ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ, ಚಿರಂಜೀವಿ ಮತ್ತು ಸುಲೋಚನರು ಕ್ರಮವಾಗಿ ನಲವತ್ತೊಂದು ಮತ್ತು ನಲವತ್ತೆರಡನೆಯವರು. ಅವರೆಲ್ಲರು ಕರುಣಾಪೂರಿತ ಚೈತನ್ಯ ವೃಕ್ಷದ ಮಹಾನ್ ಶಾಖೆಗಳು. ಅವರು ದೇವೋತ್ತಮನ ಪ್ರೇಮವೆಂಬ ಫಲ-ಪುಷ್ಪಗಳನ್ನು ಎಲ್ಲೆಡೆ ವಿತರಿಸಿದರು.” (ಚೈಚ. ಆದಿಲೀಲಾ, 10:78-79)

ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿರುವ ಈ ಮಾತುಗಳಲ್ಲಿ ʼನರಹರಿ’ ಎಂದು ಉಲ್ಲೇಖಿತರಾಗಿರುವವರೇ ಶ್ರೀ ನರಹರಿ ಸರ್ಕಾರ ಠಾಕುರರು. ಕೃಷ್ಣಪ್ರೇಮದ ಪ್ರಸರಣಕ್ಕೆ ಅವರು ನೀಡಿದ ಕೊಡುಗೆಯನ್ನು ಈ ಶ್ಲೋಕವು ಸಾರುತ್ತದೆ. ನರಹರಿ ಸರ್ಕಾರರು ಶ್ರೀ ಚೈತನ್ಯ ಮಹಾಪ್ರಭುಗಳ ಬಹುತೇಕ ಎಲ್ಲ ಲೀಲೆಗಳಿಗೂ ಸಾಕ್ಷಿಯಾಗಿದ್ದರು.
ಅವರು ವೃಂದಾವನ ಲೀಲೆಯಲ್ಲಿ ಅಪರಿಮಿತ ಸುಗುಣಗಣಿಯಾಗಿದ್ದ ಮಧುಮಾಲತಿ ಎಂಬ ಗೋಪಿಕೆಯಾಗಿದ್ದರೆಂದು ಕವಿ ಕರ್ಣಾಪುರನ ಗೌರಘನೋದ್ದೇಶ ದೀಪಿಕಾದಲ್ಲಿ ಹೇಳಲಾಗಿದೆ.
ಶ್ರೀ ನರಹರಿ ಸರ್ಕಾರರು ಅತಿಶಯ ಭಕ್ತರಾಗಿದ್ದರು. ‘ಚೈತನ್ಯ ಮಂಗಳ’ ಕೃತಿಯ ಕರ್ತೃ ಶ್ರೀ ಲೋಚನದಾಸರು ಅವರ ಶಿಷ್ಯರಾಗಿದ್ದರು. ಅವರು ತಮ್ಮ ಕೃತಿಯಲ್ಲಿ ನರಹರಿ ಸರ್ಕಾರರು ಶ್ರೀ ಚೈತನ್ಯ ಮಹಾಪ್ರಭುಗಳ ಆಪ್ತ ಶಿಷ್ಯರೆಂದು ನಮೂದಿಸಿದ್ದಾರೆ.
ಉತ್ತಮ ಹಾಡುಗಾರರೂ ಕವಿಗಳೂ ಆಗಿದ್ದ ನರಹರಿ ಸರ್ಕಾರರು ಶ್ರೀ ಚೈತನ್ಯ ಮಹಾಪ್ರಭು ಮತ್ತು ಶ್ರೀ ನಿತ್ಯಾನಂದರ ಲೀಲೆಗಳ ಕುರಿತು ಹಲವು ಗೀತೆಗಳನ್ನು ಬರೆದಿದ್ದಾರೆ. ಅಲ್ಲದೆ ‘ಶ್ರೀ ಭಜನಾಮೃತ’ ಎಂಬ ಸಂಸ್ಕೃತ ಕೃತಿಯನ್ನೂ ಅವರು ರಚಿಸಿದ್ದಾರೆ.

ನರಹರಿ ಸರ್ಕಾರರ ಮತ್ತೊಂದು ಹೆಗ್ಗಳಿಕೆಯೆಂದರೆ, ಗೌರ ಸುಂದರರ (ಶ್ರೀ ಚೈತನ್ಯ ಮಹಾಪ್ರಭು) ಎದುರು ಅವರ ವರ್ಣನೆಯ ಗೀತೆಗಳನ್ನು ಹಾಡುವ ಅಧಿಕಾರ ಪಡೆದಿದ್ದುದು.
ಸಾಮಾನ್ಯವಾಗಿ ಶ್ರೀ ಚೈತನ್ಯ ಮಹಾಪಭುಗಳು ಯಾರಾದರೂ ಅವರ ಸ್ತುತಿಯ ಗೀತೆಗಳನ್ನು ಅವರೆದುರು ಹಾಡಿದರೆ, ತಮ್ಮೆರಡೂ ಕಿವಿಗಳನ್ನು ಮುಚ್ಚಿಕೊಂಡು ವಿಷ್ಣು! ವಿಷ್ಣು!’ ಎಂದು ಉದ್ಗರಿಸುತ್ತಿದ್ದರು. ಆದರೆ ನರಹರಿ ಸರ್ಕಾರರಿಗೆ ತಮ್ಮ ಮೃದು ಮಧುರ ಕಂಠದಿಂದ ಅಂತಹ ಗೀತೆಗಳನ್ನು ಹಾಡಲು ಅವರು ಅವಕಾಶವಿತ್ತಿದ್ದರು. ಮಹಾಪ್ರಭುಗಳಿಗೆ ಸ್ತುತಿ ಸಂಗೀತ ಸೇವೆ ಅರ್ಪಿಸುವ ಭಾಗ್ಯ ಅವರದಾಗಿತ್ತು.
ಕೇಶವ ಮಾಸದ ಕೃಷ್ಣಪಕ್ಷ ಏಕಾದಶಿಯಂದು ನರಹರಿ ಸರ್ಕಾರ ಠಾಕುರರ ತಿರೋಭಾವ.






Leave a Reply