ದೇವರ ಸ್ವಂತ ರಾಜ್ಯ ಎಂದು ಕರೆಯಲ್ಪಡುವ ಕೇರಳ ರಾಜ್ಯ, ಸೊಗಸಾದ ಹಿನ್ನೀರಿನ ಪ್ರದೇಶಗಳು ಹಾಗೂ ತೆಂಗಿನ ಮರಗಳ ಸಹಿತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಸುಂದರವಾದ ಮುಖವನ್ನು ಕುಂಕುಮವು ಶೋಭೆಗೊಳಿಸುವಂತೆ, ಈ ಕೇರಳಕ್ಕೂ ಶೋಭೆಯಾಗಿರುವುದು ವೈನಾಡು ಎಂಬ ಪ್ರಕೃತಿ ರಮ್ಯ ಜಿಲ್ಲೆ. ಅನೇಕ ಜನರು ಸಂತೋಷದಿಂದ ವಿಹರಿಸಲು, ರಜೆ ಕಳೆಯಲು, ಈ ವೈನಾಡನ್ನು ಆರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಒಂದು ಸುಂದರವಾದ ಹಾಗೂ ಪಾಪಹರವಾದ ವೈಷ್ಣವ ಕ್ಷೇತ್ರವಿರುವುದು ಅನೇಕರಿಗೆ ತಿಳಿದಿಲ್ಲ. ಅದುವೇ ತಿರುನೆಲ್ಲಿ ವಿಷ್ಣು ಕ್ಷೇತ್ರ.

ತಿರುನೆಲ್ಲಿ ವಿಷ್ಣು ಕ್ಷೇತ್ರವು ವೈನಾಡಿನ ಮನಂತವಾಡಿ ಪ್ರದೇಶದಲ್ಲಿ ವೈನಾಡು ವನ್ಯಧಾಮದ ಮಧ್ಯೆ, ಒಂದು ದ್ವೀಪದಂತಿದೆ. ವೈನಾಡು ವನ್ಯಧಾಮವು ತನ್ನ ಸುತ್ತಮುತ್ತಲೂ ಮದುಮಲೈ, ಬಂಡೀಪುರ, ನಾಗರಹೊಳೆ ಅರಣ್ಯಗಳಿಂದ ಕೂಡಿದೆ. ಈ ಕ್ಷೇತ್ರಕ್ಕೆ ವನ್ಯಧಾಮದ ಮೂಲಕ ಇರುವ 18 ಕಿ.ಮೀ.ಗಳ ರಸ್ತೆಯೊಂದೇ ದಾರಿ. ಬ್ರಹ್ಮಗಿರಿ ಪರ್ವತಶ್ರೇಣಿಯ ತಪ್ಪಲಿನಲ್ಲಿ ಈ ಸುಂದರ ಕ್ಷೇತ್ರವಿದೆ. ಇಲ್ಲಿ ಕೇರಳೀಯ ಶೈಲಿಯ ವಿಷ್ಣು ದೇವಾಲಯವಿದ್ದು ಅದು ಬೃಹತ್ ಕಂಬಗಳಿಂದ ಕೂಡಿದೆ. ಭಗವಂತನ ಮೂರ್ತಿಯು ಶಂಖ ಚಕ್ರಧಾರಿಯಾಗಿದ್ದು ಬಹಳ ಮುದ್ದಾಗಿ ಹಸನ್ಮುಖಿಯಾಗಿದೆ. ದೇವಾಲಯದ ಸನಿಹ ಕಲ್ಲುಬಂಡೆಗಳ ಕಾಡುದಾರಿಯಲ್ಲಿ ರಮ್ಯಪ್ರಕೃತಿಯ ಮೂಲಕ ನಡೆದು ಹೋದರೆ ಸಕಲ ಪಾಪಗಳನ್ನೂ ಕಳೆಯುವ ಪಾಪನಾಶಿನೀ ತೀರ್ಥ ಸಿಗುತ್ತದೆ. ಉದ್ದಕ್ಕೂ ಝರಿ ಜಲಪಾತವಾಗಿದೆ. ಇದನ್ನು ಕಾಳಿಂದೀ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಇಲ್ಲಿ ಪಿತೃಕರ್ಮಗಳನ್ನು ಮಾಡಲು ಅನೇಕರು ಬರುತ್ತಾರೆ. ಈ ತೀರ್ಥದಲ್ಲಿ ಸ್ನಾನ ಮಾಡುವುದು ಬಹಳ ಶ್ರೇಷ್ಠ ಹಾಗೂ ಸಕಲ ಪಾಪಹರ ಎಂದು ಹೇಳಲಾಗಿದೆ. ಈ ತೀರ್ಥದ ಪ್ರದೇಶ, ಇಲ್ಲಿಗೆ ನಡೆದು ಹೋಗುವ ದಾರಿ, ಇವೆಲ್ಲವೂ ಬಹಳ ಹಸಿರಾಗಿ ಅತ್ಯಂತ ಮನೋಹರವಾಗಿವೆ. ಸಾಮಾನ್ಯವಾಗಿ ಇಲ್ಲಿಗೆ ಜನರು ಹೋಗುತ್ತಿರುತ್ತಾದ್ದರಿಂದ ಹೆದರಬೇಕಿಲ್ಲ. ಆದರೆ ಇಲ್ಲಿ ಆನೆಗಳು ಸಂಚರಿಸುವುದು ಸಾಮಾನ್ಯವಾದ್ದರಿಂದ ಸ್ವಲ್ಪ ಎಚ್ಚರವಾಗಿರಬೇಕು.
ಸ್ಥಳ ಪುರಾಣ
ಸಾಕ್ಷಾತ್ ಬ್ರಹ್ಮದೇವನೇ ಈ ದೇವಾಲಯವನ್ನು ಸ್ಥಾಪಿಸಿದನೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಒಮ್ಮೆ ಬ್ರಹ್ಮದೇವನು ಬ್ರಹ್ಮಗಿರಿ ಪರ್ವತಶ್ರೇಣಿಯ ಮೂಲಕ ತನ್ನ ಹಂಸ ವಿಮಾನದಲ್ಲಿ ಹೋಗುತ್ತಿದ್ದನು. ಅವನು ಈ ಸ್ಥಳವನ್ನು ಕಂಡಾಗ, ಇದು ವೈಕುಂಠದಂತೆಯೇ ಭಾಸವಾಯಿತು. ಹಾಗಾಗಿ ಅವನು ಇಳಿದು ಇಲ್ಲಿನ ಅದ್ಭುತವಾದ ಪ್ರಕೃತಿ ಸೌಂದರ್ಯವನ್ನು ಸವಿಯತೊಡಗಿದ. ಒಂದು ನೆಲ್ಲೀಕಾಯಿಯ ಮರದಲ್ಲಿ ವಿಷ್ಣು ವಿಗ್ರಹವೊಂದನ್ನು ಕಂಡ. ಹಾಗೆ ದರ್ಶನ ಕೊಟ್ಟ ಕೂಡಲೇ ಆ ವಿಗ್ರಹವು ಅದೃಶ್ಯವಾಯಿತು. ಆಗ ಬ್ರಹ್ಮನು ಧ್ಯಾನ ಮಾಡತೊಡಗಿ ಸಮಾಧಿಸ್ಥಿತಿ ತಲಪಿದ. ಆ ಸಮಾಧಿಸ್ಥಿತಿಯಲ್ಲಿ ವಿಷ್ಣುವು ಪ್ರತ್ಯಕ್ಷನಾಗಿ ಅವನಿಗೆ, “ಸಂದೇಹ ಬೇಡ! ಅದು ನಾನೇ! ಭೂಮಿಯಲ್ಲಿ ಈ ಸ್ಥಳ ನನಗೆ ಬಹಳ ಪ್ರಿಯವಾದುದು! ಭೂಮಿಯ ಮೇಲೆ ನದಿ ಪರ್ವತಗಳಿರುವವರೆಗೂ ನಾನಿಲ್ಲಿ ನೆಲೆಸಿರುತ್ತೇನೆ. ಆದ್ದರಿಂದ ಇಲ್ಲಿ ನನಗೊಂದು ದೇವಾಲಯವನ್ನು ಸ್ಥಾಪಿಸಿ ನನ್ನ ವಿಗ್ರಹಕ್ಕೆ ನೀನೇ ಸೇವೆಯನ್ನು ಮಾಡಿಸಿದರೆ, ಇಲ್ಲಿಯೇ ನೆಲೆಸಿರುತ್ತೇನೆ” ಎಂದು ಹೇಳಿದನು.

ಬ್ರಹ್ಮನು ಆಗ ಕೂಡಲೇ ಒಂದು ಯಾಗ ಮಾಡಲು ಸಕಲ ಸಾಮಗ್ರಿಗಳನ್ನು ಅಣಿಗೊಳಿಸಿ ದೇವಾಲಯವನ್ನು ಸ್ಥಾಪಿಸಿ ಭಗವಂತನ ಶ್ರೀ ವಿಗ್ರಹಕ್ಕೆ ಮೊದಲ ಪೂಜೆ ನಡೆಸಿದನು. ಹಾಗಾಗಿ, ಈಗಲೂ ದೇವಾಲಯವನ್ನು ಮುಚ್ಚುವ ಮೊದಲು ಮುಖ್ಯ ಅರ್ಚಕರು ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಬ್ರಹ್ಮನು ಯಾಗ ಮಾಡಿದನೆಂದು ಹೇಳಲಾಗುವ ಸ್ಥಳದಲ್ಲಿ ಅಣಿಗೊಳಿಸುತ್ತಾರೆ. ಪ್ರತಿದಿನವೂ ಮಧ್ಯರಾತ್ರಿ ಬ್ರಹ್ಮನು ಬಂದು ಪೂಜೆ ಮಾಡುವನೆಂದು ಪ್ರತೀತಿ.
`ತಿರುನೆಲ್ಲಿ’ ಅರ್ಥ
ತಿರುನೆಲ್ಲಿ ಎಂದು ಹೆಸರು ಬರಲು ಕಾರಣವನ್ನು ಒಂದು ಕಥೆ ತಿಳಿಸುತ್ತದೆ. ಅದರ ಪ್ರಕಾರ, ಒಮ್ಮೆ ಮೂವರು ಬ್ರಾಹ್ಮಣರು ಈ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದರು. ಅವರು ಅನೇಕ ದಿನಗಳ ಕಾಲ ಪಾದಸಂಚಾರ ಮಾಡುತ್ತಾ ಕೊನೆಗೆ ಒಂದು ದಟ್ಟ ಅರಣ್ಯಕ್ಕೆ ಬಂದರು. ಅವರು ಏನನ್ನೂ ತಿಂದಿರಲಿಲ್ಲವಾದ್ದರಿಂದ ಹಸಿವಿನಿಂದ ಬಳಲಿದ್ದರು. ಆಗ ಅವರು ಮನಃಪೂರ್ವಕವಾಗಿ ದೇವರನ್ನು ತಮ್ಮನ್ನು ಕಾಪಾಡಲು ಪ್ರಾರ್ಥಿಸಿದರು. ಆಗ ಅನೇಕ ನೆಲ್ಲೀಕಾಯಿಗಳನ್ನು ಬಿಟ್ಟಿದ್ದ ಒಂದು ನೆಲ್ಲೀಮರವನ್ನು ನೋಡಿದರು. ಇದು ಸಾಕ್ಷಾತ್ ಪೆರುಮಾಳ್‌ನ ದಯೆಯೆಂದು ತಿಳಿದು ಅವರು ಆ ಸ್ಥಳವನ್ನು `ತಿರುನೆಲ್ಲಿ’ ಎಂದು ಕರೆದರು.
ಪರಶುರಾಮನು ಇಲ್ಲಿ ತನ್ನ ತಂದೆ ತಾಯಿಯರಿಗೆ ಪಿತೃಕಾರ್ಯ ಮಾಡಿದನೆಂದು ಹೇಳುತ್ತಾರೆ. ಶ್ರೀರಾಮನೂ ತನ್ನ ವನವಾಸ ಕಾಲದಲ್ಲಿ ಇಲ್ಲಿಗೆ ಬಂದಿದ್ದನೆಂದು ಹೇಳುತ್ತಾರೆ.

ಎಲ್ಲ ದೇವಾಲಯಗಳಲ್ಲಿರುವಂತೆ ಇಲ್ಲಿ ಬಲಿಕಲ್ಲು (ಗರುಡಸ್ತಂಭ) ಭಗವಂತನ ವಿಗ್ರಹಕ್ಕೆ ನೇರವಾಗಿರದೇ ಸ್ವಲ್ಪ ಪಕ್ಕಕ್ಕಿದೆ. ಇದಕ್ಕೆ ಕಾರಣವೆಂದರೆ, ಒಬ್ಬ ಮಹಾಭಕ್ತನಾದ ಆದಿವಾಸಿ ನಾಯಕನನ್ನು ದೇವಾಲಯದೊಳಗೆ ಬಿಡದಿದ್ದಾಗ ಅವನು ತನ್ನ ಕೊನೆಗಾಲದಲ್ಲಿ ದೇವರನ್ನು ನೋಡಲೇಬೇಕೆಂಬ ಉತ್ಕಟೇಚ್ಛೆಯಿಂದ ಕಷ್ಟಪಟ್ಟು ಇಲ್ಲಿಗೆ ಬಂದು ದರ್ಶನಕ್ಕಾಗಿ ಬಾಗಿಲ ಬಳಿ ನಿಂತು ದೇವರಲ್ಲಿ ಬೇಡಲು, ಅವನಿಗೂ ದೇವರಿಗೂ ಅಡ್ಡವಾಗಿದ್ದ ಈ ಬಲಿಕಲ್ಲು ಪಕ್ಕಕ್ಕೆ ಸರಿದು ಭಗವಂತನ ದರ್ಶನ ಮಾಡಿಸಿತು ಎಂದು ಹೇಳುತ್ತಾರೆ.
ಐತಿಹಾಸಿಕವಾಗಿ ತಿರುನೆಲ್ಲಿ ಪ್ರದೇಶವು ತಮಿಳಕಂ ರಾಜ್ಯಕ್ಕೆ ಸೇರಿದ್ದು ಪಾಂಡ್ಯರು, ಚೋಳರು, ಚೇರರು ಇದನ್ನು ಆಳಿದ್ದಾರೆ. ಮೊದಲಿಗೆ ಇಲ್ಲಿ ಶೈವ ಪ್ರಭಾವ ಹೆಚ್ಚಾಗಿದ್ದು, ಅನಂತರ ಚೇರರ ಕಾಲದಲ್ಲಿ ಕುಲಶೇಖರ ಆಳ್ವಾರ್ ಮಹಾರಾಜರ ಸಮಯದಲ್ಲಿ ವೈಷ್ಣವ ಭಕ್ತಿ ಬೇರೂರಿತು ಎಂದು ಹೇಳುತ್ತಾರೆ. ಈ ದೇವಾಲಯದ ಮೇಲೆ ಕ್ರಿ.ಶ. 10-11ರ ಶತಮಾನಗಳಲ್ಲಿ ಚೇರರ ಅಕಾರವಿದ್ದುದಕ್ಕೆ ಸಾಕಷ್ಟು ದಾಖಲೆಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಗುಂಡಿಕಾ ಗುಹಾಂತರ ಶಿವ ದೇವಾಲಯವೂ ಇದೆ.
ಪಂಚತೀರ್ಥ ಕಲ್ಯಾಣಿ
ದೇವಾಲಯದ ಕಲ್ಯಾಣಿಗೆ ಪಂಚತೀರ್ಥ ಕಲ್ಯಾಣಿ ಎಂದು ಹೆಸರು. ಬಂಡೆಗಲ್ಲುಗಳ ಮಧ್ಯದಿಂದ ಪವಿತ್ರ ಜಲವು ಐದು ಝರಿಗಳಲ್ಲಿ ಹರಿದು ಬಂದು ಇಲ್ಲಿ ಸಂಗ್ರಹಗೊಂಡು ಈ ತೀರ್ಥವಾಗಿದೆ. ಮೊದಲು ಈ ಐದೂ ಝರಿಗಳಿರುತ್ತಿದ್ದು ಮಹಾವಿಷ್ಣುವಿನ ಶಂಖ, ಚಕ್ರ, ಗದಾ, ಪದ್ಮ, ಪಾದಗಳನ್ನು ಸಂಕೇತಿಸುತ್ತಿದ್ದವು. ಆದರೆ ಬ್ರಿಟಿಷರ ಕಾಲದಲ್ಲಿ ಇಲ್ಲಿ ಹಾನಿಗಳಾದ ಕಾರಣ ಈ ಝರಿಗಳು ಈಗ ಬರುತ್ತಿಲ್ಲವಾಗಿ ಕೇವಲ ಒಂದು ಝರಿಯಿಂದ ಮಾತ್ರ ನೀರು ಬಂದು ತುಂಬಿಕೊಳ್ಳುತ್ತದೆ. ಹಿಂದಿನ ಪಂಚತೀರ್ಥಗಳನ್ನು ಸಂಕೇತಿಸಲು, ಕಲ್ಯಾಣಿಯ ಮಧ್ಯದಲ್ಲಿರುವ ಒಂದು ಕಲ್ಲಿನ ಮೇಲೆ ಮಹಾವಿಷ್ಣುವಿನ ಈ ಲಾಂಛನಗಳನ್ನು ಕೆತ್ತಲಾಗಿದೆ. ಈ ಕಲ್ಯಾಣಿಯ ಸನಿಹದಿಂದಲೇ ಪಾಪನಾಶಿನೀ ತೀರ್ಥಕ್ಕೆ ನಡೆದುಹೋಗಬೇಕು.

ವೈನಾಡಿಗೆ ಪ್ರವಾಸ ಹೋದಾಗ ಈ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ. ಸ್ವಂತ ವಾಹನದಲ್ಲಿ ಮೈಸೂರು ಮನಂತವಾಡಿ ಮೂಲಕ ಹೋಗಬಹುದು ಇಲ್ಲವೇ ವೈನಾಡಿನ ಕಲ್ಬೆಟ್ಟ ಪ್ರದೇಶಕ್ಕೆ ಸರ್ಕಾರೀ ಬಸ್ಸಿನಲ್ಲಿ ಪಯಣಿಸಿ ಅಲ್ಲಿ ಇಳಿದುಕೊಂಡು ಖಾಸಗಿ ವಾಹನದಲ್ಲಿ ಮನಂತವಾಡಿಯ ಮುಖಾಂತರ ಹೋಗಬಹುದು. ದೇವಾಲಯವು ಮಧ್ಯಾಹ್ನ 12ಕ್ಕೆ ಮುಚ್ಚುವುದರಿಂದ ಬೇಗನೆ ಹೋಗುವುದೊಳ್ಳೆಯದು.
ಒಟ್ಟಿನಲ್ಲಿ ಪಾಪನಾಶಿನೀ ತೀರ್ಥವನ್ನೊಳಗೊಂಡಂತೆ ರಮ್ಯ ಮನೋಹರ ಪ್ರಕೃತಿ ಸೌಂದರ್ಯದಿಂದ ಸುತ್ತುವರಿಯಲ್ಪಟ್ಟಿರುವ ಈ ಪುರಾತನ ದೇವಾಲಯ, ನೋಡಲೇಬೇಕಾದುದಾಗಿದೆ.






Leave a Reply