ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರೂ ಆದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಪಶ್ಚಿಮ ಬಂಗಾಳದ
ಮಾಯಾಪುರದಲ್ಲಿ, ಮಾರ್ಚ್ 27, 1975ರಂದು ಮಾಡಿದ ಉಪನ್ಯಾಸ.
ಯದ್ ಅದ್ವೈತಂ ಬ್ರಹ್ಮೋಪನಿಷದಿ ತದ್ ಅಪಿ ಅಸ್ಯ ತನು-ಭಾ
ಯ ಆತ್ಮಾಂತರ್ಯ್ಮಿ ಪುರುಷ ಇತಿ ಸೋಅಸ್ಯಾಂಶ-ವಿಭವಃ
ಷಡ್-ಐಶ್ವರ್ಯೈಃ ಪೂರ್ಣೋ ಯ ಇಹ ಭಗವಾನ್ ಸ ಸ್ವಯಂ ಅಯಂ
ನ ಚೈತನ್ಯಾತ್ ಕೃಷ್ಣಾತ್ ಜಗತಿ ಪರ-ತತ್ತ್ವಂ ಪರಂ ಇಹ
`ಉಪನಿಷತ್ತುಗಳು ಯಾವುದನ್ನು ನಿರಾಕಾರ ಬ್ರಹ್ಮವೆಂದು ಹೇಳುವುವೋ ಅದು ಆ ಭಗವಂತನ ದೇಹಕಾಂತಿ. ಪರಮಾತ್ಮನೆಂದು ಕರೆಯಲಾದ ಭಗವಂತನು ಅವನ ಸ್ಥಳೀಯ ವಿಸ್ತರಣೆ. ಶ್ರೀ ಚೈತನ್ಯ ಮಹಾಪ್ರಭುವೇ ಆರು ಬಗೆಯ ಐಶ್ವರ್ಯ ಸಹಿತನಾದ ದೇವೋತ್ತಮ ಪರಮ ಪುರುಷನಾದ ಸಾಕ್ಷಾತ್ ಶ್ರೀ ಕೃಷ್ಣ. ಅವನೇ ಪರಮ ಸತ್ಯ. ಅವನಿಗೆ ಸರಿಸಾಟಿಯಾದ ಅಥವಾ ಅವನಿಗಿಂತ ಮಿಗಿಲಾದ ಸತ್ಯ ಬೇರೊಂದಿಲ್ಲ.’
– ಚೈ.ಚ.ಆದಿ 1.3
ಶ್ರೀ ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ಕೃಷ್ಣ ಚೈತನ್ಯರಿಗಿಂತ ಪರಮ ಸತ್ಯ ಬೇರೊಂದಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ನಾವು ಸತ್ಯದ ಬೆನ್ನು ಹತ್ತಿದ್ದೇವೆ. ಚೈತನ್ಯ ಚರಿತಾಮೃತದ ಕರ್ತೃ ಪ್ರತಿಪಾದಿಸುತ್ತಿದ್ದಾರೆ, `ಪರಮ ಸತ್ಯ ಇಲ್ಲಿದೆ : ಶ್ರೀ ಚೈತನ್ಯ ಮಹಾಪ್ರಭು.’

ಕೃಷ್ಣನು ಕೃಷ್ಣ ಚೈತನ್ಯನಾಗಿ ಆವಿರ್ಭವಿಸಿದ. ಈ ಸತ್ಯವನ್ನು ನಾವು ವಿವರಿಸಿದ್ದೇವೆ. ಶ್ರೀ ಸಾರ್ವಭೌಮ ಭಟ್ಟಾಚಾರ್ಯರ ಘೋಷಣೆಯಂತೆ:
ವೈರಾಗ್ಯ-ವಿದ್ಯಾ-ನಿಜ-ಭಕ್ತಿ-ಯೋಗ-
ಶಿಕ್ಷಾರ್ಥಂ ಏಕಃ ಪುರುಷಃ ಪುರಾಣಃ ।
ಶ್ರೀ-ಕೃಷ್ಣ-ಚೈತನ್ಯ-ಶರೀರ-ಧಾರಿ
ಕೃಪಾಂಬುಧಿರ್ ಯಸ್ ತಂ ಅಹಂ ಪ್ರಪದ್ಯೇ ॥
`ನಿಜವಾದ ಜ್ಞಾನ, ಅವನಿಗೆ ಭಕ್ತಿ ಸೇವೆ ಮತ್ತು ಕೃಷ್ಣಪ್ರಜ್ಞೆಯನ್ನು ಪೋಷಿಸದ ಅಂಶಗಳಿಂದ ವಿರಕ್ತಿ – ಇವುಗಳನ್ನು ಬೋಧಿಸಲು ಶ್ರೀ ಚೈತನ್ಯ ಮಹಾಪ್ರಭುಗಳ ರೂಪದಲ್ಲಿ ಆವಿರ್ಭವಿಸಿರುವ ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನಲ್ಲಿ ಆಶ್ರಯ ಪಡೆಯುವೆ. ಅವನು ಏಕೆ ಆವಿರ್ಭವಿಸಿದ್ದಾನೆಂದರೆ ಅವನು ಅಲೌಕಿಕ ಕಾರುಣ್ಯದ ಸಾಗರ. ಅವನ ಚರಣ ಕಮಲಗಳಿಗೆ ಶರಣಾಗುವೆ.’
ಕೃಷ್ಣನು ಪುರುಷಃ ಪುರಾಣಃ, ಅತ್ಯಂತ ಪುರಾತನ ವ್ಯಕ್ತಿ. ಗೋವಿಂದಂ ಆದಿ-ಪುರುಷಂ ತಂ ಅಹಂ ಭಜಾಮಿ : `ಆದಿ ಭಗವಂತನಾದ ಗೋವಿಂದ (ಕೃಷ್ಣ) ನನ್ನು ನಾನು ಭಜಿಸುವೆ.’ ಅನೇಕ ವೈದಿಕ ಸಾಹಿತ್ಯಗಳಲ್ಲಿ ಕೃಷ್ಣನನ್ನು ಪುರಾಣಃ ಪುರುಷಃ, ಅತ್ಯಂತ ಹಿರಿಯ, ಎಂದು ವರ್ಣಿಸಲಾಗಿದೆ. ಪುರಾಣಃ ಪುರುಷಂ ನವ-ಯೌವನಂ ಚ : `ಅವನು ಎಲ್ಲರಿಗಿಂತ ಹಿರಿಯನಾದರೂ ಅವನು ಸದಾ ನವ ಯುವಕ.’

ಅದು ಹೇಗೆ ಸಾಧ್ಯ? ಜನರು ದೇವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಬಾರಿ ಅವರು ದೇವರನ್ನು ವೃದ್ಧನಂತೆ ಚಿತ್ರಿಸುತ್ತಾರೆ. `ಅವನು ಆದಿ ಪುರುಷನಾದ ಕಾರಣ ಈ ವೇಳೆಗೆ ಅವನು ವೃದ್ಧನಾಗಿರಬೇಕು.’ ಅದು ಕಲ್ಪನೆ. ವಾಸ್ತವವಾಗಿ ಆ ವೃದ್ಧನು ಭಗವಂತನ ರೂಪವಲ್ಲ. ಬ್ರಹ್ಮ ಸಂಹಿತ ಮತ್ತು ಇತರ ವೇದ ಸಾಹಿತ್ಯಗಳಲ್ಲಿ ಭಗವಂತನ ರೂಪವನ್ನು ವಿವರಿಸಲಾಗಿದೆ. ನಿರಾಕಾರವಾದಿಗಳಾಗಿದ್ದ ಶಂಕರಾಚಾರ್ಯರೂ ಕೂಡ ಶ್ರೀ ಕೃಷ್ಣನು ದೇವೋತ್ತಮನಾದ ಶ್ರೀಮನ್ ನಾರಾಯಣ ಎಂದು ಒಪ್ಪಿಕೊಂಡಿದ್ದರು. ಭಗವದ್ಗೀತೆ ಕುರಿತ ತಮ್ಮ ವ್ಯಾಖ್ಯಾನದಲ್ಲಿ ಶ್ರೀ ಶಂಕರಾಚಾರ್ಯರು ಹೇಳುತ್ತಾರೆ, ನಾರಾಯಣಃ ಪರಃ
ಅವ್ಯಕ್ತಾತ್ : `ನಾರಾಯಣನು ಲೌಕಿಕ ಸೃಷ್ಟಿಗಿಂತ ಅತೀತನು.’ ಮತ್ತು ನಾರಾಯಣನನ್ನು ವರ್ಣಿಸುವಾಗ, ಅವರು ದೃಢೀಕರಿಸಿದ್ದಾರೆ, ಭಗವಾನ್ ಸ್ವಯಂ ಕೃಷ್ಣಃ : `ನಾರಾಯಣನೇ ಕೃಷ್ಣ.’ ಇದನ್ನು ಸ್ಪಷ್ಟಪಡಿಸಲು ಅವರು ಹೇಳಿದ್ದಾರೆ, `ಈಗ ಅವನು ದೇವಕಿ-ವಸುದೇವರ ಮಗನಾಗಿ ಆವಿರ್ಭವಿಸಿದ್ದಾನೆ.’ ಏಕೆಂದರೆ, ತಂದೆಯ ಹೆಸರು ನೀಡಿದಾಗ ವ್ಯಕ್ತಿಯ ಗುರುತು ಸ್ಪಷ್ಟವಾಗುತ್ತದೆ.
ವೈದಿಕ ರೀತಿ
ವೈದಿಕ ಪರಂಪರೆಯ ಎಲ್ಲ ಆಚಾರ್ಯರು, ಶ್ರೇಷ್ಠ ಆಧ್ಯಾತ್ಮಿಕ ಗುರುಗಳು ಕೃಷ್ಣನನ್ನು ಪರ-ತತ್ತ್ವ, ಪರಮ ಸತ್ಯ ಎಂದು ಸ್ವೀಕರಿಸಿದ್ದಾರೆ. ಯಾವುದೇ ಜ್ಞಾನವಿಲ್ಲದೆ ಸಿದ್ಧಾಂತ ಹೇಳುವ ಮೂರ್ಖರ ಬಗೆಗೆ ನಾವು ಮಾತನಾಡುತ್ತಿಲ್ಲ. ಪ್ರಾಮಾಣ್ಯದ ಬಗೆಗಷ್ಟೆ ನಮ್ಮ ಕಾಳಜಿ. ಭಾರತದಲ್ಲಿ ಜನರು ಆಚಾರ್ಯರ ಪ್ರಾಮಾಣ್ಯದಷ್ಟೆ ವೈದಿಕ ಪದ್ಧತಿಯನ್ನು ಅನುಸರಿಸುತ್ತಾರೆ. ಆಚಾರ್ಯವಾನ್ ಪುರುಷೋ ವೇದ : `ಆಚಾರ್ಯರ ಪಥವನ್ನು ಅನುಸರಿಸುವವರಿಗೆ ನಿಜವಾದ ಜ್ಞಾನವಿರುತ್ತದೆ.’ ಆಚಾರ್ಯರ ಗುರು – ಶಿಷ್ಯ ಪರಂಪರೆಯನ್ನು ಅನುಸರಿಸದಿದ್ದರೆ ನಾವು ಯಾರನ್ನೂ ಅಧಿಕೃತರೆಂದು ಸ್ವೀಕರಿಸಲಾಗದು. ಅದೇ ವೈದಿಕ ಪದ್ಧತಿ.

ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ಪ್ರತಿಪಾದಿಸುತ್ತಾರೆ, ನ ಚೈತನ್ಯಾತ್ ಕೃಷ್ಣಾತ್ ಜಗತಿ ಪರ-ತತ್ತ್ವಂ ಪರಂ ಇಹ `ಕೃಷ್ಣ ಮತ್ತು ಕೃಷ್ಣ ಚೈತನ್ಯರಿಗಿಂತ ಬೇರೆ ಪರಮ ಸತ್ಯವಿಲ್ಲ.’ ವೈದಿಕ ಪದ್ಧತಿಯ ಪ್ರಕಾರ, ನೀವು ಏನನ್ನಾದರೂ ನಿರ್ಣಾಯಕವಾಗಿ ಹೇಳಿದರೆ ನೀವು ಅದನ್ನು ವೈದಿಕ ಪುರಾವೆಗಳ ಸಮೇತ ಸಾಬೀತುಪಡಿಸಬೇಕು. ಇಲ್ಲವಾದರೆ, ನೀವು ಮಾತನಾಡುತ್ತಲೇ ಹೋಗಬಹುದು, ಯಾರೂ ಕೇಳುವುದಿಲ್ಲವಷ್ಟೆ. ಕೆಲವು ಬಾರಿ ಜನರು ನಮ್ಮನ್ನು ಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ಬಗೆಗೆ ಕೇಳುತ್ತಾರೆ. – `ಏನು ವೈದಿಕ ಪುರಾವೆಗಳಿವೆ?’ ಚೈತನ್ಯ ಚರಿತಾಮೃತದ ಅಧ್ಯಾಯಗಳಲ್ಲಿ ವೈದಿಕ ಪುರಾವೆಗಳನ್ನು ನೀಡಲಾಗಿದೆ. ಕವಿರಾಜ ಗೋಸ್ವಾಮಿ ತಪ್ಪಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಅವರು ಅತ್ಯಂತ ಉನ್ನತ ಭಕ್ತರು ಮತ್ತು ವಿದ್ವಾಂಸರು, ಅವರು ಸಾಮಾನ್ಯರಲ್ಲ. ಚೈತನ್ಯ ಚರಿತಾಮೃತವನ್ನು ರಚಿಸಲು ಅವರು ವೃಂದಾವನದಲ್ಲಿ ಕೃಷ್ಣನ ಮೂರ್ತಿಯಾದ ಮದನ-ಮೋಹನನಿಂದ ಶಕ್ತಿ ಪಡೆದಿದ್ದರು.
ವೈದಿಕ ಸಾಹಿತ್ಯವನ್ನು ಸಾಮಾನ್ಯರು ಬರೆಯಲು ಪ್ರಯತ್ನಿಸಬಾರದು. ವೈದಿಕ ಸಾಹಿತ್ಯವೆಂದರೆ, ಶ್ರುತಿ, ಸ್ಮೃತಿ, ಪುರಾಣ ಮುಂತಾದವು. ಶ್ರೀಲ ರೂಪ ಗೋಸ್ವಾಮಿ ಇದನ್ನು ಸ್ಪಷ್ಟಪಡಿಸಿದ್ದಾರೆ:
ಶ್ರುತಿ ಸ್ಮೃತಿ ಪುರಾಣಾದಿ ಪಂಚರಾತ್ರ ವಿಧಿಂ ವಿನಾ ।
ಐಕಾಂತಿಕಿ ಹರೇರ್ ಭಕ್ತೀರ್ ಉತ್ಪಾತಾಯೈವ ಕಲ್ಪತೇ ॥
`ಉಪನಿಷದ್, ಪುರಾಣ, ಮತ್ತು ನಾರದ-ಪಂಚರಾತ್ರದಂತಹ ಅಧಿಕೃತ ವೈದಿಕ ಸಾಹಿತ್ಯಗಳನ್ನು ನಿರ್ಲಕ್ಷಿಸುವ ಭಕ್ತಿ ಸೇವೆಯು ಸಮಾಜದಲ್ಲಿ ಅನಗತ್ಯ ದಾಂಧಲೆ.’ ಉತ್ಪಾತ ಎಂದರೆ `ಸುಮ್ಮನೆ ಅಶಾಂತಿ’ ಎಂದು ಅರ್ಥ. ಜನರು ಹೇಳಿಕೊಳ್ಳುತ್ತಾರೆ, `ನಾನು ನನ್ನ ದಾರಿಯನ್ನು ನಾನೇ ನಿರ್ಮಿಸಿಕೊಳ್ಳಬಹುದು.’ ಆದರೆ ಈ ಮೂರ್ಖತನವನ್ನು ಶ್ರೀಲ ರೂಪ ಗೋಸ್ವಾಮಿ ಅವರು ಖಂಡಿಸಿದ್ದಾರೆ. ಅಳುತ್ತ, ಭೂಮಿಯ ಮೇಲೆ ಕುಸಿಯುತ್ತ ಆನಂದಿಸುವ ಉನ್ನತ ಭಕ್ತರನ್ನು ಕೃತಕವಾಗಿ ಅನುಕರಿಸಿ ಭಕ್ತರೆನ್ನಿಸಿಕೊಳ್ಳುವ ಅನೇಕ ಮಂದಿಯನ್ನು ನೀವು ಕಾಣಬಹುದು. ಆದರೆ ಅವರ ಈ ಪ್ರದರ್ಶನದ ಅನಂತರ ಅವರು ಧೂಮಪಾನ ಮಾಡುವುದನ್ನು ನೋಡಬಹುದು. ಯಾಕೆ? ಏಕೆಂದರೆ ಅವರು ಶ್ರೀಲ ರೂಪ ಗೋಸ್ವಾಮಿ ಅವರ ಆದೇಶಗಳನ್ನು ಪಾಲಿಸುವುದಿಲ್ಲ. ಅವರು ದೊಡ್ಡ ದನಿಯಲ್ಲಿ ಜಪಿಸುತ್ತಾರೆ, ನರ್ತಿಸುತ್ತಾರೆ ಮತ್ತು ಪ್ರದರ್ಶನದ ಅನಂತರ – ನಾನು ನೋಡಿರುವೆ -`ನನಗೆ ಬೀಡಿ ನೀಡುವಿರಾ?’, `ನೋಡಿ ನನ್ನ ಗಂಟಲು ಒಣಗಿಹೋಗಿದೆ.’ ಇದು ಉತ್ಪಾತ. ಇಂತಹ ಭಕ್ತಿ ಎನ್ನಿಸಿಕೊಳ್ಳುವ ಧೋರಣೆಯನ್ನು ಶ್ರೀಲ ರೂಪ ಗೋಸ್ವಾಮಿ ಅವರು ದಾಂಧಲೆ ಎಂದು ವಿವರಿಸಿದ್ದಾರೆ.
ಈ ಕೃತಕ ಅನುಸರಣೆಗಾರರನ್ನು ಶ್ರೀಲ ಭಕ್ತಿ ವಿನೋದ ಠಾಕುರರೂ ಖಂಡಿಸಿದ್ದಾರೆ. ಚೈತನ್ಯ ಮಹಾಪ್ರಭುಗಳ ಭಕ್ತರೆಂದು ಸೋಗುಹಾಕಿಕೊಂಡಿರುವ ಅನೇಕ ಅಪ-ಸಂಪ್ರದಾಯ, ದಾರಿ ತಪ್ಪಿದ ಪಂಥಗಳಿವೆ. ಅವರು ಯಾರು? ಆವುಲ, ಭಾವುಲ, ಕರ್ತಾಭಜಾ, ನೇಡಾ, ದರವೇಶ, ಸಾಯಿಸಹಜೀಯಾ, ಸಖೀಭೇಕೀ, ಸ್ಮಾರ್ತ, ಜಾತಗೋಸಾಯೀ, ಅತಿವಾಡೀ, ಚೂಡಾಧಾರೀ ಮತ್ತು ಗೌರಂಗ-ನಾಗರೀ. ಭಕ್ತಿವಿನೋದರು ಹೇಳುತ್ತಾರೆ, `ಇಂತಹ ವರ್ಗದ ಜನರ ಜೊತೆ ಸಹವಾಸ ಮಾಡುವುದಿಲ್ಲ.’ ಶ್ರೀ ಚೈತನ್ಯ ಮಹಾಪ್ರಭುಗಳ ಅಂತರ್ಧಾನದ ಅನಂತರ ಅನೇಕ ಅಪ-ಸಂಪ್ರದಾಯಗಳು ತಲೆ ಎತ್ತಿದವು. ಆದುದರಿಂದ ಅವುಗಳ ಬಗೆಗೆ ನಾವು ಎಚ್ಚರದಿಂದಿರಬೇಕು.
ಸತ್ಯ ಶೋಧನೆ
ಯಾರು ವೈದಿಕ ತತ್ತ್ವಗಳನ್ನು ಜಾಗರೂಕತೆಯಿಂದ ಅನುಸರಿಸುವರೋ ಅದೇ ಸಂಪ್ರದಾಯ. ಆದುದರಿಂದ ಕವಿರಾಜ ಗೋಸ್ವಾಮಿ ಅವರು ಸತ್ಯವನ್ನು ಸಮರ್ಥಿಸಿಕೊಂಡರೂ ವೈದಿಕ ಪುರಾವೆಗಳನ್ನು ನೀಡಲು ಸಿದ್ಧ. ಈ ಶ್ಲೋಕದ ಆರಂಭದಲ್ಲಿ ಅವರು ಉಪನಿಷದ್ ಅನ್ನು ಉಲ್ಲೇಖಿಸಿದ್ದಾರೆ. ವೈದಿಕ ಸಾಹಿತ್ಯವು ನಾಲ್ಕು ವೇದ, ಉಪನಿಷದ್, ಪುರಾಣಗಳು, ರಾಮಾಯಣ, ವೇದಾಂತ-ಸೂತ್ರ ಮತ್ತು ಶ್ರೀಮದ್ ಭಾಗವತವನ್ನು ಒಳಗೊಂಡಿದೆ, ಭಾಗವತವು ವೇದಾಂತ ಸೂತ್ರದ ವಿವರಣೆಯಾಗಿದೆ. ಆದುದರಿಂದ ಶ್ರೀಮದ್ ಭಾಗವತದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ವ್ಯಾಸದೇವರು ಹೇಳುತ್ತಾರೆ, ಬ್ರಹ್ಮ-ಸೂತ್ರಸ್ಯ ಭಾಷ್ಯ : `ಶ್ರೀಮದ್ ಭಾಗವತವು ಬ್ರಹ್ಮ-ಸೂತ್ರದ ಮೇಲಿನ ವ್ಯಾಖ್ಯಾನ.’ ಬ್ರಹ್ಮ-ಸೂತ್ರ ಅಥವಾ ವೇದಾಂತ-ಸೂತ್ರವು ವೈದಿಕ ಸಾಹಿತ್ಯದ ಸಾರಾಂಶವನ್ನು ಸಂಹಿತೆಗಳ ಮೂಲಕ ನೀಡುತ್ತದೆ. ಮತ್ತು ಶ್ರೀಮದ್ ಭಾಗವತವು ಈ ಸಂಹಿತೆಗಳನ್ನು ವಿವರಿಸುತ್ತದೆ. ವೇದಾಂತ-ಸೂತ್ರವು ಆರಂಭಿಸುತ್ತದೆ, ಅಥಾತೋ ಬ್ರಹ್ಮ-ಜಿಜ್ಞಾಸ : `ಪರಮ ಸತ್ಯದ ಬಗೆಗೆ ಶೋಧಿಸಲು ಇದು ಸಕಾಲ.’ ಮತ್ತು ಶ್ರೀಮದ್ ಭಾಗವತ ಹೇಳುತ್ತದೆ, ಜೀವಸ್ಯ ತತ್ತ್ವ- ಜಿಜ್ಞಾಸ: `ಪರಮ ಸತ್ಯದ ಬಗೆಗೆ ಶೋಧಿಸುವುದೇ ಜೀವಿಗಳ ಏಕೈಕ ವ್ಯವಹಾರ.’

ಜನರು ತೊಂದರೆಗೆ ಒಳಗಾಗಿದ್ದಾರೆ, ಏಕೆಂದರೆ ಅವರು ಈ ನಿಜವಾದ ವ್ಯವಹಾರವನ್ನು ಬಿಟ್ಟುಬಿಟ್ಟಿದ್ದಾರೆ. ಮಾನವ ಜೀವವು ಈ ವ್ಯವಹಾರಕ್ಕೆಂದೆ ಇರುವುದು : ಬ್ರಹ್ಮ ಜಿಜ್ಞಾಸ, ಪರಮ ಸತ್ಯದ ಬಗೆಗೆ ಶೋಧಿಸಲೆಂದು. ಪ್ರಕೃತಿಯು ನಮಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಕೆಲವು ಜೀವಿಗಳು ವರ್ಷಗಟ್ಟಲೆ ಭೂಮಿಯಲ್ಲೇ ನಿಂತಿರಬೇಕಾಗಿದೆ – ಮರಗಳು, ಗಿಡಗಳು. ಜಲಚರಗಳು ಅನೇಕ ವರ್ಷ ನೀರಿನಲ್ಲೇ ಇರುತ್ತವೆ. ಕ್ರಿಮಿ ಕೀಟಗಳು ಅನೇಕ ವರ್ಷ ಅದೇ ಸ್ಥಿತಿಯಲ್ಲಿರುತ್ತವೆ. ಮತ್ತು ಕ್ರಮೇಣ, ಆತ್ಮದ ವಿಕಸನದಿಂದ ನಾವು ಮಾನವ ಜೀವದ ಈ ರೂಪವನ್ನು ಹೊಂದುತ್ತೇವೆ.
ಆರ್ಯರು ಮುಖ್ಯವಾಗಿ ಮುಂದುವರಿದ, ನಾಗರಿಕ ಜೀವಿಗಳಿಗೆ – ಪರಮ ಸತ್ಯದ ಶೋಧನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳೂ ಇವೆ. ಅರಣ್ಯದಲ್ಲಿ ವಾಸಿಸುವಂತಹ ಅನಾಗರಿಕರು ಅಂತಹ ಸೌಲಭ್ಯಗಳನ್ನು ಬಳಸಿಕೊಳ್ಳಲಾರರು. ಆದುದರಿಂದ, ನರೋತ್ತಮ ಠಾಕುರರು ಸರಳವಾದ ಬಂಗಾಳಿ ಹಾಡನ್ನು ಹೇಳುತ್ತಾರೆ, ಹರಿ ಹರಿ ಬಿಫಲೇ ಜನಮಗೋಯೈನು : ಓ ಶ್ರೀ ಹರಿ, ಕೃಷ್ಣ, ನಾನು ನನ್ನ ಜೀವನವನ್ನು ವ್ಯರ್ಥ ಮಾಡಿಕೊಂಡೆ. ಇದು ನಮ್ಮ ಸ್ಥಿತಿ. ನಮಗೆ ಮಾನವ ರೂಪದ ಜೀವವಿದೆ. ಆದರೆ ನಾವು ಅದನ್ನು ಹಾಳು ಮಾಡುತ್ತಿದ್ದೇವೆ. ಕೃಷ್ಣಪ್ರಜ್ಞೆ ಆಂದೋಲನದಲ್ಲಿ ನಾವು ಜಗತ್ತಿನಾದ್ಯಂತ ಸಂಚರಿಸುತ್ತಿದ್ದೇವೆ. `ನಾನೇ ದೇಹ!’ ಎಂಬ ತಪ್ಪು ತಿಳಿವಳಿಕೆಯಿಂದ ಅವರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. `ನಾನು ಅಮೆರಿಕದವನು’, `ನಾನು ಭಾರತೀಯ’, `ನಾನು ಜರ್ಮನಿಯವ’ ಎಂದು ದೇಹಾತ್ಮ ಕಲ್ಪನೆಯಿಂದ ಅವರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.

ಶಾಸ್ತ್ರ, ಧರ್ಮ ಗ್ರಂಥಗಳ ಪ್ರಕಾರ ಯಾರು ತನ್ನನ್ನು ತಾನು ತನ್ನ ದೇಹದೊಂದಿಗೆ ಗುರುತಿಸಿಕೊಳ್ಳುತ್ತಾನೋ ಅವನು ಮೂರ್ಖ. ಅದು ಭಗವದ್ಗೀತೆಯ ಮೊದಲ ಬೋಧನೆ. ಕೌರವರ ಜೊತೆ ಯುದ್ಧ ಮಾಡಲು ಕೃಷ್ಣನು ಅರ್ಜುನನನ್ನು ಕರೆ ತಂದನು. ತನ್ನ ದೇಹದೊಂದಿಗೆ ಗುರುತಿಸಿಕೊಂಡಿದ್ದರಿಂದ ಅರ್ಜುನ ಯೋಚಿಸಿದ, `ಅವರೊಂದಿಗೆ ದೈಹಿಕ ಬಾಂಧವ್ಯ ಇರುವುದರಿಂದ ನನ್ನ ಸೋದರ ಸಂಬಂಧಿಗಳನ್ನು ಕೊಲ್ಲುವುದು ಸರಿಯಲ್ಲ.’ ಬದುಕಿನ ಆ ಭಾವನೆಯನ್ನು ಹೋಗಲಾಡಿಸಲು ಕೃಷ್ಣನು ಅರ್ಜುನನ ಮಾತನ್ನು ಖಂಡಿಸಿದ, ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ : `ವಿದ್ವಾಂಸನಂತೆ ಮಾತನಾಡುತ್ತಿರುವೆ. ಆದರೆ ಶೋಕಕ್ಕೆ ಯೋಗ್ಯವಲ್ಲದನ್ನು ಕುರಿತು ದುಃಖಿಸುತ್ತಿರುವೆ.’
ನಾವು ದೊಡ್ಡ ವಿಚಾರ, ಯೋಜನೆಗಳ ಬಗೆಗೆ ಮಾತನಾಡುತ್ತೇವೆ. ಆದರೆ, ವಾಸ್ತವವಾಗಿ ನಾವು ಬೆಕ್ಕು, ನಾಯಿಗಳಿಗಿಂತ ಉತ್ತಮರಲ್ಲ. ಇದು ನಮ್ಮ ಸ್ಥಿತಿ, ಏಕೆಂದರೆ ನಾವು ನಮ್ಮ ದೇಹದೊಂದಿಗೆ ಗುರುತಿಸಿಕೊಳ್ಳುತ್ತೇವೆ. `ನನ್ನ ದೇಶ, ನನ್ನ ಸಮುದಾಯ, ನನ್ನ ಸಮಾಜ, ನನ್ನ ಕುಟುಂಬ.’ ಇದೇ ಮೂಲ ಮೂರ್ಖತನ. ಅಹಂ ಮಾಮೇತಿ : `ನಾನು ಮತ್ತು ನನ್ನದು.’ ಜನರಿಗೆ ನಿಜ ಏನೆಂದು ತಿಳಿಯದು. ಅವರು ಯೋಚಿಸುತ್ತಾರೆ, `ನಾನು ದೇಹ. ಈ ದೇಹದೊಂದಿಗಿನ ಎಲ್ಲವೂ ನನ್ನದು.’ ಇದು ಮೂರ್ಖತನ. ಆದರೆ ಈ ಮೌಢ್ಯವು ಜಗತ್ತಿನಾದ್ಯಂತ ನಡೆದಿದೆ.
ಆದುದರಿಂದ ಚೈತನ್ಯ ಚರಿತಾಮೃತದ ಆರಂಭದಲ್ಲಿ ಗ್ರಂಥಕರ್ತರು ಹೇಳುತ್ತಾರೆ,
ವಂದೇ ಶ್ರೀ ಕೃಷ್ಣ-ಚೈತನ್ಯ ನಿತ್ಯಾನಂದೌ ಸಹೋದಿತೌ ।
ಗೌಡೋದಯೇ ಪುಷ್ಪವಂತೌ ಚಿತ್ರೌ ಶನ್‌ದೌ ತಮೋನುದೌ ॥
`ಸೂರ್ಯ ಚಂದ್ರರಂತೆ ಇರುವ ಶ್ರೀಕೃಷ್ಣ ಚೈತನ್ಯ ಮತ್ತು ಪ್ರಭು ನಿತ್ಯಾನಂದರಿಗೆ ನಾನು ಗೌರವಪೂರ್ವಕವಾಗಿ ನಮಿಸುವೆ. ಅವರು ಅಜ್ಞಾನದ ಅಂಧಕಾರವನ್ನು ಚದುರಿಸಲು ಮತ್ತು ಎಲ್ಲರಿಗೂ ಅದ್ಭುತವಾದ ರೀತಿಯಲ್ಲಿ ಆಶೀರ್ವಾದ ಮಾಡಲು ಗೌಡವೆಂಬ ಪ್ರದೇಶದ ದಿಗಂತದಲ್ಲಿ ಏಕಕಾಲದಲ್ಲಿ ಉದಿಸಿದ್ದಾರೆ.’ ತಪ್ಪು ಗ್ರಹಿಕೆಯ ಅಂಧಕಾರದಲ್ಲಿರುವ ಲೌಕಿಕ ಜಗತ್ತಿನ ಪತಿತ ಆತ್ಮಗಳ ವಿಮೋಚನೆಗೆ ಶ್ರೀ ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ ಪ್ರಭು ಬಂದರು. ಸೌದಿ ಅರೇಬಿಯಾದ ದೊರೆಯನ್ನು ಅವರ ಸೋದರ ಸಂಬಂಧಿಯೆ ಕೊಂದನೆಂದು ಈಗಷ್ಟೇ ನನಗೆ ಯಾರೋ ಹೇಳಿದರು. ಇದು ನಡೆಯುತ್ತಿರುತ್ತದೆ. ಕುಟುಂಬಗಳಲ್ಲಿ ಕೂಡ ವ್ಯವಹಾರಗಳು ನಡೆಯುತ್ತಿರುತ್ತವೆ. ಏಕೆಂದರೆ ಈ ಅಂಧಕಾರದಿಂದ : `ನಾನು ಮತ್ತು ನನ್ನದು.’

ಶ್ರೀ ಚೈತನ್ಯ ಮಹಾಪ್ರಭು ತಮ್ಮ ಸಂಗಾತಿಗಳಾದ ನಿತ್ಯಾನಂದ ಪ್ರಭು, ಅದ್ವೈತ ಪ್ರಭು, ಗದಾಧರ ಪ್ರಭು, ಶ್ರೀವಾಸ ಮತ್ತು ಇತರ ಭಕ್ತರೊಂದಿಗೆ ಈ ತಪ್ಪು ಗ್ರಹಿಕೆಯ ಅಂಧಕಾರವನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ. ಅರ್ಜುನನಿಗೆ ತನ್ನ ಗುರುತಿನ ಅಂಧಕಾರದ ಬಗೆಗೆ ಕೃಷ್ಣ ಬೋಧಿಸಿದ. ಕೃಷ್ಣ ಅವನನ್ನು ಅಳಿದ, `ನೀನು ದೊಡ್ಡ ದೊಡ್ಡ ಶಬ್ದಗಳಲ್ಲಿ ಮಾತನಾಡುತ್ತಿರುವೆ. ಆದರೆ ವಿದ್ವಾಂಸರಾರೂ ಗೋಳಿಡದ ವಿಷಯ ಕುರಿತು ಗೋಳಾಡುತ್ತಿರುವೆ.’ ಅನಂತರ ಕೃಷ್ಣನೆಂದ, ಗತಾಸೂನ್ ಅಗತಾಸುಂಶ್ಚ ನಾನು ಶೋಚಂತಿ ಪಂಡಿತಾಃ `ನೀನು ಮಹಾ ಮೂರ್ಖ. ಜ್ಞಾನಿಗಳು ಯಾರೂ ಈ ರೀತಿ ಮಾತನಾಡುವುದಿಲ್ಲ. ನೈಜ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು.’
ಅನಂತರ ಕೃಷ್ಣನೆಂದ,
ದೇಹಿನೋ ಅಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರ-ಪ್ರಾಪ್ತಿರ್ ಧೀರಸ್ ತತ್ರ ನ ಮುಹ್ಯತಿ ॥
`ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಸತತವಾಗಿ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.’ ಅಥವಾ ಮತ್ತೂ ಹೇಳಬೇಕೆಂದರೆ, `ಮೊದಲು ನೀನೇನೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸು.’
ಗೀತೆ ಶುದ್ಧ ಜ್ಞಾನ
ಇದು ಭಗವದ್ಗೀತೆಯ ಆರಂಭ. ಗೀತೆಯು ರಾಜಕೀಯ ಅಲ್ಲ. ಇದು ಜ್ಞಾನ, ಶುದ್ಧ ಜ್ಞಾನ. ರಾಜಕಾರಣಿಗಳು ಮತ್ತು ತಮ್ಮ ಅಸಂಬದ್ಧ ಸಿದ್ಧಾಂತಗಳನ್ನು ಪುಷ್ಟೀಕರಿಸಲು ಸಮಾಜವಾದಿಗಳು ಮತ್ತು ಸ್ವಾಮಿ, ಯೋಗಿಗಳೆನಿಸಿಕೊಳ್ಳುವವರು ಅದರ ಲಾಭ ಪಡೆದುಕೊಳ್ಳುತ್ತಾರೆ. ಆದರೆ ಅವರು ಮಂಡಿಸುವುದು ಭಗವದ್ಗೀತೆಯೇ ಅಲ್ಲ. ಭಗವದ್ಗೀತೆಯ `ಯಥಾ ರೂಪ’ ವೇ ಪರಿಶುದ್ಧ ಜ್ಞಾನ. ಮೊದಲ ಜ್ಞಾನದ ಆರಂಭದಲ್ಲೇ `ನಾವು ದೇಹವಲ್ಲ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಮೂರ್ಖತನದ ಮೂಲ ತತ್ತ್ವ ಎಂದರೆ ‘ನಾನು ಈ ದೇಹ’, `ನಾನು ಅಮೆರಿಕದವ’, `ನಾನು ಭಾರತೀಯ’, `ನಾನು ಇದು, ಅದು.’

ಚೈತನ್ಯ ಮಹಾಪ್ರಭುಗಳು ಈ ಮೂರ್ಖತನವನ್ನು ಬೇರೆ ರೀತಿಯಲ್ಲಿ ಹೇಳುತ್ತಾರೆ, `ನಾನು ಬ್ರಾಹ್ಮಣನಲ್ಲ. ನಾನು ಕ್ಷತ್ರಿಯನಲ್ಲ, ನಾನು ವೈಶ್ಯನಲ್ಲ, ನಾನು ಶೂದ್ರನಲ್ಲ, ನಾನು ಬ್ರಹ್ಮಚಾರಿಯಲ್ಲ, ನಾನು ಗೃಹಸ್ಥನಲ್ಲ, ನಾನು ವಾನಪ್ರಸ್ಥನಲ್ಲ, ನಾನು ಸಂನ್ಯಾಸಿಯಲ್ಲ.’ ಇವೆಲ್ಲ ನಕಾರಗಳು. ಹಾಗಾದರೆ ಸಕಾರ ಯಾವುದು? ಅವರೆನ್ನುತ್ತಾರೆ, ಗೋಪಿ-ಭರ್ತೃಃ ಪದ-ಕಮಲಯೋರ್ ದಾಸ-ದಾಸಾನುದಾಸಃ – `ತನ್ನ ಗೋಪಿಯರನ್ನು ಕಾಪಾಡುವ ಗೋಪಿ-ಭರ್ತೃಃ, ಕೃಷ್ಣನ ಸೇವಕನ ಸೇವಕನ ಸೇವಕ ನಾನು.’
ಇದು ನಮ್ಮ ನಿಜವಾದ ವ್ಯಕ್ತಿತ್ವದ ಪರಿಚಯ. ಆದರೆ ನಾವು ಮರೆತಿದ್ದೇವೆ. ನಾವು ಕೃಷ್ಣನೊಂದಿಗಿನ ನಮ್ಮ ನಿಜವಾದ ಬಾಂಧವ್ಯವನ್ನೇ ಮರೆತಿದ್ದೇವೆ ಮತ್ತು ಲೌಕಿಕ ಹೊಂದಾಣಿಕೆಯಿಂದ ಸಂತೋಷವಾಗಿರಲು ಯತ್ನಿಸುತ್ತಿದ್ದೇವೆ. ಇದು ಆಧುನಿಕ ನಾಗರಿಕತೆ. ಯಾರೂ ಹೀಗೆ ಯೋಚಿಸಬಹುದು, `ನನಗೆ ಒಳ್ಳೆಯ ಮನೆ ಸಿಕ್ಕರೆ, ಚೆನ್ನಾದ ಕಾರು, ಉತ್ತಮ ವ್ಯಾಪಾರ, ಬ್ಯಾಂಕಿನಲ್ಲಿ ಸಾಕಷ್ಟು ಹಣ, ಒಳ್ಳೆಯ ಸತಿ ಮತ್ತು ಮಕ್ಕಳು …’ ಈ ರೀತಿಯಿಂದ ಸಂತೋಷ ಲಭಿಸದೆಂದು ಜನರಿಗೆ ತಿಳಿಯದು. ನೀವು ಯೂರೋಪಿಯನ್ನರು, ಅಮೆರಿಕನ್ನರಿಗೆ ಒಳ್ಳೆಯ ಅರ್ಹತೆ ಇದೆ : ನಾನು ಈ ಮೊದಲು ಅನೇಕ ಬಾರಿ ವಿವರಿಸಿದಂತೆ, ನೀವು ಈ `ಒಳ್ಳೆಯದು’ ಇದರ ಬಗೆಗೆ ಈಗ ಆಸಕ್ತಿ ಹೊಂದಿಲ್ಲ. ನಿಜವಾದ ಒಳ್ಳೆಯದೆಂದರೆ ಆಧ್ಯಾತ್ಮಿಕ ಗ್ರಹಿಕೆ. ಆ ಒಳ್ಳೆಯದು ಆರಂಭವಾಗುವುದು, ಅಹಂ ಬ್ರಹ್ಮಾಸ್ಮಿ, `ನಾನು ಈ ದೇಹವಲ್ಲ.’ ಅದೇ ಭಗವದ್ಗೀತೆಯ ಆರಂಭ. ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ, `ನೀನು ಈ ದೇಹವಲ್ಲ. ನೀನು ಜೀವಾತ್ಮ. ಅರ್ಥಮಾಡಿಕೊಳ್ಳಲು ಪ್ರಯತ್ನಿಸು.’ ನಾವು ಕೃಷ್ಣನಿಂದ ಮತ್ತು ಕೃಷ್ಣನೇ ಆದ ಚೈತನ್ಯರಿಂದ ನಾವು ಅರಿಯಬೇಕು. ಆದುದರಿಂದ ಚೈತನ್ಯ ಚರಿತಾಮೃತದ ಕರ್ತೃ ಹೇಳುತ್ತಾರೆ, `ಈ ಪ್ರಾಮಾಣ್ಯವನ್ನು ಸ್ವೀಕರಿಸಿ.’
ಚೈತನ್ಯ ಮಹಾಪ್ರಭುಗಳು ಐದು ನೂರು ವರ್ಷಗಳ ಹಿಂದೆ ಆವಿರ್ಭವಿಸುವ ವೇಳೆಗಾಗಲೇ ಜನರು ಪರಮ ಮೂರ್ಖರಾಗಿದ್ದರು. ಭಗವದ್ಗೀತೆಯ ಬೋಧನೆಯನ್ನು ನಿರ್ಲಕ್ಷಿಸಿದ್ದರು. ಆದುದರಿಂದ ಅವನು ನಮಗೆ ಕೃಷ್ಣನ ಸೇವೆ ಮತ್ತು ಪ್ರೇಮದ ಬಗೆಗೆ ಬೋಧಿಸಲು ಕೃಷ್ಣನ ಭಕ್ತನಾಗಿ ಅವತರಿಸಿದ. ಇದೇ ಚೈತನ್ಯ ಮಹಾಪ್ರಭುಗಳ ಪಂಥ. ಕೃಷ್ಣನು ಹೇಳಿದ್ದ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ : `ಎಲ್ಲವನ್ನೂ, ನಿಮ್ಮ ಠಕ್ಕತನವನ್ನು ಪರಿತ್ಯಜಿಸು. ನನಗೆ ಶರಣಾಗತನಾಗು.’ ಒಬ್ಬ ಭಕ್ತನಾಗಿ ಚೈತನ್ಯ ಮಹಾಪ್ರಭು ಕೂಡ ಅದನ್ನೆ ಹೇಳಿದ್ದಾರೆ, ಯಾರೇ ದೇಖ, ತಾರೇ ಕಹ ಕೃಷ್ಣ-ಉಪದೇಶ : `ನೀವು ಯಾರನ್ನು ಭೇಟಿಮಾಡಿದರೂ ಅವರಿಗೆ ಕೃಷ್ಣನ ಉಪದೇಶದ ಬಗೆಗೆ ತಿಳಿಸಿರಿ.’ ಚೈತನ್ಯರು ಹೇಳಿದ್ದರಲ್ಲಿ ಹೊಸದೇನೂ ಇಲ್ಲ. ಅದೇ ಅಧಿಕೃತದ ಚಿಹ್ನೆ. `ನಾನು ಕೆಲ ಮಾರ್ಗಗಳನ್ನು ರೂಪಿಸಿರುವೆ’ ಎಂದು ಯಾರಾದರೂ ಹೇಳಿದರೆ, ಅವರು ಮೂರ್ಖರು. ನಿಮ್ಮ ದೇಶದಲ್ಲಿ `ಹೊಸ ಬಾಟಲಿಯಲ್ಲಿ ಹಳೇ ವೈನ್’ ಎನ್ನುತ್ತಾರೆ. ಅದೇ ರೀತಿ, ಕೃಷ್ಣನಂತೆ ಚೈತನ್ಯ ಮಹಾಪ್ರಭು ಬೋಧಿಸುತ್ತಿದ್ದಾರೆ. ಕೃಷ್ಣ ಹೇಳುತ್ತಾನೆ, ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ : `ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ.’ ಚೈತನ್ಯ ಮಹಾಪ್ರಭುಗಳು ಅದನ್ನೇ ಹೇಳುತ್ತಾರೆ, ಯಾರೇ ದೇಖ, ತಾರೇ ಕಹ ಕೃಷ್ಣ-ಉಪದೇಶ. ಮತ್ತು ನಾವು ಅದನ್ನೇ ಹೇಳುತ್ತಿರುವುದು, ನಾ ಚೈತನ್ಯಾತ್ ಕೃಷ್ಣಾತ್ ಜಗತಿ ಪರತತ್ತ್ವಂ `ಕೃಷ್ಣ ಚೈತನ್ಯರಿಗಿಂತ ಶ್ರೇಷ್ಠ ಸತ್ಯವಿಲ್ಲ.’ ಯಾಕೆ? ಏಕೆಂದರೆ ಅವನು ಕೃಷ್ಣನಂತೇ ಸತ್ಯ. ಇದನ್ನು ಪರಂಪರ ಪದ್ಧತಿ ಎನ್ನುತ್ತಾರೆ : `ನಾವು ಕೃಷ್ಣ ಹೇಳಿದ್ದನ್ನು, ಚೈತನ್ಯ ಹೇಳಿದ್ದನ್ನು ಪುನರುಚ್ಚರಿಸುತ್ತಿದ್ದೇವೆ.’
ಆದುದರಿಂದ ಪರಮ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಕೃಷ್ಣ ನೇರವಾಗಿ ಹೇಳುತ್ತಾನೆ, `ನನಗೆ ಶರಣಾಗು.’ ಮತ್ತು ಚೈತನ್ಯ ಮಹಾಪ್ರಭು ಹೇಳುತ್ತಾರೆ, `ಕೃಷ್ಣನ ಸಂದೇಶವನ್ನು ಬೋಧಿಸಿ.’ ನಾವು ಏನನ್ನೂ ಬೋಧಿಸುವುದಿಲ್ಲ. ಆದರೆ ಕೃಷ್ಣ ಹೇಳಿದ್ದನ್ನು ಮತ್ತು ಚೈತನ್ಯ ದನಿಗೂಡಿಸಿದ್ದನ್ನು ಹೇಳುತ್ತೇವೆ. ಇದು ನಮ್ಮ ಸಿದ್ಧಾಂತ. ಇದು ಕೃಷ್ಣಪ್ರಜ್ಞೆ ಆಂದೋಲನದ ತತ್ತ್ವ. ಕೃಷ್ಣ ತನ್ನ ಬಗೆಗೆ ಬೋಧಿಸಿದ, ಚೈತನ್ಯರು ಅದೇ ತತ್ತ್ವವನ್ನು ಬೋಧಿಸಿದರು ಮತ್ತು ನಾವು ಅದನ್ನೇ ಉಪದೇಶಿಸುತ್ತಿದ್ದೇವೆ. ನಾವು ಏನನ್ನೂ ತಯಾರಿಸುವುದಿಲ್ಲ. ಅದು ನಮ್ಮ ವ್ಯವಹಾರವಲ್ಲ.

ಕೃಷ್ಣನ ಅನುಗ್ರಹ, ಚೈತನ್ಯರ ಕೃಪೆ ಮತ್ತು ನನ್ನ ಮನವಿ ಮೇರೆಗೆ ನೀವು, ಯೂರೋಪಿನ ಬಾಲಕ ಬಾಲಕಿಯರು ಈ ಆಂದೋಲನವನ್ನು ಸೇರಿದ್ದೀರಿ. ನಾನು ಈ ಸಂದೇಶದಿಂದ ನಿಮ್ಮ ದೇಶಕ್ಕೆ ಹೋದೆ. ನಾನು ನಿಮಗೆ ಯಾವುದೇ ಜಾದೂ ತೋರಿಸಲಿಲ್ಲ. ನಾನು ಅದೇ ಸಂದೇಶವನ್ನು ಪುನರುಚ್ಚರಿಸುತ್ತೇನೆ, `ದೇವೋತ್ತಮ ಪರಮ ಪುರುಷನಾದ ಕೃಷ್ಣ ಇಲ್ಲಿದ್ದಾನೆ. ಕೃಷ್ಣನ ಭಕ್ತ ರೂಪನಾದ ಕೃಷ್ಣ ಚೈತನ್ಯ ಇಲ್ಲಿದ್ದಾನೆ. ಅವರನ್ನು ಸ್ವೀಕರಿಸಿ, ನಿಮ್ಮ ಬದುಕು ಯಶಸ್ವಿಯಾಗುತ್ತದೆ.’






Leave a Reply