ಶ್ರೀಲ ಮಾಧವೇಂದ್ರ ಪುರಿ

ಶ್ರೀಲ ಮಾಧವೇಂದ್ರ ಪುರಿ ಅವರು ಶ್ರೀ ಚೈತನ್ಯರ ಆಧ್ಯಾತ್ಮಿಕ ಗುರುಗಳಾದ ಅದ್ವೈತ ಆಚಾರ್ಯ ಮತ್ತು ಈಶ್ವರ ಪುರಿ ಅವರ ಗುರುಗಳು. ಮಾಧವೇಂದ್ರರಿಗೆ ಮಾಧ್ವ ಸಂಪ್ರದಾಯದಲ್ಲಿ ದೀಕ್ಷೆ ನೀಡಿದವರು ಶ್ರೀ ಲಕ್ಷ್ಮೀಪತಿ ತೀರ್ಥರು. ಇತರೆ ಆಚಾರ್ಯರಂತೆ ಮಾಧವೇಂದ್ರರೂ ಹಲವಾರು ವರ್ಷಗಳ ಕಾಲ ದೇಶ ಪರ್ಯಟನೆ ಮಾಡಿದರು. ಕೊನೆಗೆ ಬಹುಕಾಲ ಅವರು ವೃಂದಾವನದಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ಗೋಪಾಲ ಎಂಬ ಕೃಷ್ಣ ವಿಗ್ರಹ ದೊರೆಯಿತು.

ಈ ವಿಗ್ರಹವನ್ನು ಇಂದಿಗೂ ರಾಜಸ್ಥಾನದ ನಾಥದ್ವಾರದಲ್ಲಿ “ಶ್ರೀನಾಥಜಿ” ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದೆ. ಒಮ್ಮೆ ಮಾಧವೇಂದ್ರರು ಗೋಪಾಲ ವಿಗ್ರಹದ ಪೂಜೆಗಾಗಿ ಸಂಚರಿಸುತ್ತಿದ್ದರು. ಆಗ ಅವರು ರೇಮುನದ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದರು.

ಅಲ್ಲಿ ಗೋಪಿನಾಥ ದೇವರಿಗೆ ನಿತ್ಯ ಸುಗಂಧಭರಿತ, ರುಚಿಕರವಾದ ಪರಮಾನ್ನವನ್ನು ಅರ್ಪಿಸಲಾಗುತ್ತಿತ್ತು. ಮಾಧವೇಂದ್ರರಿಗೆ ಆ ಸಿಹಿಯ ರುಚಿ ನೋಡಿ, ಅದನ್ನು ಹೇಗೆ ತಯಾರಿಸುತ್ತಾರೆಂಬುದನ್ನು ತಿಳಿದುಕೊಳ್ಳುವ ಮನಸ್ಸಾಯಿತು. ಅದೇ ರೀತಿಯ ಸಿಹಿಯನ್ನು ಗೋಪಾಲ ವಿಗ್ರಹಕ್ಕೆ ಅರ್ಪಿಸುವುದು ಅವರ ಉದ್ದೇಶವಾಗಿತ್ತು.

ಆದರೆ ತಕ್ಷಣ, ಕೃಷ್ಣನಿಗೆ ಅರ್ಪಿಸಲು ಸಿದ್ಧಪಡಿಸಿದ್ದ ಸಿಹಿಯ ರುಚಿ ನೋಡಲು ಆಸೆ ಪಟ್ಟೆನೆಲ್ಲಾ ಎಂದು ಅವರ ಮನಸ್ಸಿಗೆ ನೋವಾಯಿತು. ಒಡನೆಯೇ ತೀವ್ರ ಅವಮಾನವೆನಿಸಿತು. ತಕ್ಷಣ ದೇವಾಲಯದಿಂದ ಹೊರಬಂದ ಮಾಧವೇಂದ್ರರು, ಸಮೀಪದ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಹರೇಕೃಷ್ಣ ಮಂತ್ರ ಜಪ ಆರಂಭಿಸಿದರು.

ತನಗಾಗಿ ಸಿದ್ಧಪಡಿಸಿದ ನೈವೇದ್ಯಕ್ಕೆ ಆಸೆಪಟ್ಟೆ ಮಾಧವೇಂದ್ರರ ಬಗ್ಗೆ ಗೋಪಿನಾಥನಿಗೆ ಕೋಪ ಬರಲಿಲ್ಲ. ಬದಲಾಗಿ ಗೋಪಾಲನ ಬಗ್ಗೆ ಅವರಿಗಿರುವ ಭಕ್ತಿ ಕಂಡು ಸಂತೋಷವಾಯಿತು. ಇದೇ ವೇಳೆಗೆ ಅರ್ಚಕರು ಗೋಪಿನಾಥನಿಗೆ ಅರ್ಪಿಸಿದ್ದ ನೈವೇದ್ಯದ ಪಾತ್ರೆಗಳನ್ನು ತೆಗೆದಿಡಲು ಗರ್ಭಗುಡಿಗೆ ಬಂದರು. ಆಗ ಗೋಪಿನಾಥನು ನೈವೇದ್ಯದ ಜತೆಗಿದ್ದ ಪರಮಾನ್ನವನ್ನು ತನ್ನ ವಿಗ್ರಹದ ಹಿಂದೆ ಅಡಗಿಸಿಟ್ಟನು! ಅಷ್ಟೇ ಅಲ್ಲ, ಆ ಅರ್ಚಕರಿಗೆ ಕನಸಿನಲ್ಲಿ ಕಾಣಿಸಿಕೊಂಡು, ಆ ಸಿಹಿಯನ್ನು ಮಾಧವೇಂದ್ರ ಪುರಿಗಳಿಗೆ ನೀಡುವಂತೆ ಆದೇಶಿಸಿದನು.

ನಂತರ ಅರ್ಚಕರಿಂದ ಆ ಸಿಹಿಯನ್ನು ಪಡೆದ ಮಾಧವೇಂದ್ರರು ಅದನ್ನು ಅನನ್ಯ ಆಧ್ಯಾತ್ಮಿಕ ಭಾವನೆಯಿಂದ ಕುಡಿದರು. ನಂತರ ಒಂದಿಷ್ಟನ್ನು ಹಾಗೆಯೇ ಉಳಿಸಿಕೊಂಡು ನಿತ್ಯ ಸ್ವಲ್ಪ ಸ್ವಲ್ಪವೇ ಸೇವಿಸುತ್ತಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi