕೆಂದು ಆದೇಶಿಸಿ ಒಂದು ಪತ್ರವನ್ನು ಕಳುಹಿಸಿದರು.

ಗೋಪಾಲಭಟ್ಟ ಶ್ರೀ ಚೈತನ್ಯರ ಈ ಆದೇಶವನ್ನು ತನ್ನ ಜೀವ ಮತ್ತು ಆತ್ಮವೆಂದು ಸ್ವೀಕರಿಸಿದನು. ತದನಂತರ ಈ ಕೃತಿಗಳನ್ನು ಬಂಗಾಳಕ್ಕೆ ಸಾಗಿಸಲು ತನ್ನ ಶಿಷ್ಯ ಶ್ರೀನಿವಾಸ ಆಚಾರ್ಯನಿಗೆ ಒಪ್ಪಿಸಿದನು.

ಒಮ್ಮೆ ನೇಪಾಳದ ಗಂಡಕಿ ನದಿಯ ಬಳಿ ಗೋಪಾಲ ಭಟ್ಟರಿಗೆ ಹನ್ನೆರಡು ಸಾಲಗ್ರಾಮ ಶಿಲೆಗಳ (ಕಲ್ಲಿನ ರೂಪದ ಪ್ರಭುವಿನ ವಿಶಿಷ್ಟ ವಿಗ್ರಹ) ದೊರಕಿದವು. ಅವರು ನೀರಿನ ಮಡಕೆಯಲ್ಲಿ ನೀರನ್ನು ತುಂಬುತ್ತಿದ್ದಾಗ ಶಿಲೆಗಳು ಮಡಕೆಯನ್ನು ಸೇರಿದವು. ಆ ಶಿಲೆಗಳನ್ನು ಮತ್ತೆ ನದಿಗೆ ಹಿಂತಿರುಗಿಸಿದರು.

ಕೇವಲ ನೀರನ್ನು ತುಂಬಿಸಲು ಹೊರಟಾಗ ಮತ್ತೆ ಅವು ಮಡಕೆಯನ್ನು ಸೇರಿದವು. ಇದನ್ನು ಪ್ರಭುವಿನ ಅನುಗ್ರಹವೆಂದು ಸ್ವೀಕರಿಸಿ ಗೋಪಾಲ ಭಟ್ಟ ಬೃಂದಾವನಕ್ಕೆ ಶಿಲೆಗಳನ್ನು ತರಲು ನಿರ್ಧರಿಸಿದರು.

ಒಮ್ಮೆ ಗೋಪಾಲ ಭಟ್ಟರು ಕೃಷ್ಣನ ವಿಗ್ರಹವನ್ನು ಪೂಜಿಸಲು ಇಚ್ಛಿಸಿದರು. ಮರುದಿನ, ಅವರ ಶಿಲೆಗಳಲ್ಲಿ ಒಂದು ಶಿಲೆಯು ಸುಂದರವಾದ ಕೃಷ್ಣನ ವಿಗ್ರಹವಾಗಿ ಪರಿವರ್ತನೆ ಆದದ್ದನ್ನು ನೋಡಿ ಆಶ್ಚರ್ಯವೂ ಮಹಾನಂದವೂ ಉಂಟಾಯಿತು. ಆ ವಿಗ್ರಹವನ್ನು ಅವರು “ರಾಧಾ ರಮಣ’, ‘ರಾಧೆಗೆ ಆನಂದ ತರುವ ಕೃಷ್ಣ’ ಎಂದು ಹೆಸರಿಟ್ಟರು.

ಅನಂತರ ಅವರು ರಾಧಾ ರಮಣರ ಪೂಜೆಯನ್ನು ಪ್ರಾರಂಭಿಸಿದರು. ಇಂದಿಗೂ ರಾಧಾರಮಣರ ದೇವಾಲಯವು ಬೃಂದಾವನದಲ್ಲಿ ಮುಖ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi