ಶ್ರೀಲ ನಿತ್ಯಾನಂದ ಪ್ರಭು

ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಈ ಜಗತ್ತಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ನಾಮ ಸಂಕೀರ್ತನೆಯನ್ನು ಎಲ್ಲೆಡೆಯೂ ಹರಡಿದರು.

ಇವರಂತೆಯೇ ಶ್ರೀಲ ನಿತ್ಯಾನಂದ ಪ್ರಭುಗಳ ಅವತಾರವಾಗಿ ಲೋಕ ಕಲ್ಯಾಣವಾಯಿತು. ಇವರ ಪ್ರೇಮ ಭಕ್ತಿಯ ಕೀರ್ತಿಯು ಆಚಂದ್ರಾರ್ಕವಾಗಿ ಬೆಳಗಿತು. ಪ್ರಸ್ತುತ ಆ ಸಂದರ್ಭದಲ್ಲಿ ಸೂರ್ಯ ಚಂದ್ರರಿಬ್ಬರೂ ಏಕಕಾಲದಲ್ಲಿ ಉದಿಸಿದ್ದಾರೆ ಎಂಬ ಮಾತು ಜನಜನಿತವಾಗಿತ್ತು. ಶ್ರೀ ಚೈತನ್ಯರು ಶ್ರೀಕೃಷ್ಣನ ಅವತಾರವಾದರೆ, ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಬಲರಾಮನ ಅವತಾರವಾಗಿದ್ದರು.

ರಾಧಾ ದೇಶದ ಏಕಚಕ್ರಾ ಎಂಬ ಗ್ರಾಮದಲ್ಲಿ ಹಡಯೋಜ ಮತ್ತು ಪದ್ಮಾವತಿಯೆಂಬ ಆದರ್ಶ ದೈವೀಕ ಭಕ್ತ ದಂಪತಿಗಳಿಗೆ ಶ್ರೀ ನಿತ್ಯಾನಂದ ಪ್ರಭುಗಳು ಜನಿಸಿದರು. ಸಾಗರದ ಗರ್ಭದಿಂದ ಚಂದ್ರನುದಿಸಿದಂತೆ ಈ ಭೂಮಿಯ ಮೇಲೆ ಶ್ರೀ ಕೃಷ್ಣನ ದೈಮೀಕ ಲೀಲೆಗಳನ್ನು ಪುನರ್‌ ತೋರಿಸಲೆಂದೇ ಶ್ರೀ ನಿತ್ಯಾನಂದರ ಜನನವಾಯಿತು. ಈ ಮಗು ಜನಿಸಿದ ಸಂದರ್ಭದಲ್ಲಿ ಇಡೀ ರಾಧಾ ದೇಶದಲ್ಲಿ (ಗಂಗೆಯು ಕಾಣಿಸದ ಬಂಗಾಳದ ಪ್ರದೇಶ) ಅತ್ಯಂತ ಮಂಗಲಕರವಾದ ಶುಭ ಶಕುನಗಳು ಕಂಡು ಬಂದವು.

ಎಲ್ಲೆಲ್ಲೂ ಸಂತಸದ ವಾತಾವರಣ ತುಂಬಿತ್ತು. ಬಡತನ ಬರಗಾಲ, ದುಃಖಗಳು ಎಲ್ಲವೂ ಮಾಯವಾಗಿತ್ತು. ಈ ಮಗು ನೋಡಲು ಅತ್ಯಂತ ಸುಂದರವಾಗಿದ್ದು, ಕೋಟಿ ಮನ್ಮಥರನ್ನೇ ನಾಚಿಸುವಂತ್ತಿತ್ತು. ಈ ಮಗುವಿನ ರೂಪಕ್ಕೆ, ಅಂದ ಚೆಂದಕ್ಕೆ ಎಲ್ಲರೂ ಮನ ಸೋತಿದ್ದರು. ಮನಸಾರೆ ಮುದ್ದಿಸುತ್ತಿದ್ದರು.

ಒಮ್ಮೆ ಶ್ರೀಗೌರಾಚಂದ್ರ ಅವರು ಶ್ರೀಧಾಮ ನವ ದ್ವೀಪಕ್ಕೆ ಅವನನ್ನು ಹುಡುಕಿಕೊಂಡು ಬಂದಾಗ ನಿತ್ಯಾನಂದ ಪ್ರಭುಗಳು ಸಂತೋಷದಿಂದ ಗಟ್ಟಿಯಾಗಿ ಕಿರುಚುತ್ತಾರೆ. ಅವರು ಕೂಗಿದ ಆ ಶಬ್ದ ಇಡೀ ಬ್ರಹ್ಮಾಂಡವನ್ನೇ ತುಂಬಿಕೊಂಡು ಮೊಳಗಿಸಿದಂತಿತ್ತು. ಇಡೀ ಜಗತ್ತೇ ಆ ಶಬ್ದಕ್ಕೆ ಆಶ್ಚರ್ಯಚಕಿತವಾಗಿತ್ತು. ಕೆಲವರು “ಇದು ಮೇಘಗಳ ಗುಡುಗು ಸಿಡಿಲಿನ ಶಬ್ದ ಎಂದುಕೊಂಡರು. ಕೆಲವರು ಇದು ಯಾವುದೋ ಶಕ್ತಿಗೆ ಅಡಚಣೆ ಉಂಟಾದ್ದರಿಂದ ಅದರ ಫಲಿತಾಂಶ ಎಂದುಕೊಂಡರು.

ಮತ್ತೆ ಕೆಲವರು ಈ ಗೌಡ ದೇಶದ ಅಧಿಪತಿಯು ಗುಡುಗು ಸಿಡಿಲಿನ ಮೂಲಕ ನುಡಿದಿರುವ ವಾಣಿಯಾಗಿದೆ.” ಹೀಗೆ ಪ್ರತಿಯೊಬ್ಬರೂ ತಮಗೆ ತೋಚಿದಂತೆ ಮಾತನಾಡಿಕೊಳ್ಳುತ್ತಿದ್ದರೇ ಹೊರತು ಕೃಷ್ಣನ ಮಾಯಾಶಕ್ತಿಯಿಂದ ಭ್ರಮಿತರಾಗಿರುವ ಈ ಜನಗಳು ನಿತ್ಯಾನಂದ ಪ್ರಭುಗಳ ಪಾರಮಾರ್ಥಿಕ ಶಕ್ತಿಯ ಸ್ವರೂಪವನ್ನು ಅರಿಯದವರಾಗಿದ್ದರು.

ಪುಟ್ಟಬಾಲಕ ನಿತ್ಯಾನಂದ ಬಾಲ ಲೀಲೆಗಳು ಆಟಗಳು ಇಡೀ ಏಕಚಕ್ರಾ ಗ್ರಾಮವನ್ನು ನಗು ಮತ್ತು ಆನಂದಗಳಲ್ಲಿ ಮುಳುಗಿಸಿತ್ತು. ಅವರ ಆಟಗಳು ಬಹಳ ವಿಶೇಷವಾಗಿತ್ತು. ಸದಾ ಅವರು ತಮ್ಮ ಸ್ನೇಹಿತರೊಡಗೂಡಿ ದೈವೀಕ ಪಾತ್ರಗಳ ಅನುಕರಣೆಯನ್ನು ಮಾಡುತ್ತಾ ನಾಟಕವನ್ನು ಆಡುತ್ತಿದ್ದರು. ಇವರೆಲ್ಲರೂ ತೇತ್ರಾ ಯುಗದ, ದ್ವಾಪರ ಯುಗದ ಬಹುಮುಖ್ಯ ಘಟನೆಗಳನ್ನು ಇಟ್ಟುಕೊಂಡು ಆ ಪಾತ್ರಗಳನ್ನು ಅಭಿನಯಿಸುತ್ತಾ ಆಟವಾಡುತ್ತಿದ್ದರು.

ನಿತ್ಯಾನಂದರು ತಮ್ಮ ಹನ್ನೆರಡನೆಯ ವಯಸ್ಸಿನವರೆಗೂ ತೋರಿದ ಬಾಲ ಲೀಲೆಗಳು, ಅವರು ಆಟಗಳಲ್ಲಿ ನಟಿಸಿ ತೋರಿಸುತ್ತಿದ್ದ ಶ್ರೀರಾಮ, ಲಕ್ಷ್ಮಣ, ಶ್ರೀಕೃಷ್ಣ, ಬಲರಾಮ, ದಶಾವತಾರದ ವಿಷ್ಣುವಿನ ವಿವಿಧ ಪಾತ್ರಗಳು, ಈ ಲೋಕದ ಜನರಿಗೆ ಮತ್ತೊಮ್ಮೆ ದೇವೋತ್ತಮ ಪರಮ ಪುರುಷರನ್ನು ನೆನಪು ಮಾಡಿಕೊಡಲೆಂದೇ ನಡೆಯುತ್ತಿದ್ದವು.

ಶ್ರೀ ನಿತ್ಯಾನಂದ ಪ್ರಭುಗಳು ಬಾಲ್ಯ ಜೀವನದ ಕೆಲವು ಸ್ವಾರಸ್ಯಕಾರಿ ಪಾತ್ರಾಭಿನಯದ ಪ್ರಸಂಗಗಳನ್ನು ಉದಾಹರಿಸಿ ಹೇಳುವುದಾದರೆ- ನಿತ್ಯಾನಂದರು ತಮ್ಮ ಗೆಳೆಯರೊಡಗೂಡಿ ಗಂಗಾನದಿಯ ತೀರದಲ್ಲಿ ಆಟವಾಡುತ್ತಿದ್ದಾಗ ಒಂದು ಸಲ ಎಲ್ಲರೂ ದೇವತೆಗಳ ಪಾತ್ರವನ್ನು ಅಭಿನಯಿಸುತ್ತಿದ್ದರು.

ಅದರಲ್ಲಿ ಒಬ್ಬನಿಗೆ ಭೂಮಿ ತಾಯಿಯ ಪಾತ್ರದ ವೇಷಭೂಷಣಗಳನ್ನು ತೊಡಿಸಿ ಅವರೆಲ್ಲರೂ ಶ್ರೀ ಕ್ಷೀರೋದಾಯಕ ಶಾಯಿ ವಿಷ್ಣುವಿನ ಬಳಿ ಬಂದು ಪ್ರಭುವೇ ಈ ಭೂಮಿಯು ಅಧರ್ಮದಿಂದ ಕುಸಿದು ಹೋಗುತ್ತಿದೆ. ಈ ಭೂಭಾರವನ್ನು ಇಳಿಸು ಎಂದು ಪ್ರಾರ್ಥಿಸುತ್ತಾರೆ. ಮರದ ಹಿಂದೆ ಬಚ್ಚಿಟ್ಟುಕೊಂಡ ಇನ್ನೊಬ್ಬ ಗೆಳೆಯ ವಿಷ್ಣುವಿನ ಅಶರೀರವಾಣಿಯಂತೆ ನುಡಿಯುತ್ತಾನೆ. ನಾನು ಈ ಭೂಮಿಯ ಮೇಲೆ ಧರ್ಮವನ್ನು ಸಂರಕ್ಷಿಸಲು ಮಥುರಾದ ಗೋಕುಲದಲ್ಲಿ ಹುಟ್ಟಿ ಬರುತ್ತೇನೆ ಎಂಬ ಆ‍ಶ್ವಾಸನೆ ನೀಡುತ್ತಾನೆ.

ಮತ್ತೊಂದು ಪ್ರಸಂಗ ಹೀಗಿದೆ. ಶ್ರೀ ವಿಷ್ಣುವು ವಾಮನ ರೂಪವಾಗಿ ಬಲಿ ಚಕ್ರವರ್ತಿಯ ಬಳಿ ಬಂದು ಮೂರು ಹೆಜ್ಜೆ ನೆಲವನ್ನು ಬೇಡುತ್ತಾನೆ. ಬಲಿಯು ಅದಕ್ಕೆ ಅಸ್ತು ಎನ್ನುತ್ತಾನೆ. ವಾಮನ ಎರಡು ಹೆಜ್ಜೆಗಳಲ್ಲಿ ಭೂಮಿ,  ಆಕಾಶವನ್ನು ಪಡೆದುಕೊಂಡು ಮೂರನೆಯ ಪಾದವನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತುಳ್ಳುತ್ತಾನೆ. ಇಲ್ಲಿ ವಾಮನ ಪಾತ್ರಧಾರಿ ನಿತ್ಯಾನಂದರು ತಮ್ಮ ಸ್ನೇಹಿತನ ತಲೆಯ ಮೇಲೆ ತಮ್ಮ ಪಾದಕಮಲವನ್ನು ಒತ್ತುತ್ತಾರೆ.

ಇನ್ನೊಂದು ಬಹಳ ಸ್ವಾರಸ್ಯಕಾರಿ ಪ್ರಸಂಗವೆಂದರೆ ರಾಮಾಯಣದ ಲಕ್ಷ್ಮಣನ ಪಾತ್ರವನ್ನು ನಿತ್ಯಾನಂದರು ಅಭಿನಯಿಸುತ್ತಾರೆ.ಉಳಿದ ಮಕ್ಕಳೆಲ್ಲರೂ ಬೇರೆ ಬೇರೆ ಪಾತ್ರಗಳನ್ನು ವಹಿಸಿಕೊಂಡಿರುತ್ತಾರೆ. ಕೊನೆಯಲ್ಲಿ ರಾಮ-ರಾವಣರ ಯುದ್ಧದಲ್ಲಿ ಮೇಘನಾಥನು ಲಕ್ಷ್ಮಣನ ಮೇಲೂ ಬಾಣ ಪ್ರಯೋಗ ಮಾಡುತ್ತಾನೆ. ಲಕ್ಷ್ಮಣ ಮೂರ್ಛೆ ಹೋಗುತ್ತಾನೆ.

ಮೊದಲೇ ತಿಳಿಸಿದಂತೆ ಹನುಮಂತನ ಪಾತ್ರಧಾರಿ ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಬರುವವರೆಗೂ ಲಕ್ಷ್ಮಣ ಪಾತ್ರಧಾರಿ ನಿಜವಾಗಿಯೂ ಸತ್ತಂತೆ ಬಿದ್ದಿರಬೇಕು. ಇಲ್ಲಿ ನಿತ್ಯಾನಂದರು ಉಸಿರಾಡದೆ ಬಿದ್ದುಕೊಂಡು ಎಷ್ಟು ಹೊತ್ತಾದರೂ ಏಳದಿದ್ದಾಗ ಮಕ್ಕಳೆಲ್ಲರೂ ಗಾಬರಿಯಾಗಿ ಮನೆಗೆ ಓಡಿ ಹೋಗಿ ನಿತ್ಯಾನಂದರ ತಂದೆ ತಾಯಿಗಳಿಗೆ ತಿಳಿಸುತ್ತಾರೆ. ಅವರು ಕೂಡ ಗಾಬರಿಕೊಂಡು ಆಳುತ್ತಾ ಓಡಿ ಬರುತ್ತಾರೆ. ನಿತ್ಯಾನಂದರಿಗೆ ಪ್ರಜ್ಞೆಯೇ ಇರುವುದಿಲ್ಲ.

ತಕ್ಷಣವೇ ಹನುಮಂತ ಪಾತ್ರಧಾರಿ ಹುಡುಗನಿಗೆ ನೆನಪು ಬರುತ್ತದೆ. ನಾನು ಸಂಜೀವಿನಿ ಪರ್ವತ ತರುವವರೆಗೂ ಏಳುವುದಿಲ್ಲವೆಂದು ನಿತ್ಯಾನಂದ ಹೇಳಿದ್ದು ನೆನಪಿಗೆ ಬಂದು ಓಡಿ ಹೋಗಿ ಸಂಜೀವಿನಿ ಮೂಲಿಕೆಯನ್ನು ತಂದಂತೆ ಏನೋ ಒಂದು ಸೊಪ್ಪನ್ನು ತರುತ್ತಾನೆ. ಅದನ್ನು ಹಿಂಡಿ ಅವನ ಮೂಗಿಗೆ ಹಿಡಿದಾಗ ನಿತ್ಯಾನಂದರು ಪ್ರಜ್ಞೆ ಮರಳಿ ಪಡೆಯುತ್ತಾರೆ. ಈ ಆಟದ ಪರಿ ಅರ್ಥವಾದಾಗ ಅಲ್ಲಿ ನೆರೆದಿದ್ದ ಜನರೆಲ್ಲ ಆಶ್ಚರ್ಯದಿಂದ ಗೊಳ್ಳನೆ ನಗುತ್ತಾರೆ.

ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ಆಟವಾಡುವಾಗ ನಿತ್ಯಾನಂದರು ಕೃಷ್ಣನನ್ನೇ ಮೂಲವನ್ನಾಗಿ ಮಾಡಿಕೊಂಡು ಆಟವಾಡುತ್ತಿದ್ದರು. ಕಾರಾಗೃಹದಲ್ಲಿ ಕೃಷ್ಣನ ಜನನ, ನಂದ ಗ್ರಾಮಕ್ಕೆ ಕೃಷ್ಣನ ರವಾನೆ, ಬೆಣ್ಣೆ ಕದಿಯುವ ಕೃಷ್ಣ, ಪೂತನ,ಧೇನುಕಾ, ಬಕ ಮುಂತಾದ ರಾಕ್ಷಸರ ಸಂಹಾರ, ಗೋವರ್ಧನಗಿರಿ ಧಾರಿ, ಕಂಸನ ವಧೆ, ಗೋಪ ಗೋಪಿಯರೊಂದಿಗಿನ ನೃತ್ಯ, ಹೀಗೆ ಹತ್ತು ಹಲವಾರು ಪಾತ್ರಗಳಲ್ಲಿ ನಿತ್ಯಾನಂದರು ಆ ಮಹಾನ್‌ ಭಾಗವತದ ಪಾತ್ರಗಳನ್ನು ಜೀವಂತಗೊಳಿಸಿದ್ದರು.

ಈ ಪುಟ್ಟ ಬಾಲಕನ ಪಾರಮಾರ್ಥಿಕ ಶಕ್ತಿಯನ್ನು ತಿಳಿಯದೆ ಜನರು ಆಶ್ಚರ್ಯದಿಂದ ಮಗು, ನಿನಗೆ ಈ ಆಟಗಳನ್ನು ಅವರ ಬಾಲ ಲೀಲೆಗಳನ್ನು ಹೇಳಿ ಕೊಟ್ಟವರಾರು? ನಿನಗೆ ಇದೆಲ್ಲ ಹೇಗೆ ತಿಳಿಯಿತು? ಎಂದು ಕುತೂಹಲದಿಂದ ಕೇಳುತ್ತಿದ್ದರು. ಆಗ ಬಾಲಕನು ಈ ಪಾತ್ರಗಳನ್ನು ಹಿಂದೆ ನಾನೇ ಅಭಿನಯಿಸಿ ಬಂದಿದ್ದೇನೆ ಎಂದು ಹೇಳುತ್ತಿದ್ದ. ಈ ಮಗುವಿನ ಮಾತುಗಳಿಂದ ಎಲ್ಲರೂ ಮೂಕವಿಸ್ಮಿತರಾಗುತ್ತಿದ್ದರು.

ನಿತ್ಯಾನಂದರು ಪಾರಮಾರ್ಥಿಕ ಶಕ್ತಿಯ ಸ್ವರೂಪವಾಗಿದ್ದರೂ ಏನೂ ತಿಳಿಯದವನಂತೆ ಇತರ ಮಕ್ಕಳೊಡನೆ ಮಗುವಾಗಿ ಆಡಿಕೊಂಡಿರುತ್ತಿದ್ದರು. ಇಲ್ಲಿ ಪರಮ ಪ್ರಭುವಿನ ಲೀಲೆಗಳನ್ನು ಪುನಃ ನೆನಪಿಸಲೆಂದೇ ಈ ಬಾಲಕನ ಜನ್ಮವಾಗಿತ್ತು. ಹೀಗೆ ಶ್ರೀ ನಿತ್ಯಾನಂದ ಪ್ರಭುಗಳು ತಮ್ಮ ಹನ್ನೆರಡನೆಯ ವಯಸ್ಸಿನ ತನಕ ಅಭೂತಪೂರ್ವ ಬಾಲಲೀಲೆಗಳನ್ನು ಈ ಜಗತ್ತಿನಲ್ಲಿ ತೋರ್ಪಡಿಸಿದರು.

ಶ್ರೀ ನಿತ್ಯಾನಂದರಿಗೆ ಹನ್ನೆರಡನೆಯ ವಯಸ್ಸಾಗಿದ್ದಾಗ ಅವರ ತಂದೆ ಹಡಯೋಜರ ಮನೆಗೆ ಒಬ್ಬ ಸಂನ್ಯಾಸಿಯು ಅತಿಥಿಗಳಾಗಿ ಬಂದರು. ಅವರಿಗೆ ಸೂಕ್ತ ಸತ್ಕಾರ ನೀಡಿ ನಮ್ಮ ಮನೆಯಲ್ಲಿ ತಂಗಿ ಎಂದು ನಿವೇದಿಸಿಕೊಂಡರು. ಅದಕ್ಕೆ ಆ ಸಂನ್ಯಾಸಿಗಳು ಒಪ್ಪಿಗೆ ಸೂಚಿಸಿದರು. ಮರುದಿನ ಹೊರಡುವ  ಮುನ್ನ ಹಡಯೋಜರಿಗೆ ಸಂನ್ಯಾಸಿಗಳು ಕೇಳಿದರು, “ನೀನು ಒಪ್ಪಿದರೆ ನಾನು ನಿಮ್ಮಿಂದ ಒಂದು ಭಿಕ್ಷೆಯನ್ನು ಬೇಡುತ್ತೇನೆ. “ಹಡಯೋಜರು” ದಯವಿಟ್ಟು ಕೇಳಿ ನಾನು ಎಷ್ಟೇ ಕಷ್ಟವಾದರೂ ಪೂರೈಸುತ್ತೇನೆ” ಎಂದರು.

“ಇದು ಬಹಳ ಕಠಿಣವಾದದ್ದು ಆದರೂ ನಾನು ಕೇಳುತ್ತಿದ್ದೇನೆ, ನಿಮ್ಮ ಮಗನನ್ನು ನನಗೆ ಭಿಕ್ಷೆಯಾಗಿ ನೀಡಿ, ಅವನು ಮುಂದೆ ಬಹಳ ದೊಡ್ಡ ಪ್ರಚಾರ ಕಾರ್ಯವನ್ನು ಮಾಡಲಿದ್ದಾನೆ. ಅವನಿಗೆ ತರಬೇತಿ ನೀಡುತ್ತೇನೆ” ಎಂದಾಗ ಹಡಯೋಜರಿಗೆ ಬಹಳ ದುಗುಡ ದುಮ್ಮಾನವುಂಟಾಯಿತು. ಸಂನ್ಯಾಸಿಯು ಕೇಳಿದ್ದನ್ನು ನೀಡಬೇಕೆನ್ನುವ ಗೃಹಸ್ಥ ಧರ್ಮಪಾಲನೆ ಮತ್ತು ನಿತ್ಯಾನಂದರ ಬಗೆಗಿದ್ದ ಸಹಜ ವಾತ್ಸಲ್ಯಗಳು ಅವರನ್ನು ಬೇರೆ ಬೇರೆ ದಿಕ್ಕಿಗೆ ಎಳೆಯುತ್ತಿದ್ದವು.

ಕೊನೆಗೂ ಕೊಟ್ಟ ಮಾತನ್ನು ಪಾಲಿಸದೆ ಕೆಟ್ಟ ತಂದೆಯಾಗಬಾರದೆಂದು ಬಗೆದು ಸಂನ್ಯಾಸಿಗೆ ಮಗುವನ್ನು ದಾನವಾಗಿ ನೀಡಿದರು. ಶ್ರೀಲ ನಿತ್ಯಾನಂದರು ಸಂನ್ಯಾಸಿಯೊಡನೆ ಹೊರಟು ಹೋದರು. ಇತ್ತ ಕಡೆ ನಿತ್ಯಾನಂದರ ವಿರಹ ವೇದನೆಯನ್ನು ತಾಳಲಾರದೆ ಅವರ ತಂದೆ ತಾಯಿಯರು ನಿತ್ಯಾನಂದನ ನೆನಪಿನಲ್ಲೇ ದೇಹ ತ್ಯಜಿಸಿ ಪರಮ ಲೋಕವನ್ನು ಸಂದರು.

ಆನಂತರ ತಮ್ಮ ಇಪ್ಪತ್ತನೆಯ ವಯಸ್ಸಿನವರೆಗೂ ಅವರು ಸಂನ್ಯಾಸಿಯೊಡನೆ ಬೇರೆ ಬೇರೆ ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡಿದರು. ಇಲ್ಲಿನ ವಿಶೇಷವೆಂದರೆ ಇವರು ಕಾಲಿಟ್ಟ ತೀರ್ಥಕ್ಷೇತ್ರವು ಪಾವನವಾಗುತ್ತಿತ್ತು. ಇವರು ಸ್ನಾನ ಮಾಡಿದ ನದಿಗಳು ಪವಿತ್ರವಾಗುತ್ತಿದ್ದವು. ಪರಮ ಪ್ರಭುಗಳಾದ ಶ್ರೀ ಚೈತನ್ಯರ ದಿವ್ಯ ತೇಜಸ್ಸನ್ನು ತುಂಬಿಕೊಂಡ ಅವರ ಪ್ರತಿರೂಪವಾಗಿದ್ದರು. ಇವರು ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಸಂಚರಿಸುತ್ತಾ ಕೊನೆಯಲ್ಲಿ ನವದ್ವೀಪಕ್ಕೆ ಬಂದರು.

ಅಲ್ಲಿ ಅವರು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಭೇಟಿ ಮಾಡಿದರು. ಇವರೊಂದಿಗೆ ಮಾಧವೇಂದ್ರ ಪುರಿ, ಈಶ್ವರಪುರಿ ಮತ್ತು ಬ್ರಹ್ಮಾನಂದ ಪುರಿಗಳನ್ನು ಕೂಡ ಭೇಟಿ ಮಾಡಿದರು. ಅವರೊಂದಿಗೆ ಕೆಲವು ದಿನಗಳವರೆಗೆ ಕೃಷ್ಣ-ಕಥಾ ಸಂಕೀರ್ತನೆಯಲ್ಲಿ ಮತ್ತು ಆ ಪರಮ ಪ್ರಭುವಿನ ಪ್ರೀತಿಯಲ್ಲಿ ಕಾಲವನ್ನು ಕಳೆದರು.

ವೈಷ್ಣವ ತತ್ವಗಳನ್ನು ಪ್ರಚಾರ ಮಾಡುತ್ತಾ ಶ್ರೀ ನಿತ್ಯಾನಂದರು ಎಲ್ಲ ಕ್ಷೇತ್ರಗಳನ್ನು ಭೇಟಿ ಮಾಡುತ್ತಾ ಕೊನೆಯಲ್ಲಿ ಜಗನ್ನಾಥ ಪುರಿಗೆ ಬಂದು ‍ಶ್ರೀ ಜಗನ್ನಾಥ ಪ್ರಭುವಿನ ದರ್ಶನವನ್ನು ಮಾಡಿ, ಆ ಪರಮನ ಪ್ರೀತಿಯಲ್ಲಿ ಮೈಮರೆತರು. ಪುನಃ ಅವರು ಮಥುರಾ ಬೃಂದಾವನದ ಎಲ್ಲ ವನಗಳನ್ನು ಸಂಚರಿಸಿ ಆನಂದಿಸಿದರು.

ಈ ನಡುವೆ ಶ್ರೀ ಚೈತನ್ಯ ಮಹಾಪ್ರಭುಗಳು ನವದ್ವೀಪದಲ್ಲಿ ತಮ್ಮ ಪ್ರಚಾರ ಕಾರ್ಯಗಳನ್ನು ಪ್ರಾರಂಭಿಸಿದ್ದರು. ಅಲ್ಲಿಗೆ ಬಂದು ಪ್ರಚಾರದಲ್ಲಿ ಸೇರಬೇಕೆಂದು ನಿತ್ಯಾನಂದರಿಗೆ ಕರೆ ನೀಡಿದರು.  ಆ ಕರೆಗೆ ಓಗೊಟ್ಟ ‍ಶ್ರೀಲ ನಿತ್ಯಾನಂದರು ವೃಂದಾವನದಿಂದ ನವದ್ವೀಪಕ್ಕೆ ತೆರಳಿದರು.

ಯದುನಂದನ ಆಚಾರ್ಯರೆಂಬ ಭಕ್ತರ ಮನೆಯಲ್ಲಿ ಶ್ರೀ ಚೈತನ್ಯ ಮತ್ತು ಶ್ರೀ ನಿತ್ಯಾನಂದರ ಭೇಟಿಯಾಯಿತು. ಶ್ರೀಲ ನಿತ್ಯಾನಂದ ಪ್ರಭುಗಳು ಮನೆಮನೆಗೆ ಹೋಗಿ ಶ್ರೀ ಚೈತನ್ಯರ ಬೋಧನೆಗಳನ್ನು ನೀಡಿದ ಅಗ್ರಗಣ್ಯರು. ಜಗಾಯಿ, ಮಧಾಯಿಯಂತಹ ಪತಿತರನ್ನು ಉದ್ದರಿಸಿದವರು ಅವರೇ.

ಕಾಲಾನುಕ್ರಮದಲ್ಲಿ ಶ್ರೀಚೈತನ್ಯರು ಸಂನ್ಯಾಸ ಸ್ವೀಕರಿಸಿದರು. ಇಡೀ ಭಾರತದ ಪ್ರವಾಸ ಕೈಗೊಂಡು ಜಗನ್ನಾಥ ಪುರಿಗೆ ಹಿಂದಿರುಗಿದರು. ನಿತ್ಯಾನಂದರನ್ನು ಕರೆದು ಆದರ್ಶ ಗ್ರಹಸ್ಥರಾಗಿ ಮಾದರಿಯಾಗಬೇಕು ಮತ್ತು ಗ್ರಹಸ್ಥಾಶ್ರಮಿಗಳಾಗಬೇಕು, ಅಷ್ಟೇ ಅಲ್ಲದೆ ನೀವು ಬಂಗಾಳದಲ್ಲಿ ತಮ್ಮ ಪ್ರಚಾರ ಕಾರ್ಯವನ್ನು ಮುಂದುವರಿಸಬೇಕೆಂದು ಆದೇಶಿಸಿದರು.

ಅದರಂತೆ ‍ಶ್ರೀ ನಿತ್ಯಾನಂದರು ಲಕ್ಷ್ಮೀಯ ವಿಸ್ತರಣೆಗಳೇ ಆದ ಜಾಹ್ನವಿದೇವಿ ಮತ್ತು ಅವಳ ಸೋದರಿ ವಸುಧಾ ದೇವಿಯನ್ನು ವಿವಾಹವಾದರು. ಬಂಗಾಳವನ್ನು ತಮ್ಮ ಪ್ರಚಾರ ಕ್ಷೇತ್ರವನ್ನಾಗಿ ಮಾಡಿಕೊಂಡರು. ಹರಿನಾಮದ ಪ್ರವಾಹದಲ್ಲಿ ಇಡೀ ಬಂಗಾಳವನ್ನು ಮುಳುಗಿಸಿ ಚೈತನ್ಯರ ಆಸೆಯನ್ನು ಪೂರೈಸಿದರು. ಅವರ ಮಕ್ಕಳಲ್ಲಿ ಒಬ್ಬರಾದ ವೀರಭದ್ರರು ಸಂನ್ಯಾಸಿಯಾಗಿ, ನಿತ್ಯಾನಂದ ಚೈತನ್ಯರ ಪ್ರಚಾರ ಕಾರ್ಯವನ್ನೂ ಮುಂದುವರೆಸಿದರು.

ಶ್ರೀ ಚೈತನ್ಯರು ಅಂತರ್ಧಾನರಾದ ನಂತರ ಗ್ರಹಸ್ಥಾಶ್ರಮವನ್ನು ತೊರೆದು ಕೆಲ ಕಾಲ ವೃಂದಾವನದಲ್ಲಿ ವಿರಾಗಿ ಜೀವನವನ್ನು ನೆಡಿಸಿ ಪರಮ ಧಾಮಕ್ಕೆ ಹಿಂತಿರುಗಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi