ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು ಆದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನ್ಯೂಯಾರ್ಕ್‌ನಲ್ಲಿ
1966, ಜುಲೈ 25 ರಂದು ಮಾಡಿದ ಉಪನ್ಯಾಸ.
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ॥
ಅರ್ಜುನನೇ, ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದ ಅನಂತರ ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯ ನಿವಾಸಕ್ಕೆ ಬರುತ್ತಾರೆ. (ಭಗವದ್ಗೀತೆ 4.9)

ಶ್ರೀಕೃಷ್ಣ ಹೇಳುತ್ತಾನೆ – `ನನ್ನ ಜನ್ಮ ಮತ್ತು ಕರ್ಮ ಎಲ್ಲವೂ ಅಲೌಕಿಕ.’ ದೇವೋತ್ತಮ ಪರಮ ಪುರುಷನ ಅಲೌಕಿಕ ಕರ್ಮಗಳು, ಅವತಾರ ಮತ್ತು ನಿರ್ಗಮನದ ಸತ್ಯವನ್ನು ಅರ್ಥಮಾಡಿಕೊಳ್ಳುವವರು ಬಂಧ ಮುಕ್ತ ವ್ಯಕ್ತಿಗಳಾಗುತ್ತಾರೆ. ತ್ಯಕ್ತ್ವಾ ಎಂದರೆ ದೇಹ ತ್ಯಾಗ ಮಾಡಿದ ಅನಂತರ ಎಂದು ಅರ್ಥ. ಅಂದರೆ ಈಗಿನ ಭೌತಿಕ ಶರೀರವನ್ನು ತ್ಯಜಿಸಿದ ಕೂಡಲೇ ಅವನು ಆ ಕ್ಷಣ ಆಧ್ಯಾತ್ಮಿಕ ಲೋಕಕ್ಕೆ ಸ್ಥಳಾಂತರಗೊಳ್ಳುತ್ತಾನೆ. ಅವನು ಮತ್ತೆಂದೂ ಲೌಕಿಕ ದೇಹ ಪಡೆಯಲು ಪುನಃ ಲೌಕಿಕ ಜಗತ್ತಿಗೆ ಬರುವ ಅಗತ್ಯವಿಲ್ಲ. ಅವನು ಕೃಷ್ಣನಂತೆ ತನ್ನದೇ ಆಧ್ಯಾತ್ಮಿಕ ದೇಹವನ್ನು ಬೆಳೆಸಿಕೊಳ್ಳುತ್ತಾನೆ. ಇದೇ ವಿಧಾನ: ಕೃಷ್ಣನ ಅಲೌಕಿಕ ಅಥವಾ ದಿವ್ಯ ಕರ್ಮಗಳು, ಆವಿರ್ಭಾವ, ಅಂತರ್ಧಾನವನ್ನು ಯಾರು ಅರ್ಥಮಾಡಿಕೊಳ್ಳುವರೋ ಅವರು ಪರಿಪೂರ್ಣವಾಗಿ ಆಧ್ಯಾತ್ಮೀಕರಣಗೊಳ್ಳುತ್ತಾರೆ.
ಆಧ್ಯಾತ್ಮಿಕ ದೇಹ ಈಗಾಗಲೆ ಅಸ್ತಿತ್ವದಲ್ಲಿದೆ. ನಾನು ಚೇತನಾತ್ಮ, ನನಗೆ ಆಧ್ಯಾತ್ಮಿಕ ದೇಹವಿದೆ. ಆದರೆ ಆ ದೇಹವು ಭೌತ ವಸ್ತುವಿನಿಂದ ಮುಚ್ಚಲ್ಪಟ್ಟಿದೆ. ಆದುದರಿಂದ ಕೃಷ್ಣ ಪ್ರಜ್ಞೆಯಿಂದ ಶ್ರೀಕೃಷ್ಣನ ಅಲೌಕಿಕ ಕರ್ಮಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಮುಕ್ತಿ ಹೊಂದುವುದು ಸಾಧ್ಯ. ಆ ಮುಕ್ತಿಯ ಪ್ರತಿಫಲವೇನು? ಇದಕ್ಕೆ ಕೃಷ್ಣನೇ ಭಗವದ್ಗೀತೆಯಲ್ಲಿ (8.16) ಉತ್ತರಿಸಿದ್ದಾನೆ.
ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ ।
ನಾಪ್ನುವನ್ತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ॥
`ನನ್ನ ಪ್ರೀತಿಯ ಅರ್ಜುನ, ಕೌಂತೇಯ, ನನ್ನನ್ನು ಸೇರಿದ ಯಾರೂ ಕೂಡ ದುಃಖಗಳ ಮತ್ತು ಸಂಕಷ್ಟಗಳ ತವರೂರಾದ ಈ ಅಶಾಶ್ವತ ಜಗತ್ತಿಗೆ ಹಿಂತಿರುಗುವುದಿಲ್ಲ.’

ದುಃಖ ಮತ್ತು ಅಶಾಶ್ವತ ಸ್ಥಳ
ಲೌಕಿಕ ಜಗತ್ತು ಸಂಕಟ, ದುಃಖಗಳ ಲೋಕ ಎಂದು ದೇವೋತ್ತಮ ಪರಮ ಪುರುಷನಾದ ಕೃಷ್ಣನು ಸಾರಿದ್ದಾನೆ. ನಮಗೆ ದುಃಖ ಕೊಡಲೆಂದೆ ಈ ಸ್ಥಳವನ್ನು ರೂಪಿಸಿದ್ದರೆ ನಾವು ಅದನ್ನು ಸುಖಮಯಗೊಳಿಸುವುದು ಹೇಗೆ? ಈ ಪ್ರಪಂಚವು ಸಂಕಷ್ಟಕ್ಕೆಂದೆ ಇರುವುದು. ಆದುದರಿಂದ ಭಗವಂತ ಹೇಳುತ್ತಾನೆ , `ನನ್ನ ಬಳಿಗೆ ಬಂದವರು ಯಾರೂ ಈ ದುಃಖದ ಸ್ಥಳಕ್ಕೆ ಹಿಂತಿರುಗಬೇಕಾಗಿಲ್ಲ’.
ನಾವು ಭ್ರಮೆ, ಮಾಯೆಯಲ್ಲಿದ್ದೇವೆ. ನಾವು ಈ ಸ್ಥಳವನ್ನು ಕಾಯಂ ವಾಸಸ್ಥಳವೆಂದು ಭಾವಿಸಿದ್ದೇವೆ. ಕಾಯಂ ವಾಸವೆಂದು ಮಾಡಲು ನಾವು ಎಷ್ಟೆಲ್ಲ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಆದರೆ, ಇದು ದುಃಖದ ಸ್ಥಳ ಮಾತ್ರ ಅಲ್ಲ, ನೀವು ಇಲ್ಲಿ ಕಾಯಂ ಆಗಿ ಇರುವುದು ಸಾಧ್ಯವಿಲ್ಲ ಎಂದು ಭಗವಂತ ಹೇಳುತ್ತಿದ್ದಾನೆ. ಶಾಶ್ವತವಾಗಿ ಇರಲು ನೀವು ಎಷ್ಟೇ ಯೋಜನೆ ಮಾಡಿ, ಆದರೆ ನೀವು ಇಲ್ಲಿ ಹಾಗೆ ಇರಲಾರಿರಿ. ಈ ಜಾಗವನ್ನು ನೀವು ಖಾಲಿ ಮಾಡಲೇಬೇಕು. ಈ ಲೌಕಿಕ ಜಗತ್ತನ್ನು ಸುಖಮಯಗೊಳಿಸಲು ನೀವು ನಿಮ್ಮ ಶಕ್ತಿಯನ್ನು ಹಾಳುಮಾಡಿಕೊಳ್ಳಬಹುದು. ಅಥವಾ ಕೆಲವು ವರ್ಷ ನೀವು ಸುಖ ಸಂತೋಷದಿಂದಲೂ ಇರಬಹುದು. ಆದರೆ, ಈ ಕ್ರೂರಿ ಸಾವಿದೆಯಲ್ಲ, ಅದು ಬಂದು ನಿಮ್ಮನ್ನು ಈ ಸೌಲಭ್ಯಭರಿತ ಸ್ಥಾನದಿಂದ ಸೆಳೆದುಕೊಂಡು ಮತ್ತೊಂದು ಜಾಗದಲ್ಲಿ ಇಡುತ್ತದೆ. ಇದು ನಿಮ್ಮ ಕೈಮೀರಿದುದು. `ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇನೆ. ಬಹಳ ಸಾಹಸದಿಂದ, ಆರ್ಥಿಕ ಮುನ್ನಡೆಯಿಂದ ಮತ್ತು ಲೌಕಿಕ ವಿಜ್ಞಾನದ ಪ್ರಗತಿಯಿಂದ ನಾನು ಹಾಯಾಗಿದ್ದೇನೆ. ನಾನು ಇಲ್ಲೆ ಇರಲು ಇಚ್ಛಿಸುತ್ತೇನೆ. ನಾನು ಸಂತೋಷದಿಂದ ಇದ್ದೇನೆ’ ಎಂದು ನೀವು ಹೇಳಲಾಗದು.
ಕಾಲ ಹೇಳುತ್ತದೆ, `ಇಲ್ಲ, ಅದೆಲ್ಲ ಸಾಧ್ಯವಿಲ್ಲ. ನೀವು ಈ ಕ್ಷಣ ಹೊರಡಬೇಕು. ವಿಳಂಬ ಮಾಡುವಂತಿಲ್ಲ’.

ನಿಮ್ಮ ರಾಷ್ಟ್ರಾಧ್ಯಕ್ಷ ಜಾನ್ ಕೆನಡಿ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಕಾಲ ಬಂದೇ ಬಿಟ್ಟಿತು. ಒಂದು ಕ್ಷಣವೂ ಹಿಂದು ಮುಂದು ನೋಡದೆ ಅವರು ನಿರ್ಗಮಿಸಲೇಬೇಕಾಯಿತು. ನೀವು ಹಿಂಜರಿಯಲಾಗದು.
ನಾವು ಲೌಕಿಕ ಸ್ವರೂಪದ ಹಿಡಿತದಲ್ಲಿದ್ದೇವೆ. ನಾವು ಸ್ವತಂತ್ರರೆಂದು ಎಷ್ಟೇ ಹೇಳಿಕೊಂಡರೂ ನಾವು ಸ್ವತಂತ್ರರಲ್ಲ. ನಾವು ಅವಲಂಬಿಗಳು, ಸಂಪೂರ್ಣವಾಗಿ ಅವಲಂಬಿತರು. ಸ್ವತಂತ್ರರೆಂಬ ತಪ್ಪು ಭಾವನೆಯಿಂದ ನಮಗೆ ನಾವೇ ಮೂರ್ಖರಾಗಿ ದಾರಿ ತಪ್ಪಿಸಿಕೊಳ್ಳಬಹುದು. ಆದರೆ ನಾವು ಸಂಪೂರ್ಣವಾಗಿ ಲೌಕಿಕ ಸ್ವರೂಪದ ಹತೋಟಿಯಲ್ಲಿದ್ದೇವೆ. ಈ ಲೌಕಿಕ ಸ್ವರೂಪವು ಎಷ್ಟು ಪ್ರಬಲವಾಗಿದೆಯೆಂದರೆ ಅದರಿಂದ ಬಿಡಿಸಿಕೊಳ್ಳುವುದು ತುಂಬ ಕಷ್ಟ. ಆದರೆ ಹತಾಶೆ ಬೇಡ. ದಾರಿ ಇದೆ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಮಾಮೇವ ಯೇ ಪ್ರಪದ್ಯನ್ತೇ ಮಾಯಾಮೇತಾಂ ತರನ್ತಿ ತೇ `ನನಗೆ ಶರಣಾಗತರಾದವರು ಲೌಕಿಕ ಶಕ್ತಿಯ ಆಚೆಗೆ ದಾಟಿ ಹೋಗಬಲ್ಲರು’. ಆನಂದ ಮತ್ತು ಜ್ಞಾನದ ನಮ್ಮ ಶಾಶ್ವತ ಬದುಕನ್ನು ಪಡೆದುಕೊಳ್ಳಲು ನಾವು ಶಾಶ್ವತ ಜಗತ್ತಿಗೆ ಹೋಗಲೇಬೇಕೆಂಬ ಸಿದ್ಧಾಂತದ ಅಡಿಯಲ್ಲಿ ಈ ಲೋಕದ ಇಡೀ ವಿಧಾನ ನಡೆಯುತ್ತಿದೆ.
ಇವು ನಮಗಾಗಿ ಕಾಯುತ್ತಿವೆ. ಆದರೆ ನಾವು ಆ ಉನ್ನತ, ಭವ್ಯ ಸ್ಥಾನವನ್ನು ಪಡೆಯಲು ಪ್ರಯತ್ನಿಸದಿದ್ದರೆ ಮತ್ತು ಈ ತಾತ್ಕಾಲಿಕ ಲೌಕಿಕ ಜಗತ್ತಿಗೆ ಹೊಂದಿಕೊಳ್ಳಲು ನಮ್ಮ ಶಕ್ತಿಯನ್ನು ಹಾಳುಮಾಡಿಕೊಂಡರೆ ಅದು ನಮ್ಮ ಮೂರ್ಖತನವಷ್ಟೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ:
ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯನ್ತೇ ನರಾಧಮಾಃ ।
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ॥ 7.15 ।।
ಅತ್ಯಂತ ಮೂರ್ಖರು, ನರಾಧಮರು, ಮಾಯೆಯಿಂದ ಜ್ಞಾನನಷ್ಟವಾದವರು, ಆಸುರೀ ಸ್ವಭಾವದವರು, ಈ ಬಗೆಯ ದುಷ್ಟರು ನನಗೆ ಶರಣಾಗುವುದಿಲ್ಲ.

ನಾವು ಭಗವದ್ಗೀತೆಯನ್ನು ಓದಿದರೆ ಅದನ್ನು ನಾವು ಯಥಾ ರೂಪದಲ್ಲಿಯೇ ಸ್ವೀಕರಿಸಬೇಕು. ನಮ್ಮ ಉದ್ದೇಶಕ್ಕೆ ಹೊಂದಾಣಿಕೆಯಾಗಲೆಂದೇ ನಾವು ನಮ್ಮದೆ ವ್ಯಾಖ್ಯಾನ ನೀಡಲಾಗದು. ಭಗವದ್ಗೀತೆಯನ್ನು ಪರಂಪರಾ ಪದ್ಧತಿಯಂತೆ ಗ್ರಹಿಸಿಕೊಳ್ಳಲಾಗುತ್ತದೆಂದು ಈಗಾಗಲೇ ನಾಲ್ಕನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಪರಂಪರ ಪದ್ಧತಿ ಎಂದರೆ ಗುರು-ಶಿಷ್ಯ ಪರಂಪರೆ. ಆದುದರಿಂದ ನಾವು ಈ ಗುರು ಪರಂಪರೆಯಿಂದ ಜ್ಞಾನವನ್ನು ಪಡೆದುಕೊಳ್ಳಬೇಕು. ಕೋಟ್ಯಂತರ ವರ್ಷಗಳ ಹಿಂದೆ ಭಗವದ್ಗೀತೆಯನ್ನು ಸೂರ್ಯದೇವನಿಗೆ ಬೋಧಿಸಲಾಯಿತು. ಇದನ್ನು ಗೀತೆಯಲ್ಲಿಯೂ ಹೇಳಲಾಗಿದೆ. ಸೂರ್ಯದೇವನು ಭಗವದ್ಗೀತೆಯನ್ನು ಮನುವಿಗೆ ಬೋಧಿಸಿದನು. ಅನಂತರ ಮನುವು ಇಕ್ಷಾಕುವಿಗೆ ಬೋಧಿಸಿದನು. ಈ ರೀತಿ ಭಗವದ್ಗೀತೆಯು ಪರಂಪರೆಯಲ್ಲಿ ಸಾಗಿಬಂದಿದೆ. ಆದರೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಯೋಗ ಪದ್ಧತಿಯ ಶ್ರೇಷ್ಠ ತತ್ತ್ವಜ್ಞಾನ – ಭಗವದ್ಗೀತೆಯು – ಕಳೆದುಹೋಯಿತು. ಆದುದರಿಂದ ಶ್ರೀಕೃಷ್ಣನು ಅದನ್ನು ಪುನಃ ಅರ್ಜುನನಿಗೆ ಬೋಧಿಸಿದ. ಆದುದರಿಂದ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅರ್ಜುನನಂತೆಯೇ ನಾವೂ ಅರ್ಥ ಮಾಡಿಕೊಳ್ಳಬೇಕು. ಅದೇ ವಿಧಾನ.
ಹುಟ್ಟಿಲ್ಲ, ಸಾವಿಲ್ಲ
ಭಗವಂತನ ಈ ಮಾತುಗಳನ್ನು ಗಮನಿಸಿ. ಅವನೆನ್ನುತ್ತಾನೆ, `ನನ್ನ ಆವಿರ್ಭಾವ ಮತ್ತು ಅಂತರ್ಧಾನ…’ ಅಂದರೆ ಹುಟ್ಟು ಸಾವು ಎಂಬ ಪದಬಳಕೆ ಭಗವಂತನಿಗೆ ಅನ್ವಯಿಸದು. ಈ ಹುಟ್ಟು ಸಾವು ಎಲ್ಲ ಲೌಕಿಕ ದೇಹಗಳಿಗೆ ಮಾತ್ರ ಅನ್ವಯ. ಲೌಕಿಕ ದೇಹಕ್ಕೆ ಜನ್ಮ ಉಂಟು. ಸಾವು ಉಂಟು. ಆದರೆ ಆಧ್ಯಾತ್ಮಿಕ ದೇಹವು ಶಾಶ್ವತ. ಅದಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಆದುದರಿಂದ ಆಧ್ಯಾತ್ಮಿಕ ದೇಹಕ್ಕೆ ಸಂಬಂಧಿಸಿದಂತೆ ನಾವು ಬಳಸಬೇಕಾದ ಭಾಷೆ `ಆವಿರ್ಭಾವ ಮತ್ತು ಅಂತರ್ಧಾನ.’

ಸೂರ್ಯನನ್ನು ಕುರಿತಂತೆ ನಾನು ಅನೇಕ ಬಾರಿ ಅನೇಕ ಉದಾಹರಣೆಗಳನ್ನು ನೀಡಿದ್ದೇನೆ. ಸೂರ್ಯ ಆವಿರ್ಭವಿಸುತ್ತಾನೆ, ನಿರ್ಗಮಿಸುತ್ತಾನೆ. ಸೂರ್ಯನಿಗೆ ಹುಟ್ಟು ಸಾವು ಎಂಬುದಿಲ್ಲ. ಏಕೆಂದರೆ ಸೂರ್ಯನು ಶಾಶ್ವತ. ಆದುದರಿಂದ ಭಗವಂತ ಕೂಡ ಸೂರ್ಯನಂತೆ ಆವಿರ್ಭವಿಸುತ್ತಾನೆ ಮತ್ತು ನಿರ್ಗಮಿಸುತ್ತಾನೆ. ಅಂದರೆ ಕೃಷ್ಣ ನನ್ನು ನಾವು ನೋಡಲಿಲ್ಲವೆಂದರೆ ಅವನು ಇಲ್ಲವೆಂದು ಅರ್ಥವಲ್ಲ.
ಅಲೌಕಿಕ ಜ್ಞಾನವನ್ನು ಪಡೆದುಕೊಂಡಾಗ ನಾವು ಕೃಷ್ಣನನ್ನು ಭಗವದ್ಗೀತೆಯ ಮೂಲಕ ನೋಡುತ್ತೇವೆ. ಭಗವದ್ಗೀತೆಯೇ ಕೃಷ್ಣ. ಅದು ಕೃಷ್ಣನಿಂದ ಭಿನ್ನವಲ್ಲ. ಅದೇ ಪರಮ ಜ್ಞಾನದ ಅರಿವು. ಪರಮ ವಿಶ್ವದಲ್ಲಿ ವ್ಯಕ್ತಿ ಮತ್ತು ಅವನ ಮಾತಿನಲ್ಲಿ ವ್ಯತ್ಯಾಸವಿಲ್ಲ. ಈಗ ನೋಡಿ, ನನ್ನ ಹಾಡು ಅಥವಾ ಮಾತುಗಳನ್ನು ಟೇಪ್‌ರೆಕಾರ್ಡ್‌ನಲ್ಲಿ ಧ್ವನಿಮುದ್ರಿಸಿಕೊಳ್ಳಲಾಗುತ್ತಿದೆ. ಆದರೆ ಅವು ನನಗಿಂತ ಭಿನ್ನ. ಇದು ದ್ವಂದ್ವದ ಜಗತ್ತು. ಆದರೆ ಪರಮ ವಿಶ್ವದಲ್ಲಿ ಅಂತಹ ವ್ಯತ್ಯಾಸವಿಲ್ಲ.
ನಾವು ಹರೇ ಕೃಷ್ಣ , ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಜಪಿಸುತ್ತೇವೆ. ಕೃಷ್ಣನ ಹೆಸರು ಮತ್ತು ವ್ಯಕ್ತಿ ಎರಡೂ ಒಂದೇ. ಕೃಷ್ಣನ ಅಲೌಕಿಕ ನಾಮವು ನನ್ನ ಕಿವಿಯಲ್ಲಿ ಪ್ರತಿಧ್ವನಿಸಿದಾಗ ಕೃಷ್ಣನು ನನ್ನ ನಾಲಗೆಯಲ್ಲಿ, ಕಿವಿಯಲ್ಲಿ ಇದ್ದಾನೆ ಎಂದೇ ಅರ್ಥ. ಆದುದರಿಂದ ಈ ಅಲೌಕಿಕ ಶಬ್ದದ ಕಂಪನವನ್ನು ನಾವು ಭಕ್ತಿ ಮತ್ತು ಪೂರ್ಣ ಲಕ್ಷ್ಯದಿಂದ ಜಪಿಸಿದರೆ ಅದು ಧ್ಯಾನ ಮತ್ತು ಯೋಗದ ಅತ್ಯುನ್ನತ ವಿಧಾನ ಎನಿಸಿಕೊಳ್ಳುತ್ತದೆ.

ಇದಂತೂ ತುಂಬಾ ಸುಲಭ. ಅದರ ವಿಧಾನ ಅತ್ಯಂತ ಸರಳ. ನೀವು ಹರೇ ಕೃಷ್ಣ ಮಂತ್ರ ಜಪಿಸುವಿರಿ, ನೀವು ಅದನ್ನೇ, ಅದೇ ಶಬ್ದವನ್ನೆ ಕೇಳುವಿರಿ. ಅಂದಹಾಗೆ, ನಿಮ್ಮ ಮನಸ್ಸು ಕೃಷ್ಣ ಶಬ್ದದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅಂದರೆ ಆ ಶಬ್ದ, ಧ್ವನಿಗೂ ಕೃಷ್ಣನಿಗೂ ವ್ಯತ್ಯಾಸವಿಲ್ಲ. ಆದುದರಿಂದ, ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ನಾವು ಜಪಿಸಿದಾಗ ಅದು ಕೃಷ್ಣನೇ ಎಂದು ಅರ್ಥ. ಹೀಗಾಗಿಯೇ `ನನ್ನ ಆವಿರ್ಭಾವ, ಅಂತರ್ಧಾನ, ಕರ್ಮಗಳು ಮತ್ತು ವೈಭವಗಳು ದಿವ್ಯಂ’ ಎಂದು ಕೃಷ್ಣ ಹೇಳುತ್ತಾನೆ. ದಿವ್ಯಂ ಎಂದರೆ ಅಲೌಕಿಕ. ಅವು ಈ ದ್ವಂದ್ವದ ಜಗತ್ತಿಗೆ ಸೇರಿದುದಲ್ಲ.
ಉನ್ನತ ಸ್ವರೂಪ

ಅಲೌಕಿಕ ಎಂದರೆ ದ್ವಿ ರೂಪಕ್ಕಿಂತ ಮೇಲ್ಮಟ್ಟದ್ದು. ಅದು ಪರಮ ಜಗತ್ತಿನ ಸ್ವರೂಪ. ನೀವು ಮುಕ್ತರಾಗಬೇಕೆ? ಈ ಅಂಶಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ಏನೆಂದರೆ, ಕೃಷ್ಣನು `ಕೃಷ್ಣ’ ಶಬ್ದದಿಂದ ಭಿನ್ನ ಅಲ್ಲ. ಕೃಷ್ಣನು ಭಗವದ್ಗೀತೆಯಿಂದ ಭಿನ್ನ ಅಲ್ಲ, ಕೃಷ್ಣನು ಕೃಷ್ಣನಿಗೆ ಸಂಬಂಧಿಸಿದ ಯಾವುದರಿಂದಲೂ ಭಿನ್ನ ಅಲ್ಲ. ಇವುಗಳನ್ನು ಸರಿಯಾಗಿ ಅರಿತುಕೊಳ್ಳಬೇಕು.
ಇಡೀ ವಿಶ್ವವು ಕೃಷ್ಣನ ಶಕ್ತಿಯ ಸ್ವರೂಪವಾಗಿದೆ. ಎರಡು ರೀತಿಯ ಶಕ್ತಿಗಳಿವೆ: ತಳ ಮಟ್ಟದ ಶಕ್ತಿ ಮತ್ತು ಉನ್ನತ ಶಕ್ತಿ. ಉನ್ನತ ಶಕ್ತಿಯು ಜೀವಿಗಳನ್ನು ಅಭಿವ್ಯಕ್ತಪಡಿಸುತ್ತದೆ. ಜೀವಿಗಳಾದ ನಾವು ಭಗವಂತನ ಉನ್ನತ ಸ್ವರೂಪಕ್ಕೆ ಸೇರಿದವರಾಗಿದ್ದೇವೆ. ಜೀವ ಭೂತಾಮ್ ಮಹಾಬಾಹೋ ಯಯೇದಂ ಧಾರ್ಯತೇ ಜಗತ್. ಈ ಜಗತ್ತು ತಳಮಟ್ಟ, ಲೌಕಿಕ ಸ್ವರೂಪದಿಂದ ಮಾಡಿದ್ದಾಗಿದೆ. ಮತ್ತು ಉನ್ನತ ಸ್ವರೂಪದವರೆಂದರೆ ಜೀವಿಗಳೇ. ಆದರೆ ಕೃಷ್ಣನಿಗೆ ಸಂಬಂಧಿಸಿದ ಯಾವುದೂ ಕೂಡ ಉನ್ನತ ಸ್ವರೂಪದ್ದಾಗುತ್ತದೆ. ಕೃಷ್ಣ ಪ್ರಜ್ಞೆ ಜೊತೆಗೆ ಅಂಟಿಕೊಂಡಿರುವ ಭೌತಿಕ ವಸ್ತುಗಳು ಉನ್ನತ ಸ್ವರೂಪಕ್ಕೇ ಪರಿವರ್ತನೆಯಾಗುತ್ತವೆ.
ಈ ಉದಾಹರಣೆಯನ್ನು ನಾನು ಅನೇಕ ಬಾರಿ ನೀಡಿದ್ದೇನೆ – ನೀವು ಒಂದು ಕಬ್ಬಿಣದ ಸರಳನ್ನು ಬೆಂಕಿಯಲ್ಲಿ ಇಟ್ಟರೆ ಅದು ಬೆಚ್ಚಗಾಗುತ್ತದೆ, ಇನ್ನಷ್ಟು ಬೆಚ್ಚಗಾಗುತ್ತದೆ ಮತ್ತು ಕ್ರಮೇಣ ಕೆಂಪಾಗುತ್ತದೆ. ಅದು ಕೆಂಪಾಗಿ ಕಾದ ಮೇಲೆ ಬೆಂಕಿಯ ಸ್ವರೂಪಕ್ಕೆ ವರ್ಗವಾಗುತ್ತದೆ. ಆಗ ಅದು ಕಬ್ಬಿಣವಾಗಿರುವುದಿಲ್ಲ. ಅದೇ ರೀತಿ, ನೀವು ಸತತವಾಗಿ ಕೃಷ್ಣಪ್ರಜ್ಞೆಯಲ್ಲಿ ಉಳಿದರೆ ನೀವು ತತ್‌ಕ್ಷಣ ಕೃಷ್ಣನ ಉನ್ನತ ಸ್ವರೂಪಕ್ಕೆ ವರ್ಗಾಯಿಸಲ್ಪಡುತ್ತೀರ ಮತ್ತು ಅದೆ ನಿಮಗೆ ಮುಕ್ತಿ. ನಾವು ಆ ಉನ್ನತ ಸ್ವರೂಪದಲ್ಲಿ ಸಾವಿಗೀಡಾದರೆ, ಆಗ ಈ ಸೂತ್ರ ಅನ್ವಯವಾಗುತ್ತದೆ – ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ – ಅವನು ಲೌಕಿಕ ಜಗತ್ತಿಗೆ ಮರಳಿ ಬರಬೇಕಾಗಿಲ್ಲ.

ಆದುದರಿಂದ ನಾವು ಕೃಷ್ಣಪ್ರಜ್ಞೆಯನ್ನು ಯಾವ ರೀತಿ ಅನುಸರಿಸಬೇಕೆಂದರೆ ನಾವು ಶಾಶ್ವತವಾಗಿ ಉನ್ನತ ಸ್ವರೂಪದಲ್ಲಿಯೇ ಇರುವಂತೆ. ಮತ್ತು ನಾವು ಆ ಉನ್ನತ ಸ್ವರೂಪದಲ್ಲಿಯೇ ಸತ್ತರೆ, ಅಲೌಕಿಕ ಜಗತ್ತನಲ್ಲಿ ನಮಗೆ ಸ್ಥಾನ ಮೀಸಲು ಖಚಿತ. ಭಾರತದಲ್ಲಿ ಒಂದು ನಾಣ್ಣುಡಿ ಇದೆ: ಭಜನ್ ಕರೋ ಪೂಜನ್ ಕರೋ ಮರ್ತೇ ಜಾನ್ಲೇ ಹಯ. ಅಂದರೆ ನೀವು ದೊಡ್ಡ ಧ್ಯಾನಿಗಳಾಗಿರಬಹುದು, ನೀವು ಶ್ರೇಷ್ಠ ಧಾರ್ಮಿಕರು ಅಥವಾ ಯೋಗಿ ಅಥವಾ ವಿದ್ವಾಂಸರಿರಬಹುದು – ಅಥವಾ ನೀವು ಏನೇ ಆಗಿರಿ – ಎಲ್ಲವೂ ಸಾವಿನ ಸಮಯದಲ್ಲಿಯೇ ಪರೀಕ್ಷೆಗೆ ಒಳಗಾಗುವುದು.
ನೀವು ಎಷ್ಟು ಪ್ರಗತಿ ಸಾಧಿಸಿರುವಿರಿ ಎಂಬುವುದನ್ನು ಸಾವಿನ ಸಮಯದಲ್ಲಿ ಪರೀಕ್ಷಿಸಲಾಗುವುದು. ಅದನ್ನು ಭಗವದ್ಗೀತೆಯಲ್ಲಿಯೂ ವಿವರಿಸಲಾಗಿದೆ: ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತಿ ಅಂತೇ ಕಲೇವರಂ. ಅಂತೇ ಎಂದರೆ `ಜೀವದ ಕೊನೆಯಲ್ಲಿ’ ಎಂದು ಅರ್ಥ. ದೇಹಕ್ಕೆ ಖಂಡಿತ ಅಂತ್ಯ ಉಂಟು. ಅಂತವಂತ ಇಮೇ ದೇಹಾ. ದೇಹವು ಅಂತವತ್: ಅಂತ್ಯಗೊಳ್ಳುವುದೆ ಅದರ ವಿಧಿ. `ಸಾವಿನಷ್ಟೆ ಖಚಿತ.’ ಆದರೆ ನಿತ್ಯಸ್ಯೋಕ್ತ್ತಾಃ ಶರೀರಿಣಃ. ಶರೀರಿಣಃ ಎಂದರೆ ದೇಹವನ್ನು ಆವರಿಸಿಕೊಂಡಿರುವ ಚೇತನಾತ್ಮದ ಕಿಡಿ. ಅದು ನಿತ್ಯ, ಶಾಶ್ವತ. ಈ ಇಡೀ ವಿಧಾನವೆಂದರೆ ಶಾಶ್ವತವು, ಕಾಯಂ ಅಲ್ಲದ ಲೌಕಿಕ ಸಂಪರ್ಕವನ್ನು ಕಳಚಿಕೊಳ್ಳಬೇಕು. ಮತ್ತು ಅವನು ಆಧ್ಯಾತ್ಮಿಕ ಜಗತ್ತಿಗೆ ಹೊರಡಬೇಕು.
ಪ್ರಸ್ತುತ ಬದುಕಿನಲ್ಲಿ ನಾವು ಹೇಗಿರಬೇಕೆಂದರೆ ಬೆಂಕಿಯಲ್ಲಿ ಇರುವ ಕಬ್ಬಿಣದ ಸರಳಿನಂತೆ ನಾವು ನಮ್ಮ ಬದುಕು ಸದಾ ಉನ್ನತ ಸ್ವರೂಪ, ಆಧ್ಯಾತ್ಮಿಕ ಸ್ವರೂಪದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಒಂದೆರಡು ಗಂಟೆ ಈ ಸಂಗ ಮಾಡಿ, ಉನ್ನತ ಸ್ವರೂಪದಲ್ಲಿ ಇದ್ದು ಅನಂತರ ಈ ಸ್ಥಳದಿಂದ ಹೋದಮೇಲೆ ನಾವು ಪುನಃ ಕೆಳ ಸ್ವರೂಪಕ್ಕೆ ಬರುವುದಲ್ಲ ಇದು. ಈ ಸ್ಥಳದಲ್ಲಿ ನಾವು ಏನೇನು ಕೇಳುತ್ತೇವೋ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಉದಾಹರಣೆಗೆ, ಶ್ರೀಕೃಷ್ಣ ಹೇಳುತ್ತಾನೆ, ಈ ಅಲೌಕಿಕ ವಿಷಯಗಳಾದ ಅವನ ಆವಿರ್ಭಾವ, ಅಂತರ್ಧಾನ ಮತ್ತು ಲೀಲೆಗಳನ್ನು ಯಾರು ಅರ್ಥ ಮಾಡಿಕೊಳ್ಳುವರೋ ಅವರು ದೇಹ ತ್ಯಜಿಸಿದ ಮೇಲೆ ದೇವೋತ್ತಮ ಪರಮ ಪುರುಷನ ಸಾಮ್ರಾಜ್ಯಕ್ಕೆ ಹಿಂತಿರುಗುತ್ತಾರೆ. ಈಗ, ಈ ಅಂಶವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಆದುದರಿಂದ, ಇದು ಹೇಗೆ ಸಾಧ್ಯ ಎಂಬುವುದನ್ನು ನಿಮಗೆ ಸ್ಪಷ್ಟವಾಗಿ ಅರ್ಥ ಮಾಡಿಸಲು ನಾನು ಪ್ರಯತ್ನಿಸುತ್ತಿರುವೆ. ನಾವು ಎಲ್ಲವನ್ನೂ ಪರಿಶೀಲಿಸಿ ಅರ್ಥ ಮಾಡಿಕೊಳ್ಳಬೇಕು. ಭಗವದ್ಗೀತೆಯಲ್ಲಿ ಹೇಳಿರುವುದನ್ನು ಗಮನಿಸಿ: ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ – ಈ ವಿಷಯಗಳ ಬಗೆಗೆ ಅರಿವು ಉಳ್ಳವರಿಂದ ತಿಳಿದುಕೊಳ್ಳಬೇಕು. ಭಗವದ್ಗೀತೆಯನ್ನು ಖರೀದಿಸಿಬಿಟ್ಟರೆ ಆಗುವುದಿಲ್ಲ. ಅಷ್ಟು ಸುಲಭವಲ್ಲ. ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ. ಯಾರಿಗೆ ಅದರ ಬಗೆಗೆ ಜ್ಞಾನವಿದೆಯೋ ಅಂತಹವರನ್ನು ನೀವು ಸಂಪರ್ಕಿಸಬೇಕು. ಈ ರೀತಿ ಮಾಡದಿದ್ದರೆ ನಿಮಗೆ ಅರ್ಥವಾಗದು. ಇದನ್ನೇ ಶಿಫಾರಸು ಮಾಡಿರುವುದು. ಇದು ಅಗತ್ಯ.

ಉನ್ನತ ಸ್ವರೂಪದ ಬಗೆಗೆ ಅರಿಯುವ ನಮ್ಮ ಪ್ರವೃತ್ತಿಯನ್ನು ನಾವು ಜಾಗೃತಿಗೊಳಿಸಬೇಕು. ಕೆಳಗಿನ ಸ್ವರೂಪದಲ್ಲಿ ನಾವು ಉಣ್ಣುವುದು, ಮಲಗುವುದು, ರಕ್ಷಿಸಿಕೊಳ್ಳುವುದು ಮತ್ತು ಇಂದ್ರಿಯ ತೃಪ್ತಿಯಲ್ಲಿ ಬಿಡುವಿಲ್ಲದಂತೆ ನಿರತರಾಗಿರುತ್ತೇವೆ. ತಳ ಸ್ವರೂಪದಲ್ಲಿಯೇ ಇದ್ದು ನಾವು ಸಂತೃಪ್ತರಾಗಬಾರದು. ಮಾನವ ಬದುಕಿರುವುದು ಉನ್ನತ ಸ್ವರೂಪದ ಬೆಳವಣಿಗೆಗಾಗಿ. ಆದುದರಿಂದ ವೇದಾಂತಸೂತ್ರವು ಅಥಾತೋ ಬ್ರಹ್ಮ-ಜಿಜ್ಞಾಸಾ ಎಂದು ಹೇಳುತ್ತದೆ. ಅಂದರೆ, ಈಗ ನಮ್ಮಲ್ಲಿ ಮಾನವ ಶರೀರದ ಪ್ರಗತಿಹೊಂದಿದ ಪ್ರಜ್ಞೆ ಇದೆ. ಪರಮ ಬ್ರಹ್ಮನ್ ಬಗೆಗೆ ಕೇಳಲು ಇದು ಸಕಾಲ.
ಆದುದರಿಂದ ಉನ್ನತ ಸ್ವರೂಪವನ್ನು ಬೆಳೆಸಬೇಕಾಗಿದೆ. ಅಂತಹ ಉನ್ನತ ಸ್ವರೂಪದ ಅಭಿವೃದ್ಧಿಗೆಂದೆ ಈ ಅಲೌಕಿಕ ಸಂಪರ್ಕ ಇರುವುದು. ವೇದಗಳಲ್ಲಿ ಹೇಳಿರುವಂತೆ ನಾವು ಉನ್ನತ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಉನ್ನತ ಸ್ವರೂಪ ಕುರಿತಂತೆ ನಿಮಗೆ ಸರಿಯಾಗಿ ಬೋಧಿಸುವವರನ್ನು ನೀವು ಸಂಪರ್ಕಿಸದಿದ್ದರೆ ನೀವು ಉನ್ನತ ಸ್ವರೂಪವನ್ನು ಅಭಿವೃದ್ಧಿ ಪಡಿಸಲಾರಿರಿ ಎಂದು ಎಲ್ಲ ಧರ್ಮ ಗ್ರಂಥಗಳೂ ಹೇಳಿವೆ. ನಿಮಗೆ ಉನ್ನತ ಸ್ವರೂಪವಿದೆ. ಆದರೆ ಅದನ್ನು ಎಚ್ಚರಿಸಲು ನಿಮಗೆ ಉನ್ನತ ಸ್ವರೂಪದಲ್ಲಿನ ವ್ಯಕ್ತಿಯ ನೆರವು ಬೇಕು. ಅದನ್ನೆ ಶಿಫಾರಸ್ಸು ಮಾಡುವುದು.
ಉನ್ನತ ಅಧಿಕಾರವನ್ನು ಒಪ್ಪಿಕೊಳ್ಳುವುದು

`ನನಗೆ ಆಧ್ಯಾತ್ಮಿಕ ಗುರುವಿನ ಅಗತ್ಯವಿಲ್ಲ’ ಎಂದು ಯಾರಾದರು ಹೇಳಿದರೆ ಅದು ತಪ್ಪು. ನಮ್ಮ ವೈದಿಕ ಸಂಸ್ಕೃತಿಯಲ್ಲಿ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬಾರ್ಕ ಮತ್ತು ಚೈತನ್ಯ ಮಹಾಪ್ರಭುಗಳಂತಹ ಶ್ರೇಷ್ಠ ವಿದ್ವಾಂಸರೂ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಿದ್ದರು. ಭಾರತದಲ್ಲಿ ಅನೇಕ ಮಹಾನ್ ಪಂಡಿತರು ಆಗಿಹೋಗಿದ್ದಾರೆ. ಅವರೆಲ್ಲ ಗುರುವನ್ನು ಹೊಂದಿದ್ದರು. ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೂ ಆಧ್ಯಾತ್ಮಿಕ ಗುರುಗಳಿದ್ದರು. ಅವನಿಗೆ ತನ್ನದೇ ಉದಾಹರಣೆ ನೀಡಬೇಕೆನಿಸಿತ್ತು. ಯಾವುದೇ ಸಂದರ್ಭದಲ್ಲಿಯೂ ಯಾರಿಂದಲೇ ಆದರೂ ಜ್ಞಾನ ಪಡೆಯುವ ಅಗತ್ಯ ಅವನಿಗೆ ಇರಲಿಲ್ಲ. ಆದರೆ ಅವನು ಮಾನವ ಜೀವಿಯ ಪಾತ್ರ ನಿರ್ವಹಿಸುತ್ತಿದ್ದುದರಿಂದ ಆಧ್ಯಾತ್ಮಿಕ ಗುರುವಿನ ಬಗೆಗೆ ತನ್ನದೇ ನಿದರ್ಶನ ನೀಡಬೇಕೆಂದು ಅವನು ಹಾಗೆ ಮಾಡಿದ. ಅದೇ ಪದ್ಧತಿ. ಏವಂ ಪರಂಪರಾ-ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ. ಈ ಗುರು-ಶಿಷ್ಯ ಪರಂಪರೆಯನ್ನು ಸ್ವೀಕರಿಸಬೇಕು.
ನಾವು ಈಗ ಕೃಷ್ಣನಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ, ಅರ್ಜುನನು ಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಅರ್ಜುನ ಕೃಷ್ಣನಿಗೆ ಹೇಳುತ್ತಾನೆ, ಶಿಷ್ಯಸ್ತೇ ಅಹಂ ಶಾ ಮಾಂ ತ್ವಾಂ ಪ್ರಪನ್ನಮ್ : ನಾನು ಈಗ ನಿನಗೆ ಶರಾಣಾಗುತ್ತಿರುವೆ. ನಿನ್ನ ಶಿಷ್ಯನನ್ನಾಗಿ ಸ್ವೀಕರಿಸು. ಶಿಷ್ಯ ಎಂಬ ಪದವು ಶಸ್-ಧಾತುವಿನಿಂದ ಬರುತ್ತದೆ. ಉನ್ನತ ಅಧಿಕಾರಿಯಿಂದ ಶಿಸ್ತಿನ ಕ್ರಮಗಳನ್ನು ಸ್ವಯಂ ಸ್ವೀಕರಿಸುವವನೇ ಶಿಷ್ಯ.
ಆದುದರಿಂದ ಉನ್ನತ ಸ್ವಭಾವದಲ್ಲಿ ಇರಲು ನಾವು ಕೃಷ್ಣನಂತಹವರನ್ನು ಅಥವಾ ಅವನ ಪ್ರತಿನಿಧಿಯನ್ನು ಸಂಪರ್ಕಿಸಬೇಕು. ಅರ್ಜುನನಿಗೆ ಭಗವದ್ಗೀತೆಯಿಂದ ಬೋಧನೆಯಾಯಿತು ಮತ್ತು ಅವನು ಉನ್ನತ ಸ್ವರೂಪವನ್ನು ಅಭಿವೃದ್ಧಿಪಡಿಸಿದ. ನಾವು ಅರ್ಜುನನಿಂದ ಜ್ಞಾನವನ್ನು ಯಥಾರೂಪವಾಗಿ ಪಡೆದುಕೊಳ್ಳಬೇಕು. ನಾವು ಯಾವಾಗಲೂ ನಮ್ಮನ್ನು ಉನ್ನತ ಸ್ವರೂಪದಲ್ಲಿ ಇಡಬೇಕು. ಆಗ ನಾವು ಸಾವಿನ ಸಮಯಕ್ಕೆ ಸಿದ್ಧರಾಗುತ್ತೇವೆ. ಎಂದಾದರೊಂದು ದಿನ ನಾವು ಈ ದೇಹವನ್ನು ತ್ಯಜಿಸಲೇಬೇಕು. ನಾನು 70 ವರ್ಷದವ. ನನ್ನ ಕಾಲ ಸನ್ನಿಹಿತವಾಗಿದೆ. ನಾನು ಈ ದೇಹವನ್ನು ತ್ಯಜಿಸಲೇಬೇಕು. ಈಗಾಗಲೇ ಎಚ್ಚರಿಕೆ ಇದೆ.

ಆದುದರಿಂದ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಉದಾಹರಣೆಗೆ, ನ್ಯೂಯಾರ್ಕ್‌ನಿಂದ ಕ್ಯಾಲಿಫೋರ್ನಿಯಾಕ್ಕೆ ಹೋಗಲು ನೀವು ಸ್ಥಳ ಕಾದಿರಿಸಬೇಕಲ್ಲವೆ, ಅನೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅದೇ ರೀತಿ, ಈ ದೇಹವನ್ನು ತ್ಯಜಿಸಬೇಕೆಂಬುದು ನಮಗೆ ತಿಳಿದಿರಬೇಕು ಮತ್ತು ನಾವು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ನಾವು ಅದಕ್ಕೆ ಸಿದ್ಧವಾಗದೆ, ಸಾವು ದಿಢೀರನೆ ಬಂದರೆ, ನಮ್ಮ ಇಡೀ ಬಾಳು ಹಾಳಾಗಿಬಿಡುತ್ತದೆ.
ಆದುದರಿಂದ ನಾವು ಕೃಷ್ಣನನ್ನು ಕುರಿತು ಯೋಚಿಸಬೇಕು. ಅವನ ಚಟುವಟಿಕೆಗಳು (ಕರ್ಮ), ಅವನ ಆವಿರ್ಭಾವ, ಅವನ ಅಂತರ್ಧಾನ ಮುಂತಾದ ವಿಷಯಗಳ ಬಗೆಗೆ ಯೋಚಿಸುವುದು. ಅದೇ ಅತ್ಯಂತ ಸುಲಭವಾದ ವಿಧಾನ. ಇವುಗಳನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಈ ಕುತೂಹಲ ಅಥವಾ ಆಸಕ್ತಿಯು ಅಲೌಕಿಕ ಶೋಧ ಎನ್ನುವುದು. ಈ ವಿಷಯದಲ್ಲಿ ಜ್ಞಾನ ಉಳ್ಳವರಿಂದ ನಾವು ಅದಕ್ಕೆ ಉತ್ತರ ಪಡೆದುಕೊಳ್ಳಬೇಕು. ಈ ರೀತಿಯಲ್ಲಿ ನಾವು ನಿರಂತರವಾಗಿ ಕೃಷ್ಣ ಪ್ರಜ್ಞೆಯಲ್ಲಿ ಇರಬಹುದು. ಇದರ ಫಲವೇನು? ಈ ದೇಹ ತ್ಯಜಿಸಿದ ಕೂಡಲೇ ನಾವು ಅಲೌಕಿಕ ವಿಶ್ವಕ್ಕೆ ವರ್ಗಾವಣೆಗೊಳ್ಳುವುದೇ ಅದರ ಫಲ. ಅದೇ ವಿಧಾನ, ಪ್ರಕ್ರಿಯೆ.






Leave a Reply