
ಬೆಂಗಳೂರಿನ ಪ್ರಮುಖ ಬಡಾವಣೆಯಾದ ಮಲ್ಲೇಶ್ವರದ 11ನೆಯ ಕ್ರಾಸ್‌ನಲ್ಲಿರುವ ಸುಪ್ರಸಿದ್ಧ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವನ್ನು 1902ರಲ್ಲಿ ಪಂಚರಾತ್ರಾಗಮ ಮತ್ತು ವೈದಿಕ ಪದ್ಧತಿಯಂತೆ ನಿರ್ಮಿಸಲಾಯಿತು. ಮಲ್ಲೇಶ್ವರದ ನಿವಾಸಿಗಳಿಗೆ ವಿಷ್ಣು ದೇವಸ್ಥಾನವೊಂದನ್ನು ಸ್ಥಾಪಿಸಬೇಕೆಂದು ಆಸೆ ಇತ್ತು. ಅವರು ಆಗಿನ ಮೈಸೂರು ಮಹಾರಾಜರ ನೇತೃತ್ವದ ಸರ್ಕಾರವನ್ನು ಕೋರಿದರು. ಮಹಾರಾಜರು ನೀಡಿದ ನಿವೇಶನದಲ್ಲಿ ನಿರ್ಮಿಸಿದ ಮಂದಿರವಿದು.
ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗಾಗಿ ಸುಂದರ ವಿಗ್ರಹಗಳ ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನ ಪಡಲಾಯಿತು. ಅನೇಕ ರಾಜ ಸಂಸ್ಥಾನಗಳಿಗೆ ಪ್ರಸ್ತಾವಗಳನ್ನು ಸಲ್ಲಿಸಲಾಯಿತು. ಮೊದಲು ನಂಬಿ ನಾರಾಯಣನನ್ನು ಮುಖ್ಯ ದೇವರಾಗಿ ಪ್ರತಿಷ್ಠಾಪಿಸಲು ಯೋಜಿಸಲಾಗಿತ್ತು. ಮಂದಿರ ನಿರ್ಮಾಣ ಆಂದೋಲನದ ಮುಂಚೂಣಿಯಲ್ಲಿದ್ದವರ ಕನಸಿನಲ್ಲಿ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ಬಂದು ತನಗೆ ಕ್ರಮಬದ್ಧವಾಗಿ ಆರಾಧನೆಯಾಗುತ್ತಿಲ್ಲ, ತನ್ನನ್ನೇ ಮುಖ್ಯ ದೇವರಾಗಿ ತನ್ನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂದು ಆದೇಶಿಸಿದ. ಅಚ್ಚರಿಗೊಂಡು ಸಂಬಂಧಿಸಿದವರು ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ವಿಗ್ರಹದ ಶೋಧಕ್ಕೆ ಮುಂದಾದರು. ಮೈಸೂರು ರಾಜ ಮನೆತನ ಮತ್ತೊಮ್ಮೆ ತನ್ನ ಬೆಂಬಲ ನೀಡಿತು.
ಕೃಷ್ಣಸ್ವಾಮಿ
ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ಮೂಲ ವಿಗ್ರಹವು ದೈವಿಕ ವಿಗ್ರಹವಾಗಿದ್ದು ಎರಡೂ ಕೈಗಳಲ್ಲಿ ಕೊಳಲಿದೆ. ಈ ವಿಗ್ರಹವನ್ನು ತಮಿಳುನಾಡಿನ ರಾಜ ರಾಜೇಂದ್ರ ಚತುರ್ವೇದಿ ಮಂಗಳ ಎಂದು ಕರೆಯುವ ತಿರುಕಡಲೂರಿನಲ್ಲಿ ಪೂಜಿಸಲಾಗುತ್ತಿತ್ತು. ಸರಿ ಸುಮಾರು ಕ್ರಿಸ್ತ ಶಕ 997 ರಿಂದಲೂ ಈ ವಿಗ್ರಹಕ್ಕೆ ಆರಾಧನೆ ನೆರವೇರುತಿತ್ತು. ಕಾಲ ಕ್ರಮೇಣ ದೇವಸ್ಥಾನವು ಪಾಳು ಬಿದ್ದು ಕ್ರಮಬದ್ಧವಾದ ಪೂಜೆ ನಡೆಯದಾಯಿತು.

ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ಉತ್ಸವ ಮೂರ್ತಿ ಸೇರಿದಂತೆ ಶ್ರೀದೇವಿ, ಭೂದೇವಿ – ಹುರಾ ಸಾಮ್ರಾಜ್ಯದಲ್ಲಿ ಮೊದಲು ಪತ್ತೆ ಹಚ್ಚಲಾದ ಈ ವಿಗ್ರಹಗಳಿಗೆ ದೀರ್ಘಕಾಲ ಸಾಂಗವಾಗಿ ಪೂಜೆ ನೆರವೇರುತ್ತಿತ್ತು. ನಂತರ ದೇವಸ್ಥಾನವು ಪಾಳು ಬಿದ್ದಿತು. ಹಂಪಿ ಸಾಮ್ರಾಜ್ಯದ ಅಧಿಕಾರಿ ಮಲ್ಲರಾಜ ಅರಸು ಅವರ ವಂಶಸ್ಥರು ಕೆಲವು ಶತಮಾನಗಳ ಕಾಲ ಪೂಜೆ ಸೇವೆ ಕೈಗೊಂಡಿದ್ದರು. ನಂತರ ಅಧಿಕಾರಿಗಳು ಈ ವಿಗ್ರಹಗಳನ್ನು ಮೈಸೂರಿನ ದೇವಸ್ಥಾನವೊಂದಕ್ಕೆ ನೀಡಲು ನಿರ್ಧರಿಸಿದರು. ಆದರೆ ಇದು ಸಫಲವಾಗದ ಕಾರಣ ಅವರು ಈ ವಿಗ್ರಹಗಳನ್ನು ಮೈಸೂರಿನ ಮಹಾರಾಣಿಗೆ ನೀಡಿದರು. ಆನಂತರ ಮಹಾರಾಣಿಯು ಈ ವಿಗ್ರಹಗಳನ್ನು ಈ ದೇವಸ್ಥಾನಕ್ಕೆ ಒಪ್ಪಿಸಿದರು.
ಅಮ್ಮನವರು
ಚತುರ್ಭುಜ, ಅಭಯ ಹಸ್ತ ಮತ್ತು ಪದ್ಮ ಹಸ್ತದೊಂದಿಗಿನ ಅಮ್ಮನವರ ಮೂಲ ವಿಗ್ರಹಕ್ಕೆ ಗುಂಡ್ಲುಪೇಟೆಯ ತೆರಕಣಾಂಬಿಯಲ್ಲಿನ ಪುರಾತನ ದೇವಾಲಯದಲ್ಲಿ ಕ್ರಮಬದ್ಧವಾಗಿ ಪೂಜೆ ನಡೆಯುತಿತ್ತು. 1829 ರಲ್ಲಿ ಈ ವಿಗ್ರಹವು ಮೈಸೂರು ಸಂಸ್ಥಾನವನ್ನು ಮುಟ್ಟಿತು. ಅರಮನೆಯ ಅಧಿಕಾರಿ ಶ್ರೀ ಶ್ರೀಕಂಠರಾಜೇ ಅರಸು ಅವರ ನೆರವಿನಿಂದ ಮಹಾರಾಣಿಯು ತಮ್ಮ ಒಪ್ಪಿಗೆ ಸೂಚಿಸಿದ ಮೇಲೆ ವಿಗ್ರಹವನ್ನು ಈ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು.
ಇತರ ದೇವರುಗಳು
ಶ್ರೀ ವಿಶ್ವಕ್ಸೇನ ಮತ್ತು ಶ್ರೀ ಗರುಡಾಳ್ವಾರ್ ವಿಗ್ರಹಗಳನ್ನು ಶ್ರೀ ತಿರು ನಾರಾಯಣಪುರದ (ಮೇಲುಕೋಟೆ) ಪುರಾತನ ಸನ್ನಿಧಿಯೊಂದರಿಂದ ಇಲ್ಲಿಗೆ ತರಲಾಯಿತು.
ಶ್ರೀ ವೀರ ಆಂಜನೇಯಸ್ವಾಮಿ ವಿಗ್ರಹವನ್ನು ನಾರಾಯಣ ಕಟ್ಟೆಯ (ಸನ್ಯಾಸಿ ಕಟ್ಟೆ) ಸಣ್ಣ ಮಂದಿರದಿಂದ ಇಲ್ಲಿಗೆ ತರಲಾಯಿತು. ಆ ವಿಗ್ರಹವು ಈ ದೇವಸ್ಥಾನಕ್ಕೆ ಬರುವ ಮುನ್ನ ಸುಮಾರು 200 ವರ್ಷಗಳ ಕಾಲ ಪೂಜಿಸಲ್ಪಡುತ್ತಿತ್ತು. ಅನಂತರ ನಾರಾಯಣ ಕಟ್ಟೆಯ ಮಂದಿರ ಪಾಳು ಬಿದ್ದಿತು.

ತಿರುನಾರಾಯಣಪುರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವೇಣುಗೋಪಾಲ ಸ್ವಾಮಿ ಶ್ರೀ ಶಟಾರಿಯನ್ನು ಇಲ್ಲಿಗೆ ತರಲಾಯಿತು. ಆಳ್ವಾರ್ ಮತ್ತು ಆಚಾರ್ಯರ ವಿಗ್ರಹಗಳನ್ನು ತೆರಕಣಾಂಬಿಯ ದೇವಸ್ಥಾನವೊಂದರಿಂದ ತರಲಾಯಿತು. ರಾಮಾನುಜಾಚಾರ್ಯರ ಉತ್ಸವ ಮೂರ್ತಿಯನ್ನು ಶ್ರೀರಂಗಂನ ದಿವ್ಯದೇಶಂಗಳಲ್ಲಿ ಒಂದಾದ ದೇವಸ್ಥಾನದಿಂದ ಇಲ್ಲಿ ಬರಮಾಡಿಕೊಳ್ಳಲಾಯಿತು, ಶ್ರೀ ನಮ್ಮಾಳ್ವಾರ್‌ರ ಉತ್ಸವ ಮೂರ್ತಿಯು ಚತುರ್ವೇದಿ ಮಂಗಳದ ಗ್ರಾಮವೊಂದರ ದೇವಾಲಯದಲ್ಲಿ ಮೊದಲು ಇತ್ತು. ಆ ದೇವಸ್ಥಾನವು ಪಾಳು ಬಿದ್ದಾಗ ಈ ದೇವಸ್ಥಾನಕ್ಕೆ ಸಂಬಂಧಿಸಿದವರ ಪ್ರಯತ್ನಗಳಿಂದ ಅಲ್ಲಿನ ಮೂರ್ತಿ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯವನ್ನು ಸೇರಿತು. ಚಿಕ್ಕ ತಾಯರ್ (ಚತುರ್ಭುಜ ತಾಯಾರ್) ವಿಗ್ರಹವು ಮೈಸೂರು ಅರಮನೆಯಿಂದ ಇಲ್ಲಿಗೆ ಆಗಮಿಸಿತು.
ಆಂಡಾಳ್ ತಾಯಾರ್ ಮೂಲ ಮತ್ತು ಉತ್ಸವ ಮೂರ್ತಿಗಳನ್ನು 1946ರಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ತಿರುಮಂಗೈ ಆಳ್ವಾರ್, ಶ್ರೀ ವೇದಾಂತ ದೇಶಿಕರ್, ಮನವಾಳ ಮಾಮುನಿ ಅವರುಗಳ ಉತ್ಸವ ಮೂರ್ತಿಗಳನ್ನು 1968ರಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಕೋದಂಡರಾಮ ಸ್ವಾಮಿಯ ಮೂಲ ಮೂರ್ತಿಗಳನ್ನು 1980ರಲ್ಲಿ ಪ್ರತಿಷ್ಠಾಪಿಸಲಾಯಿತು. ಸುದರ್ಶನ ಆಳ್ವಾರ್ ವಿಗ್ರಹವನ್ನು 1980ರ ಅಂತ್ಯ ಭಾಗದಲ್ಲಿ ಪ್ರತಿಷ್ಠಾಪಿಸಿದರೆ ಅಂಬೆಗಾಲು ಕೃಷ್ಣ ಅಥವಾ ಲಡ್ಡು ಕೃಷ್ಣ ಎನ್ನುವ ನವನೀತ ಕೃಷ್ಣನ ವಿಗ್ರಹವನ್ನು 2005ರಲ್ಲಿ ಪ್ರತಿಷ್ಠಾಪಿಸಲಾಯಿತು.
ಉತ್ಸವಗಳು
ದೇವಸ್ಥಾನದ ಉತ್ಸವಗಳಲ್ಲಿ ಮಾರ್ಚ್‌ನಲ್ಲಿ ನಡೆಯುವ ಬ್ರಹ್ಮೋತ್ಸವವು ಪ್ರಮುಖವಾದುದು. ಹತ್ತು ದಿನಗಳ ವೈಭವದ ಉತ್ಸವದ ಕೇಂದ್ರ ಬಿಂದು ರಥಯಾತ್ರೆ. ಇಲ್ಲಿ ನಡೆಯುವ ಇತರ ಮುಖ್ಯ ಹಬ್ಬಗಳೆಂದರೆ ಶ್ರೀರಾಮ ನವಮಿ, ವೈಕುಂಠ ಏಕಾದಶಿ, ಊಂಜಲ್ ಉತ್ಸವ, ಕೃಷ್ಣ ಜನ್ಮಾಷ್ಟಮಿ, ಗರುಡ ಉತ್ಸವ ಮುಂತಾದವು. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಸುಮಾರು 250 ದೊಡ್ಡ ಮತ್ತು ಸಣ್ಣ ಉತ್ಸವಗಳು ನಡೆಯುತ್ತವೆ. ಜನ್ಮಾಷ್ಟಮಿ ಸಂದರ್ಭದಲ್ಲಿ ಒಂದು ಲಕ್ಷದಷ್ಟು ಭಕ್ತರು ದರ್ಶನಕ್ಕೆ ಬರುತ್ತಾರೆ. ವೈಕುಂಠ ಏಕಾದಶಿಯಂದು 50 ಸಾವಿರಕ್ಕೂ ಹೆಚ್ಚು ಭಕ್ತರು ಭಗವಂತನ ದರ್ಶನ ಪಡೆಯುತ್ತಾರೆ. ಕುತೂಹಲವೆಂದರೆ, ದಕ್ಷಿಣ ಭಾರತ ಮತ್ತು ಉತ್ತರ ಭಾರತದ ದಿನಗಳಿಗೆ ಹೊಂದಿಕೆಯಾಗು ವಂತೆ ಎರಡು ಹನುಮಾನ್ ಜಯಂತಿಗಳನ್ನು ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.

ಜನ್ಮಾಷ್ಟಮಿ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ರಸಿಕರ ಮನತಣಿಸುತ್ತದೆ. ಕೃಷ್ಣ ವೇಷ ಸ್ಪರ್ಧೆಗಳಲ್ಲಿ ಅಸಂಖ್ಯ ಮಕ್ಕಳು ಪಾಲ್ಗೊಳ್ಳುತ್ತಾರೆ ಎಂದು ಪ್ರಧಾನ ಅರ್ಚಕರಾದ ಬಾಬು ಭಟ್ಟರ್ ಎಂದೇ ಖ್ಯಾತರಾದ ಶ್ರೀ ಮಾಧವನ್ ನರಸಿಂಹ ಭಟ್ಟರ್ ಹೇಳುತ್ತಾರೆ.
ಈ ದೇವಸ್ಥಾನದ ವಿಶೇಷ ಸೇವೆ – ಮಕ್ಕಳಿಲ್ಲದವರು ಮಗು ಪಡೆಯುವ ಆಶಯದಿಂದ ಸಂತಾನ ಪ್ರಾಪ್ತಿ ಸಂಕಲ್ಪ ಮಾಡಿ ತೊಟ್ಟಿಲು ಕಟ್ಟುತ್ತಾರೆ.
ದೇವಸ್ಥಾನದ ದಿನಂಪ್ರತಿಯ ಕಾರ್ಯಕ್ರಮ ಇಂತಿದೆ: ಬೆಳಗ್ಗೆ 7 ಗಂಟೆಗೆ ಸುಪ್ರಭಾತ. 9 ಗಂಟೆಗೆ ಮಹಾಭಿಷೇಕ ಮತ್ತು ಅಪರಾಹ್ನ 12ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ಸಂಜೆ 6ಕ್ಕೆ ವಿಷ್ಣು ಸಹಸ್ರನಾಮ, ಇದರ ನಂತರ ತಿರುವರಾರಾಧನ ಮತ್ತು ರಾತ್ರಿ 8-30ಕ್ಕೆ ಸಂಧ್ಯಾ ಆರತಿ, ಪ್ರಸಾದ ವಿನಿಯೋಗ. ರಾತ್ರಿ 9 ಏಕಾಂತ ಸೇವೆ ಸಮಯ.






Leave a Reply