ಇತ್ತೀಚೆಗೆ ಭಕ್ತರೊಬ್ಬರು ನನಗೆ ಹೇಳಿದರು, “ವೈದಿಕ ಮಸೂರದ ಮೂಲಕ ನೋಡಲು ಪ್ರಯತ್ನಿಸಿ.” ಆ ರೀತಿ ಜಗತ್ತನ್ನು ನೋಡಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನನಗೆ ಆಗ ಅನ್ನಿಸಿದ್ದು ನೆನಪಾಗುತ್ತದೆ.

ಕೆಲವು ದಿನಗಳ ಅನಂತರ ನಾನು ಏನೋ ಕೆಲಸ ಮಾಡುತ್ತ ನನ್ನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅದು ಮುಸ್ಸಂಜೆಯಾಗಿತ್ತು. ದಿನದ ಬೆಳಕಿನ ಕೊನೆಯ ಕಿರಣಗಳು ದೂರಸರಿಯುತ್ತಿದ್ದಂತೆ ನಾನು ಕಿಟಕಿಯತ್ತ ತಿರುಗಿದೆ. ಆಗ ಕೀಟದ ಛಾಯಾರೇಖಾಕೃತಿ ನನ್ನ ಕಣ್ಣನ್ನು ಸೆಳೆಯಿತು. ಅದು ಕಿಟಕಿ ಮತ್ತು ಮೆಷ್ ಪರದೆಯ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು.
ಸುಮಾರು ಒಂದು ವಾರದ ಹಿಂದೆ ನನ್ನ ಮೊದಲ ಅಂತಸ್ತಿನ ಅಪಾರ್ಟ್‌ಮೆಂಟ್ ಹೊರಗೆ ಮಕ್ಕಳು ಆಡುತ್ತಿದ್ದರು. ಅವರ ಚೆಂಡು ನನ್ನ ಪರದೆಗೆ ಹೊಡೆಯಿತು ಮತ್ತು ಅದನ್ನು ಕೆಳಗೆ ಬೀಳಿಸಿತು. ಅದನ್ನು ಪುನಃ ಅದರ ಸ್ಥಾನದಲ್ಲಿರಿಸಲು ನಾನು ಪ್ರಯತ್ನಿಸಿದಾಗ, ನನಗೆ ಸ್ವಲ್ಪ ಕಷ್ಟವಾಯಿತು. ಪರದೆಯನ್ನು ಹಿಡಿದಿಟ್ಟುಕೊಂಡಿದ್ದ ಹಳೆಯ ಕ್ಲಿಪ್‌ನಿಂದ ಈಗ ಗೋಡೆಯ ಮೇಲೆ ಪರದೆಯನ್ನು ಸರಿಯಾಗಿ ಇಡಲಾಗಲಿಲ್ಲ. ನನಗೆ ಸಾಧ್ಯವಾದಷ್ಟು ಪ್ರಯತ್ನಿಸಿ ನಾನು ತೆರೆಯನ್ನು ಹಾಕಿದೆ. ಅದರ ಮೂರು ಮೂಲೆಗಳು ತೋಡಿನಲ್ಲಿ ಹೊಂದುವಂತೆ ಮಾಡಿದೆ. ಪರದೆಯ ಒಂದು ಮೂಲೆ ಕೂರದ ಸ್ಥಳದಲ್ಲಿ ಒಂದು ಸಣ್ಣ ಬಿರುಕು ಇತ್ತು.
ಈ ಕೀಟವು ಆ ಬಿರುಕಿನ ಮೂಲಕ ಬಂದು ಸಿಕ್ಕಿಹಾಕಿಕೊಂಡಿತ್ತು. ಮೇಲಿನ ಎಡ ಭಾಗದ ಮೂಲೆಯಲ್ಲಿ ಕಿಟಕಿ ಮತ್ತು ಪರದೆಯ ಮಧ್ಯೆಯೇ ದಟ್ಟನಾದ, ಜಿಗುಟಾದ ಜೇಡನ ಬಲೆ ಇತ್ತು ಮತ್ತು ಅಲ್ಲಿ ಜೇಡ ಕುಳಿತಿತ್ತು.
ಕಿಟಕಿ ಮತ್ತು ತೆರೆಯನ್ನು ಒಂದು ಅಂಗುಲದಷ್ಟೂ ಜಾಗವೂ ಪ್ರತ್ಯೇಕಿಸಿರಲಿಲ್ಲ. ಈ ಪುಟ್ಟ ಜಾಗದಲ್ಲಿ ಕೀಟವು ಹೊರಗೆ ಹೋಗುವ ದಾರಿಯನ್ನು ಹುಡುಕುತ್ತ ಝೇಂಕರಿಸುತ್ತಿತ್ತು. ಅದು ಮುಚ್ಚಿದ್ದ ತೆರೆಯ ಪ್ರತಿಯೊಂದು ಕಡೆಗೂ ಹೋಗುತ್ತಿತ್ತು ಮತ್ತು ಹೊರಗೆ ಹೋಗುವ ದಾರಿಯನ್ನು ಶೋಧಿಸುತ್ತಿತ್ತು. ಏನೂ ಅರಿವಿಲ್ಲದ ಕೀಟವು ಬಲೆಯ ಸಮೀಪ ತಿರುಗುತ್ತಿತ್ತು. ಇದು ರೇಷ್ಮೆಯಂತೆ ನವಿರಾದ ತನ್ನ ಕೋಟೆಯ ಆ ಕಡೆ ಕುಳಿತಿದ್ದ ಜೇಡನನ್ನು ಎಚ್ಚರಿಸಿತು. ತತ್‌ಕ್ಷಣ ಅಪಾಯವನ್ನು ಅರಿತುಕೊಂಡ ಕೀಟವು ಜೇಡನ ಎಟುಕಿನಾಚೆಗೆ ದಿಕ್ಕುಗೆಟ್ಟು ಝೇಂಕರಿಸಿತು.

ಕೀಟವು ತನ್ನ ವಿಮೋಚನೆಗಾಗಿ ಶೋಧಿಸುತ್ತಲೇ ಇತ್ತು. ಪಾರಾಗುವ ದಾರಿಯನ್ನು ಹುಡುಕುತ್ತಾ ಅದು ತೆರೆಯ ಮೇಲಿನ ಅರ್ಧ ಭಾಗದಲ್ಲಿ ಮೂರು ಸುತ್ತು ಸುತ್ತಿತು. ಪ್ರತಿ ಬಾರಿ ತಿರುಗಿದಾಗಲೂ ಅದು ಜೇಡನ ಬಲೆಯ ಸಮೀಪಕ್ಕೇ ಬರುತ್ತಿತ್ತು. ಪ್ರತಿ ಬಾರಿಯೂ ಅದು ಕೂದಲೆಳೆಯಷ್ಟು ದೂರದಲ್ಲಿ ಸಾವಿನಿಂದ ಪಾರಾಗುತ್ತಿತ್ತು.
ಅಂತಿಮವಾಗಿ, ವಿಮೋಚನೆಯ ಹಾದಿಯನ್ನು ಬಲಪಡಿಸುವ ಪ್ರಯತ್ನವಾಗಿ ಕೀಟವು ತನ್ನ ರೆಕ್ಕೆಗಳನ್ನು ಬಡಿಯಿತು ಮತ್ತು ತೆರೆಯೊಳಗೆ ತನ್ನನ್ನು ತಾನೇ ಎಸೆದುಕೊಂಡಿತು. ಅದಕ್ಕೆ ಹತಾಶೆ. ಅದು ತೆರೆಯ ಕೆಳ ಭಾಗದಲ್ಲಿ ಶೋಧಿಸಿದ್ದರೆ… ಅಲ್ಲಿ, ತೆರೆಯನ್ನು ಕಿಟಕಿಗೆ ಸರಿಯಾಗಿ ಬಿಗಿಗೊಳಿಸಿರಲಿಲ್ಲ. ಆದರೆ ಅದಕ್ಕೆ ಅದು ಹೊಳೆಯಲಿಲ್ಲ.
ಪ್ರಭುಪಾದರ ಅಲೌಕಿಕ ದೃಷ್ಟಿ
ನಾನು ವೈದಿಕ ಮಸೂರದ ಮೂಲಕ ನೋಡಿದೆ. ಶ್ರೀಲ ಪ್ರಭುಪಾದರ ಅಲೌಕಿಕ ದೃಷ್ಟಿಯ ಸಣ್ಣ ತುಂಡು ನನ್ನ ದೃಷ್ಟಿಯನ್ನು ಪರಿಷ್ಕರಿಸಿತು. ಅದು ಕಣ್ಣು ಪರೀಕ್ಷೆಯ ಸಮಯದಲ್ಲಿ ರೋಗಿಯ ಮುಂದೆ ಇಡುವ ಮಸೂರದಂತೆ ಕಾರ್ಯ ನಿರ್ವಹಿಸಿತು. ನಾನು ಈಗ ತೆರೆಯ ಹಿಂದೆ ಕೀಟವೊಂದು ಹೋರಾಡುತ್ತಿರುವುದನ್ನು ಮಾತ್ರ ನೋಡುತ್ತಿರಲಿಲ್ಲ. ಲೌಕಿಕ ಲೋಕದಲ್ಲಿ ಜೀವಿಯ ಅಸಹಾಯಕ ಸ್ಥಿತಿಯನ್ನು ನಾನು ವೀಕ್ಷಿಸುತ್ತಿದ್ದೆ.
ಯಾವುದೋ ಆಸೆಯ ಪ್ರಲೋಭನೆಗೆ ಒಳಗಾಗಿ ಆತ್ಮವು ಈ ಲೋಕಕ್ಕೆ ಹಾರಿ ಬಂದಿದೆ ಮತ್ತು ಅದು ಸಿಕ್ಕಿಹಾಕಿಕೊಂಡಿದೆ. ಭ್ರಮೆಯಿಂದ ಅದು ಎಲ್ಲ ದಿಕ್ಕಿನಲ್ಲಿಯೂ ಶೋಧಿಸುತ್ತಿದೆ, ಅಪಾಯವನ್ನು ಲೆಕ್ಕಿಸದೆ ಸಂತೋಷವಾಗಿರಲು ಪ್ರಯತ್ನಿಸುತ್ತಿದೆ. ಆದರೆ ಇವೆಲ್ಲವೂ ವ್ಯರ್ಥ. ಏಕೆಂದರೆ, ಅದು ಲೌಕಿಕ ಪ್ರಕೃತಿಯ ಬಿಗಿ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ. ಅದರ ಸುತ್ತ ಅದರ ಪ್ರಯತ್ನಗಳು ಹತಾಶೆಯನ್ನು ಉಂಟುಮಾಡುತ್ತಿವೆ ಮತ್ತು ಅದರ ಮೇಲೆ ಸಾವು ಮೂರ್ತಿವೆತ್ತಂತೆ ತಾಳ್ಮೆಯಿಂದ ಕಾಯುತ್ತಿದೆ. ಅದು ಕೃಷ್ಣನತ್ತ ತಿರುಗಿದರೆ… ಆದರೆ, ಭ್ರಮಾಧೀನವಾದ ಅದು ಅಂತಹ ಸಾಧ್ಯತೆಯನ್ನು ಖಂಡಿತ ಪರಿಶೀಲಿಸುವುದಿಲ್ಲ.
ಅಸಹಾಯಕ ಕೀಟವು ಜೇಡನ ಬಲೆಗೆ ಬೀಳಲು ಸ್ವಲ್ಪ ಸಮಯವಷ್ಟೇ ಬೇಕಾಗಿತ್ತು. ಅದು ಈ ಜನ್ಮದಲ್ಲಿ ಅಂತಿಮವಾಗಿ ಬಂಧಿಸಲ್ಪಡುತ್ತಿತ್ತು. ಆದರೂ ಕೀಟವು ಪದೇ ಪದೇ ಪರದೆಯತ್ತ ನುಗ್ಗುತಿತ್ತು. ಅಂತಿಮವಾಗಿ, ಮೂಲಭೂತ ಅರಿವು ನನ್ನ ಪ್ರಜ್ಞೆಯ ಮುಂದೆ ಉದ್ಭವಿಸಿತು : “ಕೀಟವು ತನ್ನಷ್ಟಕ್ಕೆ ತಾನೇ ಸ್ವತಂತ್ರಗೊಳ್ಳುವುದು ಸಾಧ್ಯವಿಲ್ಲ.”
ಬಿಡುಗಡೆಯ ದಾರಿ
ದೃಢ ನಿರ್ಧಾರದಿಂದ ನಾನು ಸರಸರನೆ ಹೊರಗೆ ಓಡಿದೆ. ಕಿಟಕಿಯಲ್ಲಿ ನಾನು ನೋಡಿದ್ದೇನು? ಕೀಟವು ಇನ್ನೂ ರೋಷಾವೇಶದಲ್ಲಿ ಇತ್ತು ಮತ್ತು ಜೇಡವು ನಿಶ್ಶಬ್ದವಾಗಿ ತನ್ನ ಬಲೆಯನ್ನು ಹಾಕುತ್ತಿತ್ತು. ನಿಧಾನವಾಗಿ ನಾನು ತೆರೆಯನ್ನು ಕಿಟಕಿಯಿಂದ ಕೆಲವು ಇಂಚು ಮೇಲಕ್ಕೆತ್ತಿದೆ. ಆಗ, ಮಗುವು ಶಾಲೆಯಿಂದ ಬಿಡುಗಡೆಹೊಂದಿದಂತೆ, ಕೀಟವು ತನ್ನ ಪಂಜರದಿಂದ ಹಠಾತ್ತನೆ ಹೊರಗೆ ನುಗ್ಗಿತು. ಅದು ಸಂತೋಷದಿಂದ ಒಂದು ಕ್ಷಣ ನನ್ನ ಸುತ್ತ ತಿರುಗಿತು. ಅನಂತರ, ಕತ್ತಲಿನಲ್ಲಿ ಮೇಲಕ್ಕೆ ಹಾರಿ ಹೋಯಿತು.

ತೆರೆಯನ್ನು ಸರಿಪಡಿಸಲು ನಿಂತಾಗ ನನ್ನ ಚಿಂತನೆಯು ಪ್ರಭುಪಾದರತ್ತ ಚಲಿಸಿತು. ಈ ಹಿಂದೆ ಆಧ್ಯಾತ್ಮಿಕ ಗುರುವಿನ ಸ್ಥಾನವನ್ನು, ಅಥವಾ ಅಸಹಾಯಕ ಬದ್ಧಾತ್ಮಗಳಿಗೆ ಅವರು ನೀಡುವ ಅಮೂಲ್ಯ ಉಡುಗೊರೆಯನ್ನು ಮೆಚ್ಚಲು ನನಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ನನಗೆ ಅರ್ಥವಾಯಿತು. ನಾವೆಲ್ಲರೂ ತೆರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಕೀಟಗಳು. ತೀವ್ರ ಪ್ರಯತ್ನಗಳಿದ್ದರೂ ನಾವು ಎಂದಿಗೂ ನಮಗೆ ನಾವೇ ಮುಕ್ತರಾಗುವುದು ಸಾಧ್ಯವಿಲ್ಲ. ಕೆಲವೇ ಕ್ಷಣಗಳಾದರೂ ಈ ಅಪರೂಪದ ಅನುಭವದಿಂದ ನನಗೆ ಕೃಷ್ಣನೆಷ್ಟು ದಯಾಮಯಿ ಎನ್ನುವುದನ್ನು ಕಾಣುವುದು ಸಾಧ್ಯವಾಯಿತು. ಇಡೀ ಜಗತ್ತನ್ನು ಕ್ರೂರವಾದ ಭ್ರಮೆಯ ಹಿಡಿತದಿಂದ ಬಿಡುಗಡೆಮಾಡಲು ಕೃಷ್ಣನು ಶ್ರೀಲ ಪ್ರಭುಪಾದರಂತಹ ಸಂತರನ್ನು ಕಳುಹಿಸುತ್ತಾನೆ.






Leave a Reply