ವಿಧ ವಿಧವಾದ ಪಲ್ಯಗಳು

ವಿಧ ವಿಧವಾದ ಸಬ್ಜಿಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ತರಕಾರಿಗಳ ಈ ಸಬ್ಜಿಗಳು ಪೌಷ್ಟಿಕಾಂಶದಿಂದ ಕೂಡಿದ್ದು, ಅದನ್ನು ಚಪಾತಿ, ಪೂರಿ, ದೋಸೆ, ರೊಟ್ಟಿ ಮತ್ತು ಅನ್ನದೊಂದಿಗೆ ಕೂಡ ತಿನ್ನಬಹುದು. ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ, ಮನೆ ಮಂದಿಗೆ ಪ್ರಸಾದವನ್ನು ಕೊಡಿ.

ಆಲೂ, ಹೂಕೋಸು, ಬಟಾಣಿ ಪಲ್ಯ

ಬೇಕಾಗುವ ಪದಾರ್ಥಗಳು

ಮಧ್ಯಮ ಗಾತ್ರದ ಹೂಕೋಸು –  1

ಮಧ್ಯಮ ಗಾತ್ರದ ಆಲೂಗಡ್ಡೆ  –  5

ಬಟಾಣಿ  – ಅರ್ಧ ಬಟ್ಟಲು

ಮಧ್ಯಮ ಗಾತ್ರದ ಟೊಮ್ಯಾಟೊ  –  4-5

ತುಪ್ಪ –  65 ಎಂಎಲ್‌

ಸಾಸಿವೆ – 1 ಟೀ ಚಮಚ

ಜೀರಿಗೆ – 1 ಟೀ ಚಮಚ

ಕೊತ್ತಂಬರಿ ಬೀಜ – 2 ಟೀ ಚಮಚ

ಇಂಗು – ಅರ್ಧ ಟೀ ಚಮಚ

ಕತ್ತರಿಸಿದ ಹಸಿರು ಮೆಣಸಿನಕಾಯಿ – 2

ತುರಿದ ಶುಂಠಿ – 2 ಟೇಬಲ್‌ ಚಮಚ

ಉಪ್ಪು – 1 1/2 ಟೀ ಚಮಚ

ಸಕ್ಕರೆ  – 1 1/2 ಟೀ ಚಮಚ

ಗರಂ ಮಸಾಲ – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ನಿಂಬೆ ರಸ – 2 ಟೀ ಚಮಚ

ತಾಜಾ ಕೊತ್ತಂಬರಿ ಸೊಪ್ಪು – 1/2 ಕಟ್ಟು 

ಮಾಡುವ ವಿಧಾನ : ಹೂಕೋಸನ್ನು ಚಿಕ್ಕದಾಗಿ ಪ್ರತ್ಯೇಕಿಸಿಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ನೀರನ್ನು ಬಸಿಯಿರಿ. ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಮಧ್ಯಮ ಗಾತ್ರದ ಘನಾಕೃತಿಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿಡಿ. ಬಟಾಣಿಯನ್ನು ತೊಳೆದು ಇಡಿ.

ಒಂದು ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿ. ಸಾಸಿವೆಯನ್ನು ಹಾಕಿ. ಅದು ಸಿಡಿದ ಮೇಲೆ ಜೀರಿಗೆ, ಅನಂತರ ಕೊತ್ತಂಬರಿ ಬೀಜ, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕಲಸಿ. ಎರಡು ನಿಮಿಷ ಬೆಂದ ಮೇಲೆ, ಸಿದ್ಧ ಪಡಿಸಿದ ತರಕಾರಿಗಳನ್ನು ಮತ್ತು ಉಪ್ಪು, ಸಕ್ಕರೆ, ಗರಂ ಮಸಾಲ ಹಾಗೂ ಅರಿಶಿನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ 15 ನಿಮಿಷ ಬೇಯಿಸಿ. ಅಂಟಿಕೊಳ್ಳುವುದು ಮತ್ತು ಸೀದು ಹೋಗುವುದನ್ನು ತಪ್ಪಿಸಲು ಸ್ವಲ್ಪ ನೀರು ಹಾಕಿ ಬೇಯಿಸಿ. ತರಕಾರಿಗಳು ಬೆಂದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿದ ಟೊಮ್ಯಾಟೊ ಹಾಕಿ ಕಲಸಿ, 5 ನಿಮಿಷ ಬೇಯಿಸಿ. ನಿಂಬೆ ರಸವನ್ನು ಹಾಕಿ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಸೋರೆಕಾಯಿ ಕೋಫ್ತಾ

ಬೇಕಾಗುವ ಪದಾರ್ಥಗಳು

ಕೋಫ್ತಾಗಾಗಿ:

ಮಧ್ಯಮ ಗಾತ್ರದ ಸೋರೆಕಾಯಿ – 2

ಕಡ್ಲೆಹಿಟ್ಟು – 1 1/2 ಬಟ್ಟಲು

ಅಕ್ಕಿ ಹಿಟ್ಟು – 1/2 ಬಟ್ಟಲು

ತಾಜಾ ಕೊತ್ತಂಬರಿ ಸೊಪ್ಪು – 1 ಸಣ್ಣ ಕಟ್ಟು.

ನಿಂಬೆ ರಸ – 1 ಟೇಬಲ್‌ ಚಮಚ

ಕತ್ತರಿಸಿದ ಹಸಿ ಮೆಣಸಿನಕಾಯಿ – 2

ತುರಿದ ಶುಂಠಿ – 2 ಟೇಬಲ್‌ ಚಮಚ

ಉಪ್ಪು – 3/4  ಟೀ ಚಮಚ

ಅರಿಶಿನ – 1 ಟೀ ಚಮಚ

ಇಂಗು –  1/2 ಟೀ ಚಮಚ

ಕೊತ್ತಂಬರಿ ಬೀಜ – 1 1/2 ಟೀ ಚಮಚ

ಈನೋ – 1 ಟೀ ಚಮಚ

ತುಪ್ಪ – ಕರಿಯಲು ಬೇಕಾದಷ್ಟು

ಗ್ರೇವಿಗಾಗಿ:

ತುಪ್ಪ – 45 ಎಂಎಲ್‌

ಮೆಂತ್ಯ – 1 1/2 ಟೀ ಚಮಚ

ಇಂಗು – 1/2 ಟೀ ಚಮಚ

ಕತ್ತರಿಸಿದ ಹಸಿರು ಮೆಣಸಿನಕಾಯಿ – 1

ತುರಿದ ಶುಂಠಿ – 1 ಟೇಬಲ್‌ ಚಮಚ

ಉಪ್ಪು – 1 ಟೀ ಚಮಚ

ಅರಿಶಿನ – 1/2 ಟೀ ಚಮಚ

ಸಕ್ಕರೆ – 1 ಟೀ ಚಮಚ

ಟೊಮ್ಯಾಟೊ – 4-5 (ಮಿಕ್ಸಿಗೆ ಹಾಕಿ ರುಬ್ಬಿಕೊಂಡಿದ್ದು)

ಕೆನೆ – 1 ಬಟ್ಟಲು

ಕೊತ್ತಂಬರಿ ಸೊಪ್ಪು – 1 ಸಣ್ಣ ಕಟ್ಟು

ಮಾಡುವ ವಿಧಾನ : ಸೋರೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ತುರಿಯಿರಿ. ಕಡ್ಲೆಹಿಟ್ಟು, ಅಕ್ಕಿ ಹಿಟ್ಟು ಮತ್ತು ಕೊತ್ತಂಬರಿ ಸೊಪ್ಪನ್ನು ಅದಕ್ಕೆ ಹಾಕಿ. ಅನಂತರ ನಿಂಬೆ ರಸವನ್ನು ಚಿಮುಕಿಸಿ. ಆಮೇಲೆ ಹಸಿಮೆಣಸಿನಕಾಯಿ, ತುರಿದ ಶುಂಠಿ, ಉಪ್ಪು, ಅರಿಶಿನ, ಇಂಗು, ಮತ್ತು ಕೊತ್ತಂಬರಿ ಬೀಜವನ್ನು ಹಾಕಿ ಕಲಸಿ. ಇನೋ ಹಾಕಿ ಕಲಸಿ. ಗಟ್ಟಿಯಾದ ಹಿಟ್ಟನ್ನು ಸಿದ್ಧಮಾಡಿಕೊಳ್ಳಿ. ಹೆಚ್ಚಿನ ನೀರು ಸೋರೆಕಾಯಿಯಿಂದಲೇ ಬರುತ್ತದೆ. ಈಗ ಮಿಶ್ರಣವು ಕರಿಯಲು ಸಿದ್ಧ. ಪ್ಯಾನ್‌ನಲ್ಲಿ ತುಪ್ಪ ಕಾಯಿಸಿ. ಬಗೈನ ಮೊದಲ ಮೂರು ಬೆರಳು ಮತ್ತು ಹೆಬ್ಬೆಟ್ಟನ್ನು ಬಳಸಿ ಸಣ್ಣ ಉಂಡೆಗಳನ್ನು ಮಾಡಿ. ನಿಧಾನವಾಗಿ ಸೋರೆಕಾಯಿ ಉಂಡೆಗಳನ್ನು ತುಪ್ಪದಲ್ಲಿ ಕರಿಯಿರಿ. ಚಿನ್ನದ, ಕಂದು ಬಣ್ಣ ಬರುವವರೆಗೆ ಕರಿಯಿರಿ ಮತ್ತು ಕಾಗದ ಹಾಕಿರುವ ಪಾತ್ರೆಯಲ್ಲಿ ಇಡಿ.

ಇನ್ನೊಂದು ಪಾತ್ರೆಯಲ್ಲಿ ತುಪ್ಪ ಕಾಯಿಸಿ. ಮೆಂತ್ಯ, ಇಂಗು, ಹಸಿಮೆಣಸಿಕಾಯಿ ಮತ್ತು ಶುಂಠಿಯನ್ನು ಹಾಕಿ. ಇದಕ್ಕೆ ಹದಮಾಡಿದ ಟೊಮ್ಯಾಟೊ, ಉಪ್ಪು, ಅರಿಶಿನ, ಸಕ್ಕರೆ ಹಾಕಿದ ಮೇಲೆ ಕೆನೆ ಹಾಕಿ 10 ನಿಮಿಷ ಬೇಯಿಸಿ. ಹುರಿದ ಕೋಫ್ತಾಗಳನ್ನು ಒಂದೊಂದಾಗಿ ಹಾಕಿ. ಉಂಡೆಗಳು ಒಡೆಯದಂತೆ ಎಚ್ಚರಿಕೆಯಿಂದ ಕಲಸಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ನೀಳ ಬದನೆ, ಆಲೂ ಪಲ್ಯ

ಬೇಕಾಗುವ ಪದಾರ್ಥಗಳು

ಮಧ್ಯಮ ಗಾತ್ರದ ನೀಳ ಬದನೆ – 2

ದೊಡ್ಡ ಆಲೂಗಡ್ಡೆ – 4

ಬಟಾಣಿ – 1/2 ಬಟ್ಟಲು

ಟೊಮ್ಯಾಟೊ – 3

ತುಪ್ಪ – 45 ಎಂಎಲ್‌

ಸಾಸಿವೆ – 1 ಟೀ ಚಮಚ

ಇಂಗು – 1 ಟೀ ಚಮಚ

ಅಚ್ಚ ಮೆಣಸಿನಕಾಯಿ ಪುಡಿ – 1 ಟೀ ಚಮಚ

ಧನಾ-ಜೀರಾ ಪುಡಿ – 1 ಟೇಬಲ್‌ ಚಮಚ

ಅರಿಶಿನ – 1 ಟೀ ಚಮಚ

ಉಪ್ಪು – 1 1/2 ಟೀ ಚಮಚ

ಬೆಲ್ಲ – 1 ಟೇಬಲ್‌ ಚಮಚ

ನಿಂಬೆ ರಸ – 2 ಟೇಬಲ್‌ ಚಮಚ

ಮಾಡುವ ವಿಧಾನ : ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ಘನಾಕೃತಿಯಂತೆ ಕತ್ತರಿಸಿ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಬದನೆಕಾಯಿಯ ಚೂರುಗಳಿಗಿಂತ ಸಣ್ಣ ಗಾತ್ರದ ಘನಾಕೃತಿಯಾಗಿ ಚೂರು ಮಾಡಿ. ಬಟಾಣಿಯನ್ನು ತೊಳೆದಿಡಿ.

ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ತುಪ್ಪ ಕಾಯಿಸಿ. ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಇಂಗು ಹಾಕಿ ಕಲಸಿ. ಮೊದಲು ಚೂರು ಮಾಡಿದ ಆಲೂಗಡ್ಡೆಯನ್ನು ಹಾಕಿ. ಅನಂತರ ಸ್ವಲ್ಪ ನೀರು ಹಾಕಿ 5-10 ನಿಮಿಷ ಬೇಯಿಸಿ. ಚೂರು ಮಾಡಿದ ಬದನೆಕಾಯಿ, ಬಟಾಣಿ ಹಾಕಿದ ಮೇಲೆ ಅಚ್ಚ ಮೆಣಸಿನಪುಡಿ, ಧನಾ-ಜೀರಾ ಪುಡಿ, ಅರಿಶಿನ ಮತ್ತು ಕೊನೆಗೆ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಬೇಯಿಸಿ ಮತ್ತು ಬೆಲ್ಲವನ್ನು ಹಾಕಿ. ಅನಂತರ ಟೊಮ್ಯಾಟೊ ಹಾಕಿ 5 ನಿಮಿಷ ಬೇಯಿಸಿ. ನಿಂಬೆ ರಸವನ್ನು ಚಿಮುಕಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi