ಶ್ರೀನಿವಾಸ ಆಚಾರ್ಯ

ಶ್ರೀನಿವಾಸ ಆಚಾರ್ಯರು ಕೃಷ್ಣ ಪ್ರಜ್ಞಾಂದೋಲನದ ವೈಶಿಷ್ಟ್ಯವಾದ ಪುಸ್ತಕ ಸಂಕೀರ್ತನ ಪದ್ಧತಿಯ ಮೊಟ್ಟ ಮೊದಲ ತಂಡದ ನೇತಾರರಾಗಿದ್ದರು. ಇವರು ಶ್ರೀಚೈತನ್ಯ ಮಹಾಪ್ರಭುಗಳ ಕೃಪಾವಿಶೇಷದಿಂದ ಗಂಗಾಧರ ಭಟ್ಟಾಚಾರ್ಯ ಮತ್ತು ಲಕ್ಷ್ಮಿಪ್ರಿಯಾ ದಂಪತಿಯ ಪುತ್ರರಾಗಿ ಜನಿಸಿದರು.

ಗಂಗಾಧರ ಭಟ್ಟಾಚಾರ್ಯರು ಶ್ರೀ ಚೈತನ್ಯ ಮಹಾಪ್ರಭುಗಳ ಪರಮ ಭಕ್ತರಾಗಿದ್ದು, ಮುಂದೆ ‘ಚೈತನ್ಯದಾಸ’ರೆಂದೇ ಖ್ಯಾತರಾದರು. ಶ್ರೀ ಚೈತನ್ಯ ಮಹಾಪ್ರಭುಗಳು, “ಮುಂದೆ ನಾನು ರೂಪ ಸನಾತನರ ಮೂಲಕ ಭಕ್ತಿಶಾಸ್ತ್ರಗಳ ರೂಪದಲ್ಲಿ ಆವಿರ್ಭವಿಸುತ್ತೇನೆ. ಶ್ರೀನಿವಾಸನ ಮೂಲಕ ಈ ಶಾಸ್ತ್ರಗಳು ವಿತರಿಸಲ್ಪಡುತ್ತವೆ’ ಎಂದು ಮುನ್ನುಡಿದಿದ್ದರು. ಅವರ ಸೂಚನೆಯಂತೆಯೇ ಭಟ್ಟಾಚಾರ್ಯ ದಂಪತಿ ತಮ್ಮ ಮಗುವಿಗೆ ‘ಶ್ರೀನಿವಾಸ’ ಎಂದು ನಾಮಕರಣ ಮಾಡಿದ್ದರು.

ಶ್ರೀನಿವಾಸರು ಪ್ರಾಪ್ತ ವಯಸ್ಕರಾಗುತ್ತಿದ್ದಂತೆ ವೃಂದಾವನಕ್ಕೆ ತೆರಳಿದರು. ಅಲ್ಲಿ ಶ್ರೀ ಜೀವಗೋಸ್ವಾಮಿಗಳಿಂದ ಶಾಸ್ತ್ರಾಧ್ಯಯನ, ಭಾಗವತ ಅಧ್ಯಯನ ಮೊದಲಾದ ಬೋಧನೆಗಳನ್ನು ಪಡೆದರು. ಕೇವಲ ಅಲ್ಪಕಾಲದಲ್ಲಿಯೇ ಶ್ರೀನಿವಾಸರು ಷಡ್ ಗೋಸ್ವಾಮಿಗಳ ಎಲ್ಲ ಸಿದ್ಧಾಂತಗಳನ್ನೂ ಹೃದ್ಗತ ಮಾಡಿಕೊಂಡರು.

ಅವರು ತತ್ತ್ವಶಾಸ್ತ್ರ ದಲ್ಲಿ ಪಾರಂಗತರಾದುದರಿಂದ ಜೀವ ಗೋಸ್ವಾಮಿಗಳು ಅವರಿಗೆ ‘ಆಚಾರ್ಯ’ ಎಂಬ ಉಪಾಧಿ ನೀಡಿದರು. ಅಂದಿನಿಂದ ಅವರ ಹೆಸರು ಶ್ರೀನಿವಾಸ ಆಚಾರ್ಯ ಎಂದಾಯಿತು.

ವೃಂದಾವನದಲ್ಲಿ ನರೋತ್ತಮದಾಸ, ಶ್ಯಾಮನಂದನ ಮತ್ತು ಶ್ರೀನಿವಾಸರನ್ನು ಷಡ್ ಗೋಸ್ವಾಮಿಗಳು ರಚಿಸಿದ ಶಾಸ್ತ್ರಗಳ ಹಸ್ತಪ್ರತಿಗಳನ್ನು ತಲಪಿಸುವ ಸಲುವಾಗಿ ಬಂಗಾಳಕ್ಕೆ ಕಳುಹಿಸಿಕೊಡಬೇಕೆಂದು ನಿರ್ಧಾರವಾಯಿತು. ಅಂತೆಯೇ ಮೂವರೂ ಬಹಳ ಸಂತೋಷದಿಂದ ಜೀವಗೋಸ್ವಾಮಿಗಳ ಆಶೀರ್ವಾದ ಪಡೆದು ಹಸ್ತಪ್ರತಿಗಳು ತುಂಬಿದ್ದ ಪೆಟ್ಟಿಗೆಯನ್ನು ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಹೊರಟರು.

ಬಂಗಾಳ ಸಮೀಪಿಸುತ್ತಿದ್ದಂತೆ, ವನವಿಷ್ಣುಪುರದಲ್ಲಿ ಹಸ್ತಪ್ರತಿಯ ಪೆಟ್ಟಿಗೆ ಕಳುವಾಗಿ ಶ್ರೀನಿವಾಸ ಆಚಾರ್ಯರು ಅದನ್ನು ಅಲ್ಲಿಯ ರಾಜ ವೀರಹಮ್ಮಿರನ ಬಳಿ ಪಡೆದರು. ಅಲ್ಲಿಯವರೆಗೂ ಲೂಟಿಕೋರನಾಗಿದ್ದ ರಾಜನಲ್ಲಿ ಆಚಾರ್ಯರ ದರ್ಶನದಿಂದ ವಿಶೇಷ ಪುವರ್ತನೆ ಉಂಟಾಗಿ, ಅವನು ಅವರ ಶಿಷ್ಯನಾದನು.

ಶ್ರೀನಿವಾಸ ಆಚಾರ್ಯರು ಗೋಸ್ವಾಮಿಗಳ ಬೋಧನೆಗಳನ್ನು ಎಲ್ಲೆಡೆ ಪಸರಿಸಿದರು. ಕ್ರಮೇಣ ಅವರ ಬಳಿ ಅಧ್ಯಯನಕ್ಕಾಗಿ ಪ್ರಾಮಾಣಿಕರೂ ಆಸಕ್ತರೂ ಆದ ಭಕ್ತರು ಬರಲಾರಂಭಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಂತೆ ಅವರು ಅಜೀವ ಪರ್ಯಂತ ತಮ್ಮನ್ನು ಬೋಧನೆಯಲ್ಲಿ ತೊಡಗಿಸಿಕೊಂಡರು. ಷಡ್ ಗೋಸ್ವಾಮಿಗಳು ರಚಿಸಿದ ಶಾಸ್ತ್ರಗ್ರಂಥಗಳನ್ನು ಎಲ್ಲೆಡೆ ವಿತರಿಸುವ ಮೂಲಕ ಮಹಾಪ್ರಭುಗಳ ಸಂದೇಶವನ್ನು ಸಾರಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi