ವಿವಿಧ ದಾಲ್‌ಗಳು

ಈ ಬಾರಿ ವಿವಿಧ ದಾಲ್‌ಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ಈ ದಾಲ್‌ಗಳು ಪೌಷ್ಟಿಕಾಂಶದಿಂದ ಕೂಡಿವೆ. ಅನ್ನದೊಂದಿಗೆ ಅಲ್ಲದೆ ಚಪಾತಿ, ಪೂರಿಗೂ ದಾಲ್‌ ಹೊಂದುತ್ತದೆ. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ಕೊಡಿ. ಬಿಸಿ ಇದ್ದರೆ ರುಚಿ ಹೆಚ್ಚು.

ಹೆಸರು ಬೇಳೆ ದಾಲ್‌

ಬೇಕಾಗುವ ಪದಾರ್ಥಗಳು

ಹೆಸರು ಬೇಳೆ – 1 ಬಟ್ಟಲು

ನೀರು – 8 ಬಟ್ಟಲು

ತುಪ್ಪ – 45 ಎಂಎಲ್‌

ಜೀರಿಗೆ – 2 ಟೀ ಚಮಚ

ಕೊತ್ತಂಬರಿ ಬೀಜ – 2 ಟೀ ಚಮಚ

ತುರಿದ ಶುಂಠಿ – 2 ಟೇಬಲ್‌ ಚಮಚ

ಕತ್ತರಿಸಿದ ಹಸಿರು ಮೆಣಸಿನಕಾಯಿ – 2

ಇಂಗು – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ರುಬ್ಬಿದ ಅಥವಾ ಚೂರು ಮಾಡಿದ ಟೊಮ್ಯಾಟೊ – 3

ಉಪ್ಪು – 1 ಟೀ ಚಮಚ

ತಾಜಾ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ : ಪ್ಯಾನ್‌ನಲ್ಲಿ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಅದಕ್ಕೆ 8 ಬಟ್ಟಲು ನೀರು ಹಾಕಿ ಒಲೆಯ ಮೇಲಿಡಿ. ಅದನ್ನು ಚೆನ್ನಾಗಿ ಬೇಯಿಸಬೇಕು. ಅದರಲ್ಲಿ ಬರುವ ನೊರೆಯನ್ನು ತೆಗೆದು ಹಾಕಿ. ಇತ್ತ ಮಸಾಲೆಯನ್ನು ಮಾಡಿಕೊಳ್ಳಬೇಕು. ಸಣ್ಣ ಪ್ಯಾನ್‌ನಲ್ಲಿ ತುಪ್ಪ ಹಾಕಿ ಕರಗಿಸಿ. ಅದಕ್ಕೆ ಜೀರಿಗೆ, ಕೊತ್ತಂಬರಿ ಬೀಜ, ಹಸಿಮೆಣಸಿನ ಕಾಯಿ, ಶುಂಠಿ, ಇಂಗು ಮತ್ತು ಅರಿಶಿನವನ್ನು ಹಾಕಿ. ಅದು ಸಿಡಿದಾಗ ಮಿಶ್ರಣವನ್ನು ಬೆಂದ ಬೇಳೆಗೆ ಹಾಕಿ. ರುಬ್ಬಿದ ಅಥವಾ ಕತ್ತರಿಸಿದ ಟೊಮ್ಯಾಟೊ ಮತ್ತು ಉಪ್ಪನ್ನು ಹಾಕಿ 5 ನಿಮಿಷ ಕುದಿಸಿ. ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ. ಅನ್ನ ಅಥವಾ ಚಪಾತಿ, ಪೂರಿ ಜೊತೆ ತಿನ್ನಲು ಕೊಡಿ.

ತೊಗರಿ ಬೇಳೆ ದಾಲ್‌

ಬೇಕಾಗುವ ಪದಾರ್ಥಗಳು

ತೊಗರಿ ಬೇಳೆ – 1 ಬಟ್ಟಲು

ನೀರು – 8 ಬಟ್ಟಲು

ರುಬ್ಬಿದ ಟೊಮ್ಯಾಟೊ – 4

ತುಪ್ಪ – 45 ಎಂಎಲ್‌

ಸಾಸಿವೆ – 1 ಟೀ ಚಮಚ

ಚಕ್ಕೆ – 1 ಚೂರು

ಲವಂಗ – 3

ಪಲಾವ್‌ ಎಲೆ – 3

ತುರಿದ ಶುಂಠಿ – 2 ಟೇಬಲ್‌ ಚಮಚ

ಕತ್ತರಿಸಿದ ಹಸಿರು ಮೆಣಸಿನಕಾಯಿ – 2

ಇಂಗು – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ಉಪ್ಪು – 1 ಟೀ ಚಮಚ

ತಾಜಾ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ : ಪ್ಯಾನ್‌ನಲ್ಲಿ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಅದಕ್ಕೆ 8 ಬಟ್ಟಲು ನೀರು ಹಾಕಿ ಒಲೆಯ ಮೇಲಿಡಿ. ಅದನ್ನು ಚೆನ್ನಾಗಿ ಬೇಯಿಸಬೇಕು. ಅದರಲ್ಲಿ ಬರುವ ನೊರೆಯನ್ನು ತೆಗೆದು ಹಾಕಿ. ಇತ್ತ ಮಸಾಲೆಯನ್ನು ಮಾಡಿಕೊಳ್ಳಬೇಕು. ಸಣ್ಣ ಪ್ಯಾನ್‌ನಲ್ಲಿ ತುಪ್ಪ ಹಾಕಿ ಕರಗಿಸಿ. ಅದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ಮೇಲೆ ಚಕ್ಕೆ, ಲವಂಗ, ಪಲಾವ್‌ ಎಲೆ, ಹಸಿಮೆಣಸಿನ ಕಾಯಿ, ಶುಂಠಿ, ಇಂಗು ಮತ್ತು ಅರಿಶಿನವನ್ನು ಹಾಕಿ. ಒಂದು ನಿಮಿಷದ ಅನಂತರ ಮಿಶ್ರಣವನ್ನು ಬೆಂದ ಬೇಳೆಗೆ ಹಾಕಿ. ರುಬ್ಬಿದ ಅಥವಾ ಕತ್ತರಿಸಿದ ಟೊಮ್ಯಾಟೊ ಮತ್ತು ಉಪ್ಪನ್ನು ಹಾಕಿ 5 ನಿಮಿಷ ಕುದಿಸಿ. ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ. ಅನ್ನ ಅಥವಾ ಚಪಾತಿ, ಪೂರಿ ಜೊತೆ ತಿನ್ನಲು ಕೊಡಿ.

ಮಿಶ್ರ ದಾಲ್‌

ಬೇಕಾಗುವ ಪದಾರ್ಥಗಳು

ಹೆಸರು ಬೇಳೆ – 1/4 ಬಟ್ಟಲು

ಉದ್ದಿನ ಬೇಳೆ – 1/4 ಬಟ್ಟಲು

ಕಡಲೆ ಬೇಳೆ – 1/4 ಬಟ್ಟಲು

ತೊಗರಿ ಬೇಳೆ – 1/2  ಬಟ್ಟಲು

ನೀರು – 8 ಬಟ್ಟಲು

ಉಪ್ಪು – ರುಚಿಗೆ

ತುಪ್ಪ – 45 ಎಂಎಲ್‌

ಜೀರಿಗೆ – 1 ಟೀ ಚಮಚ

ಕೊತ್ತಂಬರಿ ಬೀಜ – 1/2 ಟೀ ಚಮಚ

ಕೆಂಪು (ಒಣ) ಮೆಣಸಿನಕಾಯಿ – 3

ಚಕ್ಕೆ – 1 ಚೂರು

ತುರಿದ ಶುಂಠಿ – 1 ಟೇಬಲ್‌ ಚಮಚ

ಇಂಗು – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ಕರಿಬೇವು – 8 ಎಲೆ

ರುಬ್ಬಿದ ಟೊಮ್ಯಾಟೊ – 3

ತಾಜಾ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ : ಹೆಸರು ಬೇಳೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ತೊಗರಿ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ತೊಳೆಯಿರಿ. ನೀರನ್ನು ಬಸಿದು ಬೇಳೆಗಳನ್ನು ಒಂದು ಪ್ಯಾನ್‌ಗೆ ಹಾಕಿ. ಅದಕ್ಕೆ 8 ಬಟ್ಟಲು ನೀರು ಮತ್ತು ಅರ್ಧ ಟೀ ಚಮಚ ಉಪ್ಪು ಹಾಕಿ ಒಲೆಯ ಮೇಲೆ ಇಡಿ. ನೊರೆಯನ್ನು ತೆಗೆದು ಹಾಕಿ. ಬೇಳೆಗಳು ಚೆನ್ನಾಗಿ ಬೆಂದ ಮೆಲೆ ಉರಿಯನ್ನು ನಂದಿಸಿ. ಇತ್ತ ಮಸಾಲೆಯನ್ನು ತಯಾರಿಸಿಕೊಳ್ಳಬೇಕು. ಚಿಕ್ಕ ಪ್ಯಾನ್‌ನಲ್ಲಿ ತುಪ್ಪ ಹಾಕಿ ಕರಗಿಸಿ. ಅದಕ್ಕೆ ಜೀರಿಗೆ ಹಾಕಿ ಸಿಡಿಸಿ. ಅನಂತರ ಕೊತ್ತಂಬರಿ ಬೀಜ, ಕೆಂಪು ಮೆಣಸಿನಕಾಯಿ, ಚಕ್ಕೆ, ಶುಂಠಿ, ಇಂಗು, ಅರಿಶಿನ, ಕರಿಬೇವು ಮತ್ತು ರುಬ್ಬಿದ ಟೊಮ್ಯಾಟೊ ಹಾಕಿ 5 ನಿಮಿಷ ಕುದಿಸಿ. ಈ ಮಿಶ್ರಣವನ್ನು ಬೆಂದ ಬೇಳೆಗಳ ಮಿಶ್ರಣಕ್ಕೆ ಹಾಕಿ. ಉಪ್ಪು ಹಾಕಿ ಚೆನ್ನಾಗಿ ಕಲಸಿ. ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಅನ್ನ ಅಥವಾ ಚಪಾತಿ, ಪೂರಿ ಜೊತೆಗೆ ತಿನ್ನಲು ಕೊಡಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi