ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಮನೋವಿಜ್ಞಾನಿ ಡಾ. ಕ್ರಿಶ್ಚಿಯನ್ ಹೌಸರ್ ನಡುವೆ ಸೆಪ್ಟೆಂಬರ್ 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ.
ಶ್ರೀಲ ಪ್ರಭುಪಾದ : ಈ ಲೌಕಿಕ ದೇಹಗಳು ವಿಕಸನಗೊಳ್ಳುತ್ತವೆ ಎಂದು ಡಾರ್ವಿನ್ ಸಿದ್ಧಾಂತ ರೂಪಿಸಿದ. ಮೀನಿನ ದೇಹವು ರೆಪ್ಟೀಲಿ ದೇಹವಾಗುತ್ತದೆ, ಮಂಗನಿಂದ ಮಾನವ ಹೀಗೆ. ಇದು ಮೂರ್ಖತನ.

ಡಾ. ಹೌಸರ್ : ಆದರೆ ಹೇಗೋ ಇದು ವಿಶ್ವಾಸೋತ್ಪಾದಕ.
ಶ್ರೀಲ ಪ್ರಭುಪಾದ : ಇಲ್ಲ, ಖಂಡಿತ ಅಲ್ಲ. ನಾವು ಈಗಿರುವ ಈ ಮನೆಯನ್ನೇ ತೆಗೆದುಕೊಳ್ಳಿ. ಇನ್ನು ಒಂದು ಗಂಟೆ ಕಾಲದಲ್ಲಿ ನೀವು ನಗರದ ಇನ್ನೊಂದು ಕಡೆ, ಬೇರೆ ಮನೆಗೆ ಹೋಗಬಹುದು. ಅಂದರೆ ಈ ಮನೆಯು ಆ ಮನೆಯಾಗಿ ವಿಕಸನಗೊಂಡಿದೆ ಎಂದು ಅರ್ಥವೇ?
ನೀವು, ಆಧ್ಯಾತ್ಮಿಕ ವ್ಯಕ್ತಿ, ಮನೆಯ ವಾಸಿ ಒಂದು ಲೌಕಿಕ ಮನೆಯಿಂದ ಇನ್ನೊಂದು ಲೌಕಿಕ ಮನೆಗೆ ಹೋಗಲು ಸುಮ್ಮನೆ ಆಯ್ಕೆ ಮಾಡಿಕೊಂಡಿರಿ. ಈ ಲೌಕಿಕ ಮನೆಯು ಆ ಮನೆಯಾಗಿ ವಿಕಸನ ಹೊಂದಿದೆ ಎಂದು ಅಲ್ಲ.
ಡಾ. ಹೌಸರ್ : ಹೌದು, ನೀವು ಹೇಳುವುದು ತಿಳಿಯುತ್ತಿದೆ.
ಶ್ರೀಲ ಪ್ರಭುಪಾದ : ಹೌದು, ಡಾರ್ವಿನ್ ಮೂರ್ಖತನ ಅಲ್ಲೇ ಅಡಗಿದೆ. ಒಂದು ಮನೆಯು ಮತ್ತೊಂದು ಮನೆಯಾಗಿ ಬದಲಾಗುತ್ತಿದೆ, ಒಂದು ಮನೆಯು ಬೇರೆ ಭಿನ್ನವಾದ ಮನೆಯಾಗುತ್ತಿದೆ ಎಂದು ಡಾರ್ವಿನ್ ಹೇಳಿಕೊಂಡ. ಅದು ವಾಸ್ತವಾಂಶವಲ್ಲ. ಈ ಮೂರ್ಖನು ಇಡೀ ಲೋಕವನ್ನು ಆಧ್ಯಾತ್ಮಿಕ ಗೊಂದಲದಲ್ಲಿ ಹಾಕಿಬಿಟ್ಟಿದ್ದಾನೆ.
ಡಾರ್ವಿನ್ ಎಷ್ಟು ಮೂರ್ಖನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ಕೋಣೆಯು ಮತ್ತೊಂದು ಕೋಣೆಯಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ. ಈ ಕೋಣೆಯ ವಾಸಿಯಾದ ನಾನು ಮತ್ತೊಂದು ಕೋಣೆಗೆ ಹೋಗಬಹುದು. ಆದರೆ ಈಗಾಗಲೇ ಕೋಣೆಗಳು ಇವೆ. ವಾಸ್ತವವಾಗಿ ಇದು ವಿಕಸನದ ಅರ್ಥ – ಜೀವಾತ್ಮವು ಒಂದು ಸಿದ್ಧಪಡಿಸಿದ ಲೌಕಿಕ ದೇಹದ ವಾಸದಿಂದ ಮತ್ತೊಂದು ದೇಹಕ್ಕೆ ಹೋಗುತ್ತದೆ, ಒಂದು ಜನ್ಮದಿಂದ ಮತ್ತೊಂದಕ್ಕೆ, ವಿವಿಧ ರೀತಿಯ ದೇಹಗಳು ಈಗಾಗಲೇ ಇವೆ – ಸಿದ್ಧ ಪಡಿಸಿದ್ದು.
ಡಾ. ಹೌಸರ್ : ಅಂದರೆ ಮುಂದಿನ ಜನ್ಮದಲ್ಲಿ ದೊಡ್ಡ ಮತ್ತು ಉತ್ತಮ ಮನೆಗೆ ಹೋಗುತ್ತಾರೆ.
ಶ್ರೀಲ ಪ್ರಭುಪಾದ : ದೊಡ್ಡದು ಮತ್ತು ಉತ್ತಮ ಅಥವಾ ಚಿಕ್ಕದು ಮತ್ತು ಕೆಟ್ಟದ್ದು – ಈ ಜನ್ಮದಲ್ಲಿ ಅವನ ಕರ್ಮದಂತೆ. ದೊಡ್ಡದು ಮತ್ತು ಉತ್ತಮ ಎಂದೇ ಆಗಬೇಕಾದ ಅಗತ್ಯವಿಲ್ಲ. ಇದೂ ಅದೇ ಮೂರ್ಖತನ.
ಡಾ. ಹೌಸರ್ : ಸರಿ, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ, ನನ್ನ ಪ್ರಯತ್ನ ಮತ್ತು ಹೆಚ್ಚಿದ ಬುದ್ಧಿಯಿಂದ ನಾನು ದೊಡ್ಡ ಮತ್ತು ಉತ್ತಮ ದೇಹಕ್ಕೆ ಹೋಗಬಹುದು.
ಶ್ರೀಲ ಪ್ರಭುಪಾದ : ಓ? ಉದಾಹರಣೆಗೆ, ಒಳ್ಳೆಯ ಉಡುಪು ಬೇಕೆಂದು ಅಪೇಕ್ಷಿಸುವ ಬುದ್ಧಿ ನಿಮಗಿರಬಹುದು. ಆದರೆ ನಿಮ್ಮ ಬಳಿ ಹಣವಿಲ್ಲದಿದ್ದರೆ, ಅಂದರೆ ಉಡುಪು ಸಿದ್ಧಪಡಿಸುವವನ ಬಳಿ ನಿಮ್ಮ ಖಾತೆಯ ಲೆಕ್ಕ ಇಲ್ಲದಿದ್ದರೆ, ನೀವು ಒಳ್ಳೆಯ ಉಡುಪನ್ನು ಹೇಗೆ ಪಡೆದುಕೊಳ್ಳುವಿರಿ? ನೀವು ಯಾವುದಾದರು ಕೆಳ ದರ್ಜೆಯದ್ದನ್ನು ಸ್ವೀಕರಿಸಬೇಕಾಗುತ್ತದೆ.
ಆದುದರಿಂದ ನಾವು ನಿತ್ಯ ಈ ವಿವಿಧ ವರ್ಗಗಳಲ್ಲಿ ನೋಡುವುದೇನೆಂದರೆ, ಈ ಉಡುಪುಗಳು, ಅವರವರ ಕರ್ಮ, ಹಿಂದಿನ ಚಟುವಟಿಕೆಯಂತೆ ಒಂದು ರೀತಿಯ ದೇಹದಿಂದ ಮತ್ತೊಂದಕ್ಕೆ ಆತ್ಮವು ವಿಕಸನಗೊಳ್ಳುವುದು. ಉಡುಪು ತಯಾರಕನಲ್ಲಿ ಲೆಕ್ಕದ ಜಮೆ ಇದ್ದರೆ, ಇಲ್ಲಾ ಇರದಿದ್ದರೆ, ವ್ಯಕ್ತಿಗೆ ಉತ್ತಮ ದೇಹ ದೊರೆಯಬಹುದು ಅಥವಾ ದೊರೆಯದಿರಬಹುದು.
ಕರ್ಮಣಾ ದೈವ ನೇತ್ರೇಣ : ಉತ್ತಮ ಜೀವನಮಟ್ಟಕ್ಕೆ ಹೋಗಬೇಕೆಂಬ ಇಚ್ಛೆ ನಿಮಗಿದ್ದರೆ ನೀವು ಧರ್ಮನಿಷ್ಠ, ದೈವಭಕ್ತಿ ಕಾರ್ಯಗಳ ಮೂಲಕ `ಪಾವತಿ’ ಮಾಡಬೇಕು. ಆದರೆ ದೇವರು ಈಗಾಗಲೇ ಅಂತಹ ಉತ್ತಮ ಜೀವನ ಸ್ಥಿತಿಯನ್ನು, ಮಟ್ಟವನ್ನು ಸೃಷ್ಟಿಸಿದ್ದಾನೆ – ಅದು ಈಗಾಗಲೇ ಇದೆ. ಈ ಕೆಳ ಮಟ್ಟದ ಸ್ಥಿತಿಯು ಅದು ಹೇಗೋ ವಿಸ್ಮಯಕಾರಿಯಾಗಿ ಉತ್ತಮ ಸ್ಥಿತಿಯಾಗಿ ಬದಲಾಗುತ್ತದೆ ಎಂದಲ್ಲ. ಅದು ಕೇವಲ ಡಾರ್ವಿನ್‌ನ ಮೂರ್ಖತನ.
ಚಂದ್ರನಲ್ಲಿನ ಜೀವನ ಸ್ಥಿತಿಯನ್ನೇ ತೆಗೆದುಕೊಳ್ಳಿ. ಅದು ಭೂಮಿಯ ಮೇಲಿನ ಜೀವನ ಸ್ಥಿತಿಗಿಂತ ಭಿನ್ನ. ಆದರೆ ಚಂದ್ರನ ಮೇಲೆ ಒಂದು ಜೀವನ ಸ್ಥಿತಿ, ರೀತಿ ಈಗಾಗಲೇ ಇದೆ. ನೀವು ನಿಮ್ಮ ಚಟುವಟಿಕೆಯ ಮೂಲಕ ಈ ಗ್ರಹದಿಂದ ಆ ಗ್ರಹಕ್ಕೆ ವರ್ಗಾವಣೆಗೊಳ್ಳಬೇಕು. ಆದುದರಿಂದ ಡಾರ್ವಿನನ ವಿಕಸನ ಸಿದ್ಧಾಂತವು ಈ ಅಂಶವನ್ನು ಗ್ರಹಿಸಲಿಲ್ಲ.
ಲೌಕಿಕ ದೇಹವು ವಿಕಸನಗೊಳ್ಳುತ್ತಿದೆ ಎಂದು ಡಾರ್ವಿನ್ ಹೇಳುತ್ತಾನೆ. ಎಂತಹ ಪಕ್ಕಾ ಮೂರ್ಖತನ. ಲೌಕಿಕ ದೇಹವು ವಿಕಸನಗೊಳ್ಳುತ್ತಿದ್ದರೆ, ಪ್ರಸ್ತುತದಲ್ಲಿ ಮಂಗಗಳು ಮಾನವರನ್ನೇಕೆ ಸೃಷ್ಟಿಸುತ್ತಿಲ್ಲ? ಈ ಅಪ್ರಜ್ಞಾವಂತ `ವಿಕಸನ’ಕ್ಕೆ ಎಲ್ಲಿದೆ ಪುರಾವೆ? ನೀವು ಮೃಗಾಲಯಗಳಲ್ಲಿ ಮಂಗಗಳನ್ನು ನೋಡಿರುತ್ತೀರಿ. ಮೃಗಾಲಯದಲ್ಲಿ ಮಂಗವು ಮಾನವನನ್ನು ಸೃಷ್ಟಿಸಿದೆ ಎಂಬುವುದಕ್ಕೆ ಪುರಾವೆ ಎಲ್ಲಿದೆ? ಈ ಡಾರ್ವಿನ್ ವ್ಯವಹಾರ ಸರಿ ಎಂದು ನಿಮಗೆ ಅನ್ನಿಸುತ್ತದೆಯೆ?
ಡಾ. ಹೌಸರ್ : ಹೌದು, ಜೀವವು ಅನೇಕ ರೂಪದಲ್ಲಿ, ರೀತಿಯಲ್ಲಿ ವಿಕಸನಗೊಂಡಿರಬಹುದು – ಇದು ನನಗೆ ನಿಜವಾಗಿ ಖಾತ್ರಿಯಾಗಿದೆ. ಅಲ್ಲದೆ ಸುಮಾರು ನೂರು ಸಾವಿರ ವರ್ಷಗಳ ಹಿಂದೆ ಜೀವಿಯ ಅಸ್ತಿತ್ವ ಇಲ್ಲದಿದ್ದಿರಬಹುದು.
ಶ್ರೀಲ ಪ್ರಭುಪಾದ : ಇಲ್ಲ. ಭಗವಂತನ ಸ್ವಾಭಾವಿಕ ವ್ಯವಸ್ಥೆಯಿಂದಾಗಿ ಈ ವಿವಿಧ ಲೌಕಿಕ ರೂಪಗಳು ಯಾವಾಗಲೂ ಅಸ್ತಿತ್ವದಲ್ಲಿ ಇವೆ. ಮಾನವ ರೂಪವು ವಿಕಸನಗೊಳ್ಳಬೇಕಾಗಿಲ್ಲ. ಅದು ಯಾವಾಗಲೂ ಅಸ್ತಿತ್ವದಲ್ಲಿ ಇದೆ. ಶಾಶ್ವತವಾಗಿ. ಇದು ದಿಟವಾಗಿಯೂ ಭಗವಂತನ ಸ್ವಾಭಾವಿಕ ವ್ಯವಸ್ಥೆ. ಎಂತಹ ಅದ್ಭುತ!
ಶಿಷ್ಯ : ಇತ್ತೀಚೆಗೆ, ಆಫ್ರಿಕಾದಲ್ಲಿ ಕೆಲವು ವಿಜ್ಞಾನಿಗಳು ಅಸ್ಥಿಪಂಜರದ ಉಳಿಕೆಗಳನ್ನು ಪತ್ತೆ ಮಾಡಿದ್ದಾರೆ. ಇದು `ಭಾಗಶಃ ಮಂಗ, ಭಾಗಶಃ ಮಾನವ’ ಜೀವಿಗಿಂತ ನೂರಾರು ಸಾವಿರಾರು ವರ್ಷಗಳ ಹಿಂದಿನದ್ದು. ಈ ಅಸ್ಥಿಪಂಜರ ಉಳಿಕೆಗಳು ಸಂಪೂರ್ಣವಾಗಿ ಮಾನವನದು. ಅವು ಯಾವುದೇ ಆಧುನಿಕ ಮಾನವನ ಉಳಿಕೆಯಂತೆಯೇ ಇವೆ. ಆದುದರಿಂದ ಈ ಮಾಹಿತಿಯು ಎಂದಿಗೂ, ವಿಕಸನ ಕುರಿತ ಪಠ್ಯಪುಸ್ತಕದೊಳಗೆ ಪ್ರವೇಶಿಸದಿದ್ದರೂ ಡಾರ್ವಿನ್ ಸಿದ್ಧಾಂತಗಳೆಲ್ಲ ಬಿದ್ದುಹೋದಂತೆಯೇ.
ಶ್ರೀಲ ಪ್ರಭುಪಾದ : ಈ ವೇಳೆಗೆ ಡಾರ್ವಿನ್‌ನ ಮೂರ್ಖತನವು ಎಲ್ಲರ ಚಿಂತನೆಯನ್ನು ಕಲುಷಿತಗೊಳಿಸಿದೆ. ನಾವು ಈ ಸರಳ ಉದಾಹರಣೆಗಳನ್ನೇ ಪರಿಗಣಿಸೋಣ. ನಾನು ಈ ಮನೆಯಿಂದ ಮತ್ತೊಂದು ಮನೆಗೆ ಹೋದರೆ, ಈ ಮನೆಯು ಮತ್ತೊಂದು ಮನೆಯಾಗಿ ವಿಕಸನಗೊಳ್ಳುವುದಿಲ್ಲ. ನಾನು ಸುಮ್ಮನೆ ಈ ಮೊದಲೇ ಇರುವ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುತ್ತೇನೆ, ಅಷ್ಟೆ.
ಮನೆಯು ಮೊದಲೇ ಇರುತ್ತದೆ, ನಾನು, ಮನೆಯಲ್ಲಿ ವಾಸಿಸುವ ಜೀವಾತ್ಮ, ಮೊದಲೇ ಇರುತ್ತೇನೆ. ಮನೆಯು ಬದಲಾಗುವುದಿಲ್ಲ. ನಾನೂ ಬದಲಾಗುವುದಿಲ್ಲ. ಸ್ಥಳ ಮಾತ್ರ ಬದಲಾಗುತ್ತದೆ.
ಹೀಗಾಗಿ ಮನೆಯಲ್ಲಿ ವಾಸಿಸುವ `ನಾನು’, ಆತ್ಮವನ್ನು, ಮನೆಯಾದ ಈ ದೇಹದೊಂದಿಗೆ ಡಾರ್ವಿನ್ ವಿಲೀನ ಮಾಡಿದ. ಮನೆಯು ಹೇಗೋ ಬದಲಾಗುತ್ತದೆ ಎಂದು ಅವನು ಹೇಳಿದ. ಇದು ಅವನ ಮೂರ್ಖತನ.
ಡಾ. ಹೌಸರ್ : ಹೌದು, ಅವನು ಮನೆಗಳ ಬಗೆಗಷ್ಟೇ ಮಾತನಾಡುತ್ತಿದ್ದಾನೆ, ಮನೆಯಲ್ಲಿ ವಾಸಿಸುವವರ ಬಗೆಗಲ್ಲ ಮತ್ತು ಮನೆಗಳು ಬದಲಾಗುತ್ತವೆ ಎಂದು ಅವನು ಹೇಳುತ್ತಿದ್ದಾನೆ ಎಂದು ನನಗನಿಸುತ್ತದೆ.
ಶ್ರೀಲ ಪ್ರಭುಪಾದ : ಹೌದು, ಅದೇ ಮೂರ್ಖತನ. ಡಾರ್ವಿನ್ ಮತ್ತು ಅವನ ಆಧುನಿಕ ಶಿಷ್ಯರಿಂದಾಗಿ ಜನರು ಮಾನವ ಜೀವಿಯ ನಿಜವಾದ ಗುರಿಯನ್ನೇ ಮರೆತಿದ್ದಾರೆ – ಆಧ್ಯಾತ್ಮಿಕ ಆತ್ಮವನ್ನು ಅನೇಕ 10ನೆಯ ದರ್ಜೆಯ ಲೌಕಿಕ ಮನೆಗಳಿಂದ ಮುಕ್ತಗೊಳಿಸಬೇಕು, ಮತ್ತು ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗಿ ಭಗವಂತನೊಂದಿಗೆ ಸದಾ ಸಂತೋಷದಿಂದ ಇರಬೇಕೆಂಬ ಗುರಿ.
(ಮುಂದುವರಿಯುವುದು)






Leave a Reply