ವೃಂದಾವನದ ಗೋಪಿಕೆಯರು ಅಥವಾ ಗೊಲ್ಲತಿಯರು ತಮ್ಮ ಹಸುಗಳಿಂದ ದೊರೆಯುತ್ತಿದ್ದ ಹಾಲನ್ನು ಅವುಗಳಿಂದ ತೆಗೆದ ಮೊಸರು, ಬೆಣ್ಣೆಗಳನ್ನು ಹೊತ್ತು, ಸಮೀಪದ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿಬರುತ್ತಿದ್ದರು. ಕೆಲವೊಮ್ಮೆ ಚಿಕ್ಕ ಗೊಲ್ಲತಿಯರೂ ಅವರೊಂದಿಗೆ ಹೊರಡುತ್ತಿದ್ದರು. ಕೃಷ್ಣ ಬಲರಾಮರು ಹಸು ಮೇಯಿಸುವಾಗೆಲ್ಲ ಅವರ ಈ ಓಡಾಟ ಕಣ್ಣಿಗೆ ಬೀಳುತ್ತಿತ್ತು. ಹಾಗೆ ಚಿಕ್ಕ ಗೋಪಿಕೆಯರ ಬಳಿ ಹೋಗಿ ಈ ಇಬ್ಬರು ಬೆಣ್ಣೆ, ಮೊಸರುಗಳಿಗಾಗಿ ಕೇಳುತ್ತಿದ್ದರು. ಆದರೆ ಅವರು ಕೊಡಲು ನಿರಾಕರಿಸುತ್ತಿದ್ದರು. ಏಕೆಂದರೆ ಅವನ್ನು ಆ ಹುಡುಗಿಯರು ಮಾರಾಟಕ್ಕೆಂದು ಕೊಂಡೊಯ್ಯುತ್ತಿದ್ದರಲ್ಲ?

ಒಂದು ದಿನ ಈ ಹುಡುಗಿಯರು ತಮ್ಮ ತಾಯಂದಿರಿಗೆ ಸಹಾಯ ಮಾಡಲೆಂದು ತಲೆ ಮೇಲಿನ ಕುಡಿಕೆಗಳಲ್ಲಿ ಬೆಣ್ಣೆ, ಮೊಸರುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು. ಆಗ ಅನಿರೀಕ್ಷಿತವಾಗಿ ಸುಂಕ ವಸೂಲಿಗಾರರ ತಂಡವೊಂದು ಅವರ ಮುಂದೆ ಬಂದು ನಿಂತಿತು. ಪಕ್ಕದ ಹಳ್ಳಿಯಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ಪಡೆದು, ಮಾರಾಟದ ಸುಂಕ ಕಟ್ಟಬೇಕು ಎಂದವರು ಹುಡುಗಿಯರಿಗೆ ತಾಕೀತು ಮಾಡಿದರು.
ಹುಡುಗಿಯರು ಒಂದೇ ಏಟಿಗೆ ಅವರ ಕರಾರನ್ನು ತಿರಸ್ಕರಿಸಿಬಿಟ್ಟರು. ಏಕೆಂದರೆ ಅವರಿಗೆ ಗೊತ್ತಿತ್ತು, ಆ ಸುಂಕ ವಸೂಲಿಗಾರರು ಮತ್ಯಾರೂ ಅಲ್ಲ, ಶ್ರೀಕೃಷ್ಣ – ಬಲರಾಮರು ಮತ್ತವರ ತುಂಟ ಗೆಳೆಯರು ಎಂದು! ಆದರೆ ಆ ವಸೂಲಿಗಾರರೂ ಪಟ್ಟು ಬಿಡದೆ ನಿಂತರು. ಅವರ ಮುಖಂಡ ಹೇಳಿದ. “ಸರಿ, ನಿಮ್ಮ ಬಳಿ ಹಣವಿಲ್ಲದಿದ್ದರೆ ಬೇಡ. ಅದರ ಬದಲಾಗಿ ಬೆಣ್ಣೆಯ ಕೆಲವಾದರೂ ಕುಡಿಕೆಗಳನ್ನ ಕೊಡಿ. ನಿಮ್ಮನ್ನ ಹೋಗಲು ಬಿಡ್ತೀವಿ. ಅಲ್ಲವಾದರೆ ಇಲ್ಲ!” ಇಷ್ಟಾದರೂ ಹುಡುಗಿಯರು ಜಗ್ಗಲಿಲ್ಲ. ತಾವು ಕೊಡುವುದಿಲ್ಲವೆಂದು ತಮ್ಮ ನಿರ್ಧಾರಕ್ಕೆ ಅಂಟಿಕೊಂಡು ನಿಂತರು.

ಅತ್ತ ಆ ಹುಡುಗಿಯರ ತಾಯಂದಿರು, ತಮ್ಮ ಹಿಂದೆ ಬರುತ್ತಿದ್ದ ಮಕ್ಕಳೆಲ್ಲಿ ಎಂದು ಗಾಬರಿ ಪಟ್ಟರು. ಇಲ್ಲಿ ಸುಂಕ ವಸೂಲಿಗಾರರ ತಂಡ ಅವರನ್ನು ನಿಲ್ಲಿಸಿಟ್ಟುಕೊಂಡಿತ್ತಲ್ಲ, ಹೀಗಾಗಿ ಅವರು ತಾಯಂದಿರನ್ನು ಹಿಂಬಾಲಿಸಲು ಆಗಿರಲಿಲ್ಲ. ಆ ಹಿರಿಯ ಗೋಪಿಕೆಯರು ಹಿಂದಿರುಗಿ ತಮ್ಮ ಮಕ್ಕಳನ್ನು ಹುಡುಕುತ್ತ ಬಂದರು. ಅಲ್ಲಿ ”ಸುಂಕ ವಸೂಲಿಯವರಿಂದ” ತಡೆಹಿಡಿಯಲ್ಪಟ್ಟಿದ್ದ ತಮ್ಮ ಮಕ್ಕಳನ್ನು ಕಂಡರು. ಆ ತಾಯಂದಿರನ್ನು ನೋಡುತ್ತಲೇ ಕೃಷ್ಣನ ಜೊತೆಗಿದ್ದ ಗೆಳೆಯರೆಲ್ಲ ಓಟಕಿತ್ತರು. ಮುಖಂಡನ ವೇಷ ಧರಿಸಿದ್ದ ಕೃಷ್ಣ ಮಾತ್ರ ಸಿಕ್ಕಿಬಿದ್ದ.
ತಮ್ಮ ಮಕ್ಕಳಿಗೆ ಕೀಟಲೆ ಮಾಡಿ ತಡವಾಗಿಸಿದ್ದಕ್ಕೆ ಅ ಗೋಪಿಕೆಯರು ಕೃಷ್ಣನಿಗೆ ಶಿಕ್ಷೆ ಕೊಡಲು ನಿರ್ಧರಿಸಿದರು. ಆತನ ಸುಂಕ ವಸೂಲಿಗಾರನ ಉಡುಪುಗಳನ್ನು ತೆಗೆದು ಹುಡುಗಿಯಂತೆ ಅಲಂಕರಿಸಿದರು. ತಮ್ಮ ಹಾಡಿಗೆ ಕುಣಿಯುವಂತೆ ತಾಕೀತು ಮಾಡಿದರು. ಅವನ ನರ್ತನವನ್ನು ನೋಡಿ ಖುಷಿ ಪಟ್ಟರು. ಆದರೆ ಕೃಷ್ಣನಿಗೆ ಮಾತ್ರ ಅಳುವೇ ಬಂತು. ಇನ್ನು ಯಾವತ್ತೂ ಇಂಥ ಕೆಲಸ ಮಾಡುವುದಿಲ್ಲ ಎಂದವನು ನಿರ್ಧರಿಸಿಕೊಂಡ.
ಆದರೆ ಮುಂದಿನ ವಾರ ಮತ್ತೆ ಆ ಚಿಕ್ಕ ಹುಡುಗಿಯರು ಅಮ್ಮಂದಿರ ಹಿಂದೆ ಕುಡಿಕೆ ಹೊತ್ತು ಹೋಗುವಾಗ ಮತ್ತೊಮ್ಮೆ ಸುಂಕ ವಸೂಲಿಗಾರರ ತಂಡ ಎದುರಾಯ್ತು, ಹಳೆಯ ಮುಖಂಡ, ಹೊಸ ಕಾರ್ಯಕರ್ತರ ಪಡೆಯ ಜೊತೆಗೆ!






Leave a Reply