ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು, ಸರವನ್ನು ಕುತ್ತಿಗೆಯಲ್ಲಿ ಧರಿಸಿಕೊಂಡ ಸತ್ರಾಜಿತ ರಾಜ ದ್ವಾರಕಾ ಪಟ್ಟಣಕ್ಕೆ ಪ್ರಯಾಣ ಮಾಡಿದ.

ಇವನ ಪ್ರಜ್ವಲಿಸುವ ಹೊಳಪಿನ ವ್ಯಕ್ತಿತ್ವವನ್ನು ನೋಡಿ ಮಾರುಹೋದ ದ್ವಾರಕೆಯ ಜನರು, ಸೂರ್ಯದೇವನೇ ಬರುತ್ತಿದ್ದಾನೆ ಎಂದು ಭಾವಿಸಿದರು. ಶ್ರೀಕೃಷ್ಣನಿದ್ದಲ್ಲಿಗೆ ಹೋಗಿ, ಸ್ವತಃ ಸೂರ್ಯದೇವನೇ ನಿನ್ನನ್ನು ಕಾಣಲು ಬರುತ್ತಿದ್ದಾನೆ ಎಂದು ಹೇಳಿದರು. ಆದರೆ, ಹೀಗೆ ಬರುತ್ತಿರುವವನು ಸೂರ್ಯನಲ್ಲ, ಅವನು ಸತ್ರಾಜಿತರಾಜ, ಅವನು ಹೀಗೆ ಪ್ರಜ್ವಲಿಸುತ್ತಿರುವುದಕ್ಕೆ ಕಾರಣ ಅವರು ಧರಿಸಿರುವ ಶ್ಯಮಂತಕ ಮಣಿ ಎಂದು ಶ್ರೀಕೃಷ್ಣ ಅವರಿಗೆಲ್ಲ ಹೇಳಿದ.
ದ್ವಾರಕಾ ನಗರದಲ್ಲಿ ಸತ್ರಾಜಿತ ಶ್ಯಮಂತಕ ಮಣಿಯನ್ನು ತನ್ನ ಮನೆಯಲ್ಲಿ ಒಂದು ವಿಶೇಷ ಸಿಂಹಾಸನದ ಮೇಲೆ ಇರಿಸಿದ. ಆ ಶ್ಯಮಂತಕ ಮಣಿ ಪ್ರತಿದಿವಸ ಕೇಳಿದಷ್ಟು ಬಂಗಾರವನ್ನು ಕೊಡುತ್ತಿತ್ತು. ಅದನ್ನು ಸರಿಯಾದ ರೀತಿಯಲ್ಲಿ ಪೂಜಿಸಿದರೆ, ಅದು ಇರುವ ಕಡೆ ಯಾವುದೇ ವಿಪತ್ತು ಜರುಗುವುದಿಲ್ಲ ಎಂಬ ಶಕ್ತಿ ಅದಕ್ಕಿತ್ತು.
ಒಂದು ಸಂದರ್ಭದಲ್ಲಿ ಶ್ರೀಕೃಷ್ಣ ಈ ಅಪರೂಪ ಮಣಿಯನ್ನು ಯದು ಮಹಾರಾಜ ಉಗ್ರಸೇನನಿಗೆ ಒಪ್ಪಿಸಿಬಿಡು ಎಂದೂ ಸತ್ರಾಜಿತನಿಗೆ ಹೇಳಿದ್ದ. ಆದರೆ, ಸತ್ರಾಜಿತ ದುರಾಸೆಯಿಂದ ಅದನ್ನು ನಿರಾಕರಿಸಿದ್ದ. ಅವನ ತಮ್ಮ ಪ್ರಸೇನ, ಶ್ಯಮಂತಕ ಮಣಿಯನ್ನು ತನ್ನ ಕತ್ತಿನಲ್ಲಿ ಧರಿಸಿ, ಬೇಟೆಯಾಡಲು ಕುದುರೆ ಮೇಲೆ ಕುಳಿತು ಕಾಡಿಗೆ ಹೊರಟ.
ದಾರಿಯಲ್ಲಿ ಒಂದು ಸಿಂಹ ಪ್ರಸೇನನನ್ನು ಕೊಂದು ಮಣಿಯನ್ನು ತನ್ನ ಬೆಟ್ಟದ ಗುಹೆಗೆ ತೆಗೆದುಕೊಂಡು ಹೋಯಿತು. ಈ ಸಿಂಹವನ್ನು ಅಲ್ಲಿ ವಾಸಿಸುತ್ತಿದ್ದ ಕರಡಿಗಳ ರಾಜ ಜಾಂಬವಂತ ಕೊಂದು ಹಾಕಿ, ಅದನ್ನು ತನ್ನ ಮಗನಿಗೆ ಆಟವಾಡಲು ಕೊಟ್ಟುಬಿಟ್ಟ.

ಸತ್ರಾಜಿತ ರಾಜನ ತಮ್ಮ ಹಿಂತಿರುಗದೇ ಇದ್ದಾಗ, ಕೃಷ್ಣನೇ ಶ್ಯಮಂತಕ ಮಣಿಯ ಆಸೆಯಿಂದ ಪ್ರಸೇನನನ್ನು ಕೊಂದು ಬಿಟ್ಟ ಎಂದು ಸತ್ರಾಜಿತ ಭಾವಿಸಿದ. ಪ್ರಜೆಗಳ ನಡುವೆ ಈ ಭಾವನೆ ಹರಡತೊಡಗಿದಾಗ ಅದು ಕೃಷ್ಣನ ಕಿವಿಗೂ ಬಿದ್ದಿತು. ಈ ಆರೋಪವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಕೃಷ್ಣ ತನ್ನೂರಿನ ಕೆಲವರೊಂದಿಗೆ ಪ್ರಸೇನನನ್ನು ಹುಡುಕಲು ಹೊರಟ.
ದಾರಿಯಲ್ಲಿ ಪ್ರಸೇನನ ದೇಹ, ಅವನ ಕುದುರೆಯ ಮತ್ತು ಜಾಂಬವತನ ಕೊಂದ ಸಿಂಹದ ದೇಹ ಸಿಕ್ಕಿದವು. ಅಲ್ಲಿನ ಗುಹೆಯ ಹೊರಗಡೆಯೇ ಎಲ್ಲರನ್ನೂ ನಿಲ್ಲಿಸಿ, ಏನಾಗಿದೆಯೆಂದು ತಿಳಿದುಕೊಂಡು ಬರಲು ಶ್ರೀಕೃಷ್ಣ ಗುಹೆಯೊಳಗೆ ಹೋದ.
ಜಾಂಬವತನ ಗುಹೆಯೊಳಗೆ ಪ್ರವೇಶಿಸಿದ ಶ್ರೀಕೃಷ್ಣನಿಗೆ, ಮಗುವೊಂದರ ಪಕ್ಕದಲ್ಲಿ ಶ್ಯಮಂತಕ ಮಣಿ ಬಿದ್ದಿರುವುದು ಕಾಣಿಸಿತು. ಆ ಮಣಿಯನ್ನು ತೆಗೆದುಕೊಳ್ಳಲು ಕೃಷ್ಣ ಕೈಹಾಕಿದಾಗ, ಮಗುವನ್ನು ನೋಡಿಕೊಳ್ಳುತ್ತಿದ್ದ ಹುಡುಗಿ ಕಿರುಚಿದಳು. ಅದನ್ನು ಕೇಳಿ ಜಾಂಬವಂತ ಹೊರಗೆ ಬಂದ.
ಕೃಷ್ಣನನ್ನು ಒಬ್ಬ ಸಾಮಾನ್ಯ ಮನುಷ್ಯ ಎಂದು ಭಾವಿಸಿ ಅವನೊಂದಿಗೆ ಯುದ್ಧ ಮಾಡಲು ಪ್ರಾರಂಭಿಸಿದ. ಅವರಿಬ್ಬರೂ ಇಪ್ಪತ್ತೊಂದು ದಿವಸ ಯುದ್ಧ ಮಾಡಿದರು. ಕೊನೆಗೆ ಕೃಷ್ಣನ ಏಟುಗಳನ್ನು ತಡೆಯಲಾರದೆ ಜಾಂಬವಂತ ಕುಸಿದುಹೋದ. ಆಗಲೇ ಅವನಿಗೆ ತನ್ನೊಡನೆ ಕಾದಾಡುತ್ತಿರುವುದು ಕೃಷ್ಣನೇ, ದೇವೋತ್ತಮ ಪರಮ ಪುರುಷ ಎನ್ನುವುದು ಅರ್ಥವಾಗಿ, ಅವನನ್ನು ಹೊಗಳಲು ಪ್ರಾರಂಭಿಸಿದ.

ತುಂಬಾ ಭಕ್ತಿಯಿಂದ ಜಾಂಬವಂತ ಶ್ಯಮಂತಕ ಮಣಿಯನ್ನು ಶ್ರೀಕೃಷ್ಣನಿಗೆ ತಂದೊಪ್ಪಿಸಿದ್ದೂ ಅಲ್ಲದೆ, ತನ್ನ ಮಗಳು ಜಾಂಬವತಿಯನ್ನು ಅವನಿಗೆ ಮದುವೆ ಮಾಡಿಕೊಟ್ಟ.
ಅಷ್ಟರಲ್ಲಿ, ಕೃಷ್ಣನಿಗಾಗಿ ಹೊರಗಡೆ ಇಪ್ಪತ್ತೊಂದು ದಿನಗಳಿಂದ ಕಾದಿದ್ದ ಅವನ ಕಡೆಯವರು, ಕೃಷ್ಣ ಹೊರಗೆ ಬರದಿರುವುದನ್ನು ನೋಡಿ, ದುಃಖದಿಂದ ದ್ವಾರಕೆಗೆ ಹಿಂತಿರುಗಿಬಿಟ್ಟರು. ಅವರೆಲ್ಲ ಕೃಷ್ಣನ ಕ್ಷೇಮಕ್ಕಾಗಿ ದುರ್ಗಾಮಾತೆಯನ್ನು ಪೂಜಿಸುತ್ತಿದ್ದಾಗ, ಶ್ರೀಕೃಷ್ಣ ತನ್ನ ಹೊಸ ಹೆಂಡತಿಯೊಂದಿಗೆ ದ್ವಾರಕೆಯನ್ನು ಪ್ರವೇಶಿಸಿದ.
ಸತ್ರಾಜಿತನನ್ನು ಆಸ್ಥಾನಕ್ಕೆ ಬರಮಾಡಿಕೊಂಡು ಆ ಶ್ಯಮಂತಕ ಮಣಿಯನ್ನು ಒಪ್ಪಿಸಿದ. ತುಂಬಾ ಅವಮಾನ ಮತ್ತು ವಿಷಾದಗಳಿಂದ ಸತ್ರಾಜಿತ ಆ ಮಣಿಯನ್ನು ಸ್ವೀಕರಿಸಿದ. ಅವನು ತನ್ನ ಮನೆಗೆ ಹಿಂತಿರುಗಿದ ಮೇಲೆ, ಶ್ರೀಕೃಷ್ಣನಿಗೆ ಅವಮಾನ ಮಾಡಿರುವುದರ ಪರಿಹಾರ ಎನ್ನುವ ಹಾಗೆ, ಆ ಶ್ಯಮಂತಕ ಮಣಿಯನ್ನು ಕೃಷ್ಣನಿಗೆ ಒಪ್ಪಿಸಲು ನಿರ್ಧರಿಸಿದ.
ಅಲ್ಲದೇ ತನ್ನ ಮಗಳನ್ನೂ ಅವನಿಗೆ ಕೊಡಲು ಬಯಸಿದ. ಹೀಗೆ, ಶ್ರೀಕೃಷ್ಣ, ದೈವಿಕ ಗುಣಭರಿತಳಾದ ಸತ್ರಾಜಿತ ಮಗಳು ಸತ್ಯಭಾಮೆಯ ಕೈಹಿಡಿದ. ಆದರೆ ಶ್ಯಮಂತಕ ಮಣಿಯನ್ನು ಸ್ವೀಕರಿಸದೆ, ಅದನ್ನು ಸತ್ರಾಜಿತನಿಗೇ ಹಿಂತಿರುಗಿಸಿದ.






Leave a Reply