ಅಂತಿಮ ಜ್ಞಾನ

ಪಿಎಚ್‌ಡಿ, ಎಂ.ಡಿ ಅಥವಾ ಎಲ್‌.ಎಸ್‌.ಡಿ ಮುಂತಾದ ಪದವಿಗಳಿಂದ ಅಲಂಕೃತನಾದ “ಜ್ಞಾನವಂತ” ಮನುಷ್ಯನು, ತಾನೆಂದರೆ ಈ ದೇಹ ಎಂದು ಭಾವಿಸುತ್ತಾ, ಅದರ ಕೀರ್ತಿಗೆ ಮಹತ್ವವನ್ನು ಕೊಡುತ್ತಾ ಅದರ ಕೋರಿಕೆಗಳನ್ನು ಈಡೇರಿಸುತ್ತಿದ್ದು ಚರ್ಮರೋಗದ ಪ್ರಥಮದರ್ಜೆಯ ಮೂರ್ಖನಾಗಿದ್ದಾನೆ.

ಅವನ ಉಪದೇಶವು ಹೇಗೇ ಇರಲಿ, ಅವನು ಶ್ರವಣಯೋಗ್ಯನಲ್ಲ. ಐಹಿಕ ಸಂಪರ್ಕದಿಂದಾಗಿ ಅವನು ಮಾಯೆಯ ಮಾಟದಲ್ಲಿ ಸಿಲುಕಿದ್ದಾನೆ ಎಂದು ಬುದ್ಧಿವಂತನಾದವನು ತಿಳಿದಿರುತ್ತಾನೆ. ಬುದ್ಧಿವಂತನಾದವನು ‍ಕೃಷ್ಣನ ಪಾದಕಮಲಗಳಿಗೆ ಶರಣಾಗತನಾಗಿ ತನ್ನಿಂದ ತಾನೆ ಐಹಿಕ ಕಾಲುಷ್ಯದಿಂದ ಬಿಡುಗಡೆ ಹೊಂದುತ್ತಾನೆ.

ಪ್ರಭುವಿನ ಪಾದಕಮಲದ ಬಳಿ ಅವರು “ಹರೇ ಕೃಷ್ಣ ಹರೇ ಕೃಷ್ಣ” ಎಂದು ರೋದಿಸುತ್ತಾ ತನ್ನ ರೋಗಗ್ರಸ್ತ ಸ್ಥಿತಿಯಿಂದ ಮುಕ್ತಿಯನ್ನು ನೀಡಬೇಕೆಂದು ಆಗ್ರಹಿಸುತ್ತಾನೆ. ಅವನು ಪ್ರಾಮಾಣಿಕನಾಗಿದ್ದರೆ, ಕೃಷ್ಣನಿಂದ ಅವನಿಗೆ ನಿಜವಾದ ಜ್ಞಾನವು ಸಂವಹನವಾಗುತ್ತದೆ. ಆ ಜ್ಞಾನವೆಂದರೆ: ನಾನು ಈ ದೇಹವಲ್ಲ.

ನಾನು ಚೇತನಾತ್ಮ ಸದಾ ಆನಂದ ಪೂರ್ಣ ಮತ್ತು ಸದಾ ಸ್ವತಂತ್ರ. ನಾನು ಬ್ರಹ್ಮನ್‌. ಪರಮ ಪ್ರಭುವಿನೊಡನೆ ಶಾಶ್ವತ ಸಂಗದಲ್ಲಿರುವುದೇ ನನ್ನ ಆನಂದ. ಇದೇ ನಿಜವಾದ ಜ್ಞಾನ ಸತ್ತ್ವ. ರಜಸ್‌ ಮತ್ತು ತಮೋಗುಣಗಳ ಜ್ಞಾನಗಳಿಗೆ ಅತೀತನಾದ ಜ್ಞಾನವಿದು. ಇದೇ ಕೃಷ್ಣಪ್ರಜ್ಞೆಯ ಉಗಮ. ಸಂಕೀರ್ತನಾ ಪ್ರಕ್ರಿಯೆಯು ಐಹಿಕ “ಜ್ಞಾನ”ದ ಕಲ್ಮಷವನ್ನು ತೊಳೆದು ಹಾಕುತ್ತದೆ.

ಪರಮ ಪ್ರಭುವಿನಿಂದ ನಿಜವಾದ ಜ್ಞಾನವನ್ನು ಪಡೆಯಲು ವ್ಯಕ್ತಿಯನ್ನು ಅರ್ಹನನ್ನಾಗಿ ಮಾಡುತ್ತದೆ. ಈ ಲೋಕೋತ್ತರವಾದ ಜ್ಞಾನದಲ್ಲಿ ಮಾತ್ರ ಜೀವನವು ಬದುಕಲು ಯೋಗ್ಯವಾಗುತ್ತದೆ. ಆದರಿಂದ ಮುಂದಿನ ಜನ್ಮವು ಶಾಶ್ವತ ಆನಂದಮಯವಾಗುತ್ತದೆ.

ಅನೇಕ ಜನ್ಮಗಳನ್ನು ಎತ್ತಿದನಂತರ ಕೊನೆಯಲ್ಲಿ ಜ್ಞಾನಿಯಾದವನು, ವಾಸುದೇವನೇ ಸರ್ವಸ್ವ ಎಂದು ಅರಿತು ನನ್ನಲ್ಲಿ ಶರಣಾಗುತ್ತಾನೆ. ಅಂತಹ ಮಹಾತ್ಮನು ದುರ್ಲಭ. (ಗೀತಾ, 7.19). ಇಂದು ವಿಶ್ವವಿದ್ಯಾಲಯಗಳಲ್ಲಿ ಮತ್ತು ಉನ್ನತ ವಿದ್ಯಾಭ್ಯಾಸವನ್ನು ಬೋಧಿಸುವ ಸಂಸ್ಥೆಗಳಲ್ಲಿ ವ್ಯಾಸಂಗಮಾಡುತ್ತಿರುವ ಬಹುಪಾಲು ವಿದ್ಯಾರ್ಥಿಗಳಿಗೆ, ಜ್ಞಾನದ ಕೊನೆ ಅಥವಾ ದೀರ್ಘಕಾಲದ ಅನ್ವೇಷಣೆ ಗುರಿ ಯಾವುದೆನ್ನುವುದು ಮನಸ್ಸಿನಲ್ಲಿಯೇ ಸುಳಿಯುವುದಿಲ್ಲ.

ವಿದ್ಯಾರ್ಥಿಯ ದೃಷ್ಟಿನೆಟ್ಟಿರುವುದು ಪದವಿ ಪ್ರದಾನ ಸಮಾರಂಭದ ದಿನದ ಮೇಲೆ ಮತ್ತು ಒಳ್ಳೆಯ ಸಂಬಳದ ವೃತ್ತಿಗೆ ಪ್ರವೇಶ ದೊರಕಿಸಿಕೊಡುವ ಪದವಿಯ ಮೇಲೆ. ಬಹುಪಾಲು ಜನರಿಗೆ ಜ್ಞಾನದ ಗುರಿ ಎಂದರೆ ಹಣ ಮತ್ತು ಅದು ಖರೀದಿಸುವ ಐಹಿಕ ಸುಖಸಂತೋಷಗಳು.

ಹೆಚ್ಚು ಬುದ್ಧಿಶಾಲಿಗಳು ವ್ಯಾಸಂಗವನ್ನು ಮುಂದುವರಿಸುವ ಪ್ರಕ್ರಿಯೆಯನ್ನೇ ತಮ್ಮ ಗುರಿ ಎಂದು ಕಾಣುತ್ತಾರೆ – ಸಾಹಿತ್ಯದ ಅಧ್ಯಯನದಲ್ಲಿ ಸಾಹಿತ್ಯದ ಆಸ್ವಾದನೆಯೇ ಗುರಿಯಾಗಿರುವಂತೆ ಅಥವಾ ಗಣಿತದಲ್ಲಿ ತರ್ಕ ಮತ್ತು ಸಿದ್ಧಾಂತದ ಸಾಧನೆಯೇ ಗುರಿಯಾಗಿರುವಂತೆ. ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸುವುದೂ ಇಲ್ಲ.

ಒಂದು ಅಲಮಾರನ್ನು ನಿರ್ಮಿಸುವ ಮನುಷ್ಯನಿಗೆ ಅಥವಾ ಒಂದು ಚಿತ್ರವನ್ನು ಬರೆಯುವ ಚಿತ್ರಗಾರನಿಗೆ ದೊರೆಯುವ ಸಂತೋಷದಂತೆ ಅದು. ಆ ಕ್ರಿಯೆಯೇ ಅದರ ಪ್ರತಿಫಲ. ಆದ್ದರಿಂದ ಹೆಚ್ಚು ಬುದ್ಧಿವಂತನಾದವನಿಗೆ ವಿದ್ಯಾಭ್ಯಾಸವೇ ಅವರಿಗೆ ದೊರೆತ ಪ್ರಶಸ್ತಿ. ಅದಕ್ಕಿಂತ ಹೆಚ್ಚಿನ ಬಾಹ್ಯ ಪ್ರಯೋಜನಗಳು ಅವರಿಗೆ ಅಗತ್ಯವೂ ಇಲ್ಲ ಅಥವಾ ಅವರು ಬಯಸುವುದೂ ಇಲ್ಲ.

ಆದರೂ ನಿಜವಾದ ಕಲಾವಿದ, ನಿಜವಾದ ತಂತ್ರಜ್ಞ ಸದಾ ತನಗೆ ಪ್ರಾಮಾಣಿಕನಾಗಿರುತ್ತಿದ್ದು ಎಂದಿಗೂ ತನ್ನ ಪರಿಪ್ರೇಕ್ಷ್ಯವು ದಾರಿತಪ್ಪಿ ದೂರ ಅಡ್ಡಾಡಲು ಬಿಡುವುದಿಲ್ಲ. ಎಂದಿಗೂ ತನ್ನ ಕೆಲಸದೊಡನೆ ತಾನು ತೀರ ಲೀನವಾಗಲೂ ಬಿಡುವುದಿಲ್ಲ. ಕಾಲ ಮತ್ತು ಅಂತರಿಕ್ಷದ ಅವಕಾಶದಲ್ಲಿ ತಾನೊಬ್ಬ ಮನುಷ್ಯ ಎಂದು ಕಾಣುತ್ತಾನೆ.

ತನ್ನ ಕೆಲಸ ಮತ್ತು ಭೂಮಿಯನ್ನು ಬ್ರಹ್ಮಾಂಡದ ಸಂಬಂಧದೊಡನಿರಿಸಿ, ಅದನ್ನು ಕಾಲ ಮತ್ತು ಅವಕಾಶದಲ್ಲಿರಿಸಿ, ಮಹಾನ್ ಕೃತಿಯೂ ಸೇರಿದಂತೆ ಎಲ್ಲ ಕೃತಿಗಳೂ – ಈ ಭೂಮಿಯೂ ಕೂಡ, ಅಷ್ಟೇಕೆ ಸಮಸ್ತ ಬ್ರಹ್ಮಾಂಡವೂ – ನಾಶವಾಗುವಂಥದು ಎಂದು ತಿಳಿದು ನಿರ್ಲಿಪ್ತನಾಗಿರುತ್ತಾನೆ.

ಮುಖ್ಯವಾಗಿ ನಿರ್ಲಿಪ್ತನಾಗಿರುವುದರಿಂದ ಅವನು ತನ್ನ ಕೃತಿಯ ಬಗೆಗೆ ಸಂತುಷ್ಟನಾಗಿರುತ್ತಾನೆ. ಸಮುದ್ರದಂಡೆಯಲ್ಲಿ ಸಂತೋಷದಿಂದ ಶ್ರಮ ಶೀಲತೆಯಿಂದ ಮರಳಿನ ಗೋಪುರಗಳನ್ನು ಕಟ್ಟಿ ತಂದೆಯು ಮನೆಗೆ ಕರೆಯುತ್ತಿದ್ದಂತೆಯೇ ಅವನ್ನು ಬಿಟ್ಟು ತೆರಳುವ ಮಗುವಿನಂತೆ ಅವನು. ಅಲೆಗಳು ಬಂದು ಅವುಗಳನ್ನು ತೊಡೆದು ಹಾಕುತ್ತವೆಯೇ ಎಂದು ಅವನು ಚಿಂತಿಸುವುದಿಲ್ಲ.

ಸದಾ ಸಂಪೂರ್ಣ ದೃಷ್ಟಿಯಿಂದ ನೋಡುವ ವಿಧಾನವಿದು. ಇದನ್ನು ಕೇವಲ ಮನುಷ್ಯನ ಕೃತಿ ಅಥವಾ ಕಲೆಗಷ್ಟೇ ಹೇಳುವುದಲ್ಲ ಮನುಷ್ಯನ ಸಂಪೂರ್ಣ ಜೀವನವನ್ನು ಕುರಿತೇ ಹೀಗೆ ಹೇಳಬಹುದು.

ಉಲ್ಲಾಸವೊಂದನ್ನು ತನಗಾಗಿ ಬಾಗಿಸಿಕೊಂಡವನು ರೆಕ್ಕೆ ಜೀವಕೆ ತರುವನು ಕುತ್ತು

ಹಾರುತಿರುವಂತೆಯೇ ಮುತ್ತು ತೂರಿದವನು ನಿತ್ಯ ಸೂರ್ಯೋದಯದಿ ಜೀವಿಸಿರುವನು (ವಿಲಿಯಂ ಬ್ಲೇಕ್‌ನ ‘ನೋಮಿಕ್ ವರ್ಸಸ್’ ನಿಂದ)

ಜ್ಞಾನವೆನ್ನುವುದು ಸ್ವತಃ ಹಿಡಿತಕ್ಕೆ ಸಿಕ್ಕದಿರುವ ವಸ್ತು. ಜ್ಞಾನಿಗಳು ಸದಾ ತಮಗೇನೂ ತಿಳಿಯದು ಎಂದು ಹೇಳುತ್ತಿರುತ್ತಾರೆ. ಮನುಕುಲವು ಇನ್ನೂ ಪೂರ್ವಪ್ರಾಥಮಿಕ ಶಾಲೆಯಲ್ಲಿದೆ ಎಂಬ ಪರಿಭಾವನೆ ಸದಾ ನಮಗೆ ಬರುತ್ತಿರುತ್ತದೆ. ಅದರಲ್ಲೂ ವಿಶೇಷವಾಗಿ “ಈ ಜೀವನದ ಆತ್ಮನ ಐದು ಕಿಟಕಿಗಳು / ಸ್ವರ್ಗವನ್ನು ದೂರ ದೂರ ಅಟ್ಟುತ್ತಿವೆ” (ಬೇಕ್ಲ್‌, ದ ಎವರ್ ಲ್ಯಾಸ್ಟಿಂಗ್ ಗಾಸ್ಟೆಲ್‌ ನಿಂದ) ಎಂಬುದು ಕ್ರಮೇಣ ಖಚಿತವಾದಂತೆ ಈ ಭಾವನೆಯೂ ದೃಢವಾಗುತ್ತದೆ.

ಸಾಕ್ರೆಟೀಸನು ಸದಾ ತನಗೇನೂ ತಿಳಿಯದೆಂದು ಹೇಳುತ್ತಿದ್ದ. ಅವನಿಗೆ ಪ್ರತಿಧ್ವನಿಯಾಗಿ ವೈಟ್ ಮನ್ ಹೇಳಿದ್ದು ಹೀಗೆ: “ನನ್ನ ಕಾಲಿನ ಹರಡು ಹೇಗೆ ಬಾಗುವುದೆಂದು ನಾನು ಹೇಳಲಾರೆ. ಅಥವಾ ನನ್ನ ಅತ್ಯಂತ ದುರ್ಬಲ ಕೋರಿಕೆಯು ಯಾವಾಗ ಈಡೇರುತ್ತದೆಂದೂ ಹೇಳಲಾರೆ. ಬಾಗಿ ನಾನು ನಡೆಯುತ್ತೇನೆ, ಅದು ನಿಜವಾಗಿಯೂ ಇದೆಯೇ ಎಂದು ತಡೆದು ನೋಡುತ್ತೇನೆ.” (ಸಾಂಗ್ ಆಫ್ ಮೈಸೆಲ್ಫ್ 24).

ಮನುಷ್ಯನು ತನ್ನನ್ನು ತಾನೇ ನೋಡಿಕೊಂಡು, ತನ್ನ “ಸಾಧನೆಗಳು” ಮಗುವಿನ ಎರಚಾಟಕ್ಕಿಂತ ಹೆಚ್ಚಿನದೇನಲ್ಲ, ಕಾಲಕ್ಷೇಪಕ್ಕೆ ಮಾಡಿದ ರಚನೆ, ಬೇಸರಕಳೆಯುವ ಆಟ ಅಷ್ಟೇ ಎಂದು ಅರ್ಥಮಾಡಿಕೊಳ್ಳುವ ಕಾಲ ಬಂದಿದೆ.

ಈ ಬಿಂದುವಿನಲ್ಲಿ “ಜ್ಞಾನ” ಕುಸಿದುಬೀಳಲಾರಂಭಿಸುತ್ತದೆ. ಮನುಷ್ಯ ಪ್ರಶ್ನಿಸಲು ಆರಂಭಿಸುತ್ತಾನೆ, “ಬಹಳ ಕಾಲದಿಂದ ನಾನು ಬೆನ್ನಟ್ಟಿ ಬಂದ ಈ ‘ಜ್ಞಾನ’ವೆಂದರೇನು? ಅದರ ಉದ್ದೇಶಗಳೇನು? ಅದರ ವರ್ಗಗಳು ಯಾವುವು? ಈ ಹುಡುಕಾಟದಲ್ಲಿ ನಾನು ಸರಿಯಾದ ದಾರಿಯಲ್ಲಿದ್ದೇನೆಯೇ? ಅಥವಾ ಪಥಭ್ರಾಂತನಾಗಿದ್ದೇನೆಯೆ?” ಅಂತಹ ಮನುಷ್ಯನು ಅದೃಷ್ಟಶಾಲಿಯಾಗಿದ್ದರೆ ಮಾರ್ಗದರ್ಶನಕ್ಕಾಗಿ ಭಗವದ್ಗೀತೆಯಂತಹ ಧರ್ಮಗ್ರಂಥಗಳ ಕಡೆಗೆ ಮುಖಮಾಡುತ್ತಾನೆ.

ದೇವೋತ್ತಮ ಪರಮ ಪುರುಷನಾದ ಸ್ವತಃ ಕೃಷ್ಣನೇ ಜ್ಞಾನವನ್ನು ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳಾಗಿ ವಿಭಾಗಿಸಿದ್ದಾನೆ. ಜೀವಿಗಳಲ್ಲಿ ಅಸಂಖ್ಯಾತ ರೂಪಗಳು; ಆದರೂ ಅವೆಲ್ಲವುಗಳಲ್ಲಿ ಒಂದೇ ಅಭಿನ್ನ ಆಧ್ಯಾತ್ಮಿಕ ಸ್ವಭಾವವನ್ನು ಕಾಣಿಸಬಲ್ಲ ಜ್ಞಾನವೆಂದರೆ ಸಾತ್ವಿಕ ಎಂದು ನೀನು ಅರ್ಥಮಾಡಿಕೊಳ್ಳಬೇಕು. (ಗೀತಾ, 18.20).

“ಅನೇಕರ ಆಟದಲ್ಲಿ ಒಬ್ಬನ ಸ್ಪರ್ಶವನ್ನು” ಕಾಣುವ ಉತ್ತಮ ಪುರುಷನ ಅಥವಾ ಪುಣ್ಯ ಪುರುಷನ ಜ್ಞಾನವು ಹೀಗಿರುತ್ತದೆ. ಅಂತಹ ವ್ಯಕ್ತಿಯು ಎಂದಿಗೂ ಭ್ರಾಂತಿವಶನಾಗುವುದಿಲ್ಲ. ಮಾಯೆಯ ಆಟದ ಹಿನ್ನೆಲೆಯಲ್ಲಿ ಅವನು ಸದಾ ಒಬ್ಬನಟನನ್ನು ನೋಡುತ್ತಾನೆ – ಅವನೇ ಪರಮಪ್ರಭು.

ಈ ಅರಿವಿನ ಕೊರತೆಯೇ ಅಜ್ಞಾನ, ಅವ್ಯವಸ್ಥೆ ಮತ್ತು ಮನಸ್ತಾಪಗಳ ಯುಗವಾದ ಕಲಿಯುಗದ ಮಿತಿಮೀರಿದ ಸಂಕಷ್ಟಗಳಿಗೆ ಕಾರಣ. ಲೋಕೋತ್ತರವಾದ ಜ್ಞಾನವು ತನ್ನಿಂದ ತಾನೆ ಸತ್ತ್ವಗುಣವಾಗಿರುತ್ತದೆ. ಈ ದೇಹವನ್ನು ಮೀರಿದ ಜ್ಞಾನವನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅವರು.

“ನಾನು ಈ ದೇಹದಲ್ಲ, ನಾನು ಚೇತನಾತ್ಮ” ಎಂಬ ದೃಢ ನಂಬಿಕೆಯ ತುತ್ತತುದಿಗೇರಿ ಸತ್ತ್ವಗುಣವಂತರಾಗುತ್ತಾರೆ. ಸತ್ತ್ವಗುಣದಲ್ಲಿರುವ ಜ್ಞಾನವು ಆತ್ಮಸಾಕ್ಷಾತ್ಕಾರದ ಆರಂಭದ ಬಿಂದು. ಲೋಕೋತ್ತರ ಜ್ಞಾನವನ್ನು ಅರುಸುವವರಿಗೆ ರಜೋಗುಣ ಮತ್ತು ತಮೋಗುಣಗಳ ಜ್ಞಾನದಿಂದ ಆಗಬೇಕಾದದ್ದು ಏನೂ ಇಲ್ಲ. ಬದಲಿಗೆ ಆಧ್ಯಾತ್ಮಿಕ ಜ್ಞಾನಕ್ಕಿಂತ ಸ್ವಹಿತವೇ ಬೇರೆ ಎಂದು ಭಾವಿಸುವವರು ಇನ್ನೂ ಕೆಳಮಟ್ಟದ ಗುಣಗಳಲ್ಲಿರುತ್ತಾರೆ.

“ಯಾವ ಜ್ಞಾನದ ಕಾರಣದಿಂದ ಪ್ರತಿಯೊಂದು ಬೇರೆ ದೇಹದಲ್ಲಿಯೂ ಬೇರೆ ಬಗೆಯ ಜೀವಿಯನ್ನು ಮನುಷ್ಯನು ಕಾಣುತ್ತಾನೆಯೋ ಆ ಜ್ಞಾನವು ರಾಜಸ ಎಂದು ತಿಳಿ. (ಗೀತಾ, 18.21).

ರಜೋಗುಣದಲ್ಲಿ ಯಾರ ಜ್ಞಾನವು ನೆಲೆಸಿರುತ್ತದೆಯೋ ಅ೦ತಹವನು, ಬೇರೆ ಬೇರೆ ದೇಹಗಳಲ್ಲಿ ಬೇರೆ ಬೇರೆ ಆತ್ಮಗಳು ನೆಲೆಸಿದ್ದು ಪರಸ್ಪರ ನಿರಂತರ ಸಂಘರ್ಷದಲ್ಲಿ ತೊಡಗಿವೆ ಎಂದು ಭಾವಿಸುತ್ತಾನೆ. ಇಂತಹ ದೃಷ್ಟಿಕೋನವು ತತ್‌ಕ್ಷಣವೇ ‘ತನಗೆ ಸೇರಿದುದನ್ನು ರಕ್ಷಿಸಿಕೊಳ್ಳುವ ಸ್ಥಾನದಲ್ಲಿ ವ್ಯಕ್ತಿಯನ್ನು ನಿಲ್ಲಿಸುತ್ತದೆ.

ಅವನು ಸ್ವಲಾಭಕ್ಕಾಗಿಯೇ ಕೆಲಸ ಮಾಡುತ್ತಾನೆ. ಏಕೆಂದರೆ ಅವನು ಎಲ್ಲದರಲ್ಲೂ ವಿವಿಧತೆಯನ್ನೇ ಕಾಣುತ್ತಾನೆ. ಮತ್ತು ಇಂತಹ ವಿವಿಧತೆಯಿಂದ ಉಂಟಾದ ಹೋರಾಟದಲ್ಲಿ ಮಗ್ನನಾಗಿರುತ್ತಾನೆ. ಇಂತಹ ಮನುಷ್ಯನು ಪರಹಿತವನ್ನು ಲಕ್ಷಿಸದೆ ತನ್ನ ಹಿತಕ್ಕಾಗಿ ಬಹಳ ವೀರಾವೇಶದಿಂದ ಹೋರಾಡುತ್ತಾನೆ.

ಅಲ್ಲದೆ ಅವನು ಐಹಿಕ ಪ್ರಪಂಚದ ಪರಿಸ್ಥಿತಿಯನ್ನು ಸುಧಾರಿಸಲು ಏಕಪ್ರಕಾರವಾಗಿ ಪ್ರಯತ್ನ ಮಾಡುತ್ತಾನೆ. ಆದರೆ ಪರಿಸ್ಥಿತಿಗಳು ಸದಾ ಅವನ ಮಿತಿಯನ್ನು ಮೀರಿರುತ್ತವೆ. ನೆಲದ ಮೇಲೆ ಮೀನು ಹೇಗೆ ಸಂತೋಷವಾಗಿರಲು ಸಾಧ್ಯವಿಲ್ಲವೋ ಹಾಗೆ ಅವನು ಎಂದಿಗೂ ಈ ಐಹಿಕ ಪ್ರಪ೦ಚದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಅವನು ಅರ್ಥಮಾಡಿಕೊಳ್ಳುವುದಿಲ್ಲ.

ಏಕೆಂದರೆ ದಿಟದಲ್ಲಿ ಅವನು ಜಡವಸ್ತುವಲ್ಲ, ಚೇತನ-ರೂಪ. ತನ್ನ ಸೌಕರ್ಯ ಮತ್ತು ಐಹಿಕ ಸೌಲಭ್ಯಗಳಿಗೆ ಏನೆಲ್ಲ ಉಪಕರಣಗಳನ್ನು ರೂಪಿಸಿದರೂ ಅವನು ಈ ಭೂಮಿಯ ಮೇಲೆ ಎಂದೂ ಸಂತೋಷವಾಗಿರಲು ಸಾಧ್ಯವಿಲ್ಲ. ಏಕೆಂದರೆ ಅವನಿನ್ನೂ ಜನನ, ವ್ಯಾಧಿ, ವೃದ್ಧಾಪ್ಯ ಮತ್ತು ಮೃತ್ಯುವಿನ ಸೆರೆಮನೆಯಲ್ಲಿ ಬಂಧಿತನಾಗಿದ್ದಾನೆ. ಕೊನೆಯಲ್ಲಿ ಕೃಷ್ಣನು ತಮೋಗುಣದ ಜ್ಞಾನವನ್ನು ಕುರಿತು ಮಾತನಾಡುತ್ತಾನೆ:

ಯಾವ ಜ್ಞಾನದಿಂದ ಸತ್ಯದ ತಿಳುವಳಿಕೆಯಿಲ್ಲದೆ ಒಂದು ಬಗೆಯ ಕರ್ಮವೇ ಸರ್ವಸ್ವ ಎಂದು ಭಾವಿಸುತ್ತೇವೆಯೋ, ಯಾವ ಜ್ಞಾನವು ಅಲ್ಪವಾದದ್ದೋ, ಅದು ತಾಮಸಗುಣದಲ್ಲಿದೆ ಎಂದು ಹೇಳುತ್ತಾರೆ. (ಗೀತಾ, 18.22)

ಅಂತಹ ಮನುಷ್ಯನು ಸ್ವಲ್ಪ ಆಹಾರ, ಮಲಗಲು ಒಂದು ಸ್ಥಳ, ಒಂದಿಷ್ಟು ಕಾಮದ ಉಪಭೋಗ ಮತ್ತು ಇತರ ಕೆಲವು ಸುಖಾನುಭವಗಳಿದ್ದರೆ ಸಾಕು, ಸುಖವಾಗಿರುತ್ತಾರೆ. ಪರಿಣಾಮಗಳಿಗೆ ದೇಹವೇ ಕಾರಣ, ತನಗೆ ಬರುವ ಸಂಪರ್ಕಗಳಿಗೆಲ್ಲ ದೇಹವೇ ಕಾರಣ ಎಂದು ಅವನು ಪರಿಗಣಿಸುತ್ತಾನೆ.

ಆದ್ದರಿಂದ ಅವನು ದೇಹದ ಗುಲಾಮನಾಗಿರುತ್ತಾನೆ. ಅವನು ಸದಾ ತನ್ನ ದೇಹ ಸೌಕರ್ಯವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾನೆ. ಅಂತಹ ಜನರು ಪ್ರಾಣಿಗಳ ಹಂತದಲ್ಲಿರುತ್ತಾರೆ. ಈ ಲೋಕದಲ್ಲಾಗಲಿ ಅಥವಾ ಮುಂದಿನ ಲೋಕದಲ್ಲಾಗಲಿ ಸುಧಾರಿಸಿಕೊಳ್ಳಬೇಕೆಂಬ ಆಕಾಂಕ್ಷೆಯೇ ಅವರಿಗೆ ಇರುವುದಿಲ್ಲ.

ಅವರ ಬ್ರಹ್ಮಾಂಡದ ಕಲ್ಪನೆಯು ಕಟ್ಟುನಿಟ್ಟಾಗಿ ದೈಹಿಕಕ್ಕೆ ಮಿತವಾಗಿರುತ್ತದೆ. ಈ ಐಹಿಕದ ತೆರೆಯ ಹಿಂದಿರುವ ಪರಮ ಚೇತನನ ಬಗೆಗೆ ಅವರಿಗೆ ಯಾವುದೇ ಕಲ್ಪನೆ ಇರುವುದಿಲ್ಲ, ಅಂಥವರನ್ನು ಕುರಿತು ಹೀಗೆ ಹೇಳಲಾಗಿದೆ : “ಕತ್ತಲಲ್ಲಿ ಬೆಳಕು ಪ್ರಜ್ವಲಿಸುತ್ತದೆ. ಆದರೆ ಕತ್ತಲೆ ಅದನ್ನು ಗ್ರಹಿಸುವುದಿಲ್ಲ.” (ಜಾನ್, 1/5).

ಸಮಕಾಲೀನ ಜ್ಞಾನಕ್ಷೇತ್ರಗಳ ಸಂಕ್ಷಿಪ್ತ ಪರಾಮರ್ಶನೆ ಮಾಡಿದರೆ ರಜಸ್ಸು ಮತ್ತು ತಮಸ್ಸು ಎರಡು ಬಹಳ ಪ್ರಬಲವಾದ ಗುಣಗಳೆಂದು ತಿಳಿದುಬರುತ್ತದೆ. ಉದಾಹರಣೆಗೆ ಮಾನವಿಕಗಳಲ್ಲಿ ನೋಡಿದರೆ, ಚರಿತ್ರೆಯಲ್ಲಿ (ಲೋಕೋತ್ತರ ದೃಷ್ಟಿಕೋನದಿಂದ) ತುಂಬಿರುವುದೆಲ್ಲ ಸತ್ತವರನ್ನು ಕುರಿತ ಸುಳ್ಳುಗಳ ಮಾಲೆ ಮಾಲೆ, ಅರ್ಥಹೀನ ಊಹಾಪೋಹಗಳು ಮತ್ತು ಮನೆತನಗಳನ್ನು ಕುರಿತ ವದಂತಿಗಳು, ಇಂಥ ಚರಿತ್ರೆಯಿಂದ ಏನು ಉಪಯೋಗ?

ಇತಿಹಾಸದಿಂದ ಮನುಷ್ಯನು ಕಲಿತುಕೊಳ್ಳಬಹುದು ಎಂಬುದೊಂದೇ ಅದಕ್ಕಿರುವ ಸಮರ್ಥನೆ. ಅದು ಮಾನವನಿಗೆ ಮಾರ್ಗದರ್ಶಿಯಾಗಬಲ್ಲದು. ಈ ಶತಮಾನದಲ್ಲಿಯೇ ಎರಡು ದೊಡ್ಡ ವಿಶ್ವಯುದ್ಧಗಳಾಗಿವೆ. ಅವುಗಳನ್ನು ಕುರಿತು ಸಾವಿರಾರು ಪುಸ್ತಕಗಳನ್ನು ಬರೆಯಲಾಗಿದೆ. ಮರೆವಿನಾಳದಲ್ಲಿ ಹುದುಗಿಹೋಗಬಹುದಾಗಿದ್ದ ಭಯಾನಕ ಘಟನೆಗಳನ್ನು ಅಗೆದು ಹೊರತೆಗೆಯಲಾಗಿದೆ.

ಅವುಗಳಿಗೆ ಪುನಶ್ಚೇತನವನ್ನು ಕೊಟ್ಟು ಟನ್ ಗಟ್ಟಲೆ ಸುದ್ದಿಪತ್ರಿಕೆಗಳಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗಿದೆ. ಇಷ್ಟಾದರೂ ಮನುಕುಲವು ಮೊಂಡಾಟದಿಂದ ಮೂರನೆಯ ಮಹಾಪ್ರಳಯದತ್ತ ಮುನ್ನುಗ್ಗುತ್ತಿದೆ. “ಚರಿತ್ರೆಯು ಏನನ್ನೂ ಬೋಧಿಸುವುದಿಲ್ಲ” ಎಂಬುದನ್ನಷ್ಟೇ ಬೋಧಿಸುತ್ತದೆ. ಬಹುಪಾಲು ಇತಿಹಾಸಕಾರರು ಸಿನಿಕರಾಗಿರುವುದೇ ಇದಕ್ಕೆ ಪ್ರಮಾಣ.

ಎಲ್ಲ ವ್ಯವಹಾರಗಳಲ್ಲಿ ಊಹಾಪೋಹದ ತತ್ತ್ವಶಾಸ್ತ್ರವು ಅತ್ಯಂತ ನಿರುಪಯೋಗಿಯಾಗಿದೆ. ಅದರ ಮೇಲೆ ಒಟ್ಟಲಾಗಿರುವ ರಾಶಿರಾಶಿ ಶಬ್ದಗಳು ಚಳಿಗಾಲದ ರಾತ್ರಿಯಲ್ಲಿ ಬೆಂಕಿಗೂಡಿಗೆ ಹಾಕಲು ಯೋಗ್ಯವಾಗಿವೆ ಅಷ್ಟೆ. ತಾರ್ಕಿಕತೆ, ಊಹಾಪೋಹ, ಬುದ್ಧಿಯ ಕಸರತ್ತು ಇತ್ಯಾದಿ ಪಾಶ್ಚಾತ್ಯ ತತ್ತ್ವಶಾಸ್ತ್ರಪರಂಪರೆಯಲ್ಲ ಬಹುತೇಕ ಧೂಳಿದೂಸರಿತವಾದ ಒಣ ಸಿದ್ಧಾಂತ, ನಿರರ್ಥಕ ವಾಗ್ವಾದ ಅಷ್ಟೆ. ಅದೇ ಪ್ರಕಾರವಾಗಿ ಸಾಹಿತ್ಯದಲ್ಲಿ ಕೆಲವು ಸುಂದರವಾದ ಕಥೆಗಳಿರಬಹುದು.

ಆದರೆ ಈ ಶತಮಾನದಲ್ಲಿ ಸಾಹಿತ್ಯದಲ್ಲಿ ಬಹುತೇಕ ಶೈಲೀಕೃತ ವಿಚಿತ್ರ ಕಲ್ಪನೆಗಳು ಮತ್ತು ಐಹಿಕ ಅರ್ಥಹೀನತೆಗಳೇ ತುಂಬಿವೆ. ಫಾಕ್ನರ್, ಪೌಂಡ್, ಹೆಮಿಂಗ್‌ವೇ ಅವರ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವುದಕ್ಕಿಂತ ವಿದ್ಯಾರ್ಥಿಗಳು ಅವರ ಅಸ್ಥಿರ ವ್ಯಕ್ತಿತ್ವಗಳ ಅಂಗಚ್ಛೇದ ಮಾಡಬೇಕಾಗುತ್ತದೆ.

ಅನೇಕ ವರ್ಷಗಳ ತರುವಾಯ ಮನುಷ್ಯನು ಕೊನೆಗೂ ಶಬ್ದಗಳ ಬಗೆಗೆ ಹಾಗೂ ಶಬ್ದಪ್ರಯೋಗಿಸುವವರ ಬಗೆಗೆ ಜಾಗರೂಕನಾಗಿದ್ದಾನೆ. “ಆ ನೇರ ಗೆರೆಗಳು ಶಬ್ದಗಳೆಂದುಕೊಂಡಿದ್ದೀಯಾ? ಆ ಬಾಗುಗಳು, ಬಳುಕುಗಳು, ಬಿಂದುಗಳು? | ಅಲ್ಲ ಅವು ಶಬ್ದಗಳಲ್ಲ. ಸಾರಭೂತವಾದ ಶಬ್ದಗಳು ಭೂಮಿಯಲ್ಲಿವೆ, ಸಾಗರದಲ್ಲಿವೆ | ಗಾಳಿಯಲ್ಲಿವೆ, ನಿನ್ನಲ್ಲಿವೆ.” (ವೈಟ್‌ ಮನ್, “ಎ ಸಾಂಗ್ ಆಫ್ ದಿ ರೋಲಿಂಗ್ ಅರ್ತ್”).

ಶಬ್ದ ಸಾಮ್ರಾಜ್ಯದಲ್ಲಿ ಮನುಷ್ಯನ ಅಭಿವ್ಯಕ್ತಿ ಮಾದರಿಯಲ್ಲಿ ಅತ್ಯಂತ ನಿರರ್ಥಕ ಹಾಗೂ ಅರ್ಥಹೀನ ಪ್ರಕಾರವೆಂದು ಆಪಾದನೆಗೆ ತುತ್ತಾಗಿರುವ ಕಾವ್ಯವು ಒಂದೇ ಉಳಿಸಿಕೊಳ್ಳಲು ಯೋಗ್ಯವಾದದ್ದೆಂದು ತೋರುತ್ತದೆ. ಕಾವ್ಯವು ಶಬ್ದಗಳ ಸಂಗೀತ, ಲೋಕೋತ್ತರ ಪ್ರಶಂಸೆಯ ಸಂಗೀತವು ಜ್ಞಾನಶಾಖೆಯ ಪರಿಧಿಯಲ್ಲಿ ಬರುವುದಿಲ್ಲ.

ಆದರೆ ಚರಿತ್ರೆಯು ಕೇವಲ ಐಹಿಕ ರಂಗದ ಮೇಲಿನ ಹೋರಾಟವನ್ನು ದಾಖಲಿಸುತ್ತದೆ. ತತ್ತ್ವಶಾಸ್ತ್ರದಲ್ಲಿ ಸಿಷ್ಫಲ ಊಹಾಪೋಹಗಳು ತುಂಬಿವೆ. ಸಾಹಿತ್ಯವೂ ಐಹಿಕ ಹೋರಾಟವನ್ನು ಚಿತ್ರಿಸುತ್ತದೆಯಲ್ಲದೆ, ಜ್ಞಾನೋದಯವನ್ನುಂಟುಮಾಡದೆ ಕೇವಲ ರಂಜಿಸುವುದಕ್ಕಾಗಿ ರಚಿತವಾಗಿದೆ. ಹಣ ಮತ್ತು ಕೀರ್ತಿಗಾಗಿ ಹಂಬಲಿಸುವ ಲೇಖಕರು ಬರೆದ ಕೃತಿ ಅದು. ಇಂತಹ ಜ್ಞಾನಕ್ಷೇತ್ರಗಳು ರಾಜಸಗುಣಗಳಲ್ಲಿ ಬರುತ್ತವೆ.

ಚರಿತ್ರೆ, ತತ್ತ್ವಶಾಸ್ತ್ರ ಮತ್ತು ಸಾಹಿತ್ಯಗಳಂತೆ ವಿಜ್ಞಾನವೂ ಮನುಷ್ಯನ ಶಕ್ತಿಯನ್ನು ಪಲ್ಲಟಗೊಳಿಸುವುದನ್ನೇ ಮುಖ್ಯವಾದ ಉದೇಶವಾಗುಳ್ಳ ಅಡೆತಡೆಗಳನ್ನು ಪ್ರತಿಷ್ಠಾಪಿಸುತ್ತದೆ. ಉದಾಹರಣೆಗೆ, ಅನೇಕ ಮೋಟಾರು ವಾಹನಗಳಿರುವುದರಿಂದ ಮನುಷ್ಯನು ಹೆಚ್ಚು ಸಂಚಾರಮಾಡಬೇಕೆಂಬ ಅಗತ್ಯವನ್ನು ಮನಗಾಣುತ್ತಾನೆ.

ಈಗ ಮನುಷ್ಯನು ಚಂದ್ರನನ್ನು ತಲಪಲು ಎಷ್ಟೊಂದು ಶಕ್ತಿಯನ್ನು ವೆಚ್ಚ ಮಾಡುತ್ತಾನೆ – ಆದರೆ ಯಾವ ನಿರ್ದಿಷ್ಟ ಉದ್ದೇಶಕ್ಕಾಗಿ ಎಂದು ಯಾರೂ ಖಚಿತವಾಗಿ ಹೇಳಲಾರರು – ಭೂಮಿಯಿಂದ ಪಾರಾಗಿ ಹೋಗಬೇಕೆಂಬ ಮಾನಸಿಕ ಅಗತ್ಯವೊಂದನ್ನು ಬಿಟ್ಟರೆ. ಆದರೆ ಯೋಗದಲ್ಲಿ ಉನ್ನತ ಸಾಧನೆ ಮಾಡಿದವರು ಮತ್ತು ಕೃಷ್ಣಪ್ರಜ್ಞೆಯಲ್ಲಿ ಪ್ರಗತಿಯನ್ನು ಸಾಧಿಸಿದವರು, ಇಂತಹ ಅಂತರ ಗ್ರಹ ವಾಹನ ಸಂಚಾರವು ಅಸಾಧ್ಯವಲ್ಲವಾದರೂ, ಅತ್ಯಂತ ಕಷ್ಟಕರವೆಂದು ಬಲ್ಲರು.

ಅಂತರಿಕ್ಷ ಪ್ರವಾಸವು ಕಷ್ಟಕರವಲ್ಲ – ಆದರೆ ಈ ಜಡ ಐಹಿಕವಾದಿಗಳು ಸುಮ್ಮನೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ. ಮಿಗಿಲಾಗಿ ವಿಜ್ಞಾನವು, ಮನುಷ್ಯನು ತನ್ನನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಶಮಾಡಿಕೊಳ್ಳಲು ಮುಖ್ಯವಾಗಿ ನೆರವಾಗಿದೆ. ತನ್ನ ಸಾಮ್ರಾಜ್ಯದಲ್ಲಿ ವಿಜ್ಞಾನವು ಅತ್ಯಂತ ಸಹಾಯಕಾರಿಯೂ ಪ್ರಗತಿದಾಯಕವೂ ಆಗಿದೆ.

ಅದೆಂದರೆ ವಿನಾಶ, ದೇವರು ಮನುಷ್ಯನಿಗೆ ಮದ್ದಿನ ಪುಡಿಕೊಟ್ಟಾಗ ಸಣ್ಣ ಆಸ್ಫೋಟಗಳು ಇನ್ನೂ ದೊಡ್ಡವು, ಇನ್ನೂ ದೊಡ್ಡವು ಆಗಿ ಬೆಳೆಯುತ್ತ ಹೋಗುತ್ತವೆಂದು ತಿಳಿದಿದ್ದ. ಈ ಕ್ಷೇತ್ರದಲ್ಲಿ ವಿಜ್ಞಾನವು ಅತ್ಯಂತ ದಕ್ಷವಾಗಿದೆ, “ಅಂಗಚ್ಛೇದ ಮಾಡಲು ಅವರು ಹತ್ಯೆ ಮಾಡುತ್ತಾರೆ” ಎನ್ನುವುದು ಈಗ ನೀರಸ ಹೇಳಿಕೆಯಾಗಿದೆ.

ಹಾರ್ಟ್ ಕ್ರೇನ್ ಅದನ್ನು ಸದಾ “ಕಬ್ಬಿಣ ಕೊರೆದ ಸೀಳು’ ಎಂದು ಕರೆಯುತ್ತಿದ್ದ ಕಬ್ಬಿಣ, ಲೋಹ, ವಿಜ್ಞಾನ ಕತ್ತರಿಸುವ ಮಾಂಸಖಂಡ, ಇದು ಪರಿಚಿತ ಕಥೆ. ಆದರೂ ಈ ಹುಚ್ಚರು, ವಿನಾಶ ಪ್ರಕೃತಿಗಳು, ತಮ್ಮ ಜನಾಂಗ ವಿನಾಶಕ ಪ್ರಯತ್ನಗಳನ್ನು ಮುಂದುವರಿಸಲು ವಿಶ್ವವಿದ್ಯಾಲಯಗಳಿಂದ ಮತ್ತು ಪ್ರತಿಷ್ಠಾನಗಳಿಂದ ಆರ್ಥಿಕ ಅನುದಾನವನ್ನು ಪಡೆಯುತ್ತಾರೆ.

ಅವರು ಸದಾ ದೇವರನ್ನು ಕೊಲ್ಲಲು ಪ್ರಯತ್ನ ಮಾಡುತ್ತಿದ್ದಾರೆ, ಆದರೆ ದೇವರನ್ನು ಕೊಲ್ಲಲಾಗುವುದಿಲ್ಲ. ಇಷ್ಟಾದರೂ ಅಗ್ನಿಸ್ಫೋಟಕಗಳನ್ನು ಬೆನ್ನಟ್ಟಿರುವ ವಿಜ್ಞಾನವನ್ನು ಜ್ಞಾನ ಎಂದು ಪರಿಗಣಿಸಲಾಗಿದೆ. ತನ್ನ ಸಾಮರ್ಥ್ಯದ ಅತ್ಯುನ್ನತಿಗೇರಿದಾಗ ವಿಜ್ಞಾನವು, ಮನುಷ್ಯನಿಗೆ ಸಾಕಾಗುವಷ್ಟು ಆಹಾರ ಮತ್ತು ಆಶ್ರಯ ಸಂಪಾದಿಸಲು ನೆರವಾಗುವ ಮೂಲಕ ಅಥವಾ ಅಲ್ಪಕಾಲದವರೆಗೆ ಅವನ ದೈಹಿಕ ರೋಗರುಜಿನಗಳನ್ನು ಗುಣಪಡಿಸುವ ಮೂಲಕ ಮನುಷ್ಯನ ಐಹಿಕ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ.

ಇದು ರಜೋಗುಣದ ಜ್ಞಾನ, ಆಧುನಿಕ ಸೌಲಭ್ಯಗಳಿಂದ ವಿಜ್ಞಾನವು ಮನುಷ್ಯನಿಗೆ ಸಂಕೋಲೆ ತೊಡಿಸಿದಾಗ ಅಥವಾ ಕ್ಷುದ್ರ ತಂತ್ರಗಳನ್ನು ಬಳಿಸಿದಾಗ ಅಥವಾ ರಾಕ್ಷಸೀ ಬಾಂಬುಗಳಿಂದ ಹಾಗೂ ಸೈನ್ಯೋಪಕರಣಗಳಿಂದ ಮಾನವನನ್ನು ನಾಶಮಾಡಿದಾಗ ಅದು ಆಸುರೀ ಶಕ್ತಿಯಾಗುತ್ತದೆ – ಅದು ತಾಮಸ ಮತ್ತು ಕತ್ತಲೆಯ ಜ್ಞಾನವಾಗುತ್ತದೆ. ಆಧುನಿಕ ಮಾನವನು ತನ್ನೆಲ್ಲ  ಭರವಸೆಗಳನ್ನು ವಿಜ್ಞಾನದ ಮೇಲೆ ಇಟ್ಟುಕೊಂಡಿದ್ದರೂ, ಬುದ್ಧಿವಂತರಿಗೆ ಇದು ಹುಚ್ಚರಮನೆಯ ಜ್ಞಾನ ಎಂದು ಗೊತ್ತು.

ಹುಚ್ಚರ ಮನೆಯನ್ನು ಕುರಿತು ಪ್ರಸ್ತಾವ ಮಾಡುವಾಗ ಇತ್ತೀಚಿನ ಜ್ಞಾನಶಾಖೆಯಾದ ಮನಃಶಾಸ್ತ್ರದ ಮತಿವಿಕಲರನ್ನು ಕುರಿತು ಹೇಳಬೇಕು. ಸ್ವತಂತ್ರವಾಗಿ ಓಡಾಡಿಕೊಂಡಿರುವ ಇವರಿಗೆ ಪೊಲೀಸ್ ಶಕ್ತಿಯ ಗಮನಾರ್ಹ ಬೆಂಬಲವೂ ಇದೆ. ಈ ಪಿಎಚ್‌.ಡಿ ಪರೀಕ್ಷಕರು ಹಾಗೂ ಸ್ತಿಮಿತತೆಯ ತೀರ್ಪುಗಾರರು, ದಾರಿಯಲ್ಲಿ ಹೋಗುತ್ತಿರುವ ಯಾರೊಬ್ಬ ನಾಗರಿಕರನ್ನಾದರೂ ಅಡ್ಡಗಟ್ಟಬಹುದು.

ಉದಾಹರಣೆಗೆ ನ್ಯೂಯಾರ್ಕ್ ನಗರದ ರಸ್ತೆಯಲ್ಲಿ ಹೋಗುತ್ತಿರುವವನನ್ನು ತಡೆದು ಬೆಲ್‌ ವ್ಯೂ ಅಬ್ಸರ್ವೇಷನ್ ವಾರ್ಡ್‌ನಲ್ಲಿ “ಅನಿರ್ದಿಷ್ಟಕಾಲ” ಕೂಡಿ ಹಾಕಬಹುದು. ಆ ದುರದೃಷ್ಟಶಾಲಿಯು ಪ್ರತಿಭಟಿಸಲು ಕೂಗಿದರೆ ಈ ಬಲಿಷ್ಠ ಆತ್ಮ ಸಂಶೋಧಕರು ತಮ್ಮದೇ ಆದ ಬೆಲ್ ಕಾಂಗರೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಹೆಗ್ಗಣ ತುಂಬಿದ ಸರ್ಕಾರಿ ಹುಚ್ಚಾಸ್ಪತ್ರೆಗೆ ತಳ್ಳುತ್ತಾರೆ.

ಅಲ್ಲಿನ ವಿಘ್ನ ಸಂತೋಷಿಗಳಾದ ವೈದ್ಯರು ಮತ್ತು ದಾದಿಯರ ವರ್ತನೆಗಳು ಕ್ರಾಫ್ಟ್ಎಬಿಂಗ್ ಗೆ ರಸಭರಿತ ಇತಿಹಾಸವನ್ನು ಒದಗಿಸಬಹುದು. ಅನೇಕ ಸೂಕ್ಷ್ಮ ಮನಸ್ಸಿನ ಮತ್ತು ಬುದ್ಧಿವಂತರಾದ ವ್ಯಕ್ತಿಗಳು ಈ ಮನಃಶಾಸ್ತ್ರದ ವೈದ್ಯರಿಂದ ಆಘಾತಕ್ಕೊಳಗಾಗಿದ್ದಾರೆ.

ಅವರು ತಮ್ಮ ಪ್ರಯೋಗಶಾಲೆಯ ಬಿಳಿ ಇಲಿಗಳ ಹಾಗೆಯೇ ಮನುಷ್ಯರನ್ನೂ ನಡೆಸಿಕೊಳ್ಳುತ್ತಾರೆ. ಸಮಕಾಲೀನ ನಾಗರಿಕತೆಯ ಹುಚ್ಚುತನಕ್ಕೆ ಬದ್ಧರಾಗಿ ಇಲ್ಲದಿದ್ದರೆ ನೀವು ‘ಮನೋವಿಕಲ್ಪಿತ ವ್ಯಕ್ತಿ” (ಸೈಕೋಟಿಕ್) ಎಂದು ಅವರು ಆಧುನಿಕ ಮನುಷ್ಯನಿಗೆ ಹೇಳುತ್ತಾರೆ. ಹೀಗೆ ಜ್ಞಾನದ ಕಡು ತಮಸ್ಸಿನ ಈ ಇತ್ತೀಚಿನ ಶಾಖೆಯು ಸುಖಾನ್ವೇಷಣೆಯ ಹಾದಿಯಲ್ಲಿರುವ ಮನುಷ್ಯನನ್ನು ಅತ್ಯಂತ ದೀರ್ಘವಾದ ಬಳಸುದಾರಿಯಲ್ಲಿ ಸುತ್ತುಹಾಕಿಸುತ್ತದೆ.

ಇಂತಹ ಅಡ್ಡದಾರಿಯ ಅನೇಕ ಉದಾಹರಣೆಗಳನ್ನು ಕೊಡಬಹುದು. ಗಣಿತವು ಅಂಕೆಯಾಟಕ್ಕೆ ಸಂಬಂಧಿಸಿದ್ದು, ಆದರೆ ಇಲಿಯವರೆಗೂ ಯಾವುದೇ ಗಣಿತಶಾಸ್ತ್ರಜ್ಞಾನಾಗಲಿ ಒಂದಕ್ಕೆ ಒಂದು ಸಮ ಎಂದು ಸಾಧಿಸಿ ತೋರಿಸಲು ಸಮರ್ಥನಾಗಿಲ್ಲ. ಮೇಲಾಗಿ ಎಲ್ಲವನ್ನೂ ಒಂದು ಸೂತ್ರಕ್ಕೆ (ಈಕ್ವೇಷನ್) ಇಳಿಸುವುದರಿಂದ ಯಾರಿಗೂ ಉಪಯೋಗವಿಲ್ಲ, ರಾಜಕಾರಣವು ಅಧಿಕಾರಕ್ಕೆ ಹಪಾಹಪಿಸುತ್ತಿರುವ ಪ್ರಾಣಿಗಳ ಕ್ಷೇತ್ರ, ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರವು ಕೇವಲ ಕೊರಳುಕೊಯ್ಯುವ ಕಲೆಯಾಗಿದೆ.

ಈ ಅರ್ಥದಲ್ಲಿ ಅವರು ವಿಜ್ಞಾನದೊಡನೆ ಕೈ ಜೋಡಿಸಿದ್ದಾರೆ. ಇನ್ನು ಸಮಾಜಶಾಸ್ತ್ರವು ಸಾಯುವುದರ ಬಗೆಗೆ ಕಾಳಜಿವಹಿಸಿದರೆ, ಮಾನವಶಾಸ್ತ್ರವು ಸತ್ತವರನ್ನು ಕುರಿತು ಚಿಂತಿಸುತ್ತದೆ. ಮನುಷ್ಯನ ಹುಟ್ಟುಭಾಷೆಯು ಗೊಂದಲ ಹುಟ್ಟಿಸುವಂತಹ ಸಾಕಷ್ಟು ಸಂಖ್ಯೆಯ ಸಂಕೇತಗಳಿಂದ ತುಂಬಿದ್ದು ಬೇರೆಯದನ್ನು ಕಲಿಯಲು ನಿರುತ್ತೇಜಿಸುತ್ತದೆ.

ಬಹುತೇಕ ತುಲನಾತ್ಮಕ ಭಾಷಾಶಾಸ್ತ್ರಜ್ಞರು ತಮ್ಮ ತಾಯಿನುಡಿಯಲ್ಲೇ ನಿಷ್ಣಾತರಾಗಲು ಸಾಧ್ಯವಾಗುವುದಿಲ್ಲ. ಇನ್ನು ಖಗೋಳಶಾಸ್ತ್ರ ಆಕಾಶದ ಕಡೆಗೆ ಒಂದು ನೋಟವನ್ನು ಬೀರಿದರೆ ಸಾಕು, ನಕ್ಷತ್ರಗಳು ಅಸಂಖ್ಯಾತ ಎಂದು ಯಾವ ಮೂರ್ಖನಾದರೂ ಹೇಳಬಹುದು. ಈ ಎಲ್ಲ ಜ್ಞಾನಶಾಖೆಗಳೂ ರಜೋಗುಣ ಮತ್ತು ತಮೋಗುಣದಲ್ಲಿವೆ.

ಮನುಷ್ಯನು ಒದಗಿಸಿದ ಜ್ಞಾನಶಾಖೆಗಳು ಇಂಥವು. ಜೀವಮಾನ ಪರ್ಯಂತದ ಅಧ್ಯಯನಕ್ಕೆ ಆರಿಸಿಕೊಳ್ಳುವುದಿರಲಿ, ಕೇವಲ ಪರಿಗಣನೆಗೂ ಇವು ಅರ್ಹವಾಗಿಲ್ಲ ಹಣಸಂಪಾದನೆಯ ಗುರಿಯೊಂದೇ ಇವೆಲ್ಲವುಗಳ ಹಿಂದೆ ಬಹುಪಾಲು ಮಂದಿಯನ್ನು ವ್ಯವಹಾರ ನಿರತರನ್ನಾಗಿಸಿದೆ. ಹಣ ಸಂಪಾದನೆಯ ನೀತಿಯ ಹಿಂದೆ ಇಂದ್ರಿಯ ತುಷ್ಟಿಯ ನೀತಿಯಿದೆ. ಇಂದ್ರಿಯತುಷ್ಟಿ ಎಂದರೆ ಮುಖ್ಯವಾಗಿ ತಿನ್ನುವುದು, ಮಜ ಉಡಾಯಿಸುವುದು, ನಿದ್ದೆ ಮಾಡುವುದು, ಕಾಮಜೀವನ ಮತ್ತು ರಕ್ಷಣೆ ಮಾಡಿಕೊಳ್ಳುವುದು.

ಸರಿ, ಇವನ್ನೆಲ್ಲ ತೆಗೆದುಬಿಟ್ಟರೆ ಇಡೀ ”ಜ್ಞಾನ”ದ ಸೌಧವೇ ಕುಸಿದುಬೀಳುತ್ತದೆ. ವಾಸ್ತವವಾಗಿ ಇದೆಲ್ಲ ಮೂಲಭೂತ ಸ್ವರೂಪದ್ದಷ್ಟೆ. ಆದರೆ ಮರದ ಪದರು (ವಿನೀರ್) ಶತಮಾನಗಳ ಕಾಲದ ವಂಚನೆಯಿಂದ ಲೇಪಿತವಾಗಿ ಮಂದವಾಗಿದೆ. ಅನೇಕರು ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಿಜವಾದ ಸಮಸ್ಯೆಗಳಾದ ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮರಣವು ಪರಿಹಾರಗೊಳ್ಳದೆ, ಯಾರ ಸ್ಪರ್ಶಕ್ಕೂ ಸಿಲುಕದೆ ಉಳಿದುಬಿಡುತ್ತವೆ.

ಆದ್ದರಿಂದ, “ಅನುಗ್ರಹವು ದೇವರಿಂದ ಸಿಗುತ್ತದೆ, ಆದರೆ ಜ್ಞಾನವನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದು” ಎಂದು ಹೇಳಲಾಗಿದೆ.

ಇದರಿಂದ ಪಾರಾಗಿ ಹೊರಬರುವುದು ಹೇಗೆ? ಮಿಥ್ಯಾ ಜ್ಞಾನದ ಫಲಗಳಾದ ಕುತಂತ್ರ ಮತ್ತು ವಂಚನೆಗಳಿಗೆ ಕೊನೆಗಾಣಿಸುವುದು ಹೇಗೆ? ಕೃಷ್ಣನು ಹೇಳುತ್ತಾನೆ:

ಅನೇಕ ಜನ್ಮಗಳನ್ನು ಎತ್ತಿದನಂತರ ಕೊನೆಯಲ್ಲಿ ಜ್ಞಾನಿಯಾದವನು, ವಾಸುದೇವನೇ ಸರ್ವಸ್ವ ಎಂದು ಅರಿತು ನನ್ನಲ್ಲಿ ಶರಣಾಗತನಾಗುತ್ತಾನೆ. (ಗೀತಾ 7.19)

ನನ್ನ ಅವ್ಯಕ್ತ ಸ್ವರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಎಲ್ಲ ಜೀವಿಗಳೂ ನನ್ನಲ್ಲಿದ್ದಾರೆ. ನಾನು ಅವರಲ್ಲಿ ಇಲ್ಲ.

ಆದರೂ ಸೃಷ್ಟಿಯಾದದ್ದೆಲ್ಲ ನನ್ನನ್ನೇ ಆಧರಿಸಿದ್ದಲ್ಲ. ನನ್ನ ಯೋಗ ಸಮೃದ್ಧಿಯನ್ನು ನೋಡು. ಎಲ್ಲ ಜೀವಿಗಳ ಪಾಲಕನು ನಾನಾದರೂ ಮತ್ತು ನಾನು ಎಲ್ಲ ಕಡೆ ಇರುವವನಾದರೂ, ನಾನು ಈ ವಿಶ್ವದ ಅಭಿವ್ಯಕ್ತಿಯ ಭಾಗವಲ್ಲ, ಏಕೆಂದರೆ ನಾನೇ ಸೃಷ್ಟಿಯ ಮೂಲ.

ಎಲ್ಲ ಕಡೆಯೂ ಬೀಸುವ ಬಲಶಾಲಿಯಾದ ಗಾಳಿಯು ಸದಾ ಆಕಾಶದಲ್ಲಿ ಹೇಗೆ ನೆಲೆಸಿರುವುದೋ ಹಾಗೆ ಸೃಷ್ಟಿಯಾದದ್ದೆಲ್ಲವು ನನ್ನಲ್ಲಿ ನೆಲೆಸಿರುತ್ತದೆ.

ಕುಂತಿಯ ಮಗನಾದ ಅರ್ಜುನನೇ, ಕಲ್ಪಾಂತ್ಯದಲ್ಲಿ ಎಲ್ಲ ಐಹಿಕ ಅಭಿವ್ಯಕ್ತಿಗಳೂ ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ. ಮತ್ತು ಇನ್ನೊಂದು ಕಲ್ಪವು ಪ್ರಾರಂಭವಾದಾಗ ನನ್ನ ಶಕ್ತಿಯಿಂದ ಮತ್ತೆ ಅವುಗಳನ್ನು ಸೃಷ್ಟಿಸುತ್ತೇನೆ.

ಇಡೀ ವಿಶ್ವ ವ್ಯವಸ್ಥೆಯು ನನ್ನ ಅಧೀನವಾಗಿದೆ. ನನ್ನ ಸಂಕಲ್ಪದಿಂದ ಅದು ಮತ್ತೆ ಮತ್ತೆ ರೂಪತಾಳುತ್ತದೆ ಮತ್ತು ನನ್ನ ಸಂಕಲ್ಪದಿಂದ ಕೊನೆಗೆ ಅದು ನಾಶವಾಗುತ್ತದೆ. (ಗೀತಾ, 9.4-8)

ನಾನು ಮನುಷ್ಯ ರೂಪದಲ್ಲಿ ಇಳಿದುಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇರುವುದೆಲ್ಲದರ ಪ್ರಭು ನಾನೇ ನನ್ನ ದಿವ್ಯ ಪ್ರಕೃತಿಯು ಅವರಿಗೆ ತಿಳಿಯದು.

ಹೀಗೆ ದಿಗ್ಭ್ರಮೆಯಾದವರನ್ನು ರಾಕ್ಷಸಿ ಮತ್ತು ನಾಸ್ತಿಕ ಅಭಿಪ್ರಾಯಗಳು ಆಕರ್ಷಿಸುತ್ತವೆ. ಈ ಭ್ರಾಂತಿಯ ಸ್ಥಿತಿಯಲ್ಲಿ ಅವರ ಮುಕ್ತಿಯ ಭರವಸೆಗಳು, ಅವರ ಫಲಾಪೇಕ್ಷಿತ ಕರ್ಮಗಳು ಮತ್ತು ಅವರ ಜ್ಞಾನ ಸಂಸ್ಕಾರ ಎಲ್ಲ ಸೋತು ಹೋಗುತ್ತವೆ.

ಪಾರ್ಥನೇ, ಭ್ರಾಂತಿಗೆ ಸಿಲುಕದ ಮಹಾತ್ಮರು ದೈವೀ ಪ್ರಕೃತಿಯ ರಕ್ಷಣೆಯಲ್ಲಿ ಇರುತ್ತಾರೆ. ಅವರಿಗೆ ನಾನು ಮೂಲನೂ ಅವ್ಯಯನೂ ಆದ ದೇವೋತ್ತಮ ಪರಮ ಪುರುಷ ಎಂದು ಗೊತ್ತು. ಆದುದರಿಂದ ಅವರು ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ನಿರತರಾಗಿರುತ್ತಾರೆ.

ಸದಾ ನನ್ನ ಕೀರ್ತನೆಯನ್ನು ಮಾಡುತ್ತ, ದೃಢ ಸಂಕಲ್ಪದಿಂದ ಪ್ರಯತ್ನವನ್ನು ಮಾಡುತ್ತ, ನನಗೆ ನಮಸ್ಕಾರವನ್ನು ಮಾಡುತ್ತ ಈ ಮಹಾತ್ಮರು ಸತತವಾಗಿ ಭಕ್ತಿಯಿಂದ ನನ್ನನ್ನು ಪೂಜಿಸುತ್ತಾರೆ.

ಜ್ಞಾನದ ಬೆಳವಣಿಗೆಯಿಂದ ಯಜ್ಞದಲ್ಲಿ ನಿರತರಾದ ಇತರರು ಭಗವಂತನನ್ನು ಅದ್ವಿತೀಯನೆ೦ದೂ ಹಲವು ರೂಪಗಳಲ್ಲಿ ಇರುವವನೆಂದೂ ಮತ್ತು ವಿಶ್ವರೂಪದಲ್ಲಿಯೂ ಪೂಜಿಸುತ್ತಾರೆ (ಗೀತಾ, 9.11-15)

ಆದುದರಿಂದ ಗೀತೆಯ ಮಾನಕದೃಷ್ಟಿಯಿಂದ ನೋಡಿದಾಗ ಲೌಕಿಕ ಜ್ಞಾನವು ಮಾಯೆಗೆ ಸಂಬಂಧಪಟ್ಟುದು ಅಥವಾ ದೇವರ ಲೀಲೆ ಎಂದು ತಿಳಿದುಬರುತ್ತದೆ. ನಾವು ಎಲ್ಲವನ್ನೂ ಗ್ರಹಿಸುವುದು ಇಂದ್ರಿಗಳಿಂದ (ನೋಟ, ಶಬ್ದ ಸ್ಪರ್ಶ, ರುಚಿ, ವಾಸನೆ) ಮತ್ತು ಮನಸ್ಸಿನಿಂದ ಗ್ರಹಿಸುವುದು ಕ್ಷಣಿಕವಾದ ಮಾಯೆಯನ್ನು. ಮನುಷ್ಯ ಜೀವಿಯು ಇವುಗಳ ಸಂಪರ್ಕದಲ್ಲಿರುವಾಗ ಅವು ವಾಸ್ತವವೆಂದು ತೋರುತ್ತವೆ.

ಆದರೆ ಅವು ಗತಿಸಿಹೋದಾಗ ಕನಸಿನಹಾಗಾಗಿಬಿಡುತ್ತವೆ. ವ್ಯಕ್ತಿಯು ತನ್ನ ಗತಜೀವನವನ್ನು ಕುರಿತು ಯೋಚಿಸಿದಾಗ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಮ್ಮ ಗತವರ್ಷಗಳು ಈಗ ಕನಸಿಗಿಂತ ಬೇರೆ ಏನಲ್ಲ. ಆದೇ ರೀತಿಯಲ್ಲಿ ಈಗಿನ ಈ ಕ್ಷಣವು ವಾಸ್ತವವೆಂದು ತೋರುತ್ತದೆಯಾದರೂ, ಭವಿಷ್ಯದಲ್ಲಿ ಹಿಂದೆ ತಿರುಗಿ ನೋಡಿದಾಗ ಅದೂ ಕೂಡ ಕನಸಿನಂತಾಗಿಬಿಟ್ಟಿರುತ್ತದೆ.

ಎರಡನೆಯ ವಿಶ್ವಯುದ್ದವು ಈಗ ಮುಗಿದು ಹೋದ ಸಂಗತಿ, ಅದು ಉರುಳಿ ಹೋಗಿರುವುದರಿಂದ ಈಗ ಅದು ಒಂದು ಕೆಟ್ಟ ಕನಸಿನಂತೆ ತೋರುತ್ತದೆ ಅಷ್ಟೆ. ಈ ಕ್ಷಣದಲ್ಲಿ ಅವು ಇವೆ, ಮುಂದಿನ ಕ್ಷಣದಲ್ಲಿ ಹೋಗಿಬಿಟ್ಟಿವೆ. ದೀರ್ಘ ಕಾಲದವರೆಗೆ ಅವುಗಳಿಗೆ ಅಂಟಿಕೊಂಡಿರುವುದಕ್ಕಾಗುವುದಿಲ್ಲ.

ಏಕೆಂದರೆ ಅವು ದೀರ್ಘಕಾಲ ಬಾಳಲಾರವು. ಏಕೆಂದರೆ ಅವು ಅಲ್ಪಾಯುಗಳು. ಅವನ್ನು ಮಾಯೆ ಎಂದು ಕರೆಯುತ್ತಾರೆ. ಎಂದಮೇಲೆ ಜೀವನವೇ ಒಂದು ಮಾಯೆ. ಎಲ್ಲಿಯವರೆಗೆ ನಾವು ಇವುಗಳನ್ನು ಈ ದೇಹಗಳ ಮೂಲಕ ಗ್ರಹಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಮಾಯೆಯಲ್ಲಿ ಸಿಲುಕಿಹಾಕಿಕೊಂಡಿರುತ್ತೇವೆ.

ಈ ಜೀವನವೆನ್ನುವುದು ಕನಸುಗಳ ಒಂದು ಸುರಂಗದಲ್ಲಿ ರಭಸದಿಂದ ನುಗ್ಗಿಕೊಂಡು ಹೋಗುತ್ತಿರುವಂತಿದೆ. ಒಂದು ತುದಿಯಲ್ಲಿ ನಾವು ಧುಮುಕುತ್ತೇವೆ (ಜನನ), ನಮ್ಮನ್ನು ಸುರಂಗದ ಕತ್ತಲೆಯಲ್ಲಿ ಎಸೆಯಲಾಗುತ್ತದೆ. ಈ ಕತ್ತಲೆಯಲ್ಲಿ ನುಗ್ಗಿ ಹೋಗುತ್ತಿರುವಾಗ ಎಲ್ಲ ತರಹೆಯ ಮಾಯಾ ರೂಪಗಳು ಮಿಂಚಿ ಹೋಗುತ್ತವೆ – ಶಬ್ದಗಳು, ನೋಟಗಳು, ರುಚಿಗಳು, ಸ್ಪರ್ಶಗಳು, ವಾಸನೆಗಳು .. ಎಲ್ಲವೂ ನಮಗೆ ಮುಖಾಮುಖಿಯಾಗುತ್ತದೆ.

ಎಲ್ಲ ಗಂಡಸರು ಮತ್ತು ಹೆಂಗಸರು, ದೇಶಗಳು, ಜಮೀನುಗಳು, ಭೂಮಿಗಳು, ಸೌರಮಂಡಲಗಳು ಮತ್ತು ಐಹಿಕ ವಿಶ್ವದ ಎಲ್ಲ ಪರಿವಾರ ನಮ್ಮೆದುರು ಪ್ರತ್ಯಕ್ಷವಾಗುತ್ತವೆ. ಆಗ ಇದ್ದಕ್ಕಿದಂತೆಯೇ ನಾವು ಸುರಂಗದಿಂದ ಹೊರಗೆ ಬರುತ್ತೇವೆ (ಸಾವಿನಲ್ಲಿ) ಮತ್ತೆ ಬೆಳಕಿಗೆ ಬರುತ್ತೇವೆ.

ಸುರಂಗವಲ್ಲ ಈ ಬೆಳಕೇ ನಿಜವಾದ ವಾಸ್ತವತೆ. ಸುರಂಗದ ಜ್ಞಾನದಲ್ಲಿ ಮಗ್ನರಾಗಿರುವವರು ಮೋಸಹೋಗುತ್ತಾರೆ. ದೇವರಾದ ಕೃಷ್ಣನ ಸಾಮ್ರಾಜ್ಯವೇ ವಾಸ್ತವತೆ. ಅದೇ ಆನಂದ-ಜ್ಞಾನ ಮತ್ತು ಪರಾತ್ಪರನ ನಿಜವಾದ ಮತ್ತು ಶಾಶ್ವತವಾದ ಧಾಮ. ಆ ಸುರಂಗದಲ್ಲಲ್ಲ, ಈ ಸಮಾಜದಲ್ಲಿ ನಾವು ಮುಕ್ತಿಯ ಉಲ್ಲಾಸಿಗಳೂ ಆಗಿರುತ್ತೇವೆ.

ಸುರಂಗವು ಕೇವಲ ಕತ್ತಲೆ, ಗೊಂದಲ ಮತ್ತು ಯಾತನೆ. ಈ ಪ್ರಪಂಚವು ಒಂದು ಕತ್ತಲೆ, ನಾವು ಅದನ್ನು ಕಪ್ಪು ಗಾಜಿನ ಮೂಲಕ ನೋಡುತ್ತಿದ್ದೇವೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ವಿಲಿಯಂ ಬ್ಲೇಕ್ ಕೂಡ ಇದೇ ಅಭಿಪ್ರಾಯವನ್ನು ತನ್ನ ಕವನದಲ್ಲಿ ವ್ಯಕ್ತಪಡಿಸಿದ್ದಾನೆ:

ಈ ಜೀವದ ಆತ್ಮದ ಐದು ಕಿಟಕಿಗಳು

ಸ್ವರ್ಗವನು ವಿರೂಪಗೊಳಿಸುತ್ತವೆ ಧ್ರುವದಿಂದ ಧ್ರುವಕೆ

ಕಣ್ಣಿನಿಂದ ನೀವು ನೋಡದಿದ್ದರೂ

ಸುಳ್ಳನ್ನು ನಂಬುವಂತೆ ಮಾಡುತ್ತವೆ

ಬೆಳಕಿನ ಶಲಾಕೆಯಲ್ಲಿ ಆತ್ಮವು ನಿದ್ರಿಸಿರುವಾಗ

ಕತ್ತಲಲ್ಲಿ ಹುಟ್ಟಿದ್ದು ಕತ್ತಲಲ್ಲೇ ನಶಿಸುತ್ತದೆ.

(ವಿಲಿಯಂ ಬ್ಲೇಕ್, ದ ಎವರ್‌ರಾಸ್ಟಿಂಗ್ ಗಾಸ್ಪೆಲ್)

ನಮ್ಮ ಕಾಳಜಿಗಳು ನಿಜವಾಗಿಯೂ ಸುರಂಗಕ್ಕೆ ಸಂಬಂಧಿಸಿದಂತೆ ಅಲ್ಲವಾದ್ದರಿಂದ, ನಮ್ಮ ನಿಜವಾದ ಸಂತೋಷವನ್ನು ಸುರಂಗದಲ್ಲಿ ಪಡೆಯಲಾಗುವುದಿಲ್ಲವಾದ್ದರಿಂದ, ನಾವು ಏನು ಮಾಡಬೇಕು? ಈ ಯಾತನಾಮಯ ಪರಿಸ್ಥಿತಿಯಿಂದ ಪಾರಾಗಲು ನಾವು ನಮ್ಮನ್ನೇ ಕೊಂದುಕೊಳ್ಳಬೇಕೆ? ಇಲ್ಲ. ಇದನ್ನು ಮಾಡಲು ನಮಗೆ ಅಧಿಕಾರವಿಲ್ಲ.

ನಮ್ಮ ಐಹಿಕ ದೇಹ ಕೂಡ ನಮಗೆ ಸಂಬಂಧಿಸಿದ್ದಲ್ಲ. ಅದಕ್ಕೆ ಕೊನೆಗಾಣಿಸಲು ನಮಗೆ ಏನೂ ಅಧಿಕಾರವಿಲ್ಲ. “ಮನುಷ್ಯನು ಒಬ್ಬ ಸೆರೆಮನೆವಾಸಿ. ತನ್ನ ಸೆರೆಮನೆಯ ಬಾಗಿಲು ತೆರೆದು ಓಡಿಹೋಗಲು ಅವನಿಗೆ ಅಧಿಕಾರವಿಲ್ಲ.” ಎನ್ನುತ್ತಾನೆ ಸಾಕ್ರೆಟೀಸ್‌. ಮನುಷ್ಯನು ಕಾಯಬೇಕು. ದೇವರು ಕರೆಯುವವರೆಗೂ ತನ್ನ ಪ್ರಾಣವನ್ನು ಕಳೆದುಕೊಳ್ಳಬಾರದು.” ದೇಹವು ಕತ್ತಲೆಯ ಧಾಮ ಎಂದು ಅರ್ಥಮಾಡಿಕೊಂಡಿದ್ದ ಕೆಲವೇ ಪಾಶ್ಚಾತ್ಯ ತತ್ತ್ವಜ್ಞಾನಿಗಳಲ್ಲಿ ಸಾಕ್ರೆಟೀಸ್‌ ಒಬ್ಬ.

ಆಹಾರದ ಅವಶ್ಯಕತೆಯನ್ನು ಹೊಂದಿರುವಷ್ಟರಿಂದಲೇ ಈ ದೇಹವು ಕೊನೆಯಿಲ್ಲದ ಕಷ್ಟಗಳಿಗೆ ಆಕರವಾಗಿದೆ. ಅದು ರೋಗಗಳಿಗೂ ತುತ್ತಾಗುತ್ತದೆ. ಹಾಗಾಗಿ ಸತ್ಯಾನ್ವೇಷಣೆಯ ನಮ್ಮ ಪ್ರಯತ್ನದಲ್ಲಿ ಅಡ್ಡಗಾಲು ಹಾಕಿ ತಾನೇ ಮುಂದಾಗುತ್ತದೆ. ಅದು ನಮ್ಮಲ್ಲಿ ಪ್ರೇಮ, ಕಾಮ, ಭಯ ಮತ್ತು ಎಲ್ಲ ಬಗೆಯ ಭ್ರಮೆಗಳನ್ನು ತುಂಬುತ್ತದೆ.

ಕೊನೆಯಿಲ್ಲದ ಮೌಢ್ಯವನ್ನು ತುಂಬುತ್ತದೆ. ನಮ್ಮಲ್ಲಿನ ಯೋಚನಾಶಕ್ತಿಯನ್ನೇ ಹೊತ್ತೊಯ್ಯುತ್ತದೆ. ಯುದ್ಧಗಳು, ಬಡಿದಾಟಗಳು, ಮನಸ್ತಾಪಗಳು ಎಲ್ಲಿಂದ ಬರುತ್ತವೆ? ಇನ್ನೆಲ್ಲಿಂದ – ದೇಹದಿಂದ ಮತ್ತು ದೇಹದ ಕಾಮನೆಗಳಿಂದ. ಹಣದ ಲೋಭದಿಂದ ಯುದ್ಧಗಳು ಸಂಭವಿಸುತ್ತವೆ. ದೇಹಕ್ಕಾಗಿ, ದೇಹದ ಸೇವೆಗಾಗಿ ಹಣವನ್ನು ಗಳಿಸಬೇಕು.

ಈ ಎಲ್ಲ ಅಡೆತಡೆಗಳಿಂದ ಜ್ಞಾನದ ಕಡೆಗೆ ಮನಸ್ಸಕೊಡಲು ನಮಗೆ ಸಮಯವಿಲ್ಲ. ಕೊನೆಯದಾದರೂ ಅತ್ಯಂತ ಕೆಡುಕಾದುದೆಂದರೆ ನಾವು ಬಿಡುವಾಗಿದ್ದು ಜಿಜ್ಞಾಸೆಯಲ್ಲಿ ನಮ್ಮ ಮನಸ್ಸನ್ನು ತೊಡಗಿಸಿದರೂ ದೇಹವು ಸದಾ ನಮಗೆ ಅಡ್ಡಗಾಲು ಹಾಕುತ್ತದೆ. ನಮ್ಮ ಜಿಜ್ಞಾಸೆಗಳಲ್ಲಿ ತಳಮಳವನ್ನೂ ಗೊಂದಲವನ್ನೂ ಉಂಟುಮಾಡುತ್ತದೆ.

ಸತ್ಯವನ್ನು ನೋಡದಂತೆ ನಮಗೆ ಬೆರಗು ಹೊಡೆಸಿ ತಡೆ ಒಡ್ಡುತ್ತದೆ. ಅನುಭವದಿಂದ ನಮಗೆ ಸಾಬೀತಾಗಿರುವ ಸಂಗತಿಯೆಂದರೆ, ಯಾವುದರ ಬಗೆಗಾದರೂ ನಮಗೆ ಶುದ್ಧ ಜ್ಞಾನ ದೊರಕಬೇಕಾದರೆ ನಾವು ದೇಹದಿಂದ ಬಿಡುಗಡೆ ಹೊಂದಬೇಕು. ಆತ್ಮವೇ ಈ ಸಂಗತಿಗಳನ್ನು ನೋಡಬೇಕು.

ಆಗ ಮಾತ್ರ ನಾವು ಬಯಸುವ, ನಾವು ಪ್ರೀತಿಸುವ ಅರಿವನ್ನು ಪಡೆಯಬಹುದು. ಅದು ಬದುಕಿರುವಾಗ ಅಲ್ಪ ಸತ್ತಮೇಲೆ, ಏಕೆಂದರೆ ದೇಹದ ಸಂಸರ್ಗದಲ್ಲಿರುವಾಗ ಆತ್ಮನಿಗೆ ಶುದ್ಧಜ್ಞಾನವು ಲಭ್ಯವಾಗುವುದಿಲ್ಲ. ಆಗ ಎರಡರಲ್ಲೊಂದು ಆಗುತ್ತದೆ – ಜ್ಞಾನವನ್ನು ಪಡೆಯಲು ಸಾಧ್ಯವಾಗುವುದೇ ಇಲ್ಲ ಅಥವಾ ಸಾಧ್ಯವಾದರೆ ಅದು ಸತ್ತಮೇಲಷ್ಟೆ.

ಅದಕ್ಕಾಗಿ, ಅಲ್ಲಿಯವರೆಗೆ ಆತ್ಮವು ದೇಹದಿಂದ ಪ್ರತ್ಯೇಕವಾಗಿದ್ದು ಏಕಾಂಗಿಯಾಗಿ ಅಸ್ತಿತ್ವದಲ್ಲಿರುತ್ತದೆ. ಪ್ರಸ್ತುತ ಜನ್ಮದಲ್ಲಿ ನಾವು ಈ ದೇಹದೊಂದಿಗೆ ಕನಿಷ್ಠ ಸಂಪರ್ಕವನ್ನಿಟ್ಟುಕೊಂಡಿದ್ದರೆ ಮತ್ತು ದೇಹ ಪ್ರಕೃತಿಯೊಂದಿಗೆ ಲೋಲುಪ್ತರಾಗದೆ, ದೇವರು ನಮ್ಮನ್ನು ಸ್ವತಃ ಬಿಡುಗಡೆ ಮಾಡುವ ಕ್ಷಣದವರೆಗೆ ನಮ್ಮನ್ನು ಪರಿಶುದ್ಧವಾಗಿಟ್ಟುಕೊಂಡಿದ್ದರೆ ಜ್ಞಾನವನ್ನು ಸಮೀಪಿಸಬಹುದು ಎಂದು ನಾನು ಭಾವಿಸುತ್ತೇನೆ.

ಹೀಗೆ ದೇಹವೆಂಬ ಮೌಢ್ಯವನ್ನು ತೊಡೆದು, ನಾವು ಪರಿಶುದ್ಧರಾಗಿ, ಪರಿಶುದ್ಧನೊಡನೆ ಸಂಭಾಷಿಸುತ್ತೇವೆ ಮತ್ತು ಎಲ್ಲೆಲ್ಲೂ ಇರುವ ಶುಭ್ರ ಬೆಳಕಿನಲ್ಲಿ ನಮ್ಮನ್ನು ನಾವು ಅರಿಯುತ್ತೇವೆ. ಈ ಬೆಳಕು ಸತ್ಯದ ಬೆಳಕಲ್ಲದೆ ಬೇರೇನೂ ಅಲ್ಲ. (ಸಾಕ್ರೆಟೀಸ್, ಪ್ಲೇಟೋವಿನ ಫೀಡೋದಿಂದ)

ಆದುದರಿಂದ ಕತ್ತಲೆಯ ಸುರಂಗದಿಂದ ಸತ್ಯದ ಬೆಳಕಿಗೆ ಬರುವುದು ಜ್ಞಾನದ ಕೊನೆ.

ಸತ್ಯದ ಬೆಳಕು ದೇವರಾದ ಕೃಷ್ಣನಿಂದ ಹೊರಹೊಮ್ಮುತ್ತದೆ. ಕೃಷ್ಣನು ಸಮಸ್ತ ಜ್ಞಾನ ಮತ್ತು ಸತ್ಯದ ಧಾಮ. ಎಂದಮೇಲೆ ದೇವೋತ್ತಮನಿಗೆ ಶರಣಾಗತರಾಗುವುದರಲ್ಲಿಯೇ ನಮ್ಮ ಸಂತೋಷ ಅಡಗಿದೆ. ದೇವೋತ್ತಮನು ಕತ್ತಲೆ ಸುರಂಗದ ಎಲ್ಲ ಮಿಥ್ಯಾ ಜ್ಞಾನಗಳಿಗೆ ಕೊನೆ ಹಾಡುತ್ತಾನೆ.

ಐಹಿಕ ಜಗತ್ತಿನಲ್ಲಿ ಸೂರ್ಯನು ರಾತ್ರಿಯ ಕತ್ತಲನ್ನು ಚೆದುರಿಸುವಂತೆ ದೇವೋತ್ತಮನ ಸತ್ಯದ ಬೆಳಕು, ಅಜ್ಞಾನ ಮತ್ತು ಕತ್ತಲನ್ನು ಚೆದುರಿಸುತ್ತದೆ. ಸುರಂಗದಲ್ಲಿರುವಾಗ ನಮ್ಮನ್ನು ಬೆಳಕಿನೆಡೆಗೆ ಒಯ್ಯಲು ಕೆಲವು ಮಾರ್ಗದರ್ಶಕ ಗ್ರಂಥಗಳಿವೆ. ಕ್ರಿಸ್ತನ ಸುವಾರ್ತೆಯು ಅಂತಹ ಒಂದು ಮಾರ್ಗದರ್ಶಕ ಗ್ರಂಥ.

ಭಗವದ್ಗೀತೆಯು ಇನ್ನೊಂದು ಮಾರ್ಗದರ್ಶಕ ಗ್ರಂಥ, ಕುರಾನ್ ಮತ್ತು ಬೌದ್ಧರ ಸೂತ್ರಗಳು ಕೂಡ ಅಧಿಕೃತ ಗ್ರಂಥಗಳು. ಆದರೆ ನಮ್ಮ ಮಾರ್ಗದರ್ಶಕ ಗ್ರಂಥವು ಕೇವಲ ಮಾನವ ರಚಿತ ಊಹಾಪೋಹದ ಕಂತೆಯನ್ನು ಅಧಿಕೃತ ಧರ್ಮ ಗ್ರಂಥ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು.

ಈ ದೇಹಗಳನ್ನು ಕುರಿತು ಚಿಂತಿಸುತ್ತಾ, ಈ ದೇಹಗಳ ಕೋರಿಕೆಗಳನ್ನು ಈಡೇರಿಸುತ್ತಾ ಈ ಸುರಂಗದಲ್ಲಿ ನಾವು ಇರುವವರೆಗೂ ಸುಖವಾಗಿರುವುದಿಲ್ಲ. ಹುಣ್ಣುಗಳನ್ನು ಕೆರೆದುಕೊಳ್ಳುತ್ತಾ ಕಾಯಿಲೆಯನ್ನು ಉಲ್ಬಣಗೊಳಿಸಿಕೊಳ್ಳುವ ರೋಗಗ್ರಸ್ತರಂತೆ ನಾವಿರುತ್ತೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi