ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ವಿದ್ಯಾರ್ಥಿಗಳ ನಡುವೆ 1975ರ ಜುಲೈನಲ್ಲಿ ಷಿಕಾಗೋದಲ್ಲಿ ನಡೆದ ಸಂವಾದ.
ವಿದ್ಯಾರ್ಥಿ: ಪಾಶ್ಚಾತ್ಯ ಜಗತ್ತು ಆಧ್ಯಾತ್ಮಿಕವಾಗಿ ಕುರುಡಾಗಿದೆ. ಅಂತೆಯೇ ಭಾರತ ತಾಂತ್ರಿಕವಾಗಿ ಕುಂಟು ಎಂದಿದ್ದೀರಿ. ಇವೆರಡೂ ತಮ್ಮ ತಮ್ಮ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಒಗ್ಗೂಡಿಸಿದರೆ, ಭಾರತವೂ ಪಾಶ್ಚಾತ್ಯ ಪ್ರಪಂಚವೂ ಲಾಭ ಪಡೆಯಬಹುದು ಎಂದು ಈ ಹಿಂದೆ ಹೇಳಿದ್ದೀರಿ.
ಶ್ರೀಲ ಪ್ರಭುಪಾದ: ಹೌದು; ಪಾಶ್ಚಾತ್ಯ ಅಂಧ ಜಗತ್ತು, ಕುಂಟ ಭಾರತವನ್ನು ಹೆಗಲಿಗೇರಿಸಿಕೊಂಡರೆ, ಕುಂಟನು ಅಧ್ಯಾತ್ಮದ ಮಾರ್ಗವನ್ನು ಅಂಧನಿಗೆ ತಿಳಿಸಬಹುದು. ಮತ್ತು ಅಂಧನು ಭೌತಿಕವಾಗಿ, ತಾಂತ್ರಿಕವಾಗಿ ಕೆಲಸ ನಿಭಾಯಿಸಬಹುದು. ಅಮೆರಿಕ ಮತ್ತು ಭಾರತ ತಮ್ಮ ತಾಂತ್ರಿಕ ಮತ್ತು ಆಧ್ಯಾತ್ಮಿಕ ಸಂಪನ್ಮೂಲಗಳನ್ನು ಒಗ್ಗೂಡಿಸಿದರೆ – ಇಡೀ ಪ್ರಪಂಚದಲ್ಲಿ ಶಾಂತಿ ಮತ್ತು ಸಂಪತ್ ಸಮೃದ್ಧಿಯನ್ನು ಸಾಧಿಸಬಹುದು.

ಈ ಅಮೆರಿಕನ್ನರು, ಇವರೆಂಥ ಅಂಧರು – ಅವರು ಮಾನವ ದೇಹವನ್ನು ಹೊತ್ತಿದ್ದಾರೆ – ಎಂಥ ಬುದ್ಧಿವಂತ ಶರೀರ – ಆದರೂ ತಮ್ಮ ಬುದ್ಧಿಯನ್ನು ಸರೋವರದಲ್ಲಿ ವಿಹರಿಸಲು ಮೋಟಾರ್ ಬೋಟುಗಳನ್ನು ಮಾಡಲು ಬಳಸುತ್ತಾರೆ ನೋಡಿದಿರಾ? ಪ್ರತಿಯೊಬ್ಬನೂ ದೈವಪ್ರಜ್ಞೆಯನ್ನು ಮತ್ತೆ ಗಳಿಸಲು ಪ್ರತಿಯೊಂದು ಕ್ಷಣವನ್ನು ಬಳಸಿಕೊಳ್ಳಬೇಕು. ಒಂದೇ ಒಂದು ಕ್ಷಣವನ್ನು ವ್ಯರ್ಥಗೊಳಿಸಬಾರದು. ಈ ಮಂದಿ ಕಾಲಹರಣಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ನಿಜ; ಅಮೆರಿಕನ್ನರು (ಅಭಿವೃದ್ಧಿ ಹೊಂದುವ ಮಾರ್ಗದಲ್ಲಿ) ಕೈಗೊಳ್ಳುತ್ತಿರುವ ಕ್ರಮಗಳು ನೋಡಲಿಕ್ಕೆ ಚೆನ್ನ. ಅವರ ತಾಂತ್ರಿಕ ಅಭಿವೃದ್ಧಿ ಅತಿ ದೊಡ್ಡದು. ಆದರೆ ಅವರು ಮಾಡುತ್ತಿರುವುದೆಲ್ಲವೂ ಕುರುಡುಗೆಲಸ. ನೀವು ಒಬ್ಬ ಒಳ್ಳೆಯ ಚಾಲಕನಾಗಿರಬಹುದು. ಆದರೆ, ಕುರುಡನಾಗಿದ್ದರೆ, ಹೇಗೆ ಚಲಾಯಿಸುವಿರಿ. ನೀವು ಅಪಾಯಕಾರಿ. ಆದುದರಿಂದ ಅಮೆರಿಕನ್ನರು ಆಧ್ಯಾತ್ಮಿಕದತ್ತ ಕಣ್ಣು ತೆರೆಯಬೇಕು. ಆಗಷ್ಟೆ ಅವರ ಚಾಲನ ಸಾಮರ್ಥ್ಯಕ್ಕೆ ಒಂದು ಗೊತ್ತು ಗುರಿ ಸಿಗುತ್ತೆ. ಅದನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬಹುದು. ಈಗ ಅವರು ನೋಡುತ್ತಿರುವುದು ಸೂಕ್ಷ್ಮದರ್ಶಕ ಯಂತ್ರದಲ್ಲಿ. ತಮ್ಮ ಆಧ್ಯಾತ್ಮಿಕ ಅಂಕಿತವನ್ನೆ ಅರಿಯದವರು. ಮತ್ತೇನನ್ನು ನೋಡಿಯಾರು? ಅವರಲ್ಲಿ ಸೂಕ್ಷ್ಮದರ್ಶಕ ಇರಬಹುದು, ಆ ಯಂತ್ರ ಈ ಯಂತ್ರ ಇರಬಹುದು. ಆದರೆ ಅವರು ಕುರುಡರು. ಅವರಿಗೆ ಅದು ಗೊತ್ತಿಲ್ಲ.
ವಿದ್ಯಾರ್ಥಿ: ಬಹುತೇಕ ಅಮೆರಿಕನ್ನರು – ಆತ್ಮಸಾಕ್ಷಾತ್ಕಾರಕ್ಕಿಂತಲೂ – ತಮ್ಮ ಕುಟುಂಬ ನಿರ್ವಹಣೆಯ ಕಡೆಗೆ ಹೆಚ್ಚು ಆಸಕ್ತಿ ತಳೆಯುತ್ತಾರೆ.
ಶ್ರೀಲ ಪ್ರಭುಪಾದ: ಕೃಷ್ಣಪ್ರಜ್ಞೆಗೆ ಕೌಟುಂಬಿಕ ಜೀವನದಿಂದ ಚ್ಯುತಿಬಾರದು. `ಅಹೈತುಕೀ ಅಪ್ರತಿಹತಾಃ’ ದೈವಪ್ರಜ್ಞೆಯನ್ನು ಬೇರಾವುದರಿಂದಲೂ ತಡೆಯಲಾಗದು – ನೀವು ನಿಷ್ಠಾವಂತರಾಗಿದ್ದರೆ ಯಾವುದೇ ಸನ್ನಿವೇಶದಲ್ಲಿ ಸಹ ನೀವು ಕೃಷ್ಣಪ್ರಜ್ಞೆಯಲ್ಲಿ ತೊಡಗಬಹುದು. ನೀವು ಕೃಷ್ಣಪ್ರಜ್ಞೆಯನ್ನೇ ನಾಲ್ಕು ವಿಧಗಳಲ್ಲಿ ಕಾರ್ಯರೂಪಕ್ಕೆ ತರಬಹುದು. `ಪ್ರಾಣೈಃ ಅರ್ಥೈಃ ಯಾ ವಾಚಾ’ ನಿಮ್ಮ ಬದುಕು, ನಿಮ್ಮ ಧನ, ನಿಮ್ಮ ಬುದ್ಧಿ, ನಿಮ್ಮ ಮಾತುಗಳು. ನೀವು ಒಬ್ಬ ಸಂಸಾರವಂದಿಗನಾಗಿದ್ದರೆ – ನಿಮಗೆ ಇದಕ್ಕೆ ಇಪತ್ನಾಲ್ಕು ತಾಸು ಮೀಸಲಿರಿಸಲು ಸಾಧ್ಯವಾಗದಿದ್ದರೆ ಹಣಗಳಿಸಿ ಕೃಷ್ಣಪ್ರಜ್ಞಾ ಪ್ರಚಾರದಲ್ಲಿ ತೊಡಗಿಸಿ; ನೀವು ಹಣಗಳಿಸಲಾರಿರಿ ಎಂದಾಗ ನಿಮ್ಮ ಮೇಧಾಶಕ್ತಿಯನ್ನು ಬಳಸಬಹುದು. ಬುದ್ಧಿಚಾತುರ್ಯದಿಂದ ಬಹಳಷ್ಟು ಕಾರ್ಯ ಸಾಧಿಸಬಹುದು. ಪ್ರಕಟಣೆ, ಸಂಶೋಧನೆ ಇತ್ಯಾದಿ. ಅದೂ ಮಾಡಲು ಸಾಧ್ಯವಾಗದಿದ್ದರೆ, ಮಾತಿನ ಮೂಲಕ ಕೃಷ್ಣನ ಕುರಿತು ಪ್ರಚಾರ ಮಾಡಿ. ನೀವು ಎಲ್ಲೇ ಇರಿ `ಕೃಷ್ಣನೇ ಪರಮಾತ್ಮ, ಪರಮಪುರುಷ, ಸರ್ವೋತ್ತಮ. ನಿಮ್ಮ ನಮನಗಳನ್ನು ಕೃಷ್ಣನಿಗೆ ಸಲ್ಲಿಸಿ’ ಎಂದು ಹೇಳಿ. ಅಲ್ಲಿಗೆ ಮುಗಿಯಿತು.

ಅವಕಾಶಗಳಿಗೆ ಅಭಾವವೆಲ್ಲಿ? ನೀವು ಯಾವುದೇ ಸ್ಥಾನದಲ್ಲಿ ಕೃಷ್ಣನನ್ನು ಸೇವಿಸಬಹುದು. ನಿಮಗೆ ಸೇವಾಮನೋಭಾವ ಇರಬೇಕಷ್ಟೆ. ಆದರೆ ನಿಮ್ಮ ಸೇವೆಗೆ ಕೃಷ್ಣನನ್ನು ಬಳಸಿಕೊಂಡರೆ ಅದು ತಪ್ಪು. ಜನರು ಚರ್ಚ್‌ಗಳಿಗೆ ಹೋಗುತ್ತಾರೆ – “ಕೃಷ್ಣ ! ನನ್ನ ಸೇವೆ ಮಾಡು. ನನಗೆ ರೊಟ್ಟಿ ಕೊಡು”.
ಜನರು ತಮ್ಮ ಸಮಸ್ಯೆಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ವಾಸ್ತವವಾಗಿ ಸಮಸ್ಯೆಗಳೇ ಇಲ್ಲ. `ಈಶಾವಾಸ್ಯಂ ಇದಂ ಸರ್ವಂ’ ಭಗವಂತನೆ ಎಲ್ಲ ವ್ಯವಸ್ಥೆ ಮಾಡಿದ್ದಾನೆ. ಅವನೆ ಎಲ್ಲವನ್ನು ಸಂಪೂರ್ಣವಾಗಿ, ಸಮರ್ಪಕವಾಗಿ ಸೃಷ್ಟಿಸಿದ್ದಾನೆ. ಪಕ್ಷಿಗಳಿಗೆ ಸಮೃದ್ಧವಾಗಿ ಹಣ್ಣುಹಂಪಲುಗಳನ್ನು ಕೊಟ್ಟಿದ್ದಾನೆ – ತೃಪ್ತಿಯಾಗಿ ಉಣ್ಣಲಿಕ್ಕೆ `ಪೂರ್ಣಂ ಇದಂ’ ಕೃಷ್ಣ ಅದಾಗಲೇ, ಸಮರ್ಪಕವಾಗಿ, ಸಮೃದ್ಧವಾಗಿ ಒದಗಿಸಿದ್ದಾನೆ. ಆದರೆ ಅಯೋಗ್ಯರು ಅಂಧರು ನೋಡಲಾರರು. ಅವರು ಸರಿಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಈ “ಸರಿಹೊಂದಿಸುವ” ಅಗತ್ಯ ಅವರಿಗೇಕೆ? ಪ್ರತಿಯೊಂದು ಸಾಕಷ್ಟಿದೆ. ಜನರು ಅದರ ದುರ್ಬಳಕೆ ಮಾಡುತ್ತಿದ್ದಾರಷ್ಟೆ. ಅವರಿಗೆ ಈಗಾಗಲೆ ಬೇಕಾದಷ್ಟು ಭೂಮಿ ಇದೆ. ಸಾಕಷ್ಟು ಬುದ್ಧಿಶಕ್ತಿ – ಎಲ್ಲವೂ ಸಾಕಷ್ಟಿದೆ.
ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಭೂಮಿ ಇದೆ. ಭೂಮಿಯಲ್ಲಿ ಬೇಸಾಯ ಮಾಡಿ ಬೆಳೆ ತೆಗೆಯುವ ಬದಲು, ಪಶುಸಂಗೋಪನ ಮಾಡಿ ಅವುಗಳನ್ನು ಕೊಲ್ಲುತ್ತಾರೆ. ಅದು ಅವರ ಬುದ್ಧಿವಂತಿಕೆ. ಕಾಫಿ, ಟೀ, ತಂಬಾಕು ಬೆಳೆಯುತ್ತಾರೆ – ಅದು ಅವರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದೂ ಸಹ. ಪ್ರಪಂಚದ ಕೆಲವೆಡೆ ಆಹಾರದ ಕೊರತೆಯಿಂದಾಗಿ ಜನ ಸಾಯುತ್ತಿದ್ದಾರೆ. ಆದರೂ ಇತರೆ ಪ್ರದೇಶಗಳಲ್ಲಿ ತಂಬಾಕು ಬೆಳೆಯುತ್ತಿದ್ದಾರೆ. ಅದು ರೋಗಕಾರಕ ಬೆಳೆ. ಸಾವಿಗೆಮೂಲ. ಇದು ಅವರ ಬುದ್ಧಿವಂತಿಕೆ.
ಜೀವನದ ಸಾರ್ಥಕತೆ ಇರುವುದು ಭಗವಂತನ ಸಾಕ್ಷಾತ್ಕಾರದಲ್ಲಿ ಎಂಬುದನ್ನು ಈ ಅಯೋಗ್ಯರು ತಿಳಿಯರು; ಇದು ಸಮಸ್ಯೆ. ಯಾರನ್ನಾದರೂ ಕೇಳಿ – ಯಾರಿಗೂ ತಿಳಿಯದು. ಅಂಥ ಮೂರ್ಖರು ಅವರು. ತಮ್ಮ ನಾಯಿಯ ಪಾಲನೆಗೆ ಎಷ್ಟೊಂದು ಆಸ್ಥೆ ವಹಿಸಿದ್ದಾರೆ ನೋಡಿಲ್ಲವೆ? ಅವರು ಅಂಧರು. ಅವರು ದೈವಪ್ರಜ್ಞೆಯಲ್ಲಿ ನಿರತರಲ್ಲ, ಶ್ವಾನಪ್ರಜ್ಞಾನಿರತರು. ನಾಯಿಗಳು ಚತುಷ್ಪಾದಿಗಳು. ಮನುಷ್ಯರು ಚತುಶ್ಚಕ್ರಯಾನದಲ್ಲಿ ತೊಡಗಿದ್ದಾರೆ. ಆದು ಅವರ ಆಧುನಿಕತೆ. ಅವರಿಗೆ ನಾಗರಿಕರಾದೆವೆಂಬ ಭ್ರಮೆ. ಆದರೆ ಓಡಾಡುವುದೇ ಅವರ ಕಸುಬು.
ವಿದ್ಯಾರ್ಥಿ: ಧಾವಂತದ ಉದ್ದೇಶವಿಷ್ಟೆ – ತಿನ್ನು, ನಿದ್ದೆಹೋಗು, ಕೂಡು ಮತ್ತು ಆತ್ಮರಕ್ಷಣೆ.
ಶ್ರೀಲ ಪ್ರಭುಪಾದ: ಹೌದು. ನಾಯಿಯಂತೆಯೇ ಓಡುವುದಾದರೆ, ಕಾರಿನಲ್ಲೇಕೆ ಓಡಾಟ? ನೀವು ಕೃಷ್ಣಪ್ರಜ್ಞಾ ಸಂದೇಶವನ್ನು ವಾಹಿಸಲು, ಕಾರನ್ನು ಬಳಸಬಹುದು. ಕೃಷ್ಣನಿಗಾಗಿ ಎಲ್ಲವನ್ನು ಬಳಸಬಹುದು. ಇದನ್ನೆ ನಾವು ಕಲಿಸುವುದು. ಒಂದು ಒಳ್ಳೆಯ ಕಾರಿದ್ದರೆ, ಅದನ್ನೇಕೆ ತಿರಸ್ಕಾರ ಮಾಡಲಿ? ಕೃಷ್ಣನಿಗಾಗಿ ಬಳಸುತ್ತೇನೆ; ಅದು ಸರಿ. ನಾವು “ಬಿಡು” ಎಂದು ಹೇಳವುದಿಲ್ಲ. ನೀವು ದೈವದತ್ತವಾದ ಬುದ್ಧಿಶಕ್ತಿಯಿಂದ ಉತ್ಪಾದನೆ ಮಾಡಿದ್ದರೆ ಅದೂ ಸರಿ – ನೀವು ಭಗವತ್ ಕೈಂಕರ್ಯಕ್ಕೆ ಬಳಸುವುದಾದರೆ ಸರಿ; ಬೇರೆ ಉದ್ದೇಶಕ್ಕಾಗಿ ಬಳಸಿದರೆ ಅದು ಅವಿವೇಕ.

ಈ ಕಾರನ್ನೇ ತೆಗೆದುಕೊಳ್ಳಿ – ಸರ್ವಾಲಂಕೃತ. ನಾನು – “ಇದು ಅವಿವೇಕ” ಎಂದರೆ ಅದು ಬುದ್ಧಿವಂತಿಕೆಯೇ? ಅಥವಾ “ನೀವು ಈ ಕಾರನ್ನು ತಯಾರು ಮಾಡಿರುವ ಉದ್ದೇಶ” – ಅದು ಅವಿವೇಕ. ನಾವು ಸುಮ್ಮನೆ ಜನರ ಪ್ರಜ್ಞೆಯನ್ನು ಪರಿವರ್ತಿಸಲು ಬಯಸುತ್ತೇವೆ. ನಾವು ಅದರಿಂದ ಉತ್ಪಾದಿತವಾದ ಪದಾರ್ಥಗಳೆಲ್ಲವನ್ನು ಕಡೆಗಣಿಸುವುದಿಲ್ಲ.
ಉದಾಹರಣೆಗೆ ಕತ್ತಿಯನ್ನು ಬಳಸುವುದು, ತರಕಾರಿ, ಹಣ್ಣುಗಳನ್ನು ಕತ್ತರಿಸುವುದಕ್ಕೆ. ಆದರೆ ಕತ್ತು ಕೊಯ್ಯಲು ಬಳಸಿದರೆ ಅದು ಕೆಟ್ಟದ್ದು. ಈಗ ತಾಂತ್ರಿಕತೆ ಎಂಬ ಕತ್ತಿಯನ್ನು ತಮ್ಮ ಕೊರಳು ಕೊಯ್ಯಲೆಂದೇ ಬಳಸುತ್ತಾರೆ. ಆತ್ಮಸಾಕ್ಷಾತ್ಕಾರ ಮತ್ತು ಕೃಷ್ಣಪ್ರಜ್ಞೆಗೆ ಬಳಸುವ ಬದಲು. ಅದು ಕೆಟ್ಟದ್ದು.
`ನೃದೇಹಮ್ ಆದ್ಯಂ ಸುಲಭಂ ಸುದುರ್ಲಭಂ ಪ್ಲವಂ ಸುಕಲ್ಪಂ’ ನಮ್ಮ ಶರೀರ ಹರಿಗೋಲಿನಂತೆ. ನಮ್ಮ ಮಾನವ ಬುದ್ಧಿಶಕ್ತಿಯಿಂದ ನಾವು ಅಜ್ಞಾನ ಸಾಗರವನ್ನು ದಾಟಬಹುದು; ಅಂತೆಯೇ ಈ ಲೌಕಿಕ ಜಗತ್ತಿನಲ್ಲಿ `ಪುನರಪಿ ಜನನಂ ಪುನರಪಿ ಮರಣಂ’ ಬಾಧೆಯೂ ಇರದು ಮತ್ತು ಗುರುಕರ್ಣಧಾರಮ್ ಮಯಾನುಕೂಲೇನ ನಭಸ್ವತೇರಿತಂಪುಮಾನ್ ಭವಾಬ್ಧಿಮ್ ನ ತರೇತ್ ಸ ಆತ್ಮಹಾ ನಮಗೊಂದು ಅನುಕೂಲವಾದ ಗಾಳಿ ಇದೆ. ವೇದ ಸಾಹಿತ್ಯ ಕುರಿತ ಕೃಷ್ಣಬೋಧೆ ಜೊತೆಗೆ ನಮಗೊಬ್ಬ ಒಳ್ಳೆಯ ನಾವಿಕನಿದ್ದಾನೆ. ಅಧಿಕೃತ ಅಧ್ಯಾತ್ಮ ಗುರು ನಮಗೆ ಮಾರ್ಗದರ್ಶನ ಮಾಡಿ, ಜ್ಞಾನಬೋಧೆ ನೀಡಲಿಕ್ಕೆ. ಈ ಎಲ್ಲ ಸೌಲಭ್ಯಗಳಿಂದ ನಾವು ಅಜ್ಞಾನದ ಕಡಲನ್ನು ದಾಟಲಿಲ್ಲವೆಂದರೆ, ನಾವು ನಮ್ಮ ಕತ್ತನ್ನು ಕುಯ್ಯುತ್ತಿದ್ದೇವೆ ಎಂದರ್ಥ. ದೋಣಿ ಇದೆ, ನಾವಿಕನಿದ್ದಾನೆ, ಸೂಕ್ತ ಹವಾಮಾನ ಇದೆ. ನಾವು ಬಳಸುತ್ತಿಲ್ಲ ಅದರರ್ಥ ನಾವು ನಮ್ಮನ್ನೆ ಕೊಲ್ಲುತ್ತಿದ್ದೇವೆ.






Leave a Reply