ಅಲೌಕಿಕತೆಯತ್ತ…

ಮಹತ್‌ ತತ್ತ್ವದ ಉದ್ರೇಕದಿಂದ ಐಹಿಕ ಕ್ರಿಯೆಗಳು ಉಂಟಾಗುತ್ತವೆ. ಮೊದಲಿಗೆ ಸತ್ತ್ವ, ರಜೋಗುಣಗಳಲ್ಲಿ ಮಾರ್ಪಾಡು ಉಂಟಾಗುವುದು. ಅನಂತರ – ತಮೋಗುಣದ ನಿಮಿತ್ತ – ಜಡವಸ್ತು, ಅದರ ಜ್ಞಾನ ಮತ್ತು ಐಹಿಕ ಜ್ಞಾನದ ವಿವಿಧ ಕ್ರಿಯೆಗಳು ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತವೆ. (ಶ್ರೀಮದ್‌ ಭಾಗವತ 2.5.23)

ಪ್ರಥಮ ಪುರುಷನ (ಕಾರಣಾರ್ಣವಶಾಯಿ ವಿಷ್ಣು) ಆವಿರ್ಭಾವದ ಅನಂತರ ಮಹತ್‌-ತತ್ತ್ವ ಅಥವಾ ಲೌಕಿಕ ಸೃಷ್ಟಿಯ ತತ್ತ್ವಗಳು ರೂಪುಗೊಳ್ಳುತ್ತವೆ. ಸೃಷ್ಟಿಯ ಆರಂಭಕ್ಕೆ ಮುನ್ನ ಐಹಿಕ ಶಕ್ತಿಯು ನಿಶ್ಚೇಷ್ಟ ಸ್ಥಿತಿಯಲ್ಲಿ ಇರುತ್ತದೆ. ದೇವೋತ್ತಮನು ತನ್ನ ಮಹಾವಿಷ್ಣುವಿನ ರೂಪದಲ್ಲಿ ಸೃಷ್ಟಿ ಕ್ರಿಯೆಯನ್ನು ಆರಂಭಿಸುವವರೆಗೂ ಏನೂ ನಡೆಯದು. ಬದ್ಧಾತ್ಮಗಳಾದ ಎಲ್ಲ ಜೀವಿಗಳೂ ಹಿಂದಿನ ಪ್ರಳಯದ ಅನಂತರ ವಿಷ್ಣುವಿನಲ್ಲಿ ಸೇರಿರುತ್ತಾರೆ. ಮಹಾವಿಷ್ಣುವಿನ ರೂಪದಲ್ಲಿ ಭಗವಂತನು ಸುಪ್ತಸ್ಥಿತಿಯ ಲೌಕಿಕ ಶಕ್ತಿಯತ್ತ ನೋಟ ಹರಿಸಿದ ಮೇಲೆಯೇ ಮಹತ್‌ ತತ್ತ್ವ ಅಥವಾ ಐಹಿಕ ಸೃಷ್ಟಿಯ ತತ್ತ್ವಗಳು ರೂಪುಗೊಳ್ಳುವುದು.

ಭಗವದ್ಗೀತೆಯಲ್ಲಿ ವಿವರಿಸಲಾಗಿದೆ : ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ – ಮೂರು ಗುಣಗಳ ಪರಸ್ಪರ ಕ್ರಿಯೆಯೇ ಲೌಕಿಕ ಚಟುವಟಿಕೆ. ಗುಣೈಃ ಕರ್ಮಾಣಿ – ಮೂರು ಗುಣಗಳ ಪರಿವರ್ತನೆಯ ಈ ರೂಪದಲ್ಲಿ ಎಲ್ಲ ಕಾರ್ಯಗಳನ್ನು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ಕಾಲದಿಂದ ಮುಂದಕ್ಕೆ ತಳ್ಳಲ್ಪಡುವ ಮಹತ್‌ ತತ್ತ್ವದಿಂದ ಈ ತ್ರಿಗುಣಗಳು ಅಸ್ತಿತ್ವಕ್ಕೆ ಬರುತ್ತವೆ. ಆರಂಭದಲ್ಲಿ ಸತ್ತ್ವಗುಣ ಮತ್ತು ರಜೋಗುಣದ ಪರಿವರ್ತನೆ ಇರುತ್ತದೆ. ಆದರೆ, ಮುಂದೆ ತಮೋಗುಣದ ಪರಿವರ್ತನೆಯ ಕಾರಣ ದ್ರವ್ಯ ಎಂದು ಕರೆಯುವ ವಸ್ತುವಿನ ಸೃಷ್ಟಿಯಾಗುತ್ತದೆ. ದ್ರವ್ಯ ಎಂದರೆ ನಾವು ನೋಡುವ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶದಂತಹ ವಿವಿಧ ವಸ್ತುಗಳ ಅಂಶ. ಅನಂತರ ಲೌಕಿಕ ಜ್ಞಾನ-ಜೀವಿಗಳಿಗೆ ಇಂದ್ರಿಯ ಆನಂದದ ಅಪೇಕ್ಷೆ. ಲೌಕಿಕವಾಗಿ ಆನಂದಿಸಬೇಕೆಂಬ ಜೀವಿಗಳ ಆಸೆಯೇ ಈ ಸೃಷ್ಟಿಯ ಅಗತ್ಯಕ್ಕೆ ಕಾರಣವಾಗಿದೆ.

ಏಕೆ ತೊಡಕು, ಗೊಂದಲ?

ಈ ಲೌಕಿಕ ಸೃಷ್ಟಿಯಲ್ಲಿ ಏಕೆ ಇಷ್ಟೊಂದು ತೊಡಕುಗಳಿವೆ ಎಂದು ಅನೇಕ ಬಾರಿ ಜನರು ಪ್ರಶ್ನಿಸುತ್ತಾರೆ. ಕಾನೂನು ಕಟ್ಟಳೆಗಳಿವೆ, ಪಾಪ-ಪುಣ್ಯದ ಅಂಶವಿದೆ ಮತ್ತು ಕರ್ಮ, ಕಾಲ ಇದೆ. ಯಾಕೆ? ಜೀವಿಗಳಿಗೆ ಐಹಿಕವಾಗಿ ಆನಂದಿಸಬೇಕೆಂಬ ಆಸೆಯೇ ಇದಕ್ಕೆಲ್ಲ ಕಾರಣ. ಅಸೀಮಿತ ಭಗವಂತನ ಅಸೀಮಿತ ಅಪೇಕ್ಷೆಗಳ ಕಾರಣ ಆಧ್ಯಾತ್ಮಿಕ ಲೋಕ ಅಸ್ತಿತ್ವದಲ್ಲಿದೆ ಮತ್ತು ಸೀಮಿತ ಜೀವಗಳ ಸೀಮಿತ ಆಸೆಗಳ ಕಾರಣ ಲೌಕಿಕ ಜಗತ್ತು ಅಸ್ತಿತ್ವದಲ್ಲಿದೆ ಎಂದು ಚೈತನ್ಯ ಚರಿತಾಮೃತದಲ್ಲಿ ವಿವರಿಸಲಾಗಿದೆ. ಆದರೆ ಈ ಸೃಷ್ಟಿಯು ತ್ರಿಗುಣಗಳ ರೂಪ. ಅವುಗಳನ್ನು ಭಿನ್ನವಾದ ಪ್ರಮಾಣದಲ್ಲಿ ಮಿಶ್ರಣ ಮಾಡಲಾಗುವುದು ಮತ್ತು ಭಿನ್ನವಾದ ಗುಣಗಳನ್ನು ಪಡೆಯಲಾಗುವುದು. ಅದೇ ಲೌಕಿಕ ವಸ್ತು ಅಥವಾ ಶಕ್ತಿಯನ್ನು ಮರ, ಉಕ್ಕು ಅಥವಾ ಮಣ್ಣು, ನೀರು ಅಥವಾ ಬೆಂಕಿಯಾಗಿ ಪರಿವರ್ತಿಸಲಾಗುವುದು. ಇದಕ್ಕೆ ಐಹಿಕ ಶಕ್ತಿ ಎಂದು ಕರೆಯುತ್ತಾರೆ. ಮತ್ತು ಜೀವಿಗಳಿಗೆ ತಮ್ಮ ಮನಸ್ಸಿನ ಮೇಲೆ ಗುಣಗಳ ಪ್ರಭಾವ ಕಂಡು ಗೊಂದಲ. ಈ ಎಲ್ಲ ಭಿನ್ನವಾದ ಸೃಷ್ಟಿಗಳು ತಮ್ಮ ಸಂತೋಷಕ್ಕೆಂದೇ ಆಗಿರುವುದೆಂದು ಜೀವಿಗಳು ನಂಬಿದ್ದಾರೆ.

ಶ್ರೀಲ ಪ್ರಭುಪಾದರು ಒಂದು ಉದಾಹರಣೆ ನೀಡುತ್ತಾರೆ. ಸಿನಿಮಾ ತೆರೆಯ ಮೇಲೆ ರಸಗುಲ್ಲಾದ ಚಿತ್ರವಿದೆ ಎಂದುಕೊಳ್ಳಿ. ಅದನ್ನು ತಿಂದು ನೀವು ಆನಂದಿಸುವುದು ಸಾಧ್ಯವೇ? ಅದೊಂದು ಚಿತ್ರವಷ್ಟೆ. ಈ ಲೌಕಿಕ ಜಗತ್ತಿನಲ್ಲಿ ಅದು ಬಹು ಆಯಾಮದ್ದು. ಏಕೆಂದರೆ ನೀವು ಏನನ್ನೋ ತೆಗೆದುಕೊಳ್ಳುವಿರಿ, ರುಚಿ ನೋಡುವಿರಿ, ವಾಸನೆ ನೋಡುವಿರಿ, ಅದರ ಬಗೆಗೆ ಕೇಳುವಿರಿ. ಆದರೆ ಅಂತಿಮವಾಗಿ ಅದೊಂದು ವಸ್ತು ಮತ್ತು ನೀವು ಆತ್ಮ. ಆದ್ದರಿಂದ ವಸ್ತುವನ್ನು ನೀವು ಆನಂದಿಸಲಾರಿರಿ, ನೀವು ಹತಾಶರಾಗುವಿರಿ.

ಈ ಲೌಕಿಕ ಚಟುವಟಿಕೆಗಳು ಅಜ್ಞಾನ ಕ್ರಮದ ಫಲ. ನೀವು ಲೌಕಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಂಡಷ್ಟೂ ಮಾಯಾ ಲೋಕದ ಆಳಕ್ಕೆ ಹೋಗುವಿರಿ. ನಾನು ಅಧ್ಯಾತ್ಮ ಆತ್ಮ, ನಾನು ಐಹಿಕವಾದುದನ್ನು ಆನಂದಿಸಲೆಂದು ಇಲ್ಲ, ಅದು ನನಗೆ ಎಂದೂ ಸಂತೋಷ ತರುವುದಿಲ್ಲ. ಆದುದರಿಂದ ಪ್ರಸ್ತುತದ ಕಲಿಯುಗದಲ್ಲಿ ರಜೋಗುಣವು ಪ್ರಮುಖವಾಗಿದೆ ಎಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ. ರಜೋಗುಣವೆಂದರೆ ಅದು ಲೌಕಿಕ ಪ್ರಗತಿಗೆ ಆಧಾರ. ಲೌಕಿಕ ಪ್ರಗತಿ ಹೆಚ್ಚಾದಾಗ, ಅಜ್ಞಾನ ಪ್ರಮುಖವಾದಾಗ ಜನರು ತಮ್ಮ ಆಧ್ಯಾತ್ಮಿಕ ಸ್ವಭಾವವನ್ನು ಹೆಚ್ಚು ಮರೆಯುತ್ತಾ ಹೋಗುತ್ತಾರೆ.

ಗುಣ ವೈವಿಧ್ಯ

ಲೌಕಿಕ ಪ್ರಕೃತಿಯ ಪರಿವರ್ತನೆಯಾಗಿದ್ದರೂ ಕೂಡ ಅವುಗಳಲ್ಲಿ ಶ್ರೇಣಿ ಅಥವಾ ಹಂತಗಳಿವೆ ಎಂದು ಪ್ರಥಮ ಸ್ಕಂಧದ ಎರಡನೆಯ ಅಧ್ಯಾಯದಲ್ಲಿ ಸೂತ ಗೋಸ್ವಾಮಿ ಅವರು ಹೇಳುತ್ತಾರೆ. ರಜೋ ಗುಣವು ತಮೋ ಗುಣಕ್ಕಿಂತ ಉತ್ತಮ. ಆದರೆ ಸತ್ತ್ವ ಗುಣ ಅತ್ಯುತ್ತಮ, ಏಕೆಂದರೆ – ಸತ್ತ್ವಂ ಯದ್‌ ಬ್ರಹ್ಮ ದರ್ಶನಂ – ಸತ್ತ್ವ ಗುಣದಲ್ಲಿ ಆಧ್ಯಾತ್ಮಿಕ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೂ ಈ ಐಹಿಕ ಜಗತ್ತಿನಲ್ಲಿ ಉಳಿದ ಎರಡು ಗುಣಗಳಿಂದ ಸತ್ತ್ವ ಗುಣವು ಕಲುಷಿತಗೊಂಡಿದೆ. ಭಕ್ತಿ ಸೇವೆಯ ಹೊರತಾಗಿ ಈ ಲೌಕಿಕ ಜಗತ್ತಿನಲ್ಲಿ ಪರಿಶುದ್ಧವಾದ ಸತ್ತ್ವವಿಲ್ಲ.

ಈ ಮೂರೂ ಗುಣಗಳು ಚಟುವಟಿಕೆಯಲ್ಲಿ ತೊಡಗಿದಾಗ ಮೇಲುಗೈ ಸಾಧಿಸಲು ಪರಸ್ಪರ ಸ್ಪರ್ಧಿಸುತ್ತವೆ ಎಂದು ಭಗವದ್ಗೀತೆಯ 14ನೇ ಅಧ್ಯಾಯದಲ್ಲಿ ಕೃಷ್ಣನು ವಿವರಿಸುತ್ತಾನೆ. ಸತ್ತ್ವ ಗುಣವನ್ನು ಉತ್ತೇಜಿಸುವ ಚಟುವಟಿಕೆಯಲ್ಲಿ ತೊಡಗಿದ್ದರೂ ವ್ಯಕ್ತಿಗೆ ದೇವೋತ್ತಮನನ್ನು ಅರಿಯಲು ನೆರವಾಗದು. ಏಕೆಂದರೆ ಭಗವಂತನು ಎಲ್ಲ ಗುಣಗಳಿಗೂ ಅಲೌಕಿಕನು. ವಾಸ್ತವವಾಗಿ ಕೃಷ್ಣನು ಎಲ್ಲ ಗುಣಗಳಿಂದ ಅತೀತನಾದ ಗುರುತುಳ್ಳವನು. ಅವನು ಎಲ್ಲ ಗುಣಗಳ ಒಡೆಯ.

ಸತ್ತ್ವ ಗುಣದಲ್ಲಿ ಪ್ರಮುಖವಾಗಿ ನೆಲೆಸಿದ್ದರೂ ಲೌಕಿಕ ಪ್ರಕೃತಿಯ ಸ್ವಭಾವಕ್ಕೆ ಸದಾ ಅಲೌಕಿಕನಾದ ಭಗವಂತನನ್ನು ಗ್ರಹಿಸಿಕೊಳ್ಳುವುದು ಜೀವಿಗಳಿಗೆ ತುಂಬ ಕಷ್ಟ. ಆದುದರಿಂದ ಭಗವಂತನನ್ನು ಅರಿಯುವ ಒಂದೇ ಮಾರ್ಗವೆಂದರೆ ಜೀವಿಯು ತಾನೇ ಗುಣಗಳನ್ನು ಮೀರಿ ಆಧ್ಯಾತ್ಮಿಕ ವೇದಿಕೆಗೆ ಬರಬೇಕು. ಮೂರೂ ಗುಣವನ್ನೂ ಮೀರಬೇಕೆಂದರೆ ವ್ಯಕ್ತಿಗೆ ಭಕ್ತಿ ಸೇವೆಯೊಂದೆ ಮಾರ್ಗ ಎಂದು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಭಕ್ತಿಯ ಮೂಲಕ ಮಾತ್ರ ನೀವು ಕೃಷ್ಣನೊಂದಿಗೆ ಸಂಪರ್ಕಕ್ಕೆ ಬಂದು ಎಲ್ಲ ಗುಣಗಳಿಂದ ಮೇಲಕ್ಕೆ ಬರಬಹುದು. ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ನೀವು ಕೃಷ್ಣನೊಂದಿಗೆ ನೇರ ಸಂಪರ್ಕಕ್ಕೆ ಬರುವಿರಿ. ಏಕೆಂದರೆ ಕೃಷ್ಣನು ತನ್ನ ಪವಿತ್ರ ನಾಮದಲ್ಲಿದ್ದಾನೆ.

ಲೌಕಿಕ ಚಟುವಟಿಕೆಗಳ ಮೂರು ಪ್ರಮುಖ ಲಕ್ಷಣಗಳೆಂದರೆ ದ್ರವ್ಯ ಜ್ಞಾನ ಕ್ರಿಯ – ಮೊದಲು ಒಟ್ಟಾರೆ ವಸ್ತು ಇರುತ್ತದೆ ಅಥವಾ ಅಭೂತ ಮತ್ತು ಈ ಭಿನ್ನವಾದ ಲೌಕಿಕ ವಿಷಯ, ವಸ್ತುಗಳ ಕುರಿತ ಐಹಿಕ ಜ್ಞಾನವೇ ಅದೈವ ಮತ್ತು ಅಧ್ಯಾತ್ಮ ಎಂದರೆ ವೈವಿಧ್ಯವಾದ ಲೌಕಿಕ ಸೃಷ್ಟಿ. ಆದುದರಿಂದ ಲೌಕಿಕ ಚಟುವಟಿಕೆ ಎಂದರೆ ವ್ಯಕ್ತಿಯು ತನ್ನ ಇಂದ್ರಿಯ ತೃಪ್ತಿಗಾಗಿ ವಿವಿಧ ರೀತಿಯ ವಸ್ತುಗಳನ್ನು ಸೃಷ್ಟಿಸಲು ವಸ್ತುಗಳ ವಿವಿಧ ರೂಪವನ್ನು ಬಳಸುತ್ತಾನೆ. ಆದ್ದರಿಂದ ಮುಕ್ತಿಗಾಗಿ ಅಪೇಕ್ಷಿಸುವವರೂ ಲೌಕಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಅದರ ಫಲಿತಾಂಶ ಇಂದ್ರಿಯ ತೃಪ್ತಿಯಾಗುತ್ತದೆಯೆ ವಿನಾ ನಿಜವಾದ ಮುಕ್ತಿಯಾಗದು.

ಭಕ್ತಿ ಸೇವೆ

ಸ್ವಭಾವತಃ ಕ್ರಿಯಾಶೀಲನಾದ ಜೀವಿಗೆ ಐಹಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸಾಧ್ಯವಿಲ್ಲ. ಆದುದರಿಂದ ನೀವು ಭಕ್ತಿಯಲ್ಲಿ ತೊಡಗಿಕೊಂಡು ಲೌಕಿಕ ಚಟುವಟಿಕೆಗಳನ್ನು ನಿಲ್ಲಿಸಬೇಕು. ಆದುದರಿಂದ ಭಕ್ತಿ ಎಂದರೆ ಆಧ್ಯಾತ್ಮಿಕ ಚಟುವಟಿಕೆ, ಲೌಕಿಕ ಚಟುವಟಿಕೆ ಅಥವಾ ಗುಣಗಳ ಪರಸ್ಪರ ಕ್ರಿಯೆ ಇಲ್ಲ. ಆದರೆ ಭಗವಂತನು ಮಹತ್‌ ತತ್ತ್ವದತ್ತ ನೋಟ ಹರಿಸಿ ಲೌಕಿಕ ಚಟುವಟಿಕೆಗಳನ್ನು ಆರಂಭಿಸಿದ್ದಾನೆ ಎಂದು ಮತ್ತೊಮ್ಮೆ ವಿವರಿಸಲಾಗಿದೆ. ಪ್ರಭುಪಾದರು ಹೇಳುವಂತೆ, ಒಬ್ಬ ತಜ್ಞ ಎಂಜಿನಿಯರ್‌ ಬೃಹತ್‌ ಯಂತ್ರವನ್ನು ನಿರ್ಮಿಸಬಹುದು. ಆದರೆ ಅದು ಚಲಿಸುವಂತೆ ಮಾಡಲು ಮೊದಲು ಅದನ್ನು ತಾನೇ ತಳ್ಳುತ್ತಾನೆ. ಅನಂತರ ಅದು ರೂಪಿಸಿರುವ ಕಾರ್ಯಕ್ರಮದಂತೆ ತಾನೇ ಚಲಿಸುತ್ತದೆ. ಅದೇ ರೀತಿ ಕೃಷ್ಣನು ಈ ಲೌಕಿಕ ಜಗತ್ತಿಗೆ ಕಾರ್ಯಕ್ರಮ ರೂಪಿಸಿದ್ದಾನೆ ಮತ್ತು ಮಹತ್‌ ತತ್ತ್ವದತ್ತ ನೋಟ ಹರಿಸಿ ಅದಕ್ಕೆ ಮೊದಲು ಚಾಲನೆ ನೀಡುತ್ತಾನೆ. ಕರ್ಮ, ಕಾಲ ಮತ್ತು ಗುಣ – ಇವು ಈ ಲೌಕಿಕ ಸೃಷ್ಟಿಯ ಮೂಲ ಲಕ್ಷಣಗಳಾಗಿದ್ದು ಭಗವಂತನು ಅವುಗಳನ್ನು ಸ್ಥಗಿತಗೊಳಿಸುವವರೆಗೂ ಅವು ಮುಂದುವರಿಯುತ್ತವೆ.

ಬೈಬಲ್‌ನಲ್ಲಿ ಇರುವಂತೆ – ಸೃಷ್ಟಿ ಇರಲಿ ಎಂದು ಭಗವಂತನೆಂದ. ದೇವರು ಹೇಳಿರುವುದನ್ನು ತಿಳಿಸುವ ಕ್ರಿಶ್ಚಿಯನ್ನರು ಸೃಷ್ಟಿ ಹೇಗಾಯಿತೆಂದು ವಿವರಿಸುವುದಿಲ್ಲ. ಅದನ್ನು ನಮ್ಮ ಶಾಸ್ತ್ರಗಳು, ಭಾಗವತ ವಿವರಿಸುತ್ತವೆ. ಭಗವಂತನ ಇಚ್ಛೆಯಂತೆ ಆರಂಭವಾಗುತ್ತದೆ. ಅನಂತರ ಪರಿವರ್ತನೆ ಆಗುತ್ತದೆ. ಜೀವಿಗಳ ಹಿಂದಿನ ಪ್ರಳಯದ ಸಂದರ್ಭದ ಕರ್ಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಕರ್ಮದ ಆಧಾರದ ಮೇಲೆ ಕಾಲವು ಗುಣಗಳನ್ನು ಮುನ್ನಡೆಸುತ್ತದೆ. ಅನೇಕ ರೀತಿಯ ಚಟುವಟಿಕೆಗಳು ನಡೆದು ಜೀವಿಗಳು ಭಿನ್ನವಾದ ದೇಹಗಳನ್ನು ಪಡೆಯುತ್ತಾರೆ. ಜೀವಿಗಳು ವಿಧ ವಿಧವಾದ ಐಹಿಕ ಚಟುವಟಿಕೆಗಳಲ್ಲಿ ತೊಡಗಲು ಕಾಲ ಪುನಃ ಗುಣಗಳ ಬಗೆಗೆ ಕ್ರಿಯಾಶೀಲವಾಗುತ್ತದೆ. `ಸಾಕು ನಿನ್ನ ಆಟ, ಮನೆಗೆ ಹಿಂತಿರುಗು’ ಎಂದು ಭಗವಂತನು ಜೀವಿಯ ಚಟುವಟಿಕೆ ನಿಲ್ಲಿಸುವ ನಿರ್ಧಾರ ಕೈಗೊಳ್ಳುವವರೆಗೂ ಇದು ಮುಂದುವರಿಯುತ್ತದೆ. ಮಹಾ ವಿಷ್ಣುವಿನ ದೇಹವೇ ನಿವಾಸವಾಗಿದ್ದು, ಯಾರು ಭಗವದ್ಧಾಮಕ್ಕೆ ಹೋಗಲು ಸಿದ್ಧರಾಗಿಲ್ಲವೋ ಅವರು ಮುಂದಿನ ಸೃಷ್ಟಿವರೆಗೂ ಅಲ್ಲಿಯೇ ವಿಶ್ರಾಂತಿ ಪಡೆಯಬೇಕಾಗುತ್ತದೆ.

ಭಾವಾರ್ಥ ಒಂದರಲ್ಲಿ ಶ್ರೀಲ ಪ್ರಭುಪಾದರು ಹೇಳುತ್ತಾರೆ – ತಮಗಿಷ್ಟಬಂದಂತೆ ನಡೆಯಲು ಬದ್ಧಾತ್ಮಗಳಿಗೆ ಅವಕಾಶ ನೀಡುವುದಕ್ಕಾಗಿ ಲೌಕಿಕ ಲೋಕದ ಸೃಷ್ಟಿ ಮತ್ತು ನಾಶವು ಭಗವಂತನ ನಿಯತ ಕ್ರಿಯೆಯಾಗಿದೆ. ತನ್ಮೂಲಕ ನಾಶದ ಸಮಯದಲ್ಲಿ ಅವರ ಅಪೇಕ್ಷೆ ಇದ್ದಂತೆ ಅವರ ವಿಧಿಯನ್ನು ಸೃಷ್ಟಿಸುವುದು ಇದರ ಉದ್ದೇಶ. ಆದುದರಿಂದ ಗುಣಗಳ ಈ ಪರಿವರ್ತನೆಯು ಎಲ್ಲ ಲೌಕಿಕ ಚಟುವಟಿಕೆಗಳಿಗೆ ಆಧಾರ. ಈ ಅಹಂಕಾರದಲ್ಲಿ ಮುಳುಗಿರುವ ಜೀವಿಯು ಯೋಚಿಸುವುದು `ಕೆಲ ಐಹಿಕ ಚಟುವಟಿಕೆಗಳನ್ನು ಮಾಡುವುದು ನಾನೇ.’ ಆದರೆ ವಾಸ್ತವವಾಗಿ ಗುಣಗಳೇ ಮುನ್ನಡೆಸುವುದು. ಈ ಗುಣಗಳು ಪರಸ್ಪರ ಕ್ರಿಯಾಶೀಲವಾಗಿದ್ದು ಅನೇಕ ಬದಲಾವಣೆಗಳನ್ನು ಉಂಟು ಮಾಡುತ್ತಿವೆ.

ಈ ಲೇಖನ ಶೇರ್ ಮಾಡಿ