ಬಂಗಾಳ ಕೊಲ್ಲಿ ಪ್ರಶಾಂತವಾಗಿತ್ತು. ಸಮುದ್ರಕ್ಕೇ ಸವಾಲೆಸೆಯುವಂತೆ ನೀಲಾಕಾಶ ಹರಡಿಕೊಂಡಿತ್ತು. ಅಲ್ಲೊಂದು ಇಲ್ಲೊಂದು ಬೀಡಾಡಿ ಮೊಡಗಳು ಕಾಣಿಸುತ್ತಿದ್ದವಾದರೂ ಮಳೆ ಬರುವ ಯಾವುದೇ ಮುನ್ಸೂಚನೆ ಇರಲಿಲ್ಲ. ಆ ಬೃಹತ್ ನಾವೆ ಆಗ ತಾನೇ ಚಂದನಪುರದಿಂದ ಹೊರಟಿತ್ತು. ನೂರಾರು ಪ್ರಯಾಣಿಕರು, ಆ ಕಾಲದಲ್ಲೇ ಲಕ್ಷಾಂತರ ರೂ ಬೆಲೆಬಾಳುವ ಸರಕು ಸರಂಜಾಮುಗಳನ್ನು ಹೇರಿಕೊಂಡ ಹಡಗು ಫ್ರಾನ್ಸ್‌ನಿಂದ ಭಾರತದತ್ತ ಹೊರಟಿತ್ತು.

ಕ್ಯಾಪ್ಟನ್ ಬೀಟ್ಸ್ ಆ ಹಡಗಿನ ಮುಖ್ಯ ನಾವಿಕ. ಆಗೆಲ್ಲಾ ಈಗಿನಂತೆ ಹಡಗು ಪ್ರಯಾಣ ಪ್ರತಿಶತ ನೂರರಷ್ಟು ಸುರಕ್ಷಿತವೇನಲ್ಲ. ಆದರೂ ದೂರ ಪ್ರಯಾಣಕ್ಕೆ, ಅದರಲ್ಲೂ ಅಂತಾರಾಷ್ಟ್ರೀಯ ಯಾನಕ್ಕೆ ಇದು ಅನಿವಾರ್ಯವಾಗಿತ್ತು. ಇಡೀ ಹಡಗಿನ ಉಸ್ತುವಾರಿ ತನ್ನ ಮೇಲಿದ್ದರೂ ಬೀಟ್ಲ್ ಮುಖದಲ್ಲಿ ಒಂದಿನಿತೂ ಅಳುಕಿರಲಿಲ್ಲ. ಅಜಾನು ಬಾಹು ಶರೀರ, ರಕ್ತ ಚಿಮ್ಮುವಂತೆ ಕೆಂಪುಕೆಂಪಗೆ ಅಗಲವಾದ ಮುಖ ಆತ್ಮ ವಿಶ್ವಾಸದಿಂದ ಪುಟಿಯುತ್ತಿತ್ತು. ಅವನ ಜತೆಗೆ ನಾಲ್ಕಾರು ಸಹಾಯಕರು. ಗದ್ದಲ ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು.
ಅವರಲ್ಲೊಬ್ಬ ಕುತ್ತಿಗೆಗೆ ಬೈನಾಕ್ಯುಲರ್ (ದೂರದರ್ಶಕ) ನೇತಾಡಿಸಿಕೊಂಡು ಹಡಗಿನ ಮೇಲ್ಛಾವಣಿಯ ವಿಶಾಲವಾದ ಖಾಲಿ ಜಾಗದತ್ತ ಹೊರಟಿದ್ದ. ಉಳಿದ ಪ್ರಯಾಣಿಕರೆಲ್ಲ ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದರು. ಹಡಗು ಕಡಲ ಮಾರ್ಗದಲ್ಲಿ ಚಂದನಪುರದಿಂದ ಕೆಲವು ಮೈಲಿ ದೂರ ಕ್ರಮಿಸಿತ್ತು.
ಬೈನಾಕ್ಯುಲರ್‌ನ ರಂಧ್ರಗಳಿಗೆ ಕಣ್ಣುಗಳನ್ನು ಒತ್ತಿ ಹಿಡಿದು ದೂರ ಸಾಗರದಲ್ಲಿ ದೃಷ್ಟಿನೆಟ್ಟವನ ಹುಬ್ಬು ಇದ್ದಕ್ಕಿದ್ದಂತೆ ಗಂಟಿಕ್ಕಿತು! ಸಾಗರದ ಅಲೆಗಳಂತೆ ಏರಿಳಿಯುತ್ತಿದ್ದ ಅವನ ದೃಷ್ಟಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಗಕ್ಕನೆ ನಿಂತು ಬಿಟ್ಟಿತು ! ಕಾರಣವಿಷ್ಟೆ
ದೈತ್ಯಾಕಾರದ ತಿಮಿಂಗಿಲವೊಂದು ಬಾಯ್ದೆರೆದುಕೊಂಡು ಹಡಗಿನತ್ತ ಮುನ್ನುಗ್ಗುತ್ತಿತ್ತು ! ಅಬ್ಬ ಅದರ ಕಣ್ಣುಗಳು ಭಯಂಕರವಾಗಿ ಹೊಳೆಯುತ್ತಿದ್ದರೆ, ಅದರ ಬಾಯಿ ಅಷ್ಟು ದೊಡ್ಡಹಡಗನ್ನು ಅನಾಮತ್ತಾಗಿ ಒಂದೇ ತುತ್ತಿನಲ್ಲಿ ನುಂಗುವಂತೆ ತೆರೆದುಕೊಂಡಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ಹಡಗು ತಿಮಿಂಗಲದ ಹೊಟ್ಟೆ ಸೇರುವುದು ಅಥವಾ ಅದಕ್ಕೆ ಡಿಕ್ಕಿಯಾಗಿ ನೀರು ಪಾಲಾಗುವುದು ಖಚಿತವಾಗಿತ್ತು. ಆತನಿಗೆ ಏನು ಮಾಡಬೇಕೋ ತೋಚಲಿಲ್ಲ.
ತಕ್ಷಣ ಕಿರುಚಿ ಕೊಂಡ. ‘ಕ್ಯಾಪ್ಟನ್… ಎಚ್ಚರ !!’ ಆಗ ಕ್ಯಾ. ಬೀಟ್ಲ್ ಹಡಗಿನ ಕಂಟ್ರೋಲ್ ರೂಮಿನಲ್ಲಿ ಕುಳಿತು ಯಾವುದೋ ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದ. ಸಹೋದ್ಯೋಗಿಯ ಕೂಗು ಕೇಳಿ ತಕ್ಷಣ ಜಾಗೃತನಾದ. ಕುಳಿತಲ್ಲಿಂದ ಛಂಗನೆ ಹಾರಿ ಹೊರಗೋಡಿ ಬಂದ. ಮುಖದಲ್ಲಿ ಆತಂಕ, ಕುತೂಹಲ ಒಂದರೊಡನೊಂದು ಪೈಪೋಟಿ ನಡೆಸಿದ್ದವು.
“ಏನಾಯಿತು, ಏನು ತೊಂದರೆ?” ಬೀಟ್ಲ್ ಆತಂಕದಿಂದಲೇ ಪ್ರಶ್ನಿಸಿದ. ಜೀವ ಭಯದಿಂದ ತತ್ತರಿಸಿ ಹೋಗಿದ್ದ. ಸಹೋದ್ಯೋಗಿಯ ಬಾಯಿಂದ ಮಾತೇ ಹೊರಡಲಿಲ್ಲ. ಆತ ನಡುಗುತ್ತಲೇ ದೂರ ಸಮುದ್ರದತ್ತ ಕೈ ತೋರಿಸಿದ. ಆತನಿಂದ ಬೈನಾಕ್ಯುಲರ್ ಕಿತ್ತುಕೊಂಡ ಬೀಟ್ಲ್ ಆತ ಕೈತೋರಿಸಿದ ದಿಕ್ಕಿನತ್ತ ದೃಷ್ಟಿನೆಟ್ಟ. ಹಡಗನ್ನೇ ನುಂಗುವಂತೆ ಇತ್ತ ಕಡೆಯೇ ನುಗ್ಗಿ ಬರುತ್ತಿದ್ದ ತಿಮಿಂಗಿಲ ಅವನ ಕಣ್ಣಿಗೂ ಕಾಣಿಸಿತು.

ಅಷ್ಟೇ ಅಲ್ಲ, ದೂರ ದಿಗಂತದಲ್ಲಿ ಇನ್ನೊಂದು ಆತಂಕ ಎದುರಾಗಿತ್ತು. ಭಾರಿ ಚಂಡ ಮಾರುತ ಅಪ್ಪಳಿಸಲು ಅಲ್ಲಿಸಿದ್ಧತೆ ನಡೆದಿತ್ತು. ಹವಾಮಾನದ ಈ ವೈಪರೀತ್ಯ ಬೀಟ್ಲ್‌ನ ಅನುಭವಸ್ಥ ಕಣ್ಣುಗಳಿಗೆ ಕಾಣಿಸಿತು. ಒಂದೆಡೆ ದೈತ್ಯ ತಿಮಿಂಗಿಲ. ಇನ್ನೊಂದೆಡೆ ಚಂಡಮಾರುತ, ಹಡಗಿನ ಕಥೆ ಮುಗಿದಂತೆಯೇ. ಒಳಗಿದ್ದ ನೂರಾರು ಮಂದಿಯ ದುರ್ಗತಿ ನೆನೆದು ಕ್ಯಾಪ್ಟನ್‌ಗೆ ಹೃದಯವೇ ಬಾಯಿಗೆ ಬಂದ ಅನುಭವ. ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ತಿಮಿಂಗಿಲ ಮತ್ತಷ್ಟು ಸಮೀಪ ಬಂದಿತ್ತು. ಗಾಳಿಯ ತೀವ್ರತೆಯೂ ಹೆಚ್ಚಿ ಹಡಗು ಅನಾಮತ್ತಾಗಿ ಓಲಾಡಲಾರಂಭಿಸಿತು.
ಹಡಗಿನಲ್ಲಿರುವ ಜೀವ ರಕ್ಷಕ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸಿದರೆ ಹೇಗೆ? ಬೀಟ್ಲ್ ಒಂದು ಕ್ಷಣ ಯೋಚಿಸಿದ. ಗಾಳಿಯ ಒಡೆತದಿಂದ ಇಂಥ ಬೃಹತ್ ಹಡಗೇ ಡೋಲಾಯಮಾನವಾಗಿರುವಾಗ ಚಿಕ್ಕ ಪುಟ್ಟ ದೋಣಿಗಳು ಉಳಿಯುವುದು ಸಾಧ್ಯವಿಲ್ಲ ಎಂದು ಅವನ ಒಳಮನಸ್ಸು ವಾದಿಸಿತು.
ಹಾಗಾದರೆ ನಾವ್ಯಾರೂ ಬದುಕುಳಿಯುವುದು ಸಾಧ್ಯವೇ ಇಲ್ಲವೇ ಎಂದು ಯೋಚಿಸುತ್ತಾ ಆತ ಶತಪಥ ತಿರುಗಲಾರಂಭಿಸಿದ. ಚಂಡಮಾರುತದ ಮುನ್ಸೂಚನೆ ಎಂಬಂತೆ ಗಾಳಿ ವಿಚಿತ್ರ ಸದ್ದು ಮಾಡುತ್ತಾ ಹಡಗನ್ನು ಬೆದರಿಸುತ್ತಿತ್ತು. ಇಡೀ ಸಮುದ್ರ ಕಡು ಕೋಪದಿಂದೆಂಬಂತೆ ಕಪ್ಪು ಬಣ್ಣಕ್ಕೆ ತಿರುಗಿತು. ಇತ್ತ ತಿಮಿಂಗಿಲ ಚಂಡಮಾರುತದ ಜತೆ ಪೈಪೋಟಿಗಿಳಿದಂತೆ ‘ಈ ಹಡಗು ನನ್ನ ಬಲಿ’ ಎನ್ನುತ್ತಾ ಮುನ್ನುಗ್ಗುತ್ತಿತ್ತು. ಕ್ಯಾಪ್ಟನ್ ಬೀಟ್ಲ್ ಏನೂ ಮಾಡಲು ತೋಚದೆ ಅಸಹಾಯಕನಾಗಿ ಕೈಚೆಲ್ಲಿದ.
ಕೆಳಗಿಳಿದು ಬಂದ ಬೀಟ್ಲ್ ಔಪಚಾರಿಕತೆಗೆಂಬಂತೆ ಎಚ್ಚರಿಕೆಯ ಗಂಟೆ ಬಾರಿಸಿದ. ಏನೋ ಅಪಾಯ ಕಾದಿದೆ ಎಂದು ಹಡಗಿನೊಳಗಿರುವ ಪ್ರಯಾಣಿಕರಿಗೆ ಮುನ್ಸೂಚನೆ ನೀಡುವುದು ಇದರ ಉದ್ದೇಶ. ತಮ್ಮ ತಮ್ಮ ದಾರಿ ನೋಡಿಕೊಳ್ಳುವಂತೆ, ತಮ್ಮ ಬುದ್ಧಿಗೆ ತೋಚಿದಂತೆ ಏನಾದರೂ ಮಾಡುವಂತೆ ಆತ ಸಹ ಸಿಬ್ಬಂದಿಗೆ ಸೂಚಿಸಿದ. ಈ ಅವಳಿ ಆಘಾತಗಳಿಂದ ಬಚಾವಾಗುವುದು ಸಾಧ್ಯವೇ ಇಲ್ಲ ಎಂಬುದು ಆತನ ಮನಸ್ಸಿಗೆ ನಿಚ್ಚಳವಾಗಿತ್ತು.
ಎರಡು ತಿಂಗಳ ಹಿಂದೆ ಫ್ರಾನ್ಸ್‌ನಿಂದ ಹೊರಟಿದ್ದ ಆ ಹಡಗು ಪಾಂಡಿಚೆರಿಯಲ್ಲಿ ಲಂಗರು ಹಾಕಬೇಕಿತ್ತು. ಪಾಂಡಿಚೆರಿ ತಲುಪಲು ಇನ್ನು ಕೆಲವು ದಿನ ಮಾತ್ರ ಬಾಕಿ ಉಳಿದಿತ್ತು. ಆಗ, ಅಂದರೆ 1650ರ ದಶಕದಲ್ಲಿ ಪಾಂಡಿಚೆರಿ ಫ್ರೆಂಚರ ವಸಾಹತಾಗಿತ್ತು. ಪಾಂಡಿಚೆರಿ ಮತ್ತು ಫ್ರಾನ್ಸ್ ಮಧ್ಯೆ ಹಡಗುಗಳ ಓಡಾಟ ಮಾಮೂಲಾಗಿತ್ತು.
ಏಕೆಂದರೆ ನಮ್ಮ ದೇಶದಿಂದ ಏಲಕ್ಕಿ, ಕಾಳುಮೆಣಸು, ಲವಂಗ ಇತ್ಯಾದಿ ಸಾಂಬಾರ ಪದಾರ್ಥಗಳು ಯೂರೋಪ್ ದೇಶಗಳಿಗೆ ಸರಬರಾಜಾಗುತ್ತಿದ್ದುದು ಇದೇ ಹಡಗಿನಲ್ಲಿ. ಪಾಂಡಿಚೆರಿಯಲ್ಲಿ ಸಾಕಷ್ಟು ಸಂಖ್ಯೆಯ ಫ್ರೆಂಚರು ನೆಲೆಗೊಂಡಿದ್ದರಿಂದ, ಹಡಗು ಹಿಂತಿರುಗಿ ಅಲ್ಲಿಂದ ಬರುವಾಗ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಬರುತ್ತಿತ್ತು.

ಅದರಂತೆ ಈ ಬಾರಿಯೂ ಹಡಗಿನಲ್ಲಿ ಬಹುತೇಕ ಫ್ರೆಂಚ್ ಪ್ರಯಾಣಿಕರೇ ತುಂಬಿದ್ದರು. ಪಾಂಡಿಚೆರಿಯಲ್ಲಿರುವ ಫ್ರೆಂಚರಿಗಾಗಿ ತವರೂರಿನಿಂದ ತಂದಿದ್ದ ಬಗೆಬಗೆಯ ಸರಕುಗಳೂ ಇದ್ದವು. ಎಲ್ಲಕ್ಕಿಂತ ಮಿಗಿಲಾಗಿ, ಪಾಂಡಿಚೆರಿಯಲ್ಲಿರುವ ಚರ್ಚ್‌ಗೆಂದು ಬೃಹತ್ ಗಾತ್ರದ ಗಂಟೆಯೊಂದನ್ನು ಫ್ರಾನ್ಸ್ ನಿಂದ ತರಿಸಲಾಗಿತ್ತು. ಆ ಗಂಟೆಯೂ ಹಡಗಿನ ಒಂದು ಮೂಲೆಯಲ್ಲಿತ್ತು.
ಸಾವು ಎರಡೆರಡು ರೂಪದಲ್ಲಿ ಬಂದೆರಗುತ್ತಿತ್ತು. ಅದನ್ನೆದುರಿಸಲು ಕ್ಯಾಪ್ಟನ್ ಬೀಟ್ಲ್ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ‘ಮುಂದಿನ ಬಂದರು ಬರೂನಾವನ್ನು ನಾವೇನಾದರೂ ನೋಡಿದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ” ನಡುಗುವ ದನಿಯಲ್ಲಿ ಬೀಟ್ಲ್ ನುಡಿದ.
“ಚಂಡಮಾರುತದ ಪ್ರಕೋಪ, ತಿಮಿಂಗಿಲದ ಬಾಯಿಂದ ಪಾರಾಗಿ ಮುಂದಿನ ಬಂದರು ತಲುಪಿದರೆ, ನಂತರ ಮದ್ರಾಸು, ಆಮೇಲೆ ಪಾಂಡಿಚೆರೆ… ಕೇವಲ ಮೂರು ನಿಲ್ದಾಣಗಳು ಅಷ್ಟೇ!’ ಮಾತಿನಲ್ಲಿ ಆಶಾವಾದ ತುಳುಕಿಸಲು ಅವರು ಯತ್ನಿಸಿದರೂ ಮುಖದಲ್ಲಿ ವಿಷಾದ ಮಡುಗಟ್ಟಿತ್ತು. ಸಹ ಪ್ರಯಾಣಿಕರಲ್ಲಿ ಆತ್ಮ ವಿಶ್ವಾಸ ತುಂಬಲು ಆತ ಆ ರೀತಿ ಮಾತನಾಡಿದ್ದರಷ್ಟೆ ಗಾಳಿಯ ಆರ್ಭಟ ಜೋರಾಯಿತು. ಹಾಗೆಯೇ ಹಡಗು ನಿಯಂತ್ರಣ ಕಳೆದುಕೊ೦ಡ೦ತ ಜೋಲಿ ಹೊಡೆಯಲಾರಂಭಿಸಿತು. ಈಗ ಬೀಟ್ಲ್ ಕೂಡಾ ನಿಯಂತ್ರಣ ಕಳೆದುಕೊಂಡ.
ಹುಚ್ಚನಂತೆ ಅತ್ತಿಂದಿತ್ತ ಓಡಾಡಲಾರಂಭಿಸಿದ. ಗಾಭರಿಗೊಂಡ ಪ್ರಯಾಣಿಕರೆಲ್ಲಾ ಅವನನ್ನು ಮುತ್ತಿಕೊಂಡರು. ಪ್ರಯಾಣಿಕರ ಪೈಕಿ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆ ಇಲ್ಲವಾಗಿತ್ತು. ಕ್ಯಾ. ಬೀಟ್ಲ್ ಸಾಧಾರಣ ಕುಳವೇನಲ್ಲ. 18 ವರ್ಷ ಕಾಲ ಹಡಗಿನ ನಾವಿಕನಾಗಿ ಸಮುದ್ರದಲ್ಲೇ ಜೀವನ ಕಳೆದ ಅನುಭವಿ. ಆದರೆ ಈಗ ಪ್ರಕೃತಿ ಮುಂದೆ ಆತ ಕುಬ್ಜನಾಗಿದ್ದ.
ಗಾಳಿಯ ಪ್ರಹಾರ, ಅಲೆಗಳ ಏರಿಳಿತಕ್ಕೆ ಸಿಕ್ಕಿ ನರ್ತಿಸುತ್ತಿರುವ ಹಡಗಿನಂತೆಯೇ ಅವನ ಮನಸೂ ಎತ್ತೆತ್ತಲೋ ಓಡುತ್ತಿತ್ತು. ಹೀಗಿರುವಾಗ ಮಹಿಳೆಯೊಬ್ಬಳು ಅಂಗಲಾಚಿದಳು, ‘ಕ್ಯಾಪ್ಟನ್ ನಾನು ಸತ್ತರೂ ಚಿಂತೆಯಿಲ್ಲ. ನನ್ನ ಮಗುವನ್ನು ಹೇಗಾದರೂ ಮಾಡಿ ರಕ್ಷಿಸಿ’. ತಾಯಿ ಕರುಳಿನ ಆರ್ತನಾದ ಕೇಳಿ ಬೀಟ್ಲ್‌ಗೆ ಕರುಳು ಕಿತ್ತು ಬಂದತಾಗಿತ್ತು.
ಒಂದು ವರ್ಷದ ಮಗು ಮಾತ್ರ ಏನೂ ತಿಳಿಯದಂತೆ ತಾಯಿ ಮಡಿಲಲ್ಲಿ ಆಡುತ್ತಿತ್ತು. ಕೊನೆಗೆ ತಾಯಿ ಅಳುವುದನ್ನು ನೋಡಿ ತಾನೂ ಅಳಲಾರಂಭಿಸಿತು. ತನಗರಿವಿಲ್ಲದಂತೆ ಬೀಟ್ಲ್ ಕಣ್ಣಲ್ಲಿ ನೀರು ಉಕ್ಕಿ ಬಂತು. ತಾಯಿಯನ್ನಾಗಲೀ, ಮಗುವನ್ನಾಗಲೀ ಏನೆಂದು ಸಮಾಧಾನ ಮಾಡುವುದು?

ಹಡಗಿನ ಮೇಲೆ ಚಾಚಿದ್ದ ಮೃತ್ಯುವಿನ ನೆರಳು ಕ್ಷಣ ಕ್ಷಣಕ್ಕೂ ದೀರ್ಘವಾಗುತ್ತಾ ಹೋಗುತ್ತಿತ್ತು. ಈಗ ಇಡೀ ಹಡಗು ಕಿರುಚಾಟ, ಅಳು, ಬೊಬ್ಬೆ ಕೋಲಾಹಲ, ಕೆಳಗೆ-ಮೇಲೆ ದಿಡ ದಿಡನೆ ಓಡುವ ಸದ್ದಿನಿಂದ ತುಂಬಿ ಹೋಗಿತ್ತು. ಒಬ್ಬರನ್ನೊಬ್ಬರು ತಳ್ಳಿಕೊಂಡು ಓಡುತ್ತಿದ್ದರು. ಎಲ್ಲಿಗೆ ಎಂಬುದು ಯಾರಿಗೂ ಗೊತ್ತಿಲ್ಲ ! ಇಡೀ ಹಡಗು ಜಲಸಮಾಧಿಯಾಗುವುದು ಗೊತ್ತಿದ್ದರೂ ಎಲ್ಲರೂ ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಿದ್ದರು. ಮೃತ್ಯು ಯಾವ ಕ್ಷಣದಲ್ಲೂ ಬಂದೆರಗಬಹುದಾಗಿತ್ತು.
ಇಡೀ ಹಡಗು ಮೃತ್ಯುಭಯದಿಂದ ತತ್ತರಿಸಿ, ಕೋಲಾಹಲ ಎಬ್ಬಿಸುತ್ತಿದ್ದರೂ ಒಬ್ಬ ವ್ಯಕ್ತಿ ಮಾತ್ರ ತನ್ನ ಪಾಡಿಗೆ ತಾನು ನಿರಾಳವಾಗಿ ಕುಳಿತಿದ್ದ! ಆತನ ಮುಖದಲ್ಲಿ ಸಾವಿನ ಬಗ್ಗೆ ಲವಲೇಶ ಅಂಜಿಕೆಯೂ ಇದ್ದಂತೆ ಕಾಣಿಸಲಿಲ್ಲ. ತಾನು ನಿತ್ಯ ಪೂಜಿಸುವ ದೇವರ ಪಟವೊಂದರ ಮುಂದೆ ಕುಳಿತು, ತನ್ನಷ್ಟಕ್ಕೆ ತಾನು ಜಪ ಮಾಡುತ್ತಾ ಆತ ಕುಳಿತಿದ್ದ.
ಆತನ ದೃಷ್ಟಿ ಆ ಚಿತ್ರಪಟವನ್ನೇ ದಿಟ್ಟಿಸುತ್ತಿತ್ತು. ಕಣ್ಣ ರೆಪ್ಪೆ ಅಪ್ಪಿ ತಪ್ಪಿಯೂ ಕದಲುತ್ತಿರಲಿಲ್ಲ. ಆತನೊಬ್ಬ ವೃದ್ಧ ಭಾರತೀಯ. ಹಿಂದಿನ ಬಂದರಿನಲ್ಲಿ ಹಡಗನ್ನೇರಿದ್ದ. ಕ್ಯಾ. ಬೀಟ್ಲ್ ಸೇರಿದಂತೆ ಎಲ್ಲರೂ ಅವನ ಪಕ್ಕದಲ್ಲೇ ಅನೇಕ ಬಾರಿ ಓಡಾಡಿದ್ದರು. ಆದರೆ ಯಾರೂ ಈ ಸಾಮಾನ್ಯ ಮನುಷ್ಯನನ್ನು ಗಮನಿಸಿರಲಿಲ್ಲ.
ಇತ್ತ ಕ್ಯಾಪ್ಟನ್ ಮತ್ತೊಮ್ಮೆ ಹಡಗಿನ ಮೇಲ್ಭಾಗಕ್ಕೆ ಹೋಗಿ ಬೈನಾಕ್ಯುಲರ್‌ನಿಂದ ವೀಕ್ಷಿಸಿದ. ತಿಮಿಂಗಿಲ ಹಡಗಿನ ಅತ್ಯಂತ ಸಮೀಪ ಬಂದಿತ್ತು. ಇತ್ತ ಚಂಡ ಮಾರುತದ ಆರ್ಭಟವೂ ಮಿತಿ ಮೀರಿತ್ತು. ‘ದೇವರೇ, ನಾವೀಗ ದೈತ್ಯ ತಿಮಿಂಗಿಲದ ತುಟಿಯಂಚಿನಲ್ಲಿದ್ದೇವೆ. ಇನ್ನೇನು ಮೃತ್ಯುಕೂಪದಂಥ ಅದರ ಬಾಯೊಳಕ್ಕೆ ಸೇರಲಿದ್ದೇವೆ. ಅಬ್ಬ! ಎಂಥ ಭಯಾನಕ ದೃಶ್ಯವಿದು?!’ ಆತನಿಗೆ ರಕ್ತ ಹೆಪ್ಪುಗಟ್ಟುವಂಥ ಅನುಭವ ಸಾವು ಕಣ್ಣೆದುರಿಗೇ ಇತ್ತು. ಅದು ಸರ್ಶಿಸುವುದೊಂದು ಬಾಕಿ ಇತ್ತು.
ಕ್ಯಾಪ್ಟನ್‌ಗೆ ಇದ್ದಕ್ಕಿದ್ದಂತೆ ತನ್ನ ಬಂಧು-ಬಾಂಧವರ ನೆನಪಾಯಿತು. ಹೆಚ್ಚಿನವರು ಐರೋಪ್ಯ ದೇಶಗಳಲ್ಲಿ ಸುಖ ಸಂಸಾರ ಸಾಗಿಸುತ್ತಿದ್ದರು. ಎಲ್ಲರನ್ನೂ ಬಿಟ್ಟು ಹೀಗೆ ಅನಾಥನಾಗಿ ಸಾಯುತ್ತಿದ್ದೇನಲ್ಲ ಎಂಬ ವಿಷಾದ ಭಾವ ಅವನನ್ನು ಆವರಿಸಿಕೊಂಡಿತು. ಆ ಕ್ಷಣದಲ್ಲಿ ಅವನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಹುಚ್ಚನಂತೆ ಕೆಳಗೋಡಿ ಬಂದ.
ಏನಿದು ಆಶ್ಚರ್ಯ ?! ಎಲ್ಲರೂ ಸಾವಿಗೆ ಹೆದರಿ ಗಾಬರಿಯಿಂದ ಓಡಾಡುತ್ತಿದ್ದರೆ, ಒಂದು ಮೂಲೆಯಲ್ಲಿ ಕಲ್ಲುಬಂಡೆಯಂತೆ ತನ್ನಷ್ಟಕ್ಕೆ ಮಣಮಣಿಸುತ್ತಾ ಕುಳಿತಿದ್ದಾನೆ ಒಬ್ಬ ಭಾರತೀಯ ವೃದ್ಧ ! ಬೀಟ್ಲ್ ಮೊದಲ ಬಾರಿ ಆತನನ್ನು ಗಮನಿಸಿದ. ಹತ್ತಿರ ಬಂದು ಆತನನ್ನೇ ಬಗ್ಗಿ ನೋಡಿದ. ಆತನ ಬಳಿ ಕೈಯಲ್ಲಿ ಬರೆದ ಎಂಥದೋ ವಿಚಿತ್ರ ಚಿತ್ತಾರ ವಿತ್ತು. ಮೂರು ವಿಗ್ರಹಗಳು ಅಕ್ಕ ಪಕ್ಕ ಕುಳಿತಿದ್ದ ಚಿತ್ರವದು.

ಒಂದು ಕಪ್ಪು, ಇನ್ನೊಂದು ಹಳದಿ, ಮತ್ತೊಂದು ಕೆಂಪು ಬಣ್ಣದ ವಿಗ್ರಹಗಳು ಅದರಲ್ಲಿದ್ದವು. ‘ಆ ಕಪ್ಪು ವಿಗ್ರಹದ ಕಣ್ಣುಗಳು ನಿಜಕ್ಕೂ ಭಯಂಕರವಾಗಿವೆ’ ಎಂದು ಕ್ಯಾಪ್ಟನ್ ಮನದಲ್ಲೇ ಅಂದುಕೊಂಡ. ‘ಈ ಕಣ್ಣುಗಳನ್ನು ನೋಡುತ್ತಿದ್ದರೆ ನನಗೆ ಆ ಕಪ್ಪು ಮೂತಿಯ ತಿಮಿಂಗಿಲದ ಕಣ್ಣುಗಳು ನೆನಪಾಗುತ್ತಿವೆ. ಅವು ನನ್ನನ್ನೇ ದುರುಗುಟ್ಟಿನೋಡುತ್ತಿರುವಂತಿವೆ. ನೋಡಲು ಭಯಂಕರವಾಗಿದ್ದರೂ ಆ ಕಣ್ಣುಗಳಲ್ಲಿ ವಿಚಿತ್ರ ಕಾಂತಿ, ಶಕ್ತಿ ತುಳುಕುತ್ತಿದೆ’ ಆತನ ಮನಸ್ಸು ಏನೇನೋ ಯೋಚಿಸತೊಡಗಿತು.
“ಇಲ್ಲಿ ತಣ್ಣಗೆ ಕುಳಿತು ಒಬ್ಬನೇ ಏನು ಮಾಡುತ್ತಿರುವೆ?’ ಚಿತ್ರ ಪಟದ ಮುಂದೆ ಕುಳಿತು ಜಪ ಮಾಡುತ್ತಿದ್ದ ವೃದ್ಧನನ್ನು ಕುರಿತು ಕ್ಯಾಪ್ಟನ್ ಪ್ರಶ್ನಿಸಿದ. ವೃದ್ಧ ನಿಧಾನವಾಗಿ ತಲೆ ಎತ್ತಿದ. ಆತನ ಕಣ್ಣುಗಳಲ್ಲಿ ನೀರು !
‘ನಮ್ಮೆಲ್ಲರನ್ನೂ ವಿನಾಶದಿಂದ ಪಾರು ಮಾಡುವಂತೆ ನಾನು ಶ್ರೀ ಜಗನ್ನಾಥನಲ್ಲಿ ಬೇಡಿಕೊಳ್ಳುತ್ತಿದ್ದೇನೆ’ ವೃದ್ಧನ ಮಾತಿನಲ್ಲಿ ನಿರಾಳತೆ ಇತ್ತು.
“ಜಗನ್ನಾಥ? ಹಾಗಂದರೆ ಯಾರು? ಆತ, ನಿನ್ನ ಭಗವಂತ ಎಲ್ಲಿದ್ದಾನೆ? ಆತ ನಮಗಾಗಿ ಏನು ಮಾಡಬಲ್ಲ? ಆತ ದೈತ್ಯ ತಿಮಿಂಗಿಲವನ್ನು ಸಾಯಿಸಬಲ್ಲನೇ? ಚಂಡಮಾರುತವನ್ನು ತಡೆಯಬಲ್ಲನೇ? ಹಡಗನ್ನು ಉಳಿಸಬಲ್ಲನೇ?’ ಬೀಟ್ಲ್ ಪ್ರಶ್ನೆಗಳ
ಸುರಿಮಳೆಗರೆದ.
ವೃದ್ಧನ ಮುಖದಲ್ಲಿ ಒಂದು ಮುಗುಳ್ನಗು ಮಿಂಚಿ ಮಾಯವಾಯಿತು. ಇಂಥ ಸಂಕಷ್ಟದ ಗಳಿಘೆಯಲ್ಲೂ ಆತ ಶಾಂತವಾಗಿದ್ದ. ಸ್ಥಿತಪ್ರಜ್ಞನಂತೆ ಕಾಣುತ್ತಿದ್ದ. ‘ನಮಗೀಗ ಆ ಜಗನ್ನಾಥನೇ ಆಸರೆ. ಆತನನ್ನು ಪ್ರಾರ್ಥಿಸಿದರೆ ಎಲ್ಲಾ ಸಂಕಟಗಳೂ ದೂರವಾಗುತ್ತವೆ. ನಾವು ಯಾವಾಗ ಕರೆದರೂ ಆತ ನೆರವಿಗೆ ಧಾವಿಸುತ್ತಾನೆ’ ಆ ವೃದ್ಧ ಅತ್ಯಂತ ವಿನಮ್ರನಾಗಿ ಭಕ್ತಿ ಪರವಶನಾಗಿ ನುಡಿದ.
ಕ್ಯಾಪ್ಟನ್‌ಗೆ ಇದನ್ನು ನಂಬಲಾಗಲಿಲ್ಲ. ‘ಹಾಗಾದರೆ ನಿನ್ನ ಜಗನ್ನಾಥ ಈಗ ಈ ಹಡಗನ್ನು ಸಾವಿನ ದವಡೆಯಿಂದ ರಕ್ಷಿಸುತ್ತಾನಾ?’ ಆತ ಮತ್ತೆ ಪ್ರಶ್ನಿಸಿದ.
“ಏನು ಮಾಡಬೇಕೋ ಅದನ್ನಾತ ಖಂಡಿತವಾಗಿಯೂ ಮಾಡುತ್ತಾನೆ’ ಭಕ್ತ ಉತ್ತರಿಸಿದ.
‘ಈಗ ನಮಗೆ ಒದಗಿರುವ ಸಂಕಟ ಪರಿಹರಿಸಲು ನಿನ್ನ ಜಗನ್ನಾಥನ ಬಳಿ ಯಾವ ಶಕ್ತಿ ಇದೆ. ಅದೂ ಅಲ್ಲದೇ ಇಡೀ ಪ್ರಕೃತಿಯನ್ನು ನಿಯಂತ್ರಿಸುವುದು ಅವನಿಂದ ಸಾಧ್ಯವಾ? ಕ್ಯಾಪ್ಟನ್ ಪ್ರಶ್ನೆಗಳಿಗೆ ಕೊನೆಯೇ ಇರಲಿಲ್ಲ. ಅಷ್ಟೇ ಅಲ್ಲ, ನಿನ್ನ ಜಗನ್ನಾಥ ಈ ಹಡಗನ್ನು ಉಳಿಸಿದ್ದೇ ಆದರೆ ಇದರಲ್ಲಿರುವ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ನಾನು ಅವನಿಗೆ ಅರ್ಪಿಸುತ್ತೇನೆ’ ಬೀಟ್ಲ್ ಸವಾಲೆಸೆದ.

ಆ ವೃದ್ಧ ಮತ್ತೆ ಪ್ರಾರ್ಥನೆಯಲ್ಲಿ ಮಗ್ನನಾದ. ಕ್ಯಾಪ್ಟನ್ ಬೀಟ್ಲ್ ಮತ್ತೆ ಹಡಗಿನ ಮೇಲ್ಭಾಗಕ್ಕೆ ಓಡಿದ. ಸಮುದ್ರದತ್ತ ಕಣ್ಣು ಹಾಯಿಸಿದ. ಏನಿದು ಪರಾಮಶ್ಚರ್ಯ?! ಹಡಗಿನತ್ತ ಬಾಯ್ದೆರೆದು ಮುನ್ನುಗ್ಗಿ ಬರುತ್ತಿದ್ದ ತಿಮಿಂಗಿಲ ದಿಕ್ಕು ಬದಲಿಸಿ ಬೇರೆ ಕಡೆ ಹೊರಟಿತ್ತು ! ನೋಡು ನೋಡುತ್ತಿದ್ದಂತೆ ಆಳ ಸಮುದ್ರದಲ್ಲೆಲ್ಲೋ ಮುಳುಗಿ ಮಾಯವಾಯಿತು ! ಇದು ಕನಸೋ ನನಸೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಆತ ಮುಂಗೈಯನ್ನೊಮ್ಮೆ ಚಿವುಟಿ ನೋಡಿಕೊಂಡ. ನಿಜ, ಇದು ಕನಸಲ್ಲ. ವಿಷಾದ ತುಂಬಿದ್ದ ಅವನ ಮುಖದಲ್ಲಿಗ ವಿಸ್ಮಯದ ಕಳೆ !
ಅಬ್ಬ ಅಂತೂ ಒಂದು ಸಂಕಟ ದೂರಾಯಿತು. ಇಷ್ಟಾದರೂ ಹಡಗು ತೊಯ್ದಾಡುವುದು ನಿಲ್ಲಲಿಲ್ಲ. ಏಕೆಂದರೆ ಚಂಡ ಮಾರುತದ ಹಾವಳಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಯಾವ ಗಳಿಘೆಯಲ್ಲಿ ಬೇಕಾದರೂ ಹಡಗು ಬುಡಮೇಲಾಗುವ ಸಾಧ್ಯತೆ ಇತ್ತು. ಈಗೇನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ, ಆ ವೃದ್ಧನ ಬಳಿ ಇದ್ದ ವಿಗ್ರಹಗಳ ಚಿತ್ರ ತನಗರಿವಿಲ್ಲದಂತೆ ಕ್ಯಾಪ್ಟನ್ ಕಣ್ಣ ಮುಂದೆ ಸುಳಿಯಿತು.
ಮನಸ್ಸು ಪ್ರಾರ್ಥನೆಯಲ್ಲಿ ಮುಳುಗಿತು. ‘ಓ, ಜಗನ್ನಾಥ, ನೀನು ತಿಮಿಂಗಿಲವನ್ನೇನೋ ಓಡಿಸಿದೆ. ಆದರೆ ಈ ಚಂಡ ಮಾರುತವನ್ನು ನಿಯಂತ್ರಿಸಬಲ್ಲೆಯಾ?’ ಬೀಟ್ಲ್ ದನಿಯಲ್ಲಿ ಕೋರಿಕೆ ಇತ್ತು. ಕಳಕಳಿ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶರಣಾಗತಿಯ ಭಾವವಿತ್ತು. ಹಾಗಿದ್ದ ಮೇಲೆ ಸರ್ವರಕ್ಷಕ ಜಗನ್ನಾಥ ಕರುಣಿಸದೇ ಇರುತ್ತಾನೆಯೇ?!
ಆಗಸದಲ್ಲೊಮ್ಮೆ ಫಳಾರನೆ ಮಿಂಚು ಕಾಣಿಸಿಕೊಂಡಿತು. ಹಿಂದೆಯೇ ಭಯಂಕರವಾದ ಸಿಡಿಲೂ ಕೇಳಿಬಂತು.ಇಡೀ ಪ್ರಪಂಚ ಸುಟ್ಟು ಬೂದಿಯಾಗುವುದೇನೋ ಎಂಬತ್ತಿತ್ತು ಅದರ ತೀವ್ರತೆ. ಅದೇನಿತ್ತೋ ಆ ಮಿಂಚಿನ ಮಹಾತ್ಮೆ. ಚಂಡಮಾರುತ ಕ್ಷಣ ಮಾರುತದಲ್ಲಿ ಕಣ್ಮರೆಯಾಗಿತ್ತು. ಹಡಗನ್ನು ಗಲಗಲ ಅಲ್ಲಾಡಿಸುತ್ತಾ, ಹುಚ್ಚೆದ್ದು ಕುಣಿಯುತ್ತಿದ್ದ ಸಮುದ್ರ ಸದ್ದಿಲ್ಲದೇ ಶಾಂತವಾಗಿತ್ತು. ಹಡಗು ತನ್ನ ಪಾಡಿಗೆ ತಾನು ನಿರಾಳವಾಗಿ ಮುಂದೆ ಸಾಗುತ್ತಿತ್ತು.
ಈಗ ಕ್ಯಾಪ್ಟನ್ ಬೀಟ್ಲ್ ಮುಖದಲ್ಲಿ ಮಿಂಚು ! ಆತ ಅಕ್ಷರಶಃ ಕುಣಿದು ಕುಪ್ಪಳಿಸಿದ. ‘ನಾವೆಲ್ಲಾ ಪಾರಾಗಿದ್ದೇವೆ. ಇನ್ನು ಅಪಾಯವಿಲ್ಲ’ ಎಂದು ಗಟ್ಟಿಯಾಗಿ ಕೂಗಿ ಹೇಳಿದ. ‘ನಾವೆಲ್ಲಾ ಬದುಕಿದೆವು, ಜಗನ್ನಾಥ ನಮ್ಮನ್ನು ಕಾಪಾಡಿದ’ ಎಂದು ಖುಷಿಯಿಂದ ಕೂಗುತ್ತಾ, ಹಡಗಿನೊಳಗೆಲ್ಲಾ ಓಡಾಡಿದ.
ತಕ್ಷಣ ಜಪ ಮಾಡುತ್ತಿದ್ದ ವೃದ್ಧನ ಬಳಿ ಬಂದ. ಆತ ಇನ್ನೂ ಜಗನ್ನಾಥನ ಧ್ಯಾನದಲ್ಲಿ ಮಗ್ನನಾಗಿದ್ದ. ಕ್ಯಾಪ್ಟನ್ ಆನಂದಾತಿರೇಕದಿಂದ ಆತನನ್ನು ಬಾಚಿ ಬಿಗಿದಪ್ಪಿದ. ಆ ವೃದ್ಧನ ಮುಖದಲ್ಲಿ ತೃಪ್ತಿಯ ನಗು ಕಾಣಿಸಿತು. “ಜಗದೊಡೆಯ ನಮ್ಮ ಪ್ರಾರ್ಥನೆಗೆ ಸ್ಪಂದಿಸಿದ’ ಎಂದು ಸಣ್ಣಗೆ ಉದ್ಗರಿಸಿದ.

ಕ್ಯಾಪ್ಟನ್ ಬೀಟ್ಲ್ ಚಿಕ್ಕ ಮಗುವಿನಂತೆ ಆಳಲಾರಂಭಿಸಿದ. ‘ನಿಮ್ಮ ದೇವರಿಗೆ ಯಾರೂ ಪರಕೀಯರಲ್ಲ. ಆತ ಎಲ್ಲರನ್ನೂ ರಕ್ಷಿಸಿದ. ಹಡಗಿನಲ್ಲಿದ್ದ ಮುತ್ತು, ರತ್ನ, ಹವಳ, ವಜ್ರ, ಚಿನ್ನಾಭರಣಗಳನ್ನೆಲ್ಲಾ ರಕ್ಷಿಸಿದ. ಅಷ್ಟೇ ಅಲ್ಲ ನಾವು ಚರ್ಚ್ಗೆಂದು ತಂದಿದ್ದ ದೊಡ್ಡ ಗಂಟೆಯನ್ನೂ ಉಳಿಸಿದ. ಹೀಗಾಗಿ ಈ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ನಾನು ಈ ಜಗನ್ನಾಥ ದೇವರಿಗೆ ಅರ್ಪಿಸುತ್ತಿದ್ದೇನೆ’ ಎಂದು ಕ್ಯಾಪ್ಟನ್ ಘೋಷಿಸಿದ. ಎಲ್ಲರೂ ಅದನ್ನು ಅನುಮೋದಿಸಿದರು.
ಕ್ಯಾಪ್ಟನ್ ಮತ್ತೆ ಮೇಲಕ್ಕೋಡಿದ. ಹತ್ತಿರದಲ್ಲಿ ಯಾವುದಾದರೂ ಬಂದರು ಇರಬಹುದೇ ಎಂದು ವೀಕ್ಷಿಸಿದ. ಬೃಹತ್ ದೇವಾಲಯವೊಂದರ ಗೋಪುರದ ತುದಿ ಆತನಿಗೆ ಕಾಣಿಸಿತು. ಅದು ಪುರಿಯ ಶ್ರೀ ಜಗನ್ನಾಥ ದೇವಾಲಯ ! ಹಡಗನ್ನು ಅದರಲ್ಲಿದ್ದ ಅಮೂಲ್ಯ ಸಂಪತ್ತನ್ನೂ, ನೂರಾರು ಪ್ರಯಾಣಿಕರನ್ನೂ ರಕ್ಷಿಸಿದ ಜಗದೋದ್ಧಾರಕ ನೆಲೆಸಿರುವ ಮಂದಿರ! ಕ್ಯಾಪ್ಟನ್ ಬೀಟ್ಲ್ ಗೌರವ ಸೂಚಕವಾಗಿ ಶಿರ ಭಾಗಿ ವಂದಿಸಿದ. ಹಡಗನ್ನು ಅತ್ತ ತಿರುಗಿಸಿದ.
ಇವತ್ತಿಗೂ ನೀವು ಪುರಿ ಜಗನ್ನಾಥ ದೇವಾಲಯದಲ್ಲಿ ಪುರಾತನ ಕಾಲದ, ಚರ್ಚ್‌ಗಳಲ್ಲಿ ಬಳಸುವಂಥ ಬೃಹತ್ ಗಂಟೆಯನ್ನು ಕಾಣಬಹುದು. “ಗರಡ್” ಎಂದು ಕರೆಯಲಾಗುವ ದೇವಾಲಯದ ಮೂಲ ಕಚೇರಿಯ ಆವರಣದಲ್ಲಿ ಈ ಗಂಟೆಯನ್ನು ಇಡಲಾಗಿದೆ.






Leave a Reply