ಗುರು ನಮನ
– ಲೇಖಕರು: ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ್
ವ್ಯಾಸಾಯ ವಿಷ್ಣುರೂಪಾಯ
ವ್ಯಾಸರೂಪಾಯ ವಿಷ್ಣವೇ।
ನಮೋ ವೈ ಬ್ರಹ್ಮ ನಿಧಯೇ
ವಾಸಿಷ್ಠಾಯ ನಮೋ ನಮ: ||

ಮಹರ್ಷಿಗಳಾದ ವೇದವ್ಯಾಸರು ಶ್ರೀಮನ್ ಮಹಾಭಾರತವನ್ನು ಲೋಕ ಮುಖಕ್ಕೆ ನೀಡಿದ ಮಹಾನುಭಾವರು. ಈ ಕಾರಣದಿಂದಾಗಿ ಅವರು ನಮಗೆ ಪರಮಪೂಜ್ಯರಾಗಿದ್ದಾರೆ. ಮಹಾಭಾರತದೊಳಗಿನ ‘ಭಗವದ್ಗೀತೆʼ ಯನ್ನು ಭಗವಾನ್ ಶ್ರೀಕೃಷ್ಣನೇ ಅರ್ಜುನನಿಗೆ ಹೇಳಿದ್ದರೂ, ಅದನ್ನು ಸಂಕಲಿಸಿದವರು ಮಹರ್ಷಿ ವೇದವ್ಯಾಸರೇ, ಹೀಗೆ ಹೇಳಿದರೆ ಭಗವಾನ್ ಶ್ರೀಕೃಷ್ಣನ ಗೀತಾಚಾರ್ಯತ್ವಕ್ಕೆ ಕುಂದು ಉಂಟಾಗದು.
ಯಾಕೆಂದರೆ ಶ್ರೀಕೃಷ್ಣನ ಮಾತುಗಳನ್ನೇ ವೇದವ್ಯಾಸರು ಬರೆದದ್ದು! ಅಷ್ಟೇ ಅಲ್ಲದೆ ವೇದವ್ಯಾಸರನ್ನು ವಿಷ್ಣುರೂಪಿಯೆಂದೇ ನಾವು ಭಾವಿಸಿದ್ದೇವೆ. ಜೊತೆಗೆ ವೇದವ್ಯಾಸರು ಶ್ರೀಮದ್ ಭಾಗವತವನ್ನೂ ಬರೆದು ದೇವೋತ್ತಮನಾದ ಶ್ರೀಕೃಷ್ಣನ ಲೀಲಾಪಾರಮ್ಯವನ್ನು ನಮಗೆ ತಿಳಿಸಿದವರು. ಹಾಗಾಗಿ ವೇದವ್ಯಾಸರ ಸ್ಥಾನ ಭಾರತೀಯ ಅಧ್ಯಾತ್ಮ ಸಾಹಿತ್ಯದಲ್ಲಿ ಅದ್ವಿತೀಯವಾದುದೇ ಆಗಿದೆ. ಆದ್ದರಿಂದಲೇ “ವ್ಯಾಸಪೀಠಕ್ಕೆ” ಎಲ್ಲ ಜ್ಞಾನಪಿಪಾಸುಗಳು ತಲೆಬಾಗುವುದು.
ವೇದವ್ಯಾಸ ರಚಿತ ಮಹಾಭಾರತವನ್ನು ಕನ್ನಡದಲ್ಲಿ ಕನ್ನಡಿಸಿದ “ಕುಮಾರವ್ಯಾಸ”ನೂ “ತಿಳಿಯ ಹೇಳುವೆ ಕೃಷ್ಣಕಥೆಯನು” ಎಂದೇ ಹೇಳಿದ್ದಾನೆ! ಮಹಾಭಾರತವೂ ಶ್ರೀಕೃಷ್ಣನ ಕಥೆ ಎಂಬುದರ ಜೊತೆಗೆ “ಕೃಷ್ಣ ಬರೆದ ಕಥೆ” ಕೂಡಾ ಹೌದು! ಅರ್ಥಾತ್ ಮಹಾಭಾರತವು ವೇದವ್ಯಾಸರು ಬರೆದ ಕಥೆ!
ವೇದವ್ಯಾಸರಿಗೂ “ಕೃಷ್ಣದ್ವೈ ಪಾಯನ” ಎಂಬ ಹೆಸರಿರುವುದರಿಂದ ಅವರೂ “ಕೃಷ್ಣ”ನೇ. ಈ ಹಿನ್ನೆಲೆಯಲ್ಲಿ “ವ್ಯಾಸಪೂಜೆ’ಗೆ ಎಲ್ಲಿಲ್ಲದ ಪ್ರಾಮುಖ್ಯವಿದೆ. ‘ವ್ಯಾಸಪೂಜೆ’ ಎಂದರೆ ಸ್ಥೂಲಾರ್ಥದಲ್ಲಿ ʼಪುಸ್ತಕಪೂಜೆ’ ಅಥವಾ ‘ಜ್ಞಾನೋಪಾಸನೆ’ ಎನಿಸಿದರೂ, ಸೂಕ್ಷ್ಮಾರ್ಥದಲ್ಲಿ ಅದು ಭಗವಂತನ ಆರಾಧನೆಯೇ ಆಗಿದೆ.
ವ್ಯಾಸಪೀಠವೆಂಬುದು ಗ್ರಂಥವನ್ನಿಡುವ ಮಣೆಯಾದರೂ, ‘ಗುರುಸನ್ನಿಧಾನ’ ವೆಂಬ ಅರ್ಥವನ್ನು ಧ್ವನಿಸುವಂತಹುದು. ಹಾಗಾಗಿ ಅದು ಜಗದಾದಿಗುರುವಾದ ಶ್ರೀಕೃಷ್ಣನಿಗೂ ಅನ್ವಯಿಸುವಂತಹ ಸಾಂಕೇತಿಕ ಪದ.
ಆಧುನಿಕ ಕಾಲದಲ್ಲಿ ಶ್ರೀಲ ಭಕ್ತಿವೇದಾಂತ ಪ್ರಭುಪಾದರೂ ಭಗವದ್ಗೀತೆಗೆ ವ್ಯಾಖ್ಯಾನ ಬರೆದು, ಅದರ ಯಥಾರ್ಥ ದರ್ಶನವನ್ನು ಕಲ್ಪಿಸಿಕೊಟ್ಟವರು. ಶ್ರೀಭಾಗವತವನ್ನು ವಿಸ್ತಾರವಾದ ವಿಮರ್ಶೆಗೆ ಒಳಪಡಿಸಿದವರು. ನಮ್ಮ ಅನೇಕ ಸಂದೇಹಗಳಿಗೆ ಅದರಲ್ಲಿ ಸಮಾಧಾನ ದೊರೆಯುತ್ತದೆ. ಹಾಗಾಗಿ ಅವರನ್ನು ಆಧುನಿಕ ವೇದವ್ಯಾಸರೆಂದು ಹೇಳಬಹುದು.
ವ್ಯಾಸಪೂಜೆ ಎನ್ನುವುದಕ್ಕೆ ಅಧ್ಯಯನಾಸಕ್ತಿ ಎಂದು ಗ್ರಹಿಸಿದರೂ ಅದಕ್ಕೆ ಪ್ರಭುಪಾದರೇ ಸ್ಫೂರ್ತಿಯಾಗುತ್ತಾರೆ. ಯಾಕೆಂದರೆ ಅವರಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಒಮ್ಮೆ ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತರು ಪ್ರಭುಪಾದರೊ೦ದಿಗೆ ಹೀಗೆ ಹೇಳುತ್ತಾರೆ – ‘ಕಲ್ಕತ್ತದ ಗೌಡೀಯ ಮಠದಲ್ಲಿ ಮುಂದೊಂದು ದಿನ ಬೆಂಕಿ ಬೀಳುತ್ತದೆ.

ಆಗ ನಮ್ಮ ಶ್ರೀಮಂತಿಕೆ ಸಹಾಯಕ್ಕೆ ಬರುವುದಿಲ್ಲ. ನಿಜವಾದ ಜ್ಞಾನ ಮಾತ್ರ ನಮ್ಮ ಕೈ ಹಿಡಿದು ನಡೆಸಬಲ್ಲದು. ಆದುದರಿಂದ ನಿನಗೆ ಎಂದಾದರೂ ಹಣ ಸಿಕ್ಕಿದರೆ, ಅದರಲ್ಲಿ ಪುಸ್ತಕಗಳನ್ನು ಮುದ್ರಿಸು’ ಎಂದು! ಹೀಗೆ ಪುಸ್ತಕ ಪ್ರೀತಿ ಎಂಬುದು ಪ್ರಭುಪಾದರಿಗೆ ಅವರ ಗುರುಗಳಿಂದ ದೊರೆತ ಪ್ರೇರಣೆ.
ಈ ಕಾರಣದಿಂದಾಗಿಯೇ ಪ್ರಭುಪಾದರು ನಿರಂತರವಾಗಿ ಪುಸ್ತಕಗಳನ್ನು ಪ್ರಕಟಿಸಿ ತಮ್ಮ ಗುರುಭಕ್ತಿಯನ್ನು ಮೆರೆದರು. ಪುಸ್ತಕ – ಪತ್ರಿಕೆಗಳೇ ಅವರಿಗೆ ಬದುಕಿನ ಕಾಯಕವಾಯಿತು; ಜ್ಞಾನವನ್ನು ಹಂಚುವುದೇ ಅವರ ತಪಸ್ಸಾಯಿತು. ಈ ಹಿನ್ನೆಲೆಯಲ್ಲಿಯೂ ಪ್ರಭುಪಾದರು ವ್ಯಾಸಪೀಠದ ಆರಾಧಕರು.
ಮಹರ್ಷಿ ವೇದವ್ಯಾಸರು ಆಧ್ಯಾತ್ಮ ಪ್ರತಿಪಾದನೆಯ ಉದ್ದೇಶದಿಂದ ಭಾಗವತ – ಮಹಾಭಾರತಗಳೆಂಬ ಮಹಾಕಾವ್ಯಗಳನ್ನು ಬರೆದವರು. ಆ ಅರ್ಥದಲ್ಲಿ ಅವರು ಕವಿಗಳೂ ಹೌದು! “ನಾನೃಷಿಃ ಕುರುತೇ ಕಾವ್ಯಂ’ ಎಂಬ ಮಾತಿನಂತೆ ಋಷಿಯಲ್ಲದವನು ಕವಿಯಾಗಲಾರ.
ವೇದವ್ಯಾಸರನ್ನು ಮಹರ್ಷಿಗಳೆ೦ದು ಕೊಂಡಂತೆಯೇ ಮಹಾಕವಿಯೆಂದೂ ನಾವು ಪರಿಭಾವಿಸಬಹುದು. ಈ ಅರ್ಥದಲ್ಲಿ ನೋಡಿದರೂ ಶ್ರೀಲ ಪ್ರಭುಪಾದರು ನಿಜವಾದ ಕವಿಗಳು! ಅನೇಕ ಕವಿತೆಗಳನ್ನು ಬರೆದು ಭಗವಂತನನ್ನು ಆರಾಧಿಸಿದ ಮಹಾನ್ ಕವಿ ಚೈತನ್ಯ ಅವರದು.
ಅವರು 1935ರಲ್ಲಿ ಬರೆದ ಮೊದಲ ಪದ್ಯ ”ದಿ ಹಾರ್ಮೊನಿಸ್ಟ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಯ್ತು.
“ಪರಬ್ರಹ್ಮನೆ ಸುಸ್ವರೂಪಿ ಎಂದು ಸಾಧಿಸಿರುವೆ
ಮಾಯಾವಾದ ಗೊಂದಲವನ್ನು ದೂರ ಸರಿಸುತಿರುವೆ”

ಈ ಚರಣಗಳು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿ ಸಿದ್ಧಾಂತರಿಗೆ ಬಹಳ ಮೆಚ್ಚುಗೆಯಾದವುಗಳು. ಅಮೆರಿಕ ದೇಶದ ಪ್ರವಾಸ ಕಾಲದಲ್ಲಿ ಪ್ರಭುಪಾದರು ಅನೇಕ ಕವನಗಳನ್ನು ಬರೆದರು. ಬೋಸ್ಟನ್ ಬಂದರಿನಲ್ಲಿ ಅವರು ಬಂಗಾಳಿ ಭಾಷೆಯಲ್ಲಿ ಕವನವೊಂದನ್ನು ಬರೆದು ವೃಂದಾವನ ವಿಹಾರಿಯಾದ ಶ್ರೀಕೃಷ್ಣನನ್ನು ಸ್ತುತಿಸಿದ್ದಾರೆ.
ಶ್ರೀಲ ಪ್ರಭುಪಾದರ ಮತ್ತೊಂದು ಬಹಳ ಮುಖ್ಯವಾದ ‘ವ್ಯಾಸಕಾರ್ಯ’ವೆಂದರೆ ಭಕ್ತಿಯೋಗ – ಕರ್ಮಯೋಗ – ಜ್ಞಾನಯೋಗಗಳ ಸಮನ್ವಯ. “ಹರೇಕೃಷ್ಣ” ಸಂಕೀರ್ತನೆಯ ಮೂಲಕ ಅವರು ನಾಡಿನಾದ್ಯಂತ ಭಕ್ತಿಯೋಗವನ್ನು ಪ್ರಾಯೋಗಿಕಗೊಳಿಸಿದರು. ಕುರುಕ್ಷೇತ್ರದಲ್ಲಿ ಅರ್ಜುನನು ಹರಿಸಮರ್ಪಣ ಭಾವದಿಂದ ಹೋರಾಡಿದಂತೆ ನಾವು ಬದುಕಿನಲ್ಲಿ ಫಲಾಪೇಕ್ಷೆಯಿಲ್ಲದೆ ಭಗವದರ್ಪಣಾ ಭಾವದಿಂದ ಹೋರಾಟ ಮಾಡಬೇಕೆಂಬ ಕರ್ಮಯೋಗವನ್ನು ಸಾರಿದರು.
ಕೃಷ್ಣ ಪ್ರಜ್ಞೆಯನ್ನು ಸಾರುವ ಸಾವಿರಾರು ಗ್ರಂಥಗಳನ್ನು ಪ್ರಕಟಿಸುವ ಮೂಲಕ ಜ್ಞಾನಯೋಗವನ್ನು ಅನುಸರಿಸಿದರು. ಹೀಗೆ ಶ್ರೀಲ ಪ್ರಭುಪಾದರದು ಯೋಗ ತ್ರಿಪುಟೀಕರಣದ ವ್ಯಾಸಮಾರ್ಗವೆಂದು ನಿಸ್ಸಂದೇಹವಾಗಿ ಹೇಳಬಹುದು.
ವ್ಯಾಕರಣ ಶಾಸ್ತ್ರದಲ್ಲಿ ‘ಜಗನ್ನಾಥ’ ಎಂಬ ಶಬ್ದಕ್ಕೆ ಲೋಕನಾಯಕನೆಂಬ ಅರ್ಥದ ಜೊತೆಗೇ ‘ಅನಾಥ’ವೆಂಬ ವಿರುದ್ಧಾರ್ಥವೂ ಇದೆ! ಜಗತ್ತನ್ನೇ ಆಶ್ರಯವಾಗಿ ಪಡೆದವನು ಎಂಬ ಅರ್ಥಾಂತರ ಇಲ್ಲಿದೆ. ಪ್ರಭುಪಾದ, ಶಬ್ದಕ್ಕೂ ಎರಡರ್ಥಗಳಿವೆ. ಯಾರ ಪಾದದ ಬಳಿ ಅನೇಕ ಪ್ರಭುಗಳಿರುತ್ತಾರೆಯೋ ಅವನೂ ಪ್ರಭುಪಾದ; ಈ ಎರಡೂ ಅರ್ಥದಲ್ಲಿ ಶ್ರೀಲ ಪ್ರಭುಪಾದರದು ಸಾರ್ಥಕವಾದ ಹೆಸರು.
ಶ್ರೀಲ ಪ್ರಭುಪಾದರ ಶಿಷ್ಯಪರಂಪರೆಯಲ್ಲಿ ಅನೇಕ ಪ್ರಭುಗಳು ಅವರ ಚರಣಕಾನತರಾಗಿದ್ದಾರೆ. ಅಂತೆಯೇ ಸ್ವಯಂ ಶ್ರೀಲ ಪ್ರಭುಪಾದರು ಪರಮ ಪ್ರಭುವಾದ ದೇವೋತ್ತಮ ಶ್ರೀಕೃಷ್ಣನ ಪಾದಕಮಲ ಭೃಂಗವಾಗಿದ್ದಾರೆ. ಗಣಿತಶಾಸ್ತ್ರದಲ್ಲಿ ‘ವ್ಯಾಸ’ ವೆಂದರೆ ವೃತ್ತವನ್ನು ಸಮನಾಗಿ ವಿಭಜಿಸುವ ರೇಖೆ ಎಂದರ್ಥ.
ವೃತ್ತವು ಪೂರ್ಣದ ಪ್ರತೀಕ. ಅಂತಹ ಪೂರ್ಣವನ್ನು ತಿಳಿಯಬೇಕಾದರೆ, ಅದರ ಅಂಗೋಪಾಂಗಗಳನ್ನು ವಿಂಗಡಿಸಿ ವಿವರಿಸುವ ಗುರುವಿನ ಅವಶ್ಯಕತೆ ಇದೆ. ವೇದವ್ಯಾಸರು ಪರಿಪೂರ್ಣನಾದ ಭಗವಂತನನ್ನು ಸರಳವಾಗಿ ನಿರೂಪಿಸುವವರು. ಈ ಅರ್ಥದಲ್ಲಿಯೂ ಶ್ರೀಲ ಪ್ರಭುಪಾದರು ಶ್ರೀಕೃಷ್ಣ ಪರಮಾತ್ಮನನ್ನ ನಮಗೆ ಪ್ರೀತಿಯಿಂದ ಪರಿಚಯಿಸುವ ಗುರು ಸ್ವರೂಪಿಗಳು. ಹೀಗೆ ಪ್ರಭುಪಾದರನ್ನು ಜ್ಞಾನದಾತೃವಿನ ರೂಪದಲ್ಲಿ ನಮಗೆ ಒದಗಿಬಂದಂತಹ ಆಧುನಿಕ ಕಾಲದ ವೇದವ್ಯಾಸರೆಂದು ಹೇಳಬಹುದು.






Leave a Reply