ಪ್ರಹ್ಲಾದನ ಕಥೆ (ಭಾಗ-4)
ಆಧಾರ: ಶ್ರೀಮದ್ಭಾಗವತಮ್, ಏಳನೆಯ ಸ್ಕಂಧ
– ಡಾ॥ ಬಿ.ಆರ್. ಸುಹಾಸ್
ಹಿರಣ್ಯಾಕ್ಷನ ಸಾವಿನಿಂದ ಕ್ರುದ್ಧನಾದ ಹಿರಣ್ಯಕಶಿಪು ಉಗ್ರ ತಪಸ್ಸನ್ನು ಆಚರಿಸಿ ಬ್ರಹ್ಮನನ್ನು ಒಲಿಸಿಕೊಂಡ. ಅವನಿಂದ ವಿಚಿತ್ರವಾದ ವರವನ್ನು ಪಡೆದ. ತಾನು ಅಮರನಾಗಬೇಕೆನ್ನುವುದು ಅವನ ಬಯಕೆಯಾಗಿತ್ತು. ಆದರೆ ಬ್ರಹ್ಮ ಜಾಣತನದಿಂದ ಅವನು ಬೇಡಿದ ವರಗಳನ್ನು ನೀಡಿದ. ನಾರದರ ಆಶ್ರಯದಲ್ಲಿ ಸುರಕ್ಷಿತವಾಗಿದ್ದ ಕಯಾಧು ಪ್ರಹ್ಲಾದನಿಗೆ ಜನ್ಮ ನೀಡಿದ್ದಳು. ಇಂದ್ರನು ಆಕೆಗೆ ಕಿರುಕುಳ ನೀಡಿದ್ದನೆಂಬ ಕಾರಣವೊಡ್ಡಿ ದೇವಲೋಕಕ್ಕೆ ದಂಡೆತ್ತಿ ಹೊರಟ ಹಿರಣ್ಯಕಶಿಪು ಮೂರು ಲೋಕಗಳನ್ನು ವಶಪಡಿಸಿಕೊಂಡ! …ಮುಂದೆ ಓದಿ
ಹಿರಣ್ಯಕಶಿಪುವಿನ ಉಗ್ರ ಆಳ್ವಿಕೆಯಿಂದ ತತ್ತರಿಸಿ ಹೋದ ಸಕಲ ದೇವತೆಗಳೂ ಋಷಿಗಳೂ ಬೇರೆ ದಾರಿ ಕಾಣದೆ ಶ್ರೀ ಹರಿಗೆ ಶರಣಾದರು. ಅವರು ಆಕಾಶವನ್ನೇ ನೋಡಿಕೊಂಡು ಪ್ರಾರ್ಥಿಸಿದರು, “ಶ್ರೀಹರಿಯು ಯಾವ ದಿಕ್ಕಿನಲ್ಲಿರುವನೋ, ಆ ದಿಕ್ಕಿಗೆ ನಮಸ್ಕಾರ! ಯಾವ ದಿಕ್ಕಿನೆಡೆಗೆ ಪವಿತ್ರಾತ್ಮರಾದ ಸಂತರು ಹೋಗಿ ಪುನಃ ಈ ಭವಕ್ಕೆ ಹಿಂದಿರುಗುವುದಿಲ್ಲವೋ, ಶ್ರೀಹರಿಯ ಆ ದಿವ್ಯ ದಿಕ್ಕಿಗೆ ನಮಸ್ಕಾರ!” ಅವರೆಲ್ಲರೂ ತಮ್ಮ ಮನಸ್ಸುಗಳನ್ನು ನಿಗ್ರಹಿಸಿ ನಿದ್ರಾಹಾರರಹಿತರಾಗಿ ಕೇವಲ ವಾಯುಭಕ್ಷಣೆ ಮಾಡುತ್ತಾ ಸತತವಾಗಿ ಪ್ರಾರ್ಥಿಸಿದರು. ಆಗ ಅವರೆಲ್ಲರಿಗೂ ಮೇಘದಂತೆ ಗಂಭೀರವಾದ ಒಂದು ಅಶರೀರವಾಣಿಯು ಕೇಳಿಸಿತು, “ಎಲೈ ದೇವಶ್ರೇಷ್ಠರೇ! ಋಷಿಮುನಿಗಳೇ! ಹೆದರಬೇಡಿರಿ! ನಿಮಗೆ ಮಂಗಳವಾಗಲಿ! ನನ್ನ ದರ್ಶನವು ಎಂದಿಗೂ ವ್ಯರ್ಥವಾಗುವುದಿಲ್ಲ. ಅದರಿಂದ ಶ್ರೇಯಸ್ಸುಂಟಾಗುತ್ತದೆ. ಹಿರಣ್ಯಕಶಿಪುವಿನ ದುಷ್ಕೃತ್ಯಗಳು ನನಗೆ ತಿಳಿದಿವೆ. ನಾನು ಖಂಡಿತವಾಗಿಯೂ ಅವುಗಳನ್ನು ಕೊನೆಗೊಳಿಸುತ್ತೇನೆ. ಅಲ್ಲಿಯವರೆಗೂ ಸ್ವಲ್ಪ ಕಾಲ ತಡೆಯಿರಿ! ಯಾವಾಗ ಒಬ್ಬ ವ್ಯಕ್ತಿಯು ದೇವತೆಗಳನ್ನೂ ವೇದಗಳನ್ನೂ ಗೋವುಗಳನ್ನೂ ಬ್ರಾಹ್ಮಣರನ್ನೂ ಸಾಧುಸಂತರನ್ನೂ ಧರ್ಮವನ್ನೂ ಕಡೆಗೆ ನನ್ನನ್ನೂ ದ್ವೇಷಿಸುತ್ತಾ ಈ ಎಲ್ಲರಿಗೂ ತೊಂದರೆ ಕೊಡುವನೋ, ಅವನು ಬಹುಬೇಗ ನಾಶಹೊಂದುತ್ತಾನೆ! ದೇವತೆಗಳೇ, ಯಾವಾಗ ದಾನವೇಂದ್ರನು ಶಾಂತಸ್ವಭಾವದ ಮಹಾತ್ಮನೂ ನಿರ್ವೈರನೂ ಆದ ತನ್ನ ಮಗ ಪ್ರಹ್ಲಾದನನ್ನೇ ಹಿಂಸಿಸುವನೋ, ಆಗ ಅವನನ್ನು ನಾನು ಸಂಹರಿಸುತ್ತೇನೆ. ಆದ್ದರಿಂದ ನೀವೀಗ ನಿಶ್ಚಿಂತರಾಗಿ ಹಿಂದಿರುಗಿ.”
ಪರಮಪ್ರಭುವು ಹೀಗೆ ಹೇಳಲು ದೇವತೆಗಳು ನಿಶ್ಚಿಂತರಾಗಿ, ಅಸುರನು ಹತನಾದನೆಂದೇ ಭಾವಿಸಿ ತಮ್ಮ ಲೋಕಗಳಿಗೆ ಹಿಂದಿರುಗಿದರು.
* * *
ಹಿರಣ್ಯಕಶಿಪುವಿಗೆ ಪ್ರಹ್ಲಾದನ ಬಳಿಕ, ಹ್ಲಾದ, ಅನುಹ್ಲಾದ, ಸಂಹ್ಲಾದ ಎಂಬ ಮೂವರು ಮಕ್ಕಳಾದರು. ಒಟ್ಟು ಅವನಿಗೆ ನಾಲ್ಕು ಮಕ್ಕಳಾದರು. ನಾಲ್ವರೂ ಸದ್ಗುಣಭರಿತರೂ ಶಕ್ತಿವಂತರೂ ಆಗಿದ್ದರು. ಅವರಲ್ಲಿ ಪ್ರಹ್ಲಾದನು ಅತ್ಯುತ್ತಮನಾಗಿದ್ದನು. ಅವನು ಎಲ್ಲಾ ಸದ್ಗುಣಗಳ ನಿಧಿಯಾಗಿದ್ದನಲ್ಲದೆ ದೇವೋತ್ತಮ ಪುರುಷನ ಪರಮಭಕ್ತನಾಗಿದ್ದನು. ಅವನಲ್ಲಿ ಶಮ, ದಮ, ಶೌಚ, ತಪ, ಆರ್ಜವ, ಜ್ಞಾನವಿಜ್ಞಾನಗಳಿಂದ ಕೂಡಿದ ಬ್ರಾಹ್ಮಣ್ಯವಿತ್ತು; ಅವನು ಸತ್ಯಸಂಧನೂ ಶೀಲಸಂಪನ್ನನೂ ಆಗಿದ್ದನು; ಇಂದ್ರಿಯಗಳನ್ನು ನಿಗ್ರಹಿಸಿ ಜಿತೇಂದ್ರಿಯನಾಗಿದ್ದನು; ಸಕಲ ಜೀವಿಗಳನ್ನೂ ತನ್ನಂತೆಯೇ ಕಾಣುತ್ತಾ ಎಲ್ಲರಿಗೂ ಬಹಳ ಒಳ್ಳೆಯ ಮಿತ್ರನಾಗಿದ್ದನು. ಮಹಾತ್ಮರ ವಿಷಯದಲ್ಲಿ ಅವನು ದಾಸನಂತಿದ್ದನು! ದೀನರ ವಿಷಯದಲ್ಲಿ ತಂದೆಯಂತೆ ವಾತ್ಸಲ್ಯಮಯಿಯಾಗಿದ್ದನು. ತನ್ನ ಸಮವಯಸ್ಕರಿಗೆ ಸಹೋದರನಂತಿದ್ದನು. ಗುರುಗಳನ್ನು ಅವನು ದೇವರಂತೆ ಕಾಣುತ್ತಿದ್ದನು. ಅವನು ತನ್ನಲ್ಲಿರುವ ವಿದ್ಯೆ, ಸೌಂದರ್ಯ, ಶ್ರೀಮಂತಿಕೆ, ಸ್ಥಾನಮಾನ, ಮೊದಲಾದ ವಿಷಯಗಳಲ್ಲಿ ಎಂದಿಗೂ ಅಹಂಕಾರ ತಾಳುತ್ತಿರಲಿಲ್ಲ. ಅವನು ಅಸುರಕುಲದಲ್ಲಿ ಹುಟ್ಟಿದ್ದರೂ ಉದ್ವಿಗ್ನಚಿತ್ತನಾಗಿರದೇ ಸದಾ ಶಾಂತಮನಸ್ಕನಾಗಿರುತ್ತಿದ್ದನು. ಅವನಿಗೆ ಯಾವುದೇ ಲೌಕಿಕ ವಿಷಯಗಳಲ್ಲಿ ಆಸಕ್ತಿಯಿರಲಿಲ್ಲ; ಕಷ್ಟಕರ ಸಂದರ್ಭವೊದಗಿದರೆ ಅವನು ಕಂಗೆಡುತ್ತಿರಲಿಲ್ಲ. ಐಹಿಕ ಸುಖಗಳನ್ನು ನೀಡುವ ಕಾಮ್ಯಕರ್ಮಗಳಲ್ಲೂ ಅವನಿಗೆ ಆಸಕ್ತಿಯಿರಲಿಲ್ಲ. ಅವನು ತನ್ನ ಮನಸ್ಸನ್ನು ಗೆದ್ದು ಸದಾ ಪ್ರಶಾಂತನಾಗಿರುತ್ತಿದ್ದನು.
ಆಹಾ…! ಪ್ರಹ್ಲಾದನ ಕಲ್ಯಾಣಗುಣಗಳನ್ನೆಂತು ವರ್ಣಿಸುವುದು?! ಹುಡುಕಿದಷ್ಟೂ ವಿಧವಿಧವಾದ ರತ್ನಗಳು ದೊರೆಯುವ ರತ್ನಾಕರವೇ ಆಗಿರುವ ಸಾಗರದಂತೆ, ಬಾಲಪ್ರಹ್ಲಾದನು ಗುಣರತ್ನಗಳ ಅದ್ಭುತ ಆಗರನಾಗಿದ್ದನು! ಅವನಿಗೆ ಶ್ರೀಕೃಷ್ಣನಲ್ಲಿ ಅದೆಂಥ ಭಕ್ತಿಯಿತ್ತು?! ಕರುವಿಗೆ ಹಸುವಿನಲ್ಲಿರುವಂತೆ, ಮಗುವಿಗೆ ತಾಯಿಯಲ್ಲಿರುವಂತೆ, ಅವನ ಭಕ್ತಿ, ಸಹಜ ಪ್ರೀತಿಯೇ ಆಗಿತ್ತು! ಅವನೊಬ್ಬ ಪುಟ್ಟ ಬಾಲಕನಾಗಿದ್ದರೂ ಆಟಿಕೆಗಳನ್ನೆಲ್ಲಾ ತೊರೆದು ಶ್ರೀಕೃಷ್ಣನನ್ನೇ ಧ್ಯಾನಿಸುತ್ತಾ ಅವನಲ್ಲೇ ಮನಸ್ಸನ್ನು ಮುಳುಗಿಸಿಬಿಡುತ್ತಿದ್ದನು. ಕೆಲವೊಮ್ಮೆ ಜಡನಂತೆ ಕುಳಿತುಬಿಡುತ್ತಿದ್ದನು. ಕೃಷ್ಣನೆಂಬ ಗ್ರಹ ಹಿಡಿದವನಂತೆ ಅವನು ಮೈಮರೆತು, ಜಗತ್ತಿನ ಪರಿವೆಯೇ ಇಲ್ಲದವನಂತೆ ಇದ್ದುಬಿಡುತ್ತಿದ್ದನು! ಅವನು ಸದಾ ಗೋವಿಂದನ ಆಲಿಂಗನದಲ್ಲಿದ್ದಂತೆ ಭಾವಿಸಿ, ಕೂರುವುದಾಗಲೀ, ನಡೆಯುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ, ಮಲಗುವುದಾಗಲೀ, ಮಾತನಾಡುವುದಾಗಲೀ ತಿಳಿಯುತ್ತಲೇ ಇರಲಿಲ್ಲ. ಈ ದಿನನಿತ್ಯದ ಚಟುವಟಿಕೆಗಳೆಲ್ಲಾ ಅರಿವಿಗೇ ಬರದೇ ತಾವೇ ತಾವಾಗಿ ನಡೆಯುತ್ತಿದ್ದವು! ಅವನು ಕೆಲವೊಮ್ಮೆ ಶ್ರೀಕೃಷ್ಣನ ವಿರಹವನ್ನನುಭವಿಸುತ್ತಾ ಅತ್ತುಬಿಡುತ್ತಿದ್ದನು. ಇನ್ನು ಕೆಲವೊಮ್ಮೆ, ಶ್ರೀಕೃಷ್ಣನೇ ಸನಿಹದಲ್ಲಿರುವನೆಂಬ ಭಾವವುಂಟಾಗಿ ಜೋರಾಗಿ ನಗುತ್ತಿದ್ದನು! ಕೆಲವೊಮ್ಮೆ ಕೃಷ್ಣನನ್ನು ನೆನೆ ನೆನೆದು ಹಾಡುತ್ತಿದ್ದನು! ಕೆಲವೊಮ್ಮೆ ಬಹಳ ಭಾವುಕನಾಗಿ ಗದ್ಗದಿತ ಕಂಠದಿಂದ `ಕೃಷ್ಣ…! ನನ್ನ ಕೃಷ್ಣ!’ ಎಂದು ಉದ್ಗರಿಸುತ್ತಿದ್ದನು! ಕೆಲವೊಮ್ಮೆ, ಹರಿಯು ಬರುತ್ತಿರುವನೆಂಬ ಭಾವನೆಯಿಂದ, ಲಜ್ಜೆಯಿಲ್ಲದೇ ಕುಣಿಕುಣಿದಾಡುತ್ತಿದ್ದನು. ಒಮ್ಮೊಮ್ಮೆ, ಹರಿಯ ಸ್ಪರ್ಶವನ್ನು ಅನುಭವಿಸಿ ಅತ್ಯಂತ ಪುಳಕಿತನಾಗುತ್ತಾ, ಪ್ರೇಮಾನಂದದಲ್ಲಿ, ಅರ್ಧತೆರೆದ ಕಂಗಳಿಂದ ಜಲಬಿಂದುಗಳನ್ನು ಸುರಿಸುತ್ತಿದ್ದನು. ಕೆಲವೊಮ್ಮೆ, ಹರಿಯ ಧ್ಯಾನದಲ್ಲಿ ತನ್ಮಯನಾಗಿ, ತಾನೂ ಹರಿಯಂತೆಯೇ ವರ್ತಿಸುತ್ತಿದ್ದನು!
ಹೀಗೆ ಪ್ರಹ್ಲಾದನು, ಶೈಶವಾವಸ್ಥೆಯಲ್ಲಿದ್ದಾಗಲೇ ನಾರದರಿಂದ ಪ್ರೇರಿತರಾಗಿ, ಬಾಲ್ಯದಲ್ಲೇ ಪರಮಭಾಗವತನಾಗಿ ಪರಮಾನಂದವನ್ನು ಅನುಭವಿಸಿದನು. ಅವನು ಸದಾ ಆನಂದಮಯ ಸ್ಥಿತಿಯಲ್ಲೇ ಇರುತ್ತಿರಲು, ಅವನನ್ನು ನೋಡಿದ ಕೂಡಲೇ ಯಾರಿಗಾದರೂ ಪಾಪಪರಿಹಾರವಾಗಿ ಸಂತೋಷವಾಗುತ್ತಿತ್ತು.
* * *
ಪುಟ್ಟ ಪ್ರಹ್ಲಾದನಿಗೆ ಐದು ವರ್ಷತುಂಬಿತು. ದೈತ್ಯ ಚಕ್ರವರ್ತಿ ಹಿರಣ್ಯಕಶಿಪುವು ಅವನಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂದು ನಿರ್ಧರಿಸಿದನು; ಅವನಿಗೆ ಉತ್ತಮ ಗುರುವಾಗಬಲ್ಲ ವ್ಯಕ್ತಿಯ ಬಗ್ಗೆ ಆಲೋಚಿಸಿದನು. ಈ ಸಮಯದಲ್ಲಿ ದೈತ್ಯ ಗುರು ಶುಕ್ರಾಚಾರ್ಯರು ತಪಶ್ಚೆರ್ಯೆಗೆ ಹೋಗಿದ್ದರು. ಆಗ ಹಿರಣ್ಯಕಶಿಪುವಿಗೆ ಹೊಳೆದದ್ದು ಷಂಡ ಮತ್ತು ಅಮರ್ಕರೆಂಬ ಪಂಡಿತರು! ಅವರಿಬ್ಬರೂ ದೈತ್ಯಗುರು ಶುಕ್ರಾಚಾರ್ಯರ ಮಕ್ಕಳು; ಅವರು ಹಿರಣ್ಯಕಶಿಪುವಿನ ನಿವಾಸದ ಬಳಿಯೇ ವಾಸಿಸುತ್ತಿದ್ದರು. ಬಾಲಪ್ರಹ್ಲಾದನು ಅಧ್ಯಾತ್ಮ ವಿದ್ಯೆಯಲ್ಲೇ ಪ್ರವೀಣನಾಗಿದ್ದನು. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ ಅದನ್ನೇ ತಿಳಿದಿದ್ದ ಅವನಿಗೆ ಇನ್ನಾವ ವಿದ್ಯೆಯ ಅಗತ್ಯವೂ ಇರಲಿಲ್ಲ! ಆದರೆ ಅದನ್ನರಿಯದ ದೈತ್ಯರಾಜನು ಅವನನ್ನು ವಿದ್ಯಾಭ್ಯಾಸಕ್ಕಾಗಿ ಷಂಡಾಮರ್ಕರ ಗುರುಕುಲಕ್ಕೆ ಕಳಿಸಿದನು.
ಗುರುಕುಲದಲ್ಲಿ ಇತರ ಅನೇಕ ಅಸುರಬಾಲಕರೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಗುರುಗಳು ಪ್ರಹ್ಲಾದನಿಗೆ ರಾಜಕೀಯವೇ ಸೇರಿದಂತೆ ಅನೇಕ ವಿಷಯಗಳನ್ನು ಬೋಧಿಸಿದರು. ಪ್ರಹ್ಲಾದನು ಅವನ್ನು ಶ್ರದ್ಧೆಯಿಂದ ಕೇಳಿ ಹಾಗೆಯೇ ಒಪ್ಪಿಸುತ್ತಿದ್ದನು; ಆದರೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುತ್ತಿದ್ದ ಅವನಿಗೆ ರಾಜಕೀಯದ ಭೇದಭಾವ ಪ್ರಜ್ಞೆ ರುಚಿಸಲಿಲ್ಲ.
ಒಂದು ದಿನ, ಹಿರಣ್ಯಕಶಿಪುವಿಗೆ ಮಗನನ್ನು ನೋಡಬೇಕೆನಿಸಿ ಅವನಿಗಾಗಿ ಹೇಳಿಕಳಿಸಿದನು. ಅಂತೆಯೇ ಷಂಡಾಮರ್ಕರು ಅವನನ್ನು ಕರೆತರಲು, ಬಹಳ ಆನಂದಗೊಂಡ ಹಿರಣ್ಯಕಶಿಪುವು ಅವನನ್ನು ಅಪ್ಪಿ ಮುದ್ದಾಡುತ್ತಾ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ ಅವನನ್ನು ಪ್ರಶ್ನಿಸಿದನು, “ಕಂದಾ, ನೀನೀಗ ಅನೇಕ ವಿಚಾರಗಳನ್ನು ಕಲಿತಿರುವೆಯಷ್ಟೆ? ಅವುಗಳಲ್ಲಿ ಅತ್ಯುತ್ತಮವಾದುದನ್ನು ಯಾವುದಾದರೂ ಹೇಳು!”
ಪ್ರಹ್ಲಾದನು ಹೇಳಿದನು, “ತಂದೆಯೇ, ದಾನವ ಚಕ್ರವರ್ತಿಯೇ! ಸಂಸಾರದಲ್ಲಿರುವ ದೇಹಧಾರಿಗಳಿಗೆ ಸದಾ ಉದ್ವಿಗ್ನತೆಯಿರುತ್ತದೆ! ಆದ್ದರಿಂದ, ಅಂಧಕಾರದ ಬಾವಿಯಂತಿರುವ ಈ ಸಂಸಾರ ಅಥವಾ ಗೃಹವನ್ನು ತ್ಯಜಿಸಿ, ವನಕ್ಕೆ ತೆರಳಿ ಶ್ರೀಹರಿಯನ್ನು ಆಶ್ರಯಿಸಬೇಕು. ಇದೇ ಬಹಳ ಶ್ರೇಷ್ಠವೆಂದು ನನ್ನ ಭಾವನೆ.”
ಗೃಹ ಅಥವಾ ಸಂಸಾರವೆಂಬ ಕತ್ತಲಿನ ಮೋಹವನ್ನು ತ್ಯಜಿಸಿ, ವನವೆಂಬ ಪ್ರಶಾಂತ ಮನೋಸ್ಥಿತಿಯಲ್ಲಿ ನೆಲೆಸಿ, ಆತ್ಮಸಂತೋಷ ಕೊಡುವ ಶ್ರೀಹರಿಯನ್ನು ಧ್ಯಾನಿಸಬೇಕೆಂಬ ತತ್ತ್ವವನ್ನು ಪ್ರಹ್ಲಾದ ಬಹಳ ಸೊಗಸಾಗಿ ಹೇಳಿದ. ಆದರೆ ಧನಾಧಿಕಾರಗಳ ಮೋಹದಲ್ಲೇ ಮುಳುಗಿದ್ದ ಹಿರಣ್ಯಕನಿಗೆ ಇದು ಹೇಗೆ ಅರ್ಥವಾದೀತು?! ಮೇಲಾಗಿ ತನ್ನ ವೈರಿಯ ಪಕ್ಷವಹಿಸಿದ್ದ ಮಾತು ಕೇಳಿ ಅವನಿಗೆ ಸ್ವಲ್ಪ ಕೋಪವೂ ಉಂಟಾಯಿತು. ಆದರೆ ಯಾರೋ ಮುಗ್ಧ ಬಾಲಕನ ಮನಸ್ಸು ತಿರುಗಿಸಿದ್ದಾರೆಂದು ಯೋಚಿಸಿ ಕೋಪ ತಡೆದು ಜೋರಾಗಿ ನಗುತ್ತಾ ಹೇಳಿದನು, “ಗುರುಪುತ್ರರೇ! ಏನಿದು? ಇದನ್ನೇ ನೀವು ಕಲಿಸಿದ್ದು?”
“ಪ್ರಭು! ನಾ… ನಾವು…” ಷಂಡಾಮರ್ಕರು ತೊದಲಿದರು.
“ಯಾರೋ ವೈಷ್ಣವರು ವೇಷಾಂತರದಲ್ಲಿ ಬಂದು ಅರಿಯದ ಬಾಲಕನಿಗೆ ದುರ್ಬೋಧೆ ಮಾಡಿರಬೇಕು! ಇವನನ್ನು ಗುರುಕುಲದಲ್ಲಿ ಎಚ್ಚರಿಕೆಯಿಂದ ನೋಡಿಕೊಳ್ಳಿ! ಪುನಃ ಇವನ ಬುದ್ಧಿಯು ಹೀಗೆ ವಕ್ರವಾಗಬಾರದು!”
ಹೀಗೆ ಹೇಳಿ ದೈತ್ಯರಾಜನು ಎದ್ದು ಅಸಮಾಧಾನದಿಂದ ಹೊರಟುಹೋದ!
ಷಂಡಾಮರ್ಕರು ಪ್ರಹ್ಲಾದನನ್ನು ಪುನಃ ಗುರುಕುಲಕ್ಕೆ ಕರೆದೊಯ್ದು ಪ್ರೀತಿಯಿಂದ ಕೇಳಿದರು, “ಮಗು, ಪ್ರಹ್ಲಾದ! ನಿನಗೆ ಒಳ್ಳೆಯದಾಗಲಿ! ಇಲ್ಲಿ ನೋಡು! ನಿನ್ನಂತೆಯೇ ಇಲ್ಲಿ ಅನೇಕ ಹುಡುಗರಿದ್ದಾರೆ. ಆದರೆ ಅವರಾರೂ ನಿನ್ನಂತೆ ಮಾತನಾಡುವುದಿಲ್ಲ. ನೀನು ಎಲ್ಲಿಂದ ಇವನ್ನೆಲ್ಲಾ ಕಲಿತೆ? ಏಕೆ ನಿನ್ನ ಬುದ್ಧಿಯು ಹೀಗೆ ಬದಲಾಯಿತು? ನಿಜವನ್ನು ನುಡಿ! ಸುಳ್ಳಾಡಬೇಡ! ಈ ಬುದ್ಧಿಯ ವ್ಯತ್ಯಾಸವು ನಿನ್ನಲ್ಲೇ ಆಯಿತೋ ಅಥವಾ ಬೇರೊಬ್ಬರಿಂದಾಯಿತೋ? ಹೇಳು!”
ಪ್ರಹ್ಲಾದನು ನಸುನಗುತ್ತಾ ಕೈಜೋಡಿಸಿಕೊಂಡು ಹೇಳಿದನು, “ಮೊದಲಿಗೆ, ಯಾರ ಮಾಯೆಯ ಪ್ರಭಾವದಿಂದ ಬುದ್ಧಿಯು ವಿಮೋಹಿತಗೊಂಡು, `ಇವನು ನನ್ನವನು’ `ಅವನು ಬೇರೊಬ್ಬನು’ ಎಂಬ ಭೇದಭಾವ ಉಂಟಾಗುವುದೋ, ಆ ಪರಮ ಪ್ರಭುವಿಗೆ ನಮಸ್ಕಾರ! ಗುರುಗಳೇ, ಯಾವಾಗ ಶ್ರೀಹರಿಯು ಮನುಷ್ಯನಲ್ಲಿ ಪ್ರಸನ್ನನಾಗುವನೋ, ಆಗ ಅವನಲ್ಲಿ ಈ ಭೇದಭಾವದ ಪಶುಬುದ್ಧಿಯು ಹೋಗಿ, ಎಲ್ಲರೂ ಅವನ ಸೇವಕರೇ ಎಂಬ ಏಕತ್ವಭಾವ ನೆಲೆಗೊಳ್ಳುತ್ತದೆ. ಯಾರು ಜನರಲ್ಲಿ ತಮ್ಮವರು ಪರರು ಎಂಬ ಭೇದ ಬುದ್ಧಿ ತೋರುವರೋ, ಅವರು ಎಲ್ಲರಲ್ಲೂ ಇರುವ ಪರಮಾತ್ಮನನ್ನು ಅರಿಯಲಾರರು! ದೊಡ್ಡ ವೇದಾಂತಿಗಳಲ್ಲದೇ ಬ್ರಹ್ಮದೇವನಂಥವರೂ ಈ ಭೇದಭಾವದಲ್ಲಿ ಸಿಕ್ಕಿಕೊಳ್ಳುತ್ತಾರೆ! ಇಂಥ ಮಾಯೆಯನ್ನುಂಟುಮಾಡಿರುವ ಆ ಪರಮಾತ್ಮನೇ ನನ್ನ ಮನಸ್ಸನ್ನು ಅವನೆಡೆಗೆ ಸೆಳೆಯುತ್ತಿದ್ದಾನೆ! ಗುರುಗಳೇ, ಕಬ್ಬಿಣದ ಚೂರು ಆಯಸ್ಕಾಂತಕ್ಕೆ ತಾನಾಗಿಯೇ ಆಕರ್ಷಿತವಾಗುವಂತೆ, ನನ್ನ ಮನಸ್ಸು ಚಕ್ರಪಾಣಿಯಾದ ಶ್ರೀಹರಿಯೆಡೆಗೆ ಸ್ವಾಭಾವಿಕವಾಗಿಯೇ ಆಕರ್ಷಿತವಾಗುತ್ತಿದೆ.”
ಪ್ರಹ್ಲಾದನ ತತ್ತ್ವಭರಿತ ಮಾತುಗಳು ಆ ರಾಕ್ಷಸರ ಸೇವಕರಿಗೆಲ್ಲಿ ಅರ್ಥವಾಗಬೇಕು? ಹಾವಿಗೆ ಹಾಲೆರೆದರೆ ಅದರ ವಿಷ ವರ್ಧಿಸುವಂತೆ, ಅಮೃತೋಪಮವಾದ ಪ್ರಹ್ಲಾದನ ಮಾತುಗಳನ್ನು ಕೇಳಿ ಷಂಡಾಮರ್ಕರು ಬಹಳ ಕ್ರುದ್ಧರಾದರು!
“ಏ! ಯಾರಲ್ಲಿ? ಕೋಲನ್ನು ತನ್ನಿರಿ!” ಷಂಡಾಮರ್ಕರು ಕೂಗಿದರು! “ಈ ಪ್ರಹ್ಲಾದನು ನಮ್ಮ ಹೆಸರನ್ನೂ ಕೀರ್ತಿಯನ್ನೂ ಹಾಳುಮಾಡುತ್ತಿದ್ದಾನೆ! ದುರ್ಬುದ್ಧಿಯವನಾದ ಇವನು ನಮ್ಮ ದೈತ್ಯಕುಲಕ್ಕೇ ಒಂದು ಕೊಳ್ಳಿಯಂತಿದ್ದಾನೆ! ಇವನು ಸಾಮ, ದಾನ, ಭೇದೋಪಾಯಗಳಿಗೆ ಬಗ್ಗುವವನಲ್ಲ! ಇವನಿಗೆ ದಂಡೋಪಾಯವೇ ಸರಿ! ನಾಲ್ಕೇಟು ಬಾರಿಸಿದರೆ ದಾರಿಗೆ ಬರುತ್ತಾನೆ! ದೈತ್ಯಕುಲವೆಂಬ ಚಂದನವನಕ್ಕೆ ಇವನೊಂದು ಮುಳ್ಳುಕಂಟಿಯಂತಿದ್ದಾನೆ! ದೈತ್ಯರೆಂಬ ಚಂದನ ತರುಗಳಿಗೆ ಆ ವಿಷ್ಣುವು ಕೊಡಲಿಯಂತಿದ್ದರೆ ಈ ಪ್ರಹ್ಲಾದ ಅದರ ಹಿಡಿಯಂತಿದ್ದಾನೆ! ಇವನನ್ನು ಸುಮ್ಮನೆ ಬಿಡಬಾರದು! ಇವನಿಗೆ ಬಡಿದು ಬುದ್ಧಿ ಕಲಿಸಬೇಕು!”
ಹೀಗೆ ಷಂಡಾಮರ್ಕರು ಪ್ರಹ್ಲಾದನನ್ನು ಬೈಗುಳ, ಹೊಡೆತಗಳಿಂದ ತಿದ್ದಲು ಯತ್ನಿಸಿದರು! ಅವನನ್ನು ಚೆನ್ನಾಗಿ ಹೆದರಿಸಿದರು! ಅನಂತರ ಅವನಿಗೆ ಧರ್ಮಾರ್ಥಕಾಮಗಳ ಬಗ್ಗೆ ಪಾಠ ಮಾಡಿದರು; ಅನಂತರ ಚತುರೋಪಾಯಗಳು, ರಾಜಕೀಯ ವಿಚಾರಗಳು, ಮೊದಲಾಗಿ ಪಾಠ ಮಾಡಿದರು.
ಕೆಲದಿನಗಳ ಬಳಿಕ, ಷಂಡಾಮರ್ಕರಿಗೆ ಪ್ರಹ್ಲಾದನು ಸಾಕಷ್ಟು ಕಲಿತಿದ್ದಾನೆ ಎನಿಸಿತು; ಈಗ ಅವನು ತಂದೆಯನ್ನು ನೋಡುವುದು ಸೂಕ್ತವೆನಿಸಿ ಅವನನ್ನು ದೈತ್ಯರಾಜನ ಬಳಿಗೆ ಕರೆದೊಯ್ದರು. ಪ್ರಹ್ಲಾದನು ಭಕ್ತಿಯಿಂದ ತಂದೆಯ ಪಾದಗಳಿಗೆ ಅಭಿವಾದನ ಮಾಡಿದನು. ಇದರಿಂದ ಹಿರಣ್ಯಕಶಿಪುವು ಬಹಳ ಪ್ರೀತನಾಗಿ, “ಏಳು ಮಗು! ಏಳು!” ಎಂದೆನ್ನುತ್ತಾ ಪ್ರಹ್ಲಾದನನ್ನು ಹಿಡಿದೆತ್ತಿ ಪ್ರೀತಿಯಿಂದ ಆಲಿಂಗಿಸಿಕೊಂಡು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅವನ ತಲೆಯನ್ನು ನೇವರಿಸಿ ಆಘ್ರಾಣಿಸುತ್ತಾ, ತನ್ನ ಆನಂದಬಾಷ್ಪಗಳಿಂದ ತೋಯಿಸುತ್ತಾ, “ಕಂದಾ! ಪ್ರಹ್ಲಾದ! ನೀನು ನಿನ್ನ ಗುರುಗಳ ಬಳಿ ಬಹಳ ಕಾಲ ಅಭ್ಯಾಸ ಮಾಡಿರುವೆಯಷ್ಟೇ! ಈಗ ನಿನಗೆ ಅತ್ಯುತ್ತಮವಾದ ವಿಚಾರ ಯಾವುದೆಂದು ತಿಳಿದಿರುತ್ತದೆ! ಅಂಥ ಒಂದು ಮುದ್ದಾದ ಮಾತನ್ನು ಹೇಳಪ್ಪ!” ಎಂದನು.
ಪ್ರಹ್ಲಾದನು ಮುಗುಳ್ನಗುತ್ತಾ ಹೇಳಿದನು!
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ।
ಇತಿ ಪುಂಸಾರ್ಪಿತಾ ವಿಷ್ಣೌ ಭಕ್ತಿಶ್ಚೇನ್ನವಲಕ್ಷಣಾ
ಕ್ರಿಯೇತ ಭಗವತ್ಯದ್ಧಾ ತನ್ಮನ್ಯೇಽಧೀತಮುತ್ತಮಮ್ ॥
“ಶ್ರೀಹರಿಯ ವಿಷಯವಾಗಿ ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆಯೆಂಬ ಒಂಬತ್ತು ವಿಧದ ಭಕ್ತಿಯನ್ನು ಯಾರು ಆಚರಿಸುವರೋ ಅವರೇ ಅತ್ಯಂತ ಜ್ಞಾನಿಗಳು ಎಂದು ಭಾವಿಸುತ್ತೇನೆ.”
ಈ ಮಾತುಗಳನ್ನು ಕೇಳಿ ಹಿರಣ್ಯಕಶಿಪುವು ಅತ್ಯಂತ ಕ್ರುದ್ಧನಾದನು! ಅವನ ಕಣ್ಣುಗಳು ಕೆಂಪಾಗಿ ಅಧರಗಳು ಅದುರಲು ಅವನು ಷಂಡಾಮರ್ಕರ ಕಡೆಗೆ ತಿರುಗಿ, “ನನ್ನ ಮಗನ ಬಾಯಲ್ಲಿ ನನ್ನ ಕಡುವೈರಿಯ ಹೆಸರು! ಎಲವೋ ಬ್ರಹ್ಮಬಂಧುಗಳಾ…! ಏನಿದು? ನನ್ನ ಮಾತನ್ನು ಅನಾದರಿಸಿ ನನ್ನ ವೈರಿಯ ಪಕ್ಷ ಸೇರಿ ಅಪಾರವಾದ ಪಾಠ ಹೇಳಿಕೊಟ್ಟಿರುವಿರಿ! ಈ ಪ್ರಪಂಚದಲ್ಲಿ ಅನೇಕ ಪಾಪಿಗಳಿರುತ್ತಾರೆ! ಕ್ರಮೇಣ ಅವರಲ್ಲಿ ಪಾಪಗಳು ರೋಗಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ! ಅಂತೆಯೇ ಅನೇಕ ವೈರಿಗಳು ಸ್ನೇಹಿತರಂತೆ, ಹಿತೈಷಿಗಳಂತೆ ವೇಷ ಮರೆಸಿಕೊಂಡಿರುತ್ತಾರೆ! ಕ್ರಮೇಣ ಅವರ ನಿಜಬಣ್ಣ ಬಯಲಾಗುತ್ತದೆ! ನೀವೂ ನನ್ನ ಹಿತೈಷಿಗಳ ರೂಪದಲ್ಲಿರುವ ನನ್ನ ಶತ್ರುಗಳು!” ಎಂದು ಗುಡುಗಿದನು!
ಗಡಗಡನೆ ನಡುಗುತ್ತಿದ್ದ ಷಂಡಾಮರ್ಕರು ಅಂಗಲಾಚಿ ಬಿನ್ನವಿಸಿಕೊಂಡರು, “ಪ್ರಭು! ದೈತ್ಯೇಂದ್ರ! ಇದು ನಾವು ಹೇಳಿಕೊಟ್ಟಿದ್ದಲ್ಲ ಪ್ರಭೂ ನಾವು ಹೇಳಿಕೊಟ್ಟಿದ್ದಲ್ಲ…! ಅಥವಾ ಬೇರೊಬ್ಬರೂ ಕಲಿಸಿದ್ದಲ್ಲ ಪ್ರಭೂ…! ನಿನ್ನ ಮಗನು ಹೀಗೆಯೇ ಹೇಳುತ್ತಿರುತ್ತಾನೆ…! ನಾವು ಗದರಿಸಿದೆವು… ಬೆತ್ತ ತೋರಿಸಿ ಹೆದರಿಸಿದೆವು…! ಏನೂ ಪ್ರಯೋಜನವಾಗಲಿಲ್ಲ! ಇದು ಇವನಿಗೆ ಸಹಜವಾಗಿ ಅಂಟಿಕೊಂಡುಬಿಟ್ಟಿದೆ ಪ್ರಭು! ನಾವೇನು ಮಾಡೋಣ? ಸುಮ್ಮನೆ ನಮ್ಮನ್ನು ನಿಂದಿಸಬೇಡ ಪ್ರಭು!”
ಗುರುಗಳೀರ್ವರೂ ಹೀಗೆ ಬಿನ್ನವಿಸಿಕೊಳ್ಳಲು ಹಿರಣ್ಯಕನು ಪುನಃ ಪ್ರಹ್ಲಾದನ ಕಡೆಗೆ ತಿರುಗಿ, “ಎಲವೋ ದುರ್ಮತಿಯೇ! ಈ ಪಾಠವು ನಿನಗೆ ಗುರುಗಳಿಂದ ಬಂದಿಲ್ಲವಾದರೆ ಇನ್ನೆಲ್ಲಿಂದ ಬಂದಿತೋ?!” ಎಂದು ಗರ್ಜಿಸಿದನು!
“ತಂದೆಯೇ!” ಪ್ರಹ್ಲಾದನು ವಿನಮ್ರವಾಗಿ ನುಡಿದನು, “ಸದಾ ಗೃಹಾದಿ ಭೋಗಗಳಲ್ಲೇ ಆಸಕ್ತರಾದವರಿಗೆ ಇತರರು ಬೋಧಿಸುವುದರಿಂದ ಕೃಷ್ಣಪ್ರಜ್ಞೆ ಉಂಟಾಗುವುದಿಲ್ಲ; ಅಥವಾ ಅಂಥವರು ತಾವಾಗಿಯೇ ಆಗಲೀ ಈ ಭಕ್ತಿಯನ್ನು ಬೆಳೆಸಿಕೊಳ್ಳುವುದಿಲ್ಲ. ಅಂಥವರು ಸುಮ್ಮನೆ ಚರ್ವಿತ ಚರ್ವಣ (ಅಗಿಯುವುದನ್ನೇ ಅಗಿಯುವುದು) ವೆಂಬಂತೆ, ಜನ್ಮಜನ್ಮಾಂತರಗಳಲ್ಲಿ ಸಿಗುವ ಪ್ರಾಪಂಚಿಕ ಸುಖವನ್ನೇ ಮತ್ತೆ ಮತ್ತೆ ಅನುಭವಿಸುತ್ತಿರುತ್ತಾರೆ. ಇಂಥವರು ತಮ್ಮ ಇಂದ್ರಿಯಗಳಿಂದ ಸದಾ ಹೊರಗಿನ ಭೋಗ ಪ್ರಪಂಚವನ್ನೇ ನೋಡುತ್ತಾರಲ್ಲದೇ ಆತ್ಮಜ್ಞಾನಕ್ಕಾಗಿ ಅಂತರ್ಮುಖಿಗಳಾಗುವುದಿಲ್ಲ; ವಿಷ್ಣುವಿನ ಬಳಿಗೆ ಹಿಂದಿರುಗುವುದೇ ಜೀವನದ ಪರಮಾರ್ಥವೆಂದು ಅರಿಯದೇ, ದುರಾಶೆಯಿಂದ ಕೂಡಿ, ಅಂಧರು ಇತರ ಅಂಧರಿಂದ ದಾರಿತಪ್ಪುವಂತೆ ಸಂಸಾರದ ಹಗ್ಗಗಳಿಂದ ಇವರು ಬಂಧಿತರಾಗುತ್ತಾರೆ! ಮಹಾತ್ಮರಾದ ಹರಿಭಕ್ತರ ಪಾದಧೂಳಿಯ ಸ್ಪರ್ಶವಾಗುವವರೆಗೂ ಇವರಿಗೆ ಆ ಶ್ರೀಹರಿಯಲ್ಲಿ ಭಕ್ತಿಯುಂಟಾಗುವುದಿಲ್ಲ!”
ಇಷ್ಟು ಹೇಳಿ ಪ್ರಹ್ಲಾದನು ಸುಮ್ಮನಾದನು. ಶ್ರೀಹರಿಯ ಬದ್ಧದ್ವೇಷಿಯಾಗಿದ್ದ ಹಿರಣ್ಯಕಶಿಪುವು ಯಾವುದೇ ಆಧ್ಯಾತ್ಮಿಕ ವಿಚಾರಕ್ಕೂ ಕುರುಡಾಗಿದ್ದನು.
“ಎಲವೋ ಅಧಮಾಧಮ!!” ಹಿರಣ್ಯಕಶಿಪುವು ಮಹಾ ಆಕ್ರೋಶದಿಂದ ತನ್ನ ಕಂಗಳನ್ನು ತಾಮ್ರದ ಉಂಡೆಗಳಂತೆ ಕೆಂಪಾಗಿಸಿ ತಿರುಗಿಸುತ್ತಾ ಪ್ರಹ್ಲಾದನನ್ನು ತನ್ನ ತೊಡೆಯಿಂದ ದೂರಕ್ಕೆ ನೂಕಿ ಕಿರುಚಿದ!” ಎಲೈ ರಾಕ್ಷಸ ಸೈನಿಕರೇ! ಯಾರಲ್ಲಿ! ಬನ್ನಿ! ಈ ಪಾಪಿ ಪ್ರಹ್ಲಾದನನ್ನು ಈಗಿಂದೀಗಲೇ ಕೊಂದುಹಾಕಿ!!”
ಕೂಡಲೇ ಕೆಲವು ರಾಕ್ಷಸ ಸೈನಿಕರು ಓಡಿ ಬಂದರು!
“ಸೆಳೆದೊಯ್ಯಿರಿ ಈ ದುರಾತ್ಮನನ್ನು!” ಹಿರಣ್ಯಕಶಿಪುವು ಅಬ್ಬರಿಸಿದನು, “ತನ್ನ ಚಿಕ್ಕಪ್ಪನನ್ನೇ ಕೊಂದ ಆ ವಿಷ್ಣುವಿಗೆ ಇವನು ದಾಸನಂತೆ ಇವನೂ ನನ್ನ ವೈರಿಯೇ! ಇವನೂ ನನ್ನ ಭ್ರಾತೃಹಂತಕನೇ! ಅಪ್ಪ ಅಮ್ಮಂದಿರನ್ನು ಕ್ಷಣಕಾಲವೂ ಬಿಟ್ಟಿರಲಾರದ ಪುಟ್ಟ ವಯಸ್ಸಿನಲ್ಲೇ ಇವನು ನಮ್ಮನ್ನು ಬಿಟ್ಟು ಆ ಹರಿಯನ್ನು ಹಿಡಿದುಕೊಂಡಿದ್ದಾನೆ! ಇನ್ನು ನಾಳೆ ಇವನು ಆ ಹರಿಗೂ ನಿಷ್ಠೆಯಿಂದಿರಲಾರ! ಬೇರೊಬ್ಬರ ಮಗನಾದರೂ, ಹಿತಕರವಾಗಿದ್ದರೆ ಅಂಥವನನ್ನು ಔಷಧಿಯಂತೆ ಒಬ್ಬನು ತನ್ನ ಬಳಿ ಇರಿಸಿಕೊಳ್ಳಬಹುದು; ಆದರೆ ಅಹಿತಕರನಾಗಿದ್ದರೆ ಸ್ವಂತ ಮಗನನ್ನೂ ಒಂದು ಕಾಯಿಲೆಯಂತೆ ತ್ಯಜಿಸಬೇಕು! ಒಂದು ಕಾಲೋ ಅಥವಾ ಕೈಯೋ ರೋಗಗ್ರಸ್ತನಾಗಿದ್ದರೆ, ರೋಗವು ಹರಡುವುದನ್ನು ತಪ್ಪಿಸಲು ಆ ಅಂಗವನ್ನೇ ಕೆಲವೊಮ್ಮೆ ಕತ್ತರಿಸಬೇಕಾಗುತ್ತದೆ! ಆಗ ಉಳಿದ ದೇಹವು ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಇವನನ್ನು ಸೆಳೆದೊಯ್ದು ಕೊಲ್ಲಿರಿ! ತಪಸ್ವಿಗಳಿಗೆ ಅವರ ಇಂದ್ರಿಯಗಳೇ ಶತ್ರುಗಳಾಗಿರುವಂತೆ, ಈ ನನ್ನ ಪುತ್ರನು ಮಿತ್ರರೂಪದಲ್ಲಿರುವ ಶತ್ರುವಾಗಿದ್ದಾನೆ! ಇವನು ತಿನ್ನುವಾಗಲಾಗಲೀ, ಮಲಗಿರುವಾಗಲಾಗಲೀ, ಕುಳಿತಿರುವಾಗಲಾಗಲೀ, ಸರ್ವವಿಧಗಳಿಂದಲೂ ಇವನನ್ನು ಕೊಲ್ಲಬೇಕು!”
ರಾಕ್ಷಸ ಸೈನಿಕರು ಬಾಲ ಪ್ರಹ್ಲಾದನನ್ನು ಸೆಳೆದೊಯ್ದರು! ಆ ದೃಶ್ಯವನ್ನು ನೋಡಲಾಗದೇ ಅಲ್ಲಿಯೇ ಅಸಹಾಯಕಳಾಗಿ ನಿಂತಿದ್ದ ತಾಯಿ ಕಯಾಧುವು ಮೂರ್ಛೆ ಹೋದಳು! ಹಿರಣ್ಯಕಶಿಪುವು ಭಾರವಾದ ಹೃದಯದಿಂದ ಮುಖ ತಿರುಗಿಸಿ ಕುಳಿತನು.
(ಮುಂದುವರಿಯುವುದು)