ಪ್ರಹ್ಲಾದ ಮಹಾರಾಜರ ಪಾರಮಾರ್ಥಿಕ ಬೋಧನೆಗಳು

ಬೆಳಕಿನೆಡೆಗೆ ಬನ್ನಿ

“ದೇವರು ಇದ್ದಾನೆಯೇ?” ಎಂಬ ಪ್ರಶ್ನೆಗೆ ಮಹಾತ್ಮ ಗಾಂಧಿಯವರು ಉತ್ತರಿಸಿದ್ದು “ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದು ವ್ಯಕ್ತಿಯ ನಂಬಿಕೆಗೆ ಸೇರಿದ್ದು” ಎಂದು. ಈ ಪ್ರಶ್ನೆ ಮತ್ತು ಇದಕ್ಕೆ ದೊರೆತ ಉತ್ತರ – ಇವು ದೇವರ ಕಲ್ಪನೆ ಮೂಡಿದಂದಿನಿಂದಲೂ ಮನುಷ್ಯನನ್ನು ಕಾಡಲಾರಂಭಿಸಿದೆ.

ಒಂದು ಕಡೆ “ದೇವರಿದ್ದಾನೆ” ಎನ್ನುವ ಆಸ್ತಿಕರು, ಇನ್ನೊಂದು ಕಡೆ “ದೇವರಿಲ್ಲ” ಎನ್ನುವ ನಾಸ್ತಿಕರು, ಮತ್ತೊಂದು ಕಡೆ “ದೇವರು ಇರುವನೊ ಇಲ್ಲವೊ ನನಗೆ ತಿಳಿಯದು, ಎನ್ನುವ ಅಜ್ಞೇಯವಾದಿಗಳ ತಂಡ. ಇದರ ವಾದ, ವಿವಾದ, ಪ್ರತಿವಾದಗಳಿಂದ ದೂರ ನಿಂತ ಈ ಜಗತ್ತು ತಟಸ್ಥವಾಗಿ ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಲೇ ಇದೆ.

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತಸ್ವಾಮಿ ಪ್ರಭುಪಾದರು ಶ್ರೀಕೃಷ್ಣ ಪಂಥದ ಭಕ್ತ ಶಿರೋಮಣಿಗಳು. “ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು” ಎಂಬುದು ಕೃಷ್ಣ ಪ್ರಜ್ಞೆಯನ್ನು ಸಾರುವ ಅವರ ರಚನೆಗಳಲ್ಲಿ ಪುಟ್ಟ ಪುಸ್ತಿಕೆ. ಇದರ ಪದ ಪಂಕ್ತಿ ಪದರ ಪಾದಳಿಗಳಲ್ಲಿ ಭಕ್ತಿ ಭಾವದ ಶ್ರೀಕೃಷ್ಣ ಲಹರಿ ಅನುರಣಿಸುತ್ತ ಇನಿದಾಗಿ ಉಳಿಯುವ ಮುರಳೀನಾದ ಭಕ್ತ ಭಾವುಕರ ಹೃನ್ಮನಗಳನ್ನು ತಣಿಸಿಕುಣಿಸುವಲ್ಲಿ ಯಶಸ್ವಿಯಾಗಿದೆ.

ಪ್ರಹ್ಲಾದ ಮಹಾರಾಜನ ಮಾತುಗಳನ್ನು ಉದ್ಧರಿಸುತ್ತಾ ಪ್ರಾಂಜಲ ಮನಸ್ಸಿನ ಕೃಷ್ಣಪ್ರಜ್ಞೆಯ ಹಿರಿಮೆಯನ್ನು ಪೂಜ್ಯ ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಭಕ್ತಿಭಾವದಿಂದ ವಿವರಿಸಿದ್ದಾರೆ. ಅನೇಕ ಉದಾಹರಣೆಗಳ ಮೂಲಕ ಸಂಸಾರದ ನಶ್ವರತೆಯನ್ನು ಸಾರಿ‍ದ್ದಾರೆ.

ಶಾಶ್ವತ ಸಚ್ಚಿದಾನಂದ ಸುಖದ ಕೃಷ್ಣ ಪ್ರಜ್ಞೆಯನ್ನು ಪರಿಚಯಿಸಿದ್ದಾರೆ. ಮಿಥ್ಯೆ ಮತ್ತು ಮಾಯೆಯಿಂದ ಹೊರಬರಲು, ಸಂಪೂರ್ಣ ಭಕ್ತಿ ಭಾವದಲ್ಲಿ ವಿಹರಿಸಲು ಅವರು ನೀಡುವ ಘಟನೆಗಳು ಜ್ಞಾನದ, ಬೆಳಕಿನ ದೀಪಸ್ತಂಭಗಳಾಗಿವೆ. “ತಲ್ಲಣಿಸದಿರು ಕಂಡ್ಯಾ ತಾಳು ಮನವೇ” ಎಂದು ಹಾಡಿರುವ ಭಕ್ತ ಕನಕದಾಸರ ನಿರ್ಭರ ಭಕ್ತಿಗೆ ಪ್ರಹ್ಲಾದ ಮಹಾರಾಜನ ಸೂಕ್ತಿಗಳು ಪುಷ್ಟಿ ನೀಡುತ್ತವೆ.

“ತೃಣಮಪಿ ನ ಚಲತಿ ತೇನ ವಿನಾ” ಎನ್ನುವ ಕೃಷ್ಣ ಸಂದೇಶವೇ ಕೃಷ್ಣ ಪ್ರಜ್ಞೆ. ಜಗತ್ತು ಅವನ ಸೃಷ್ಟಿ ಜಗತ್ತಿನ ಸಚರಾಚರ ವಸ್ತುಗಳನ್ನು ಜೀವ ಜಂತುಗಳನ್ನು ಕಾಪಾಡುವವನು ಜಗದೋದ್ಧಾರಕ ಕೃಷ್ಣನೇ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ – ಎಲ್ಲವೂ ಅವನೇ. ಆದುದರಿಂದ ಕುಂಟು ನೆಪಗಳನ್ನು ಒಡ್ಡುತ್ತಾ ಸಂಸಾರದ ಜಂಜಡದಲ್ಲಿ ಮುಳುಗಿ ನಾಶ ಹೊಂದಬಾರದು.

ಸರ್ವಸಂಗ ಪರಿತ್ಯಾಗಿಯಾಗಿ ಕೃಷ್ಣನ ಧ್ಯಾನದಲ್ಲಿ ನಿರ್ಮಲ ಭಕ್ತಿಯಿಂದ ಬದುಕುವುದು ಮನುಷ್ಯ ಜನ್ಮದ ಸಾರ್ಥಕ್ಯಕ್ಕೆ ಹಿಡಿದ ಮಣಿದರ್ಪಣ. ಕೃಷ್ಣ ಪ್ರಜ್ಞೆಯ ಸಾರವಾಗಿರುವ “ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು” ಕಿರು ಹೊತ್ತಿಗೆಯು ಚಿರಂತನ ಬೆಳಕಿನ ಹಾದಿ ತೋರಿಸುವ ದೀವಿಗೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi