ಶ್ರೀಲ ಭಕ್ತಿ ವಿನೋದ ಠಾಕೂರ

ಶ್ರೀ ಚೈತನ್ಯ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅವತಾರ. ಅವರು ಜನ್ಮತಳೆದ ಸ್ಥಳ ನವದ್ವೀಪ, ಈ ಕ್ಷೇತ್ರ ಎಲ್ಲಿದೆ ಎಂಬ ಬಗ್ಗೆಯೇ ವಿವಾದಗಳಿತ್ತು. ಗಂಗೆಯ ಪಥ ಬದಲಾವಣೆಯ ಸಂದರ್ಭದಲ್ಲಿ ನವದ್ವೀಪ ಪ್ರದೇಶ ಮುಳುಗಿ ಹೋಗಿದೆ ಎಂಬುದು ಕೆಲವರ ವಾದವಾದರೆ, ಮಾಯಾಪುರದ ಬಳಿ ಇದ್ದ ನವದ್ವೀಪ ಎಂಬ ಹೆಸರಿನ ಸ್ಥಳವೇ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳ ಎಂದು ಕೆಲವರು ವಾದಕ್ಕೆ ಮುಂದಾಗುತ್ತಿದ್ದರು.

ಆದರೆ ನಿಜವಾದ ನವದ್ವೀಪ ನಗರಿ ಬೇರೆಯೇ ಆಗಿತ್ತು. ಅದು ಮುಸಲ್ಮಾನರ ಹಿಡಿತಕ್ಕೆ ಸೇರಿ ಹೋಗಿತ್ತು, ಕೃಷ್ಣಪ್ರಜ್ಞೆಯ ಹರಿಕಾರ ಶ್ರೀ ಚೈತನ್ಯ ಮಹಾಪ್ರಭುಗಳು ಜನ್ಮತಳೆದ ಪುಣ್ಯಭೂಮಿ ನವದ್ವೀಪ ನಗರಿಯನ್ನು ಪತ್ತೆ ಹಚ್ಚಿ ಆಡಳಿತಗಾರರ ಮನವೊಲಿಸಿ, ಬಂಗಾಳದ ಮನೆ-ಮನೆಗಳನ್ನು ತಟ್ಟಿ, ದೇಣಿಗೆ ಸಂಗ್ರಹಿಸಿ, ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನದಲ್ಲಿ ಭವ್ಯ ಹಾಗೂ ಸುಂದರವಾದ ಗೌರ ವಿಷ್ಣುಪ್ರಿಯ ಮಂದಿರವನ್ನು ನಿರ್ಮಿಸಿದ ಪುಣ್ಯ ಪುರುಷರೇ ಶ್ರೀಲ ಭಕ್ತಿ ವಿನೋದ ಠಾಕೂರರು. ಕೃಷ್ಣಪ್ರಜ್ಞೆಯ ಹರಿಕಾರರಾದ ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸಿದ ಇಸ್ಕಾನ್‌ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಗುರುವರ್ಯರಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರ ಪೂಜ್ಯ ತಂದೆಯವರೇ ಶ್ರೀಲ ಭಕ್ತಿವಿನೋದ ಠಾಕೂರರು.

ಶ್ರೀಲ ಭಕ್ತಿ ವಿನೋದ ಠಾಕೂರರನ್ನು ಕುರಿತು ಶ್ರೀಲ ಪ್ರಭುಪಾದರು ಹೀಗೆ ಹೇಳುತ್ತಾರೆ : ”ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಯಲ್ಲಿದ್ದ ಅವರು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿದ್ದರು. ಗೃಹಸ್ಥ ಜೀವನದಲ್ಲಿದ್ದರೂ ಕೃಷ್ಣಪ್ರಜ್ಞೆಯನ್ನು ಪೋಷಿಸುವುದರಲ್ಲಿ ಹಿಂದುಳಿದಿರಲಿಲ್ಲ. ಕೃಷ್ಣಪ್ರಜ್ಞೆ ಕುರಿತಂತೆ ಸರಿ ಸುಮಾರು ಒಂದು ನೂರು  ಪುಸ್ತಕಗಳನ್ನು ಬರೆದಿದ್ದರು. ಅದೇ ಸಮಯದಲ್ಲಿ ಹಲವಾರು ವಿಧಾನಗಳಲ್ಲಿ ಭಗವಂತನ ಸೇವೆ ಸಲ್ಲಿಸಿದರು. ಅದೇ ಅವರ ಜೀವನದ ವೈಶಿಷ್ಟ್ಯವಾಗಿತ್ತು, ಸರ್ಕಾರಿ ಸೇವೆಗೆ ಅವರ ದೈನಂದಿನ ಜೀವನದ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಕೇವಲ ನಾಲ್ಕು ತಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮಧ್ಯರಾತ್ರಿಯ ವೇಳೆಗೆ ಎದ್ದು ಬೆಳಗಿನವರೆಗೂ ಬರವಣಿಗೆಯಲ್ಲಿ ತೊಡಗಿರುತ್ತಿದ್ದರು.”

ಒಂದೆರಡು ಶತಮಾನದ ಹಿಂದಿನ ಪರಿಸ್ಥಿತಿಯತ್ತ ಒಮ್ಮೆ ಹಿಂದಿರುಗಿ ನೋಡಿದರೆ ಚೈತನ್ಯ ಮಹಾಪ್ರಭುಗಳಂತಹವರು ಪ್ರತಿಪಾದಿಸಿದ ಅದ್ಭುತ ಆಧ್ಯಾತ್ಮಿಕ ತತ್ವಜ್ಞಾನ ವೈಷ್ಣವ ನಂಬುಗೆ, ಜನಮಾನಸದಿಂದ ದೂರಾಗುವ ಹಂತ ತಲುಪಿತ್ತು. ಅಪಾರ ಜ್ಞಾನವುಳ್ಳ ಪಂಡಿತರೂ ಕೂಡ ಚೈತನ್ಯ ಮಹಾಪ್ರಭುಗಳು ಮುಂದಿಟ್ಟ ತತ್ವಜ್ಞಾನದ ನಿಜವಾದ ಅರಿವನ್ನು ಪಡೆಯಲಾಗಿರಲಿಲ್ಲ. ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಸಾಮಾನ್ಯ ಜನರಂತೂ ವೈಷ್ಣವ ನಂಬಿಕೆ ಉಳ್ಳವರನ್ನು ಸಮಾಜದ ಋಣದಲ್ಲಿ ಬದುಕುವ ಸೋಮಾರಿಗಳು, ತಮ್ಮ ಸೋಮಾರಿತನವನ್ನು ಮುಚ್ಚಿಕೊಳ್ಳಲು ವೈಷ್ಣವ ಸಂಪ್ರದಾಯ, ನಂಬುಗೆಯ ಆಶ್ರಯ ಪಡೆಯುತ್ತಿದ್ದಾರೆ ಎಂದು ನಿಂದಿಸುವ ಪರಿಸ್ಥಿತಿ ಇತ್ತು.

ವೇದ, ಉಪನಿಷತ್, ಪುರಾಣಗಳು ಹಾಗೂ ಶ್ರೀಮದ್ಭಾಗವತಮ್‌ನಲ್ಲಿನ ಉಲ್ಲೇಖಗಳೊಂದಿಗೆ ಶ್ರೀ ಚೈತನ್ಯ ಮಹಾಪ್ರಭು ಅವರ ದಿವ್ಯ ಸಂದೇಶದ ಆಧಾರದ ಮೇಲೆ ಕೃಷ್ಣಪ್ರಜ್ಞೆಯ ತತ್ವವನ್ನು ಪಂಡಿತರಿಗೂ, ಪಾಮರರಿಗೂ ಅರ್ಥವಾಗುವಂತೆ ಸರಳ ರೂಪದಲ್ಲಿ ಬರೆದು, ವೈಷ್ಣವ ಎನಿಸಿಕೊಳ್ಳುವುದು ಹೆಮ್ಮೆಯ ವಿಷಯ ಎನ್ನಿಸುವಂತೆ ಮಾಡಿದ ಮಹಾನುಭಾವರೇ ಶ್ರೀಲ ಭಕ್ತಿವಿನೋದ ಠಾಕೂರರು.

ಗೌರ ಮಂಡಲದ ಉಲಗ್ರಾಮ ಎಂಬಲ್ಲಿ 1838ರ ಸೆಪ್ಟೆಂಬರ್ 2 ರಂದು ಜನಿಸಿದ ಶ್ರೀಲ ಭಕ್ತಿವಿನೋದ ಠಾಕೂರರಿಗೆ ಮನೆಯವರಿತ್ತ ಹೆಸರು ಕೇದಾರನಾಥದತ್ತ. ಬಾಲ್ಯದಲ್ಲೇ ಕಷ್ಟಗಳ ಸರಮಾಲೆಯನ್ನೇ ಎದುರಿಸಿದ ಕೇದಾರನಾಥ ದತ್ತರ ಪಾಲನೆ, ಪೋಷಣೆ ನಡೆದಿದ್ದು ಅವರ ಮಾತಾಮಹರ (ತಾಯಿಯ ತಂದೆ) ಮನೆಯಲ್ಲಿ, ತಂದೆಯ ಮರಣಾನಂತರ ಕಲ್ಕತ್ತೆಗೆ ಬಂದರು. ಶಿಕ್ಷಣ ಮುಗಿದ ನಂತರ ದತ್ತರು ತಮ್ಮ ಪಿತಾಮಹರ ಆಶ್ರಯಕ್ಕೆ ಬಂದರು. ಕೇದಾರನಾಥ ದತ್ತರ ಪಿತಾಮಹ ರಾಜಾವಲ್ಲಭ ದತ್ತರು ಕಲ್ಕತ್ತೆಯಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದರು. ತಮ್ಮ ಅಂತಿಮ ದಿನಗಳನ್ನು ಅವರು ಒರಿಸ್ಸಾದಲ್ಲಿ ಕಳೆಯಲು ಬಯಸಿದ್ದರು. ಪಿತಾಮಹರ ಸೂಚನೆಯಂತೆ ಅವರ ಮರಣಾನಂತರ ದತ್ತರು ಒರಿಸ್ಸಾದ ಪ್ರಮುಖ ದೇವಾಲಯಗಳು, ಆಶ್ರಮಗಳನ್ನು ಸಂದರ್ಶಿಸಿದರು.

ನಂತರ ಕೇದಾರನಾಥರು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿ ಒರಿಸ್ಸಾ ರಾಜ್ಯದಲ್ಲೇ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಆರಂಭಿಸಿದರು. ನಂತರದ ದಿನಗಳಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ದತ್ತರನ್ನು ಬಂಗಾಲಕ್ಕೆ ವರ್ಗಾಯಿಸಲಾಯಿತು. ಅಲ್ಲಿನ ನಗರವೊಂದರಲ್ಲಿ ಅವರು ಶ್ರೀಮದ್ಭಾಗವತದ ಬಗ್ಗೆ ವಿದ್ವತ್ ಪೂರ್ಣ ಉಪನ್ಯಾಸ ನೀಡಿದರು. ಅವರ ಉಪನ್ಯಾಸದಿಂದ ಪ್ರೇರಿತರಾಗಿ ಸಾಕಷ್ಟು ಮಂದಿ ಶ್ರೀಮದ್ಭಾಗವತದ ಪ್ರತಿ ಪುಟದಲ್ಲಿ ಇರುವ ಅಮೂಲ್ಯ ಜ್ಞಾನವನ್ನು ಅರಿತುಕೊಂಡರು. ದತ್ತರು ಚಂಪಾರಣ್ಯದಲ್ಲಿದ್ದಾಗ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದ ಬ್ರಹ್ಮರಾಕ್ಷಸನ ಪೀಡೆಯನ್ನು ಶ್ರೀಮದ್ಭಾಗವತ ಪಠನದ ಮೂಲಕ ನಿವಾರಿಸಿದರು. ಪುರಿಯಲ್ಲಿದ್ದಾಗ ಜಗನ್ನಾಥ ಮಂದಿರದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ನಿಯಂತ್ರಿಸಿದರು. ವಾಮಾಚಾರ ಮಾರ್ಗದಿಂದ ಒಂದಿಷ್ಟು ಶಕ್ತಿ ಸಂಪಾದಿಸಿ ತಾನು ವಿಷ್ಣುವಿನ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಬಿಶಿಕಿಸೇನಾ ಎಂಬಾತನ ಮೋಸವನ್ನು ಬಯಲಿಗೆಳೆದು, ಆತನನ್ನು ಸೆರೆಮನೆಗೆ ತಳ್ಳಿದರು.

1877ರಲ್ಲಿ ಶ್ರೀಲ ಭಕ್ತಿವಿನೋದ ಠಾಕೂರರು “ಸಜ್ಜನ-ತೋಷಿಣಿ” ಎಂಬ ಆಧ್ಯಾತ್ಮಿಕ ಪತ್ರಿಕೆಯನ್ನು ಹೊರತಂದರು. 1885ರಲ್ಲಿ ಶುದ್ಧ ಹರಿಭಕ್ತಿಯ ಪ್ರಚಾರಕ್ಕಾಗಿ “ಶ್ರೀ ವಿಶ್ವ ವೈಷ್ಣವ ರಾಜ-ಸಭೆ” ಯನ್ನು ಸ್ಥಾಪಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳ ಯೋಗ ಭೂಮಿಯನ್ನು ಸಂದರ್ಶಿಸುವ ಮಹದಾಸೆ ಅವರಿಗಿತ್ತು. ಅದೇ ವೇಳೆಗೆ ಅವರನ್ನು ನವದ್ವೀಪದಿಂದ 25 ಕಿ.ಮೀ. ದೂರದಲ್ಲಿರುವ ಕೃಷ್ಣನಗರಕ್ಕೆ ವರ್ಗಾಯಿಸಲಾಯಿತು. ಈ ಹಂತದಲ್ಲಿ ಅವರು ಸತತ ಪ್ರಯತ್ನದಿಂದ
ಶ್ರೀ ಚೈತನ್ಯ ಮಹಾಪ್ರಭುಗಳ ಯೋಗ ಭೂಮಿ (ಜನ್ಮಸ್ಥಳ) ಯನ್ನು ಪತ್ತೆಹಚ್ಚಿದರು. ಬಂಗಾಲದ ಮನೆ-ಮನೆಗೆ ತೆರಳಿ ದೇಣಿಗೆ ಸಂಗ್ರ ಹಿಸಿ ನವದ್ವೀಪದಲ್ಲಿ ಗೌರ ವಿಷ್ಣು ಪ್ರಿಯ ದೇವಾಲಯವನ್ನು ನಿರ್ಮಿಸಿದರು.

1908 ರಲ್ಲಿ ಕೇದಾರನಾಥ ದತ್ತರು ಶ್ರೀಲ ಗೌರ ಕಿಶೋರದಾಸ ಬಾಬಾಜಿ ಅವರಿಂದ ಬಾಬಾಜಿ ದೀಕ್ಷೆ ಪಡೆದು ಶ್ರೀಲ ಭಕ್ತಿವಿನೋದ ಠಾಕೂರರೆನಿಸಿಕೊಂಡರು. 1910ರಲ್ಲಿ ಲೌಕಿಕ ಪ್ರಪಂಚದಿಂದ ಸಂಪೂರ್ಣ ದೂರವಾಗಿ ಯೋಗ ಸಮಾಧಿ ಸ್ಥಿತಿಯಲ್ಲಿ ಉಳಿದರು. 1914ರ ಶುಭ ದಿನವೊಂದರಲ್ಲಿ ಅವರು ಗೋಲೋಕವನ್ನು ಸೇರಿದರು. ಅವರು ಪರಂಧಾಮವನ್ನು ಹೊಂದಿದ ದಿನ ಶ್ರೀ ಗಧಾದರರು ಅಂತರ್ಧಾನಗೈದಿದ್ದ ದಿನವೇ ಆಗಿದೆ. ಶೀಲ ಭಕ್ತಿವಿನೋದ ಠಾಕೂರರು ತಮ್ಮ ಜೀವಿತಾವಧಿಯಲ್ಲಿ ವೇದಾಂತ ಸೂತ್ರ, ಕಲ್ಯಾಣ ಕಲ್ಪತರು, ಶ್ರೀಕೃಷ್ಣ ಸಂಹಿತೆ ಸೇರಿದಂತೆ 100 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಶ್ರೀ ಚೈತನ್ಯ ಮಹಾಪ್ರಭುಗಳು ನೀಡಿದ್ದ ಕೃಷ್ಣಪ್ರಜ್ಞೆ ಈ ಮಹಾಮಂತ್ರ ಜಗತ್ತಿನಾದ್ಯಂತ ಹರಡಿದ ಮೂಲ ಪುರುಷರಾದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi