ಅನೇಕ ಸಂವತ್ಸರಗಳಿಂದ ಧ್ಯಾನದ ಸಮಾಧಿ ಸ್ಥಿತಿಯಲ್ಲಿ ಪರವಶತೆಗೊಂಡ ಮಹಾಋಷಿ ಕಶ್ಯಪ ಮುನಿಯು, ಒಂದು ದಿನ ಸಮಾಧಿಯಿಂದ ಹೊರಗಾಣಿಸಿಕೊಂಡು, ತನ್ನ ಪತ್ನಿ ಅದಿತಿ ದೇವಿಯ ಆಶ್ರಮಕ್ಕೆ ಬಂದನು. ಅತೀ ಉತ್ಸಾಹಭರಿತವಾಗಿದ್ದ ಈ ಆಶ್ರಮದ ಪರಿಸ್ಥಿತಿಯು ಅಂದು ಬಹಳ ಶೋಚನೀಯವಾಗಿತ್ತು. ದೇವತೆಗಳ ಮಾತೆಯಾದ, ತನ್ನ ಪತ್ನಿ ಅದಿತಿಯೂ ಸಹ ಬಹಳ ದುಃಖ ಪೀಡಿತಳಾಗಿ ಕೊರಗುತ್ತಿರುವುದನ್ನು ಕಂಡನು. ಇದ್ದಕ್ಕೇನು ಕಾರಣವೆಂದು ಕಶ್ಯಪರು ಆಕೆಯಲ್ಲಿ ಪ್ರಶ್ನಿಸಿದರು. ದೈತ್ಯರಾಜನಿಗೆ ಸೋತು ಸ್ಥಾನಭ್ರಷ್ಟರಾದ ಆಕೆಯ ಪುತ್ರರು ಅದೃಶ್ಯವಾಗಿರುವುದರಿಂದಲೂ, ಮತ್ತು ಈ ಪುತ್ರರ ಅಗಲಿಕೆಯಿಂದಲೂ, ಆಕೆ ಕಳವಳಿಸುತ್ತಿದ್ದಾಳೆಂದು ಶೋಕಿಸುತ್ತಿದ್ದಳು. ತನ್ನ ಪುತ್ರರು ಪುನಃ ಹಿಂತೆರಳಿ ಅವರವರ ನೆಲೆಯನ್ನು (ಸ್ಥಾನಮಾನವನ್ನು)
ಸ್ವಾಧೀನಮಾಡುವಂತೆಯೂ, ಹಾಗೂ ಭವಿಷ್ಯದಲ್ಲಿ ಸುಖಸಂಪತ್ತಿನಲ್ಲಿ ಅದೃಷ್ಟವಂತರಾಗುವಂತೆಯೂ, ತನ್ನ ಪತಿ ಪ್ರಜಾಪತಿ ಕಶ್ಯಪನಲ್ಲಿ ವಿನಂತಿಸಿದಳು. ಆಕೆಯ ಈ ಬೇಡಿಕೆಗೆ ಕಶ್ಯಪಮುನಿಯು ವಿಚಲಿತನಾದನು. ಆಕೆಗೆ ತತ್ತ್ವಜ್ಞಾನದ ಮೂಲಕ ತನ್ನನ್ನು ಖರೆಮಾಡಿಕೊಂಡು, ಸ್ನೇಹಪಾಶದಿಂದ ಬದ್ಧರಾಗಿ ಪತಿ-ಪುತ್ರ ಬಂಧುಗಳೆಂದು ಸಂಬಂಧವನ್ನು ಹಚ್ಚಿಕೊಳ್ಳದೇ, ಈ ಐಹಿಕ ಕಲ್ಪನೆಗಳಿಂದ ದೂರ ಸರಿದು, ಮತ್ತೆ ಅಲೌಕಿಕ ಜೀವನವನ್ನು ಆವರಿಸಲು ಉಪದೇಶ ನೀಡಿದನು. ಆದರೆ ಈ ಸಲಹೆಗಳಿಂದ ಅದಿತಿಯಲ್ಲಿ ಯಾವ ತೃಪ್ತಿಯೂ ಕಂಡುಬಾರದೇ ಇದ್ದುದ್ದನ್ನು ನೋಡಿ, ಆತ ಅವಳಿಗೆ ಸರ್ವೋತ್ತಮ ಪುರುಷನಾದ ಶ್ರೀ ವಾಸುದೇವನನ್ನು ಪೂಜಿಸಲು ಸಲಹೆ ನೀಡಿದನು. ಜನಾರ್ದನನ ಸ್ಮರಣೆಯಿಂದ ಆಕೆಯ ಎಲ್ಲಾ ಅಪೇಕ್ಷೆಗಳೂ ಈಡೇರುವುದೆಂದು ಭರವಸೆ ನೀಡಿದನು.

ಶ್ರೀ ವಾಸುದೇವನ ಆರಾಧನೆ ಮಾಡಲು ಅದಿತಿಯು ಬಹಳ ಕುತೂಹಲದಿಂದ ಇಚ್ಛಿಸಿದಳು. ಅದರಂತೆ ಶ್ರೀ ಬ್ರಹ್ಮನು ಕಶ್ಯಪನಿಗೆ ಉಪದೇಶಿಸಿದಂತೆ, ಆಕೆಗೆ ಶ್ರೀ ವಾಸುದೇವನನ್ನು ಪೂಜಿಸಲು ಫಾಲ್ಗುಣ ಮಾಸದ ಶುಕ್ಲಪಕ್ಷದಲ್ಲಿ ಹನ್ನೆರಡು ದಿನಗಳವರೆಗೆ ಆಚರಿಸುವ `ಪಯೋವ್ರತ’ ವೆಂಬ ಒಂದು ಸೂತ್ರವನ್ನು ಹೇಳಿಕೊಟ್ಟನು. ಈ ವ್ರತವನ್ನು ಶ್ರದ್ಧೆಯಿಂದ, ಅದರ ಸಕಲ ನಿಯಂತ್ರಕ ತತ್ತ್ವಗಳನ್ನು ಅನ್ವಯಿಸುತ್ತಾ ಆಕೆ ಪ್ರತಿಜ್ಞೆಯನ್ನು ಪಾಲಿಸಿದಳು. ಹನ್ನೆರಡು ದಿನಗಳ ಅಖಂಡ ಭಕ್ತಿಸೇವೆಯನ್ನು ಅತಿ ಶ್ರದ್ಧೆಯಿಂದ ಸಲ್ಲಿಸಿದ ಒಡನೆಯೇ, ದೇವೋತ್ತಮ ಪರಮ ಪುರುಷನು ಅವಳ ತಪಸ್ಸಿಗೆ ಮೆಚ್ಚಿ, ಶಂಖ ಚಕ್ರ ಗದಾಧಾರಿಯೂ, ಪೀತಾಂಬರನೂ ವನಮಾಲ ಭೂಷಿತನಾದ ವಿಷ್ಣುವಿನ ರೂಪದಲ್ಲಿ ಅದಿತಿಯ ಮುಂದೆ ಪ್ರತ್ಯಕ್ಷನಾದನು. ಆಕೆ ದೈವೋನ್ಮಾದಭರಿತ ವಾತ್ಸಲ್ಯದಿಂದ ತುಳುಕುತ್ತಾ ಶ್ರೀ ಪರಮಾತ್ಮನಿಗೆ ಅತೀ ಗೌರವ ಆದರದಿಂದ ನಮಸ್ಕರಿಸಿದಳು ಆಕೆಯ ಆನಂದಕ್ಕೆ ಮಿತಿಯಿರಲಿಲ್ಲ. ಆನಂದಬಾಷ್ಪಗಳು ಉದುರಿದವು. ಮೈ ಪುಳಕಿತವಾಯಿತು. ಮಾತಾಡಲು ಬಾರದಂತೆ ಆಗಿ ಗಂಟಲು ಬಿಗಿಯಿತು. ಪರಮಾತ್ಮನು ಆಕೆಯ ಭಕ್ತಿಸೇವೆಗೆ ಮತ್ತು ಕಶ್ಯಪಮುನಿಯ ತಪಶ್ಚರ್ಯೆಗೆ ಒಡಂಬಡಿಸಿ, ಆಕೆಯ ಪುತ್ರನಾಗಿ ಪೂರ್ಣ ಅವತಾರವನ್ನು ಗಳಿಸಿ ದೇವತೆಗಳನ್ನು ಕಾಪಾಡಲು ಒಪ್ಪಂದ ನೀಡಿ ಹೇಳಿದನು “ಎಲೆ! ಅದಿತಿದೇವಿಯೇ, ನಿನ್ನ ಬಹುದಿನಗಳ ಇಚ್ಛೆಯು ಪೂರ್ಣವಾಯಿತೆಂದು ಭಾವಿಸು. ಫಲವನ್ನು ಕೊಡುವ ನನ್ನ ವ್ರತವು ಎಂದೂ ವ್ಯರ್ಥವಾಗದು. ಅದಕ್ಕೋಸ್ಕರ ನಾನೇ ಒಂದು ಅಂಶದಿಂದ ನಿನಗೆ ಮಗನಾಗಿ ಜನಿಸಿ, ನಿನ್ನ ಮಕ್ಕಳನ್ನು ರಕ್ಷಿಸುವುದಕ್ಕೆ ಭಿಕ್ಷೆಯನ್ನಾದರೂ ಬೇಡುವೆ. ಕಶ್ಯಪರ ತಪೋಬಲಕ್ಕೆ ಮೆಚ್ಚಿ ಅವರನ್ನು ಪ್ರವೇಶಿಸುವೆನು. ನೀನು ಅವರನ್ನು ಸೇವಿಸು. ಆ ಮೇಲೆ ನಿನ್ನ ಹೃದಯವನ್ನು ನಾನು ಪ್ರವೇಶಿಸುವೆನು” ಎಂದು ತಿಳಿಸಿ ಕಾಣದಂತಾದನು.
ಅಂತೆಯೇ ಅದಿತಿಗೆ ಭಕ್ತಿಯು ಹೆಚ್ಚಿತು. ತನ್ನ ಪತಿ ಕಶ್ಯಪರನ್ನು ಸೇವಿಸಿದಳು. ಆ ಪ್ರಜಾಪತಿಯು ತನ್ನ ಸಮಾಧಿಬಲದಿಂದ ಶ್ರೀ ಹರಿಯು ತನ್ನಲ್ಲಿ ಸನ್ನಿಹಿತನಾದನೆಂದು ಕಂಡನು. ಈ ಅಮೋಘ ಜ್ಞಾನ ಸಂಪನ್ನರಾದ ಅವರಿಂದ ಅದಿತಿಯು ಗರ್ಭವನ್ನು ಧರಿಸಿದಳು. ಹಿರಣ್ಯಗರ್ಭನೆಂದು ಅರಿತಿರುವ ಬ್ರಹ್ಮನೂ ಸಹ ಇದನ್ನು ಅರಿತು, ಸಫಲತೆಗೆ ಗರ್ಭಸ್ತುತಿ ಮಾಡಿದನು.
ಮುಂದೆ ಕೆಲವು ದಿನಗಳಾದ ಮೇಲೆ ಭಾದ್ರಪದ ಮಾಸದ ಶುಕ್ಲ ದ್ವಾದಶಿಯ ಮಧ್ಯಾಹ್ನ `ಅಭಿಜಿತ್’ ಮುಹೂರ್ತದ ಶುಭವೇಳೆಯಲ್ಲಿ ವಿಜಯ ಎಂಬ ಯೋಗವಿರುತ್ತಿರಲಾಗಿ, ಶ್ರೀ ವಿಷ್ಣುವು ವಾಮನನಾಗಿ ಪ್ರಕಟವಾದನು. ಅದಿತಿಯ ಗರ್ಭಸಂಭೂತನಾದ ಪರಮ ಪುರುಷನು ತನ್ನ ಚತುರ್ಭುಜಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನೂ, ಕೊರಳಲ್ಲಿ ಕೌಸ್ತುಭವನ್ನೂ, ಪೀತಾಂಬರಧಾರಿಯಾಗಿ ಅಲಂಕೃತನಾಗಿ ಜನಿಸಿದನ್ನು, ವಿದ್ವಾಂಸ ಸುಖದೇವ ಗೋಸ್ವಾಮಿಗಳು ಅತಿ ಸುಂದರವಾಗಿ ವರ್ಣನೆ ಮಾಡಿದ್ದಾರೆ. ಅವನ ಮುಖಕಮಲವು ಮಕರವನ್ನು ಹೋಲುವಂತಹ ಕರ್ಣಕುಂಡಲಗಳಿಂದ ಅಲಂಕೃತವಾಗಿತ್ತು. ಅವನ ಕಿವಿಗಳು ಸುಂದರವಾಗಿದ್ದು, ಕಪೋಲಗಳು ಫಳಫಳಿಸುತ್ತಾ, ಅವನ ಮಂದಹಾಸವು ಪ್ರತಿಯೊಬ್ಬರಿಗೂ ಆಕರ್ಷಣೀಯವಾಗಿತ್ತು. ಇಂತಹ ನಯನ ಮನೋಹರವಾದ ಸುಂದರ ಶಿಶುವನ್ನು ಕಂಡು, ಕಶ್ಯಪನು ಜಯ ಜಯಕಾರವನ್ನು ಮಾಡಿ ನಮಸ್ಕರಿಸಿದನು. ಈ ಶಿಶುವಿನ ಜನ್ಮದಿನವನ್ನು ಎಲ್ಲಾ ಋಷಿಮುನಿಗಳು ಪರಮಾನಂದದಿಂದ ಆಚರಿಸಿದರು. ಶಂಖ, ತಾಳ, ಮದ್ದಳೆ, ಢಮರು ಇತ್ಯಾದಿ ವಾದ್ಯಗಳ ಸ್ವರಮಾಧುರ್ಯದಿಂದ ವಾತಾವರಣವು ಝೇಂಕರಿಸಿತು. ಅಪ್ಸರೆಯರು ಪರಮಾನಂದದಿಂದ ನರ್ತಿಸುತ್ತಾ, ಗಂಧರ್ವರು ಗೀತೆಯನ್ನು ಹಾಡುತ್ತಾ, ದೇವತೆಗಳು, ಪಿತೃಗಳು, ಅಗ್ನಿ ದೇವತೆಗಳು ಶಿಶುವನ್ನು ಲಾಲಿಸುತ್ತಾ ಸ್ವಾಗತಿಸಿದರು. ವಿದ್ಯಾಧರರು, ಸಿದ್ಧರು, ಕಿನ್ನರೆಯರು ಮತ್ತು ಯಕ್ಷ ರಾಕ್ಷಸರೂ ಪುಷ್ಪವೃಷ್ಟಿಯನ್ನೇ ಸುರಿಸಿದರು.
ಆ ದೇವೋತ್ತಮನು ಬಹುರೂಪಿಯಾಗಿರುತ್ತಾನೆ. ಅದಿತಿಯ ಗರ್ಭದಿಂದ ಜನಿಸಿದ ಶಿಶುವು ಜನನ ಸಮಯದಲ್ಲಿ ಚತುರ್ಭುಜ `ನಾರಾಯಣ’ ನಾಗಿದ್ದು, ಮತ್ತೆ ಬ್ರಹ್ಮಚಾರಿಯ (ವಟುವಿನ) ರೂಪಕ್ಕೆ ಬದಲಿಸುತ್ತಾನೆ. ವಾಸ್ತವವಾಗಿ ಶ್ರೀ ಕೃಷ್ಣನು ದೇಹವನ್ನು ಬದಲಾಯಿಸುವುದೇ ಇಲ್ಲ. ಭಗವಂತನು ಸರ್ವಶಕ್ತನು. ಅವನು ನಿತ್ಯನು. ಹಾಗೆಯೇ ಜೀವಿಗೂ ಜನನವಿಲ್ಲ. ಅವನೂ ನಿತ್ಯನು. ಜನನವೆಂಬುದು ದೇಹಕ್ಕೆ ಮಾತ್ರ. ಆ ದೇಹ ತಾನೆಂದು ಜೀವಿಯು ಅಂದುಕೊಳ್ಳುತ್ತಾನೆ. ಹಾಗೆಯೇ ಕೃಷ್ಣನು ಜನಿಸುವುದು, ಅವನು ಕಾಣಿಸಿಕೊಳ್ಳುವುದು ಮತ್ತು ಕಣ್ಮರೆಯಾಗುವುದು ಇವೆಲ್ಲವೂ ಸೂರ್ಯನು ಕಂಡು ಕಣ್ಮರೆಯಾಗುವುದಕ್ಕೆ ಹೋಲಿಸಬಹುದು ಬೆಳಗ್ಗೆ ಸೂರ್ಯನು ಪೂರ್ವದಿಗಂತದಿಂದ ಹುಟ್ಟಿ ಬಂದಂತೆ ಕಾಣಿಸುತ್ತದೆ. ಆದರೆ ವಾಸ್ತವವಾಗಿ ಅವನು ಹುಟ್ಟುವುದೂ ಇಲ್ಲ, ಮುಳುಗುವುದೂ ಇಲ್ಲ. ಅದು ಅದರ ಸ್ಥಾನದಲ್ಲಿಯೇ ಇದೆ ಅಷ್ಟೆ. ಮೂಡುವುದು ಮುಳುಗುವುದು ಎಲ್ಲವೂ ಭೂಮಿಯ ತಿರುಗುವಿಕೆಯಿಂದಾಗಿ ಅಷ್ಟೇ. ಹಾಗೆಯೇ ಶ್ರೀ ಕೃಷ್ಣನ ಆಗಮನ – ನಿರ್ಗಮನವೆಲ್ಲವೂ ದಿವ್ಯವಾದುದು ಇದನ್ನು ಕುರಿತು ವೈದಿಕ ಸಾಹಿತ್ಯದಲ್ಲಿ ನಿರ್ದಿಷ್ಟ ಕ್ರಮವೇ ಇದೆ. ಕೃಷ್ಣನು ಸದಾಕಾಲವೂ ಒಂದಿಲ್ಲೊಂದು ಕಡೆ ಇದ್ದಾನೆ. ಅವನು ಬರುವಂತೆ ಹೋಗುವಂತೆ ತೋರುತ್ತದೆ ಅಷ್ಟೆ.

ವೈದಿಕ ಶಿಷ್ಟತೆ ಪ್ರಕಾರ ಬ್ರಾಹ್ಮಣವರ್ಗದಲ್ಲಿ ಒಂದು ಶಿಶುವಿನ ಜನನವಾದ ಒಡನೇ `ಜನ್ಮದಿನ’ ಅಥವಾ `ಜಾತಕರ್ಮ’ವನ್ನು ಆಚರಿಸುವ ಪದ್ಧತಿ ಇದೆ. ಆದರೆ ಈ ವಟುವಿನ ರೂಪದಲ್ಲಿ ಜನಿಸಿದ ವಾಮನದೇವನ `ಉಪನಯನ’ ಶಾಸ್ತ್ರವನ್ನೂ ಕೂಡ ಹುಟ್ಟಿದ ಒಡನೇ ಅವನ ತಂದೆ – ತಾಯಿಯಂದಿರು ಮುನಿಶ್ರೇಷ್ಠರ ಸಹಕಾರದಿಂದ ಆಚರಿಸಿದರು. ಈ ಬಾಲ್ಯವಟುವಿನ ಬ್ರಹ್ಮೋಪದೇಶದ ಸಂಭ್ರಮದ ದೃಶ್ಯ ಬಹಳ ದಿವ್ಯವಾಗಿತ್ತು. ಭೂಮಂಡಲದ ಎಲ್ಲಾ ದೇವತೆಗಳೂ ಋಷಿಗಳೂ ಉಪನಯನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಸೂರ್ಯದೇವನು ಪ್ರತ್ಯಕ್ಷನಾಗಿ ಗಾಯತ್ರಿ ಮಂತ್ರವನ್ನು ಉಚ್ಚರಿಸಿದನು. ಬೃಹಸ್ಪತಿಯು ಜನಿವಾರವನ್ನು ಮತ್ತು ತಂದೆ ಕಶ್ಯಪಮುನಿಯು ಮುಂಜಿಹುಲ್ಲನ್ನು ವಟುವಿಗೆ ಧರಿಸಿದರು. ಭೂ ದೇವಿಯು ಛತ್ರಿಯನ್ನು, ಚಂದ್ರಲೋಕದ ದೇವತೆಗಳು ಬ್ರಹ್ಮದಂಡವನ್ನು ತಾಯಿಯಾದ ಅದಿತಿಯು ವಟುವಿಗೆ ಅಂಗವಸ್ತ್ರವನ್ನು ಕೊಟ್ಟು ಸತ್ಕರಿಸಿದರು. ಶ್ರೀ ಬ್ರಹ್ಮನು ಕಮಂಡಲವನ್ನು ಮಾತೆ ಸರಸ್ವತಿಯು ರುದ್ರಾಕ್ಷಿಮಾಲೆಯನ್ನೂ, ಕುಬೇರನು ಭಿಕ್ಷಾಪಾತ್ರೆಯನ್ನು ಕೊಟ್ಟು ಆಶೀರ್ವದಿಸಿದರು. ಶಿವನ ಅರ್ಧಾಂಗಿನಿಯೂ ಹಾಗೂ ಪತಿವ್ರತೆಯೂ ಆದ ಭಗವತಿಯು ವಟುವಿಗೆ ಆದ್ಯವಾಗಿ ಭಿಕ್ಷೆಯನ್ನು ನೀಡಿದಳು. ಈ ರೀತಿ ಎಲ್ಲಾ ದೇವತೆಗಳಿಂದ ಸ್ತುತಿಸಲ್ಪಟ್ಟು ಶ್ರೀ ವಾಸುದೇವನು ಯಜ್ಞಕುಂಡದಲ್ಲಿ ಯಾಗವನ್ನು ಆಚರಿಸಿ, ತನ್ನ ಬ್ರಾಹ್ಮಣತ್ವದ ಪ್ರಭೆಯನ್ನು ಪ್ರಕಟಿಸಿದನು. ಬ್ರಹ್ಮವರ್ಚಸ್ಸು ಆ ಬಾಲಕನಲ್ಲಿ ಉಕ್ಕಿ ಬರುತ್ತಿತ್ತು.
ಒಂದು ದಿನ ಭೃಗುವಂಶದ ಬ್ರಾಹ್ಮಣರ ಆಶ್ರಯದಲ್ಲಿ ನರ್ಮದಾ ನದಿಯ ಉತ್ತರ ತಟದಲ್ಲಿ, ಭೃಗುಕುಲ ಕ್ಷೇತ್ರದಲ್ಲಿ, ರಾಜನ ಪುರೋಹಿತ ಪಂಡಿತ ಶುಕ್ರಾಚಾರ್ಯರ ಅನುಗ್ರಹದಿಂದ ಬಲಿಮಹಾರಾಜ ಅಶ್ವಮೇಧಯಾಗವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾನೆ. ಈ ವಿಷಯ ತಿಳಿದ ದೇವೋತ್ತಮ ಪುರುಷನೂ, ಹಾಗೂ ಜಗತ್ತಿನ ಒಡೆಯನೂ ಆದ ವಾಮನದೇವನು, ಆ ಕ್ಷೇತ್ರಕ್ಕೆ ಆಗಮಿಸಿದನು. ಪ್ರತಿಭಾಶಾಲಿಯಾದ ವಾಮನ ದೇವನ ಪ್ರವೇಶವು, ಸಾಕ್ಷಾತ್ ಸನತ್‌ಕುಮಾರನು ಆಗಮಿಸಿದನೆಂದು ತಿಳಿದು, ಅಲ್ಲಿ ಸಭೆಯಲ್ಲಿ ನೆರೆದ ಋಷಿ ಮುನಿಗಳೂ, ಅರ್ಚಕರೆಲ್ಲರೂ ಚಕಿತರಾದರು. ಆ ದೇವೋತ್ತಮ ಪುರುಷನು ಬಲಿ ಚಕ್ರವರ್ತಿಯ ಬಳಿ ಭಿಕ್ಷೆ ಬೇಡಲು ಹೋದರೂ ಸಹ, ಆತನು ಅಖಿಲ ಸಾರಾ ಸಂಮೃದ್ಧನು, ಅಂದರೆ ಸರ್ವ ಸಂಪತ್ತುಳ್ಳ ಜಗತ್ತಿನ ಒಡೆಯನು ಆದುದರಿಂದ, ಅವನಲ್ಲಿ ಯಾವ ದುರ್ಭಿಕ್ಷೆಯೂ ಇರಲಿಲ್ಲ. ಆ ಬಾಲಕನು ಧರತಿಯನ್ನು ಖಂಡಿಸುತ್ತಾ ಮುಂದುವರಿದನು. ಬಲಿ ಮಹಾರಾಜನು ದಿಗ್ಭ್ರಮೆಯಿಂದ ಈ ಸುಂದರನಾದ ಬ್ರಾಹ್ಮಣಪುತ್ರನನ್ನು ಸ್ವಾಗತಿಸಿ, ಸಿಂಹಾಸನದಲ್ಲಿ ಕುಳ್ಳಿರಿಸಿದನು. ತದನಂತರ ಬಲಿರಾಜನ ರಮಣಿಯಾದ ಮಿಥ್ಯಾವಳಿಯು ಸರ್ವ ಭೂಷಣಗಳಿಂದ ಅಲಂಕೃತಳಾಗಿ, ಸ್ವರ್ಣ ಕಲಶದಿಂದ ಜಲವನ್ನು ಸುರಿಸುತ್ತಾ, ರಾಜನು ವಾಮನನ ಪಾದಾರವಿಂದವನ್ನು ತೊಳೆದು ಆ ಪವಿತ್ರ ತೀರ್ಥವನ್ನು ಶಿರಸ್ಸಿನಲ್ಲಿ ಪ್ರೋಕ್ಷಣೆ ಮಾಡಿದನು.
ಕ್ರಮೇಣ ಬಲಿಚಕ್ರವರ್ತಿಯು ವಾಮನನಲ್ಲಿ ವಿನಂತಿಸಿ “ಹೇ ಬ್ರಾಹ್ಮಣಪುತ್ರನೇ ನಿನಗೆ ನಮ್ಮೆಲ್ಲರ ಪರವಾಗಿ ಆದರದ ಸ್ವಾಗತ. ಈ ನಿನ್ನ ಪಾದಸ್ಪರ್ಶದಿಂದ ನಮ್ಮ ವಂಶದವರಿಗೂ, ಪೂರ್ವಜರಿಗೂ ಮತ್ತು ಪಿತೃಗಳಿಗೂ, ಎಲ್ಲರಿಗೂ ಸಂತೃಪ್ತಿಯಾಗಿದೆ. ನಿನ್ನ ಪಾದಗಳನ್ನು ತೊಳೆದ ಜಲದಿಂದ, ನನ್ನ ಈ ಜೀವನದಲ್ಲಿ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ನಾನು ಪವಿತ್ರನಾದೆನು. ಈ ಭೂಮಿಯೂ ಪವಿತ್ರವಾಯಿತು. ಈ ನಮ್ಮ ಯಾಗವೂ ಕೂಡ ಸಾರ್ಥಕವಾಯಿತು. ಬ್ರಾಹ್ಮಣ ಪುತ್ರನೇ! ನೀನು ಇಲ್ಲಿ ಭಿಕ್ಷೆ ಬೇಡಲು ಆಗಮಿಸಿದಂತಿದೆ. ನಿನ್ನನ್ನು ಪೂಜಿಸಲು ಅರ್ಹತೆ ಉಳ್ಳವನು ನಾನೆಂದು ಭಾವಿಸು. ನನ್ನಿಂದ ಏನು ಸೇವೆಯಾಗಬೇಕೋ ಹೇಳು? ನಿನಗೆ ಹಸುಗಳು, ಅರಮನೆ, ಆನೆ, ಕುದುರೆಗಳೂ, ರಥಕ್ಷೇತ್ರ, ಅಥವಾ ಆಭರಣಗಳು ಬೇಕೆ? ಸ್ವಾದಿಷ್ಟ ಭೋಜನಬೇಕೆ? ಇಲ್ಲವೇ ನಿನಗೆ ಮಡದಿಯಾಗಿ ಅರ್ಹಳಾಗುವಂತಹ ಬ್ರಾಹ್ಮಣನ ಕನ್ಯಾಮಣಿಯು ಬೇಕೆ? ನೀನು ಏನನ್ನು ಇಚ್ಛೆ ಪಡುತ್ತಿಯೋ ಅದನ್ನು ಕೇಳು! ನಾನು ದಾನಮಾಡಲು ಸಿದ್ಧನಾಗಿದ್ದೇನೆ ” ಎಂದು ಬಲಿ ಚಕ್ರವರ್ತಿಯು ಆ ವಟುವಿನಲ್ಲಿ ಬಹಳ ನಮ್ರತೆಯಿಂದ ಹೇಳಿದನು.
ಈ ಇಂಪಾದ ಮಾತುಗಳನ್ನು ಕೇಳಿ ವಾಮನದೇವನ ಮನಸ್ಸು ಕರಗಿತು. ಒಳ್ಳೆ ವಂಶದಲ್ಲಿ ಜನಿಸಿದ, ಹಾಗೂ ಧಾರ್ಮಿಕ ತತ್ತ್ವಗಳನ್ನು ಅರಿತಿರುವ ಬಲಿ ಚಕ್ರವರ್ತಿಯ ನುಡಿಗಳನ್ನೆಲ್ಲಾ ಕೇಳಿ ಮರುಳಾದ ವಾಮನ ದೇವನು ಪ್ರಶಂಸಿಸುತ್ತಾ, “ಹೇ ಮಹಾರಾಜ! ನೀನು ರಾಜನೀತಿ ನಿಪುಣನು. ನೀನು ನುಡಿದ ನ್ಯಾಸಗಳೆಲ್ಲವೂ ಬಹಳ ಸಹಜವಾಗಿದ್ದು ಧಾರ್ಮಿಕ ಸಭ್ಯಾಚಾರಕ್ಕೆ ಹೊಂದಿಕೆಯಾಗಿದೆ. ವಾಸ್ತವವಾಗಿ ನೀನು ಈ ಉನ್ನತ ಸ್ಥಾನಕ್ಕೇರಲು ಕಾರಣವೇ, ನಿನಗೆ ಉಚಿತ ಸಲಹೆ ನೀಡುವ ಭೃಗುವಂಶಜರಾದ ಬ್ರಾಹ್ಮಣ ವರ್ಗದವರೂ ಹಾಗೂ ನಿನ್ನ ಮುಂದಿನ ಜೀವನದ ಮಾರ್ಗಕ್ಕೆ ಉಪದೇಶ ನೀಡುವ ಪೂಜ್ಯ ತೀರ್ಥರೂಪ ತಾತನಾದ ಪ್ರಹ್ಲಾದ ಮಹಾರಾಜನು. ಅವರೇ ನಿನ್ನ ಯಶಸ್ಸನ್ನು ವರ್ಧಿಸುವವರು,” ಎಂದು ಹೇಳಿ ಹೊಗಳಿದನು. ಪ್ರಹ್ಲಾದ ಮಹಾರಾಜನು ಒಬ್ಬ ಪ್ರಾಮಾಣಿಕ ಭಕ್ತನ ಒಂದು ಪ್ರತಿರೂಪ. ಅವನು ವೃದ್ಧನಾದರೂ ಸಹ ಬಹಳ ಪ್ರಶಾಂತನಾಗಿ ಶಾಂತ ಚಿತ್ತವನಾಗಿದ್ದನು. ಒಬ್ಬ ದಾಸನು ಎಂದಿಗೂ ಪ್ರಶಾಂತನಾಗಿರುತ್ತಾನೆ. ಅವನಿಗೆ ಯಾವ ರೀತಿಯ ಪರಿಸ್ಥಿತಿಯೂ ಭಂಗ ಮಾಡುವುದಿಲ್ಲ. ಒಬ್ಬ ಪ್ರಾಮಾಣಿಕ ಭಕ್ತನು ಗೃಹಸ್ಥ ಜೀವನದಲ್ಲೂ ಅಲೌಕಿಕ ವಸ್ತುಗಳನ್ನೇ ಬಯಸುತ್ತಾನೆ.
ಕಿಬಾ ವಿಪ್ರ, ಕಿಬಾ ನ್ಯಾನೇ ಶೂದ್ರ ಕೇನೇ ನಯ ।
ಯೇಯಿ ಕೃಷ್ಣ ತತ್ವವೇತ್ತಾ ಸೇಯಿ `ಗುರು’ ಹಯ ।।
ಈ ಮೇಲ್ಕಂಡ ನುಡಿಗಳನ್ನು ಶ್ರೀ ಚೈತನ್ಯ ಮಹಾಪ್ರಭುಗಳು ವ್ಯಾಖ್ಯಾನಿಸಿದಂತೆ, ಒಬ್ಬ ಮನುಷ್ಯನು ಬ್ರಾಹ್ಮಣನಾಗಲಿ, ಸಂನ್ಯಾಸಿಯಾಗಲಿ, ಶೂದ್ರನಾಗಲಿ ಅಥವಾ ಗೃಹಸ್ಥನಾಗಲಿ ಅದು ಮುಖ್ಯವಲ್ಲ. ಅವನ ಮೂಲವು ಅಥವಾ ಜೀವನದ ನೆಲೆಯೂ, ಸ್ಥಾನಮಾನಗಳ ವಿವಕ್ಷೆಯಿಲ್ಲದೇ, ಕೃಷ್ಣಪ್ರಜ್ಞೆಯನ್ನು ಬೋಧಿಸಿದರೆ, ಅವನನ್ನು ಅಧಿಕೃತ ಗುರುವೆಂದು ಪರಿಗಣಿಸಬಹುದು. ಅಂತೆಯೇ ಪ್ರಹ್ಲಾದ ಮಹಾರಾಜನಲ್ಲಿ ಸಹಜವಾಗಿ ಎಲ್ಲಾ ವಿಧದಲ್ಲೂ ಗುರುವಿನ ವೈಶಿಷ್ಟ್ಯ ಇತ್ತು. ಪ್ರಹ್ಲಾದನು ಗುಣದಿಂದಲೂ, ಹುಟ್ಟಿನಿಂದಲೂ ಹಿರಿಯ ಶೀಲ ಸಂಪನ್ನ, ಸತ್ಯಸಂಧ, ಜಿತೇಂದ್ರಿಯ, ಶುಭ ಕೀರ್ತಿವಂತ ಹರಿಭಕ್ತನಾಗಿದ್ದನು.
ದಾನಧರ್ಮಿಯಾದ ಬಲಿ ಚಕ್ರವರ್ತಿಯ ಸತ್ಕಾರಗಳಿಗೆ ಸಂಪನ್ನನಾದ ವಾಮನದೇವನು, ಮಹಾರಾಜನಲ್ಲಿ ಭಿಕ್ಷೆಯಾಗಿ ಮೂರು ಪಾದಗಳಷ್ಟು ಭೂಮಿಯನ್ನು ಕೇಳುತ್ತಾನೆ “ಹೇ ಮಹಾರಾಜ! ನಿನ್ನ ಕ್ಷತ್ರಿಯ ವಂಶದಲ್ಲಿ ಇದುವರೆಗೆ ಜನ್ಮ ಪಡೆದವರು ಯಾರೂ ಅಲ್ಪ ಮನಸ್ಸಿನವರೂ ಅಥವಾ ಜಿಪುಣರೂ ಇಲ್ಲ. ಕ್ಷತ್ರಿಯರು ಬ್ರಾಹ್ಮಣಪ್ರಿಯರೂ ಹಾಗೂ ವಚನ ಪಾಲಕರು. ಇದು ಕ್ಷತ್ರಿಯರ ಲಕ್ಷಣ. ಒಬ್ಬ ಬ್ರಾಹ್ಮಣನ ಬೇಡಿಕೆಯನ್ನು ಕ್ಷತ್ರಿಯನು ಎಂದೂ ನಿರಾಕರಿಸುವುದಿಲ್ಲ . ಹಾಗೆಯೇ ಒಬ್ಬ ಕ್ಷತ್ರಿಯ ಇನ್ನೊಬ್ಬ ಕ್ಷತ್ರಿಯನ ಎದುರು ಯುದ್ಧರಂಗದಲ್ಲಿ ಹೋರಾಡಲೂ ಹಿಂಜರಿಯುವುದಿಲ್ಲ. ಜಗತ್ತಿನ ಮೇಲ್ವಿಚಾರಕನಾದ ನಿನಗೆ ದಾನವಾಗಿ ಮತ್ತಷ್ಟು ನೆಲವನ್ನು ನೀಡಲು ಸಾಧ್ಯತೆ ಇದೆ. ಆದರೆ ಧೃತರ ಒಡೆಯನೇ! ನನಗೆ ಅತ್ಯಗತ್ಯ ಇರುವ ವಸ್ತುವನ್ನೇ ನಾನು ಕೇಳುತ್ತಿದ್ದೇನೆ. ಒಬ್ಬ ಪಾಂಡಿತ್ಯವುಳ್ಳ ಬ್ರಾಹ್ಮಣನು ಅವನ ಆವಶ್ಯಕತೆಗಿಂತಲೂ ಮೀರಿದ ವಸ್ತುವನ್ನು ದಾನವಾಗಿ ಇಚ್ಛಿಸಿದಲ್ಲಿ ಅವನು ಪಾಪದ ಬಲೆಯಲ್ಲಿ ಸಿಕ್ಕಿ ಬೀಳುತ್ತಾನೆ. ಆದ್ದರಿಂದ ನಾನು ಬೇಡಿರುವುದು ಕೇವಲ ಮೂರು ಹೆಜ್ಜೆಯಷ್ಟು ನೆಲ” ಎಂದು ಬೇಡುತ್ತಾನೆ.
ಇದು ಭಿಕ್ಷೆ ಬಹಳ ಕ್ಷುದ್ರ ವಸ್ತುವೆಂದೂ ಮತ್ತು ಈ ಕಾರ್ಯ ಬಹಳ ಸರಳವಾದುದೆಂದು ತಿಳಿದು ಮಹಾರಾಜನು ತನ್ನ ವಚನವನ್ನು ಪಾಲಿಸುತ್ತಾ, ವಾಮನದೇವನಿಗೆ ಮೂರು ಪಾದದಷ್ಟು ನೆಲವನ್ನು ಭಿಕ್ಷೆಯಾಗಿ ನೀಡಲು ಸಮ್ಮತಿ ಕೊಡುತ್ತಾನೆ. ಆದರೆ ಅಲ್ಲಿ ಯಜ್ಞದಲ್ಲಿ ಪೌರೋಹಿತ್ಯ ಮಾಡುತ್ತಾ ಇದ್ದ, ಬಹಳ ಪಾಂಡಿತ್ಯವನ್ನು ಪಡೆದ ಶುಕ್ರಚಾರ್ಯರು ಈ ಪ್ರಸ್ತಾವಕ್ಕೆ ಅಡ್ಡಿ ಮಾಡುತ್ತಾರೆ. ಆ ಭಿಕ್ಷೆಗಾಗಿ ಬಂದ ಬ್ರಾಹ್ಮಣ ವಟುವು ದೇವತೆಗಳ ಮಿತ್ರನಾದ ವಿಷ್ಣುವೆಂದೂ ಹಾಗೂ ದೇವತೆಗಳ ಕಾರ್ಯ ಸಾಧನೆಗಾಗಿ ಅಲ್ಲಿ ಬಂದಿದ್ದಾನೆಂದು ಅವರಿಗೆ ಅರಿವಾಯಿತು. ಜನತೆಯನ್ನು ವಶಪಡಿಸಲು ಮತ್ತು ಜನರ ಕಲ್ಯಾಣಕ್ಕೋಸ್ಕರ, ಈ ತರಹ ವಚನ ನೀಡಿದ ಬಲಿ ಚಕ್ರವರ್ತಿಯು ವಚನವನ್ನು ಈಡೇರಿಸಬಲ್ಲನೋ ಎಂದು ಸಂಶಯದಿಂದ, ಆತನಿಗೆ ಈ ವಚನವನ್ನು ಹಿಂತೆಗೆದುಕೊಳ್ಳಲು ಶುಕ್ರಾಚಾರ್ಯರು ಸೂಚನೆಕೊಟ್ಟು ಉಪದೇಶ ನೀಡಿದರು – “ಹೇ ಮಹಾರಾಜನೇ! ಈ ಬ್ರಹ್ಮಚಾರಿಯು ಬೇರೆ ಯಾರೂ ಅಲ್ಲ, ದೇವೋತ್ತಮನಾದ ಶ್ರೀ ವಿಷ್ಣುವೇ. ಅವನು ವಾಮನ ಅವತಾರದಲ್ಲಿ ವಟುವಾಗಿ ಆಗಮಿಸಿದ್ದಾನೆ. ದೇವತೆಗಳ ಹಿತಚಿಂತನೆಗಳನ್ನು ಪಾಲಿಸಲು ಕಂಗೊಳಿಸಿದ್ದಾನೆ. ನೀಚನೆ! ನೀನು ಕೊಟ್ಟ ವಚನವು ನಿನ್ನನ್ನು ಪ್ರಾಣಸಂಕಟಕ್ಕೆ ಸೆಳೆಯುತ್ತಿದೆ. ಇದರಿಂದ ಅಸುರರಿಗೆ ಹಾನಿ ಉಂಟಾಗುತ್ತದೆ. ವಾಸ್ತವವಾಗಿ ಶ್ರೀ ಹರಿಯೇ ಬ್ರಹ್ಮಚಾರಿಯ ರೂಪ ಧರಿಸಿ, ದಾನದ ನೆಪದಿಂದ, ನಿನ್ನ ಆಸ್ತಿ, ಸಂಪತ್ತು, ಶಕ್ತಿ, ಕೀರ್ತಿ ಮತ್ತು ವಿದ್ಯೆ (ಶಿಕ್ಷಾ) ಎಲ್ಲವನ್ನೂ ವಶಪಡಿಸಿ, ನಿನ್ನ ಶತ್ರುವಾದ ಇಂದ್ರನಿಗೆ ದೊರಕಿಸುತ್ತಾನೆ. ನೀನು ಕೇವಲ ಮೂರು ಹೆಜ್ಜೆಯಷ್ಟು ನೆಲ ದಾನಮಾಡಲು ಒಪ್ಪಿಗೆ ನೀಡಿದ್ದೀಯಾ. ಆದರೆ ಭದ್ರತೆ! ನೀನು ಭಿಕ್ಷೆ ನೀಡಲು ತೊಡಗಿದಾಗ ಈ ಶ್ರೀ ಹರಿಯು ಮೊದಲನೇ ಹೆಜ್ಜೆಯಲ್ಲಿ ಕೆಳಲೋಕ, ಮಧ್ಯಲೋಕ, ಮೇಲು ಲೋಕ ಈ ಮೂರು ಲೋಕವನ್ನೇ ಸ್ವಾಧೀನಪಡಿಸುತ್ತಾನೆ. ಮತ್ತೆ ಎರಡನೇ ಪಾದದಲ್ಲಿ ಅವನು ಸರ್ವ ಭೂಲೋಕವನ್ನೇ ವಶಪಡಿಸಿದ ಮೇಲೆ ಮೂರನೇ ಹೆಜ್ಜೆಯನ್ನಿಡಲು ನೀನು ಯಾವ ನೆಲವನ್ನು ತೋರಿಸುವೆ? ನಿನ್ನ ಹೊಟ್ಟೆಪಾಡೇನು? ನೀನು ಜೀವಿಸಿ ಇರುವುದೆಲ್ಲಿ? ಈ ಅಸಾಮರ್ಥ್ಯದಿಂದಾಗಿ ನಿನ್ನ ಭವಿಷ್ಯ ನರಕಕ್ಕೆ ಸೇರಿದಂತಾಗುತ್ತದೆ.”
ಇಲ್ಲಿ `ಹರಿ’ ಎಂಬ ಶಬ್ದದ ಅರ್ಥವೇನೆಂದರೆ ಎಲ್ಲವನ್ನೂ ಕದ್ದೊಯ್ಯುವುದು. ಶ್ರೀ ಹರಿಗೆ ಸಂಬಂಧಿಸಿದಂತೆ ದೇವೋತ್ತಮ ಪುರುಷನು ಮೊದಲಿಗೆ ದಾಸನಾಗಿ ವಿಪತ್ತಿಯನ್ನು ತೆಗೆದುಕೊಂಡು, ಕ್ರಮೇಣ ಪರೋಕ್ಷವಾಗಿ ಬಂದು, ಎಲ್ಲಾ ಲೌಕಿಕ ಸಾಧನೆಗಳನ್ನೂ, ಕೀರ್ತಿ ವಿದ್ಯೆ, ಸಂಪತ್ತು, ಆನಂದ, ಸಮೃದ್ಧಿ ಎಲ್ಲವನ್ನೂ ಗ್ರಹಣ ಮಾಡುತ್ತಾನೆ.
ಭಗವದ್ಗೀತೆಯಲ್ಲಿ ಸೃಷ್ಟಿಸಿದಂತೆ, ಒಬ್ಬ ಪ್ರಾಮಾಣಿಕ ಭಕ್ತನು ಕೃಷ್ಣ ಪ್ರಜ್ಞೆಯನ್ನು ಬಯಸಲು ಸಕಲ ಕೆಲಸಗಳನ್ನು ಮಾಡಿದರೂ ಸಹ, ಈ ಭೌತ ಪ್ರಪಂಚವನ್ನು ಸವಿಯುವ ಆಸೆ ಇದ್ದವನಾದರೆ, ಈ ಕಾಮದ ಇಚ್ಛೆಗಳಿಂದ ಮುಕ್ತನಾಗುವುದೂ ಇಲ್ಲ, ಮತ್ತು ಪರಮಾತ್ಮನು ಅವನ ಚಾತುರ್ಯತೆಯಿಂದ ಎಲ್ಲವನ್ನೂ ತನ್ನ ಸ್ವಾಧೀನಪಡಿಸುತ್ತಾನೆ.
ಶ್ರೀ ಹರಿಯು ವರಾಹ ರೂಪದಿಂದ, ಬಲಿ ಚಕ್ರವರ್ತಿಯ ಮುತ್ತಾತನ ತಮ್ಮನಾದ ಹಿರಣ್ಯಾಕ್ಷನನ್ನು ಸಂಹರಿಸಿದನೆಂದು ಪುರಾಣಗಳಲ್ಲಿ ಜ್ಞಾನಿಗಳು ವರ್ಣಿಸಿದ್ದಾರೆ. ಕ್ಷತ್ರಿಯ ರಾಜವಂಶದಲ್ಲಿ ಜನಿಸಿದ, ದಿತಿ – ಕಶ್ಯಪರ ದೈತ್ಯ ಪುತ್ರನಾದ ಹಿರಣ್ಯಾಕ್ಷನು ಒಬ್ಬ ಮಹಾ ಅಹಂಕಾರಿಯೂ, ಮಹಾ ವೀರನಾಗಿದ್ದನು. ಅವನಿಗೆ ವಿಷ್ಣುವಿನ ಸಂಗಡ ಯುದ್ಧ ಮಾಡಬೇಕೆಂದು ಬಯಕೆಯಾಯಿತು. ಅವನು ಮೊದಲಿಗೆ ಸ್ವರ್ಗಲೋಕಕ್ಕೆ ಹಾರಿದನು. ಒಂಟಿಯಾಗಿ ಕೈಯಲ್ಲಿ ಗದೆ ಹಿಡಿದು ತನ್ನ ನೂಪುರಗಳಿಂದ ಗಿಲ್‌ಗಿಲ್ ಸಪ್ಪಳ ಮಾಡುತ್ತಾ ದೇವತೆಗಳನ್ನು ಕೆಣಕಿದನು. ಆದರೆ ಎಲ್ಲ ದೇವತೆಗಳು ಅಡಗಿ ಕುಳಿತರು. ದೇವತೆಗಳ ಪಕ್ಷಪಾತಿಯಾದ ವಿರಾಟ ರೂಪ ವಿಷ್ಣುವು ಆ ಸಮಯದಲ್ಲಿ ರಸಾತಲ ಲೋಕದಲ್ಲಿ ಇದ್ದಾನೆಂಬ ಸಂಗತಿ ತಿಳಿದು, ಹಿರಣ್ಯಾಕ್ಷನು ಅವನ ಸಂಗಡ ಯುದ್ಧಮಾಡಬೇಕೆಂಬ ಹಂಬಲದಿಂದ ಅವನನ್ನು ಆಕ್ರಮಿಸಿದನು. ಭೂಮಿಯು ಪ್ರಳಯ ಜಲದಲ್ಲಿ ಮುಳುಗಿದುದರಿಂದ, ಭೂವಲಯವನ್ನು ಗರ್ಭೋದಕ ಮಹಾಸಾಗರದಿಂದ ವಿಮೋಚಿಸಲು, ಶ್ರೀ ವಿಷ್ಣುವು ವರಾಹಾವತಾರವನ್ನು ರೂಪಿಸಿದನು. ರಸಾತಲದಿಂದ ತನ್ನ ಕೋರೆ ಹಲ್ಲಿನ ಕೊನೆಯಲ್ಲಿ ಭೂಮಿಯನ್ನು ಇಟ್ಟುಕೊಂಡು ಸಾಗರದ ಮೇಲ್ಭಾಗಕ್ಕೆ ತಂದನು. ಆಗ ಹಿರಣ್ಯಾಕ್ಷನು ಗದೆಯನ್ನು ಹಿಡಿದುಕೊಂಡು ಎದುರಿಗೆ ಬಂದನು. ಕೋಪಾಟೋಪದಿಂದ ಆದಿ ಸೂಕರನು ಮಹಾಪರಾಕ್ರಮವನ್ನು ತೋರಿಸುತ್ತ, ತನ್ನ ಕೋರೆಯಿಂದ ಹೊಡೆದು, ಆ ದೈತ್ಯ ವಂಶಜನಾದ ವೀರ ಹಿರಣ್ಯಾಕ್ಷನನ್ನು ಸಂಹರಿಸಿದನು. ಈ ರೀತಿ ವರಹಾವತಾರದಲ್ಲಿ ಅತಿ ಪರಾಕ್ರಮಿಯಾದ ಹಿರಣ್ಯಾಕ್ಷನನ್ನು ವಧಿಸಿ, ಈ ಭೂಮಿಯನ್ನು ರಸಾತಲದಿಂದ ಉದ್ಧರಿಸಿದ ಆ ಸೂಕರನನ್ನು ಬ್ರಹ್ಮಾದಿ ದೇವತೆಗಳು ಸ್ತುತಿಸಿದರು. ತನ್ನ ಅನುಜ ಹಿರಣ್ಯಾಕ್ಷನ ಮೃತ್ಯುವಿನ ವರ್ತಮಾನವನ್ನು ತಿಳಿದ ನಾಸ್ತಿಕನಾದ ಹಿರಣ್ಯಕಶಿಪು ಸೇಡು ತೀರಿಸಲು ಮಹಾಯೋಗಿಕ ಶಕ್ತಿವುಳ್ಳ ಶ್ರೀ ವಿಷ್ಣುವನ್ನು ವಧಿಸಲು, ಕೈಯಲ್ಲಿ ತ್ರಿಶೂಲವನ್ನು ಹೋರುತ್ತಾ, ಕೋಪತಾಪದಿಂದ, ಶ್ರೀ ವಿಷ್ಣುವಿನ ವಾಸಸ್ಥಳಕ್ಕೆ ಆಗಮಿಸಿದನು. ಶ್ರೀ ಹರಿಯ ಬರಿದಾದ ಬೀಡನ್ನು ಕಂಡು ಎಲ್ಲೆಲ್ಲೂ ಗುಹೆಗಳಲ್ಲಿ, ಮಹಾಸಾಗರಗಳಲ್ಲಿ ಶ್ರೀ ವಿಷ್ಣುವನ್ನು ಹುಡುಕುತ್ತಾ, ಜೋರಾಗಿ ಆರ್ಭಟಿಸುತ್ತಾ ಅಲೆದಾಡಿದನು. ಹಿರಣ್ಯಕಶಿಪುನಲ್ಲಿ ಬರೇ ಬಾಡಿದ ವಸ್ತುಗಳನ್ನು ಅರಿತುಕೊಳ್ಳುವ ಶಕ್ತಿ ಇದೆಯೇ ಹೊರತು, ಬಹಳ ಗಾಢವಾಗಿ ಯಾವುದನ್ನೂ ತಿಳಿಯುವ ಶಕ್ತಿ ಇರಲಿಲ್ಲ. ಅವನು ಈ ತರಹ ಅತ್ತಿತ್ತ ಅಲೆದಾಡುವುದನ್ನು ತಿಳಿದು, ಶ್ರೀ ವಿಷ್ಣುವು ಒಂದು ಉಪಾಯವನ್ನು ಕಾಣಿಸುತ್ತಾನೆ. ಅವನು ವೈರಿ ಹಿರಣ್ಯಕಶಿಪುವಿನ ಮೂಗು ಸೊಳ್ಳೆಯ ಶ್ವಾಸದ ಮೂಲಕ, ಅವನ ಹೃದಯದ ಮಧ್ಯ ಭಾಗವನ್ನು ಪ್ರವೇಶಿಸಿದನು.
ವಾಸ್ತವವಾಗಿ ದೇವೋತ್ತಮ ಪುರುಷನು ಸರ್ವಭೂತಗಳ ಹೃದಯದಲ್ಲಿ ವಾಸವಾಗಿರುತ್ತಾನೆ. ಇದು ಅವನಿಗೆ ಶ್ರಮದ ಕಾರ್ಯವಲ್ಲ. ಶ್ರೀ ವಿಷ್ಣುವು ಕಾಣದೇ ಆದಾಗ, ಹಿರಣ್ಯಕಶಿಪು ನಿಷ್ಕರ್ಷೆಯಾಗಿ ಇತ್ಯರ್ಥಪಡಿಸುತ್ತಾ, “ನನ್ನ ಅನುಜನನ್ನು
ವಧಿಸಿದ ವಿಷ್ಣುವನ್ನು ನಾನು ಜಗತ್ತಿನ ಎಲ್ಲೆಡೆಯಲ್ಲೂ ಹುಡುಕಾಡಿದೆನು. ಅವನು ಎಲ್ಲೂ ಕಾಣಿಸಲಿಲ್ಲ. ಆದುದರಿಂದ ಅವನು ಖಂಡಿತವಾಗಿ ಮೃತಪಟ್ಟಿದ್ದಾನೆ,” ಎಂದು ಭಾವಿಸಿದನು. ಮೃತ್ಯುವಿಂದ ಎಲ್ಲವೂ ಸಮಾಪ್ತಿಯಾದಂತೆ ಎಂದು ಹಿರಣ್ಯಕಶಿಪು ನಿರ್ಣಯಕ್ಕೀಡಾಗುತ್ತಾನೆ. ಆದರೆ ಭಗವದ್ಗೀತೆಯ ನುಡಿಗಳ ಪ್ರಕಾರ ಭಗವಂತನಿಗೆ ಮೃತ್ಯು ಇಲ್ಲ. ಚೇತನಾತ್ಮಕಗಳಾಗಿ ಮಾನವರೆಲ್ಲರೂ ಪರಮಾತ್ಮನ ವಿಭಿನ್ನಾಂಶಗಳು. ಜೀವಾತ್ಮಕ್ಕೆ, ಜನನವೂ ಮರಣವೂ ಇಲ್ಲ. ಎಲ್ಲವೂ ಒಂದು ಅಕ್ಷಯಪಾತ್ರೆ ಇದ್ದಂತೆ. ಅಂದರೆ ವಿಷ್ಣುವು ಮೃತಪಟ್ಟಿದ್ದಾನೆ ಎಂದು ಹಿರಣ್ಯಕಶಿಪು ನಿರ್ಧಾರಕ್ಕೆ ಬಂದದ್ದು ಒಂದು ತಪ್ಪು. ಒಬ್ಬ ವ್ಯಕ್ತಿಯು ಕೆಳಲೋಕದಲ್ಲಿರಬಹುದು, ಮಧ್ಯಲೋಕದಲ್ಲಿರಬಹುದು ಅಥವಾ ಮೇಲು ಲೋಕದಲ್ಲಿ ಅಥವಾ ಬಾಹ್ಯಾಕಾಶದಲ್ಲಿ ಕೂಡ ಇರಬಹುದು – ಎಲ್ಲ ಸಂಪನ್ಮೂಲಗಳೂ ವ್ಯಕ್ತವಾಗಿರುವುದು ಪರಮ ಪ್ರಭುವಿನಿಂದ. ಈ ಜಗತ್ತಿನಲ್ಲಿರುವ ಸಮಸ್ತವನ್ನೂ ಭಗವಂತನು ಸೃಷ್ಟಿಸಿದ್ದಾನೆ. ಭಗವದ್ಗೀತೆಯಲ್ಲಿ ನಮೂದಿಸಿದಂತೆ, ಪರವ್ಯೋಮಕ್ಕೆ ತಲಪಿದ ಎಲ್ಲ ಚೇತನಾತ್ಮಕ ಅಸ್ತಿತ್ವಗಳೆಲ್ಲವೂ ಮತ್ತೆ ತಿರುಗಿ ಐಹಿಕ ಜೀವನಕ್ಕೆ ಮರಳಿ ಬರುವುದಿಲ್ಲ. ಆದರೆ ಲೌಕಿಕವಾಗಿ ಒಬ್ಬ ವ್ಯಕ್ತಿಯು ಒಂದಲ್ಲ ಒಂದು ದಿನ ನಿಧನನಾಗಲೇ ಬೇಕು, ಮೃತ್ಯುವಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ – ಕೊನೆಗೆ ಪ್ರಾಣಿಗಳಿಗೂ ಸೇರಿದುದು. ಆದರೆ ಪೂರ್ತಿಯಾಗಿ ಕೃಷ್ಣ ಪ್ರಜ್ಞೆಯಿರುವ ಭಕ್ತನು ಮಾತ್ರ ಕೃಷ್ಣನ ಅಧಿಕೃತ ಪ್ರತಿನಿಧಿಯಾಗಿ ಮರಳಿ ದೇವತ್ವಕ್ಕೆ ಸೇರುತ್ತಾನೆ. ಆದ್ದರಿಂದ ಜ್ಞಾನವನ್ನು ಅರಸುವುದು ಅತಿ ಮುಖ್ಯ. ಭಗವಂತನನ್ನು ಅರಿಯುವುದೂ ಮತ್ತು ಜ್ಞಾನದ ಮೂಲಕ ಆಧ್ಯಾತ್ಮಿಕ ಶಕ್ತಿಗಳನ್ನು ಬೆಳಸಿಕೊಳ್ಳುವುದೇ ಜ್ಞಾನದ ಪರಿಪೂರ್ಣತೆ. ಅದರಂತೆ ಶ್ರೀ ವಿಷ್ಣುವಿನ ಮೇಲಿನ ನಿರಂತರ ಕೋಪದಿಂದಲೂ, ಅಜ್ಞಾನದ ಪ್ರಭಾವದಿಂದಲೂ, ಹಾಗೂ ಅಹಂಕಾರದಿಂದಲೂ ಮೃತ್ಯುವು ಹಿರಣ್ಯಕಶಿಪುವಿನ ಬೆನ್ನು ಹಿಡಿದಿತ್ತು.
ಪುರಾಣಗಳಲ್ಲಿ ತಿಳಿಸಿದಂತೆ, ವೈದಿಕ ತಿಳುವಳಿಕೆ ಪ್ರಕಾರ, ಇಡೀ ಆಕಾಶವು ಸಾಗರದಂತೆ, ಮತ್ತೆ ಪ್ರತಿಯೊಂದು ಗೃಹ ಒಂದು ದೀಪ. ಕೆಳಲೋಕ, ಮಧ್ಯಲೋಕ ಮತ್ತು ಮೇಲುಲೋಕ – ಈ ಮೂರು ಲೋಕಗಳ ಒಡೆಯನಾದ ಬಲಿಚಕ್ರವರ್ತಿಯು, ಒಂದು ದ್ವೀಪವನ್ನೇ ವಾಮನನು ಭಿಕ್ಷೆಯಾಗಿ ಬೇಡಿದ್ದರೆ ಸಂತೋಷವಾಗುತ್ತಿತ್ತೆಂದು ಊಹಿಸಿದನು. ಬ್ರಾಹ್ಮಣಕುಮಾರನ ಮಾತನ್ನು ಹಿರಿಯರು ಮೆಚ್ಚಲಾರದೆಂದೂ, ಮತ್ತು ಅವನು ಬಾಲಕನ ಸ್ವಭಾವವನ್ನು ಅನುಸರಿಸುತ್ತಿರುವುದರಿಂದ ಬಾಲಿಶನಾಗಿರುವಿ ಎಂದು ಹೇಳಿ, ಮತ್ತಷ್ಟು ಸತ್ವಭರಿತವಾದ ಭೂಮಿಯನ್ನು ಬೇಡು ಎಂದು ಹೇಳಿದನು.
ಆದರೆ ವಿಶ್ವದ ಸಕಲ ಚರಾಚರ ವಸ್ತುಗಳೆಲ್ಲವೂ ಭಗವಂತನಿಂದ ನಿಯಂತ್ರಿತವಾಗಿದೆ. ಅವನ ಒಡೆತನಕ್ಕೆ ಒಳಪಟ್ಟಿವೆ. ಆದ್ದರಿಂದ ಒಬ್ಬ ವ್ಯಕ್ತಿಯು ತನಗೆ ಎಷ್ಟು ಬೇಕೋ ಅಷ್ಟೇ ವಸ್ತುಗಳನ್ನು ಸ್ವೀಕರಿಸಬೇಕು. ಅದು ಅವನ ಪಾಲಿನದ್ದಾಗಿರುತ್ತದೆ. ಮಾನವನಿಗೆ ಎಷ್ಟಾದರೂ ಸಾಲದು. ಇನ್ನಷ್ಟು ಬೇಕೆಂಬಾಸೆ. ಎಷ್ಟು ಅಗತ್ಯವಿದೆಯೋ ಅಷ್ಟು ಮಟ್ಟಿಗೆ ಈ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಬಯಸಿದಲ್ಲಿ ಅದು ಕೇವಲ ಇಂದ್ರಿಯ ತೃಪ್ತಿಗೋಸ್ಕರವೇ ಎಂದು ಸ್ಪಷ್ಟ ಪಡಿಸುತ್ತದೆ. ಅಕ್ರಮವಾಗಿ ಅಪಾರ ಸಂಪತ್ತನ್ನು ಸಂಗ್ರಹಿಸಿದರೆ ಮಾನವನಿಗೆ ಶಿಕ್ಷೆ ದಂಡನೆ ಆಗಿಯೇ ತೀರುತ್ತದೆ.
ವೈದಿಕ ಸಂಸ್ಕೃತಿ ಪ್ರಕಾರ ಈ ಪಾಂಡಿತ್ಯವನ್ನು ಬೋಧಿಸಲು `ವರ್ಣಾಶ್ರಮ ಧರ್ಮ’ವನ್ನು ಅಂಗೀಕರಿಸಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಬ್ರಹ್ಮಚರ್ಯ, ಗೃಹಸ್ತ, ವಾನಪ್ರಸ್ತ ಹಾಗೂ ಸಂನ್ಯಾಸಿ – ಇವೆಲ್ಲ ವರ್ಗದವರಿಗೆ, ಅಧಿಕ ಮಾಹಿತಿಯನ್ನು ಕೊಟ್ಟು, ಇಂದ್ರಿಯ ತೃಪ್ತಿಗಳೊಳಗಾಗದೇ, ಉತ್ಕೃಷ್ಟ ಅಲೌಕಿಕ ಚಟುವಟಿಕೆಗಳನ್ನು ಬಳಸುತ್ತಾ, ಜೀವನದ ಪರಾಕಾಷ್ಠೆಯನ್ನು ತಲಪುವಂತೆ ಸಾಧಿಸುವುದೇ ಈ `ವರ್ಣಾಶ್ರಮದ’ ಗುರಿ.
ಬಲಿ ಚಕ್ರವರ್ತಿಯಲ್ಲಿ, ಮತ್ತಷ್ಟು ನೆಲವನ್ನು ದಾನವಾಗಿ ನೀಡಲು ಸಾಧ್ಯತೆ ಇದ್ದರೂ ಸಹ, ಈ ಆದರ್ಶ ಬ್ರಹ್ಮಚಾರಿಯಾದ ವಾಮನದೇವನು ಅವೆಲ್ಲವನ್ನೂ ನಿರಾಕರಿಸುತ್ತಾನೆ. ಮಾನವನಿಗೆ ಏನು ಅಗತ್ಯವೋ ಅದನ್ನು ಪಡೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನದಲ್ಲ. ಪ್ರತಿಯೊಂದು ಪರಮೋನ್ನತ ಪ್ರಭುವಿಗೆ ಸೇರಿದ್ದು. ಜಗತ್ತಿನಲ್ಲಿ ಯಾವುದಕ್ಕೂ ಕೊರತೆಯಾಗದ ಹಾಗೆ ಭಗವಂತನು ವ್ಯವಸ್ಥೆ ಮಾಡಿದ್ದಾನೆ. ಎಲ್ಲವನ್ನೂ ಭಗವಂತನು ಸೃಷ್ಟಿಸಿದ್ದಾನೆ. ಅದನ್ನು ಹೇಗೆ ಹಂಚಿಕೊಳ್ಳಬೇಕೆಂಬುದು ಮನುಷ್ಯನಿಗೆ ತಿಳಿದಿರಬೇಕು. ಇದೇ `ಕೃಷ್ಣ ಪ್ರಜ್ಞೆ’ ಈಗಿನ ಆಧುನಿಕ ನಾಗರಿಕತೆಯಲ್ಲಿ, ಈ ಜ್ಞಾನದ ಕೊರತೆ ಇದೆ. ಆದುದರಿಂದ ಕೃಷ್ಣ ವಿಜ್ಞಾನವನ್ನು ಬೋಧಿಸಬಲ್ಲ ಸಾವಿರಾರು ಶಿಕ್ಷಕರು ಇಂದು ಅಗತ್ಯವಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಮಾರ್ಗವನ್ನು ಉಪದೇಶ ಮಾಡಿ ಜನರು ಕೃಷ್ಣಪ್ರಜ್ಞರಾಗುವಂತೆ ಮಾಡುವುದಕ್ಕೂ, ಹಾಗೂ ಇಡೀ ಜಗತ್ತಿನ ಎಲ್ಲೆಡೆಯಲ್ಲೂ ಕೃಷ್ಣವಿಜ್ಞಾನವನ್ನು ಹರಡುವುದಕ್ಕೂ ಎಲ್ಲರೂ ನಿರತರಾಗಬೇಕು ಈ ಯುಗಕ್ಕೆ ಹೇಳಿರುವ ಪ್ರಕ್ರಿಯೆ `ಕೃಷ್ಣ ಪ್ರಜ್ಞೆ’ – ಹರೇ ಕೃಷ್ಣ ಮಂತ್ರವನ್ನು ಜಪಿಸುವುದು. `ಕೃಷ್ಣ ಪ್ರಜ್ಞೆ’ಯಲ್ಲಿ ಮಾಡಿದ ಕೆಲಸಗಳು ಶಾಶ್ವತ. ಇದಕ್ಕೆ ವಿರುದ್ಧವಾಗಿ, ಲೌಕಿಕ ಸಾಧನೆಗಳು – ಅವು ದೇಹಕ್ಕೆ ಸಂಬಂಧಪಟ್ಟವಾದುದರಿಂದ ಮರಣದೊಂದಿಗೆ ನಾಶವಾಗಿ ಬಿಡುತ್ತವೆ. ಸ್ಥಾನಮಾನಗಳಿಗೆ ಸಂಬಂಧಪಟ್ಟ ಜ್ಞಾನವು ಉಳಿಯುವುದಿಲ್ಲ. ಆದ್ದರಿಂದ ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳು ಶಾಶ್ವತವಾದದ್ದು. ಮನುಕುಲದ ಅಂಧಕಾರವನ್ನು ತೊಲಗಿಸಲು ಬಂದಂತಹ ಶ್ರೇಷ್ಠ ಹರಿಕಾರ, ಮತ್ತು ಮುಕ್ತಿಮಾರ್ಗವನ್ನು ತೋರಿದ ಮಹಾಪುರುಷ ಶ್ರೀಲ ಪ್ರಭುಪಾದರು ಜಗದ ಆಕರ್ಷಣೆಯತ್ತ ನಮ್ಮನ್ನು ಸೆಳೆಯುತ್ತಿರುವ ಪಂಚೇಂದ್ರಿಯಗಳನ್ನು ಹೇಗೆ ವಶಪಡಿಸಿಕೊಂಡು, ಅವುಗಳ ಸಹಕಾರ ಸಹಯೋಗದಿಂದ ಅನವರತ ಪರಮಾತ್ಮನನ್ನು ಪಡೆಯುವ ಮಾರ್ಗವನ್ನು ತಿಳಿಸಿ ಆತ್ಮೋನ್ನತಿಗೂ, ಮಾನವ ಜನ್ಮದ ಸಾರ್ಥಕಕ್ಕೂ ಕಾರಣೀಭೂತರಾಗಿದ್ದಾರೆ. ಭಗವಾನ್ ಚೈತನ್ಯ ಮಹಾಪ್ರಭುಗಳು `ಕೃಷ್ಣ ಪ್ರಜ್ಞೆ’ಯನ್ನು ಬೋಸುವ ಉಪದೇಶದಿಂದ ಅಮೆರಿಕದಲ್ಲೂ `ಕೃಷ್ಣ ಪ್ರಜ್ಞೆ’ಯ ಬೀಜ ಬಿತ್ತಿ ವ್ಯಾಖ್ಯಾನ ಮಾಡಿದರು. ತನ್ನ ನಿರ್ವ್ಯಾಜ ಕರುಣೆಯಿಂದಾಗಿ, ಶ್ರೀ ಕೃಷ್ಣನು ಭಗವಾನ್ ಚೈತನ್ಯ ಮಹಾಪ್ರಭುವಾಗಿ ಅವತರಿಸಿ, ಬದುಕಿನ ಪರಿಪೂರ್ಣತೆಯನ್ನೂ, ಆನಂದವನ್ನೂ ಸವಿಯುವ ವಿಧಾನವನ್ನು ಹೇಳಿಕೊಟ್ಟರು. ಆ ಮಾರ್ಗವೇ `ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ’ ಮಹಾಮಂತ್ರವನ್ನು ಜಪಿಸುವುದು. ಈ ಮಂತ್ರ ಜಪವು ಅತ್ಯಂತ ಕಾರ್ಯ ಸಾಧ್ಯವಾದದ್ದು. ಈ ಪ್ರಕ್ರಿಯೆಯನ್ನು ಯಾರು ಕೈಗೊಳ್ಳುವರೋ ಅವರು ಒಡನೆಯೇ ಪರಿಶುದ್ಧರಾಗುತ್ತಾರೆ. ಈ ಪಥವನ್ನು ನಿವಾರಿಸಿಕೊಳ್ಳಬೇಕಾದರೆ ವ್ಯಕ್ತಿಯು ಕೃಷ್ಣ ಪ್ರಜ್ಞನಾಗಬೇಕು.
ದೀರ್ಘಾಲೋಚನೆ ಮಾಡಿದನಂತರ ಬಲಿ ಚಕ್ರವರ್ತಿಯು ಒಂದು ನಿರ್ಧಾರಕ್ಕೆ ಬಂದನು. ಆತ ಶುಕ್ರಾಚಾರ್ಯರ ಉಪದೇಶವನ್ನು ನಿರ್ಲಕ್ಷಿಸಿ, ತನ್ನ ಕಮಂಡಲವನ್ನು ಕೈಯಲ್ಲಿ ಹಿಡಿದು ಶ್ರೀ ವಿಷ್ಣುವಿಗೆ ಸ್ವಾಧೀನನಾಗಿ, ಎಲ್ಲವನ್ನು ವಾಮನದೇವನ ಚರಣಕಮಲಗಳಿಗೆ ಅರ್ಪಿಸುತ್ತಾ, ಭಗವಂತನಲ್ಲಿ ಶರಣಾದನು. ಶ್ರೀ ವಿಷ್ಣುವನ್ನು ಪ್ರತ್ಯಕ್ಷವಾಗಿ ಮುಖಾಮುಖಿಯಾಗಿ ಕಂಡು, ಮಹಾರಾಜನು ಅತಿ ಪ್ರಸನ್ನನಾದನು. ಶಾಸ್ತ್ರದ ಪ್ರಕಾರ ಶಿಷ್ಯನನ್ನು ಒಳ್ಳೆಯ ಮಾರ್ಗದಲ್ಲಿ ಕರೆದೊಯ್ದು, ಕೃಷ್ಣ ಪ್ರಜ್ಞೆಯ ಜ್ಞಾನವನ್ನು ಬೋಧಿಸಿ, ಮತ್ತೆ ಕೃಷ್ಣನ ಚರಣಕಮಲಗಳ ಆಶ್ರಯವನ್ನು ಸೇರುವಂತೆ ಮಾಡುವುದು, ಒಬ್ಬ ಗುರುವಿನ ಕರ್ತವ್ಯ. ಆದರೆ ಇಲ್ಲಿ ಶುಕ್ರಚಾರ್ಯರು, ವಿಷ್ಣು ಭಕ್ತಿಯ ವಿರುದ್ಧವಾಗಿ ಬೋಧಿಸಿರುತ್ತಾರೆ.

ಹೀಗೇ ದಾನವನ್ನು ಸ್ವೀಕರಿಸುತ್ತಾ, ದೇವೋತ್ತಮ ಪುರುಷನಾದ ವಾಮನನು ತ್ರಿವಿಕ್ರಮರೂಪಿಯಾಗಿ ಬೆಳೆದು, ತನ್ನ ಎರಡೂ ಪಾದಗಳನ್ನು ವಿಸ್ತರಿಸಿ, ಮಹಾಲೋಕ, ಜ್ಞಾನಲೋಕ, ತಪೋಲೋಕ ಮತ್ತು ಸತ್ಯಲೋಕ ಎಲ್ಲವನ್ನೂ ಅತಿಕ್ರಮಿಸಿದನು. ವಾಮನನು ತ್ರಿವಿಕ್ರಮರೂಪಿಯಾಗಿ ಬೆಳೆದು, ಬ್ರಹ್ಮಾಂಡವೇ ಅವನ ದೇಹವಾಯಿತು. ಅವನ ಒಂದೊಂದು ಅವಯವದಲ್ಲಿ ಒಂದೊಂದು ಚಮತ್ಕಾರವನ್ನು ತೋರಿಸಿದನು. ಅವನ ಈ ರೂಪದಲ್ಲಿ ಭೂಮಿಯೂ, ಆಕಾಶವೂ, ಸ್ವರ್ಗವೂ, ಸಮುದ್ರಗಳೂ, ದೇವತೆಗಳೂ, ಋಷಿಗಳೂ, ಮೊದಲಾದ ಸಕಲ ಜೀವಿಗಳು, ಪಂಚಮಹಾಭೂತಗಳೂ ಕಂಡವು. ತನ್ನ ಎರಡನೇ ಪಾದಗಳಲ್ಲಿ ಎಲ್ಲವನ್ನೂ ಸ್ವಾಧೀನ ಮಾಡಿದ ಶೇಷ, ಅವನ ಮೂರನೆಯ ಪಾದವನ್ನು ಇಡಲು ಒಂದು ಬಿಂದುವಿನಷ್ಟು ಎಡೆ ಇರಲಿಲ್ಲ. ಸರ್ವೋನ್ನತ ಬ್ರಹ್ಮಲೋಕವನ್ನು ಆವರಿಸಿದ ವಿಷ್ಣುವಿನ ಎಡಗಾಲಿನ ನಗವು ಭೂಮಂಡಲದ ಹೊರ ಕವಚವನ್ನು ಛೇದಿಸಿದಾಗ ಒಳ ಭಾಗದಿಂದ ಹರಿದುಬಂದ ದೇವಗಂಗೆಯು ಶಿವನ ಜಟೆಯನ್ನು ಅಲಂಕರಿಸಿ, ತನ್ನಲ್ಲಿ ಸ್ನಾನಮಾಡುವ ಎಲ್ಲ ಜೀವಾತ್ಮಗಳ ಪಾಪವನ್ನು ಪರಿಹರಿಸುತ್ತಿರುವಳು ಮತ್ತು ಭಗವಂತನ ಧವಳ ಕೀರ್ತಿಯಂತೆ, ಬೇರೆ ಬೇರೆ ಭೂಖಂಡಗಳಲ್ಲಿ ನದಿಯಾಗಿ ಹರಿಯುತ್ತಿರುವಳು ಎಂದು ಶಾಸ್ತ್ರಗಳಲ್ಲಿ ತಿಳಿಸಿದೆ.
ಬಲಿ ಚಕ್ರವರ್ತಿಯ ಸಕಲ ಸಂಪತ್ತನ್ನು ಈ ವಾಮನನು ತ್ರಿವಿಕ್ರಮನಾಗಿ ಅಪಹರಿಸಿದಕ್ಕೆ, ಅಸುರರು ಕೋಪದಿಂದ ಉರಿದೆದ್ದರು. ವಿಷ್ಣುವಿನ ಸಹಚರರಾದ ನಂದಾ, ಸುನಂದಾ, ಜಯ ವಿಜಯ, ಪ್ರಬಲ, ಬಾಲಾ, ಕುಮುದ, ಕುಮುದಾಕ್ಷಾ, ಜಯಂತ, ಶ್ರುತದೇವ, ಸಾತ್ವತಾ ಮತ್ತು ಪಕ್ಷಿಗಳ ರಾಜ ಗರುಡ ಎಲ್ಲರೂ ಕಾಳಗದಲ್ಲಿ ಭಾಗಿಯಾಗಿದ್ದರು. ಎಲ್ಲ ಸಹಚರರ ಬಲವು ಹತ್ತು ಸಾವಿರ ಆನೆಗಳಿಗೆ ಸಮಾನವಾಗಿತ್ತು. ಈ ಹೋರಾಟದಲ್ಲಿನ ಜಯ ವಿಷ್ಣುವಿನದ್ದೇ ಎಂದು ತಿಳಿದ ಚಕ್ರವರ್ತಿಯು, ತನ್ನಲ್ಲಿನ ದೇವರದಯೆ ಇನ್ನು ಶುಭಕರವಿಲ್ಲವೆಂದು ಅರ್ಥಮಾಡಿಕೊಂಡು, ಆತ ಅಸುರರನ್ನು ಹೋರಾಡಲು ತಡೆಗಟ್ಟಿದನು, ಮತ್ತು ಎಲ್ಲ ಅಸುರರನ್ನು ಕೆಳಲೋಕಕ್ಕೆ ಸೇರುವಂತೆ ಆಜ್ಞಾಪಿಸಿದನು.

ಎಲ್ಲರೂ ಬಲಿಯಾದನಂತರ ಅಂತ್ಯದಲ್ಲಿ ಸೋಮಪಾನದ ದಿವಸ, ವಿಷ್ಣುವಿನ ವಾಹನನಾದ ಗರುಡಪಕ್ಷಿಯು, ಈ ವಿರಾಟ ರೂಪಿಯಾದ ತನ್ನ ಗುರುವಿನ ಇಂಗಿತವನ್ನು ಅರಿತು, ನಾಗಪಾಶದಿಂದ ಬಲಿರಾಜನನ್ನು ಕಟ್ಟಿದನು. ಮಹಾರಾಜನು ತನ್ನ ಕಾಂತಿಯನ್ನು ಕಳೆದುಕೊಂಡಿದ್ದರೂ ಸಹ, ಅವನಲ್ಲಿನ ತಾಳ್ಮೆಶಕ್ತಿಯೂ, ಶ್ರದ್ಧೆಯೂ ಅಪಾರವಾಗಿತ್ತು. ವಾಮನದೇವನನ್ನು ಸಂತೃಪ್ತಿಗೊಳಿಸುವ ದೃಢಸಂಕಲ್ಪವೇ ಬಲಿರಾಜನ ಗುರಿಯಾಗಿತ್ತು. ಇಂತಹ ಸ್ಥಿರವಾದ ಮನಸ್ಸಿನ ವ್ಯಕ್ತಿಯನ್ನು `ಸ್ಥಿತಿಪ್ರಜ್ಞಾ’ ಎಂದು ಭಗವದ್ಗೀತೆಯಲ್ಲಿ ಸೂಚಿಸಿದ್ದ್ದಾರೆ. ಒಬ್ಬ ಪ್ರಾಮಾಣಿಕ ಭಕ್ತನು ಎಷ್ಟು ಸಂಕಷ್ಟದಲ್ಲಿ ಮುಳುಗಿದ್ದರೂ ಸಹ, ಪರಮಾತ್ಮನ ಭಕ್ತಿ ಸೇವೆಯಲ್ಲಿ ಎಂದಿಗೂ ದಾರಿ ತಪ್ಪಿಹೋಗಲಾರನು.
ಮೂರು ಲೋಕವನ್ನೂ, ತನ್ನ ಎರಡೇ ಪಾದಗಳಿಂದ ವಶಪಡಿಸಿದ ವಾಮನದೇವನು, ತನ್ನ ಮೂರನೇ ಹೆಜ್ಜೆಯನ್ನು ಎಲ್ಲಿಡಬೇಕೆಂದು ಬಲಿಚಕ್ರವರ್ತಿಯನ್ನು ಪ್ರಶ್ನಿಸಿದನು – “ದೈತ್ಯರಾಜ! ನಾನು ಬೇಡಿದ ಮೂರು ಪಾದಗಳಲ್ಲಿ, ಒಂದು ಪಾದವನ್ನು ಅತಲಾದಿಲೋಕಗಳಿಂದಲೂ, ಎರಡನೆಯ ಪಾದವನ್ನು ಸ್ವರ್ಗಾದಿಲೋಕದಿಂದ ಪಡೆದಿರುವೆನು. ಇನ್ನುಳಿದ ಮೂರನೆಯ ಪಾದ ಇಡಲು ಭೂಮಿಯನ್ನು ಎಲ್ಲಿಂದ ಕೊಡುವಿ? ಕೊಟ್ಟ ವಚನವನ್ನು ಪಾಲಿಸದೇ ಇದ್ದಲ್ಲಿ ವಿಧಿ ಪ್ರಕಾರ ನಿನ್ನನ್ನು ನರಕಕ್ಕೆ ತಳ್ಳಲಾಗುತ್ತದೆ. ಕೆಳತರಗತಿಯ ಯೋನಿಯಲ್ಲಿ ಹುಟ್ಟುವಿ. ನೀನು ನನ್ನನ್ನು ವಂಚಿಸಿದಂತಾಗಲಿಲ್ಲವೇ?” ಭಗವಂತನ ಈ ಮರ್ಮಭೇದದ ವಚನಗಳನ್ನು ಕೇಳಿ ಬಲಿರಾಜನು ದುಡುಕದೆ ಅವನ ಆಜ್ಞೆಯನ್ನು ಪಾಲಿಸಿದನು. ಮದದಿಂದ ಕೊಬ್ಬಿದ ಬಲಿರಾಜನಿಗೆ ಕಣ್ತೆರೆಯುವಂತೆ ಮಾಡಿದನು. ಸತ್ಯವಾದಿ ಮಹಾರಾಜನು ಕೊಟ್ಟ ವಚನವನ್ನು ಈಡೇರಿಸದೇ ಇದ್ದಲ್ಲಿ ತನ್ನ ಸಮಾಜದ ದೃಷ್ಟಿಯಲ್ಲಿ ಅಪಕೀರ್ತಿ ಪಡೆದಂತಾಗುವುದೆಂದು ತಿಳಿದು ಚಿಂತಿಸಿದನು. ಈ ಅಂಶಗಳನ್ನು ಆಧರಿಸುತ್ತಾ, ವಿಷ್ಣುವಿನ ಮೂರನೇ ಹೆಜ್ಜೆಯ ಸ್ಥಾನಕ್ಕೆ ತನ್ನ `ಶಿರವನ್ನೆ’ ದಾನ ಮಾಡಿದನು. ಶಾಸ್ತ್ರದ ಪ್ರಕಾರ ಒಬ್ಬ ಪ್ರಾಮಾಣಿಕ ಭಕ್ತನು, ದೇವೋತ್ತಮ ಪುರುಷನ ನೈಜ ದಾಸನಾಗಲು, ತನ್ನ ಸಂಸಾರ ಲೌಕಿಕ ಸಾಧನಗಳನ್ನೆಲ್ಲ ಬಿಟ್ಟು ತನ್ನ ಪ್ರಾಣವನ್ನೇ ತ್ಯಜಿಸಲು ಸಿದ್ಧನಾಗುತ್ತಾನೆ. ಬುದ್ಧಿಶಕ್ತಿಯನ್ನು ಬಳಸಿ ವಿಚಾರ ಮಾಡುವ ಸಾಮರ್ಥ್ಯ ಬಲಿಚಕ್ರವರ್ತಿಯಲ್ಲಿ ಇತ್ತು. ವಾಮನ ದೇವನು ಪರಿಶೀಲಿಸಿ, ಜ್ಞಾನದ ಮೂಲಕ ಆಧ್ಯಾತ್ಮಿಕ ಜೀವನದ ಮಾರ್ಗದೆಡೆ ಒಯ್ಯುವ ಉದ್ದೇಶದಿಂದಲೇ, ಈ ಶಿಕ್ಷೆಯನ್ನು ನೀಡಿದನೆಂದು ಮಹಾರಾಜನಿಗೆ ಅರಿವಾಯಿತು. ದೇವೋತ್ತಮ ಪುರುಷನು ದೈತ್ಯರ ಮೇಲೆ ವಿಶೇಷ ಮೈತ್ರಿಯನ್ನು ತೋರಿಸಿ, ಹೃದಯದೊಳಗಿನಿಂದ ಹಿತಕರವಾದ ಸೂಚನೆಗಳನ್ನು ನೀಡಿ ಪ್ರಗತಿಹೊಂದುವಂತೆ ಮಾಡುತ್ತಾನೆ. ಒಬ್ಬ ಭಕ್ತನು ಅಂಧಕಾರದಲ್ಲಿ ಮುಳುಗಿ ಜಾರಿ ಬಿದ್ದರೂ ಸಹ, ಭಗವಂತನು ಅವನನ್ನು ರಕ್ಷಿಸಿ ಸರಿ ದಾರಿಗೆ ತರುತ್ತಾನೆ.
ತ್ರಿವಿಕ್ರಮನ ಈ ಚಮತ್ಕಾರದ (ಸಂದೇಶವನ್ನು) ತಿಳಿದ ತೀರ್ಥರೂಪ ಪೂಜ್ಯ ತಾತನಾದ ಪ್ರಹ್ಲಾದ ಮಹಾರಾಜನು, ಆನಂದಬಾಷ್ಪಗಳನ್ನು ಸುರಿಸುತ್ತಾ ಆ ಸ್ಥಳಕ್ಕೆ ಆಗಮಿಸಿದನು, ಮತ್ತು ಭಗವಂತನಿಗೆ ಗೌರವದ ವಂದನೆಯನ್ನು ಅರ್ಪಿಸಿದನು. ಬಲಿಮಹಾರಾಜನು ನಾಗಪಾಶದಿಂದ ಕೈದಿಯಾಗಿದ್ದರೂ ಲಜ್ಜೆಯಿಂದ ಶಿರಬಾಗಿ ನಮಿಸಿದನು. ಮತ್ತೆ ಪ್ರಹ್ಲಾದನು ಶ್ರೀ ಹರಿಯಲ್ಲಿ ಹೇಳಿದನು “ಜಗದರಕ್ಷಕ ಶ್ರೀಹರಿ, ನನ್ನ ಮೊಮ್ಮಗನಿಗೆ ನೀನೇ ಇಂದ್ರ ಪದವಿಯನ್ನು ಕೊಟ್ಟು ನೀನಾಗಿ ಈಗ ಕಸಿದುಕೊಳ್ಳುತ್ತಿರುವಿ. ಇದು ಒಳ್ಳೆಯದೆ ಆಯಿತೆಂದು ನನ್ನ ಭಾವನೆ, ಏಕೆಂದರೆ ಅವನ ಮೇಲೆ ಮಹಾನುಗ್ರಹವನ್ನು ತೋರಿರುವಿ.” ಬಲಿಮಹಾರಾಜನ ಧರ್ಮಪತ್ನಿಯಾದ ವಿಂಧ್ಯಾವಳ್ಳಿಯೂ ಸಹ ತನ್ನ ಪತಿಯ ಬಂಧನವನ್ನು ನೋಡಿ ಭಯಗ್ರಸ್ತಳಾಗಿ, ವಿನಯದಿಂದ, ಶ್ರೀ ಹರಿಗೆ ನಮಿಸಿದಳು, ಮತ್ತು ತನ್ನ ಪತಿದೇವನನ್ನು ಕ್ಷಮಿಸಿ ಬಿಡುಗಡೆ ಮಾಡಲು ಕರುಣಾಳು ಪರಮಾತ್ಮನಲ್ಲಿ ಪ್ರಾರ್ಥಿಸಿದಳು.
ಭಗವಂತನು ಎಲ್ಲರ ಹೃದಯದಲ್ಲೂ ಇದ್ದಾನೆ. ಚೇತನಾತ್ಮಕಗಳಾಗಿರುವ ಈ ಅಸ್ತಿತ್ವಗಳೆಲ್ಲವೂ ಭಗವಂತನದ್ದೇ. ವಿಶ್ವದಲ್ಲಿರುವ ಸಕಲ ಚರಾಚರ ವಸ್ತುಗಳೂ ಭಗವಂತನಿಂದ ನಿಯಂತ್ರಿತವಾಗಿವೆ. ಎಲ್ಲವೂ ಅವನ ಒಡೆತನಕ್ಕೆ ಒಳಪಟ್ಟಿದೆ. ಒಬ್ಬ ವ್ಯಕ್ತಿಗೆ ವಿಸ್ತಾರವಾದ ಜಮೀನಿರಬಹುದು. ಆದರೆ ತನ್ನ ಒಡೆತನವನ್ನು ಕುರಿತು ಅವನಿಗೆ ಹೆಮ್ಮೆ ಅಥವಾ ಅಹಂಕಾರ ಇರಕೂಡದು. `ನಾನು ಒಡೆಯ’ ಎಂದು ತಿಳಿದುಕೊಂಡಿರುವವರೆಗೆ ಎಂದಿಗೂ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಎಲ್ಲವೂ ಭಗವಂತನಿಗೆ ಸೇರಿದವು. ಆದ್ದರಿಂದ ಅತ್ಯಂತ ದೊಡ್ಡ ಶ್ರೀಮಂತನು ಭಗವಂತನೇ. ಇದೆಲ್ಲ ತತ್ತ್ವಗಳನ್ನು ಅರಿತ ಅತಿ ಬುದ್ಧಿವಂತೆಯಾದ ವಿಂಧ್ಯಾವಳ್ಳಿಯು, ಈ ಪರಿಸ್ಥಿತಿಯಲ್ಲಿ ಕೈದಿಯಾಗಿರುವ ತನ್ನ ಪತಿದೇವನು ಆ `ದೇಹವನ್ನು’ ತನ್ನದೇ ಎಂದು ಹಕ್ಕಿನಿಂದ ಹೇಳಲು ಸಾಧ್ಯವಿದೆಯೆ? ಎಂದು ಭಾವಿಸಿದಳು. ಆತನ ದೇಹವೂ ಸಹ ಭಗವಂತನ ಸೃಷ್ಟಿಯಲ್ಲವೇ? ಕುಮತಿಗಳು ತಮ್ಮದೆಂದು ಅಹಂಕಾರದಿಂದ ತಿಳಿಯುತ್ತಾರೆ.
ಪ್ರಹ್ಲಾದ ಮಹಾರಾಜ ಮತ್ತು ವಿಂಧ್ಯಾವಳ್ಳಿಯ ಬೇಡಿಕೆಗೆ ಸಮ್ಮತಿಕೊಟ್ಟ, ಶ್ರೀ ಬ್ರಹ್ಮನೂ ಸಹ ಭಕ್ತ ಬಲಿಮಹಾರಾಜನನ್ನು ನಾಗಪಾಶದಿಂದ ಬಿಡುಗಡೆ ಮಾಡಿ ಮುಕ್ತನಾಗುವಂತೆ ಮಾಡಲು ಶ್ರೀ ವಿಷ್ಣುವಿನಲ್ಲಿ ಬೇಡಿದನು. ಜನನ ಮರಣದ ಕಾಲಚಕ್ರದಲ್ಲಿ, ಪೂರ್ವಜನ್ಮದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದವನಿಗೆ ಮಾತ್ರ, ಪುನರ್ಜನ್ಮದಲ್ಲಿ ಮಾನವನಾಗಿ ಜನಿಸಲು ಅದೃಷ್ಟವಿದೆ, ಎಂದು ಶಾಸ್ತ್ರದಲ್ಲಿ ವಿವರಿಸಿದೆ.
ಬಲಿಮಹಾರಾಜನ ತಾಳ್ಮೆಶಕ್ತಿಗೂ, ವಚನವನ್ನು ಪಾಲಿಸಿಕೊಂಡದುದಕ್ಕಾಗಿಯೂ ಭಗವಂತನು ಬೆಲೆಕೊಟ್ಟು, ಮುಂದೆ ಬರುವ ಎಂಟನೆಯ ಸಾವರ್ಣಿ ಮನ್ವಂತರದಲ್ಲಿ ಆಗಿನ ಪುರಂದರನಿಂದ ಸ್ವರ್ಗವನ್ನು ತೆಗೆದುಕೊಂಡು ರಾಜನಿಗೆ ಕೊಟ್ಟ, ಅವನನ್ನು ಉನ್ನತ ಮಟ್ಟಕ್ಕೆ ಏರಿಸಿ ಮಹೇಂದ್ರನಾಗಿ ತ್ರೈಲೋಕ್ಯ ರಾಜ್ಯವನ್ನಾಳಲು ಪಟ್ಟಕೊಡಲು ನಿರ್ಧರಿಸಿದನು. ಅಲ್ಲಿಯವರೆಗೆ ಮಹಾಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟ ಸುತಲಲೋಕದಲ್ಲಿನ ಅತೀ ಮಹತ್ವವಾದ ಅರಮನೆಯಲ್ಲಿ ವಾಸಿಸಲು ಅಪ್ಪಣೆ ನೀಡಿದನು.
ಸ್ವರ್ಗಲೋಕದ ಸುಖವನ್ನು ಮೀರಿಸುವ ವೈಭವದಿಂದೊಡಗೂಡಿದ ಆ ಲೋಕದಲ್ಲಿ, ರಾಜನ ಬಂಧು ಬಾಂಧವರಿಂದ ಸೇವಿತನಾಗಿ ಸುಖದಿಂದ ಕಾಲಕ್ಷೇಪಮಾಡುವಂತೆಯೂ ಮತ್ತು ಇತರ ದೇವತೆಗಳು ಪೀಡಿಸದಂತೆ ಎಂದಿಗೂ ರಕ್ಷಿಸುವೆನೆಂದು ಶ್ರೀಶನು ಭರವಸೆ ನೀಡಿದನು. ಪುರಾಣ ಪುರುಷೋತ್ತಮನ ಸುಮಧುರ ಮಾತುಗಳನ್ನು ಆಲಿಸಿದ ಬಲಿರಾಜನು ಆನಂದಬಾಷ್ಪಗಳನ್ನು ಸುರಿಸುತ್ತಾ ಭಕ್ತಿಯಿಂದ ಶ್ರೀ ಹರಿಯನ್ನು ವಂದಿಸಿದನು.
ತದನಂತರ ಗರುಡನು ನಾಗಪಾಶದಿಂದ ಬಲಿರಾಜನನ್ನು ಮುಕ್ತನನ್ನಾಗಿ ಮಾಡಿದನು. ಬಲಿಯು ಅತಿ ಸಂತುಷ್ಟನಾದನು. ಅಸುರ ಪರಿವಾರದೊಂದಿಗೆ ಸುತಲ ಲೋಕಕ್ಕೆ ಹೊರಡಲು ಸಿದ್ಧನಾದನು. ಹಾಗೆಯೇ ಪ್ರಹ್ಲಾದನಿಗೂ ಅವನ ಮೊಮ್ಮಗನ ಜೊತೆ ಸುತಲ ಲೋಕದಲ್ಲಿ ವಾಸವಾಗಲು ಶ್ರೀಶನು ಹೇಳಿದನು.
ಶ್ರೀಶನು ಶುಕ್ರಾಚಾರ್ಯರನ್ನು ಕರೆದು, ಮೊದಲೆ ಪ್ರಾರಂಭಿಸಿದ ಯಜ್ಞವನ್ನು ಪೂರ್ತಿಗೊಳಿಸಲು ಸೂಚಿಸಿದನು. ಶುಕ್ರಾಚಾರ್ಯರು ತನ್ನ ಶಿಷ್ಯನ ಯಜ್ಞ ನಿರ್ವಿಘ್ನವಾಗಿ, ಭಗವಂತನ ಸನ್ನಿದಾನದ ಮೂಲಕ ಪೂರ್ತಿಯಾಯಿತೆಂದು ಸರ್ವಶ್ರೇಯಸ್ಸು, ಸಿದ್ಧಿ ಸಂಭವಿಸಿತೆಂದೂ ಹೇಳಿ ಪ್ರಾಯಶ್ಚಿತ್ತಾದಿ ಹೋಮಗಳನ್ನು ಮಾಡಿ, ಯಜ್ಞವನ್ನು ಮುಗಿಸಿದರು.

ಬಲಿಮಹಾರಾಜನು, ದೇವೋತ್ತಮ ಪುರುಷನಾದ ಶ್ರೀ ಹರಿಯನ್ನು ಗೌರವದಿಂದ ವಂದಿಸಿ, ಮತ್ತೆ ಶ್ರೀ ಬ್ರಹ್ಮ ಮತ್ತು ಶಿವನಿಗೆ ನಮಸ್ಕರಿಸುತ್ತಾ ಸುತಲ ಅರಮನೆಯನ್ನು ಅತಿ ಸಂಭ್ರಮದಿಂದ ಪ್ರವೇಶಿಸಿದನು. ಈ ಪ್ರಕಾರ ಶ್ರೀ ಹರಿಯು, ಇಂದ್ರನನ್ನು ಪುನಃ ಸ್ಥಾಪಿಸಿ, ದೇವತೆಗಳ ಮಾತೆಯಾದ ಅದಿತಿಯ ಇಚ್ಛೆಯನ್ನು ಪೂರೈಸಿದನು. ಎಲ್ಲ ದೇವತೆಗಳು ವಿಷ್ಣುವಿನ ಕೀರ್ತಿಯನ್ನು ಹೊಗಳುತ್ತಾ ತಮ್ಮ ತಮ್ಮ ಲೋಕಗಳಿಗೆ ತೆರಳಿದರು. ಅದಿತಿಯು ಆನಂದಭರಿತಳಾಗಿ ಉಪೇಂದ್ರನನ್ನು ಪೂಜಿಸುತ್ತಾ ಸ್ವರ್ಗದಲ್ಲಿ ನೆಲೆಸಿದಳು.
ಸಾರಾಂಶ:
ದೇವೋತ್ತಮ ಪರಮ ಪುರುಷನನ್ನು ಅರಿಯುವುದು ಕೇವಲ ಭಕ್ತಿಸೇವೆಯಿಂದ ಮಾತ್ರ ಸಾಧ್ಯ. ವ್ಯಕ್ತಿಯು ಇಂತಹ ಸೇವೆಯ ಮೂಲಕ ಪೂರ್ಣವಾಗಿ ಭಗವತ್ ಪ್ರಜ್ಞೆಯಿಂದಿರುವಾಗ ಅವನು ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸಬಲ್ಲನು. ಆದುದರಿಂದ ಈ ಕಲಿಯುಗಕ್ಕೆ ಹೇಳಿರುವ ಪ್ರಕ್ರಿಯೆ `ಕೃಷ್ಣ ಪ್ರಜ್ಞೆ’ – `ಹರೇ ಕೃಷ್ಣ ಮಂತ್ರವನ್ನು ಜಪಿಸುವುದು.’ ಈ ಬದ್ಧ ಜೀವನಕ್ಕೆ ಅಜ್ಞಾನವೇ ಮೂಲ ಕಾರಣವಾಗಿದ್ದು ಜ್ಞಾನವೇ ಅತ್ಯುತ್ತಮವಾದ ಯಜ್ಞ. ಭಗವಾನ್ ಚೈತನ್ಯ ಮಹಾಪ್ರಭುಗಳು ಹೇಳಿಕೊಟ್ಟಂತೆ – ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ – ಮಹಾಮಂತ್ರವನ್ನು ಜಪಿಸುವುದೇ `ಕೃಷ್ಣ ಪ್ರಜ್ಞೆ’.






Leave a Reply