ನೆಲೆ – ಹಿನ್ನೆಲೆ
– ಶ್ರೀ ರಾಮಪ್ರಸಾದ್
ಮಂಗಳಮಯ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರ ಮೂರುತಿ ಪುರಂದರ ವಿಠಲನ
ಕಂಗಳಿಂದಲಿ ಕಂಡ ಹಿಂಗಿತು ಭವಭಯ !

ನೀವು ಹಂಪೆಗೆ ಹೋಗಿದ್ದಿರಾದರೆ, ಅಲ್ಲಿರುವ ಎರಡು ಮುಖ್ಯವಾದ ಗುಡಿಗಳನ್ನು ನೋಡಿಯೇ ಇರುತ್ತೀರಿ. ಒಂದು ಪಂಪಾವತಿ ವಿರೂಪಾಕ್ಷ ಶಿವನ ರೂಪವಾದರೆ, ಮತ್ತೊಂದು, ಊರಿನ ಮತ್ತೊಂದು ತುದಿಯಲ್ಲಿರುವ ವಿಜಯ ವಿಟ್ಠಲನ ಗುಡಿ. ಪುರಂದರದಾಸರು ತುಂಗಭದ್ರಾ ತೀರದಲ್ಲಿ ಮೆರೆಯುವ ಶೃಂಗಾರಮೂರುತಿಯೆಂದು ಹಾಡಿ ಹೊಗಳುತ್ತಿರುವುದು ಈ ವಿಜಯವಿಠಲನನ್ನೇ.
ಆದರೆ, ಇಂದು ನೀವು ವಿಜಯ ವಿಟ್ಠಲನ ಗುಡಿಯಲ್ಲಿ ನೋಡಿದರೆ, ಮೂಲ ಮೂರ್ತಿಯೇ ಇಲ್ಲ. ಕೇವಲ ಹೊರಗಿನ ಗೋಪುರದ ಮೇಲೆ ವಿಟ್ಠಲ ರುಕುಮಾಯಿಯರನ್ನು ನೋಡಿ ಮರಳಬೇಕಷ್ಟೆ. ಹಾಗಿದ್ದರೆ, ಇಲ್ಲಿ ಗರ್ಭಗುಡಿಯಲ್ಲಿದ್ದ ವಿಟ್ಠಲ ಏನಾದ? ಹಂಪೆಯನ್ನು ಆಕ್ರಮಣಕಾರರು ಹಾಳುಗೆಡವಿದಾಗ ಇಲ್ಲಿಯ ಮೂರ್ತಿ ಮಾಯವಾಯಿತೇ?
ಇಂದು ವಿಟ್ಠಲನ ಕ್ಷೇತ್ರವಾಗಿ ಪ್ರಸಿದ್ಧವಾಗಿರುವುದು ಪಂಢರಪುರ. ಮಹಾರಾಷ್ಟ್ರದಲ್ಲಿ ಇಂದು ಎಲ್ಲಕ್ಕಿಂತ ಹೆಚ್ಚು ಭಕ್ತರು ನಡೆದುಕೊಳ್ಳುವ ಕ್ಷೇತ್ರವೆಂದರೆ ಪಂಡರಪುರವೇ. ಇಲ್ಲಿಗೆ ನೆರೆಯ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳಿಂದ ಬರುವ ಭಕ್ತರ ಸಂಖ್ಯೆಯೂ ಗಣನೀಯವಾಗಿದೆ. ಭೀಮಾ ನದಿಯ ಬಲ ದಡದಲ್ಲಿರುವ ಸೋಲಾಪುರ ಜಿಲ್ಲೆಯ ಪಂಡರಾಪುರ, ಈಗಿನ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಬಹಳ ಸಮೀಪದಲ್ಲಿದೆ.
ಈ ಸ್ಥಳದಲ್ಲಿ ಭೀಮಾನದಿಯು ಅರ್ಧಚಂದ್ರದ ಆಕೃತಿಯಲ್ಲಿ ಹರಿಯುವುದರಿಂದ ಭೀಮೆಗೆ ಚಂದ್ರಭಾಗಾ ಎಂದೂ ಹೆಸರು ಬಂದಿದೆ. ಕನ್ನಡನಾಡಿನ ಹರಿದಾಸರು ಕೂಡ ಕೆಲವು ರಚನೆಗಳಲ್ಲಿ ಪಂಢರಪುರದ ವಿಟ್ಠಲನನ್ನು ಹೆಸರಿಸಿದ್ದಾರೆ. ವಿಟ್ಠಲನಿಗೆ ವಿಠೋಬ, ಪಾಂಡುರಂಗ ಎಂಬ ಹೆಸರುಗಳೂ ಇವೆ. ವಿಠೋಬಾ ಎಂದರೆ ವಿಟ್ಠಲ ಬಾಬಾ- ಎಂದರೆ ತಂದೆ ವಿಟ್ಠಲ ಎನ್ನುವುದರ ಚಿಕ್ಕ ರೂಪವೆಂದು ಮರಾಠಿ ಮಾತನಾಡುವವರು ಹೇಳುವ ಮಾತು.
ಕೆಲವು ದಂತಕಥೆಗಳ ಪ್ರಕಾರ, ಈಗ ಪಂಢರಪುರದಲ್ಲಿರುವ ವಿಠೋಬನೇ ಒಂದು ಕಾಲದಲ್ಲಿ ಈ ಗುಡಿಯಲ್ಲಿದ್ದ ಹಂಪೆಯ ವಿಜಯವಿಟ್ಠಲ. ವಿಜಯನಗರ ಸಾಮ್ರಾಜ್ಯ 1565ರಲ್ಲಿ ಕೊನೆಗೊಂಡಾಗ, ಇಲ್ಲಿಂದ ವಿಟ್ಠಲಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಢರಪುರದಲ್ಲಿ ಪ್ರತಿಷ್ಠಾಪಿಸಲಾಯಿತು.
ಆದರೆ, ಅದಕ್ಕೂ ಮೊದಲಿನಿಂದಲೇ ಪಂಢರಪುರವು ವಿಟ್ಠಲನು ನೆಲೆಸಿರುವ ಯಾತ್ರಾಸ್ಥಳವೆಂದೇ ಹೆಸರಾಗಿತ್ತು ಎನ್ನುವುದಕ್ಕೆ ಹಲವು ಆಧಾರಗಳಿವೆ. ಇದೊಂದು ವಿರೋಧಾಭಾಸದಂತೆ ಕಾಣುತ್ತೆ ಅಲ್ಲವೇ? ಇದರ ರಹಸ್ಯ ತಿಳಿಯುವ ಮೊದಲು ಸ್ವಲ್ಪ ವಿಟ್ಠಲನ ಹಿನ್ನೆಲೆ ತಿಳಿಯೋಣ.
ವಿಟ್ಠಲನ ಹಿನ್ನೆಲೆ, ಮತ್ತು ಕನ್ನಡನಾಡಿನ ಜೊತೆ ವಿಟ್ಠಲನ ಸಂಬಂಧ:
ಪಂಢರಪುರವನ್ನು ಹಿಂದಿನ ಶಾಸನ, ದಾಖಲೆಗಳಲ್ಲಿ ಪಂಢರಿಗೆ, ಪ೦ಡರಂಗೆ, ಪಂಡರಗೆ, ಪಾಂಡುರಂಗ ಕ್ಷೇತ್ರ ಎನ್ನುವ ಬೇರೆ ಬೇರೆ ಹೆಸರಲ್ಲಿ ಕರೆಯಲಾಗಿದೆ. ಪಂಡರಗೆ ಎನ್ನುವ ಹೆಸರೂ ಕೂಡ ಅಚ್ಚ ಕನ್ನಡದ್ದೇ. ಇದು ಕನ್ನಡದ ಪಂದರ (ಎಂದರೆ ಹಂದರ) ಎನ್ನುವ ಪದದಿಂದ ಬಂದಿದೆ ಎಂದು ಭಾಷಾ ವಿಜ್ಞಾನಿಗಳ ಅಭಿಪ್ರಾಯ.
ಇಲ್ಲಿ ದೊರೆತ ಒಂದು ಶಾಸನದಲ್ಲಿ ಈ ಊರಿನ ಸುತ್ತಮುತ್ತಲೂ ಹಂದರಗಳ ಮೇಲೆ ದ್ರಾಕ್ಷಿಬಳ್ಳಿಗಳನ್ನು ಬೆಳೆಸಿರುವ ವಿಷಯವಿದೆಯಂತೆ. ಆದ್ದರಿಂದಲೇ ಈ ಊರಿಗೆ ಮೂಲದಲ್ಲಿ ಪಂದರಿಗೆ ಎಂದು ಹೆಸರಿದ್ದು, ಅದು ಕಾಲಾನುಕ್ರಮದಲ್ಲಿ ಪಂಡರಿಗೆ ಆಗಿರಬೇಕೆನ್ನುವುದು ಒಂದು ತರ್ಕ.
13ನೇ ಶತಮಾನದ ಅನಂತರ ಬಂದ ಮರಾಠಿ ಸಂತರಾದ ಜ್ಞಾನೇಶ್ವರ (ಕ್ರಿ.ಶ. 1275-1296), ನಾಮದೇವ (ಕಿ.ಶ.1270-1350), ಏಕನಾಥ (ಕ್ರಿ.ಶ. 1533-1599), ತುಕಾರಾಮ್ (ಕ್ರಿ.ಶ.1577-1650), ಮೊದಲಾದವರೂ, ಕನ್ನಡ ನಾಡಿನ ಹರಿದಾಸರಾದ ಪುರಂದರ ದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ ಮೊದಲಾದವರೆಲ್ಲ ವಿಟ್ಠಲನ ಭಕ್ತರೇ.
ಹರಿದಾಸರಲ್ಲಿ ಹೆಚ್ಚಿನವರು ತಮ್ಮ ಅಂಕಿತದಲ್ಲಿ ವಿಟ್ಠಲ ಎಂದು ಸೇರಿಸಿಕೊಳ್ಳುವುದನ್ನು (ಉದಾ: ಶ್ರೀಪಾದರಾಯರು (ಕ್ರಿ. ಶ. 1404-1502)ರ ಅಂಕಿತ ರಂಗವಿಟ್ಠಲ. ಪುರಂದರದಾಸ (ಕ್ರಿ.ಶ. 1484-1564) ರ ಅಂಕಿತ ಪುರಂದರ ವಿಟ್ಠಲ) ನಾವಿಲ್ಲಿ ನೆನೆಯಬಹುದು.

ವಿಟ್ಠಲನ ಪಂಥ ಸುಮಾರು 10-12ನೇ ಶತಮಾನದಿಂದ ಈಗಿನ ಮಹಾರಾಷ್ಟ್ರ-ಕರ್ನಾಟಕಗಳ ಸಂಧಿ ಭಾಗದಲ್ಲಿ ಆರಂಭವಾಯಿತೆಂದು ಹೇಳುವುದಕ್ಕೆ ಆಧಾರಗಳಿವೆ. ಈ ಮಧ್ಯಕಾಲೀನ ಮರಾಠಿ ಭಕ್ತರಲ್ಲಿ ಹಲವರು ವಿಟ್ಠಲನನ್ನು ಕಾನಡೀ ವಿಟ್ಠಲ, ಕರ್ನಾಟಕಕ್ಕೂ ವಿಟ್ಠಲ ಎಂದರೆ, ಕನ್ನಡದ, ಕರ್ನಾಟಕದ ವಿಟ್ಠಲ ಎಂದು ಕರೆದಿರುವುದು ಒಂದು ಗಮನಿಸಬೇಕಾದ ವಿಚಾರ.
ನಮಗೆ ಹೊರಗಿನಿಂದ ಬಂದ, ಅಥವಾ ಬೇರೆ ಕಡೆಯಿ೦ದ ಬ೦ದ ಏನನ್ನಾದರೂ ನಮ್ಮದಾಗಿ ಮಾಡಿಕೊಳ್ಳುವಾಗ, ಅದರ ಮೂಲವನ್ನೂ ಹೆಸರಿನಲ್ಲೇ ಸೂಚಿಸುವುದೊಂದು ರೂಢಿ. ಹಾಗಾಗಿಯೇ ಪಕ್ಕದ ಕನ್ನಡದ ನೆಲದಿಂದ ಬಂದ ವಿಟ್ಠಲನನ್ನು ಮರಾಠಿಯಲ್ಲಿ ‘ಕಾನಡೀ’ ವಿಟ್ಠಲ ಎಂದರೆ ಅದು ಸೂಕ್ತವೇ ಆಗಿದೆ. ಮರಾಠಿಯಲ್ಲಿ, ಕನ್ನಡ ಭಾಷೆಗೂ, ಕನ್ನಡಿಗರಿಗೂ ಈಗಲೂ ಕಾನಡೀ ಎಂದೇ ಹೇಳುವುದನ್ನು ನಾವು ಗಮನಿಸಬಹುದು.
ಮಝಲಾವಿಲೇ ವೇದು” ಎಂದರೆ, “ಕನ್ನಡದ, ಕರ್ನಾಟಕದ ವಿಟ್ಠಲ ನನ್ನ ಮನಸ್ಸನ್ನು ಸೆಳೆದೊಯ್ದ” ಎನ್ನುತ್ತಾನೆ. ಅಂತೆಯೇ, ನಾಮದೇವನು ಒಂದು ಅಭಂಗದಲ್ಲಿ “ಕಾಶಿಯೇ ಕನೌಜು ದ್ವಾರಕೇ ಗುರ್ಜರು ಕಾನಡಾ ವಿಟ್ಠಲು ಪಂಡರೀಯೆ”, ಎಂದರೆ, ”ಕನೋಜಿನಲ್ಲಿರುವ ಕಾಶಿಯಂತೆ, ಗುಜರಾತಿನಲ್ಲಿರುವ ದ್ವಾರಕೆಯಂತೆ, ಕಾನಡೀ (ಕನ್ನಡದ) ವಿಟ್ಠಲನು ಪಂಢರಿಯಲ್ಲಿ (ಎಂದರೆ ಪಂಢರಪುರದಲ್ಲಿ)” ಎನ್ನುತ್ತಾನೆ.
ಇನ್ನೊಂದು ಅಭಂಗದಲ್ಲಿ ನಾಮದೇವನೇ ”ಕಾನಡಾ ವಿಟ್ಠಲ ವೋ ಉಭಾ ಭೀವರೇತೀರೀ” ಎಂದರೆ, “ಕನ್ನಡದ ವಿಟ್ಠಲನು ಎದ್ದು ನಿಂತ” ಎಂದರೆ, ಮತ್ತೊಂದರಲ್ಲಿ “ವಿಟ್ಠಲ ಕಾನಡೇ ಬೋಲೂ ಜಾಣೇ, ತ್ಯಾಚೀ ಭಾಷಾ ಪುಂಡಲೀಕ ನೇಣೇ” ಎಂದರೆ, “ವಿಟ್ಠಲನು ಮಾತನಾಡುವನು ಕನ್ನಡ, ಅದನೇ ಮರುನುಡಿಯುವನು ಪುಂಡಲೀಕ” ಎಂದು.
ಸಂತ ಏಕನಾಥನು ಕನ್ನಡ, ಪಂಡರೀ ಕ್ಷೇತ್ರವೂ ಕನ್ನಡ” ಎಂದು ಹೇಳಿದ್ದಾನೆ. ಇದನ್ನೆಲ್ಲ ನೋಡಿದಾಗ, ವಿಟ್ಠಲನನ್ನು ಭಜಿಸುವ ಪಂಥ ಕನ್ನಡನಾಡಿನಲ್ಲೇ ಆರಂಭವಾಗಿದ್ದಿರಬೇಕು ಎನ್ನುವುದಕ್ಕೆ ಪುಷ್ಟಿ ದೊರೆಯುತ್ತದೆ.
ಕೆಲವು ವಿದ್ವಾಂಸರು ಬೌದ್ಧ ಧರ್ಮದ ಪ್ರಭಾವದಿಂದ ವಿಟ್ಠಲನ ಭಕ್ತಿ ಸಂಪ್ರದಾಯ ಆರಂಭವಾಯಿತು ಎಂಬ ವಾದವನ್ನು ಮುಂದಿಟ್ಟಿದ್ದಾರಾದರೂ, ವಿಟ್ಠಲನೆಂದರೆ ವಿಷ್ಣುವಿನ ರೂಪವೆಂಬುದು ಸತ್ಯಕ್ಕೆ ಹತ್ತಿರವಾಗಿದೆ. ಪಂಢರಪುರದ ವಿಟ್ಠಲನನ್ನು ಸಾಧಾರಣವಾಗಿ ಕೃಷ್ಣನ ರೂಪವೆಂದೇ ಪರಿಗಣಿಸಲಾಗುತ್ತೆ.
ವಿಟ್ಠಲನು ವಿಷ್ಣು-ಶಿವ ಇಬ್ಬರ ಪ್ರತೀಕವೆಂದೂ ಹೇಳುವವರಿದ್ದಾರೆ. ಇನ್ನೊಂದು ವಿಶೇಷವೆಂದರೆ ಬೇರೆ ವಿಷ್ಣು ಮಂದಿರಗಳಲ್ಲಿರುವಂತೆ ವಿಟ್ಠಲನೊಡನೆ ಲಕ್ಷ್ಮೀದೇವಿಯ ಜೊತೆಗೆ ರುಕುಮಾಯಿ, ಅಥವಾ ರುಕ್ಮಿಣಿ ಇದ್ದಾಳೆ. ಅಲ್ಲದೆ ವಿಠೋಬನು ಇವನು ಕೃಷ್ಣನಂತೆ ಕೈಯಲ್ಲಿ ಕೊಳಲು ಹಿಡಿದಿಲ್ಲದೆ, ಸೊಂಟದ ಮೇಲೆ ಕೈಯಿಟ್ಟು ನಿಂತಿರುವುದೊಂದು ವಿಶೇಷ. ವಿಷ್ಣು ಎಂಬ ಹೆಸರು ಕನ್ನಡಕ್ಕೆ ಬಂದಾಗ ಬಿಟ್ಟು ಎಂದಾಗುತ್ತೆ. ಅದೇ ವಿಟ್ಠಲ ಎಂಬ ರೂಪ ತಾಳಿದೆ ಎಂಬ ಅನಿಸಿಕೆಯೂ ಕೂಡ ಇದೆ.
ಮೊದಲು ಪಂಢರಪುರದ ದೇವಾಲಯದ ಇತಿಹಾಸ, ಅಲ್ಲಿ ಸಿಕ್ಕ ಶಾಸನಾಧಾರಗಳ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಂಡು ಅನಂತರ ವಿಟ್ಠಲ ಸೊಂಟದ ಮೇಲೆ ಕೈಯಿಟ್ಟಿರುವುದು ಯಾಕೆ ಎನ್ನುವುದರ ಬಗ್ಗೆ ಪ್ರಚಲಿತದಲ್ಲಿರುವ ಕಥೆಗಳನ್ನು ನೋಡೋಣ.
ಚಾರಿತ್ರಿಕ ಹಿನ್ನೆಲೆ ಮತ್ತು ಶಾಸನಾಧಾರಗಳು :
ಕ್ರಿ.ಶ. 1140ರ ಹೊಯ್ಸಳ ವೀರಬಲ್ಲಾಳನ ಶಾಸನವೊಂದರಲ್ಲಿಯೂ ವಿಟ್ಠಲದೇವನನ್ನು ಸ್ತುತಿಸಿದ್ದಾನೆ. ಆದು ಪಂಢರಪುರದ ಬಗ್ಗೆ ಹೇಳುವುದಿಲ್ಲವಾದರೂ, ಆ ಸಮಯಕ್ಕೆ, ವಿಟ್ಠಲನ ಪೂಜೆಯಂತೂ ಇತ್ತು ಎಂಬುದು ತಿಳಿದುಬರುತ್ತದೆ. ಸುಮಾರು 13ನೇ ಶತಮಾನದಲ್ಲೇ ಪಂಢರಿಗೆಯಲ್ಲಿ ವಿಠೋಬನ ದೇವಾಲಯವಿದ್ದದ್ದಕ್ಕೆ ಶಾಸನಾಧಾರವಿದೆ.
ಪಂಢರಪುರದಲ್ಲಿ ದೊರೆತಿರುವ 1270ರ ಯಾದವರ ಮಹಾದೇವನ ಶಾಸನದಲ್ಲಿ ಈ ಊರನ್ನು ಪಾಂಡುರಂಗಪುರವೆಂದು ಕರೆಯುವುದರಿಂದ ಆ ಕಾಲಕ್ಕಾಗಲೇ ಈ ಊರು ಪಾಂಡುರಂಗನ ನೆಲೆಯಾಗಿತ್ತು ಎಂದು ತಿಳಿದುಬರುತ್ತದೆ. ಕ್ರಿ.ಶ. 1237ರ ಹೊಯ್ಸಳ ಸೋಮೇಶ್ವರನದೆಂದು ಊಹಿಸಲಾದ ಶಾಸನವು ಈಗ ಪಂಢರಪುರದ ವಿಟ್ಠಲನ ದೇವಾಲಯದಲ್ಲಿರುವ ಸೋಲಾಖಂಬ (ಹದಿನಾರು ಕಂಬದ) ಮಂಟಪದಲ್ಲಿರುವ ತೊಲೆಯ ಮೇಲಿದೆ.

ಈ ತೊಲೆ ಮೊದಲು ಈ ಗುಡಿಯ ಯಾವುದೋ ಬಾಗಿಲಿನ ಮೇಲಿನ ವಾಡದ ತೊಲೆಯಾಗಿರುವುದು ಅದರ ಕಟ್ಟಡದಿಂದ ತಿಳಿದುಬರುತ್ತದೆ. ಈ ಶಾಸನವು ಭೀಮರಥಿಯ ದಡದಲ್ಲಿರುವ ಪ೦ಡರಗೆಯ ವಿಟ್ಠಲನಿಗೆ ಕೆಲವು ಹಳ್ಳಿಗಳನ್ನು ದತ್ತಿ ಬಿಟ್ಟಿರುವ ವಿಷಯವನ್ನು ಅರುಹುತ್ತದೆ. ಇದೇ ಶಾಸನವೇ ಈ ದೇವಸ್ಥಾನವನ್ನು ವಿಸ್ತರಿಸುವ, ಜೀರ್ಣೋದ್ಧಾರ ಮಾಡುವ ಕೆಲಸಗಳ ಬಗ್ಗೆ ಮಾತನಾಡುತ್ತದೆ.
ಇದನ್ನು ಕೆಲವರು ಯಾದವರ ಸೋಮೇಶ್ವರನ ಶಾಸನವೆಂದು ಹೆಸರಿಸಿದ್ದರೂ, ದೇವಗಿರಿಯ ಯಾದವರಲ್ಲಿ ಈ ಸಮಯದಲ್ಲಿ ಸೋಮೇಶ್ವರನೆಂಬ ರಾಜ ಇಲ್ಲದಿದ್ದದ್ದು ಯೋಚಿಸಬೇಕಾದ ಅಂಶ. ಮೊದಮೊದಲು ಹೊಯ್ಸಳರ ಹಲವು ಶಾಸನಗಳಲ್ಲಿ ಅವರನ್ನೂ ಯಾದವರೆಂದು ಕರೆದಿದ್ದರೂ, 13ನೇ ಶತಮಾನದ ಕಡೆಯ ವೇಳೆಗೆ ಅವರು ತಮ್ಮ ಹೊಯ್ಸಳರೆಂಬ ಹೆಸರನ್ನು ಬಿಟ್ಟು ಯಾದವರೆಂಬ ಹೆಸರನ್ನು ದಾಖಲಿಸಿದ್ದಿರಬಹುದೇ ಎಂಬುದೂ ಪ್ರಶ್ನೆಯಾಗಿ ನಿಲ್ಲುತ್ತದೆ.
ಈ ಶಾಸನ ಬರೆಸಿದ ಸೋಮೇಶ್ವರ ಹೊಯ್ಸಳ ಸೋಮೇಶ್ವರನದ್ದೇ ಆಗಿರಲಿ, ಅಥವಾ ದೇವಗಿರಿಯ ರಾಜರಲ್ಲಿ ಸೋಮೇಶ್ವರನೆಂಬ ಎರಡನೇ ಹೆಸರುಳ್ಳ ಇನ್ನೊಬ್ಬ ಅರಸನದೇ ಆಗಿರಲಿ, 13ನೇ ಶತಮಾನದ ಮಧ್ಯಭಾಗದಲ್ಲಾಗಲೇ ಈ ಕ್ಷೇತ್ರ ವಿಟ್ಠಲನ ಕ್ಷೇತ್ರವಾಗಿ ಹೆಸರುಗಳಿಸಿತ್ತು ಎನ್ನುವುದಂತೂ ಖಚಿತವಾಗುತ್ತದೆ.
ಆ ವೇಳೆಗಾಗಲೇ ಈಗಿರುವ ದೇವಸ್ಥಾನದ ಕೆಲವು ಮೂಲ ಭಾಗಗಳಾದರೂ ಇದ್ದಿರಬೇಕು, ಮತ್ತೆ ಆಗಲೇ ದೇವಸ್ಥಾನದ ಕಟ್ಟಡಗಳನ್ನು ದುರಸ್ತಿಪಡಿಸುವ, ಅಥವಾ ಹಿರಿದಾಗಿಸುವ ವಿಷಯ ಇರುವುದರಿಂದ, ಆಗ ದೇವಾಲಯ ಅಷ್ಟು ಕಾಲಕ್ಕಾಗಲೇ ಹಳತಾಗಿದ್ದಿರಬೇಕು. ಅಂದರೆ 1237ಕ್ಕಿಂತ ಹಲವಾರು ದಶಕಗಳು ಮೊದಲೇ ಈ ದೇವಾಲಯ ಇತ್ತು ಎಂಬುದು ಸಾಬೀತಾಗುತ್ತದೆ. ಅನಂತರ ವಿಶಾಲವಾಗಿ ವಿಸ್ತರಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಈಗ ಇರುವ ಕಟ್ಟಡಗಳಲ್ಲಿ ಬಹುಪಾಲು 17ನೇ ಶತಮಾನದ ಅನಂತರ ಕಟ್ಟಲ್ಪಟ್ಟವು.
ವಿಟ್ಠಲನ ಮೂಲ ಮೂರ್ತಿ ಶೈಲಿಯ ದೃಷ್ಟಿಯಿಂದ ಇದು ಶಾಸನಾಧಾರಗಳು ತೋರುತ್ತಿರುವ 11-12ನೇ ಶತಮಾನಕ್ಕಿಂತ ಹಳೆಯದಿರಬೇಕೆಂಬ ಅಭಿಪ್ರಾಯ ಇದೆ. ಗುಪ್ತರ ಕಾಲ (4-6ನೇ ಶತಮಾನ) ದ ವಿಗ್ರಹಗಳ ಛಾಯೆ ಇದರಲ್ಲಿದೆ. ವಿಟ್ಠಲನ ತಲೆಯ ಮೇಲೆ ಇರುವ ಕಿರೀಟವು ಟೋಪಿಯಾಕಾರದಲ್ಲಿದೆ.
ಬಾದಾಮಿಯ ಗುಹೆಗಳಲ್ಲಿರುವ ಕೆಲವು ಮೂರ್ತಿಗಳಲ್ಲಿ (ಕ್ರಿ.ಶ.6-7ನೇ ಶತಮಾನ) ಈ ರೀತಿಯ ಕಿರೀಟವು ಕಂಡು ಬರುತ್ತದೆ. ಆದರೆ, ವಿಟ್ಠಲನ ಮೂರ್ತಿಯ ಕಿರೀಟ ಬಾದಾಮಿಯ ಕಿರೀಟಗಳಿಗಿಂತ ಸರಳವಾಗಿರುವುದೂ, ಈ ಮೂರ್ತಿಯನ್ನು 6ನೇ ಶತಮಾನದ್ದೆಂದು ಹೇಳಲು ಒಂದು ಕಾರಣ. ಬೇರೆಲ್ಲೋ ಇದ್ದ ಮೂರುತಿ 11-12ನೇ ಶತಮಾನಕ್ಕೆ ಮೊದಲು ಪಂಢರಪುರಕ್ಕೆ ಬಂದಿರಬಹುದೆಂಬ ಊಹೆ ಸೂಕ್ತವಾಗುತ್ತದೆ.
ಪದ್ಮಪುರಾಣದಲ್ಲಿಯೂ ಭೀಮರಥಿಯ ದಡದಲ್ಲಿರುವ ಪಾಂಡುರಂಗ ವಿಟ್ಠಲನ ಪ್ರಸ್ತಾಪ ಇದೆ. ಪುರಾಣಗಳು ಸುಮಾರು 1ರಿಂದ 5ನೇ ಶತಮಾನದ ಕಾಲದಲ್ಲಿ ರಚಿಸಿರುವುದೆಂದು ಊಹೆ. ಆದರೆ, ಪುರಾಣಗಳಲ್ಲಿನ ಕೆಲವು ಭಾಗಗಳು ಮೂಲಕ್ಕಿಂತ ಸ್ವಲ್ಪ ಕಾಲಾನಂತರ ಸೇರಿಸಲ್ಪಟ್ಟ ಅಂಶಗಳಾಗಿರಬಹುದು ಎಂದು ಕೆಲವರು ತರ್ಕ ಮಾಡಿದ್ದಾರೆ.
ಹಾಗಾಗಿ, ಆರನೇ ಶತಮಾನಕ್ಕೆ ಮೊದಲೇ ಈ ಕಥೆ ಪುರಾಣದಲ್ಲಿ ಸೇರಿತ್ತೇ ಇಲ್ಲವೇ, ಅಥವಾ ಅನಂತರ ಸೇರಿಸಿರುವುದೇ ಎನ್ನುವುದನ್ನು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಹಾಗಾಗಿ, 6ರಿಂದ 11 ನೇ ಶತಮಾನಗಳ ನಡುವೆ, ವಿಠಲನ ಮೂಲ ದೇಗುಲವನ್ನು ಕಟ್ಟಿರಬಹುದೆಂದು ಅಂದಾಜು ಮಾಡಬಹುದು.
ಈ ಪುರಾಣಗಳೇ ಅಲ್ಲದೆ, ಹದಿಮೂರನೆಯ ಶತಮಾನದಲ್ಲಿ ಬಿಲ್ವಮಂಗಲನೆಂಬ ಸಂಸ್ಕೃತ ಕವಿ ತನ್ನ ಕೃಷ್ಣಕರ್ಣಾಮೃತದಲ್ಲಿ ಮತ್ತೆ ಚೌಡರಸನೆಂಬ ಕವಿ ತನ್ನ ಕನ್ನಡದ ಅಭಿನವ ದಶಕುಮಾರ ಚರಿತೆಯಲ್ಲಿ ವಿಠಲನನ್ನು ಸ್ತುತಿಸಿದ್ದಾರೆ.
ಜ್ಞಾನದೇವ, ನಾಮದೇವ, ಏಕನಾಥ ಶುಕಾರಾಮ ಮೊದಲಾದ ಸಂತರು ಆಗಿಹೋದ ಮಹಾರಾಷ್ಟ್ರದ ಭಕ್ತಿ ಸಂಪ್ರದಾಯಕ್ಕೆ ವಾರಕರಿ ಸಂಪ್ರದಾಯವೆಂದು ಹೆಸರು. ಇವರೆಲ್ಲ ಮರಾಠಿ ಭಾಷೆಯಲ್ಲಿ ಮುಖ್ಯವಾಗಿ ವಿಟ್ಠಲನನ್ನು ಕುರಿತು ಕವಿತೆಗಳನ್ನ ರಚಿಸಿದ್ದಾರೆ. ಇವುಗಳಿಗೆ ಅಭಂಗಗಳೆಂದು ಹೆಸರು.

ವಾರಕರಿ ಸಂಪ್ರದಾಯಕ್ಕೆ ಸೇರಿದ ಸಂತರು ಢಾಂಬಿಕ ಆಚರಣೆಗಳಿಗೆ ಹೆಚ್ಚಿಗೆ ಗಮನ ಕೊಡದೆ, ಭಕ್ತಿಯೊಂದೇ ಪ್ರಧಾನವೆಂದು ಭಾವಿಸಿದವರು. ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ, ವರ್ಷ ವರ್ಷ ಎರಡು ಬಾರಿ, ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿಗಳಂದು ಪಂಢರಪುರಕ್ಕೆ ಯಾತ್ರೆ ಹೋಗಿ ವಿಟ್ಠಲನ ದರ್ಶನ ಮಾಡುವುದಕ್ಕೆ ಈ ಸಂಪ್ರದಾಯದಲ್ಲಿ ಬಹಳ ಹೆಚ್ಚಿನ ಮಹತ್ತ್ವವಿತ್ತು. ಇಂದಿಗೂ ಕೂಡ ಆ ದಿನಗಳಂದು ಪಂಢರಪುರಕ್ಕೆ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಾರೆ.
ಭಕ್ತ ಪುಂಡಲೀಕ ಕಥೆ
ಮಹಾರಾಷ್ಟ್ರದಲ್ಲಿ ಹೆಚ್ಚಿಗೆ ಪ್ರಚಲಿತದಲ್ಲಿರುವ ಕಥೆಯೊಂದರ ಪ್ರಕಾರ ಪುಂಡಲೀಕನೆಂಬ ಹರಿಭಕ್ತನೊಬ್ಬ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ. ಅವನ ಭಕ್ತಿಗೆ ಮೆಚ್ಚಿ ವಿಷ್ಣುವೇ ಅವನ ಮನೆಗೆ ಬಂದುಬಿಟ್ಟ. ಆಗ, ಪುಂಡಲೀಕನು ತನ್ನ ತಂದೆತಾಯಿಯರ ಸೇವೆಯಲ್ಲಿ ನಿರತನಾಗಿದ್ದ.
ತಂದೆ-ತಾಯಿಯರೇ ಎಲ್ಲರಿಗೂ ಮಿಗಿಲೆಂದು ಬಗೆದ ಪುಂಡಲೀಕನು, ವಿಷ್ಣುವಿನತ್ತ ಒಂದು ಇಟ್ಟಿಗೆಯನ್ನು ಎಸೆದು, ತಾನು ಬರುವವರೆಗೆ ಅದರ ಮೇಲೇ ನಿಲ್ಲಬೇಕೆಂದು ಹೇಳಿದನಂತೆ. ಸರಿ, ವಿಷ್ಣು ಸೊಂಟದ ಮೇಲೆ ಕೈ ಹೊತ್ತು ಪುಂಡಲೀಕನ ಬರುವನ್ನೇ ಕಾಯುತ್ತಿದ್ದಾನಂತೆ. ಆದರೆ ಪುಂಡಲೀಕ ಅವನ ತಂದೆತಾಯಿಯರನ್ನು ಬಿಟ್ಟು ಬರದೇ ಇದ್ದುದರಿಂದ, ವಿಟ್ಠಲನು ಅಲ್ಲೇ ಕಲ್ಲಾಗಿ ನಿಂತುಬಿಟ್ಟನಂತೆ. ಈ ಕಥೆಯೇ, ಚೂರುಪಾರು ಬದಲಾವಣೆಗಳಿಂದ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ.
ಪದ್ಮಪುರಾಣದಲ್ಲಿ ವಿಠೋಬನ ಕುರಿತ ಕಥೆ ಹೀಗಿದೆ: ಬೃ೦ದಾವನದಿಂದ ಒಮ್ಮೆ ರಾಧೆಯು ದ್ವಾರಕೆಗೆ ಬಂದಳಂತೆ. ಕೃಷ್ಣನು ರಾಧೆಯ ಜೊತೆಗೆ ತನಗಿಂತಲೂ ಹೆಚ್ಚು ಸಲಿಗೆಯಿಂದಿರುವುದನ್ನು ಕಂಡು ರುಕ್ಮಿಣಿಗೆ ಸಹಿಸಲಾಗದೇ ಬಳಿಯ ದಿಂಡವನಕ್ಕೆ ನಡೆದಳು. ಕೃಷ್ಣನು ರುಕ್ಮಿಣಿಯನ್ನು ಮನ್ನಿಸೆಂದು ಕೋರಲು ಅವಳನ್ನು ಹಿಂಬಾಲಿಸಿದ.
ರುಕ್ಮಿಣಿಯ ಕೋಪ ಇಳಿಯಲಿಲ್ಲವಾಗಿ, ಅವನು ತನ್ನ ಭಕ್ತಪುಂಡಲೀಕನನ್ನು ನೋಡಲು ಅವನ ಮನೆಗೆ ನಡೆದ. ಅಲ್ಲಿ ನಡೆದದ್ದೆಲ್ಲ ಈ ಹಿಂದೆ ಹೇಳಿದಂತೆಯೇ. ಆಮೇಲೆ, ಕೋಪವಿಳಿದ ಮೇಲೆ ರುಕ್ಮಿಣಿಯೂ ಅಲ್ಲಿಗೆ ಬಂದು ವಿಠೋಬನೊಡನೆ ನೆಲೆನಿಂತಳಂತೆ.
ಈಗ ಪಂಢರಪುರದಲ್ಲಿ ಪುಂಡಲೀಕನಿಗೂ ಕೂಡ ಒಂದು ಗುಡಿ ಇದೆ. ಅದು ಅವನ ಸಮಾಧಿಯಿರಬಹುದೇ ಎಂಬ ಚಿಂತನೆಯನ್ನೂ ಮಾಡಿದ್ದಾರೆ. ಆ ಗುಡಿಯಲ್ಲಿ ಈಗ ಒಂದು ಶಿವಲಿಂಗವಿದ್ದು, ಪಂಢರಪುರವು ಶಿವ – ವಿಷ್ಣು ಎರಡೂ ಭಕ್ತರ ಕೇಂದ್ರವೆಂಬುದರ ಸೂಚಕವಾಗಿದೆ.
ಪಂಢರಪುರ ಎಲ್ಲಿದೆ?
ಪ೦ಢರಪುರ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಸೋಲಾಪುರದಿಂದ ಸಾತಾರಾಗೆ ಹೋಗುವ ದಾರಿಯಲ್ಲಿ ಸೋಲಾಪುರದ ಪಶ್ಚಿಮಕ್ಕೆ ಸುಮಾರು 70 ಕಿ.ಮೀ. ದೂರದಲ್ಲಿರುವ ಈ ಊರು ಭೀಮಾ ನದಿಯ ದಂಡೆಯಲ್ಲಿದೆ. ಮಹಾರಾಷ್ಟ್ರದ ಎಲ್ಲ ಪ್ರಮುಖ ಸ್ಥಳಗಳಿಂದ, ಅಲ್ಲದೆ ಕರ್ನಾಟಕದ ಹಲವು ಕಡೆಗಳಿಂದ ಇಲ್ಲಿಗೆ ಹೋಗಲು ವಾಹನ ಸೌಕರ್ಯ ಇದೆ.
ದಕ್ಷಿಣ ಮಧ್ಯ ರೈಲ್ವೆಯ ಮಿರಜ್ ನಿಂದ ಕುರ್ಡುವಾಡಿಗೆ ಹೋಗುವ ರೈಲುದಾರಿಯಲ್ಲಿ ಪಂಢರಪುರ ನಿಲ್ದಾಣ ಸಿಗುತ್ತೆ. ಮಹಾರಾಷ್ಟ್ರದ ಎಲ್ಲೆಡೆಗಳಿಂದ ಮತ್ತೆ ಉತ್ತರ ಕರ್ನಾಟಕದಿಂದ ಬಹಳ ಜನ ಭಕ್ತರು ಪಂಢರಪುರದ ಯಾತ್ರೆ ಮಾಡುತ್ತಾರೆ. ಪ್ರತಿ ವರ್ಷ ಆಷಾಢ ಏಕಾದಶಿಯ ಸಂದರ್ಭದಲ್ಲಿ ಇಲ್ಲಿ ಎಂಟು-ಹತ್ತು ಲಕ್ಷ ಜನ ನೆರೆಯುತ್ತಾರೆ. ಅಲ್ಲದೆ ಪ್ರತಿ ಬುಧವಾರಗಳಂದೂ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.






Leave a Reply