ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ

ಶ್ರೀಕೃಷ್ಣನ ವಿಗ್ರಹವೆಂದರೆ, ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಕಿಶೋರಾವಸ್ಥೆಯಲ್ಲಿರುವ ವೇಣುಗೋಪಾಲಸ್ವಾಮಿ ವಿಗ್ರಹ ಇಲ್ಲವೇ ಶ್ರೀ ರಾಧಾಕೃಷ್ಣ ಜೋಡಿ ವಿಗ್ರಹಗಳು. ಬಾಲ್ಯಾವಸ್ಥೆಯ ಶ್ರೀಕೃಷ್ಣ ವಿಗ್ರಹಗಳು ಸ್ವಲ್ಪ ಅಪರೂಪವೇ. ಅಂಥ ಒಂದು ಸುಂದರ ವಿಗ್ರಹವನ್ನು ಉಡುಪಿಯಲ್ಲಿ ಕಾಣಬಹುದು. ಕಡಗೋಲು ಮತ್ತು ಹಗ್ಗಗಳನ್ನು ಹಿಡಿದು, ನಿಂತಿರುವ ಭಂಗಿಯಲ್ಲಿರುವ ಈ ವಿಗ್ರಹ ಬಹಳ ವಿಭಿನ್ನ ಹಾಗೂ ವಿಶಿಷ್ಟ. ಇಂಥದ್ದೇ ರೂಪದ ವಿಗ್ರಹವಿರುವ ದೇವಾಲಯವೊಂದು ಉಡುಪಿ, ಮಂಗಳೂರುಗಳಿಗೆ ಸ್ವಲ್ಪ ಹತ್ತಿರದಲ್ಲೇ ಇದೆ. ಅದೇ ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ.

ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿದೆ. ಕಾಸರಗೋಡು ಪಟ್ಟಣದಿಂದ ಎಂಟು ಮೈಲಿ ಉತ್ತರಕ್ಕಿರುವ ಕುಂಬಳ ಎಂಬ ಪಟ್ಟಣದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯ ಬಲಕ್ಕಿರುವ ಕುಂಬಳ ಜಂಕ್ಷನ್‌ನಿಂದ ಇನ್ನೂರು ಮೀಟರ್‌ಗಳಾಚೆಗಿದೆ. ದೇವಾಲಯದ ಪ್ರದೇಶಕ್ಕೆ ರಸ್ತೆ ಹಾಗೂ ರೈಲು ಸೌಕರ್ಯಗಳೆರಡೂ ಇವೆ. ಕುಂಬಳ ರೈಲ್ವೇ ನಿಲ್ದಾಣ, ಹತ್ತಿರದ ರೈಲ್ವೇ ನಿಲ್ದಾಣವಾಗಿದೆ. ಮಂಗಳೂರಿನಿಂದ ಈ ಸ್ಥಳ ಸುಮಾರು ಮೂವತ್ತೈದು ಕಿ.ಮೀ. ದೂರದಲ್ಲಿದೆ.

ಕುಂಬಳವನ್ನು ಕಣಿಪುರ ಅಥವಾ ಕಣಿಯೂರ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಕುಂಬಳದ ರಾಜನ ಮೊದಲ ವಾಸಸ್ಥಳ ಇಲ್ಲೇ ಇತ್ತಂತೆ. ಅನಂತರ ಅವನು ಮಾಯಿಪಾಡಿ ಅಥವಾ ಮಾಯಾಪುರಿಗೆ ಅದನ್ನು ಸ್ಥಳಾಂತರಿಸಿದನಂತೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ಕುಂಬಳದಲ್ಲಿ ಕೋಟೆಯ ಅವಶೇಷಗಳಿವೆ. ಕಣಿಪುರ ಎಂಬ ಹೆಸರು, ಕಣ್ವಪುರ ಎಂಬ ಪದದಿಂದ ಬಂದಿದೆ. ಇಲ್ಲಿನ ಸ್ಥಳಪುರಾಣದ ಪ್ರಕಾರ, ಕಣ್ವಮಹರ್ಷಿಗಳು ಇಲ್ಲಿನ ದೇವಾಲಯದಲ್ಲಿ ಶ್ರೀಗೋಪಾಲಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಅವರಿಂದಲೇ ಈ ಸ್ಥಳಕ್ಕೆ ಕಣ್ವಪುರ ಎಂದು ಹೆಸರಾಯಿತಂತೆ. ಅಂತೆಯೇ ಈ ಸ್ಥಳದ ಸುತ್ತಮುತ್ತಲೂ ಕಣ್ವ ಮಹರ್ಷಿಗಳ ಹೆಸರಿನಿಂದುಂಟಾದ ಕೆಲವು ಸ್ಥಳನಾಮಗಳಿವೆ. ಉದಾಹರಣೆಗೆ ಕಣ್ಮೂರು (ಕಣ್ವಪೀಠ), ಮಂಜೇಶ್ವರದ ಬಳಿಯ ಪೇಜಾವರ ಮಠದ ಕಣ್ವತೀರ್ಥ, ಮೊದಲಾದವುಗಳು.

ಕಣ್ವ ಮಹರ್ಷಿಗಳು ಪ್ರತಿಷ್ಠಾಪಿಸಿದ ಶ್ರೀ ಗೋಪಾಲಕೃಷ್ಣನ ಸುಂದರ ವಿಗ್ರಹವನ್ನು ಯಶೋದಾಮಾತೆಯು ಪೂಜಿಸುತ್ತಿದ್ದಳು ಎಂದು ಸ್ಥಳಪುರಾಣ ಹೇಳುತ್ತದೆ. ಹಲವಾರು ಯುಗಗಳಿಂದ ತಮ್ಮ ಕಮಂಡಲುವಿನಲ್ಲಿ ರಕ್ಷಿಸಿಕೊಂಡಿದ್ದ ಮಂತ್ರೋದಕದಿಂದ ಅವರು ಈ ವಿಗ್ರಹಕ್ಕೆ ಅಭಿಷೇಕ ಮಾಡಿದರಂತೆ. ಅಭಿಷೇಕಗೊಂಡ ಆ ಮಂತ್ರೋದಕವು ಒಂದು ಹೊಳೆಯಾಗಿ ಹರಿಯತೊಡಗಿ, ಅನಂತರ ನದಿಯಾಗಿ, ದೇವಾಲಯದಿಂದ ಸ್ವಲ್ಪ ದೂರವಿರುವ ಪಶ್ಚಿಮ ಸಮುದ್ರ (ಅರಬ್ಬೀ ಸಮುದ್ರ) ವನ್ನು ಸೇರತೊಡಗಿತು. ಈ ನದಿಗೆ ಕುಂಭ  ಹೊಳೆ (ಕಮಂಡಲುವಿನಿಂದ ಬಂದ ಹೊಳೆ) ಎಂದು ಹೆಸರಾಗಿ ಮುಂದೆ ಕುಂಭಿನೀ ಎಂದೂ ಆಯಿತು. ಈ ಕುಂಭ ಹೊಳೆಯಿಂದಲೇ ಕುಂಬಳೆ ಅಥವಾ ಕುಂಬಳ ಎಂಬ ಹೆಸರು ಬಂದಿತು.

ಕೇರಳೀಯ ಮಾದರಿಯಲ್ಲಿರುವ ಈ ದೇವಾಲಯವು ಕುಂಬಳ ಪಟ್ಟಣದ ಮಧ್ಯದಲ್ಲಿ ಬೆಟ್ಟವೊಂದರ ಬುಡದಲ್ಲಿದೆ. ಕಪ್ಪು  ಶಿಲೆಯ, ಕೈಗಳಲ್ಲಿ ಬೆಣ್ಣೆಯ ಮುದ್ದೆಯನ್ನು ಹಿಡಿದಿರುವ, ನಿಂತ ಭಂಗಿಯಲ್ಲಿರುವ ಮುದ್ದಾದ ಬಾಲಕೃಷ್ಣನ ಶ್ರೀವಿಗ್ರಹವು ಬಹಳ ಸುಂದರವಾಗಿದೆ. ಶ್ರೀ ಕೃಷ್ಣನು ಬೆಣ್ಣೆಯನ್ನು ಹಿಡಿದಿರುವ ಕಾರಣ, ವಿಗ್ರಹಕ್ಕೆ ನವನೀತ ಮೂರ್ತಿಯೆಂದು ಕರೆಯುತ್ತಾರೆ. ದೇವಾಲಯದ ಎಡದಿಕ್ಕಿನಲ್ಲಿ ಕುಂಭ ಹೊಳೆ ನದಿಯಿದೆ.

ಈ ದೇವಾಲಯಕ್ಕೆ ಹತ್ತಿರವಾದ ಇತರ ಪ್ರಸಿದ್ಧ ದೇವಾಲಯವೆಂದರೆ, ಮದೂರಿನ ಶ್ರೀ ಮದನಂತೇಶ್ವರ ಮತ್ತು ಶ್ರೀ ವಿನಾಯಕರ ದೇವಾಲಯ. ಕುಂಬಳದ ಮಹಾರಾಜ ದಿನವೂ ಪೂಜಿಸುತ್ತಿದ್ದ ವಿಗ್ರಹಗಳು ಇವುಗಳಾಗಿದ್ದರೆ, ಗೋಪಾಲಕೃಷ್ಣ ದೇವಾಲಯದಲ್ಲಿ ಅವನ ಪಟ್ಟಾಭಿಷೇಕ ನಡೆಯುತ್ತಿತ್ತು. ಕುಂಬಳದ ಯುವರಾಜನ ಪಟ್ಟಾಭಿಷೇಕವು ಪೆರ್ದಾಲದ ಶ್ರೀ ಮದುದಾನೇಶ್ವರ ದೇವಾಲಯದಲ್ಲಿ ನಡೆಯುತ್ತಿತ್ತು. ಹೀಗೆ ಈ ದೇವಾಲಯಗಳು ಐತಿಹಾಸಿಕವಾಗಿ ಪ್ರಸಿದ್ಧಿಯುಳ್ಳವಾಗಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi