ಕೃಷ್ಣನ ಮೃದುತಲವಾದ ಬೆರಳುಗುರುಗಳನ್ನು, ಅವನ ಚಲಿಸುವ ಕಣ್ಣುಗಳನ್ನೂ ಎಲೆಯಡಿಕೆ ಮೆದ್ದುದರ ಕಾರಣ ಕಾಚು ಬಣ್ಣಕ್ಕೆ ತಿರುಗಿದ್ದ ಅವನ ಹಲ್ಲುಗಳನ್ನು ನೆನೆದು ಕೆಲವು ಸಲ ಆ ಗೋಪಿಯರು ಕೃಷ್ಣನನ್ನು ಧ್ಯಾನಿಸಿದರು. ಆ ದೃಶ್ಯವನ್ನು ಗೋಪಿಯೊಬ್ಬಳು ತನ್ನ ಗೆಳತಿಗೆ ಹೀಗೆ ವರ್ಣಿಸುತ್ತಾಳೆ: “ಪ್ರಿಯ ಸಖಿ, ಈ ಅಘದ್ವಿಷನು ಎಂತಹ ಮನೋಹರವಾದ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಾನೆಂಬುದನ್ನು ಹಾಗೆ ನೋಡೆ! ಅವನ ಹುಬ್ಬುಗಳು ಮನ್ಮಥನ ಹುಬ್ಬುಗಳಂತಿವೆ; ಅವಾದರೋ ನರ್ತಿಸುತ್ತಿವೆಯೋ ಎಂಬಂತೆ ಚಲಿಸುತ್ತವೆ ಕಣೆ. ಇನ್ನು ಅವನ ಉಗುರುಗಳೋ ಬಿದಿರಿನ ಗರಿಗಳಂತಿವೆಯಮ್ಮ. ಕೆಂಬಣ್ಣದ ಅವನ ಹಲ್ಲುಗಳಾದರೂ ಅವನಿಗೆ ಕೋಪ ಬಂದಿದೆಯೇನೋ ಎನ್ನುವ ಭ್ರಮೆ ಕವಿಸುತ್ತದೆ. ಹೀಗಿರುವಾಗ ಅವನಿಗೆ ವಶಳಾಗದೆ ಇರುವುದು ಯಾವ ಯುವತಿಗಾದರೂ ಹೇಗೆ ಸಾಧ್ಯ? ಅಂತಹ ಸೌಂದರ್ಯಕ್ಕೆ ಬಲಿಯಾಗುವ ಭಯಪಡದಿರುವುದು ಸಾಧ್ಯವೆ?”
– ಶ್ರೀಲ ರೂಪ ಗೋಸ್ವಾಮಿ, ಭಕ್ತಿರಸಾಮೃತ ಸಿಂಧು
* * * *
ಓ, ಭಗವಂತ, ನಾನು ನಿನ್ನ ಕೈಯಲ್ಲಿನ ಸೂತ್ರದ ಗೊಂಬೆಯಂತೆ. ನೀನು ನನ್ನನ್ನು ಇಲ್ಲಿಗೆ ನರ್ತಿಸಲೆಂದು ಕರೆತಂದಿದ್ದರೆ ನಾನು ನರ್ತಿಸುವಂತೆ ಮಾಡು. ಪ್ರಭು, ನಿನಗೆ ಹೇಗೆ ಇಷ್ಟವೋ ಹಾಗೆ ನಾನು ನರ್ತಿಸುವಂತೆ ಮಾಡು. ನನ್ನಲ್ಲಿ ಭಕ್ತಿ ಇಲ್ಲ ಅಥವಾ ಜ್ಞಾನವೂ ಇಲ್ಲ. ಆದರೆ ಕೃಷ್ಣ ಎಂಬ ಪವಿತ್ರ ನಾಮದಲ್ಲಿ ಬಲವಾದ ನಂಬಿಕೆ ಉಂಟು. ನನ್ನನ್ನು ಭಕ್ತಿವೇದಾಂತ ಎಂದು ಹೆಸರಿಸಲಾಗಿದೆ. ಈಗ, ನಿನಗೆ ಇಷ್ಟವಾದರೆ, ನೀನು ಭಕ್ತಿವೇದಾಂತದ ನಿಜವಾದ ಅರ್ಥವನ್ನು ಫಲಪ್ರದಗೊಳಿಸಬಹುದು.
– ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಜಲದೂತ ಹಡಗಿನಲ್ಲಿ, ಕಾಮನ್ವೆಲ್ತ್ ಪಿಯರ್, ಬಾಸ್ಟನ್, ಮೆಸಾಚುಸೆಟ್ಸ್, ಅಮೆರಿಕ, ಸೆ. 18, 1965.
* * * *
ಇಂತಹ ಅಪರೂಪದ ಮಾನವ ದೇಹ ನಿಮಗೆ ಲಭಿಸಿದೆ. ಆದರೆ ನಿಮಗೆ ಈ ಉಡುಗೊರೆ ಬಗೆಗೆ ಲಕ್ಷ್ಯವಿಲ್ಲ. ನೀವು ಯಶೋದಾಳ ಪ್ರೀತಿಯ ಪುತ್ರನಿಗೆ ಸೇವೆ ಸಲ್ಲಿಸದೆ ಉಳಿದಿರುವಿರಿ ಮತ್ತು ನೀವು ನಿಮ್ಮ ಸಾವಿನ ಕೊನೆ ಕ್ಷಣದತ್ತ ಕ್ರಮೇಣ ಜಾರುವಿರಿ. ಪ್ರತಿ ಸೂರ್ಯೋದಯ ಮತ್ತು ಸೂರ್ಯಾಸ್ತದೊಂದಿಗೆ, ಒಂದು ದಿನ ಕಳೆದು ಹೋಗುತ್ತದೆ ಮತ್ತು ವ್ಯರ್ಥವಾಗಿಬಿಡುತ್ತದೆ. ಹಾಗಾದರೆ, ನೀವು ಯಾಕೆ ಸೋಮಾರಿಯಾಗಿಯೇ ಇರುವಿರಿ ಮತ್ತು ಹೃದಯದ ರಾಜನಿಗೇಕೆ ಸೇವೆ ಸಲ್ಲಿಸುತ್ತಿಲ್ಲ? ಈ ತಾತ್ಕಾಲಿಕ ಬದುಕು ಸಂಕಷ್ಟಗಳಿಂದ ತುಂಬಿದೆ. ನಿಮ್ಮ ಏಕೈಕ ವ್ಯವಹಾರವಾಗಿ ಪವಿತ್ರ ನಾಮದ ಆಶ್ರಯ ಪಡೆಯಿರಿ.
– ಶ್ರೀಲ ಭಕ್ತಿವಿನೋದ ಠಾಕುರ, ಅರುಣೋದಯ ಕೀರ್ತನ
* * * *
ಐಹಿಕ ಆನಂದದ ನನ್ನ ಅಪೇಕ್ಷೆ ಅಮುಖ್ಯವಾಗುವಂತೆ ಶ್ರೀ ನಿತ್ಯಾನಂದರ ಕೃಪೆ ನನಗೆ ಅನುಗ್ರಹವಾಗುವ ದಿನ ಎಂದು ಬಂದೀತು? ನನ್ನ ಮನಸ್ಸು ಪೂರ್ಣವಾಗಿ ಪರಿಶುದ್ಧವಾದ ಮೇಲೆ, ಐಹಿಕ ಆತಂಕ ಮತ್ತು ಆಸೆಗಳಿಂದ ಮುಕ್ತವಾದ ಮೇಲೆ ನಾನು ವೃಂದಾವನ ಮತ್ತು ರಾಧಾ ಕೃಷ್ಣರ ಮಧುರ ಪ್ರೇಮವನ್ನು ಅರ್ಥಮಾಡಿಕೊಳ್ಳಬಹುದು. ಆಗ ನನ್ನ ಆಧ್ಯಾತ್ಮಿಕ ಬದುಕು ಸಾರ್ಥಕ. ಆರು ಗೋಸ್ವಾಮಿಗಳು ಬಿಟ್ಟು ಹೋಗಿರುವ ಗ್ರಂಥಗಳ ಅಧ್ಯಯನ ಮಾಡಲು ನಾನು ಯಾವಾಗ ಕಾತರನಾಗುವೆ? ಈ ಗೋಸ್ವಾಮಿಗಳ ಬೋಧನೆಗಳ ಮೂಲಕ ರಾಧಾ ಕೃಷ್ಣರ ಮಧುರ ಪ್ರೇಮವನ್ನು ಅರಿತುಕೊಳ್ಳಬೇಕು.
– ಶ್ರೀಲ ನರೋತ್ತಮ ದಾಸ ಠಾಕುರ, ಲಾಲಸಯಾಮಯಿ ಪ್ರಾರ್ಥನಾ
* * * *






Leave a Reply