ಶ್ರೀ ರಘುನಾಥ ದಾಸ ಗೋಸ್ವಾಮಿ

ವೃಂದಾವನದ ಆರು ಗೋಸ್ವಾಮಿಗಳಲ್ಲಿ ಶ್ರೀಲ ರಘುನಾಥದಾಸ ಗೋಸ್ವಾಮಿಯವರು ಕೂಡ ಒಬ್ಬರು.

ಶ್ರೀ ರಘುನಾಥದಾಸ ಗೋಸ್ವಾಮಿಯವರು ಶ್ರೀ ಕೃಷ್ಣನ ನಿತ್ಯ ಮುಕ್ತ ಸಂಗಡಿಗರಾಗಿದ್ದರು. ಐದುನೂರು ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದಾಗ ಇವರು ಕೂಡ ಅವತರಿಸಿ ಅವರ ಜೊತೆಗಾರರಾಗಿದ್ದರು.

ಶ್ರೀ ರಘುನಾಥದಾಸ ಗೋಸ್ವಾಮಿಯವರು ಒಬ್ಬ ಶ್ರೀಮಂತ ಜಮೀನ್ದಾರರ ಮಗನಾಗಿದ್ದರು. ಬಾಲ್ಯದಿಂದಲೂ ರಘುನಾಥದಾಸ ಈ ಐಹಿಕ ಜಗತ್ತಿನ ವಸ್ತುಗಳಲ್ಲಿ ಅಷ್ಟೊಂದು ಆಸಕ್ತಿಯನ್ನು ಪಡೆದಿರಲಿಲ್ಲ. ಅವನ ಆತ್ಮವು ಯಾವಾಗಲೂ ತಾನು ಶ್ರೀ ಚೈತನ್ಯ ಮಹಾಪ್ರಭುಗಳ ಒಡನಾಡಿಯಾಗಿರಬೇಕೆಂದು ಬಯಸುತ್ತಿತ್ತು ಮತ್ತು ಪ್ರಭುಗಳ ಸೇವೆಯಲ್ಲಿಯೇ ತನ್ನ ಬದುಕನ್ನು ಸಮರ್ಪಣೆ ಮಾಡಿಕೊಳ್ಳಬೇಕೆಂಬ ಇಚ್ಛೆಯನ್ನು ಆತ ಹೊಂದಿದ್ದ.

ರಘುನಾಥದಾಸನ ಆತ್ಮವು ಯಾವಾಗಲೂ ವೈರಾಗ್ಯದ ಯೋಚನೆಯಲ್ಲಿಯೇ ಇರುತ್ತಿತ್ತು. ಚಿಕ್ಕ ವಯಸ್ಸಿನ ಸೇವಕನ ಈ ಯೋಚನೆಯು ಮನೆಯವರಿಗೆ ಇಷ್ಟವಿರಲಿಲ್ಲ. ಆದುದರಿಂದ ಅವನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವ ಪ್ರಯತ್ನವನ್ನು ಅವರು ಮಾಡುತ್ತಿದ್ದರು. ಅವನು ಎಲ್ಲೂ ಹೊರ ಹೋಗದಂತೆ ಮನೆಯ ಕಾವಲುಗಾರ ಕೂಡ ಕಾಯುತ್ತಿದ್ದ.

ಈ ಎಚ್ಚರಿಕೆ, ಜಾಗರೂಕತೆಯ ಕಾವಲಿನಲ್ಲೂ ಅವನು ಕಣ್ಣು ತಪ್ಪಿಸಿ ಹೇಗೋ ಮನೆಯ ಬಂಧನದಿಂದ ತಪ್ಪಿಸಿಕೊಂಡನು. ಅವನು ಜಗನ್ನಾಥಪುರಿಗೆ ಹೋಗಿ ಅಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆ ಮಾಡತೊಡಗಿದನು.

ಜಗನ್ನಾಥಪುರಿಯಲ್ಲಿ ಶ್ರೀರಘುನಾಥದಾಸನ ಜೀವನವು ಪಾರಮಾರ್ಥಿಕ ಜ್ಞಾನದ ಪ್ರಜ್ಞೆಯನ್ನು ಹೀರಿಕೊಂಡು ಬೆಳೆಯಿತು. ಚೈತನ್ಯ-ಚರಿತಾಮೃತದಲ್ಲಿ ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಹೀಗೆ ಬರೆಯುತ್ತಾರೆ – ಶ್ರೀ ರಘುನಾಥದಾಸರ ಅಪರಿಮಿತವಾದ ಪಾರಮಾರ್ಥಿಕವಾದ ಮಹಾಗುಣಗಳನ್ನು ಯಾರು ತಾನೆ ಎಣಿಸಲು ಅಥವಾ ವಿವರಿಸಲು ಸಾಧ್ಯ? ಅವನಲ್ಲಿರುವ ಶಿಸ್ತುಬದ್ಧವಾದ ನಿಯಂತ್ರಿತ ತತ್ವಗಳು ಕಲ್ಲಿನ ಮೇಲೆ ಕೆತ್ತಿರುವ ಅಕ್ಷರಗಳಂತೆ ಅಳಿಸಲು ಸಾಧ್ಯವಿಲ್ಲವಾಗಿದೆ.

ಶ್ರೀರಘುನಾಥದಾಸನು ದಿನದ ಇಪತಾಲ್ಕು ಘಂಟೆಗಳಲ್ಲಿ ಸುಮಾರು ಇಪ್ಪತ್ತೆರಡು ಘಂಟೆ ‘ಹರೇಕೃಷ್ಣ ಮಹಾಮಂತ್ರ’ವನ್ನು ಜಪಿಸುತ್ತಿದ್ದನು. ಮಹಾಪ್ರಭುಗಳ ಪಾದ ಕಮಲವನ್ನು ಸದಾ ಸ್ಮರಿಸುತ್ತಿದ್ದನು. ಅವನು ಊಟ ಮತ್ತು ನಿದ್ದೆಗೆ ಕೇವಲ ಒಂದು ಘಂಟೆ ಅಥವಾ ಅರ್ಧಘಂಟೆಗಿಂತಲೂ ಕಡಿಮೆ ಉಪಯೋಗಿಸುತ್ತಿದ್ದನು. ಕೆಲವು ದಿನಗಳಲ್ಲಿ ಅದು ಕೂಡ ಸಾಧ್ಯವಾಗುತ್ತಿರಲಿಲ್ಲ.

ವೈರಾಗ್ಯ ಕುರಿತ ಅವನ ವಿಚಾರಗಳಂತೂ ಬಹಳ ಅದ್ಭುತವಾಗಿವೆ. ಅವನು ತನ್ನ ಜೀವನಪೂರ್ತಿ ಬಾಯಿ ಚಪಲಗಳಿಗೆ ಒಳಗಾಗುತ್ತಿರಲಿಲ್ಲ. ಸಾಧಾರಣವಾದ ಒಂದು ತುಂಡು ಬಟ್ಟೆ ಹರಿದ ಮೇಲಂಗಿ ಅಥವಾ ಒಂದು ಹೊದಿಕೆಯ ಹೊರತಾಗಿ ಅವನು ಏನೂ ಮುಟ್ಟಲೂ ಹೋಗುತ್ತಿರಲಿಲ್ಲ. ಅವನು ಏನು ಊಟ ಮಾಡುತ್ತಿದ್ದನೋ ಅದು ಕೇವಲ ಅವನ ಆತ್ಮ ದೇಹವನ್ನು ಕಾಪಾಡಲು ಅಷ್ಟೇ ಆಗಿತ್ತು. ಒಂದೊಂದು ಸಲ ಅವನು ಊಟ ಮಾಡಿ ತನಗೆ ತಾನೇ ನಿಂದಿಸಿಕೊಳ್ಳುತ್ತಿದ್ದ.

“ಯಾರ ಹೃದಯವು ಪರಿಪೂರ್ಣಜ್ಞಾನದಿಂದ ಪರಿಶುದ್ಧವಾಗಿದೆಯೋ ಅವನು ಮಾತ್ರ ಆ ಪರಮ ಬ್ರಹ್ಮನಾದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ಅವನಿಂದಲೇ ಪ್ರತಿಯೊಂದನ್ನೂ ಪಡೆಯಬಲ್ಲ. ಅಂತಹ ಮನುಷ್ಯ ಏಕೆ ತಾನೆ ಭ್ರಷ್ಟನಾಗಿ ಪೋಕರಿಯಾಗಬೇಕು? ತನ್ನ ಈ ಭೌತಿಕ ದೇಹವನ್ನು ಕಾಳಜಿಯಿಂದ ಕಾಪಾಡಿಕೊಳ್ಳಲು ತಾನೆ ಪ್ರಯತ್ನಿಸಬೇಕು?” ಎಂದು ಪ್ರಶ್ನಿಸಿಕೊಳ್ಳುತ್ತಿದ್ದ.

ಶ್ರೀರಘುನಾಥದಾಸ ಗೋಸ್ವಾಮಿ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆಯನ್ನು ಜಗನ್ನಾಥಪುರಿಯಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಮಾಡಿದರು. ಯಾವಾಗ ಶ್ರೀ ಚೈತನ್ಯ ಮಹಾಪ್ರಭುಗಳು ಈ ಭೌತಿಕ ಜಗತ್ತನ್ನು ತೊರೆದು ಹೊರಟು ಹೋದರೋ ಆಗ ರಘುನಾಥದಾಸನು ವೃಂದಾವನಕ್ಕೆ ಹೋದರು.

ಅಲ್ಲಿ ಕೆಲವು ವರ್ಷಗಳ ಕಾಲ ಪವಿತ್ರ ಸರೋವರ ರಾಧಾ-ಕುಂಡದ ಬಳಿ ವಾಸ ಮಾಡಿದರು. ಈಗಲೂ ಅವರ ಭಜನ ಕುಟೀರ, ಪೂಜಿಸುವ ಸ್ಥಳ ಅಲ್ಲಿ ಅಸ್ತಿತ್ವದಲ್ಲಿದೆ. ವೃಂದಾವನದ ಆರು ಗೋಸ್ವಾಮಿಗಳಲ್ಲಿ ಇವರು ಒಬ್ಬ ಪ್ರಸಿದ್ದಿ ಪಡೆದ ಮಹಾನ್ ಗೋಸ್ವಾಮಿಯಾಗಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi