ಕೃಷ್ಣ ಪಾಕಶಾಲೆ

ದೇವಾಲಯದ ರಾಜ್‌ಭೋಗ್ ತಿನಿಸುಗಳು

ವಿಭಿನ್ನ ದಾಲ್‌ಗಳು

ಪಂಚರಾತ್ರ ಆಗಮದ ಪ್ರಕಾರ ದೇವತಾ ವಿಗ್ರಹದ ಅರ್ಚನೆಯಲ್ಲಿ ಅನೇಕ ಕ್ರಮಗಳನ್ನು ಹಾಗೂ ಉಪಚಾರಗಳನ್ನು ನೆರವೇರಿಸಬೇಕಾಗುತ್ತದೆ. ಅದರಲ್ಲಿ ಅರ್ಚಾ ವಿಗ್ರಹಕ್ಕೆ ಅರ್ಪಿಸಬೇಕಾದ ನೈವೇದ್ಯಕ್ಕೆ ವಿಶೇಷ ಸ್ಥಾನವಿದೆ. ದಿನನಿತ್ಯ ಮುಂಜಾನೆಯಿಂದ ಹಿಡಿದು ರಾತ್ರಿಯವರೆಗೆ ಏಳು ತರಹದ ನೈವೇದ್ಯಗಳನ್ನು ರಾಧಾಕೃಷ್ಣ ದೇವಾಲಯದಲ್ಲಿ ಅರ್ಪಿಸಲಾಗುತ್ತದೆ.

ಅದರಲ್ಲಿ ವಿಶೇಷವಾದದ್ದು ಮಧ್ಯಾಹ್ನ 12:00ಕ್ಕೆ ಅರ್ಪಿಸುವ ರಾಜಭೋಗ. ಈ ನೈವೇದ್ಯದಲ್ಲಿ ಹಲವಾರು ವಿಶೇಷ ಭಕ್ಷ್ಯಗಳನ್ನು ಅರ್ಪಿಸುವುದು ವಾಡಿಕೆ. ಭಗವಂತನಿಗಾಗಿ ನೈವೇದ್ಯವನ್ನು ಸಿದ್ಧಪಡಿಸುವುದರಲ್ಲಿ ಭಕ್ತರ ದೊಡ್ಡ ತಂಡವೇ ಪಾಲ್ಗೊಳ್ಳುತ್ತದೆ.

ಶ್ರೀಮತಿ ಲಕ್ಷ್ಮೀ ಪ್ರಿಯ ದೇವಿ ದಾಸಿ ಅವರಲ್ಲಿ ಒಬ್ಬರು. ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ಭೋಗದ ಸಿದ್ಧತಾ ವಿಧಾನವನ್ನು ಅವರು ನೀಡಿದ್ದಾರೆ. ನಿಮ್ಮ ಮನೆಯಲ್ಲಿ ನೀವೂ ಸಿದ್ಧಪಡಿಸಿ, ರಾಧಾಕೃಷ್ಣರಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಿ.

ಮಿಶ್ರ ದಾಲ್

ಬೇಕಾಗುವ ಪದಾರ್ಥ:

ಹೆಸರು ಬೇಳೆ – 1 ಟೇಬಲ್ ಚಮಚ

ಉದಿನ ಬೇಳೆ – 1 ಟೇಬಲ್ ಚಮಚ

ಕಡಲೆ ಬೇಳೆ – 1 ಟೇಬಲ್ ಚಮಚ

ತೊಗರಿ ಬೇಳೆ – 2 ಟೇಬಲ್ ಚಮಚ

ಜೀರಿಗೆ – 1 ಟೀ ಚಮಚ

ಧನಿಯಾ ಪುಡಿ – 2 ಟೀ ಚಮಚ

ಮೆಣಸಿನ ಪುಡಿ – 1 ಟೀ ಚಮಚ

ಅರಿಸಿನ ಪುಡಿ – 1/2 ಟೀ ಚಮಚ

ಕೊತ್ತಂಬರಿ ಸೊಪ್ಪು – 1/2 ಕಟ್ಟು

ತುಪ್ಪ – 3 ಟೇಬಲ್ ಚಮಚ

ಬೆಣ್ಣೆ – 2 ಟೇಬಲ್ ಚಮಚ

ಟೊಮ್ಯಾಟೋ – 1,

ಉಪ್ಪು- ರುಚಿಗೆ ತಕ್ಕಷ್ಟು

ಗಟ್ಟಿ ಮೊಸರು – 1 ಬಟ್ಟಲು

ಗರಂ ಮಸಾಲೆ – 1/2 ಟೀ ಚಮಚ

ಟಿಪ್: ಈ ಮೇಲಿನ ಮಿಶ್ರ ದಾಲ್‌ ಗೆ ಮಿಶ್ರ ಬೀನ್ಸ್, ಸೋರೆಕಾಯಿ, ಕ್ಯಾರಟ್ ಬೇಯಿಸಿ ಸಹ ಒಗ್ಗರಣೆ ಕೊಡಬಹುದು.

ಮಾಡುವ ವಿಧಾನ: ಒಂದು ಗಂಟೆ ಕಾಲ ಎಲ್ಲ ಬೇಳೆಗಳನ್ನು ನೆನೆಸಿಡಿ. ಅನಂತರ ಬೇಳೆಗಳನ್ನು ಒಂದು ಲೀಟರ್ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಬೇಳೆ ಬೆಂದ ಅನಂತರ ಧನಿಯಾ ಪುಡಿ, ಮೆಣಸಿನ ಪುಡಿ, ಅರಿಸಿನ ಪುಡಿ, ಮತ್ತು ಉಪ್ಪು ಹಾಕಿ ಕುದಿಸಿ, ಅನಂತರ ಬೆಣ್ಣೆ, ಟೊಮ್ಯಾಟೋ, ಮೊಸರು ಮತ್ತು ಗರಂ ಮಸಾಲೆ ಹಾಕಿ 3 ನಿಮಿಷ ಕೈಯಾಡಿಸಿ ಇದನ್ನು ಬೆಂದ ಬೇಳೆಗೆ ಹಾಕಿ 5 ನಿಮಿಷ ಕುದಿಸಿ.

ಬೆಣ್ಣೆ ಕಾಯಿಸಿದ ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಮಾಡಿ ದಾಲ್‌ಗೆ ಬೆರೆಸಿ. ಕೊತ್ತಂಬರಿ ಚಿಕ್ಕದ್ದಾಗಿ ಕತ್ತರಿಸಿ, ಅಲಂಕಾರವಾಗಿ ಹಾಕಿ, ಕೃಷ್ಣನಿಗೆ ರೋಟಿ ಅಥವಾ ಅನ್ನದ ಜೊತೆ ಅರ್ಪಿಸಿ.

ಗುಜರಾತಿ ದಾಲ್‌

ಬೇಕಾಗುವ ಪದಾರ್ಥ:

ತೊಗರಿ ಬೇಳೆ – 2 ಬಟ್ಟಲು

ಹೆಚ್ಚಿಟ್ಟ ಸುವರ್ಣಗೆಡ್ಡೆ – 1 ಬಟ್ಟಲು

ಕಡಲೆಕಾಯಿ ಬೀಜ – 2 ಟೇಬಲ್ ಚಮಚ

ಬೀರುಂಡ ಹಣ್ಣು (ಪುನರ್‌ಪುಳಿ ಅಥವಾ ಕೋಕಮ್) – ಚಿಕ್ಕದಾಗಿ ಕತ್ತರಿಸಿ, ನೆನೆಸಿಡಬೇಕು (ಇದು ಯಾವುದೇ ಮಂಗಳೂರು ಸ್ಟೋರಿನಲ್ಲಿ ದೊರೆಯುತ್ತದೆ)

ಚಿಕ್ಕದಾಗಿ ಕತ್ತರಿಸಿದ 2 ಟೊಮ್ಯಾಟೋ

ಬೆಲ್ಲ – 50 ಗ್ರಾಂ 1/2 ನಿಂಬೆಹಣ್ಣಿನ ರಸ, 1 ಚಿಕ್ಕ ತುಂಡು ಶುಂಠಿ

4 ಹಸಿ ಮೆಣಸಿನಕಾಯಿ

ಕೆಂಪು ಮೆಣಸಿನ ಪುಡಿ – 1/2 ಟೀ ಚಮಚ

ಅರಿಸಿನ ಪುಡಿ –  1/2 ಟೀ ಚಮಚ

ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಸ್ವಲ್ಪ

ಒಗ್ಗರಣೆಗೆ : ಸಾಸಿವೆ – 1/2 ಟೀ ಚಮಚ

ಮೆಂತ್ಯ ಕಾಳು –  1/2 ಟೀ ಚಮಚ

ಕರಿಬೇವು –  2 ಎಸಳು

ಚಕ್ಕೆ –  2

ಲವಂಗ – 2  ಗರಂ ಮಸಾಲೆ ಎಲೆ – 1

ಗುಂಡು ಕೆಂಪು ಮೆಣಸಿನ ಕಾಯಿ – 2

ತುಪ್ಪ – 2 ಟೀ ಚಮಚ

ಖಾದ್ಯತೈಲ – 1 ಟೇಬಲ್ ಚಮಚ

ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ತೊಗರಿ ಬೇಳೆಯನ್ನು ಒಂದು ಕುಕ್ಕರ್‌ ಪಾತ್ರೆಯಲ್ಲಿ ಹದವಾಗಿ ಬೇಯಿಸಿ. ಸುವರ್ಣಗೆಡ್ಡೆ, ಕಡಲೆಕಾಯಿ ಬೀಜ, ಬೇರೊಂದು ಕುಕ್ಕರ್ ಪಾತ್ರೆಯಲ್ಲಿ ಬೇಯಿಸಿ. ಬೆಂದ ಬೇಳೆಯನ್ನು ಸ್ವಲ್ಪ ಕಡೆಗೋಲಲ್ಲಿ ಮಸೆಯಬೇಕು.

ಒಗ್ಗರಣೆಗೆ ತುಪ್ಪ ಕಾಯಿಸಿ, ಎಣ್ಣೆ, ಸಾಸಿವೆ, ಜೀರಿಗೆ, ಮೆಂತ್ಯಕಾಳು, ಕರಿಬೇವು, ಚೆಕ್ಕೆ, ಲವಂಗ, ಗರಂ ಮಸಾಲೆ ಎಲೆ, ಕೆಂಪು ಮೆಣಸು, ಇಂಗು,3 ಬಟ್ಟಲು ನೀರು ಹಾಕಿ, ಬೀರುಂಡ ಹಣ್ಣು ಟೊಮ್ಯಾಟೋ, ಬೆಲ್ಲ, ನಿಂಬೆಹಣ್ಣು ಶುಂಠಿ, ಹಸಿಮೆಣಸು, ಕೆಂಪು ಮೆಣಸಿನ ಪುಡಿ, ಅರಿಶಿನಪುಡಿ ಹಾಕಿ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.

ಬೆಂದ ಬೇಳೆ, ಸುವರ್ಣ ಗಡ್ಡೆ, ಕಡಲೆಕಾಯಿ ಹಾಗೂ ಉಪ್ಪು ಹಾಕಿ 10-15 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ, ಭಗವಂತನಿಗೆ ಚಪಾತಿ ಅಥವಾ ಪೂರಿಯೊಂದಿಗೆ ನೈವೇದ್ಯ ಮಾಡಿ ಸ್ವೀಕರಿಸಿ.

ಪಾಲಕ್ ಸೊಪ್ಪಿನ ದಾಲ್

ಬೇಕಾಗುವ ಪದಾರ್ಥ:

ಪಾಲಕ್ ಸೊಪ್ಪು – 4 ಕಟ್ಟು

ತೊಗರಿ ಬೇಳೆ –  250 ಗ್ರಾಂ

ಟೊಮ್ಯಾಟೋ – 4

ಹಸಿ ಮೆಣಸಿನಕಾಯಿ – 5  

ಧನಿಯಾ ಪುಡಿ – 2 ಟೀ ಚಮಚ

ಒಗ್ಗರಣೆಗೆ:

ತುಪ್ಪ – 1 ಟೇಬಲ್ ಚಮಚ

ಖಾದ್ಯತೈಲ –  1 ಟೇಬಲ್ ಚಮಚ

ಜೀರಿಗೆ – 1 1/2 ಟೀ ಚಮಚ

ಸಾಸಿವೆ –  1/2 ಚಮಚ

ಇಂಗು ಸ್ವಲ್ಪ

ಅರಿಸಿನ ಪುಡಿ  – 2 ಚಿಟಿಕೆ

ಕರಿಬೇವು – 2 ಎಸಳು

ಮಾಡುವ ವಿಧಾನ: ಪಾಲಕ್ ಸೊಪ್ಪನ್ನು ಚೆನ್ನಾಗಿ 3-4 ಬಾರಿ ನೀರಿನಲ್ಲಿ ಶುಚಿಗೊಳಿಸಿ ಹಾಗೂ ಹಸಿಮೆಣಸಿನ ಕಾಯಿಯನ್ನು ಉದ್ದವಾಗಿ ಸೀಳಿಟ್ಟುಕೊಳ್ಳಿ. ಆನಂತರ ಬೇಳೆ, ಪಾಲಕ್, ಟೊಮ್ಯಾಟೊ, ಹಸಿಮೆಣಸಿನಕಾಯಿ ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ. ಬೆಂದ ಬೇಳೆ, ಪಾಲಕ್, ಟೊಮ್ಯಾಟೋ ಹಸಿಮೆಣಸನ್ನು ರುಬ್ಬಿಕೊಳ್ಳಿ.

ತುಪ್ಪ ಮತ್ತು ಖಾದ್ಯತೈಲ ಕಾಯಿಸಿ ಜೀರಿಗೆ, ಸಾಸಿವೆ, ಕರಿಬೇವು, ಇಂಗು, ಅರಿಶಿನ ಹಾಕಿ ರುಬ್ಬಿದ ಪಾಲಕ್ ಮಿಶ್ರಣವನ್ನು ಹೆಚ್ಚು ತೆಳ್ಳಗೂ ಮಾಡದೇ ಗಟ್ಟಿಯಾಗೂ ಮಾಡದೇ ಹದವಾಗಿ ನೀರು ಬೆರೆಸಿ, ಅನಂತರ ಧನಿಯಾಪುಡಿ, ಉಪ್ಪು ಹಾಕಿ 5-10 ನಿಮಿಷ ಕುದಿಸಿ. ಭಗವಂತನಿಗೆ ಚಪಾತಿ ಅಥವಾ ಪೂರಿಯೊಂದಿಗೆ ನೈವೇದ್ಯ ಮಾಡಿ ಸ್ವೀಕರಿಸಿ.

ತಂಪಿಗೆ ಹೆಸರಾದ ಸಬಕ್ಕಿ ಸೊಪ್ಪಿನ ದಾಲ್

ಬೇಕಾಗುವ ಪದಾರ್ಥ:

ಸಬ್ಬಕ್ಕಿ ಸೊಪ್ಪು – 4 ಕಟ್ಟು

ಹೆಸರುಬೇಳೆ  – 250 ಗ್ರಾಂ

ಟೊಮ್ಯಾಟೋ – 4

ಕೆಂಪು ಮೆಣಸಿನ ಕಾಯಿ – 4-5

ಒಗ್ಗರಣೆಗೆ :

ತುಪ್ಪ – 2 ಟೇಬಲ್ ಚಮಚ

ಜೀರಿಗೆ – 1 1/2 ಟೀ ಚಮಚ

ಸಾಸಿವೆ – 1/2 ಚಮಚ

ಅರಿಶಿನ ಪುಡಿ – 2 ಚಿಟಿಕೆ

ಕರಿಬೇವು – 2 ಎಸಳು

ಸ್ವಲ್ಪ ಇಂಗು,

ಕೊತ್ತಂಬರಿ ಸೊಪ್ಪು – ಸ್ವಲ್ಪ

ತುರಿದ ತೆಂಗಿನಕಾಯಿ – 1/2 ಬಟ್ಟಲು

ಮಾಡುವ ವಿಧಾನ: ಮೊದಲಿಗೆ ಕುಕ್ಕರಿನಲ್ಲಿ ಸಬ್ಬಕ್ಕಿ ಸೊಪ್ಪು, ಹೆಸರು ಬೇಳೆ, ಟೊಮ್ಯಾಟೋ ಬೇಯಿಸಿ ತುಪ್ಪ ಕಾಯಿಸಿ, ಜೀರಿಗೆ, ಸಾಸಿವೆ, ಕೆಂಪು ಮೆಣಸಿನ ಕಾಯಿ, ಕರಿಬೇವು, ಇಂಗು ಹಾಕಿ ಬೇಯಿಸಿದ ದಾಲ್ ಹಾಕಿ ಕುದಿಸಿ. ಉಪ್ಪು ಅರಿಶಿನ ಪುಡಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ಹಾಕಿ ಅಲಂಕರಿಸಿ.  ಅಕ್ಕಿ ರೋಟಿ ಅಥವಾ ಚಪಾತಿಯೊಂದಿಗೆ ಭಗವಂತನಿಗರ್ಪಿಸಿ ಸೇವಿಸಿ.

ಪಂಚಕುಟಿ ದಾಲ್ (5 ತರಹ ಪೌಷ್ಟಿಕ ದಾಲ್)

ಬೇಕಾಗುವ ಪದಾರ್ಥ :

ಕಪ್ಪು ಉದಿನ ಕಾಳು, ತೊಗರಿ ಬೇಳೆ, ಹೆಸರು ಬೇಳೆ, ಹೆಸರು ಕಾಳು, ಕಡಲೆ ಬೇಳೆ ತಲಾ 1 ಟೇಬಲ್ ಚಮಚ

ಸಾಸಿವೆ – 1 ಟೀ ಚಮಚ

ಜೀರಿಗೆ – 1 ಟೀ ಚಮಚ

ಚೆಕ್ಕೆ – 2

ಲವಂಗ – 2

ಕರಿಬೇವು – 2 ಎಸಳು

ಶುಂಠಿ – ಒಂದು ತುಂಡು

ಕೆಂಪು ಮೆಣಸಿನಕಾಯಿ – 4

ಹಸಿ ಮೆಣಸಿನಕಾಯಿ –  3

ಟೊಮ್ಯಾಟೋ – 2

ಕೊತ್ತಂಬರಿ ಸೊಪ್ಪು – ಸ್ವಲ್ಪ

ಗರಂ ಮಸಾಲೆ ಪುಡಿ –  1/2 ಟೀ ಚಮಚ

ನಿಂಬೆ ಹಣ್ಣಿನ ರಸ – 1/2

ಖಾದ್ಯತೈಲ – 2 ಚಮಚ

ಉಪ್ಪು –  ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಎಲ್ಲ ಬೇಳೆಗಳನ್ನು ಒಂದು ಗಂಟೆಕಾಲ ನೆನೆಸಿಟ್ಟು ಆನಂತರ ಬೇಯಿಸಿಟ್ಟುಕೊಳ್ಳಿ. ತುಪ್ಪ, ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಹಾಕಿ, ರುಬ್ಬಿಟ್ಟುಕೊಂಡ ಶುಂಠಿ ಹಾಕಿ, ಟೊಮ್ಯಾಟೋ ಹಾಗೂ ಗರಂ ಮಸಾಲೆ ಪುಡಿ, ಬೇಳೆಗಳು, ಕೊತ್ತಂಬರಿ, ನಿಂಬೆ ಹಣ್ಣು, ಉಪ್ಪು ಹಾಕಿ 10 ನಿಮಿಷ ಬೇಯಿಸಿ, ಬಿಸಿ ಬಿಸಿಯಾಗಿ ರೋಟಿ ಜೊತೆಗೆ ಕೃಷ್ಣನಿಗೆ ಅರ್ಪಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

One response to “ಕೃಷ್ಣ ಪಾಕಶಾಲೆ”

  1. Keerthana Avatar
    Keerthana

    Nice actually I will try to make one of the recipe from this .
    Hare krishna 🙏🏻

UPI ID : bvdsstseva@sbi