ಶ್ರೀಲ ಪ್ರಭುಪಾದ ಮತ್ತು ಶಿಷ್ಯರ ಒಂದು ಸಂವಾದ

ಡಾ. ಸಿಂಗ್: ಈಗ ವಿಜ್ಞಾನಿಗಳು ಜೆರಾಂಟಾಲಜಿ ಎಂಬ ವಿಭಾಗವನ್ನೇ ಸ್ಥಾಪಿಸಿಬಿಟ್ಟಿದ್ದಾರೆ. ಜೀವನವನ್ನು ಲಂಬಿಸುವುದು ಹೇಗೆ ಎಂಬುದನ್ನು ಅಧ್ಯಯನ ಮಾಡಲು.
ಶ್ರೀಲ ಪ್ರಭುಪಾದ: ನೋವು, ನರಳುವಿಕೆಯನ್ನು ನಿಲ್ಲಿಸುವುದು ಅವರ ಉದ್ದೇಶವಾಗಬೇಕು. ಒಬ್ಬ ವೃದ್ಧ ಅನೇಕ ಕಾಯಿಲೆಗಳಿಂದ ನರಳುತ್ತಿದ್ದು ನೋವು ಅನುಭವಿಸುತ್ತಿದ್ದಾರೆ ಎಂದುಕೊಳ್ಳಿ. ಆಗ ವೈದ್ಯರು ದಿಢೀರನೆ ಅವರ ಜೀವಿತ ಅವಧಿಯನ್ನು ಹೆಚ್ಚಿಸಿದರೆ, ಏನು ಪ್ರಯೋಜನಾ?
ಡಾ. ಸಿಂಗ್: ಅದಕ್ಕೇ ಅವರು ಹೃದಯ ಟ್ರಾನ್ಸ್‌ಪ್ಲಾಂಟ್ ಮಾಡುವುದು.
ಶ್ರೀಲ ಪ್ರಭುಪಾದ: ಇದು ಅವಿವೇಕ! ಅಸಂಬದ್ಧ! ಅವರು ಸಾವನ್ನು ತಡೆಯಲಿ : ಅದು ಸಾಧನೆಯಾಗುತ್ತದೆ. ಅವರು ಎಲ್ಲ ರೋಗವನ್ನೂ ತಡೆಯಲಿ; ಓಹ್! ಅದೆಲ್ಲವೂ ಸಾಧನೆಯಾದೀತು. ಅವರಿಗೆ ಇದನ್ನೆಲ್ಲ ಮಾಡಲಾಗುವುದಿಲ್ಲ! ಆದುದರಿಂದ ಅವರ ಸಂಶೋಧನೆ ಎಲ್ಲ ಅಸ್ತಿತ್ವದ ಹೋರಾಟವೇ ಆಗಿದೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ (15.7): `ಈ ಬದ್ಧ ಜಗತ್ತಿನಲ್ಲಿರುವ ಜೀವಿಗಳು ನನ್ನ ನಿತ್ಯ ಅಂಶಗಳು. ಬದ್ಧಜೀವನದಿಂದಾಗಿ ಅವರು ಮನಸ್ಸು ಸೇರಿದಂತೆ ಆರು ಇಂದ್ರಿಯಗಳೊಡನೆ ಬಹುವಾಗಿ ಕಷ್ಟಪಡುತ್ತಾರೆ.’
ವಿದ್ಯಾರ್ಥಿ: ಈಗ ತೈಲ ಕೊರತೆ ಕಂಡುಬಂದಿದೆ.
ಶ್ರೀಲ ಪ್ರಭುಪಾದ: ಹೌದು, ನಾವು ತೈಲದ ಮೇಲೆ ಅವಲಂಬಿತವಾದ ನಾಗರಿಕತೆಯನ್ನು ನಿರ್ಮಿಸಿದ್ದೇವೆ. ಇದು ಪ್ರಕೃತಿ ನಿಯಮಕ್ಕೆ ವಿರುದ್ಧ. ಆದುದರಿಂದ ಈಗ ತೈಲ ಕೊರತೆ. ಪ್ರಕೃತಿ ನಿಯಮದಂತೆ ಚಳಿಗಾಲ ಬರುತ್ತಿದೆ. ವಿಜ್ಞಾನಿಗಳು ಅದನ್ನು ನಿಲ್ಲಿಸಿ ಬೇಸಿಗೆ ಕಾಲವಾಗಿ ಪರಿವರ್ತಿಸಲಾರರು. ಪ್ರಕೃತಿಯನ್ನು ನಿಯಂತ್ರಿಸಬಹುದೆಂದು ಅವರು ತಪ್ಪಾಗಿ ಭಾವಿಸುತ್ತಾರೆ. ವಾಸ್ತವವಾಗಿ ಪ್ರಕೃತಿ ಮಾಡಿದ ಚಟುವಟಿಕೆಗಳನ್ನು ತಮ್ಮದೆಂದು ಮಾನವ ಜೀವಿಗಳು ಯೋಚಿಸುತ್ತಾರೆ. ಈಗ ಸೂರ್ಯೋದಯವಾಗುತ್ತಿದೆ. ಅವರು ಅದನ್ನು ಕತ್ತಲೆ ಮಾಡಲಾಗುತ್ತದೆಯೆ? ಕತ್ತಲಾದಾಗ, ಸೂರ್ಯನಿಗೆ `ಏಳು!’ ಎಂದು ಅವರಿಗೆ ಆದೇಶ ಮಾಡಲಾಗುತ್ತದೆಯೆ? ಅವರಿಗೆ ಅರಿವಾಗುತ್ತಿಲ್ಲ. ಅವರಿಗೆ ನಿಜವಾಗಿಯೂ ಪ್ರಕೃತಿಯನ್ನು ಗೆಲ್ಲಬೇಕೆಂದಿದ್ದರೆ, ಅವರು ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗಗಳನ್ನು ಗೆಲ್ಲಲು ಪ್ರಯತ್ನಿಸಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ : `ಐಹಿಕ ಪ್ರಕೃತಿಯ ತ್ರಿಗುಣಗಳಿಂದ ಆದ ಈ ನನ್ನ ದೈವೀ ಶಕ್ತಿಯನ್ನು ಮೀರುವುದು ಬಹಳ ಕಷ್ಟ. ಆದರೆ ನನಗೆ ಶರಣಾಗತರಾದವರು ಸುಲಭವಾಗಿ ಅದನ್ನು ದಾಟಿ ಹೋಗಬಲ್ಲರು.’

ಡಾ. ಸಿಂಗ್: ಅಂದರೆ ಪ್ರಕೃತಿ ನಿಯಮವನ್ನು ಜಯಿಸುವುದು ತುಂಬ ಕಷ್ಟ ?
ಶ್ರೀಲ ಪ್ರಭುಪಾದ: ಲೌಕಿಕರಿಗೆ ಇದು ಅಸಾಧ್ಯ. ಆದರೆ ನೀವು ಕೃಷ್ಣನಿಗೆ ಶರಣಾಗತರಾದರೆ ಅದು ಸುಲಭವಾಗುತ್ತದೆ.
ಡಾ. ಸಿಂಗ್: ವಿಧ ವಿಧವಾದ ಜೀವಿಗಳಿರುವುದನ್ನು ಕುರಿತು ವಿಜ್ಞಾನಿಗಳು ವಿವರಿಸಿದ್ದಾರೆ. ವಿಕಾಸದ ಸಂದರ್ಭದಲ್ಲಿ, ನಿರ್ದಿಷ್ಟ ಕಾಲದಲ್ಲಿ, ಮುಂದಿನ ಪೀಳಿಗೆಗೆ ಪರಿಪಕ್ವವಾಗಿ ಉತ್ಪಾದಿಸುವ ಜೀವಕೋಶ ಜೀನುಗಳು ಕೆಲ ಸಂದರ್ಭದಲ್ಲಿ ಪ್ರತಿರೂಪಗೊಳಿಸುವಾಗ ತಪ್ಪು ಮಾಡಬಹುದು. ಮುದ್ರಣದ ಸಮಯದಲ್ಲಿ ಕೆಲ ತಪ್ಪುಗಳಾಗುವುದಿಲ್ಲವೆ, ಹಾಗೆ. ಕೆಲ ಸಂದರ್ಭಗಳಲ್ಲಿ ಈ ತಪ್ಪುಗಳು ಅಥವಾ ಈ ನವ ವಿಕೃತಿಗಳು ಹಾಗೇ ಇರುತ್ತವೆ ಮತ್ತು ಜೀನುಗಳಲ್ಲಿನ ವ್ಯತ್ಯಾಸಗಳ ಕಾರಣ ಜೀವಿಗಳ ಭಿನ್ನ ರೂಪ ರಚನೆಯಾಗುತ್ತದೆ.
ಶ್ರೀಲ ಪ್ರಭುಪಾದ: ಆದರೆ ಆ `ತಪ್ಪು ‘ಅನಾದಿಕಾಲದಿಂದಲೂ ನಡೆದು ಬರುತ್ತಿದೆ. ಎಲ್ಲ ವಿಧವಾದ ಜೀವಿಗಳು ಎಲ್ಲ ಕಾಲದಲ್ಲೂ ಅಸ್ತಿತ್ತ್ವದಲ್ಲಿರುವುದನ್ನು ನೋಡಬಹುದು. ಆದುದರಿಂದ `ತಪ್ಪು’ ಶಾಶ್ವತವಾದುದು. ಆದರೆ `ತಪ್ಪು’ ಕಾಯಂ ಆದಾಗ, ಅದು ತಪ್ಪಲ್ಲ. ಅದು ಜಾಣತನ!
ಡಾ. ಸಿಂಗ್: ಆದರೆ ಜೀವಿಯೊಂದರ ಆನುವಂಶಿಕ ಲಕ್ಷಣಗಳಲ್ಲಿ ಬದಲಾವಣೆ ಉಂಟಾಗದಿದ್ದರೆ (ನವ ವಿಕೃತಿ) ಇಡೀ ವಿಶ್ವದಲ್ಲಿ ಒಂದೇ ರೀತಿಯ ಜೀವಿಗಳಿರುತ್ತಿದ್ದರು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಶ್ರೀಲ ಪ್ರಭುಪಾದ: ಇಲ್ಲ. ಪ್ರತಿಯೊಂದು ಜೀವಿಗೂ ಭಿನ್ನವಾದ ಮನಸ್ಸಿದೆ. ವಿಭಿನ್ನವಾದ ಮನಃಸ್ಥಿತಿಯವರಿಗಾಗಿ ಅನೇಕ ರೀತಿಯ ಸ್ವರೂಪ ಕಂಡುಬರುತ್ತದೆ. ಉದಾಹರಣೆಗೆ, ನಾವು ಇಲ್ಲಿ ನಡಿಗೆಯಲ್ಲಿದ್ದೇವೆ. ಅನೇಕ ಮಂದಿ ನಮ್ಮೊಡನೆ ಸೇರಿಕೊಳ್ಳಲು ಬರುತ್ತಿಲ್ಲ. ಏಕೆಂದರೆ ನಾವು ಮಾಡುವುದಕ್ಕಿಂತ ಅವರದು ಭಿನ್ನ ಮನಃಸ್ಥಿತಿ. ಈ ವ್ಯತ್ಯಾಸ ಏಕಿದೆ?
ಡಾ. ಸಿಂಗ್: ಅದು ತಪ್ಪಿರಬಹುದು.
ಶ್ರೀಲ ಪ್ರಭುಪಾದ: ಅದು ತಪ್ಪಲ್ಲ. ಅದು ಅವರ ಅಪೇಕ್ಷೆ. ಸಾವಿನ ಸಮಯದಲ್ಲಿ ಪ್ರತಿಯೊಬ್ಬರಿಗೂ ಅವರ ಅಪೇಕ್ಷಿತ ದೇಹ ದೊರಕುತ್ತದೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ : `ದೇಹ ತ್ಯಜಿಸುವಾಗ ಯಾವ ಸ್ಥಿತಿ ಬಗೆಗೆ ನೆನಪು ಮಾಡಿಕೊಳ್ಳುತ್ತಾರೋ ಆ ಸ್ಥಿತಿಯನ್ನು ಅವರು ಖಂಡಿತ ಹೊಂದುತ್ತಾರೆ.’ ಸಾವಿನ ಸಮಯದಲ್ಲಿ ನೀವೇನು ಯೋಚಿಸುವಿರೋ ಅದೇ ನಿಮ್ಮ ಮುಂದಿನ ದೇಹವನ್ನು ನಿರ್ಧರಿಸುತ್ತದೆ. ಪ್ರಕೃತಿಯು ನಿಮಗೆ ದೇಹ ನೀಡುತ್ತದೆ. ನಿರ್ಧಾರವು ನಿಮ್ಮ ಕೈಯಲ್ಲಿ ಇಲ್ಲ, ಪ್ರಕೃತಿಯಲ್ಲಿದೆ. ಪ್ರಕೃತಿಯು ಭಗವಂತನ ನಿರ್ದೇಶನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ.
ಡಾ. ಸಿಂಗ್: ಆದರೆ ವಿವಿಧ ಬಗೆಯ ಜೀವಿಗಳು ತಪ್ಪುಗಳಿಂದ ಹೊಮ್ಮುತ್ತವೆ ಎಂಬುವುದಕ್ಕೆ ವಿಜ್ಞಾನಿಗಳ ಬಳಿ ಪುರಾವೆಗಳಿರುವಂತಿದೆ.
ಶ್ರೀಲ ಪ್ರಭುಪಾದ: ಅದು ಅವರ ತಪ್ಪು! ಪ್ರಕೃತಿ ನಿಯಮಗಳಲ್ಲಿ ತಪ್ಪುಗಳಿಲ್ಲ. ರೈಲುಗಳಲ್ಲಿ ಒಂದನೆಯ, ಎರಡನೆಯ ಮತ್ತು ಮೂರನೆಯ ದರ್ಜೆಗಳಿವೆ. ನೀವು ಮೂರನೆಯ ದರ್ಜೆ ಟಿಕೆಟ್ ಖರೀದಿಸಿ , ತಪ್ಪಾಗಿ ಮೊದಲನೆಯ ದರ್ಜೆ ಬೋಗಿಗೆ ಹೋದರೆ, ಅಲ್ಲಿರಲು ನಿಮಗೆ ಅವಕಾಶ ನೀಡುವುದಿಲ್ಲ. ವಿವಿಧ ದರ್ಜೆ ಇರುವುದು ತಪ್ಪಲ್ಲ. ಅದು ವ್ಯವಸ್ಥೆ. ಬೇರೆ ದರ್ಜೆ ಸ್ಥಳಕ್ಕೆ ಹೋಗಿದ್ದು ನಿಮ್ಮ ತಪ್ಪು. ಆದುದರಿಂದ, ಮಾಡುವ ತಪ್ಪುಗಳ ಬಗೆಗೆ ಭಗವಂತನಿಗೆ ಗೊತ್ತು. ಹೀಗಾಗಿ, ನೀವು ತಪ್ಪುಗಳಿಗೆ ಅನುಗುಣವಾಗಿ ನಿರ್ದಿಷ್ಟ ದೇಹ ಪ್ರವೇಶಿಸುವಿರಿ : `ಇಲ್ಲಿ, ಬನ್ನಿ ಇಲ್ಲಿ. ದೇಹ ಸಿದ್ಧವಾಗಿದೆ.’ 8,400,000 ಜೀವ ಸ್ವರೂಪಗಳಿವೆ. ಮತ್ತು ಕರಾರುವಾಕ್ಕಾದ ಲೆಕ್ಕಾಚಾರದಂತೆ ಪ್ರಕೃತಿಯು, ವಿವಿಧ ದೇಹಗಳಿಗೆ ನಿಷ್ಕರ್ಷೆ ಮಾಡುತ್ತ, ಕೆಲಸ ನಿರ್ವಹಿಸುತ್ತದೆ. ಸರ್ಕಾರವು ನಗರವೊಂದನ್ನು ನಿರ್ಮಿಸುವಾಗ, ಅದು ಪೂರ್ಣಗೊಳ್ಳುವ ಮುನ್ನವೇ ಸೆರೆಮನೆ ಸ್ಥಾಪಿಸುತ್ತದೆ. ಏಕೆಂದರೆ ಜೈಲಿಗೆ ಹೋಗಬೇಕಾದ ಅನೇಕ ಕ್ರಿಮಿನಲ್‌ಗಳಿದ್ದಾರೆಂದು ಸರ್ಕಾರಕ್ಕೆ ಗೊತ್ತು. ಇದು ಸರ್ಕಾರದ ತಪ್ಪಲ್ಲ. ಇದು ಕ್ರಿಮಿನಲ್‌ಗಳ ತಪ್ಪು. ಅವರು ಅಪರಾಧಿಗಳಾಗಿರುವುದರಿಂದ ಅವರು ಅಲ್ಲಿಗೆ ಹೋಗಬೇಕು. ಅದು ಅವರ ತಪ್ಪು.

ಪ್ರಕೃತಿಯಲ್ಲಿ ತಪ್ಪುಗಳೇ ಇಲ್ಲ. ಕೃಷ್ಣ ಹೇಳುತ್ತಾನೆ (9.10) : `ಕುಂತಿಯ ಮಗನಾದ ಅರ್ಜುನನೇ, ನನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ಎಲ್ಲ ಚರಾಚರ ವಸ್ತುಗಳನ್ನು ನನ್ನ ಅಪ್ಪಣೆಯಂತೆ ಸೃಷ್ಟಿಸಿ ಕೆಲಸ ಮಾಡುತ್ತದೆ.’ ಭಗವಾನ್ ಕೃಷ್ಣನ ಮೇಲ್ವಿಚಾರಣೆಯಲ್ಲಿ ಪ್ರಕೃತಿ ಕೆಲಸ ಮಾಡುವುದರಿಂದ ಅದು ತಪ್ಪು ಮಾಡುವುದು ಹೇಗೆ ಸಾಧ್ಯ? ಆದರೆ ನಾವು ತಪ್ಪು ಮಾಡುತ್ತೇವೆ, ನಾವು ಭ್ರಮೆಯಲ್ಲಿದ್ದೇವೆ, ನಮ್ಮ ಇಂದ್ರಿಯಗಳು ಪರಿಪಕ್ವವಾಗಿಲ್ಲ ಮತ್ತು ನಾವು ಮೋಸ ಮಾಡುತ್ತೇವೆ. ಭಗವಂತ ಮತ್ತು ಮಾನವನಿಗೆ ಇರುವ ವ್ಯತ್ಯಾಸ ಅದೇ. ಭಗವಂತನಿಗೆ ಅಪರಿಪೂರ್ಣ ಇಂದ್ರಿಯಗಳಿಲ್ಲ. ಅವನ ಇಂದ್ರಿಯಗಳು ಪರಿಪೂರ್ಣ.
ಡಾ. ವುಲ್ ರೋಟ್ಕೆ: ನಮ್ಮ ಇಂದ್ರಿಯಗಳು ದೋಷಪೂರ್ಣವಾಗಿರುವುದರಿಂದ, ಮೈಕ್ರೋಸ್ಕೋಪ್, ಟೆಲಿಸ್ಕೋಪ್‌ಗಳಂತಹ ನಮ್ಮ ಇಂದ್ರಿಯಗಳ ತಾಂತ್ರಿಕ ವಿಸ್ತರಣೆ ಕೂಡ ದೋಷಯುಕ್ತವಾಗಿರುತ್ತದೆ.
ಶ್ರೀಲ ಪ್ರಭುಪಾದ: ಹೌದು. ಲೌಕಿಕ ಅಸ್ತಿತ್ವ ಎಂದರೆ ದೋಷಯುಕ್ತ ಅಸ್ತಿತ್ವ. ಯಾವುದನ್ನಾದರೂ ನೀವು ದೋಷಪೂರ್ಣ ಜ್ಞಾನದಿಂದ ಮತ್ತು ಅಪರಿಪಕ್ವ ಇಂದ್ರಿಯಗಳಿಂದ ನಿರ್ಮಿಸಿದರೆ, ನೀವು ಏನೇ ನಿರ್ಮಿಸಿದರೂ ಅದು ದೋಷಯುಕ್ತವಾಗಿರುತ್ತದೆ. ಆದುದರಿಂದ ವಿಜ್ಞಾನಿಗಳು ಹೇಳುವುದೆಲ್ಲ ದೋಷಪೂರ್ಣ ಎಂದು ನಾವು ಪರಿಸಮಾಪ್ತಿ ಮಾಡಬಹುದು.
ಡಾ. ಸಿಂಗ್: ಆದರೆ ಅವರು ತೃಪ್ತರಾದಂತೆ ಕಾಣುತ್ತಾರೆ.
ಶ್ರೀಲ ಪ್ರಭುಪಾದ: ಅಗಸನ ಬಟ್ಟೆ ಹೊರಲು ಕತ್ತೆ ಕೂಡ ತೃಪ್ತಿ ಹೊಂದಬಹುದು. ಭಾರತದ ಕೆಲ ಪ್ರದೇಶಗಳಲ್ಲಿ ನಾಯಿಯೊಂದು ಹಸಿವಿನಿಂದ ಸಾಯುವ ಸ್ಥಿತಿಯಲ್ಲಿರುವುದನ್ನು ನೋಡಬಹುದು. ಆದರೆ ಅದು ಹೆಣ್ಣು ನಾಯಿಯನ್ನು ನೋಡಿದ ಕೋಡಲೇ ಅದು ಲೈಂಗಿಕ ಕ್ರಿಯೆಯಿಂದ ತೃಪ್ತಿ ಪಡುತ್ತದೆ. ಅದನ್ನು ತೃಪ್ತಿ ಎನ್ನುವಿರಾ? ನಾಯಿ ಹಸಿದಿದೆ, ಆದರೂ ಲೈಂಗಿಕ ಕ್ರಿಯೆಯಿಂದ ತೃಪ್ತಿಪಡುತ್ತದೆ. ಎಲ್ಲರೂ ತೃಪ್ತಿಪಡುತ್ತಾರೆ. ಶೌಚದಲ್ಲಿನ ಹುಳ ಕೂಡ. ಅದು ಪ್ರಕೃತಿ ನಿಯಮ.






Leave a Reply