ನಾವು ದೇಹವಲ್ಲ. ದೇಹದೊಳಗೆ ಸಿಲುಕಿಬಿಟ್ಟಿರುವ ಆಧ್ಯಾತ್ಮಿಕ ಅಂಶಗಳು. ಈ ಸರಳವಾದ ವಾಸ್ತವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮ್ಮ ನಿಜವಾದ ಆಸಕ್ತಿ ಅಡಗಿದೆ.
– ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಶ್ರೀಮದ್ ಭಾಗವತ: 6.15.3
* * * *
ಮೇಲು ಕೀಳು ಎಂಬ ಸಾಮಾಜಿಕ ಸ್ಥಾನಮಾನದ ಪರಿಗಣನೆ ಶ್ರೀಕೃಷ್ಣನನ್ನು ಪೂಜಿಸುವಾಗ ಇಲ್ಲ. ಬುದ್ಧಿಶಕ್ತಿಯ ಮೇಲ್ಮಟ್ಟ ಕೆಳಮಟ್ಟ ವರ್ಗೀಕರಣದ ಕಾರಣದಿಂದಾಗಿ ಆಗುವ ಸಾಮಾಜಿಕ ವಿಭಜನೆಯಂತೆ ಪ್ರಾಪಂಚಿಕ ಕ್ರಿಯೆಯಲ್ಲಿ ವಿಭಿನ್ನ ಚಟುವಟಿಕೆಗಳಿರುತ್ತವೆ. ಭಕ್ತಿಸೇವೆಯ ಕ್ರಿಯೆಯಲ್ಲಿ ಅಂತಹ ಭೇದ ಭಾವಗಳಿಲ್ಲ.
– ಶ್ರೀಲ ಭಕ್ತಿವಿನೋದ ಠಾಕುರ, ಭಕ್ತ್ಯಾಲೋಕ, ಸರ್ಗ 12
* * * *
ಅಪಕೀರ್ತಿಯಂತಹ ಸಾವಿಲ್ಲ, ಕೋಪದಂತಹ ಶತ್ರುವಿಲ್ಲ, ಮತ್ತೊಬ್ಬರನ್ನು ಟೀಕಿಸುವಂತಹ ಪಾಪವಿಲ್ಲ ಹಾಗೂ ಭ್ರಮೆ ಭ್ರಾಂತಿಯಂತಹ ಮಾದಕ ದ್ರವ್ಯವಿಲ್ಲ.
– ನಾರದ ಪುರಾಣ 1.7.54
* * * *
ನಾಲಗೆ ಮೂಲಕ ಸಲ್ಲಿಸುವ ನಿರಂತರ ಸೇವೆಯನ್ನು ಅಸಂಖ್ಯ ರೀತಿಯಲ್ಲಿ ಪ್ರೀತಿಯಿಂದ ಆಸ್ವಾದಿಸಿದಾಗ ಮಕರಂದದಂತಹ ಶ್ರೀಕೃಷ್ಣನ ನಾಮವು ಹೃದಯಕ್ಕೆ ಪರಮಾನಂದ ನೀಡುತ್ತದೆ. ಶ್ರೀಕೃಷ್ಣನ ಪವಿತ್ರ ನಾಮಾಮೃತದ ಅನುಪಮ ಶ್ರೇಷ್ಠತೆಯನ್ನು ಯಾರಿಗೆ ತಾನೇ ವರ್ಣಿಸಲು ಸಾಧ್ಯ?
– ಗೋಪಕುಮಾರರಿಗೆ ವೈಕುಂಠದಿಂದ ಸಂದೇಶವಾಚಕರು
ಬೃಹದ್ ಭಾಗವತಾಮೃತ 2.3.159
* * * *
ಎಲ್ಲರಿಗೂ ಒಬ್ಬನೇ ದೇವರಿರುವುದು. ಹಿಂದುಗಳೂ ಮುಸ್ಲಿಮರೂ ಅನೇಕ ರೀತಿಯಲ್ಲಿ ಭಿನ್ನರು. ಆದರೂ, ನಿಜವೇನೆಂದರೆ ಕುರಾನ್ ಹಾಗೂ ಪುರಾಣಗಳು ಒಂದೇ ದೇವರನ್ನು ವರ್ಣಿಸುತ್ತವೆ. ಆ ಒಂದು ದೇವರು ಶುದ್ಧ, ಶಾಶ್ವತ, ಅಖಂಡ, ಅಚಲ, ಪರಿಪೂರ್ಣ ಮತ್ತು ಸಂಪೂರ್ಣ. ಅವನು ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾನೆ. ದೇವರು ಅವರಿಗೆ ಸಲಹೆ ನೀಡಿದಾಗ ಅವರು ಅದರಂತೆ ವರ್ತಿಸುತ್ತಾರೆ. ತಮ್ಮದೇ ಧರ್ಮಗ್ರಂಥಗಳನ್ನು ಅನುಸರಿಸುತ್ತ ಜಗತ್ತಿನ ಜನತೆ ದೇವರ ಹೆಸರು ಮತ್ತು ಗುಣಗಳ ಬಗೆಗೆ ಮಾತನಾಡುತ್ತಾರೆ. ದೇವರಿಗೆ ಪ್ರತಿಯೊಬ್ಬರ ಸ್ವಭಾವವೂ ಗೊತ್ತು. ಯಾರಾದರೂ ಬೇರೊಬ್ಬರ ಮೇಲೆ ದಾಳಿ ಮಾಡಿದರೆ ದೇವರ ಮೇಲೆ ಆಕ್ರಮಣ ಮಾಡಿದಂತೆ.
– ಶ್ರೀಲ ಹರಿದಾಸ ಠಾಕುರ
ಶ್ರೀ ಚೈತನ್ಯ ಭಾಗವತ, ಆದಿ ಖಂಡ 16.76-81
* * * *
ಯಾವ ರೀತಿಯ ಪ್ರಯತ್ನದಿಂದಲೂ ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಲಾಗದಿದ್ದರೆ, ಹೋಗಿ ವೈಷ್ಣವರ ಜೊತೆ ಕುಳಿತುಕೊಳ್ಳಿ. ನಿಮಗೆಲ್ಲ ಶುಭವಾಗುತ್ತದೆ.
– ಶ್ರೀ ರಾಮಾನುಜಾಚಾರ್ಯ
(ಶ್ರೀಲ ಭಕ್ತಿ ವಿನೋದ ಠಾಕುರರ ಭಕ್ತ್ಯಾಲೋಕದಲ್ಲಿ ಉಲ್ಲೇಖ)
* * * *
ಭಗವದ್ಭಕ್ತರೊಡನೆ ಸೇರಿಕೊಂಡು ಭಗವಂತನ ಮಹಿಮೆಗಳನ್ನು ಕೀರ್ತಿಸುತ್ತಾ, ಅವರ ಸಂಗ ಮಾಡುವುದು ಹೇಗೆ ಎಂದು ಕಲಿತುಕೊಳ್ಳಬೇಕು. ಈ ಪ್ರಕ್ರಿಯೆಯು ಅತ್ಯಂತ ಪಾವನಕಾರಿ. ಹೀಗೆ ಭಕ್ತರು ಪ್ರೇಮಮಯ ಸಖ್ಯವನ್ನು ಬೆಳೆಸಿಕೊಳ್ಳುತ್ತಲೇ, ಅವರು ಪರಸ್ಪರ ಸುಖ ಸಂತೃಪ್ತಿಗಳನ್ನು ಅನುಭವಿಸುತ್ತಾರೆ. ಹೀಗೆ ಪರಸ್ಪರ ಉತ್ತೇಜಿಸುತ್ತಾ ಅವರು ಭೌತಿಕ ಇಂದ್ರಿಯ ಸಂತುಷ್ಟಿಯನ್ನು ತೊರೆಯಲು ಸಮರ್ಥರಾಗುತ್ತಾರೆ. ಭೌತಿಕ ಇಂದ್ರಿಯ ಸಂತುಷ್ಟಿಯೇ ಸಕಲ ದುಃಖಗಳಿಗೆ ಕಾರಣ.
– ಶ್ರೀ ಪ್ರಬುದ್ಧ, ಶ್ರೀಮದ್ ಭಾಗವತ: 11.3.30
* * * *