ನಂಜನಗೂಡಿನಿಂದ ಚಾಮರಾಜನಗರಕ್ಕೆ ಹೋಗುವಾಗ ನಂಜನಗೂಡಿನಿಂದ 10 ಕಿ.ಮೀ. ಬಂದಾಗ ಬದನವಾಳು ಎಂಬ ಗ್ರಾಮವು ಸಿಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ 5 ಕಿ.ಮೀ. ಸಾಗಿದರೆ ಸಿಗುವ ಗ್ರಾಮವೇ ಕೌಂಡಿನ್ಯ ಮಹರ್ಷಿಯ ತಪೋಭೂಮಿ, ಪವಾಡ ಪುರುಷ ಶ್ರೀ ವೇಣುಗೋಪಾಲಸ್ವಾಮಿ ನೆಲೆಸಿರುವ “ಶ್ರೀಕ್ಷೇತ್ರ ಹೆಮ್ಮರಗಾಲ”.
ಹೆಮ್ಮರಗಾಲ ಗ್ರಾಮದ ಹೆಸರಿನ ಹಿನ್ನೆಲೆ:
ಈ ಊರಿನ ಹೆಸರಿನ ಬಗ್ಗೆ ಪ್ರಚಲಿತದಲ್ಲಿರುವ ಮಾಹಿತಿಯೆಂದರೆ, ಹಿಂದೆ ಈ ಊರಿರುವ ಪ್ರದೇಶದಲ್ಲಿ ಬೃಹದಾಕಾರವಾದ ಮರಗಳಿಂದ ಕೂಡಿದ ದಟ್ಟಾರಣ್ಯವಿತ್ತು. ಪಕ್ಕದಲ್ಲೇ ಗುಂಡ್ಲು ಎಂಬ ನದಿಯು ಸದಾ ತುಂಬಿ ಹರಿಯುತ್ತಿತ್ತು. ಶ್ರೀಕೌಂಡಿನ್ಯ ಮಹರ್ಷಿಗಳು ತಪಸ್ಸುಗೈದು ಸಿದ್ಧಿ ಪಡೆದ ಮೇಲೆ ಇಲ್ಲೊಂದು ಊರನ್ನು ಸ್ಥಾಪಿಸಿ ತನ್ನ ತಪಸ್ಸಿದ್ಧಿಯ ನೆನಪಿಗಾಗಿ ಹೆಮ್ಮರಗಳಿಂದ ಕೂಡಿದ ಈ ಪ್ರದೇಶ “ಹೆಮ್ಮರಗಾಲವಾಗಿ ಸೂರ್ಯಚಂದ್ರ ಬಾನು ಭುವಿ ಇರುವವರೆಗೂ ಹೆಮ್ಮರವಾಗಿ ಬೆಳೆದು ಕೀರ್ತಿ ಪತಾಕೆಯನ್ನು ಹಾರಿಸಲಿ” ಎಂದು ಹರಸಿದರೆಂದು ಪ್ರತೀತಿ ಇದೆ.
ಇನ್ನೊಂದು ಮೂಲದ ಪ್ರಕಾರ ಹಿಂದೆ ಈ ಪ್ರದೇಶದ ಸುತ್ತ ಮುತ್ತಲಿನಲ್ಲಿ ನರಭಕ್ಷಕ ದೈತ್ಯ ಮಾನವನೊಬ್ಬ ವಾಸಿಸುತ್ತಿದ್ದನಂತೆ, ಅವನು ತನ್ನ ಆಹಾರಕ್ಕೆ ಜನರನ್ನು, ಸಾಧು ಸಂತರನ್ನು, ದನಕರುಗಳನ್ನು ಹಿಡಿದು ತಿನ್ನುತ್ತಿದ್ದನಂತೆ. ಈ ದಾನವನ ಹಿಂಸೆಯನ್ನು ತಾಳಲಾರದೆ ಜನರು ಕೌಂಡಿನ್ಯ ಮಹರ್ಷಿಯನ್ನು ಪ್ರಾರ್ಥಿಸಿದರು. ಜನರ ಅಳಲನ್ನು ಆಲಿಸಿದ ಮಹರ್ಷಿಗಳು ಬಾಲಗೋಪಾಲನಲ್ಲಿ ಬಿನ್ನವಿಸಿಕೊಳ್ಳುತ್ತಿರುವಾಗ ಅಶರೀರವಾಣಿಯೊಂದು “ಬೆಳಗಾಗುವುದರೊಳಗೆ ಆ ಅಸುರನು ಸಂಹಾರವಾಗಿರುತ್ತಾನೆ” ಎಂದು ಹೇಳಿತಂತೆ. ಅದರಂತೆ ಬೆಳಗಾಗುವುದರೊಳಗೆ ಆ ದುಷ್ಟನ ಸಂಹಾರವಾಗಿತ್ತು. ಹೀಗೆ ಸಂಹಾರವಾದ ನರಭಕ್ಷಕನ ತಲೆ ಬಿದ್ದ ಸ್ಥಳಕ್ಕೆ ವಾಮಶಿರೋನಗರ (ಈಗಿನ ಹೆಡತಲೆ), ಹೆಮ್ಮರದಂತಿದ್ದ ಕಾಲು ಬಿದ್ದ ಸ್ಥಳಕ್ಕೆ ಹೆಮ್ಮರಗಾಲ ಎಂಬ ಹೆಸರು ಬಂದಿತೆಂಬ ಪ್ರತೀತಿ ಇದೆ.
ದೇವಾಲಯದ ಇತಿಹಾಸ

ಈ ದೇವಾಲಯವು ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿಗಳ ಕುರುಹು. ಈ ದೇವಾಲಯವನ್ನು ಸುಮಾರು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದಾಗಿ ತಿಳಿದು ಬರುತ್ತದೆ. ಈ ಪ್ರದೇಶವು ಗಂಗರಸರ ಆಳ್ವಿಕೆಗೆ ಒಳಪಟ್ಟಿದ್ದ ಸಮಯದಲ್ಲಿ ಒಮ್ಮೆ ಗಂಗರಸರು ಯುದ್ಧಕ್ಕೆ ಹೊರಡುವ ಹಿಂದಿನ ದಿನ, ಗಂಗರಸನ ಕನಸಿನಲ್ಲಿ ಶ್ರೀಕೃಷ್ಣನು ಕಾಣಿಸಿಕೊಂಡು ನಾಳಿನ ಯುದ್ಧದಲ್ಲಿ ನೀನು ವಿಜಯಶಾಲಿಯಾಗಿ ಹಿಂದಿರುಗುತ್ತೀಯ, ಹಾಗೆಯೇ ಹಿಂದಿರುಗಿ ಬರುವಾಗ ನಿನ್ನ ರಥದ ಚಕ್ರ ಎಲ್ಲಿ ನಿಲ್ಲುತ್ತದೋ, ಅಲ್ಲಿ ಕೌಂಡಿನ್ಯರೆಂಬ ಮಹಾತಪಸ್ವಿಗಳಿದ್ದು, ಅವರ ಆಣತಿಯಂತೆ ಅಲ್ಲೊಂದು ಶ್ರೀ ಕೃಷ್ಣದೇವಾಲಯವನ್ನು ನಿರ್ಮಿಸಿ, ಮುನಿಗಳ ಕೈಯಲ್ಲೇ ನನ್ನನ್ನು ಪ್ರತಿಷ್ಠಾಪಿಸು ಎಂದು ಹೇಳಿದನಂತೆ. ಆ ಹಿಂದಿನ ರಾತ್ರಿಯ ಕನಸಿನಂತೆ ಗಂಗರಸ ಯುದ್ಧದಲ್ಲಿ ಜಯಶಾಲಿಯಾಗಿ ಕೌಂಡಿನ್ಯ ಮಹರ್ಷಿಯ ಆಣತಿಯಂತೆ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯವನ್ನು ಈ ಪ್ರದೇಶದಲ್ಲಿ ನಿರ್ಮಿಸಿದರೆಂಬ ಪ್ರತೀತಿಯಿದೆ.
ಸ್ವಾಮಿಯ ಮಹಿಮೆ
ಈ ಪ್ರದೇಶವನ್ನು ಆಳಿದ ಚೋಳ ಮಹಾರಾಜನಿಗೆ 12 ಹೆಣ್ಣು ಮಕ್ಕಳಿದ್ದು, ಈ ಕ್ಷೇತ್ರದ ಮಹಿಮೆಯನ್ನು ಅರಿತು ಕುಟುಂಬ ಸಮೇತನಾಗಿ ಬಂದು ಶ್ರೀ ವೇಣುಗೋಪಾಲನಲ್ಲಿ ಪುತ್ರ ಸಂತಾನಕ್ಕಾಗಿ ಪ್ರಾರ್ಥಿಸುತ್ತಾನೆ. ಈ ಪ್ರಾರ್ಥನೆಯ ಅನಂತರ ಪಟ್ಟ ಮಹಿಷಿಯು ಗರ್ಭಧರಿಸಿ ನವಮಾಸ ತುಂಬಲು ಅರಮನೆಯಲ್ಲಿ ಎಲ್ಲೆಲ್ಲೂ ಸಂಭ್ರಮ, ಸಡಗರದ ವಾತಾವರಣ. ಆದರೆ ಅವರ ನಿರೀಕ್ಷೆಯಂತೆ ಗಂಡಾಗದೆ ಹೆಣ್ಣು ಮಗು ಜನಿಸಲು ಕುಪಿತಗೊಂಡ ರಾಜನು ಮಹಿಷಿಯನ್ನು ಕಠೋರವಾಗಿ ಮೂದಲಿಸುತ್ತಾನೆ. ಇದರಿಂದ ಮನನೊಂದ ರಾಣಿ ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿ, ಕೊನೆಯ ಪ್ರಾರ್ಥನೆಗಾಗಿ ಶ್ರೀ ಸ್ವಾಮಿಯನ್ನು ಬಿನ್ನವಿಸಿಕೊಳ್ಳಲು ಶ್ರೀಕ್ಷೇತ್ರಕ್ಕೆ ಬಂದು ಶ್ರೀ ವೇಣುಗೋಪಾಲಸ್ವಾಮಿಯಲ್ಲಿ ಮನಕರಗುವಂತೆ ಪ್ರಾರ್ಥಿಸುತ್ತಾಳೆ. “ನನ್ನ ಸ್ವಾಮಿ ಬೆಳಗಾಗುವ ವೇಳೆಗೆ ಈ ಹೆಣ್ಣು ಮಗು ಗಂಡಾಗದಿದ್ದರೆ ಈ ದೇಹವನ್ನು ನಿನಗೆ ಅರ್ಪಿಸುತ್ತೇನೆ’ ಎಂದು ಸವಾಲು ಹಾಕಿ ಅಹೋರಾತ್ರಿ ಮಹಾದ್ವಾರದಲ್ಲಿ ಅನುಗ್ರಹಕ್ಕೆ ಕಾಯುತ್ತಾಳೆ.
ಮರುದಿನ ಬೆಳಗಿನ ಜಾವ ಬ್ರಾಹ್ಮಿಲಗ್ನದಲ್ಲಿ ಭಗವಂತನ ಪಾದದಲ್ಲಿ ಮಿಂಚಿನ ರೂಪದಲ್ಲಿ ಬೆಳಕು ಬಂದಿತು. ಇವಳ ಭಕ್ತಿಗೆ ಮೆಚ್ಚಿದ ವೇಣುಗೋಪಾಲನು ಸಂತಾನ ಗೋಪಾಲನಾಗಿ ಹೆಣ್ಣು ಶಿಶುವನ್ನು ಗಂಡಾಗಿ ಮಾಡಿದನು. ಈ ಪವಾಡವನ್ನು ಕಂಡು ಬೆರಗಾದ ರಾಣಿ “ಎನ್ನ ಗೋಪಾಲ, ಗಂಡು ಸಂತಾನಕ್ಕೆ ಇಷ್ಟು ಕಾಡಿಸಿ ಬೇಡಿಸಿದೆಯೋ ಎನ್ನಪ್ಪ, ನೀನು ನಿಜಕ್ಕೂ ಹುಚ್ಚಪ್ಪ ಕಣೋ” ಎಂದು ಆನಂದಭರಿತಳಾಗಿ ಹೇಳುತ್ತಾಳೆ. ತದನಂತರ ಈ ಪ್ರದೇಶವು ಮೈಸೂರಿನ ಅರಸರ ಆಳ್ವಿಕೆಗೆ ಒಳಪಟ್ಟಿತು. ಯುವ ಪಟ್ಟಾಭಿಷೇಕಕ್ಕೆ ಗಂಡು ಸಂತತಿಯಿಲ್ಲದೆ ಕೊರಗುತ್ತಿದ್ದ ಯದುವಂಶದ ಅರಸ ಕಂಠೀರವ ನರಸಿಂಹರಾಜ ಒಡೆಯರು ಹೆಮ್ಮರಗಾಲದ ಮಹಾಮಹಿಮನಾದ ಸಂತಾನ ಗೋಪಾಲನ ಮಹಿಮೆಯನ್ನು ತಿಳಿದು ಈ ಸನ್ನಿಧಿಗೆ ಬಂದು ಪುತ್ರ ಸಂತಾನಕ್ಕಾಗಿ ಬೇಡಲು ಶ್ರೀ ಸ್ವಾಮಿಯವರ ಆಶೀರ್ವಾದದಿಂದ ಗಂಡು ಸಂತಾನ ಪ್ರಾಪ್ತವಾಯಿತು. ಇದರಿಂದ ಉಲ್ಲಾಸಗೊಂಡ ಅರಸರು ತಮ್ಮ ಮಗುವಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದು ಈ ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿದೆ.

ಅಲ್ಲದೆ ಶ್ರೀ ರಾಮಾನುಜಾಚಾರ್ಯರು ಪಂಚನಾರಾಯಣದಲ್ಲಿ ಒಂದಾದ ಗುಂಡ್ಲುಪೇಟೆಯ ವಿಜಯ ನಾರಾಯಣ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಈ ಮಾರ್ಗದಲ್ಲಿ ಬಂದಾಗ ಶ್ರೀ ಕ್ಷೇತ್ರದ ಮಹಿಮೆಯನ್ನು ಅರಿತು ಶ್ರೀ ವೇಣುಗೋಪಾಲಸ್ವಾಮಿಯ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರೆಂಬ ಪ್ರತೀತಿಯಿದೆ.
ವಾಸ್ತುಶಿಲ್ಪ
ಶ್ರೀಕ್ಷೇತ್ರ ಹೆಮ್ಮರಗಾಲ ಗ್ರಾಮದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿಯು ಅದ್ಭುತ ಶಕ್ತಿಯುತವಾದ ದೇವರು. ಬೇಡಿ ಬಂದ ಭಕುತರ ಇಷ್ಟಾರ್ಥಗಳನ್ನು ನೆರವೇರಿಸುವ ಪವಾಡ ಪುರುಷ ಈ ಬಾಲಗೋಪಾಲ. ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಚೋಳರ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. ಚಚ್ಚೌಕಾಕಾರ, ವಿಶಾಲವಾದ ಜಗಲಿಯ ಮೇಲೆ (ಅಡಿಪಾಯ) ನಿರ್ಮಿತವಾಗಿರುವ ದೇವಾಲಯವು ಸುಂದರವಾಗಿಯೂ, ಅತ್ಯಂತ ವಿಶಾಲವಾಗಿಯೂ ಇದೆ. ಈ ದೇವಾಲಯದ ಸುತ್ತ ಸುಭದ್ರವಾದ ಕೋಟೆ ಇದೆ. ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಅಲ್ಲಿಂದ ಮುಖ್ಯದ್ವಾರದ ಮುಖ ಮಂಟಪಕ್ಕೆ ಬಂದರೆ ಅಲ್ಲಿ ನಮ್ಮನ್ನು ಸ್ವಾಗತಿಸುವವರು ವೈಕುಂಠದಲ್ಲಿ ದ್ವಾರಪಾಲಕರಾದ ಜಯ ವಿಜಯರ ಸುಂದರ ಕೆತ್ತನೆಯ ಶಿಲ್ಪ. ಅಲ್ಲಿಂದ ತುಸು ದೂರದಲ್ಲೇ ಇತ್ತೀಚೆಗಷ್ಟೇ ನಿರ್ಮಿತವಾದ ಗರುಡಗಂಬವಿದೆ. ದೇವಸ್ಥಾನದ ಬಲಭಾಗದಿಂದ ಪ್ರದಕ್ಷಿಣೆ ಮಾಡುತ್ತಾ ಹೋದರೆ ಇದರ ಹಿಂಭಾಗದಲ್ಲಿ ಪ್ರಾಚೀನ ಕಾಲದ ಹುತ್ತವೊಂದಿದೆ.

ಹಾಗೆ ದೇವಸ್ಥಾನದ ಎಡಭಾಗದ ಪಕ್ಕದಲ್ಲಿ ತುಳಸಿ ಕಟ್ಟೆ ಇದ್ದು, ಕೃಷ್ಣೋತ್ಸವದಂದು ಕೃಷ್ಣ-ರುಕ್ಮಿಣಿ-ಸತ್ಯಭಾಮರಿಗೆ ವಿವಾಹ ಮಹೋತ್ಸವವನ್ನು ನೆರವೇರಿಸಲು ಅಲ್ಲೊಂದು ಸುಂದರ ಕೆತ್ತನೆಯ ಚೆಲುವಿನ ಚಿತ್ತಾರದ ಕಲ್ಯಾಣಿ ಹಾಸುಗಲ್ಲಿದೆ. ಅನಂತರ ದೇವಾಲಯವನ್ನು ಒಳಪ್ರವೇಶಿಸಿದಂತೆ ವಿಶಾಲವಾದ ಪ್ರಾಂಗಣ. ಅಲ್ಲಲ್ಲಿ ಸುಂದರವಾದ ಕೆತ್ತನೆಯ ಕಲ್ಲಿನ ಕಂಬಗಳಲ್ಲಿನ ಕಣ್ಮನ ಸೆಳೆಯುವ ಶಿಲ್ಪಗಳು. ಹಾಗೆ ಬಲಭಾಗದಿಂದ ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕುತ್ತಾ ಹೊರಟರೆ ಮೊದಲು ಸಿಗುವುದು ರುಕ್ಮಿಣಿ ಅಮ್ಮನವರ ಗುಡಿ. ಗರ್ಭಗುಡಿಯ ಎಡಭಾಗದಲ್ಲಿ ಸತ್ಯಭಾಮ ಅಮ್ಮನವರ ಗುಡಿ. ಅಷ್ಟಾಕ್ಷರ ಮಂಟಪದಲ್ಲಿ ಶ್ರೀದೇವಿ-ಭೂದೇವಿಯರ ಸಮೇತ ವರದರಾಜ ಸ್ವಾಮಿಯವರ ಉತ್ಸವಮೂರ್ತಿ ಇದೆ. ಸುಕನಾಸಿ ದ್ವಾರದ ಮೇಲ್ಭಾಗದಲ್ಲಿ ಯೋಗ ಪೀಠದಲ್ಲಿ ಕುಳಿತಿರುವ ಯೋಗನರಸಿಂಹ, ಸುಕನಾಸಿ ದರ್ಶಿಸಿ ಮುಂದೆ ನಡೆದರೆ ಕಾಣುವುದೇ ಗರ್ಭಗುಡಿ. ಅಲ್ಲಿ ಜಗದೊಡೆಯನಾದ ಶ್ರೀಕೃಷ್ಣ ಪುಟ್ಟ ಬಾಲಕನ ರೂಪದಲ್ಲಿ ನಯನ ಮನೋಹರ ಮೂರ್ತಿಯಾಗಿ ತ್ರಿಭಂಗಿಯಲ್ಲಿ ವೇಣುನಾದ ಮಾಡುತ್ತಾ ವೇಣುಗೋಪಾಲನಾಗಿ ಅರಸಿ ಬರುವ ಭಕ್ತರಿಗೆ ಅನುಗ್ರಹಿಸಲು ಬಾಲಗೋಪಾಲನಾಗಿ ನಿಂತಿರುವ ದಿವ್ಯ ಮೂರ್ತಿಯನ್ನು ಎಷ್ಟು ನೋಡಿದರೂ ಸಾಲದು. ಕ್ಷೇತ್ರ ಹೆಮ್ಮರಗಾಲದಲ್ಲಿ ನೆಲೆಸಿರುವ ಶ್ರೀ ಸ್ವಾಮಿಯನ್ನು ಕಣ್ಣಾರೆ ಕಂಡು ಪುನೀತರಾಗಬೇಕು. ಆಗಲೇ ದರ್ಶನ ಮಾತ್ರದಿಂದಲೇ ಸಕಲ ಪಾಪವನ್ನು ಕಳೆಯುವಂತಹ ತೇಜೋಮಯವಾದ ಮುದ್ದುಮುಖ, ರತ್ನ ಖಚಿತವಾದ ಉಡುದಾರ ಧರಿಸಿದ ನಡು, ಮುದ್ದು ಮುದ್ದಾದ ದುಂಡುಪಾದಗಳು, ವಿಶಾಲವಾದ ವಕ್ಷಸ್ಥಳ, ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸಲು ಮುಂಗಾಲಿನಲ್ಲಿರುವ ಸುದರ್ಶನ ಚಕ್ರ, ವಾತ್ಸಲ್ಯಭರಿತ ಕಣ್ಣುಗಳು, ವಜ್ರವೈಡೂರ್ಯಗಳಿಂದ ಕೂಡಿದ ಕಿರೀಟ ಧರಿಸಿ ನಿಂತಿರುವ ಮುಕುಂದನನ್ನು ನೋಡುವುದೇ ಒಂದು ಆನಂದ.






Leave a Reply