ವೈವಿಧ್ಯಮಯ ಪಲ್ಯಗಳು

ಹೆಚ್ಚಿನ ದ್ರವ ಇಲ್ಲದಂತಹ ಗಟ್ಟಿ ಸಬ್ಜಿಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ಪೌಷ್ಟಿಕಾಂಶ ಉಳ್ಳ ಈ ತರಕಾರಿಗಳ ಪಲ್ಯಗಳನ್ನು ಚಪಾತಿ, ಪೂರಿ, ದೋಸೆ, ರೊಟ್ಟಿಯಲ್ಲದೆ ಅನ್ನದೊಂದಿಗೆ ಕೂಡ ತಿನ್ನಬಹುದು. ಮಕ್ಕಳ, ಉದ್ಯೋಗಿಗಳ ಮಧ್ಯಾಹ್ನದ ಊಟದ ಡಬ್ಬಿಗೆ ಹೆಚ್ಚಾಗಿ ಬಳಸಬಹುದು. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ಕೊಡಿ.

ಪಾಲಕ್‌ ಮತ್ತು ಪನ್ನೀರ್‌

ಬೇಕಾಗುವ ಪದಾರ್ಥಗಳು

ಪಾಲಕ್‌ ಸೊಪ್ಪು – 7-8 ಕಟ್ಟು

ಹಾಲು – 3 ಲೀಟರ್‌

ನಿಂಬೆ ರಸ – 250 ಎಂಎಲ್‌

ನೀರು – ಅರ್ಧ ಬಟ್ಟಲು

ತುಪ್ಪ – 65 ಎಂಎಲ್‌

ಸಾಸಿವೆ – 1 ಟೀ ಚಮಚ

ಮೆಂತ್ಯ – 1 ಟೀ ಚಮಚ

ಪಲಾವ್‌ ಎಲೆ – 1

ಕತ್ತರಿಸಿದ ಹಸಿ ಮೆಣಸಿನಕಾಯಿ – 2

ತುರಿದ ಶುಂಠಿ – 2 ಟೇಬಲ್‌ ಚಮಚ

ಇಂಗು – 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ಉಪ್ಪು – 1 1/2 ಟೀ ಚಮಚ

ಮಾಡುವ ವಿಧಾನ : ಪನ್ನೀರ್‌ ಅನ್ನು ಮನೆಯಲ್ಲಿಯೇ ತಯಾರಿಸಲು – ಕೊಬ್ಬಿನಂಶ ಇರುವ ಹಾಲನ್ನು ಚೆನ್ನಾಗಿ ಕುದಿಸಿ. ಒಲೆಯಿಂದ ಕೆಳಗಿಳಿಸಿ ಒಂದೆರಡು ನಿಮಿಷಗಳ ಅನಂತರ ನಿಂಬೆ ರಸ ಅಥವಾ ಮೊಸರನ್ನು (ಒಂದು ಬಟ್ಟಲು) ಹಾಕಿ ಚೆನ್ನಾಗಿ ಕಲಸಿ. ಆಗ ಸ್ಪಂಜಿನಂತೆ ಪನ್ನೀರ್‌ ಹಳದಿ-ಹಸಿರು ದ್ರವದಿಂದ ಪ್ರತ್ಯೇಕವಾಗುತ್ತದೆ. ಈ ರೀತಿ ಮೊಸರು ಪ್ರತ್ಯೇಕವಾದ ಮೇಲೆ ಅದನ್ನು ಚೀಸ್‌ ಬಟ್ಟೆಯಲ್ಲಿ ಶೇಖರಿಸಿ. ಅದನ್ನು ತಣ್ಣಗಿನ ನೀರಿನಲ್ಲಿ ಇಟ್ಟು ತೆಗೆಯಿರಿ. ಚೀಸ್‌ ಬಟ್ಟೆಯನ್ನು ಸುರುಳಿಯಂತೆ ಸುತ್ತಿ ಪಾತ್ರೆಯಲ್ಲಿ ಅದರ ನೀರು ಬೀಳುವಂತೆ ಇಡಿ. ಅದು ಹಾಗೇ 30 ನಿಮಿಷಗಳಿರಲಿ. (ಪನ್ನೀರ್‌ ಅನ್ನು ಅಂಗಡಿಯಿಂದಲೂ ತರಬಹುದು. ಆಗ ಮನೆಯಲ್ಲಿ ಮಾಡುವ ಅಗತ್ಯ ಇರುವುದಿಲ್ಲ.)

ಪಾಲಕ್‌ ಸೊಪ್ಪನ್ನು ಚೂರು ಮಾಡಿಕೊಂಡು ಚೆನ್ನಾಗಿ ತೊಳೆಯಿರಿ. ಇತ್ತ ಪನ್ನೀರ್‌ನಿಂದ ಬಿದ್ದ ನೀರನ್ನು ಚೆಲ್ಲಿ. ಪನ್ನೀರ್‌ ಈಗ ಕತ್ತರಿಸಲು ಸಿದ್ಧ. ಅದನ್ನು ಮಧ್ಯಮ ಗಾತ್ರದ ಘನಾಕೃತಿಯಾಗಿ ಕತ್ತರಿಸಿ.

ಅಗಲವಾದ ಪಾತ್ರೆಯನ್ನು ಮಧ್ಯಮ ಉರಿಯ ಮೇಲೆ ಇಡಿ. ಮೊದಲು ತುಪ್ಪವನ್ನು, ಅನಂತರ ಸಾಸಿವೆಯನ್ನು ಹಾಕಿ. ಸಾಸಿವೆ ಸಿಡಿದ ಮೇಲೆ, ಬೇ (ಪಲಾವ್‌) ಎಲೆ, ಮೆಂತ್ಯ, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಹಾಕಿ. ತತ್‌ಕ್ಷಣ ಸೊಪ್ಪನ್ನು ಹಾಕಿ ಕಲಸಿ. ಅನಂತರ ಉಪ್ಪು ಮತ್ತು ಅರಿಶಿನ ಹಾಕಿ ಎಲ್ಲ ಪದಾರ್ಥಗಳೂ ಚೆನ್ನಾಗಿ ಮಿಶ್ರಣವಾಗುವಂತೆ ಕಲಸಿ. ಅರ್ಧ ಬಟ್ಟಲು ನೀರನ್ನು ಹಾಕಿ ಮುಚ್ಚಿ. 15 ನಿಮಿಷ ಬೆಂದ ಮೇಲೆ ಪನ್ನೀರ್‌ ಚೂರು ಮತ್ತು ಸ್ವಲ್ಪ ಉಪ್ಪು ಹಾಕಿ ನಿಧಾನವಾಗಿ ಕಲಸಿ.

ಈ ಕೆಲವು ಆಯ್ಕೆಗಳನ್ನು ಗಮನಿಸಿ :

*  ಕತ್ತರಿಸಿದ ಪನ್ನೀರ್‌ ಅನ್ನು ಪ್ಯಾನ್‌ನಲ್ಲಿ ಹುರಿಯಬಹುದು. ಚಿನ್ನದ ಬಣ್ಣಕ್ಕೆ ಬರುವಂತೆ ಹುರಿದ ಪನ್ನೀರ್‌ ಅನ್ನು ಕೊನೆಯಲ್ಲಿ ಸೊಪ್ಪಿನ ಮಿಶ್ರಣಕ್ಕೆ ಹಾಕಿ.

*  ಪನ್ನೀರ್‌ಗೆ ಬದಲಾಗಿ ಕತ್ತರಿಸಿ ಹುರಿದ ಆಲೂಗಡ್ಡೆ (4 ಮಧ್ಯಮ ಗಾತ್ರದ್ದು) ಅಥವಾ ಕತ್ತರಿಸಿದ ಕುಂಬಳಕಾಯನ್ನು ಕೂಡ ಬಳಸಬಹುದು.

*  ಬೇಯಿಸುವಾಗ ಸೊಪ್ಪಿಗೆ ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ. ಕೊನೆಯಲ್ಲಿ ಹುರಿದ ಅಥವಾ ಹುರಿಯದ ಪನ್ನೀರ್‌ ಹಾಕಿ.

*  ಹುಳಿಯಾದ ಕೆನೆ (ಒಂದು ಬಟ್ಟಲು) ಹಾಕಿ ಚೆನ್ನಾಗಿ ಕಲಸಿ. ಅನಂತರ ಹುರಿಯದ ಅಥವಾ ಹುರಿದ ಪನ್ನೀರ್‌ ಹಾಕಿ.

*  ಸೊಪ್ಪನ್ನು ಹಾಕುವ ಮೊದಲು, ಬೇಯಿಸುವ ಮುನ್ನ ಗೋಡಂಬಿ ಅಥವಾ ಬಟಾಣಿಯನ್ನು ಹಾಕಿ.

ನೀಲಿ ಬದನೆ, ದೊಣ್ಣೆ ಮೆಣಸು ಪಲ್ಯ

ಬೇಕಾಗುವ ಪದಾರ್ಥಗಳು

ನೇರಳೆ ಬಣ್ಣದ ನೀಳ ಬದನೆಕಾಯಿ – 2

ಕೆಂಪು/ಹಸಿರು ಮೆಣಸು – 2, 3

ಕೊಬ್ಬು ಇರುವ ಹಾಲು – 2 ಲೀಟರ್‌

ನಿಂಬೆ ರಸ – 125 ಎಂಎಲ್‌

ರುಬ್ಬಿದ ಟೊಮ್ಯಾಟೊ – 5

ಒಣ ದ್ರಾಕ್ಷಿ – 1/4 ಬಟ್ಟಲು

ತುಪ್ಪ – 65 ಎಂಎಲ್‌

ಕೊತ್ತಂಬರಿ ಬೀಜ – 1 1/2 ಟೀ ಚಮಚ

ಜೀರಿಗೆ – 1 ಟೀ ಚಮಚ

ಮೆಂತ್ಯ – 1/4 ಟೀ ಚಮಚ

ತುರಿದ ಶುಂಠಿ – 2 ಟೇಬಲ್‌ ಚಮಚ

ಕತ್ತರಿಸಿದ ಹಸಿ ಮೆಣಸಿನಕಾಯಿ – 2

ಕೆಂಪು ಮೆಣಸಿನ ಪುಡಿ – 1/2 ಟೀ ಚಮಚ

ಇಂಗು – 1/2 ಟೀ ಚಮಚ

ಉಪ್ಪು – 1 1/2 ಟೀ ಚಮಚ

ಅರಿಶಿನ – 1 ಟೀ ಚಮಚ

ಕರಿ ಮೆಣಸು – 2/3 ಟೀ ಚಮಚ

ಗರಂ ಮಸಾಲ – 1/3 ಟೀ ಚಮಚ

ಸಕ್ಕರೆ ಅಥವಾ ಬೆಲ್ಲ – 1 ಟೀ ಚಮಚ

ತಾಜಾ ಕೊತ್ತಂಬರಿ ಸೊಪ್ಪು – 1/2 ಗೊಂಚಲು

ಮಾಡುವ ವಿಧಾನ : ಹಾಲು ಮತ್ತು ನಿಂಬೆ ರಸವನ್ನು ಬಳಸಿ ಪನ್ನೀರ್‌ ಮಾಡಿಕೊಳ್ಳಿ ಅಥವಾ ಅಂಗಡಿಯಿಂದ ಸಿದ್ಧವಾದ ಪನ್ನೀರ್‌ ತರಬಹುದು. ಕೆಂಪು ಅಥವಾ ಹಸಿರು ಮೆಣಸನ್ನು ಚೂರು ಮಾಡಿಟ್ಟುಕೊಳ್ಳಿ. ಅದೇ ರೀತಿ ಬದನೆಕಾಯಿಯನ್ನು ಚೂರು ಮಾಡಿ ಪ್ರತ್ಯೇಕ ಪಾತ್ರೆಯಲ್ಲಿ ಇಟ್ಟುಕೊಳ್ಳಿ. ಎರಡು ಸಮತಲ ತಟ್ಟೆಗೆ ಎಣ್ಣೆ ಹೀರುವ ಕಾಗದವನ್ನು ಹಾಕಿ. ಪ್ಯಾನ್‌ ಮುಕ್ಕಾಲು ಭಾಗ ತುಂಬುವಷ್ಟು ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಲು ಇಡಿ. ಮೊದಲು ಮೆಣಸನ್ನು ಕರಿಯಿರಿ. ಅದು ಮೃದುವಾದ ಮೇಲೆ ಅದನ್ನು ಕಾಗದ ಇರುವ ತಟ್ಟೆಗೆ ಹಾಕಿ. ಅನಂತರ ಘನಾಕಾರದಲ್ಲಿ ಕತ್ತರಿಸಿದ ಪನ್ನೀರ್‌ ಅನ್ನು ಹುರಿಯಿರಿ. ಕಂದು ಬಣ್ಣ ಬಂದ ಮೇಲೆ ತೆಗೆದು ಕಾಗದ ಇರುವ ಮತ್ತೊಂದು ತಟ್ಟೆಗೆ ಹಾಕಿ. ಉರಿಯನ್ನು ಹೆಚ್ಚಿಸಿ ಕೂಡಲೇ ಬದನೆಕಾಯಿ ಚೂರುಗಳನ್ನು ಕರಿದು ಪನ್ನೀರ್‌ ಇರುವ ತಟ್ಟೆಗೆ ಹಾಕಿ.

ದೊಡ್ಡ ಪ್ಯಾನ್‌ನಲ್ಲಿ 65 ಎಂಎಲ್‌ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಅನಂತರ ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ, ತುರಿದ ಶುಂಠಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಮೆಣಸಿನಕಾಯಿ ಪುಡಿ, ಇಂಗು ಮತ್ತು ರುಬ್ಬಿದ ಟೊಮ್ಯಾಟೊವನ್ನು ಒಂದಾದ ಮೇಲೆ ಒಂದರಂತೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅನಂತರ ಉಪ್ಪು, ಅರಿಶಿನ, ಕರಿ ಮೆಣಸು, ಗರಂ ಮಸಾಲ ಮತ್ತು ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಕಲಸಿ. ಈ ಮಿಶ್ರಣವು 5-10 ನಿಮಿಷ ಬೇಯಲಿ. ಟೊಮ್ಯಾಟೊ ರಸವು ಕುದಿಯಲಾರಂಭಿಸಿದಾಗ ದ್ರಾಕ್ಷಿ, ಹುರಿದ ತರಕಾರಿಗಳು ಮತ್ತು ಪನ್ನೀರ್‌ ಅನ್ನು ಹಾಕಿ. ನಿಧಾನವಾಗಿ ಕಲಸಿರಿ ಮತ್ತು ನಿಂಬೆ ರಸ ಸೇರಿಸಿ. ಅನಂತರ ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi