ಶರಣಾಗತಿ

ವ್ಯಕ್ತಿಗೆ ಭಕ್ತಿಸೇವೆಯ ಮಹತ್ತ್ವದ ಬಗ್ಗೆ ದೃಢವಾಗಿ ನಂಬಿಕೆಯುಂಟಾದಾಗ ಅವನು ಪರಮ ಪ್ರಭುವಿಗೆ ಶರಣಾಗತನಾಗುತ್ತಾನೆ. ಶರಣಾಗತಿಯ ಆರು ಲಕ್ಷಣಗಳಿವೆ. ಶರಣಾಗತಿಯ ಈ 6 ತತ್ತ್ವಗಳನ್ನು ಪಾಲಿಸುವ ಭಕ್ತನು ಸದಾ ಹೀಗೆ ಯೋಚಿಸುತ್ತಾನೆ, ‘‘ಹೇ ಪ್ರಭು ನಾನು ಎಲ್ಲ ರೀತಿಗಳಲ್ಲಿಯೂ ನಿನ್ನವನು. ನಾನು ನಿನ್ನ ಶಾಶ್ವತ ಸೇವಕ.’’ ಈ ರೀತಿ ಶುದ್ಧ ಭಕ್ತನೊಬ್ಬನು ಪರಿಶುದ್ಧಗೊಳ್ಳುತ್ತಾನೆ. ಈ ಸಂಬಂಧ ಶ್ರೀಮದ್‌ ಭಾಗವತದಲ್ಲಿ ಒಂದು ಒಳ್ಳೆಯ ಶ್ಲೋಕವಿದೆ.

ಮರ್ತ್ಯೋ ಯದಾ ತ್ಯಕ್ತ ಸಮಸ್ತಕರ್ಮಾ

ನಿವೇದಿತಾತ್ಮಾ ವಿಚಿಕೀರ್ಷಿತೋ ಮೇ

ತದಾಮೃತತ್ವಂ ಪ್ರತಿಪದ್ಯಮಾನೋ

ಮಯಾತ್ಮಭೂಯಾಯ ಚ ಕಲ್ಪತೇ ವೈ ।।34।।

– ಭಾಗವತ 11.29.34

‘‘ಎಲ್ಲ ಕಾಮ್ಯ ಕರ್ಮಗಳನ್ನೂ ತ್ಯಜಿಸುವ, ತನ್ನನ್ನು ಸಂಪೂರ್ಣವಾಗಿ ನನಗೆ ಅರ್ಪಿಸಿಕೊಳ್ಳುವ, ನನಗೆ ಸೇವೆ ಸಲ್ಲಿಸಲು ಕಾತರದಿಂದ ಬಯಸುವ ವ್ಯಕ್ತಿಯು ಜನನ ಮರಣಗಳ ದೆಸೆಯಿಂದ ಮುಕ್ತಿಯನ್ನು ಪಡೆಯುವನು. ನನ್ನ ಐಶ್ವರ್ಯಗಳನ್ನು ಹಂಚಿಕೊಳ್ಳುವ ಉನ್ನತ ಪದವಿಗೆ ಏರುವನು.’’

ಭಕ್ತಿಸೇವೆಯ ಬದುಕಿನ ಇಂತಹ ಹಂತಕ್ಕೆ ಏರಲು ಶಾಸ್ತ್ರಗಳ ನಿರ್ದೇಶನಗಳನ್ನು ಪಾಲಿಸಬೇಕು. ಆದರೆ ಭಕ್ತಿಸೇವೆಯಲ್ಲಿ ಉನ್ನತ ಹಂತಕ್ಕೆ ಏರಿದ ಮೇಲೂ ಒಬ್ಬರು ‘‘ಓ ನಾನೀಗಾಗಲೇ ಅತ್ಯುನ್ನತ ಸ್ಥಾನಕ್ಕೆ ಏರಿರುವೆ. ಆದ್ದರಿಂದ ನಾನು ಭಕ್ತಿಸೇವೆಯ ನಿಯಮಗಳನ್ನು ಉಲ್ಲಂಘಿಸಬಹುದು ಎಂದು ಯೋಚಿಸಬಾರದು.’’

ಶರಣಾಗತಿಯ 6 ತತ್ತ್ವಗಳು ಈ ಕೆಳಗಿನಂತಿವೆ.

1] ಭಕ್ತಿಸೇವೆಗೆ ಅನುಕೂಲಕರವಾದದ್ದನ್ನು ಸ್ವೀಕರಿಸುವುದು.

ಭಗವಂತನಿಗೆ ಸೇವೆ ಸಲ್ಲಿಸಲು ಅನುಕೂಲಕರವಾದ ಎಲ್ಲವನ್ನೂ ಭಕ್ತನು ಸ್ವೀಕರಿಸಬೇಕು. ಕೃಷ್ಣಪ್ರಜ್ಞೆಗೆ ಅನುಕೂಲಕರವಾದ ಸಂಗತಿಗಳು ಈ ಕೆಳಗಿನಂತಿವೆ.

  1. ಪ್ರಸಾದ – ನೀವು ತಿನ್ನುವ ಮೊದಲು ಆಹಾರವನ್ನು ಕೃಷ್ಣನಿಗೆ ಅರ್ಪಿಸುವುದು.
  2. ನಾಮಜಪ – ಪ್ರತಿನಿತ್ಯ ಮಂತ್ರ ಧ್ಯಾನ [ಜಪವನ್ನು] ಮಾಡುವುದು.
  3. ಸತ್ಸಂಗ – ಆಧ್ಯಾತ್ಮಿಕ ಮನಸ್ಸಿನ ಜನರ ಸಹವಾಸ ಪಡೆಯುವುದು.
  4. ಅಧ್ಯಯನ – ಪ್ರತಿದಿನ ಶಾಸ್ತ್ರಾಭ್ಯಾಸ ಮಾಡಿ.

ಶ್ರೀಲ ಪ್ರಭುಪಾದರು ಹೀಗೆ ವಿವರಿಸುತ್ತಾರೆ – ‘‘ಒಂದು ಕಡೆ ವ್ಯಕ್ತಿಯು ಕೃಷ್ಣಪ್ರಜ್ಞೆಯನ್ನು ಅಭ್ಯಸಿಸಬೇಕು. ಮತ್ತೊಂದು ಕಡೆ ಅವನು ತನ್ನ ಎಲ್ಲ ಕೆಟ್ಟ ಚಟಗಳನ್ನು ಬಿಟ್ಟುಬಿಡಲು ಪ್ರಯತ್ನಿಸಬೇಕು. ಅವನು ಮುಂದುವರಿಯಬೇಕೆಂದರೆ, ಎರಡೂ ಇರಬೇಕು. ಇದು ಹೇಗೆಂದರೆ, ವ್ಯಕ್ತಿಯೊಬ್ಬನು ರೋಗಗ್ರಸ್ತನಾಗಿದ್ದರೆ ವೈದ್ಯನು ಸ್ವಲ್ಪ ಔಷಧಿ ಕೊಡುತ್ತಾನೆ, ಅದೇ ಸಮಯಕ್ಕೆ ರೋಗಿಯು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದನ್ನು ಹೇಳುತ್ತಾನೆ. ಅದೇ ಚಿಕಿತ್ಸೆಯ ಸರಿಯಾದ ವಿಧಾನ. ರೋಗಿಯು ತನಗೆ ಇಷ್ಟಬಂದುದೆಲ್ಲ ತಿನ್ನಬಹುದು ಎಂದೇನಲ್ಲ. ರೋಗಿಯು ಸುಮ್ಮನೆ ಔಷಧಿ ತೆಗೆದುಕೊಂಡರೆ ಸಾಕು, ತನಗಿಷ್ಟಬಂದುದ್ದನ್ನೆಲ್ಲ ತಿನ್ನಬಹುದು ಎಂಬುದು ಸರಿಯಲ್ಲ. ಅದೇ ರೀತಿ ಸುಮ್ಮನೆ ಜಪ ಮಾಡಿದರೆ ಸಾಕು, ಏನೆಲ್ಲ ಅಸಂಬದ್ಧವನ್ನು ಬೇಕಾದರೂ ನಾವು ಮಾಡಬಹುದು. ಮತ್ತು ಆಧ್ಯಾತ್ಮಿಕ ಪ್ರಗತಿ ಹೊಂದಬಹುದು ಎಂದು ಯೋಚಿಸುವುದು ಮೂರ್ಖತನ. ಸ್ವಲ್ಪ ಕಷ್ಟವನ್ನು ನಾವು ಸ್ವಯಂ ಪ್ರೇರಿತವಾಗಿ ಸ್ವೀಕರಿಸಬೇಕು. ಹೀಗೆ ತಪಸ್ಯೆಯನ್ನು ಆಚರಿಸಬೇಕು. ಅಂದರೆ ನಮಗಿಷ್ಟವಾದ ಕೆಲವು ಸಂಗತಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಬಿಡುವುದು ಮತ್ತು ನಮಗೆ ಇಷ್ಟವಾಗದೇ ಇರಬಹುದಾದಂತಹ ಕೆಲವು ಸಂಗತಿಗಳನ್ನು ಸ್ವೀಕರಿಸುವುದು.’’

2] ಅನುಕೂಲಕರವಲ್ಲದ ವಸ್ತುಗಳನ್ನು ತಿರಸ್ಕರಿಸುವುದು.

ಕೃಷ್ಣಪ್ರಜ್ಞೆಗೆ ಅನುಕೂಲಕರವಲ್ಲದ ವಸ್ತುಗಳೆಂದರೆ, ಈ ಕೆಳಗಿನವು.

  1. ಮಾಂಸ ಭಕ್ಷಣೆ
  2. ಅನೈತಿಕ ಲೈಂಗಿಕ ಸಂಬಂಧ
  3. ಜೂಜಾಟ
  4. ಮದ್ಯಸೇವನೆ

ಆಧ್ಯಾತ್ಮಿಕ ಪ್ರಗತಿಗೆ ಅನುಕೂಲಕರವಲ್ಲದ ಎಲ್ಲವನ್ನೂ ಭಕ್ತನು ತಿರಸ್ಕರಿಸಬೇಕು. ಇದನ್ನು ವೈರಾಗ್ಯವೆಂದು ಕರೆಯುತ್ತಾರೆ. ಭಕ್ತನೊಬ್ಬನು ಶ್ರೀಲ ಪ್ರಭುಪಾದರಿಗೆ ಪ್ರಾಯೋಗಿಕ ಶರಣಾಗತಿಯ ಕುರಿತು ಕೇಳಿದಾಗ, ಪ್ರಭುಪಾದರು ಹೀಗೆ ಹೇಳುತ್ತಾರೆ – ‘‘ಕೃಷ್ಣನಿಗೆ ಶರಣಾಗುವುದು ಎಂದರೆ ಕೃಷ್ಣಪ್ರಜ್ಞೆಗೆ ಅನುಕೂಲಕರವಾದ ಸಂಗತಿಗಳನ್ನು ನೀವು ಸ್ವೀಕರಿಸುವುದು. ಉದಾ: ನಾವು ನಮ್ಮ ವಿದ್ಯಾರ್ಥಿಗಳನ್ನು ನಿರ್ಬಂಧಿಸುತ್ತೇವೆ. ಅನೈತಿಕ ಸಂಬಂಧವಿಲ್ಲ, ಜೂಜಾಟವಿಲ್ಲ, ಮಾಂಸ ಭಕ್ಷಣೆ ಇಲ್ಲ, ಮತ್ತು ಮದ್ಯಪಾನ ಇಲ್ಲ. ನೀವು  ಈ ಪ್ರಕ್ರಿಯೆಗೆ ಶರಣಾದರೆ, ಅದು ಕೃಷ್ಣನಿಗೆ ಶರಣಾದಂತೆ. ರೋಗಿಯೊಬ್ಬನ ಹಾಗೆ, ಅವನು ತನ್ನದೇ ಆದಂತಹ ರೀತಿಯಲ್ಲಿ ಬದುಕನ್ನು ಸವಿಯಲು ಇಚ್ಚಿಸಿದರೆ ಅವನು ತನ್ನ ರೋಗವನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಆದರೆ ಅವನು ವೈದ್ಯರ ಸಲಹೆ, ನಿರ್ದೇಶನಗಳನ್ನು ಪಾಲಿಸಿ ಜೀವನ ನಡೆಸಿದರೆ ಅವನು ರೋಗದಿಂದ ವಿಮುಕ್ತನಾಗುತ್ತಾನೆ.’’

3] ಕೃಷ್ಣನು ರಕ್ಷಣೆಯನ್ನು ನೀಡುವನು ಎಂಬ ಭರವಸೆ.

ಕೃಷ್ಣನು ತನಗೆ ಸಂರಕ್ಷಣೆ ನೀಡುವನು ಎಂದು ಭಕ್ತನು ದೃಢ ವಿಶ್ವಾಸ ಹೊಂದಿರಬೇಕು. ಬೇರೆ ಯಾರೂ ವಾಸ್ತವವಾಗಿ ರಕ್ಷಿಸಲಾರರು. ಶ್ರೀ ನರಸಿಂಹದೇವನಿಗೆ ಪ್ರಹ್ಲಾದ ಮಹಾರಾಜನು ಪ್ರಾರ್ಥನೆಯನ್ನು ಸಲ್ಲಿಸಿದಾಗ ಅವನೆಂದನು, ‘‘ಪ್ರಿಯ ಪ್ರಭುವೇ ಮಗು ಒಂದಕ್ಕೆ ತಾಯಿ-ತಂದೆ ಇರುವುದರಿಂದ ಅವನಿಗೆ ಪೂರ್ತಿ ಸಂರಕ್ಷಣೆ ಇದೆ ಎಂದು ಯೋಚಿಸಬಾರದು. ಕೃಷ್ಣನು ಆ ಮಗುವಿಗೆ ರಕ್ಷಣೆ ನೀಡದಿದ್ದರೆ ಆ ಮಗುವಿಗೆ ಸಾವಿರಾರು ತಂದೆ-ತಾಯಂದಿರು ಇದ್ದರೂ ಅವನನ್ನು ರಕ್ಷಿಸಲಾಗದು. ಒಳ್ಳೆ ವೈದ್ಯನೊಬ್ಬನು ನಮ್ಮನ್ನು ರೋಗದಿಂದ ರಕ್ಷಿಸಬಹುದು ಎಂಬುದು ದಿಟವಲ್ಲ. ಉದಾ: ಶ್ರೀಮಂತ ವ್ಯಕ್ತಿಯೊಬ್ಬನು ಯಾವುದೋ ಒಂದು ರೋಗದಿಂದ ನರಳುತಿದ್ದರೆ, ಮತ್ತು ಅವನು ಉತ್ತಮ ದರ್ಜೆಯ ವೈದ್ಯನನ್ನು ಇಟ್ಟುಕೊಂಡರೆ ಮತ್ತು ಉತ್ತಮ ದರ್ಜೆಯ ಔಷಧವನ್ನು ತೆಗೆದುಕೊಂಡರೆ ಅವನ ಬದುಕು ನಿಶ್ಚಯವೆಂದು ಹೇಳಬಹುದೇ?  ಇಲ್ಲ. ಕೃಷ್ಣನು ಅವನಿಗೆ ರಕ್ಷಣೆ ನೀಡದಿದ್ದರೆ  ಒಳ್ಳೆಯ ವೈದ್ಯಕೀಯ ಚಿಕಿತ್ಸೆ ಮತ್ತು ಒಳ್ಳೆಯ ಔಷಧದ ಸರಬರಾಜು ಇದ್ದರೂ ಅವನು ಸಾಯುವನು.

ಶ್ರೀಲ ಪ್ರಭುಪಾದರು ವಿವರಿಸುತ್ತಾರೆ, ‘‘ರೋಗಿಯೊಬ್ಬನಿಗೆ ಹಲವಾರು ನಿಪುಣ ವೈದ್ಯರು ಚಿಕಿತ್ಸೆ ನೀಡುತ್ತಿರಬಹುದು. ಆದರೆ ಅವನು ಬದುಕುಳಿಯುವನು ಎಂಬ ಖಾತರಿ ಇಲ್ಲ. ಕೃಷ್ಣನು ಮನಸ್ಸು ಮಾಡಿದರೆ ಅತಿ ಉತ್ಕೃಷ್ಟ ವೈದ್ಯರು ಮತ್ತು ಔಷಧಿ ಇದ್ದರೂ ವ್ಯಕ್ತಿಯೊಬ್ಬನು ಸಾಯುವನು. ಆದರೆ ಕೃಷ್ಣನು ನಮ್ಮನ್ನು ರಕ್ಷಿಸಿದರೆ, ಯಾವುದೇ ಔಷಧೀಯ ಚಿಕಿತ್ಸೆ ಇಲ್ಲದಿದ್ದರೂ ಬದುಕಿ ಉಳಿಯುವೆವು.

ಪ್ರಹ್ಲಾದ ಮಹಾರಾಜನು ಹೇಳುತ್ತಾನೆ, ‘‘ನಮಗೆ ಒಳ್ಳೆಯ ದೋಣಿ ಇರಬಹುದು. ಆದರೆ ನಾವು ಸಮುದ್ರದಲ್ಲಿ ಮುಳುಗುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ನೀನು ಅದನ್ನು ರಕ್ಷಿಸದಿದ್ದರೆ ಯಾವುದೇ ಕ್ಷಣವು ಅದು ಮುಳಗಬಹುದು.

ಶ್ರೀಲ ಪ್ರಭುಪಾದರು ಮುಂದೆ ವಿವರಿಸುತ್ತಾರೆ – ‘‘ಪ್ರಕೃತಿಯು ಎಷ್ಟೊಂದು ಕಷ್ಟಗಳನ್ನು ಒಡ್ಡುತ್ತದೆ. ಮತ್ತು ವಿಜ್ಞಾನಿಗಳು ಈ ಕಷ್ಟಗಳನ್ನು ಪರಿಹರಿಸಲು ಬದುಕಿನ ಹೋರಾಟದಲ್ಲಿ ಏನನ್ನಾದರೂ ಕಂಡುಹಿಡಿಯಲು ಪ್ರಯತ್ನಿಸಬಹುದು. ಆದರೆ ಕೃಷ್ಣನು ನಮಗೆ ರಕ್ಷಣೆ ನೀಡದಿದ್ದರೆ ಈ ಎಲ್ಲ ಆವಿಷ್ಕಾರಗಳು ನಿಷ್ಪ್ರೋಜಕವಾಗುವವು.’’

4] ಭಗವಂತನನ್ನು ನಮ್ಮ ಪೋಷಕ ಅಥವಾ ಪ್ರಭು ಎಂದು ಸ್ವೀಕರಿಸುವುದು – ಪ್ರಭುವಿನ ಕೃಪೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸುವುದು.

ಭಕ್ತನು ಶ್ರೀಕೃಷ್ಣನನ್ನು ತನ್ನ ಪರಮ ಪೋಷಕ ಮತ್ತು ಪ್ರಭು ಎಂದು ಸ್ವೀಕರಿಸಬೇಕು. ಅವನು ಕೃಷ್ಣನೊಬ್ಬನ ಮೇಲೆ ಮಾತ್ರ ಅವಲಂಬಿತನಾಗಬೇಕು. ಮತ್ತು ಅವನೇ ಏಕೈಕ ರಕ್ಷಕ ಎಂದು ಪರಿಗಣಿಸಬೇಕು. ಕೃಷ್ಣನ ಹೊರತಾಗಿ ಮೂರೂ ಲೋಕಗಳಲ್ಲಿ ತನಗೆ ಬೇರೆ ಯಾವ ರಕ್ಷಕನಾಗಲಿ, ಪಾಲಕನಾಗಲಿ ಇಲ್ಲ ಎಂದು ಭಕ್ತನು ದೃಢ ವಿಶ್ವಾಸ ಹೊಂದಿರಬೇಕು. ಕೃಷ್ಣನಿಗೆ ಪೂರ್ಣ ಶರಣಾಗಿದ್ದರೆ ವ್ಯಕ್ತಿಯು ಸಂತೋಷವಾಗಿರುತ್ತಾನೆ. ಏಕೆಂದರೆ ಪರಿಸ್ಧಿತಿ ಏನೇ ಇರಲಿ ಕೃಷ್ಣನು ನನ್ನನ್ನು ಸಂರಕ್ಷಿಸುವನು ಎಂಬುದು ಅವನಿಗೆ ತಿಳಿದಿರುತ್ತದೆ. ತಾಯಿಗೆ ಸಂಪೂರ್ಣವಾಗಿ ಶರಣಾದ ಒಂದು ಚಿಕ್ಕ ಮಗುವಿಗೆ ತಾಯಿಯು ತನ್ನನ್ನು ರಕ್ಷಿಸುವಳು ಎಂಬುವ ಭರವಸೆ ಇರುತ್ತದೆ.

5] ಪೂರ್ಣ ಶರಣಾಗತಿ – ಪ್ರಭುವಿನ ಆಸಕ್ತಿಗಳ ಹೊರತು ಬೇರೆ ಆಸಕ್ತಿಗಳನ್ನು ಹೊಂದದಿರುವುದು.

ಸ್ವ-ಶರಣಾಗತಿ ಎಂದರೆ ನಮ್ಮ ಚಟುವಟಿಕೆಗಳು ಮತ್ತು ಆಸೆಗಳು ಸ್ವತಂತ್ರವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು. ಭಕ್ತನು ಕೃಷ್ಣನ ಮೇಲೆ ಪೂರ್ಣ ಅವಲಂಬಿತನು. ಮತ್ತು ಅವನು ಕೃಷ್ಣನು ಆಸೆಪಟ್ಟಂತೆ ಯೋಚಿಸುವನು ಮತ್ತು ಕೆಲಸ ಮಾಡುವನು. ದೇವೋತ್ತಮ ಪರಮ ಪುರುಷನು ನುಡಿದನು, ‘‘ಓ ಪಾರ್ಥ, ಮಾನಸಿಕ ಊಹಾಪೋಹದಿಂದ ಉದ್ಭವಿಸುವ ಇಂದ್ರಿಯತೃಪ್ತಿಯ ಎಲ್ಲ ಬಗೆಯ ಆಸೆಗಳನ್ನು ಮನುಷ್ಯನು ಬಿಟ್ಟುಬಿಟ್ಟಾಗ, ಹೀಗೆ ಪರಿಶುದ್ಧನಾಗಿ ಆತ್ಮನಲ್ಲಿಯೇ ಸಂತೃಪ್ತಿಯನ್ನು ಪಡೆದಾಗ ಅವನು ಶುದ್ಧ ಅಲೌಕಿಕ ಪ್ರಜ್ಞೆಯಲ್ಲಿ ಇರುವನು ಎನ್ನುತ್ತಾರೆ.’’ ಪರಮಹಂಸನು ಇಂದ್ರಿಯತೃಪ್ತಿಯ ಯಾವುದೇ ಯೋಜನೆ ಹೊಂದಿರುವುದಿಲ್ಲ; ಅವನಿಗೆ ಇರುವ ಏಕೈಕ ಆಸಕ್ತಿ ಎಂದರೆ ಪ್ರಭುವಿನ ಇಂದ್ರಿಯಗಳನ್ನು ತೃಪ್ತಿಪಡೆಸುವುದು.

6] ಸದಾ ವಿನಮ್ರರಾಗಿರುವುದು – ಶ್ರೀ ಚೈತನ್ಯರು ಹೀಗೆ ಉಪದೇಶಿಸುತ್ತಾರೆ

ತೃಣಾದ್‌ ಅಪಿ ಸುನೀಚೇನ

ತರೋರ್‌ ಇವ ಸಹಿಷ್ಣುನಾ

ಅಮಾನಿನಾ ಮಾನದೇನ

ಕೀರ್ತನೀಯಃ ಸದಾ ಹರಿಃ

“ಯಾರು ತನ್ನನ್ನು ತಾನು ತೃಣಕ್ಕಿಂತ ಕಡೆಯಾಗಿ ಕಾಣುತ್ತಾರೋ, ಮರಕ್ಕಿಂತ ಹೆಚ್ಚು ಸಹನೆ ಹೊಂದಿರುತ್ತಾರೋ, ಇತರರಿಂದ ಗೌರವವನ್ನು ನಿರೀಕ್ಷಿಸದೆ ಇತರರಿಗೆ ಸಕಲ ಗೌರವವನ್ನು ಕೊಡಲು ಸಿದ್ಧರಾಗಿರುವರೋ ಅಂತಹವರು ಅತ್ಯಂತ ಸುಲಭವಾಗಿ ಸದಾ ಭಗವಂತನ ಪವಿತ್ರನಾಮ ಜಪಮಾಡಬಲ್ಲರು.”

ಚೈತನ್ಯ ಚರಿತಾಮೃತ ಆದಿಲೀಲಾ 17.31. [ಶಿಕ್ಷಾಷ್ಟಕ-3]

ಶ್ರೀಲ ಪ್ರಭುಪಾದರು ವಿವರಿಸುತ್ತಾರೆ – ‘‘ನಾವು ಸೌಮ್ಯ ಮತ್ತು ವಿನಮ್ರರಾಗಿರದಿದ್ದರೆ ಆಧ್ಯಾತ್ಮಿಕ ಬದುಕಿನಲ್ಲಿ ಪ್ರಗತಿ ಹೊಂದುವುದು ಬಹಳ ಕಷ್ಟ. ವೈಷ್ಣವನೊಬ್ಬನು ಇತರ ಯಾವುದೇ ಜೀವಿಗೆ ತನ್ನ ಮನಸ್ಸು, ಮಾತು ಅಥವಾ ದೇಹದಿಂದ ಎಂದಿಗೂ ತೊಂದರೆ ಕೊಡಬಾರದು. ಅವನು ಸದಾ ತಾಳ್ಮೆಯಿಂದಿರಬೇಕು. ಮತ್ತು ಎಂದಿಗೂ ಬೇರೆಯವರ ಅವಹೇಳನ ಮಾಡಬಾರದು. ಶ್ರೀಕೃಷ್ಣನಿಗೋಸ್ಕರ ಉದಾ: ಅರ್ಜುನ, ಹನುಮಂತ ಮತ್ತು ಇತರೆ ಮಹಾನ್‌ ಭಕ್ತರು ಮಾಡಿದ ಹಾಗೆ – ಅಸುರರ ವಿರುದ್ಧ ಶಕ್ತಿಯುತವಾಗಿ ಕೆಲಸ ಮಾಡಬಹುದು. ಆದರೆ ತನ್ನದೇ ವಿಷಯ ಬಂದಾಗ ವೈಷ್ಣವನು ಬಹಳ ಸೌಮ್ಯ ಮತ್ತು ವಿನಮ್ರನಾಗಿರುತ್ತಾನೆ.

ನಾವು ನಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಬಹಳ ವಿನಮ್ರರಾಗಿರಬೇಕು. ಮತ್ತು ನಮಗೆ ಯಾರಾದರೂ ಅಗೌರವ ಉಂಟುಮಾಡಿದರೆ ಅದನ್ನು ನಾವು ತಾಳಿಕೊಳ್ಳಬೇಕು ಮತ್ತು ಕೋಪಗೊಳ್ಳಬಾರದು. ಆದರೆ ನಮ್ಮ ಗುರುಗಳ ವಿರುದ್ಧ ಅಥವಾ ಇನ್ನೊಬ್ಬ ವೈಷ್ಣವರ ವಿರುದ್ಧ ಯಾರಾದರೂ ನಿಂದನೆ ಮಾಡಿದರೆ ನಾವು ಬೆಂಕಿಯಂತೆ ಗೋಪಗೊಂಡು ಸಿಡಿದೇಳಬೇಕು.

ರೋಮಹರ್ಷಣ ಸೂತರು ಬಹಳ ವಿದ್ಯಾವಂತರು, ಮತ್ತು ಅವರಿಗೆ ಬ್ರಾಹ್ಮಣರಾಗುವ ಅವಕಾಶ ನೀಡಲಾಗಿತ್ತು. ಆದರೂ ಅವರು ಸೌಮ್ಯರಾಗಿರಲಿಲ್ಲ. ಇದರಿಂದ ನಾವು ಅರ್ಥಮಾಡಿಕೊಳ್ಳಬೇಕಾದುದು ಏನೆಂದರೆ ಭೌತಿಕ ವಸ್ತು ಅಥವಾ ಭೌತಿಕ ಸಂಪತ್ತಿನಿಂದ ಒಬ್ಬನು ಹೆಮ್ಮೆಯಿಂದ ಉಬ್ಬಿ ಹೋದರೆ ಅವನು ಬ್ರಾಹ್ಮಣನಿಗೆ ತಕ್ಕ ಸೌಮ್ಯ ನಡವಳಿಕೆ ಪಡೆಯಲಾರನು. ಇಂತಹ ವ್ಯಕ್ತಿಯ ವಿದ್ವತ್ತೆಲ್ಲವೂ ಸರ್ಪದ ಹೆಡೆಯ ಮೇಲೆ ಇರುವ ಅಮೂಲ್ಯ ರತ್ನದ ಹಾಗೆ. ತನ್ನ ಹೆಡೆಯ ಮೇಲೆ ಅಮೂಲ್ಯ ರತ್ನವಿದ್ದರೂ ಹಾವು ಹಾವೇ. ಮತ್ತು ಸಾಮಾನ್ಯ ಹಾವಿನಷ್ಟೇ ಭಯಾನಯಕ. ವ್ಯಕ್ತಿಯೋರ್ವನು ಸೌಮ್ಯ ಮತ್ತು ವಿನಮ್ರನಾಗದಿದ್ದರೆ ಅವನು ಮಾಡಿದ ವೇದಪುರಾಣಗಳ ಎಲ್ಲ ಅಭ್ಯಾಸವೂ, ಮತ್ತು ಅವನು ಹೊಂದಿದ ಶಾಸ್ತ್ರದ ವಿಶಾಲ ಜ್ಞಾನವೆಲ್ಲವೂ ಕೇವಲ ಬಾಹ್ಯ ವಸ್ತ್ರದಂತೆ, ವೇದಿಕೆಯ ಮೇಲೆ ನರ್ತಿಸುತ್ತಿರುವ ಕಲಾವಿದನ ವೇಷಭೂಷಣದ ಹಾಗೆ.

ಭಕ್ತನು ತನ್ನ ಸಂಪತ್ತಿನ ತನ್ನ ಆರ್ಜನೆಯ ಬಗ್ಗೆ ಗರ್ವಿತನಾಗಿರಬಾರದು. ಭಕ್ತನ ಲಕ್ಷಣಗಳೆಂದರೆ ಸೌಮ್ಯತ್ವ ಮತ್ತು ವಿನಮ್ರತೆ. ಬೇರೆ ಎಲ್ಲ ವೈಷ್ಣವರು ನಮಗೆ ವೈಯಕ್ತಿಕ ಉದಾಹರಣೆಯಿಂದ ಕಲಿಸಿಕೊಟ್ಟಂತೆ ಭಕ್ತನು ಆಧ್ಯಾತ್ಮಿಕವಾಗಿ ಬಹಳ ಪ್ರಗತಿ ಹೊಂದಿದ್ದರೂ ಅವನು ಸದಾ ಸೌಮ್ಯ ಮತ್ತು ವಿನಮ್ರನಾಗಿಯೇ ಇರುವನು. ತಾನು ದಿಟವಾಗಿ ಬಹಳ ಉತ್ಕೃಷ್ಟ ಸ್ಥಾನದಲ್ಲಿದ್ದರೂ ವೈಷ್ಣವನು ತನ್ನನ್ನು ಹಾಗೆ ಪರಿಗಣಿಸುವುದಿಲ್ಲ. ಅವನು ತನ್ನನ್ನು ಉನ್ನತ ಭಕ್ತನೆಂದು ಪರಿಗಣಿಸದೇ ಸದಾ ವಿನಮ್ರನಾಗಿಯೇ ಇರತ್ತಾನೆ. ಅವನು ತಾನು ಕೀಳೆಂದು ಭಾವಿಸುತ್ತಾನೆ. ಆದರೆ ಅವನು ವಾಸ್ತವವಾಗಿ ಕೀಳು ಎಂದು ಅರ್ಥವಲ್ಲ.

ಭಗವಂತನು ಅಜೇಯನು. ‘‘ನಾನು ಅವನನ್ನು ತಿಳಿದುಕೊಳ್ಳಬಹುದು’’ ಎಂಬ ಗರ್ವದ ಮನೋಭಾವದಿಂದ ಅವನನ್ನು ಅರ್ಥಮಾಡಿಕೊಳ್ಳಲಾಗದು. ಇಲ್ಲ. ಯಾರು ವಿನಮ್ರರಾಗಿರುತ್ತಾರೋ, ವಿಧೇಯರಾಗಿರುತ್ತಾರೋ, ಮತ್ತು ಯಾರು ದೇವರನ್ನು ಸಾಕ್ಷಾತ್ಕರಿಸಿಕೊಂಡ ವ್ಯಕ್ತಿಯ ಆಶ್ರಯ ಪಡೆದು ಅವರಿಂದ ಆಲಿಸುತ್ತಾರೋ, ಅಂತಹವರು ಭಗವಂತನನ್ನು ತಿಳಿದುಕೊಳ್ಳಬಹುದು. ತಾನು ಬಹಳ ಕೀಳು ಎಂದು ಯಾರು ಯೋಚಿಸುತ್ತಾರೋ ಅವರು ದೇವರನ್ನು ತಿಳಿದುಕೊಳ್ಳಬಹುದು. ಇದನ್ನೇ ಬೈಬಲ್‌ನಲ್ಲಿ ಕೂಡ ಹೇಳಲಾಗಿದೆ, ನಾವು ಸೌಮ್ಯ ಮತ್ತು ವಿನಮ್ರರಾಗಬೇಕು ಎಂದು. ಆಗ ನಾವು ಅರ್ಥಮಾಡಿಕೊಳ್ಳಬಹುದು. ಮತ್ತು  ಅದನ್ನೇ ಕೃಷ್ಣನು ಕೇಳುತ್ತಿರುವುದು, ‘‘ಮೊದಲು ಶರಣಾಗು. ಸೌಮ್ಯ ಮತ್ತು ವಿನಮ್ರನಾಗು.’’ ಎಲ್ಲ ವೈದಿಕ ಶಾಸ್ತ್ರಗಳ ನಿರ್ಣಯ ಇದೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi