ಶಕ್ತಿವಂತನಾದ ಮತ್ತು ಉದಾತ್ತನಾದ ಒಬ್ಬ ಮಹಾರಾಜನ ಆಸ್ಥಾನದಲ್ಲಿ ಇರುವ ಮಂತ್ರಿಗಳು ಕೂಡ ಉತ್ತಮರೂ, ಉದಾತ್ತರಾದವರೂ ಆಗಿರುತ್ತಾರೆ. ಆದರೆ ಒಬ್ಬ ದುಷ್ಟನೂ ಕ್ರೂರಿಯೂ ಆದ ಮಹಾರಾಜನ ಸಲಹೆಗಾರರು ಕೆಟ್ಟವರೇ ಆಗಿರುತ್ತಾರೆ. ಮಥುರೆಯ ಮಹಾರಾಜ ಕಂಸನ ವಿಷಯದಲ್ಲಿ ಹೀಗೇ ಆಗಿತ್ತು.
ಕಂಸನ ಸಲಹೆಗಾರರು ಅವನಂತೆಯೇ ರಾಕ್ಷಸರಾಗಿದ್ದರು. ಅವನ ಎಂಟನೆಯ ಸೋದರಳಿಯನಾದ ಕೃಷ್ಣನನ್ನು ಪತ್ತೆ ಹಚ್ಚಿ ಕೊಲ್ಲಬೇಕೆಂದು ಅವರು ಸಲಹೆ ನೀಡಿದರು. ಮಾಟಗಾತಿ ಪೂತನಾ ಮೊದಲನೆಯ ಪ್ರಯತ್ನ ಮಾಡಿದಳು. ಆದರೆ ಶಿಶು ಕೃಷ್ಣನು ಅವಳನ್ನು ಸಂಹಾರ ಮಾಡಿದ.
ಒಂದು ದಿನ ನಂದ ಮಹಾರಾಜ ಮತ್ತು ಯಶೋದೆಯ ಅರಮನೆಯಲ್ಲಿ ಪುಟ್ಟ ಕೃಷ್ಣನು ತನ್ನ ಆಟದ ಬೊಂಬೆಗಳೊಂದಿಗೆ ಆಟವಾಡುತ್ತಿದ್ದ. ಯಶೋದೆಯು ಅಡಿಗೆಯ ಮನೆಯಲ್ಲಿ ಏನೋ ಕೆಲಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಕೆಲವೇ ತಿಂಗಳ ಎಳೆಯ ಮಗು ಕೃಷ್ಣ ಚಾಪೆಯ ಮೇಲೆ ಮಲಗಿದ್ದ. ನೋಡಿದವರೆಲ್ಲ ಕೃಷ್ಣನಿಂದ ಆಕರ್ಷಿತರಾಗುತ್ತಿದ್ದರು. ಅವನ ತಾಯಿಯು ಥಳಥಳಿಸುವ ಆಭರಣಗಳಿಂದ ಅವನನ್ನು ಅಲಂಕರಿಸಿದ್ದಳು. ಅವನ ಪುಟ್ಟ ಕೈಗಳಿಗೆ ಬಳೆಗಳನ್ನು ತೊಡಿಸಿದ್ದಳು. ಅವನ ಕೋಮಲವಾದ ಕಣಕಾಲಿನ ಸುತ್ತ ಕಾಲ್ಗೆಜ್ಜೆಯನ್ನು ಕಟ್ಟಿದ್ದಳು. ಅವನು ಮೃದುವಾದ ಗುಲಾಬಿ ಬಣ್ಣದ ಪಾದಗಳನ್ನು ಆಡಿಸುವಾಗ ಈ ಕಾಲ್ಗೆಜ್ಜೆಗಳು ಕಿಣಿಕಿಣಿನಾದ ಮಾಡುತ್ತಿದ್ದವು. ಅವನ ತಲೆಗೂದಲಿನಲ್ಲಿ ಒಂದು ನವಿಲುಗರಿಯನ್ನು ಸಿಕ್ಕಿಸಿದ್ದರು. ಅವನ ಸೊಂಟದ ಸುತ್ತ ಒಂದು ರೇಷ್ಮೆ ಪೀತಾಂಬರವನ್ನು ಉಡಿಸಲಾಗಿತ್ತು.
ಒಂದು ದಿನ ತೃಣಾವರ್ತನು ಗೋಕುಲದತ್ತ ರೊಯ್ಯನೆ ಬೀಸಿಕೊಂಡು ಬಂದ. ಸರಳ ಜೀವಿಗಳಾದ ಗ್ರಾಮಸ್ಥರ ಪ್ರಶಾಂತ ಜಗತ್ತಿನಲ್ಲಿ ಬಿರುಗಾಳಿಯ ಅಲೆಗಳನ್ನೇ ಎಬ್ಬಿಸಿದ. ಅವನು ಕಂಸನು ಕಳುಹಿಸಿದ್ದ ಎರಡನೆಯ ರಾಕ್ಷಸ. ಸುಂಟರಗಾಳಿಯ ಸ್ವರೂಪದವನಾದ ಅವನು ತನ್ನ ಹಾದಿಯಲ್ಲಿ ಎದುರಾಗುತ್ತಿದ್ದ ಎಲ್ಲವನ್ನೂ ನಿರ್ನಾಮ ಮಾಡುತ್ತಿದ್ದ. ಅವನು ಹಸುಗಳನ್ನೇ ನೆಲದಿಂದ ಮೇಲಕ್ಕೆ ಎತ್ತಿಬಿಟ್ಟ . ಗಾಡಿಗಳನ್ನು ಎತ್ತಿ ಕಟ್ಟಡಗಳ ಮೇಲೆ ಬಿಸಾಡಿದ. ಮರಗಳನ್ನು ಬುಡಮೇಲು ಮಾಡಿ ಗ್ರಾಮದಾದ್ಯಂತ ಚೆಲ್ಲಾಡಿದ. ಯಮುನಾ ನದಿಯ ನೀರನ್ನೇ ಕಡೆದು ಪ್ರವಾಹ ಉಕ್ಕುವಂತೆ ಮಾಡಿ ಗ್ರಾಮವನ್ನೇ ಮುಳುಗಿಸಲು ಅವನು ಪ್ರಯತ್ನ ಮಾಡಿದ.

ಗೋಕುಲದ ಮೇಲೆ ಬೀಸುವಾಗ, ತನಗಿಂತ ಅಧಿಕವಾದ ಶಕ್ತಿಯೊಂದು ಇಲ್ಲಿ ಇರಬೇಕು ಎಂದು ತೃಣಾವರ್ತನಿಗೆ ಭಾಸವಾಯಿತು. ಅವನು ಕೆಳಗೆ ದೃಷ್ಟಿ ಹರಿಸಿದ. ಗ್ರಾಮದ ಅತ್ಯಂತ ದೊಡ್ಡ ಮನೆಯ ಅಂಗಳದಲ್ಲಿ ಪುಟ್ಟ ಕಂದನೊಬ್ಬ ಸಮಾಧಾನಚಿತ್ತನಾಗಿ ಅಂಬೆಗಾಲಿಡುತ್ತಿದ್ದ. ಮಗುವಿನ ಮೈಮೇಲಿದ್ದ ಆಭರಣಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಿದ್ದವು. ಪೂತನಾಳನ್ನು ಕೊಂದವನು ಈ ಮಗುವೇ ಎಂದು ತೃಣಾವರ್ತನಿಗೆ ಗೊತ್ತಾಗಿ ಹೋಯಿತು. ಥಟ್ಟನೆ ಕೆಳಗಿಳಿದ ತೃಣಾವರ್ತನು, ಕ್ಷಿಪ್ರವಾಗಿ ಕೃಷ್ಣನನ್ನು ಎತ್ತಿಕೊಂಡು ಆಕಾಶಕ್ಕೆ ನೆಗೆದುಬಿಟ್ಟ. ಆಕಾಶದೆತ್ತರದಲ್ಲಿ ಕೃಷ್ಣನನ್ನು ಉಸಿರುಕಟ್ಟಿಸಿ ಸಾಯಿಸಬೇಕೆನ್ನುವುದು ಆ ರಾಕ್ಷಸನ ಉದ್ದೇಶವಾಗಿತ್ತು.
ಕೃಷ್ಣನು ಆಟವಾಡುವಾಗ ಹೊರಡಿಸುತ್ತಿದ್ದ ಕೂಜನದ ಸದ್ದು ಏಕೆ ಕೇಳಿಸುತ್ತಿಲ್ಲ ಎಂದು ಯಶೋದೆಗೆ ಅಚ್ಚರಿಯಾಯಿತು. ಏನಾಯಿತು ಎಂದು ನೋಡಲು ಅವಳು ಅಡಿಗೆ ಮನೆಯಿಂದ ಹೊರಬಂದಳು. ಮಗು ಮಾಯವಾಗಿದ್ದು ಕಂಡು ಅವಳಿಗೆ ಆಘಾತವಾಯಿತು. ಮೇಲೆ ಎಲ್ಲೋ ಅವನು ಕಿಲಕಿಲ ನಕ್ಕಂತಾಯಿತು. ಯಶೋದ ತಲೆ ಎತ್ತಿ ನೋಡಿದಳು. ಕೃಷ್ಣನು ತೃಣಾವರ್ತನ ಕೈಯಲ್ಲಿದ್ದ ! ಭಯಭೀತಳಾದ ಯಶೋದೆ ಚೀರುತ್ತಾ ಸಹಾಯಕ್ಕಾಗಿ ಕೂಗಿದಳು. ಗ್ರಾಮದ ಜನರು ಓಡೋಡಿ ಬಂದರು. ಆದರೆ ರಾಕ್ಷಸನು ಕೃಷ್ಣನನ್ನು ಆಕಾಶಕ್ಕೆ ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿ ಅಸಹಾಯಕರಾಗಿ ನಿಂತರು.
ಮರಗಳಿಗಿಂತ ಎಷ್ಟೋ ಎತ್ತರದಲ್ಲಿ, ಆಕಾಶದ ಅಂತರಾಳದಲ್ಲಿ ಶಿಶು ಕೃಷ್ಣನು ಅನಿರೀಕ್ಷಿತವಾದ ಈ ಸುಂಟರಗಾಳಿಯ ಸವಾರಿಯನ್ನು ಆನಂದಿಸುತ್ತಿದ್ದ. ಸುಂಟರಗಾಳಿಯ ಅನೇಕ ಸುಳಿಗಳಲ್ಲಿ ಅವನು ಜಾರುಬಂಡೆ ಆಟವಾಡುತ್ತಿದ್ದ. ಏಳುಬೀಳಿನ ಈ ಮೇಲಾಟದಲ್ಲಿ ಅವನಿಗೆ ಮೈ ಜುಂ ಎನ್ನಿಸುತ್ತಿತ್ತು. ಕೃಷ್ಣನು ಹಿಗ್ಗಿನಿಂದ ಕೇಕೆ ಹಾಕುತ್ತಿದ್ದ.

ಇದ್ದಕ್ಕಿದ್ದಂತೆಯೇ ತೃಣಾವರ್ತನು ಕೃಷ್ಣನಿಗೆ ಉಸಿರುಗಟ್ಟಿಸುವ ಉದ್ದೇಶದಿಂದ ಎದೆಗೆ ಬಿಗಿಯಾಗಿ ಅವಚಿಕೊಂಡ. ಆದರೆ ಆ ರಾಕ್ಷಸನಿಗೆ ಏನಾಯಿತೆಂದು ಗೊತ್ತಾಗುವಷ್ಟರಲ್ಲಿ ಕೃಷ್ಣನು ಅವನ ಭುಜಕ್ಕೆ ಎಗರಿ ಕುಳಿತು ಕಾಲಿನಿಂದ ಭದ್ರವಾಗಿ ಕುತ್ತಿಗೆಯನ್ನು ಹಿಡಿದುಕೊಂಡ. ಭಾರವೇ ಇಲ್ಲದಂತೆ ತೋರುತ್ತಿದ್ದ ಪುಟ್ಟ ಮಗು ಈಗ ನಿಧಾನವಾಗಿ ತನ್ನ ಭಾರವನ್ನು ಹೆಚ್ಚಿಸಿಕೊಳ್ಳಲಾರಂಭಿಸಿದ. ಅವನು ಎಷ್ಟು ಭಾರವಾದನೆಂದರೆ ಸುಂಟರಗಾಳಿಗೆ ಅವನನ್ನು ಇನ್ನು ಹೊತ್ತುಕೊಂಡಿರಲು ಸಾಧ್ಯವಾಗಲಿಲ್ಲ.
ತೃಣಾವರ್ತನಿಗೆ ಬಹಳ ಆಯಾಸವಾಯಿತು. ಕೃಷ್ಣನ ಭಾರವನ್ನು ತಾಳಿಕೊಳ್ಳಲು ಇನ್ನು ಸಾಧ್ಯವಿಲ್ಲ ಎನ್ನಿಸಿತು. ತೃಣಾವರ್ತನು ಸಂಪೂರ್ಣವಾಗಿ ತನ್ನ ನಿಯಂತ್ರಣವನ್ನು ಕಳೆದುಕೊಂಡು ಭೂಮಿಯ ಕಡೆಗೆ ರಭಸದಿಂದ ಬೀಳಲಾರಂಭಿಸಿದ. ಭೂಮಿಯ ಮೇಲಿದ್ದ ಒಂದು ದೊಡ್ಡ ಕಲ್ಲು ಚಪ್ಪಡಿಯ ಮೇಲೆ ಧಡಾರನೆ ಬಿದ್ದ ಅವನು ಕ್ಷಣಮಾತ್ರದಲ್ಲಿ ಸತ್ತುಹೋದ.

ಈ ಘಟನೆಯನ್ನು ನೋಡಿ ಗ್ರಾಮಸ್ಥರು ನಿಬ್ಬೆರಗಾದರು. ರಾಕ್ಷಸನು ಸತ್ತಿದ್ದಕ್ಕೆ ಅವರಿಗೆ ಬಹಳ ಸಂತೋಷವಾಗಿತ್ತು. ಆದರೆ ಅವರಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ ಮಗು ಕೃಷ್ಣ ಎಲ್ಲಿ ಹೋದ? ರಾಕ್ಷಸನ ಎದೆಯ ಮೇಲೆ ಅವನು ಸುರಕ್ಷಿತವಾಗಿ ಆಟವಾಡುತ್ತಿದ್ದುದು ಅವರಿಗೆ ಗೋಚರಿಸಿತು. ಯಶೋದೆಯು ಮಗು ಕೃಷ್ಣನನ್ನು ಎತ್ತಿಕೊಂಡು ಅವನ ಹಣೆಗೆ ಹೂಮುತ್ತನ್ನಿತ್ತಳು. ಅನಂತರ ಅವನನ್ನು ಸುರಕ್ಷಿತವಾಗಿರಿಸಲು ಮನೆಯೊಳಗೆ ಕರೆದುಕೊಂಡು ಹೋದಳು.






Leave a Reply