ಅಂದು ಮುಂಜಾನೆ ಸೊಗಸಾಗಿ ಆರಂಭಗೊಂಡಿತ್ತು. ಬಾಲಭಾಸ್ಕರನ ಹಿತವಾದ ಕಿರಣಗಳ ಸ್ಪರ್ಶದಿಂದ ಎಚ್ಚರಗೊಂಡಿದ್ದ ಪ್ರಕೃತಿದೇವಿಯು, ಸಕಲ ಜೀವಿಗಳೂ ತಂತಮ್ಮ ಗುಣಕರ್ಮಗಳಿಗನುಸಾರವಾಗಿ ನಿತ್ಯ ಕಾರ್ಯಗಳಲ್ಲಿ ತೊಡಗುವಂತೆ ಮಾಡಿದ್ದಳು!
ಆದರೆ, ತಂದೆ ಮಕ್ಕಳಿಬ್ಬರ ನಡುವೆ, ಎಂದಿನಂತೆ ಅಂದೂ ವಾದ ನಡೆದಿತ್ತು. ದುಗುಡ ತುಂಬಿದ ಮುಖದ ತಂದೆ, ಮಗನನ್ನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದನು; ಅವನಿಗೆ ತನ್ನ ಅಭಿಪ್ರಾಯವನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತಲೇ ಇದ್ದನು. ಮಗನಾದರೋ, ತನ್ನದೇ ವಾದ ಸರಣಿಯನ್ನು ಹೇಳುತ್ತಿದ್ದನು.
“ವತ್ಸ!” ತಂದೆಯು ಹೇಳಿದನು, “ಇದು ಸನಾತನ ಧರ್ಮವಾಗಿದೆ; ನಿನ್ನ ಸ್ವಧರ್ಮವಾಗಿದೆ; ವೇದ ವಿದಿತವಾಗಿದೆ. ಕ್ಷತ್ರಿಯನಾದವನು ರಾಜ್ಯವಾಳುವುದು, ಗೃಹಸ್ಥ ಧರ್ಮವನ್ನು ಪಾಲಿಸುವುದು ಶ್ರೇಷ್ಠ ಕಾರ್ಯವಾಗಿದೆ. ಆದ್ದರಿಂದ ದಯವಿಟ್ಟು ರಾಜ್ಯಭಾರ ವಹಿಸಿಕೋ!”
“ಅಪ್ಪಾ….” ಮಗನು ಶಾಂತನಾಗಿಯೇ ಹೇಳಿದನು, “ನೀನು ಹೇಳುತ್ತಿರುವುದು ಪ್ರವೃತ್ತಿಮಾರ್ಗ. ಅದು ವಿಷಯಸುಖವನ್ನು ಬಯಸುವವರಿಗೆ ಹೇಳಲ್ಪಟ್ಟಿದೆ. ಆದರೆ ವೇದಗಳಲ್ಲಿ ನಿವೃತ್ತಿ ಮಾರ್ಗವೂ ಇದೆಯಷ್ಟೆ? ನನಗೆ ವಿಷಯ ಸುಖಗಳಲ್ಲಿ ಆಸಕ್ತಿಯಿಲ್ಲ. ಇಂದ್ರಿಯಗಳಿಗೆ ಸಂಬಂಧಿಸಿರುವ ಈ ಕ್ಷಣಿಕ ಸುಖವನ್ನು ತ್ಯಜಿಸಿ, ಶಾಶ್ವತ ಆನಂದವನ್ನು ನೀಡುವ ನಿವೃತ್ತಿ ಮಾರ್ಗವನ್ನು ಅವಲಂಬಿಸಲು ಇಚ್ಛಿಸುತ್ತೇನೆ. ಭೋಗಗಳಿಂದ ನಿವೃತ್ತನಾಗಿ ಸದಾಕಾಲವೂ ಆ ಶ್ರೀಹರಿಯ ಧ್ಯಾನದಲ್ಲಿ ಕಳೆಯಬಯಸುತ್ತೇನೆ.”
“ಹಾಗಲ್ಲ ಮಗನೇ! ಈ ವರ್ಣಾಶ್ರಮಧರ್ಮಗಳನ್ನು ನಿಯಮಿಸಿರುವುದು ಆ ಭಗವಂತನೆ! ಅವನ ತೃಪ್ತಿಗಾಗಿ ನಾವು ನಮ್ಮ ಧರ್ಮಗಳನ್ನಾಚರಿಸಿದರೆ ಅವನ ಪೂಜೆ ಮಾಡಿದಂತೆಯೇ ಆಗುತ್ತದೆ. ನಿನ್ನಲ್ಲಿರುವ ವಿದ್ಯೆ, ಶಕ್ತಿಗಳನ್ನು ಅವನ ಸೇವೆಯೆಂಬಂತೆ ಬಳಸು. ಈಗ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ರಾಜ್ಯವಾಳು. ಅನಂತರ ನಿನ್ನ ಮಕ್ಕಳಿಗೆ ರಾಜ್ಯಾಭಿಷೇಕ ಮಾಡಿ ನೀನು ಸಂನ್ಯಾಸಾಶ್ರಮ ಸ್ವೀಕರಿಸಬಹುದು.”
“ಆದರೆ ಪೂಜ್ಯ ಪಿತನೇ, ಈ ಸಂಸಾರವು ನಮ್ಮನ್ನು ಇಹಲೋಕದಲ್ಲಿ ಬಂಧಿಸಿಬಿಡುತ್ತದೆ! ಆಸೆಗಳು ಒಂದರ ಬಳಿಕ ಒಂದು ಹೆಚ್ಚುತ್ತಲೇ ಇರುತ್ತವೆ. ಕರ್ಮಗಳಿಗೆ ಅಂಟಿಕೊಂಡರೆ, ಮುಕ್ತಿ ದೊರೆಯುವುದು ದುಸ್ಸಾಧ್ಯವಾಗುತ್ತದೆ. ಆದ್ದರಿಂದ ಅವನ್ನು ಸರ್ವಥಾ ತ್ಯಜಿಸಿಬಿಡುವುದೇ ಕ್ಷೇಮವೆಂದು ನನ್ನ ಭಾವನೆ. ಅಪ್ಪಾ… ದಯವಿಟ್ಟು ನನ್ನನ್ನು ಕ್ಷಮಿಸು! ನಾನು ಶ್ರೀಹರಿಯನ್ನು ಕುರಿತು ತಪಶ್ಚರ್ಯೆಯಲ್ಲೇ ತೊಡಗಬೇಕೆಂದಿರುವೆ….”
ತಂದೆಯು ನೋಡುತ್ತಿದ್ದಂತೆಯೇ ಮಗನು ರಥವನ್ನೇರಿ ಹೊರಟು ಬಿಟ್ಟ! ತಂದೆಗೆ ಒಂದು ಕಡೆ ಮಗನು ಮಹಾಜ್ಞಾನಿಯೂ ಪರಮಭಾಗವತನೂ ಆಗಿರುವನೆಂಬ ಸಂತೋಷವಾದರೆ, ಇನ್ನೊಂದು ಕಡೆ, ಅವನು ಈ ಚಿಕ್ಕ ವಯಸ್ಸಿನಲ್ಲೇ ಭೋಗಭಾಗ್ಯಗಳನ್ನು ತ್ಯಜಿಸಿ ದುಷ್ಕರವಾದ ತಪಸ್ಸಿನಲ್ಲಿ ತೊಡಗುವನಲ್ಲಾ ಎಂಬ ದುಃಖ. ಅದನ್ನೇ ಚಿಂತಿಸುತ್ತಾ ಅವನು ಶೋಕಾಕುಲನಾಗಿ ಕುಳಿತನು.
ಆ ತಂದೆ, ಭೂಮಂಡಲದ ಚಕ್ರವರ್ತಿಯಾದ ಸ್ವಾಯಂಭುವ ಮನು; ಮನುಕುಲದ ಮೂಲನಾದ ಅವನು, ಬ್ರಹ್ಮದೇವನ ಪುತ್ರ; ಶ್ರೀಹರಿಯ ಭಕ್ತನಾದ ಅವನು ಒಬ್ಬ ಆದರ್ಶ ರಾಜ. ಅವನಿಗೆ ಪ್ರಿಯವ್ರತ, ಉತ್ತಾನಪಾದ ಎಂಬ ಇಬ್ಬರು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. ಈಗ ಅವನೊಂದಿಗೆ ಮಾತನಾಡುತ್ತಿದ್ದುದು ಅವನ ಹಿರಿಯ ಪುತ್ರನಾದ ಪ್ರಿಯವ್ರತ. ಪ್ರಿಯವ್ರತನು ಹಿರಿಯನಾದರೂ ವಿರಕ್ತನಾದುದರಿಂದ, ಅವನ ಕಿರಿಯ ಮಗನಾದ ಉತ್ತಾನಪಾದನು ರಾಜ್ಯಭಾರ ವಹಿಸಿಕೊಂಡು, ಗೃಹಸ್ಥಾಶ್ರಮ ಪಾಲಿಸುತ್ತಾ ಧ್ರುವನೆಂಬ ಮಹಾಭಕ್ತನನ್ನು ಸಂತಾನವನ್ನಾಗಿ ಪಡೆದಿದ್ದನು. ಅವನಿಂದ ಮನುವಿನ ವಂಶ, ಬೆಳೆದಿತ್ತು. ಆದರೆ ಆ ವಂಶದಲ್ಲಿ ಜನಿಸಿದ್ದ ಪ್ರಚೇತಸರೆಂಬ ಹತ್ತು ಸೋದರರ ಪುತ್ರನಾದ ದಕ್ಷನು ಸೃಷ್ಟಿ ರಹಸ್ಯವನ್ನು ಅರಿಯಲು ತಪಸ್ಸಿಗೆ ಹೋಗಿದ್ದನು. ಹಾಗಾಗಿ ಈ ರಾಜ್ಯವು ಅರಾಜಕವಾಗಿತ್ತು. ಆದ್ದರಿಂದ ಉತ್ತಾನಪಾದನಂತೆ ಪ್ರಿಯವ್ರತನೂ ರಾಜ್ಯಭಾರ ವಹಿಸಿಕೊಂಡು ಸದ್ಗೃಹಸ್ಥನಾಗಬೇಕೆಂದು ಮನುವಿನ ಆಸೆ. ಆದರೆ ಪ್ರಿಯವ್ರತನು ಬಾಲ್ಯದಿಂದಲೂ ನಾರದರ ಸೇವೆ ಮಾಡುತ್ತಾ ಅವರಿಂದ ಅಧ್ಯಾತ್ಮಿಕ ವಿಚಾರಗಳನ್ನೂ ದೇವೋತ್ತಮ ಪರಮ ಪುರುಷನ ಲೀಲಾಮೃತವನ್ನೂ ಕೇಳುತ್ತಾ ಬೆಳೆದು ಒಬ್ಬ ಮಹಾಭಕ್ತನೂ ತತ್ತ್ವಜ್ಞಾನಿಯೂ ಆದನು. ಭಗವಂತನ ದಿವ್ಯ ಚರಣಾರವಿಂದಗಳ ಸೇವೆಯಲ್ಲೇ ಮನಸ್ಸು ನೆಟ್ಟಿದ್ದ ಅವನಿಗೆ ಐಹಿಕ ಭೋಗಗಳಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ರಾಜ್ಯ, ಮದುವೆ, ಭೋಗಗಳಾವುದೂ ಬೇಡವೆನಿಸಿ ಅವನ್ನು ಸ್ವೀಕರಿಸಲು ತಂದೆಯು ಕೇಳಿಕೊಂಡರೂ ಅವನು ತಪಸ್ಸಿಗೆ ಹೊರಟುಹೋದ.
ಮಗನು ಸಂಸಾರದಿಂದ ವಿರಕ್ತನಾಗಿ ಹೀಗೆ ಹೊರಟುಹೋಗಲು ಮನುವು ಬಹಳ ದುಃಖಗೊಂಡ. ಈ ವಿಷಯವನ್ನು ತಿಳಿದುಕೊಂಡ ನಾರದರು ಅವನನ್ನು ನೋಡಲು ಬಂದರು. ನಾರದರನ್ನು ಸ್ವಾಗತಿಸಿದ ಮನುವು ಅಳುತ್ತಾ ಹೇಳಿದ, “ಪೂಜ್ಯರೇ…. ನಿಮ್ಮ ಉಪದೇಶದಿಂದ ನನ್ನ ಮಗನು ವಿರಕ್ತನಾದ… ನಾನು ಅವನನ್ನು ನೋಡಬೇಕು….” “ದುಃಖಿಸದಿರು ರಾಜಾ….” ನಾರದರು ಅವನಿಗೆ ಸಾಂತ್ವನ ಹೇಳಿದರು, “ಎಲ್ಲರಿಗೂ ಜ್ಞಾನವನ್ನು ನೀಡುವುದೇ ನನ್ನ ಕಾರ್ಯ. ನಿನ್ನನ್ನು ಪ್ರಿಯವ್ರತನಲ್ಲಿಗೆ ಕರೆದೊಯ್ಯುತ್ತೇನೆ, ಬಾ.”
ನಾರದರು ಮನುವನ್ನು ಗಂಧಮಾದನ ಪರ್ವತಕ್ಕೆ ಕರೆದೊಯ್ದರು. ಪ್ರಿಯವ್ರತನು ಅಲ್ಲಿ ಶ್ರೀಹರಿಯ ಧ್ಯಾನ ಮಾಡುತ್ತಾ ಕುಳಿತಿದ್ದ. ತಂದೆಯನ್ನೂ ನಾರದರನ್ನೂ ಕಂಡೊಡನೆಯೇ ಅವನು ಎದ್ದು ಇಬ್ಬರಿಗೂ ಅಭಿವಂದಿಸಿದ. ಅವರು ಅವನನ್ನು ಆಶೀರ್ವದಿಸಿ ಕುಳಿತುಕೊಳ್ಳಲು ಹೇಳಿದರು.
ಕೆಲಕಾಲ ಎಲ್ಲರೂ ಮೌನವಾಗಿ ಕುಳಿತಿದ್ದರು.
ಆಗ ದೂರದ ಆಗಸದಿಂದ ಹಂಸವಾಹನವೊಂದು ಅವರ ಕಡೆಗೇ ಬರುತ್ತಿದ್ದುದನ್ನು ಕಂಡು ನಾರದರು ಥಟ್ಟನೇ ಎದ್ದರು! ತಮ್ಮ ತಂದೆಯೂ, ಸೃಷ್ಟಿಕರ್ತನೂ, ಈ ವಿಶ್ವದ ಆದಿ ಪುರುಷನೂ, ದೇವತೆಗಳಲ್ಲೆಲ್ಲಾ ದೊಡ್ಡವನೂ ಆದ ಬ್ರಹ್ಮದೇವನು ಆಗಮಿಸುತ್ತಿದ್ದನೆಂದು ಅವರಿಗೆ ತಿಳಿಯಿತು! ಅವರೊಂದಿಗೆ ಸ್ವಾಯಂಭುವ ಮನುವೂ ಪ್ರಿಯವ್ರತನೂ ಎದ್ದು ನಿಂತರು!
ಬ್ರಹ್ಮದೇವನು ಮೂರ್ತಸ್ವರೂಪದ ವೇದಗಳೊಂದಿಗೂ, ಅತ್ರಿ, ಭೃಗು, ಮರೀಚಿಯೇ ಮೊದಲಾದ ಋಷಿಗಣಗಳೊಂದಿಗೂ ಬರುತ್ತಿದ್ದನು! ಅವನು ಬರುತ್ತಿದ್ದಂತೆ, ಸಿದ್ಧ ಸಾಧ್ಯ ಗಂಧರ್ವಚಾರಣಲೋಕಗಳ ನಿವಾಸಿಗಳೆಲ್ಲರೂ ತಂತಮ್ಮ ವಿಮಾನಗಳನ್ನೇರಿ ಅವನನ್ನು ಸ್ತುತಿಸುತ್ತಾ ಸ್ವಾಗತಿಸಲು ಬಂದರು. ಅವರಿಂದ ಸುತ್ತುವರೆಯಲ್ಪಟ್ಟ ಬ್ರಹ್ಮನು ನಕ್ಷತ್ರಗಳ ನಡುವಿನ ಚಂದ್ರನಂತೆ ಬೆಳಗುತ್ತಿದ್ದನು!
ಬ್ರಹ್ಮದೇವನು ಹೀಗೆ ಸತ್ಯಲೋಕದಿಂದ ಭೂಲೋಕಕ್ಕೆ ಬಂದು ಗಂಧಮಾದನ ಪರ್ವತದ ತಪ್ಪಲಲ್ಲಿ ಇಳಿದನು. ಆಗ ಮನುವೂ ನಾರದರೂ ಪ್ರಿಯವ್ರತನೂ ಕೃತಾಂಜಲಿಗಳಾಗಿ ಅವನನ್ನು ವೈದಿಕ ಸೂಕ್ತಗಳಿಂದ ಸ್ತುತಿಸಿದರು. ಅವರ ಸ್ತುತಿಗಳಿಂದ ಸಂಪ್ರೀತನಾದ ಬ್ರಹ್ಮನು ಪ್ರಿಯವ್ರತನ ಕಡೆಗೆ ತನ್ನ ಕೃಪಾದೃಷ್ಟಿಯನ್ನು ಬೀರಿ ನಸುನಗುತ್ತಾ ಅವನಿಗೆ ಹೇಳಿದನು.

“ವತ್ಸ, ಪ್ರಿಯವ್ರತ! ನಾನೀಗ ಹೇಳಲಿರುವುದನ್ನು ದಯವಿಟ್ಟು ಸ್ವಲ್ಪ ಗಮನವಿಟ್ಟು ಕೇಳು ನಾನು ಸತ್ಯವಾದುದನ್ನೇ ಈಗ ಹೇಳುವೆ. ಭಗವಂತನಾದ ಶ್ರೀಹರಿಯು ನಮ್ಮ ಮನಸ್ಸಿಗೆ ನಿಲುಕದ ಅಪ್ರಮೇಯನು! ನಾನಾಗಲೀ, ಶಿವನಾಗಲೀ, ನಿನ್ನ ತಂದೆಯಾಗಲೀ, ಅಥವಾ ಈ ದೇವರ್ಷಿ ನಾರದನಾಗಲೀ ಯಾರೂ ಅವನ ನಿಯಮವನ್ನು ಮೀರುವಂತಿಲ್ಲ. ಎಲ್ಲರೂ ಅವನ ಆಜ್ಞಾನುವರ್ತಿಗಳೇ! ಅವನ ಈ ನಿಯಮದ ಬಗ್ಗೆ ನೀನು ಅಸೂಯೆ ತಾಳಬಾರದು. ತಪಸ್ಸಿನಿಂದಾಗಲೀ, ಯೋಗದಿಂದಾಗಲೀ, ವಿದ್ಯೆಯಿಂದಾಗಲೀ, ಬುದ್ಧಿವಂತಿಕೆಯಿಂದಾಗಲೀ, ಧರ್ಮ ಅಥವಾ ಧನದ ಬಲದಿಂದಾಗಲೀ, ತಾನೊಬ್ಬನೇ ಇಲ್ಲವೇ ಇತರರ ಸಹಾಯದಿಂದಾಗಲೀ ಅವನ ಆಜ್ಞೆಯನ್ನು ಯಾವೊಬ್ಬ ಜೀವಿಯೂ ಮೀರಲಾಗದು! ಅವನ ನಿಯಮದಿಂದಲೇ ಜೀವಿಗಳು ಜನನ, ಮರಣ, ಸುಖ, ದುಃಖ, ಮೋಹ, ಭಯ, ಮೊದಲಾದವುಗಳನ್ನನುಭವಿಸಲು ವಿವಿಧ ದೇಹಗಳನ್ನು ಧರಿಸುತ್ತಾರೆ. ಪ್ರಿಯವ್ರತ, ನಾವೆಲ್ಲರೂ ಅವನ ನುಡಿಗಳಾದ ವೇದಗಳಿಂದ ನಮ್ಮ ಗುಣಕರ್ಮಗಳಿಗನುಸಾರವಾಗಿ ವರ್ಣಾಶ್ರಮಧರ್ಮಗಳಿಗೆ ಕಟ್ಟಲ್ಪಟ್ಟಿದ್ದೇವೆ! ಮೂಗುದಾರದಿಂದ ನಿಯಂತ್ರಿತಗೊಳ್ಳುವ ಎತ್ತಿನಂತೆ ನಾವೂ ನಿಯಂತ್ರಿತರಾಗಿದ್ದೇವೆ! ಆದ್ದರಿಂದ ಆ ಧರ್ಮಗಳನ್ನು ನಾವು ಪಾಲಿಸಲೇಬೇಕು! ಮಗು, ನಾವು ಎಂತೆಂತಹ ಗುಣಗಳ ಮತ್ತು ಕರ್ಮಗಳ ಸಂಗ ಮಾಡುವೆವೋ, ಭಗವಂತನು ಅವಕ್ಕೆ ತಕ್ಕಂತೆ ಅಂತಂತಹ ದೇಹಗಳನ್ನು ನೀಡುತ್ತಾನೆ; ಆ ದೇಹಗಳಿಗೆ ತಕ್ಕಂತೆ ಸುಖದುಃಖಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲಾಗುವುದಿಲ್ಲ! ಆದ್ದರಿಂದ, ಅವನು ನಮ್ಮನ್ನು ಯಾವ ಸ್ಥಿತಿಯಲ್ಲಿಟ್ಟಿರುವನೋ ಆ ಸ್ಥಿತಿಯಲ್ಲೇ ಇದ್ದು, ಕುರುಡನೊಬ್ಬನು ಕಣ್ಣುಳ್ಳವನಿಂದ ನಡೆಸಲ್ಪಡುವಂತೆ ನಾವು ಅವನ ನಿಯಮಕ್ಕೆ ಬದ್ಧರಾಗಿರಬೇಕು! ವತ್ಸ, ಒಬ್ಬ ವ್ಯಕ್ತಿಯೂ ಮುಕ್ತನಾಗಿದ್ದರೂ ಅವನು ತನ್ನ ಪೂರ್ವಾರ್ಜಿತ ಕರ್ಮಗಳಿಗನುಸಾರವಾಗಿ ದೇಹವನ್ನು ಸ್ವೀಕರಿಸಿ ಸುಖದುಃಖಗಳನ್ನು ಅನುಭವಿಸುತ್ತಾನೆ. ಆದರೆ ಅವನು ದೇಹದ ಮೇಲಿನ ಅಭಿಮಾನವನ್ನು ತ್ಯಜಿಸಿ, ನಿದ್ರೆಯಿಂದ ಎಚ್ಚರಗೊಂಡವನು ಕನಸನ್ನು ಅನಿತ್ಯವೆಂದು ತಿಳಿಯುವ ಹಾಗೆ ಈ ಸುಖದುಃಖಗಳೂ ಅನಿತ್ಯವೆಂದು ತಿಳಿದುಕೊಳ್ಳುತ್ತಾನೆ. ಅಂಥವನು, ತ್ರಿಗುಣಗಳ ಸಂಗ ಮಾಡುವುದಿಲ್ಲ, ಹಾಗೂ ಪುನಃ ಜನ್ಮವನ್ನು ಪಡೆಯುವುದಿಲ್ಲ.”
ಪ್ರಿಯವ್ರತನು ಮೌನವಾಗಿ ಆಲಿಸುತ್ತಿದ್ದನು. ಬ್ರಹ್ಮದೇವನು, ತಾನು ಹೇಳಿದುದನ್ನು ಅವನು ಮನಸ್ಸಿಗೆ ತಂದುಕೊಳ್ಳಲೆಂದು ಕೆಲಕಾಲ ತಡೆದು, ಅನಂತರ ಪುನಃ ಉಪದೇಶಿಸತೊಡಗಿದನು.
“ರಾಜಪುತ್ರ!” ಬ್ರಹ್ಮದೇವನು ಹೇಳಿದನು, “ಸಂಸಾರ ಬಂಧನದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯು ಮದುವೆಯಾಗದೇ ತಪಸ್ಸು ಮಾಡಲು ವನಕ್ಕೆ ಹೋಗಬಹುದು.ಆದರೆ ಇಂದ್ರಿಯನಿಗ್ರಹವಿಲ್ಲದ ಪ್ರಮತ್ತನಿಗೆ ಅಲ್ಲಿಯೂ ಆರು ಪತ್ನಿಯರಿಂದ ಭಯವಿದ್ದೇ ಇರುತ್ತದೆ!”
“ಆರು ಪತ್ನಿಯರೇ? ಅದು ಹೇಗೆ?” ಪ್ರಿಯವ್ರತನು ಈಗ ಆಶ್ಚರ್ಯದಿಂದ ಕೇಳಿದನು.
“ಹೌದು ಪುತ್ರ! ಆರು ಪತ್ನಿಯರು!” ಬ್ರಹ್ಮನು ನಕ್ಕನು, “ಪಂಚೇಂದ್ರಿಯಗಳು ಮತ್ತು ಮನಸ್ಸು ಎಲ್ಲರ ಜೊತೆಯಲ್ಲಿಯೂ ಸದಾ ಇರುವ ಪತ್ನಿಯರೇ ಅಲ್ಲವೇ?! ಇವನ್ನು ಜಯಸದವನು ವನದಲ್ಲಿದ್ದರೂ ಇವು ಅವನನ್ನು ಕಾಡುತ್ತಲೇ ಇರುತ್ತವೆ! ಆದರೇ ಜಿತೇಂದ್ರಿಯನಾದವನನ್ನು ಗೃಹಸ್ಥಾಶ್ರಮವು ಏನು ತಾನೇ ಮಾಡೀತು? ವತ್ಸ, ರಾಜನು ಒಂದು ದುರ್ಗವನ್ನು ಆಶ್ರಯಿಸಿ ತನ್ನ ಶತ್ರುಗಳನ್ನು ಗೆಲ್ಲುವಂತೆ ವ್ಯಕ್ತಿಯು ಮೊದಲು ಗೃಹಸ್ಥಾಶ್ರಮವನ್ನು ಆಶ್ರಯಿಸಿ ಆರುಪತ್ನಿಯರೆಂಬ ಈ ಒಳ ಶತ್ರಗಳನ್ನು ಜಯಿಸಬೇಕು! ಕಾಮನೆಗಳು ಕ್ಷೀಣಿಸಿದಾಗ ಅವನು ಸಂನ್ಯಾಸಿಯಾಗಿ ಮನ ಬಂದಂತೆ ಸಂಚರಿಸಬಹುದು.”
“ನೀವು ಹೇಳುವುದು ಸರಿಯೆನಿಸುತ್ತಿದೆ ಪಿತಾಮಹ!” ಪ್ರಿಯವ್ರತನು ನಿಧಾನವಾಗಿ ಹೇಳಿದನು.
“ಹೌದು ಪುತ್ರ! ನೀನು ನಾರದನಿಂದ ಜ್ಞಾನೋಪದೇಶ ಪಡೆದು ಈಗಾಗಲೇ ಭಗವದ್ಭಕ್ತನಾಗಿರುವೆ! ಆ ಕಮಲನಾಭನ ಪಾದಕಮಲಗಳಲ್ಲಿ ದೃಢವಾದ ಆಶ್ರಯ ಪಡೆದು ಪಂಚೇಂದ್ರಿಯಗಳನ್ನೂ ಮನಸ್ಸನ್ನೂ ಜಯಿಸು! ಅವನ್ನು ಜಯಿಸಿದ ನೀನು, ಆ ಭಗವಂತನಿಂದಲೇ ಪ್ರಾಪ್ತವಾಗಿರುವ ಈ ಭೋಗಗಳನ್ನು ಅನುಭವಿಸು! ಅವನ ಭಕ್ತನೆಂಬ ನಿನ್ನ ನಿಜಸ್ವರೂಪವನ್ನು ಅರಿತು ಯಾವುದಕ್ಕೂ ಅಂಟಿಕೊಳ್ಳದೇ ಭೌತಿಕ ಸುಖವನ್ನನುಭವಿಸಿದರೆ ದೋಷವಿರುವುದಿಲ್ಲ.”
“ಭಗವನ್! ಪಿತಾಮಹ!” ಪ್ರಿಯವ್ರತನು ತನ್ನ ಕೈ ಜೋಡಿಸಿಕೊಂಡು ಹೇಳಿದ, “ಈ ಜಗತ್ತಿನ ಸೃಷ್ಟಿಕರ್ತರು ನೀವು! ಆ ನಾರಾಯಣನ ಪರಮಭಕ್ತರೂ ಮೂರು ಲೋಕಗಳಿಗೇ ಗುರುಗಳೂ ಆಗಿರುವ ನೀವು ನೇರವಾಗಿ ನನ್ನ ಪಿತಾಮಹರೂ ಹೌದು! ನಿಮ್ಮ ಮುಂದೆ ನಾನು ಬಹಳ ಚಿಕ್ಕವನು. ಆದ್ದರಿಂದ ನಿಮ್ಮ ಮಾತನ್ನು ಉಲ್ಲಂಘಿಸದೇ ಅದನ್ನು ಪಾಲಿಸುತ್ತೇನೆ.”
ಪ್ರಿಯವ್ರತನ ಭಕ್ತಿಯುತ ಮಾತುಗಳನ್ನು ಕೇಳಿ ಬ್ರಹ್ಮದೇವನು ಬಹಳ ಸಂತೋಷಗೊಂಡನು. ಅವನನ್ನು ತುಂಬು ಹೃದಯದಿಂದ ಆಶೀರ್ವದಿಸಿದನು. ಅಂತೆಯೇ, ತನ್ನ ಮನೋರಥವು ಈಡೇರಲು ಮನುವೂ ಬಹಳ ಸಂತೋಷಗೊಂಡನು.
ಅನಂತರ, ಮನುವೂ ನಾರದರೂ ಪ್ರಿಯವ್ರತನೂ ಬ್ರಹ್ಮದೇವನನ್ನು ಸಂಪೂಜಿಸಿದರು. ಎಲ್ಲರನ್ನೂ ಆಶೀರ್ವದಿಸಿ ಬ್ರಹ್ಮನು ಹಸನ್ಮುಖಿಯಾಗಿ, ವೇದಗಳೊಂದಿಗೂ ಋಷಿಗಣಗಳೊಂದಿಗೂ ತನ್ನ ಹಂಸವಾಹನವನ್ನೇರಿ ದಿವ್ಯವಾದ ಸತ್ಯಲೋಕಕ್ಕೆ ನಿರ್ಗಮಿಸಿದ.
ಹೀಗೆ ಮಹಾಭಾಗವತನಾದ ಪ್ರಿಯವ್ರತನಿಗೆ ರಾಜ್ಯಭಾರವನ್ನು ವಹಿಸಿಕೊಡಲು ಬ್ರಹ್ಮದೇವನೇ ಇಳಿದು ಬರಬೇಕಾಯಿತು! ಅವನ ಉಪದೇಶದಿಂದ ರಾಜ್ಯವಾಳಲು ಒಪ್ಪಿದ ಪ್ರಿಯವ್ರತನಿಗೆ ಪಟ್ಟಾಭಿಷೇಕ ಮಾಡಿ ಮನುವು ಅವನಿಗೆ ಅಖಿಲ ಭೂಮಂಡಲದ ಆಧಿಪತ್ಯವನ್ನು ವಹಿಸಿಕೊಟ್ಟು ವಿಷಮಯವಾದ ವಿಷಯ ಜಲಾಶಯದಿಂದ ಬಿಡುಗಡೆ ಹೊಂದಿದೆನೆಂದು ತೃಪ್ತನಾದನು.
ಭಗವಂತನ ನಿಯಮವನ್ನು ಪಾಲಿಸಲೆಂದು ಪ್ರಿಯವ್ರತನು ರಾಜನಾಗಿ ರಾಜಕಾರ್ಯಗಳಲ್ಲಿ ಮಗ್ನನಾದನು. ಭೌತಿಕ ವಿಷಯಗಳಲ್ಲಿ ಅನಾಸಕ್ತನಾಗಿದ್ದರೂ, ಹಿರಿಯರ ಗೌರವವನ್ನುಳಿಸಲು ಅವನು ಅವುಗಳಲ್ಲಿ ತೊಡಗಿದನು. ಆದರೆ ಅವನು ತನ್ನ ಮನಸ್ಸಿನಲ್ಲಿ ಭವಬಂಧನವನ್ನು ಬಿಡಿಸುವ ಭಗವಂತನ ಪಾದಕಮಲಗಳನ್ನು ಸದಾ ಸ್ಮರಿಸುತ್ತಿದ್ದನು.
ಪ್ರಿಯವ್ರತನು ರಾಜನಾಗಿ ಕೆಲ ಕಾಲದಲ್ಲೇ ಪ್ರಜಾಪತಿ ವಿಶ್ವಕರ್ಮನ ಮಗಳಾದ ಬರ್ಹಿಷ್ಮತೀ ಎಂಬ ಸುಂದರಿಯನ್ನು ವಿವಾಹವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದನು. ಕಾಲಕ್ರಮದಲ್ಲಿ ಅವನಿಗೆ ಅವಳಿಂದ ಹತ್ತು ಪುತ್ರರೂ ಒಬ್ಬ ಪುತ್ರಿಯೂ ಜನಿಸಿದರು. ಆ ಹತ್ತು ಪುತ್ರರಿಗೆ ಅವನು ಪ್ರೀತಿಯಿಂದ ಅಗ್ನೀಧ್ರ, ಇಧ್ಮಜಿಹ್ವ, ಯಜ್ಞಬಾಹು, ಮಹಾವೀರ, ಹಿರಣ್ಯರೇತಸ್, ಘೃತಪುಷ್ಠ, ಸವನ, ಮೇದಾತಿಥಿ, ವೀತಿಹೋತ್ರ, ಕವಿ ಎಂದು ಅಗ್ನಿಯ ಹೆಸರುಗಳನ್ನಿಟ್ಟನು. ಅವರೆಲ್ಲರೂ ರೂಪದಲ್ಲೂ, ಗುಣಗಳಲ್ಲೂ ಅವನಿಗೆ ಸಮಾನರಾಗಿದ್ದರು. ಸ್ತ್ರೀರತ್ನವಾಗಿದ್ದ ಅವನ ಮಗಳಿಗೆ ಊರ್ಜಸ್ವತೀ ಎಂದು ಹೆಸರಿಟ್ಟನು. ಕಾಲಾಂತರದಲ್ಲಿ ಅವನು ಮತ್ತೊಂದು ವಿವಾಹವಾಗಿ ಆ ಇನ್ನೊಬ್ಬ ಪತ್ನಿಯಲ್ಲಿ, ಉತ್ತಮ, ತಾಮಸ, ಮತ್ತು ರೈವತ ಎಂಬ ಮೂರು ಸತ್ಪುತ್ರರನ್ನು ಪಡೆದನು. ಈ ಮೂವರೂ ಮುಂದೆ ಮನುಗಳಾಗಿ ಮನ್ವಂತರಗಳಿಗೆ ಆಧಿಪತಿಗಳಾದರು (ಮನ್ವಂತರವೆಂಬುದು ಕಾಲದ ಒಂದು ವಿಭಾಗ. ಪ್ರತಿ ಮನ್ವಂತರವನ್ನೂ ಒಬ್ಬ ಮನುವು ಆಳುತ್ತಾನೆ. ಸ್ವಾಯಂಭುವ ಮನುವು ಮೊದಲು ಮನುವಾಗಿದ್ದು ಮೊದಲ ಮನ್ವಂತರವನ್ನು ಆಳಿದನು. ಒಟ್ಟು ಹದಿನಾಲ್ಕು ಮನ್ವಂತರಗಳು ಬ್ರಹ್ಮನ ಒಂದು ದಿನದಲ್ಲಿ ಬರುತ್ತವೆ. ಈಗ ನಾವು ಇರುವ ಏಳನೆಯ ಮನ್ವಂತರ, ವೈವಸ್ವತ ಮನುವಿನದ್ದಾಗಿದೆ.)
ಪ್ರಿಯವ್ರತ ಹತ್ತು ಅಗ್ನಿನಾಮಕ ಪುತ್ರರಲ್ಲಿ, ಕವಿ, ಮಹಾವೀರ, ಮತ್ತು ಸವನ ಎಂಬ ಮೂವರು, ಬಾಲ್ಯದಿಂದಲೇ ವಿರಕ್ತರಾಗಿದ್ದರು. ಅವರು ಜೀವನಾದ್ಯಂತ ಬ್ರಹ್ಮಚಾರಿಗಳಾಗಿರಲು ತೀರ್ಮಾನಿಸಿ ಸದಾಕಾಲವೂ ಭಗವಂತನಾದ ವಾಸುದೇವನ ಧ್ಯಾನದಲ್ಲೇ ತೊಡಗಿರುತ್ತಿದ್ದರು! ಹೀಗೆ ಮಹಾಭಕ್ತರೂ ಮಹಾಜ್ಞಾನಿಗಳೂ ಆದ ಅವರು ಮಹಾನ್ ಋಷಿಗಳಾಗಿ ಪರಮಹಂಸರೆನಿಸಿದರು! ತಂದೆಯ ಗುಣಗಳೇ ಮಕ್ಕಳಿಗೆ ಬರುತ್ತವಲ್ಲವೇ? ತಮ್ಮ ವ್ಯಕ್ತಿತ್ವದಿಂದ ಆ ಮೂವರು ಪುತ್ರರು ಪ್ರಿಯವ್ರತನಿಗೆ ಸಂತೋಷವನ್ನೇ ಉಂಟುಮಾಡಿದರು!
ಪ್ರಿಯವ್ರತನು ಒಬ್ಬ ಆದರ್ಶ ರಾಜನಾಗಿದ್ದನು. ಅವನು ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಧರ್ಮಾತ್ಮನಾಗಿದ್ದ ಅವನ ಆಳ್ವಿಕೆಯ ಕಾಲದಲ್ಲಿ ಕ್ಷಾಮಡಾಮರಗಳ ಬಾಧೆಯಿರಲಿಲ್ಲ. ಅವನು ಮಹಾವೀರನೂ ಪ್ರತಾಪಶಾಲಿಯೂ ಆಗಿದ್ದನು. ಅವನು ತನ್ನ ಬಲಿಷ್ಠವಾದ ನೀಳಬಾಹುಗಳಿಂದ ತನ್ನ ಬಿಲ್ಲಿನಲ್ಲಿ ಬಾಣ ಹೂಡಿದನೆಂದರೆ ಧರ್ಮಕ್ಕೆ ವಿರುದ್ಧರಾಗಿದ್ದವರು ಭಯಭೀತರಾಗಿ ಓಡಿ ಹೋಗುತ್ತಿದ್ದರು! ಹೀಗೆ ಕಳ್ಳಕಾಕರ ಭಯವಿಲ್ಲದೇ ಪ್ರಜೆಗಳು ನಿರಾತಂಕದಿಂದ ಬಾಳುತ್ತಿದ್ದರು. ಹೀಗೆ ಪ್ರಿಯವ್ರತನು ಹನ್ನೊಂದು ಅರ್ಬುದಗಳ (ಒಂದು ಅರ್ಬುದ – 10,00,00,000 ವರ್ಷಗಳು; ಕೃತ ಯುಗದಲ್ಲಿ ಜನರ ಆಯಸ್ಸು ಹೀಗೆ ಸಾವಿರ, ಲಕ್ಷ ವರ್ಷಗಳಷ್ಟಿತ್ತು, ಪ್ರತೀ ಯುಗದಲ್ಲೂ ಧರ್ಮವು ಸ್ವಲ್ಪ ಸ್ವಲ್ಪವೇ ಕ್ಷೀಣಿಸಿದಂತೆ ಜನರ ಆಯಸ್ಸೂ ಕ್ಷೀಣಿಸತೊಡಗಿತು. ಈಗ ಕಲಿಯುಗದಲ್ಲಿ ಜನರ ಆಯಸ್ಸು ಸರಾಸರಿ 100 ವರ್ಷಗಳಷ್ಟಾಗಿದೆ.) ದೀರ್ಘಕಾಲದವರೆಗೆ ಈ ಜಗತ್ತನ್ನು ಆಳಿದನು!
ಪ್ರಿಯವ್ರತನು ಒಬ್ಬ ಆದರ್ಶ ಗೃಹಸ್ಥನೂ ಆಗಿದ್ದನು. ಪತ್ನೀ ಪುತ್ರರೊಂದಿಗೆ ಕೂಡಿದ್ದ ಅವನ ತುಂಬು ಸಂಸಾರದಲ್ಲಿ ಸುಖದ ಹೊಳೆಯೇ ಹರಿಯುತ್ತಿತ್ತು! ಅವನು ತನ್ನ ಪತ್ನಿಯರನ್ನು ಬಹಳ ಪ್ರೀತಿಸುತ್ತಿದ್ದನು. ಅದರಲ್ಲೂ ಅವನಿಗೆ ಬರ್ಹಿಷ್ಮತಿಯೆಂದರೆ ಪ್ರಾಣ! ದಿನೇ ದಿನೇ ಅವರಿಬ್ಬರ ನಡುವೆ ಅನುರಾಗವು ಶುಕ್ಲಪಕ್ಷದ ಚಂದ್ರನಂತೆ ವರ್ಧಿಸುತ್ತಿತ್ತು! ಬರ್ಹಿಷ್ಮತಿಯೂ ಅವನಿಗೆ ಒಳ್ಳೆಯ ಪತ್ನಿಯಾಗಿದ್ದಳು. ತನ್ನ ಸ್ತ್ರೀ ಸಹಜ ನಾಚಿಕೆ, ಮುಗುಳ್ನಗೆ, ಬಳ್ಳಿಯಂಥ ಬಳುಕು ನಡೆ, ಪ್ರೇಮಪೂರಿತ ಕಣ್ಣೋಟ, ಭ್ರೂಲತಾವಿಲಾಸ, ಮಧುರ ನುಡಿ, ಸರಸೋಕ್ತಿಗಳಿಂದ ಅವನಲ್ಲಿ ಪ್ರೇಮಭಾವವನ್ನು ಹೆಚ್ಚಿಸುತ್ತಿದ್ದಳು! ತನ್ನನ್ನು ಉತ್ತಮ ವಸಾ್ತ್ರಭರಣಗಳಿಂದ ಅಲಂಕರಿಸಿಕೊಂಡು ತನ್ನ ಅನುಪಮ ಸೌಂದರ್ಯದಿಂದ ಅವನ ಕಂಗಳಿಗೆ ಹಬ್ಬವುಂಟು ಮಾಡುತ್ತಿದ್ದಳು! ಪ್ರಿಯವ್ರತನು ಸದಾ ಅವಳೊಡನೆ ವಿಹರಿಸುತ್ತಾ ಸರಸ ಸಲ್ಲಾಪಗಳಿಂದ ಅವಳನ್ನು ತೃಪ್ತಿಪಡಿಸುತ್ತಾ ಅವಳ ಪ್ರೇಮದಲ್ಲಿ ಕರಗಿ ಹೋದಂತಾಗಿ ಒಬ್ಬ ಸಾಮಾನ್ಯ ಮನುಷ್ಯನಂತೆ ತೋರಿಕೊಂಡರೂ ಅಂತರಂಗದಲ್ಲಿ ಅವನು ಮಹಾಜ್ಞಾನಿಯೇ ಆಗಿದ್ದನು.
ಪ್ರಿಯವ್ರತನು ರಾಜ್ಯವಾಳುತ್ತಿದ್ದಾಗ ಒಂದು ವಿಷಯವನ್ನು ಗಮನಿಸಿದನು. ಅದೆಂದರೆ, ಸೂರ್ಯದೇವನು ಸುಮೇರು ಪರ್ವತವನ್ನು ದಿನವೂ ಪ್ರದಕ್ಷಿಣೆ ಮಾಡುತ್ತಿದ್ದಾಗ ಅವನು ಪರ್ವತದ ಯಾವ ಭಾಗದಲ್ಲಿರುತ್ತಿದ್ದನೋ ಆ ಭಾಗದ ಭೂಮಿಗೆ ಅವನ ಬೆಳಕು ದೊರೆಯುತ್ತಿತ್ತು; ಉಳಿದ ಭಾಗ ಕತ್ತಲೆಯಲ್ಲಿರುತ್ತಿತ್ತು. ಉದಾಹರಣೆಗೆ, ಸೂರ್ಯನು ಪರ್ವತದ ಉತ್ತರಕ್ಕಿದ್ದರೆ, ಅದರ ದಕ್ಷಿಣ ಭಾಗ ಕತ್ತಲಿನಲ್ಲಿರುತ್ತಿತ್ತು. ಇದು ಪ್ರಿಯವ್ರತನಿಗೆ ಇಷ್ಟವಾಗಲಿಲ್ಲ.
“ಇದೆಂಥ ಪರಿಸ್ಥಿತಿ? ವಿಶ್ವದ ಒಂದು ಭಾಗಕ್ಕೆ ಬೆಳಕಿರುವಾಗ ಇನ್ನೊಂದು ಭಾಗ, ಕತ್ತಲಿನಲ್ಲಿರಬೇಕೇ? ನಾನು ಆ ಭಾಗಕ್ಕೂ ಬೆಳಕು ದೊರೆಯುವಂತೆ ಮಾಡುತ್ತೇನೆ!”
ಹೀಗೆ ಯೋಚಿಸಿದ ಪ್ರಿಯವ್ರತನು ಒಂದು ದಿವ್ಯ ರಥವನ್ನು ಸಂಕಲ್ಪಿಸಿಕೊಂಡನು! ಜಾಜ್ವಲ್ಯಮಾನವಾದ ಅಂಥ ಒಂದು ರಥ ತತ್‌ಕ್ಷಣ ಪ್ರತ್ಯಕ್ಷವಾಯಿತು! ಮಹಾ ತೇಜಸ್ವಿಯಾದ ಪ್ರಿಯವ್ರತನು ಆ ರಥವನ್ನೇರಿ ಸೂರ್ಯನ ಪಥದಲ್ಲೇ ಸುತ್ತತೊಡಗಿದನು! ಆ ರಥದ ಉಜ್ವಲ ಕಾಂತಿಯು ಸೂರ್ಯನ ಬೆಳಕಿಗೆ ಸಮಾನವಾಗಿತ್ತು! ಹಾಗಾಗಿ ವಿಶ್ವದ ಇನ್ನೊಂದು ಭಾಗಕ್ಕೂ ಬೆಳಕು ದೊರೆಯತೊಡಗಿತು!

ಪ್ರಿಯವ್ರತನು ಈ ರೀತಿ ಏಳು ಬಾರಿ ಮೇರು ಪರ್ವತಕ್ಕೆ ಪ್ರದಕ್ಷಿಣೆ ಮಾಡಿದನು! ಎರಡನೆಯ ಸೂರ್ಯನಂತೆ ಮೂರು ಲೋಕಗಳಿಗೂ ಅಚ್ಚರಿಯುಂಟುಮಾಡುತ್ತಾ ತೊಳ ತೊಳಗಿ ಬೆಳಗಿದನು! ಇಂಥ ಅಪ್ರತಿಮ ಸಾಹಸ ಅವನಿಗೆ ಸಾಧ್ಯವಾದದ್ದು ಅವನ ಭಗವದ್ಭಕ್ತಿಯ ಬಲದಿಂದ!
ಹೀಗೆ ಪ್ರಿಯವ್ರತನು ರಾತ್ರಿಯನ್ನೂ ಹಗಲಾಗಿಸಿದನು! ಆದರೆ ಅದು ಪ್ರಕೃತಿಯ ನಿಯಮಕ್ಕೆ ವಿರುದ್ಧವೆಂದು ಮನಗಂಡು, ಅವನು ಈ ಕಾರ್ಯವನ್ನು ನಿಲ್ಲಿಸಿದನು. ಅವನು ಏಳು ಬಾರಿ ಸೂರ್ಯನ ಹಿಂದೆ ಚಲಿಸಿದಂತೆ, ಅವನ ರಥದ ಚಕ್ರಗಳು ಭೂಮಿಯ ಮೇಲೆ ಅಚ್ಚೊತ್ತಿ ಏಳು ಹಳ್ಳಗಳಾದವು! ಅವೆಲ್ಲವೂ ಜಲದಿಂದ ತುಂಬಿ ಸಪ್ತಸಾಗರಗಳಾದವು! ಅವುಗಳ ಮಧ್ಯದ ನೆಲ ಭಾಗವು ಏಳು ದ್ವೀಪಗಳಾಗಿ ವಿಂಗಡಿಸಲ್ಪಟ್ಟಿತು! ಆ ದ್ವೀಪಗಳು ಒಂದೊಂದೂ ಹಿಂದಿನ ದ್ವೀಪಕ್ಕಿಂತ ಎರಡಷ್ಟು ದೊಡ್ಡದಾದ ವಿಸ್ತೀರ್ಣವನ್ನು ಹೊಂದಿ ಜಲದಿಂದ ಆವೃತ್ತವಾದವು! ಆ ಸಪ್ತ ದ್ವೀಪಗಳು, ಜಂಬೂದ್ವೀಪ, ಪ್ಲಕ್ಷದ್ವೀಪ, ಶಾಲ್ಮಲಿದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಾಕದ್ವೀಪ, ಪುಷ್ಕರದ್ವೀಪ ಎಂಬ ಹೆಸರುಗಳಿಂದ ಖ್ಯಾತವಾದವು! ಆ ಸಪ್ತ ಸಾಗರಗಳು, ಉಪ್ಪುನೀರು, ಕಬ್ಬಿನರಸ, ಸುರೆ, ತುಪ್ಪ, ಹಾಲು, ಮೊಸರು, ಶುದ್ಧೋದಕಗಳಿಂದ ತುಂಬಿದವು! ಪ್ರಿಯವ್ರತರಾಜನು ತನ್ನ ಮಕ್ಕಳಾದ ಅಗ್ನೀಧ್ರ, ಇಧ್ಮಜಿಹ್ವ, ಯಜ್ಞಬಾಹು, ಹಿರಣ್ಯರೇತಸ್, ಘೃತಪೃಷ್ಠ, ಮೇದಾತಿಥಿ, ಮತ್ತು ವೀತಿಹೋತ್ರರನ್ನು ಸಪ್ತದ್ವೀಪಗಳಿಗೆ ರಾಜರನ್ನಾಗಿ ಮಾಡಿದನು. ಅನಂತರ, ನವಯೌವನದಿಂದ ಕೂಡಿದ್ದ ತನ್ನ ಮಗಳು ಊರ್ಜಸ್ವತಿಯನ್ನು ಶುಕ್ರಾಚಾರ್ಯರಿಗೆ ವಿವಾಹ ಮಾಡಿದನು. ಆ ದಂಪತಿಗಳಿಗೆ ಕಾಲಕ್ರಮದಲ್ಲಿ ದೇವಯಾನೀ ಎಂಬ ಸುಂದರ ಪುತ್ರಿ ಜನಿಸಿದಳು.
ಹೀಗೆ ಪ್ರಿಯವ್ರತನು ಭೌತಿಕವಾಗಿ ಯಾರನ್ನಾದರೂ ನಿಬ್ಬೆರಗಾಗಿಸುವ ಸಾಧನೆಗಳನ್ನು ಮಾಡಿದನು! ಅವನ ಕೀರ್ತಿ ದಶದಿಕ್ಕುಗಳನ್ನೂ ವ್ಯಾಪಿಸಿತು! ಇಷ್ಟೆಲ್ಲಾ ಅವನಿಗೆ ಹೇಗೆ ಸಾಧ್ಯವಾಯಿತು?! ದೇವತೆಗಳಿಗೆ ಅಸಾಧ್ಯವಾದ ಕಾರ್ಯಗಳನ್ನು ಅವನು ಹೇಗೆ ಮಾಡಿದನು?! ಅದು ಸಾಧ್ಯವಾದದ್ದು ಅವನ ಭಗವದ್ಭಕ್ತಿಯಿಂದ! ಭಗವಂತನು ವಾಮನಾವತಾರದಲ್ಲಿ ತನ್ನ ಪಾದಗಳಿಂದಲೇ ಮೂರು ಲೋಕಗಳನ್ನೂ ಅಳೆದನಲ್ಲವೇ? ಅಂಥ ದೇವೋತ್ತಮ ಪರಮ ಪುರುಷನ ಪಾದಧೂಳಿಯ ಆಶ್ರಯ ಪಡೆದಿರುವ ಭಕ್ತರು ಭೌತಿಕ ಬಾಧೆಗಳಾದ ಹಸಿವು, ದಾಹ, ದುಃಖ, ಭ್ರಮೆ, ಮುಪ್ಪು, ಸಾವುಗಳನ್ನೂ ಗೆಲ್ಲುತ್ತಾರೆ! ಪಂಚೇಂದ್ರಿಯಗಳನ್ನೂ ಮನಸ್ಸನ್ನೂ ಜಯಿಸುತ್ತಾರೆ! ಆದರೆ ಇವೆಲ್ಲಾ ಏನೂ ಅತಿಶಯವಲ್ಲ! ಏಕೆಂದರೆ, ನಾಲ್ಕು ವರ್ಣಗಳಿಂದಲೂ ಹೊರದೂಡಲ್ಪಟ್ಟಿರುವ ಒಬ್ಬ ಮ್ಲೇಚ್ಛನೂ ಆ ಭಗವಂತನ ಪವಿತ್ರ ನಾಮೋಚ್ಚಾರಣೆಯನ್ನು ಒಮ್ಮೆ ಮಾಡಿದಾಕ್ಷಣ ಭವಬಂಧನವನ್ನು ನೀಗಿಕೊಳ್ಳುತ್ತಾನೆ!
ದೇವೋತ್ತಮ ಪರಮ ಪುರುಷನ ಅಂಥ ದಯೆಯಿಂದಲೇ ಪ್ರಿಯವ್ರತನಿಗೆ ಕಡೆಗಾಲದಲ್ಲಿ ಬಲ ಪರಾಕ್ರಮಗಳಿಂದ ವಿಷಯ ಸುಖಗಳನ್ನು ಅನುಭವಿಸುತ್ತಿರುವಾಗಲೇ ಪುನಃ ವೈರಾಗ್ಯ ಪ್ರಾಪ್ತಿಯಾಯಿತು!
“ಅಯ್ಯೋ! ನಾನೆಂಥ ಕೆಲಸ ಮಾಡಿದೆ!” ಪ್ರಿಯವ್ರತನು ಹಲುಬಿದನು, “ಬಹಳ ಹಿಂದೆಯೇ ನಾನು ನಾರದರಿಗೆ ಸಂಪೂರ್ಣ ಶರಣಾಗಿ ಜ್ಞಾನೋಪದೇಶ ಪಡೆದಿದ್ದರೂ ಪುನಃ ವಿಷಯ ಸುಖಗಳಲ್ಲಿ ಮುಳುಗಿದೆನಲ್ಲಾ! ನನಗೆ ಧಿಕ್ಕಾರ! ಇಂದ್ರಿಯ ತೃಪ್ತಿಗಾಗಿ ವಿಷಮಯವಾದ ಈ ವಿಷಯಾಂಧಕೂಪದಲ್ಲಿ ಬಿದ್ದೆನಲ್ಲಾ! ಹೆಂಗಸಿನ ಕೈಯಲ್ಲಿ ಕ್ರೀಡಾಮೃಗದಂತಾಗಿ ಬಿಟ್ಟೆನಲ್ಲಾ! ನನಗೆ ಧಿಕ್ಕಾರ! ಇನ್ನು ಸುಖಪಟ್ಟಿದ್ದು ಸಾಕು!”
ಹೀಗೆ ಆಲೋಚಿಸಿದ ಪ್ರಿಯವ್ರತನು ತನ್ನ ಎಲ್ಲ ಸಿರಿಸಂಪತ್ತನ್ನೂ ವಿಧೇಯರಾದ ತನ್ನ ಪುತ್ರರಿಗೆ ಹಂಚಿದ! ತನ್ನ ರಾಜ್ಯ, ಭೋಗಗಳನ್ನಲ್ಲದೇ ತಾನು ಯಾರೊಂದಿಗೆ ರಮಿಸುತ್ತಾ ಬಹಳ ಭೋಗಗಳನ್ನನುಭವಿಸಿದ್ದನೋ ಆ ತನ್ನ ಪ್ರಿಯಪತ್ನಿಯನ್ನೂ ತ್ಯಜಿಸಿಬಿಟ್ಟ! ಅವನು ಹರಿಲೀಲೆಗಳನ್ನು ಸ್ಮರಿಸುತ್ತಾ ಹೃದಯವನ್ನು ಎಲ್ಲಾ ಕಶ್ಮಲಗಳಿಂದಲೂ ದೂರ ಮಾಡಿಕೊಂಡು, ಹಿಂದೆ ನಾರದರು ತೋರಿಸಿದ್ದ ದಾರಿಯಲ್ಲಿ ನಡೆದು ತನ್ನ ಸ್ವರೂಪವನ್ನು ಅರಿತ.






Leave a Reply