ಕಾಲದ ಎರಡು ಮುಖ

ಈ ಲೋಕದಲ್ಲಿ ಕಾಲದ ಪ್ರವಾಹ ಯಾರಿಗೂ ಕಾಯುವುದಿಲ್ಲ.
ಆದರೆ ಈ ವಿಶ್ವದ ಆಚೆ, ಕಾಲವು ಬೇರೆಯದೇ ರೂಪವನ್ನು ಪಡೆದುಕೊಳ್ಳುತ್ತದೆ.

ಕಾಲ ಎಂದರೆ ಏನು? ಯುಗಾಂತರಗಳಿಂದ ಈ ಪ್ರಶ್ನೆಯು ತತ್ತ್ವಜ್ಞಾನಿಗಳನ್ನು ಗೊಂದಲದಲ್ಲಿ ಇಟ್ಟಿದೆ. ನಿಮಗೆ ತತ್‌ಕ್ಷಣ ಉತ್ತರ ನೀಡಬೇಕೆನಿಸಿದರೆ ನೀವು “ವಸ್ತುಗಳನ್ನು ಬದಲಾವಣೆ ಮಾಡುವುದೇ ಕಾಲ” ಎಂದು ಹೇಳಬಹುದು. ಅಥವಾ “ಗಡಿಯಾರವು ಏನನ್ನು ತೋರಿಸುತ್ತದೆಯೋ ಅದೇ ಕಾಲ” ಎಂಬ ಐನ್‌ಸ್ಟೀನ್‌ ಹೇಳಿಕೆ ಜೊತೆಗೇ ನೀವೂ ದನಿಗೂಡಿಸಬಹುದು. ಅಥವಾ ಈ ಪ್ರಶ್ನೆಯೇ ಕಾಲಹರಣ ಎಂದೂ ನೀವು ಭಾವಿಸಬಹುದು.

ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತನ್ನದೇ ಉತ್ತರವನ್ನು ಕೆಲವೇ ಪದಗಳಲ್ಲಿ ನೀಡುತ್ತಾನೆ, “ನಾನು ಕಾಲನು. ಜಗತ್ತುಗಳ ಮಹಾನ್‌ ನಾಶಕ.” ಭಗವದ್ಗೀತೆ ಮತ್ತು ಇತರ ವೈದಿಕ ಸಾಹಿತ್ಯಗಳ ಪ್ರಕಾರ ಕಾಲವು ದೇವೋತ್ತಮನ ಅಚಿಂತ್ಯ ಶಕ್ತಿ. ಅವನು ಅದರ ಮೂಲಕ ಎಲ್ಲವನ್ನೂ ಅಂತಿಮವಾಗಿ ನಾಶಪಡಿಸುತ್ತಾನೆ.

ಭೌತಿಕ ವಸ್ತುಗಳ ಚಲನೆಯಲ್ಲಿ ನಾವು ಕಾಲವನ್ನು ಅಳತೆ ಮಾಡುತ್ತೇವೆ. ಭೂಮಿಯು ಸೂರ್ಯನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲವನ್ನು ನಾವು ಒಂದು ವರ್ಷ ಎನ್ನುತ್ತೇವೆ. ಚಂದ್ರನು ಭೂಮಿಯ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲವನ್ನು ನಾವು ಒಂದು ತಿಂಗಳು ಎನ್ನುತ್ತೇವೆ. ಭೂಮಿಯು ತನ್ನದೇ ಕಕ್ಷೆಯಲ್ಲಿ ಸುತ್ತಲು ತೆಗೆದುಕೊಳ್ಳುವ ಸಮಯವನ್ನು ನಾವು ಒಂದು ದಿನ ಎನ್ನುತ್ತೇವೆ. ನಮ್ಮ ದಿನಗಳನ್ನು ಗಂಟೆ, ನಿಮಿಷ ಮತ್ತು ಸೆಕೆಂಡ್‌ಗಳಾಗಿ ವಿಭಾಗಿಸಲು ನಾವು ಇತರ ಭೌತಿಕ ವಸ್ತುಗಳ ಚಲನೆಯನ್ನು ಗಮನಿಸುತ್ತೇವೆ. ಮರಳು, ನೀರು, ಲೋಲಕ, ಸ್ಫಟಿಕ ಶಿಲೆ, ಸೀಸಿಯಂ ಅಣು – ಇವು ಮಾನವನು ತನ್ನ ಗಡಿಯಾರಗಳನ್ನು ತಯಾರಿಸಲು ಬಳಸಿದ ಕೆಲವು ವಸ್ತುಗಳು. ಈ ವಸ್ತುಗಳು ಗ್ರಹಗಳ ಚಲನೆಯ ಸಮಯದಲ್ಲಿ ಎಷ್ಟು ಬಾರಿ ತೂಗುತ್ತವೆ, ಸುತ್ತುತ್ತವೆ, ಕಂಪಿಸುತ್ತವೆ ಎಂಬುವುದನ್ನು ಗಮನಿಸುವ ಮೂಲಕ ನಾವು ನಮ್ಮ ದಿನವನ್ನು ಉಪವಿಭಾಗಿಸಬಹುದು.

ವಾಸ್ತವವಾಗಿ, ಭೌತಿಕವಾದ ಎಲ್ಲವೂ ಕಾಲದ ಪರಿಣಾಮಕ್ಕೆ ಒಳಗಾಗುವುದರಿಂದ ಪ್ರತಿಯೊಂದು ಭೌತಿಕವಾದ ವಸ್ತು ಅಥವಾ ಯಂತ್ರ-ರಚನೆಯು ಒಂದು ತರಹದಲ್ಲಿ ಗಡಿಯಾರವೇ. ನಮ್ಮ ಹೃದಯ ಬಡಿತ ಮತ್ತು ನಮ್ಮ ದೇಹಗಳು ಕ್ರಮೇಣ
ಕೊಳೆಯುವುದು – ಇದರಿಂದಲೂ  ಕೂಡ ನಾವು ಸಮಯದ ಲೆಕ್ಕ ಹಾಕಬಹುದು.

ಕಾಲ ಚಕ್ರ

ಸಂಸ್ಕೃತ ಶಬ್ದ ಕಾಲ ಚಕ್ರವು ಭೌತಿಕ ಲೋಕದ ಚಕ್ರೀಯವಾದ ಚಲನೆಯನ್ನು ಸೂಚಿಸುತ್ತದೆ. ಕಾಲ ಎನ್ನುವುದು ದೇವೋತ್ತಮ ಪರಮ ಪುರುಷನ ಹೆಸರು. ಒಂದು ಅಣುವಿನಿಂದ ಸಂಪೂರ್ಣ ಬ್ರಹ್ಮಾಂಡದವರೆಗೆ ಪ್ರತಿಯೊಂದು ಭೌತಿಕ ವಸ್ತುವಿಗೂ ಅದು ಅನುಸರಿಸಲೇಬೇಕಾದ ನಿರ್ದಿಷ್ಟ ಕಾಲ-ಚಕ್ರವಿದೆ. ಆದುದರಿಂದ ಕಾಲ-ಚಕ್ರವು ವಸ್ತುಗಳ ಚಲನೆಗೆ ಮಾತ್ರವಲ್ಲ ಅದರ ಒಟ್ಟಾರೆ ಅವಧಿಗೂ, ಅದರ ಆಯುಸ್ಸಿಗೂ ಸಂಬಂಧಿಸಿದೆ. ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ನಮ್ಮ ಲೌಕಿಕ ದೇಹಗಳು ಮುಂತಾದವು ಕಾಲಕ್ರಮೇಣ ಕಣ್ಮರೆಯಾಗುತ್ತವೆ ಮತ್ತು ಅವುಗಳ ನಿರ್ದಿಷ್ಟ ಅವಧಿಗಳೆಲ್ಲ ಕಾಲಚಕ್ರಗಳು.

ಆದರೂ ನಮ್ಮೆಲ್ಲ ವಿಶ್ಲೇಷಣೆ ಮತ್ತು ಅಳತೆಗಳು ಕಾಲವನ್ನು ಕುರಿತ ಗೊಂದಲವನ್ನು ಕಡಮೆ ಮಾಡಿಲ್ಲ. ಮಾನವ ನಿರ್ಮಿತ ಮತ್ತು ಪ್ರಕೃತಿಯ ಅಸಂಖ್ಯ ಗಡಿಯಾರಗಳ ಚಲನೆ ಮತ್ತು ಬದಲಾವಣೆಯು ನಾವು ಗ್ರಹಿಸಿಕೊಂಡಂತೆ ಕಾಲವಲ್ಲ, ಆದರೆ ಅದು ಈ ವಸ್ತುಗಳ ಮೇಲೆ ಕಾಲದ ಪರಿಣಾಮ. ನಾವು ಅಳತೆ ಮಾಡುತ್ತಿರುವುದೂ ಕಾಲವಲ್ಲ, ಆದರೆ ಪರಸ್ಪರ ಸಂಬಂಧಿಸಿದಂತೆ ಈ ಪರಿಣಾಮಗಳ ಅವಧಿ. ಕಾಲಕ್ಕೆ ಆದಿ ಅಂತ್ಯಗಳಿಲ್ಲದಿರುವುದರಿಂದ ಅದನ್ನು ಅಳತೆಮಾಡಲಾಗದು. ಭಗವಂತನ ಇಚ್ಛೆಯಂತೆ ಭೌತಿಕ ಲೋಕವನ್ನು ರೂಪಿಸಲು ತನ್ನ ಅನೇಕ ಚಕ್ರಗಳನ್ನು ನಿಯೋಜಿಸುವ ಅದು ಸಂಬಂಧಿಸಿದ ಎಲ್ಲ ಪರಿಣಾಮಗಳ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ.

ಆದರೆ ಕಾಲವನ್ನು ನಾವು ನೇರವಾಗಿ ನೋಡುವುದು ಸಾಧ್ಯವಿಲ್ಲವಾದರೂ ವೈದಿಕ ಸಾಹಿತ್ಯದ ನೆರವಿನಿಂದ, ಕಾಲದ ಪ್ರಭಾವಗಳನ್ನು ವೀಕ್ಷಿಸುವ ಮೂಲಕ ನಾವು ಹೆಚ್ಚು ಅರಿಯಬಹುದು. ಕಾಲದ ಒಟ್ಟಾರೆ ಪರಿಣಾಮವು `ನಾಶ’ ಎಂದು ನಾನು ಈಗಾಗಲೇ ಹೇಳಿದ್ದೇನೆ.

ಕಾಲನಾಗಿ ತಾನು “ಲೋಕಗಳ ದೊಡ್ಡ ವಿನಾಶಕ” ಎಂದು ಕೃಷ್ಣನು ಹೇಳುತ್ತಾನೆ. ಆದರೂ ಕಾಲವು ವಿನಾಶವನ್ನು ಮಾತ್ರವಲ್ಲ, ಸೃಷ್ಟಿ ಮತ್ತು ನಿರ್ವಹಣೆಯನ್ನೂ ತರುತ್ತದೆ ಎಂದು ನಾವು ವೈದಿಕ ಗ್ರಂಥಗಳಿಂದ ಮತ್ತು ನಮ್ಮದೇ ಅನುಭವಗಳಿಂದ ಅರ್ಥಮಾಡಿಕೊಳ್ಳಬಹುದು.

ಪ್ರತಿಯೊಂದು ಕಾಲಚಕ್ರದೊಳಗೆ ಸೃಷ್ಟಿ, ಸ್ಥಿತಿ, ಮತ್ತು ಲಯಗಳ ಪ್ರಾರಂಭ ಬಿಂದುವಿರುತ್ತದೆ. ಕಾಲದ ಪ್ರಭಾವದಲ್ಲಿ ಪ್ರತಿಯೊಂದಕ್ಕೂ ಸೃಷ್ಟಿಯ, ನಿರ್ವಹಣೆಯ ಮತ್ತು ವಿನಾಶದ ನಿರ್ದಿಷ್ಟ ಕಾರ್ಯಕ್ರಮವಿದೆ. ಶ್ರೀಮದ್‌ ಭಾಗವತದ ಪ್ರಕಾರ, ಸ್ವತಃ ವಿಶ್ವವು ನಿರ್ದಿಷ್ಟ ಕಾಲದಲ್ಲಿ ಸೃಷ್ಟಿಯಾಯಿತು, 310 ಲಕ್ಷ ಕೋಟಿ ಸೌರ ವರ್ಷಗಳಿಗೆ ಸಮನಾದಷ್ಟು ಕಾಲವಿರುತ್ತದೆ ಮತ್ತು ಅನಂತರ ವಿನಾಶಹೊಂದುತ್ತದೆ. ವಿನಾಶದ ಅನಂತರ ಕಾಲವು ಪುನರ್‌ ಸೃಷ್ಟಿಯನ್ನು ತರುತ್ತದೆ ಮತ್ತು ಚಕ್ರವು ಪುನರಾರಂಭಗೊಳ್ಳುತ್ತದೆ.  ಈ ರೀತಿ, ಒಟ್ಟಾರೆ ಪರಿಣಾಮವು ವಿನಾಶವಾದರೂ ಕೂಡ ಭೌತಿಕ ಲೋಕವು ಪುನರ್‌ ಸೃಷ್ಟಿ ಮತ್ತು ವಿನಾಶವನ್ನು ಅನುಭವಿಸುತ್ತದೆ.

ನೋವಿಗೆ ಕಾರಣ

ಈ ಸೃಷ್ಟಿ ಮತ್ತು ವಿನಾಶದ ಚಕ್ರಗಳ ಒಳಗೆ ಕಾಲಕ್ಕೆ ಇತರ ಅನೇಕ ರೂಪಗಳಿವೆ. ಕಾಲವು ಜನ್ಮ, ಸಾವು, ವೃದ್ಧಾಪ್ಯ ಮತ್ತು ರೋಗವನ್ನು ತರುತ್ತದೆ. ಇವು ಗೀತೆಯಲ್ಲಿ ಹೇಳಿರುವ ಲೌಕಿಕ ಬದುಕಿನ ನಾಲ್ಕು ನೋವುಗಳು. ಚಂಡಮಾರುತ, ಬಿರುಗಾಳಿ ಮತ್ತು ಬರದಂತಹ ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನೋವನ್ನೂ ಕಾಲವು ತರುತ್ತದೆ. ಜೊತೆಗೆ ಕೀಟಗಳು ಅಥವಾ ಮಾನವ ವೈರಿಗಳ ದಾಳಿಯಿಂದ ಉಂಟಾಗುವ ನೋವನ್ನು ತರುತ್ತದೆ.

ಒಟ್ಟಾರೆ, ನಾವೆಲ್ಲರೂ ತಿಳಿದಿರುವಂತೆ ಕಾಲವು ನೋವಿನ ವಾಹಕ. ಅದು ನಮ್ಮನ್ನು ಸುತ್ತುವರಿಯುತ್ತದೆ, ಬಂಧಿಸುತ್ತದೆ ಮತ್ತು ಕ್ರಮೇಣ ನಮ್ಮ ಬಳಿ ಇರುವುದನ್ನೆಲ್ಲ ನಾಶ ಪಡಿಸುತ್ತದೆ. ನಾವು ಅನುಭವಿಸುವ ಸಂತೋಷಕ್ಕೆ ಖಂಡಿತ ಅಂತ್ಯವಿದೆ ಮತ್ತು ಅದು ಖಂಡಿತ ನೋವಿನೊಂದಿಗೆ ಸೇರಿಕೊಳ್ಳುತ್ತದೆ. ಅದು ಮರಳಿನಲ್ಲಿ ಮಿಶ್ರಣಗೊಂಡ ಐಸ್‌ ಕ್ರೀಂ ಅನ್ನು ತಿಂದರೆ ಉಂಟಾಗುವ ಆನಂದದಂತೆ. ಒಟ್ಟಾರೆ ಪರಿಣಾಮವು ನೋವು.

ಆದರೆ, ಕಾಲನ ತನ್ನ ರೂಪದಲ್ಲಿ ದೇವೋತ್ತಮನು ನಮ್ಮ ನೋವಿಗೆ ನೇರವಾಗಿ ಜನಾಬ್ದಾರನಲ್ಲ, ಸೆರೆಮನೆಗಳಲ್ಲಿ ಕೈದಿಗಳ ನೋವಿಗೆ ಸರ್ಕಾರವು ಹೇಗೆ ಜವಾಬ್ದಾರವಲ್ಲವೋ ಹಾಗೆ. ಅಪರಾಧಿಗಳು ಹೆಚ್ಚು ಗಲಭೆ ಉಂಟುಮಾಡುವುದನ್ನು ತಡೆಯಲು ಮತ್ತು ಅವರನ್ನು ಸುಧಾರಣೆಗಾಗಿ ಮನವೊಲಿಸಲು ಸರ್ಕಾರವು ಅವರನ್ನು ಸೆರೆಮನೆಯಲ್ಲಿ ಬಂಧಿಸಿಡುತ್ತದೆ. ಆದರೆ ಸರ್ಕಾರವು ಸೆರೆಮನೆಗಳನ್ನು ಮಾತ್ರವಲ್ಲ ಉದ್ಯಾನ, ಶಾಲೆ, ಹೆದ್ದಾರಿ ಮುಂತಾದುವುಗಳನ್ನೂ ಸ್ಥಾಪಿಸುತ್ತದೆ. ಕಾನೂನು ಪಾಲಿಸುವ ನಾಗರಿಕರಾಗಿ ಸ್ವಾತಂತ್ರ್ಯವನ್ನು ಅನುಭವಿಸಬೇಕೋ ಅಥವಾ ಬಂದೀಖಾನೆಯಲ್ಲಿ ನೋವು ಅನುಭವಿಸಬೇಕೋ ಎಂಬುವುದನ್ನು ಜನರೇ ನಿರ್ಧರಿಸುತ್ತಾರೆ.

ಅದೇ ರೀತಿ, ಯಾವ ಆತ್ಮಗಳಿಗೆ ಕೃಷ್ಣನಿಗೆ ಸೇವೆ ಸಲ್ಲಿಸಲು ಇಷ್ಟವಿಲ್ಲವೋ ಅವರನ್ನು ಭೌತಿಕ ಲೋಕಕ್ಕೆ ಎಸೆಯಲಾಗುತ್ತದೆ. ಅಲ್ಲಿ ಅವರು ತಾತ್ಕಾಲಿಕ ದೇಹಗಳಲ್ಲಿ ಬಂಧಿಗಳಾಗುತ್ತಾರೆ ಮತ್ತು ಅವರು ಕರ್ಮದ ಕಾನೂನಿನಂತೆ ನೋವು ಅನುಭವಿಸುವಂತೆ ಮಾಡಲಾಗುತ್ತದೆ.

ಕಾಳಿಯೇ ಪ್ರತಿನಿಧಿ

ವೈದಿಕ ಸಾಹಿತ್ಯಗಳಲ್ಲಿ ಕಾಲನ ವಿಧ್ವಂಸಕ, ನೋವು ತುಂಬಿದ ಸ್ವಭಾವವನ್ನು ಕಾಳಿದೇವಿಯು ಪ್ರತಿನಿಧಿಸುತ್ತಾಳೆ. ಈ ವಿಶ್ವದ ವಾಸಿಗಳ ಮೇಲೆ ಅನೇಕ ರೀತಿ ನೋವನ್ನು ಹೇರುವ ಕಾಳಿಯನ್ನು ಕಾಲನಾಗಿ ದೇವೋತ್ತಮನು ನಿಯಂತ್ರಿಸುತ್ತಾನೆ. ಕಾಳಿಯು ಸೆರೆಮನೆಯ ವ್ಯವಸ್ಥಾಪಕಿ. ಅವರವರ ನಿರ್ದಿಷ್ಟ ಅಪರಾಧಗಳಿಗೆ ಅನುಸಾರವಾಗಿ ಅವರನ್ನು ಶಿಕ್ಷಿಸುವುದು ನೇರವಾಗಿ ಸ್ವತಃ ಭಗವಂತನಲ್ಲ, ಕಾಳಿ. ಕಾಳಿಯು ಸೃಷ್ಟಿ, ನಿರ್ವಹಣೆ ಮತ್ತು ವಿಸರ್ಜನೆಯ ಚಕ್ರವನ್ನು ಸಾಕಾರಗೊಳಿಸುತ್ತಾಳೆ ಮತ್ತು ಅವಳು ಲೌಕಿಕ ಬದುಕಿನ ವಿಧವಿಧವಾದ ನೋವುಗಳನ್ನು ಹಿಡಿದಿರುತ್ತಾಳೆ. ನಾವು ನೋಡುವ ಮತ್ತು ಅನುಭವಿಸುವ ಕಾಲದ ಪರಿಣಾಮಗಳು ಕಾಳಿಯ ಕ್ರಿಯೆಗಳು.

ಆದರೆ ನಮ್ಮ ನೋವುಗಳಿಗೆ ಕಾಳಿಯನ್ನೂ ದೂರುವಂತಿಲ್ಲ. ಅವಳು ದೇವೊತ್ತಮ ಪರಮ ಪುರುಷನ ಪರಿಶುದ್ಧ ಭಕ್ತೆ. ಭಗವಂತನಿಲ್ಲದೆ ಬದುಕನ್ನು ಆನಂದಿಸಲು ಪ್ರಯತ್ನಿಸುತ್ತಿರುವ ವಿರೋಧಿ ಆತ್ಮಗಳಿಗೆ ಅದರ ನಿಷ್ಪ್ರಯೋಜಕತೆಯನ್ನು ನೆನಪಿಸುವುದು ಅವಳ ಕರ್ತವ್ಯ. ನಾವು ಪ್ರತಿಯೊಬ್ಬರೂ ಕೃಷ್ಣನ ಶಾಶ್ವತ, ವಿಭಿನ್ನಾಂಶ. ಆದುದರಿಂದ ಅವನಿಗೆ ಸೇವೆ ಸಲ್ಲಿಸುವುದು ನಮ್ಮ ಶಾಶ್ವತ, ಆನಂದದ ಕ್ರಿಯೆ. ಕೃಷ್ಣನ ಸೇವೆ ಮತ್ತು ಸಹವಾಸದ ಆಚೆಗೆ ನಾವು ಮರದಿಂದ ಎಲೆಗಳು ಪ್ರತ್ಯೇಕವಾದಂತೆ ಒಣಗಿ ವ್ಯರ್ಥವಾಗಿಬಿಡುತ್ತೇವೆ. ಆದುದರಿಂದ ನಮ್ಮ ಒಳಿತನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನು ತನಗೆ ಸಂಪೂರ್ಣವಾಗಿ ಶರಣಾಗಬೇಕೆಂದು ಗೀತೆಯಲ್ಲಿ ಕೋರಿದ್ದಾನೆ. ಈ ಮನವಿಯನ್ನು ನಿರ್ಲಕ್ಷಿಸಿದರೆ ಅದು ನಮ್ಮ ಹಿತಾಸಕ್ತಿಗೇ ವಿರೋಧವಾಗುತ್ತದೆ ಎಂದು ಕಾಳಿ ಅಥವಾ ಐಹಿಕ ಪ್ರಕೃತಿಯು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾಳೆ.

ಈ ಭೌತಿಕ ಲೋಕದ ಪುನರ್‌-ಸೃಷ್ಟಿ ಮತ್ತು ನಾಶಗಳ ಆಚೆಗೆ ಶಾಶ್ವತವಾದ ಮತ್ತು ನಾಶವಾಗದ ಅಲೌಕಿಕ ಲೋಕವಿದೆ ಎಂದು ಕೃಷ್ಣನು ಗೀತೆಯಲ್ಲಿ ವಿವರಿಸುತ್ತಾನೆ. ತನಗೆ ಶರಣಾದವರು ಸುಲಭವಾಗಿ ಆ ಅಲೌಕಿಕ ಲೋಕವನ್ನು ಪ್ರವೇಶಿಸಬಹುದು ಎಂದು ಅವನು ಘೋಷಿಸುತ್ತಾನೆ. ಕಾಳಿಯು ಕೃಷ್ಣನ ಅಧೀನದಲ್ಲಿ ಇರುವುದರಿಂದ ತನಗೆ ಶರಣಾದ ಸೇವಕರನ್ನು ಬಿಡುಗಡೆ ಮಾಡಬೇಕೆಂದು ಅವನು ಕಾಳಿಗೆ ಆದೇಶಿಸಬಲ್ಲ. ನಮಗೆ ನಾವೇ ಕಾಳಿಯ ಹಿಡಿತದಿಂದ ಪಾರಾಗುವುದು ಸಾಧ್ಯವಿಲ್ಲ. ಆದರೆ ಅವಳು ಕೃಷ್ಣನ ಆದೇಶವನ್ನು ಪಾಲಿಸಲು ಸದಾ ಸಿದ್ಧ.

ಕೃಷ್ಣನ ಅಚಿಂತ್ಯ ಕಾಲ-ಶಕ್ತಿಯು ಅಲೌಕಿಕ ಲೋಕದಲ್ಲಿಯೂ ಉಂಟು. ಆದರೆ ಕಾಲನ ವಿನಾಶಕಾರಿ ರೂಪ ಕಾಳಿಯು ಅಲ್ಲಿ ಉಪಸ್ಥಿತಳಿರುವುದಿಲ್ಲ. ಆದುದರಿಂದ ಅಲೌಕಿಕ ಜೀವನವು ಪುನರ್‌ ಸೃಷ್ಟಿ, ನಿರ್ವಹಣೆ ಮತ್ತು ವಿನಾಶದಿಂದ ಹಾಳಾಗುವುದಿಲ್ಲ. ಕಾಲ ನಿರ್ವಹಣೆಯ ಕೆಲಸ ಮಾತ್ರ ಮಾಡುತ್ತದೆ. ಆದುದರಿಂದ ಅಲೌಕಿಕ ಲೋಕದ ನಿವಾಸಿಗಳು ಯಾವುದೇ ಅಡ್ಡಿ ಇಲ್ಲದೆ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಶಾಶ್ವತವಾಗಿ ಸೇವೆ ಸಲ್ಲಿಸಲು ಸ್ವತಂತ್ರರಾಗಿರುತ್ತಾರೆ. ಕಾಳಿಯು ಹುಟ್ಟು, ಸಾವು ಮತ್ತಿತರ ನೋವುಗಳನ್ನು ತಂದರೆ, ಕಾಲದ ಅಲೌಕಿಕ ರೂಪವು ಕೃಷ್ಣನಿಗೆ ಮತ್ತು ಅವನ ಭಕ್ತರಿಗೆ ನಿರಂತರ ಮತ್ತು ಸದಾ ಅಧಿಕಗೊಳ್ಳುವ ಆನಂದವನ್ನು ಪೂರೈಸುತ್ತದೆ.

ಆನಂದದ ಆಯ್ಕೆ

ಆ ಆಧ್ಯಾತ್ಮಿಕ ಆನಂದವು ಈ ತಾತ್ಕಾಲಿಕ ಲೋಕದಲ್ಲಿಯೂ ಲಭ್ಯ. ನೀವು ಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸಬೇಕಷ್ಟೆ. ತಾನು ದೇಹವಲ್ಲ, ದೇಹದೊಳಗೆ ನೆಲೆಯಾಗಿರುವ ಶುದ್ಧ ಆಧ್ಯಾತ್ಮಿಕ ಆತ್ಮ ಎಂಬುವುದನ್ನು ಭಕ್ತನು ಆರಂಭದಿಂದಲೇ ಅರಿತುಕೊಳ್ಳುತ್ತಾನೆ. ಆದುದರಿಂದ ಅವನು ದೇಹದ ಅನಿವಾರ್ಯ ಇಳಿತವನ್ನು ಸಹಿಸಿಕೊಳ್ಳುತ್ತಾನೆ ಮತ್ತು ಕೃಷ್ಣನಿಗೆ ಉತ್ಸಾಹದಿಂದ ಸೇವೆ ಸಲ್ಲಿಸಲು ಮಾತ್ರ ತನ್ನ ಆರೋಗ್ಯದ ಕಾಳಜಿ ವಹಿಸುತ್ತಾನೆ. ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಿದಂತೆ ಭಕ್ತನಿಗೆ ದೈಹಿಕ ನೋವುಗಳು ನಿಕೃಷ್ಟವೆನಿಸಿಕೊಳ್ಳುತ್ತವೆ. ಶುದ್ಧ ಭಕ್ತನಿಗೆ ಸಾವು ಕೂಡ ತುಚ್ಛ, ಏಕೆಂದರೆ ಸಾವಿನಿಂದ ಅವನು ಅಲೌಕಿಕ ಲೋಕವನ್ನು ಪ್ರವೇಶಿಸುತ್ತಾನೆ.

ಹಾಗಾದರೆ ಕಾಲ ಎಂದರೆ ಏನು? ಕಾಲವು ನೋವಿನ ವಾಹಕ ಅಥವಾ ನಿರಂತರ ಸುಖದ ವಾಹಕ. ಆಯ್ಕೆ ನಮ್ಮದೇ. ಕಾಲವು ದೇವೋತ್ತಮನ ಅಚಿಂತ್ಯ ಶಕ್ತಿಯಾಗಿರುವುದರಿಂದ, ಯಾವುದೇ ರೀತಿಯಲ್ಲಿಯೂ ಕಾಲವು ಖಚಿತವಾಗಿ ನಮಗೆ ಗೊಂದಲ, ಬೆರಗಾಗಿಯೇ ಉಳಿಯುತ್ತದೆ. ಆದರೂ ಅದರ ವಿನಾಶ ಶಕ್ತಿಗಿಂತ ಆಧ್ಯಾತ್ಮಿಕ ಆನಂದವನ್ನು ತರುವ ಕಾಲದ ಅಸೀಮಿತ ಶಕ್ತಿಯಿಂದ ಬೆರಗಾಗುವುದೇ ಒಳ್ಳೆಯದು.

ಈ ಲೇಖನ ಶೇರ್ ಮಾಡಿ