ವಿಶ್ವಾತ್ಮ

ವಿಶ್ವವನ್ನು ಭಗವಂತನ ಬಾಹ್ಯ ದೇಹವಾಗಿ ಅರ್ಥಮಾಡಿಕೊಳ್ಳುವುದು ಹೇಗೆ?

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1972ರ ಅಕ್ಟೋಬರ್‌ 5 ರಂದು ಲಾಸ್‌ ಏಂಜಲೀಸ್‌ನಲ್ಲಿ ನೀಡಿದ ಉಪನ್ಯಾಸ.

ಏತದ್‌ ರೂಪಂ ಭಗವತೋ ಹಿ ಅರೂಪಸ್ಯ ಚಿದಾತ್ಮನಃ ।

ಮಾಯಾ ಗುಣೈರ್‌ ವಿರಚಿತಂ ಮಹದಾದಿಭಿರ್‌ ಆತ್ಮನಿ ॥

ಭಗವಂತನ ವಿರಾಟ್‌ ವಿಶ್ವರೂಪವು ಐಹಿಕ ಜಗತ್ತಿನಲ್ಲಿ ಕಾಣಿಸುವ ಹಾಗೆ ಅದನ್ನು ಗ್ರಹಿಸುವ ತತ್ತ್ವವು ಕೇವಲ ಕಾಲ್ಪನಿಕವಾದುದಾಗಿದೆ. ಅಲ್ಪಜ್ಞರು (ಮತ್ತು ಆರಂಭದೆಶೆಯಲ್ಲಿರುವವರು) ಭಗವಂತನು ಆಕಾರವನ್ನು ಹೊಂದಿದ್ದಾನೆ ಎಂಬ ಗ್ರಹಿಕೆಯನ್ನು ಹೊಂದಾಣಿಕೆ ಮಾಡಿಕೊಳ್ಳುವ ಅನುಕೂಲಕ್ಕಾಗಿ ಇದನ್ನು ಹೇಳಲಾಗಿದೆ. ಆದರೆ ವಾಸ್ತವವಾಗಿ ಭಗವಂತನಿಗೆ ಯಾವ ಭೌತಿಕ ರೂಪವೂ ಇರುವುದಿಲ್ಲ.

– (ಶ್ರೀಮದ್‌ ಭಾಗವತ, 1.3.30)

ಇದೊಂದು ಮುಖ್ಯವಾದ ಶ್ಲೋಕ. `ಆಕಾರವಿಲ್ಲದ’ ಎಂದು ಹೇಳುವಾಗ ದೇವರು ಅಥವಾ ನಾವೆಲ್ಲಾ ಜೀವಿಗಳಿಗೂ ಲೌಕಿಕ ಆಕಾರವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಈಗಿನ ರೂಪ, ನಮ್ಮ ದೇಹವು ತಾತ್ಕಾಲಿಕ ಮತ್ತು ಸಾವಿನ ಅನಂತರ ಅದು ಪುನಃ ಬರುವುದಿಲ್ಲ. ಈ ರೂಪ ಅಂತ್ಯಗೊಂಡ ಅನಂತರ ನಾನು ಇನ್ನೊಂದು ರೂಪ ಪಡೆಯಬೇಕು. ಮತ್ತು ಆ ರೂಪವು ಈಗಿನ ರೀತಿ ಇಲ್ಲದಿರಬಹುದು.

ನಮ್ಮಂತೆ ಕೃಷ್ಣನಿಗೆ ಲೌಕಿಕ ರೂಪವಿಲ್ಲ. ಅವನಿಗೆ ಆಧ್ಯಾತ್ಮಿಕ ರೂಪವಿದೆ. ಆದುದರಿಂದ ಅವನ ರೂಪ ಶಾಶ್ವತ. ನಮ್ಮ ರೂಪ ಬದಲಾಗುವುದರಿಂದ ನಮಗೆ ನಮ್ಮ ಹಿಂದಿನ ಜನ್ಮಗಳ ನೆನಪಿರುವುದಿಲ್ಲ. ಕೃಷ್ಣನಿಗೆ ನೆನಪಿರುತ್ತದೆ. ಏಕೆಂದರೆ ಅವನ ರೂಪ ಬದಲಾಗುವುದಿಲ್ಲ.

ಭಗವದ್ಗೀತೆಯಲ್ಲಿ, ಕೃಷ್ಣನ ಬೋಧನೆಯಲ್ಲಿ ಇದಕ್ಕೆ ಪುರಾವೆಯನ್ನು ಕಾಣಬಹುದು. ಅರ್ಜುನನು ಕೃಷ್ಣನನ್ನು ಕೇಳುತ್ತಾನೆ, “ಭಗವದ್ಗೀತೆಯ ತತ್ತ್ವದ ಬಗೆಗೆ ನೀನು 40 ಕೋಟಿ ವರ್ಷಗಳ ಹಿಂದೆ ಸೂರ್ಯದೇವನಿಗೆ ಹೇಳಿದ್ದೆ ಎಂಬುವುದನ್ನು ಹೇಗೆ ನಂಬಲಿ?”

ಕೃಷ್ಣನು ಉತ್ತರಿಸಿದ, “ಹೌದು, ನೀನು ಅಲ್ಲಿ ಉಪಸ್ಥಿತನಿದ್ದೆ. ಏಕೆಂದರೆ ನೀನು ನನ್ನ ನಿರಂತರ ಸಂಗಾತಿ. ಆದರೆ ನೀನು ಮರೆತಿರುವೆ, ನನಗೆ ನೆನಪಿದೆ.”

ನಮ್ಮ ರೂಪವು ಒಂದೇ ರೀತಿ ಇರುವವರೆಗೂ ನಾವು ವಿಷಯಗಳನ್ನು ಮರೆಯುವುದಿಲ್ಲ. ಆದರೆ ನಮ್ಮ ರೂಪ ಬದಲಾದಾಗ ನಾವು ಮರೆಯುತ್ತೇವೆ. ನಾವು ಇದನ್ನು ಪ್ರತಿ ರಾತ್ರಿಯೂ ಅನುಭವಿಸುತ್ತೇವೆ. ನನ್ನ ರೂಪವು ಹಾಸಿಗೆಯ ಮೇಲೆ ಇದೆ. ಆದರೆ ನಾನು ಭಿನ್ನವಾದ ರೂಪದಲ್ಲಿ ಕನಸು ಕಾಣುತ್ತಿರುವೆ : ನಾನು ನನ್ನ ನಿಜವಾದ ರೂಪವು ಹಾಸಿಗೆ ಮೇಲಿದೆ ಎಂಬುವುದನ್ನು ಮರೆತು ಆಕಾಶದಲ್ಲಿ ಹಾರಾಡುವೆ. ಆಗ ನಾವು “ನಾನು ಅಮೆರಿಕದವ” ಅಥವಾ “ನಾನು ಇಂಥವರ ಮಗ” ಎಂಬುವುದನ್ನು ಮರೆಯುತ್ತೇವೆ. ನಾವು ಎಲ್ಲವನ್ನೂ ಮರೆಯುತ್ತೇವೆ. ಆಕಾರವನ್ನು ಮರೆತಕೂಡಲೇ ಎಲ್ಲವೂ ನೆನಪಿನಿಂದ ಜಾರುತ್ತದೆ.

ನಿರಾಕಾರವಾದಿಗಳಿಗೆ ವಿಶ್ವರೂಪವೆಂದರೆ ತುಂಬ ಇಷ್ಟ. ಆದರೆ ವಿಶ್ವರೂಪ ಏನು? ಅದು ಪರಮ ರೂಪ ಕೃಷ್ಣನ ಬಾಹ್ಯ ವಿಸ್ತರಣೆ. ನಾವು, ಜೀವಿಗಳು, ಅತಿ ಸಣ್ಣ ಆಧ್ಯಾತ್ಮಿಕ ರೂಪ. ಲೌಕಿಕವಾಗಿ ನಾವು ಇದನ್ನು ಅರ್ಥಮಾಡಿಕೊಳ್ಳಲಾರೆವು. ನಾವು ಆಧ್ಯಾತ್ಮಿಕ ರೂಪವನ್ನು ನಮ್ಮ ಲೌಕಿಕ ಕಣ್ಣುಗಳಿಂದ ನೋಡಲಾರೆವು. ಆದರೆ ನಮಗೆ ಶಾಸ್ತ್ರಗಳಿಂದ ಮಾಹಿತಿ ಲಭಿಸುತ್ತದೆ. ಜೀವಿಯ ಗಾತ್ರವು ಕೂದಲ ತುದಿಯ ಹತ್ತು ಸಾವಿರ ಭಾಗದಲ್ಲಿ ಒಂದು ಭಾಗದಷ್ಟು ಎಂದು ಶಾಸ್ತ್ರಗಳು ಹೇಳುತ್ತವೆ. ಕೂದಲ ತುದಿಯನ್ನು ಊಹಿಸಿಕೊಳ್ಳಿ. ಅನಂತರ ಅದನ್ನು ಹತ್ತು ಸಾವಿರ ಭಾಗ ಮಾಡಿ. ಅಂತಹ ಒಂದು ಭಾಗವು ಜೀವಿಯ ಗಾತ್ರ.

ಬಾಲಾಗ್ರ ಶತ ಭಾಗಸ್ಯ ಶತಧಾ ಕಲ್ಪಿತಸ್ಯ ಚ ।

ಭಾಗೋ ಜೀವಃ ಸ ವಿಜ್ಞೇಯಃ ಸ ಚಾನಂತ್ಯಾಯ ಕಲ್ಪತೇ ॥

“ಕೂದಲಿನ ಮೇಲು ತುದಿಯನ್ನು ಒಂದು ನೂರು ಭಾಗಮಾಡಿದಾಗ ಮತ್ತು ಆ ನೂರು ಭಾಗಗಳನ್ನು ಪುನಃ ಒಂದು ನೂರು ಭಾಗ ಮಾಡಿದರೆ ಆ ಪ್ರತಿ ಭಾಗವೂ ಆಧ್ಯಾತ್ಮಿಕ ಆತ್ಮದ ಅಳತೆಯಾಗಿರುತ್ತದೆ.” (ಶ್ವೇತಾಶ್ವತರ ಉಪನಿಷದ್‌ 5.9). ಇದು ಜೀವಿಯ ಗಾತ್ರ.

ಆಧ್ಯಾತ್ಮಿಕ ಶಕ್ತಿಯ ಆ ಪರಮಾಣು ಕಣವು ಪರಮ ನಿಯಂತ್ರಕನಿಂದ ಆಶ್ರಯ ಪಡೆಯುತ್ತದೆ. ವ್ಯಕ್ತಿ ಮೃತನಾದಾಗ ಆಧ್ಯಾತ್ಮಿಕ ಆತ್ಮವನ್ನು ಸಾವಿನ ದೇವ ಯಮರಾಜನ ನ್ಯಾಯಾಲಯಕ್ಕೆ ಒಯ್ಯಲಾಗುವುದು. ಜೀವಿಯ ಹಿಂದಿನ ಕರ್ಮಗಳಿಗೆ ಅನುಸಾರವಾಗಿ ಅವನಿಗೆ ಮುಂದಿನ ಜನ್ಮದ ದೇಹ ನೀಡಲಾಗುವುದು.

ಹೇಗೆ? ಶ್ರೀಮದ್‌ ಭಾಗವತವು ಹೇಳುತ್ತದೆ, ಕರ್ಮಣಾ ದೈವ ನೇತ್ರೇಣ : “ಪರಮ ವ್ಯವಸ್ಥೆಯಿಂದ.” ನೀವು ಎಲ್ಲೋ ಕೆಲಸ ಮಾಡುತ್ತಿದ್ದಾಗ, ನಿಮ್ಮ ಸೇವಾ ದಾಖಲೆಯನ್ನು ಇಡಲಾಗುತ್ತದೆ. ಅನೇಕ ವಿಷಯಗಳ ನಿರ್ಣಯ ಮಾಡಲಾಗುತ್ತದೆ. ವರ್ಷದ ಅಂತ್ಯದಲ್ಲಿ ಅಥವಾ ಒಂದು ಅವಧಿಯ ಕೊನೆಯಲ್ಲಿ ಸೇವೆ ದಾಖಲೆಯನ್ನು ಪರಿಶೀಲಿಸಲಾಗುವುದು. ಅನಂತರ ನಿಮಗೆ ಬಡ್ತಿ ನೀಡಲಾಗುವುದು. ಅದೇ ರೀತಿ ನಮ್ಮ ಎಲ್ಲ ಚಟುವಟಿಕೆಗಳನ್ನು ದಾಖಲಿಸಲಾಗುತ್ತಿದೆ. ಸಾವಿನ ಅನಂತರ ನಮ್ಮನ್ನು ತೀರ್ಪಿಗಾಗಿ ಯಮರಾಜನ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು. ಉನ್ನತ ಅಧಿಕಾರದ ಯಮರಾಜನು ನಮಗೆ ಯಾವ ರೀತಿಯ ದೇಹ ಲಭಿಸಬೇಕೆಂದು ತೀರ್ಮಾನಿಸುತ್ತಾನೆ.

ನೀವು “ನನಗೆ ರಾಜನ ದೇಹ ಕೊಡು” ಎಂದು ಕೇಳಲಾಗದು. ಈಗ ನೀವು ಅಮೆರಿಕದವರು. ಆದರೆ ನೀವು “ನನಗೆ ಅಮೆರಿಕದ್ದೇ ಇನ್ನೊಂದು ದೇಹ ಕೊಡು, ರಾಕೆಫೆಲ್ಲರ್‌ ಮಗನನ್ನಾಗಿ ಮಾಡು” ಎಂದು ಹೇಳಲಾಗದು. ಹಾಗೆ ಮಾಡುವುದು ಸಾಧ್ಯವಿಲ್ಲ. ನೀವು ಏನು ಮಾಡಿರುವಿರೋ ಅದರಂತೆ ತೀರ್ಮಾನಿಸಲಾಗುವುದು. ಅದರಂತೆ ನಿಮಗೆ ನಿಮ್ಮ ಮುಂದಿನ ದೇಹ ಲಭಿಸುವುದು.

ಸ್ವಾಭಾವಿಕವಾಗಿ ನೀವು ನಿಮ್ಮ ಪ್ರಸ್ತುತದ ಅವಕಾಶಗಳನ್ನು ನಿಮ್ಮ ಹಿಂದಿನ ಪುಣ್ಯಕಾರ್ಯಗಳ ಕಾರಣ ಪಡೆದಿರುವಿರಿ. ಶ್ರೀಮಂತ ಕುಟುಂಬದಲ್ಲಿ ಅಥವಾ ದೇಶದಲ್ಲಿ ಹುಟ್ಟುವುದು ಪುಣ್ಯ ಕಾರ್ಯಗಳಿಂದ. ಜನ್ಮೈಶ್ವರ್ಯ ಶ್ರುತ ಶ್ರೀಭಿಃ. ಜನ್ಮ (ಹುಟ್ಟು), ಐಶ್ವರ್ಯ (ಶ್ರೀಮಂತಿಕೆ), ಶ್ರುತ (ವಿದ್ಯೆ) ಮತ್ತು ಶ್ರೀ (ಸೌಂದರ್ಯ) ಇವುಗಳನ್ನು ಹಿಂದಿನ ಕರ್ಮಗಳ ಪ್ರಕಾರ ಪಡೆಯಲಾಗುವುದು. ಎಲ್ಲರೂ ವಿದ್ಯಾವಂತರಾಗುವುದಿಲ್ಲ. ಅಂತಹ ಆಕಸ್ಮಿಕ ಎಂಬುದಿಲ್ಲ.

ಯಾವುದೂ ಆಕಸ್ಮಿಕವಲ್ಲ

ಯಾವುದೂ ಕೂಡ ಆಕಸ್ಮಿಕದಿಂದ ನಡೆಯದೆಂದು ನಾವು ಚರ್ಚಿಸುತ್ತಿದ್ದೆವು. ಎಲ್ಲವೂ ಕೂಡ ಯಾವುದಾದರೂ ಕಾರಣದ ಮೇಲೆ ಅವಲಂಬಿತ. ಯಾರೂ ಕೂಡ ಆಕಸ್ಮಿಕದಿಂದ ಅತಿ ಶ್ರೀಮಂತರಾಗುವುದಿಲ್ಲ. ಅವರು ಅದಕ್ಕಾಗಿ ಶ್ರಮಿಸಬೇಕು. ಆಕಸ್ಮಿಕದಿಂದ ವಿದ್ಯಾವಂತರಾಗುವುದು ಸಾಧ್ಯವಿಲ್ಲ. ಇವೆಲ್ಲ ಆಕಸ್ಮಿಕವಲ್ಲ. ಆದುದರಿಂದ ಆಕಸ್ಮಿಕವಿಲ್ಲದಿದ್ದರೆ, ಅಲ್ಲೊಂದು ಕಾರಣ ಮತ್ತು ತೀರ್ಮಾನವಿರಬೇಕು. ಇಲ್ಲವಾದರೆ ಒಬ್ಬನು ಶ್ರೀಮಂತನಾಗಿ ಹುಟ್ಟುತ್ತಾನೆ ಮತ್ತು ಮತ್ತೊಬ್ಬನು ಕಷ್ಟಪಟ್ಟು ದುಡಿದರೂ ಏಕೆ ರಸ್ತೆ ವಾಸಿಯಾಗುತ್ತಾನೆ?

ಪರಮ ತೀರ್ಪಿನಂತೆ ಸಣ್ಣ ಆಧ್ಯಾತ್ಮಿಕ ಕಣವನ್ನು (ಜೀವಿ) ಒಬ್ಬ ನಿರ್ದಿಷ್ಟ ತಂದೆಯ ವೀರ್ಯಕ್ಕೆ ವರ್ಗಾಯಿಸಲಾಗುವುದು. ಅನಂತರ ಜೀವಿಯನ್ನು ತಾಯಿಯ ಗರ್ಭಾಶಯದೊಳಗೆ ಹೋಗಿಸಲಾಗುವುದು. ಸ್ತ್ರೀ, ಪುರುಷ ಸ್ರಾವಗಳು ಜೊತೆಗೂಡುತ್ತವೆ ಮತ್ತು ಜೀವಿಯು ದೇಹವನ್ನು ಬೆಳೆಸಿಕೊಳ್ಳುತ್ತದೆ. ನೀವು ಗರ್ಭನಿರೋಧಕಗಳನ್ನು ಬಳಸಿದರೆ ನೀವು ದ್ರವಗಳನ್ನು ನಿರುಪಯುಕ್ತಗೊಳಿಸುತ್ತಿರುವಿರಿ ಎಂದು ಅರ್ಥ. ಪಾಪ, ಜೀವಿಗೆ ಅಲ್ಲಿ ಆಶ್ರಯ ಪಡೆಯುವುದು ಸಾಧ್ಯವಾಗುವುದಿಲ್ಲ. ನಿಮಗೆ ಜೀವವಿರುವ ಆತ್ಮವನ್ನು ಕೊಲ್ಲುವುದು ಸಾಧ್ಯವಿಲ್ಲ. ಆದರೆ ಅದು ಅಲ್ಲಿರುವುದಕ್ಕೆ ನೀವು ಅನಾನುಕೂಲ ಪರಿಸ್ಥಿತಿ ನಿರ್ಮಾಣ ಮಾಡಿರುತ್ತೀರಿ. ಆಗ ಆತ್ಮವನ್ನು ಬೇರೊಂದು ಗರ್ಭಾಶಯಕ್ಕೆ ವರ್ಗಾಯಿಸಬೇಕಾಗುತ್ತದೆ.

ಗರ್ಭಧಾರಣೆಯಾದ ಮೇಲೆ ದೇಹ ಬೆಳೆಯುತ್ತದೆ. ಅದನ್ನು ನಾವು ನೋಡಬಹುದು. ಗರ್ಭಧರಿಸಿದ ದಿನದಂದೇ ಒಮ್ಮೆಲೆ ಪೂರ್ತಿಯಾಗಿ ದೇಹ ಬೆಳೆಯುವುದಿಲ್ಲ. ಮೊದಲು ಅದು ಒಂದು ಸಣ್ಣ ಬಟಾಣಿ ಕಾಳಿನಂತಿರುತ್ತದೆ. ಅನಂತರ ಕ್ರಮೇಣ ಅದು ಬೆಳೆಯತೊಡಗುತ್ತದೆ. ಹುಟ್ಟಿದ ಅನಂತರ ಕೂಡ ಮಗುವು ಬೆಳೆಯುತ್ತದೆ. ಆದರೆ ಅದು ನಿಜವಾದ ಬೆಳವಣಿಗೆಯಲ್ಲ. ಅದು ಒಂದು ದೇಹದಿಂದ ಮತ್ತೊಂದಕ್ಕೆ ಆಗುವ ಮರುಹುಟ್ಟಿನ ವಿಧಾನ. ಉದಾಹರಣೆಗೆ, ಚಲನಚಿತ್ರದಲ್ಲಿ ಅನೇಕ ಚಿತ್ರಗಳಿರುತ್ತವೆ. ಅವುಗಳು ಕ್ಷಿಪ್ರವಾಗಿ ಚಲಿಸಿದಾಗ ನಾವು ಕ್ರಿಯೆಯನ್ನು ನೋಡಬಹುದು. ಅದೇ ರೀತಿ ನಮ್ಮ ದೇಹದ ಬದಲಾವಣೆಯ ವಿಧಾನವು ಎಷ್ಟು ವೇಗವಾಗಿರುತ್ತದೆಯೆಂದರೆ ನಮಗೆ ಅದನ್ನು ಗ್ರಹಿಸಲಾಗದು. ದೇಹ ಬೆಳೆಯುತ್ತಿದೆ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ದೇಹ ಬೆಳೆಯುತ್ತಿಲ್ಲ, ನಮಗೆ ವಿವಿಧ ದೇಹಗಳು ಸಿಗುತ್ತಿರುತ್ತವೆಯಷ್ಟೆ.

ಕೃಷ್ಣನ ಬಾಹ್ಯ ದೇಹ

ಆದುದರಿಂದ ನಾವು ಹೇಳುವುದೇನೆಂದರೆ ಸಣ್ಣ ಆಧ್ಯಾತ್ಮಿಕ ಕಿಡಿಯು ದೇಹವನ್ನು ಬೆಳೆಸುತ್ತದೆ. ಅದೇ ರೀತಿ ವಿಶ್ವರೂಪದ ಬೃಹತ್‌ ದೇಹವು ಕೃಷ್ಣನ ಬಾಹ್ಯ ದೇಹದ ಬೆಳವಣಿಗೆ. ಆಧ್ಯಾತ್ಮಿಕ ಕಿಡಿಯು ಒಳಗಿರುವುದರಿಂದ ನಿಮ್ಮ ದೇಹದ ಕಾರ್ಯಗಳು ಚೆನ್ನಾಗಿ ಸಾಗುವಂತೆಯೇ, ದೇವೋತ್ತಮನ ಉಪಸ್ಥಿತಿಯ ಕಾರಣ ಜಗತ್ತಿನ ಎಲ್ಲ ಲೌಕಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಆಧ್ಯಾತ್ಮಿಕ ಆತ್ಮ ಇರುವವರೆಗೆ ಮಾತ್ರ ನಮ್ಮ ದೈಹಿಕ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿರುತ್ತವೆ ಎಂಬುವುದು ಮೂರ್ಖ ವಿಜ್ಞಾನಿಗಳಿಗೆ ಅರ್ಥವಾಗದು. ಆದರೆ ವಿವೇಕಿಯಾದವರು ಇದನ್ನು ಅರ್ಥಮಾಡಿಕೊಳ್ಳಬಲ್ಲರು. ಅದೇ ರೀತಿ ಕೃಷ್ಣನು ಇರುವ ಕಾರಣ ಲೌಕಿಕ ಲೋಕದ ಬೃಹತ್‌ ರೂಪವು ಚೆನ್ನಾಗಿ ನಿರ್ವಹಿಸುತ್ತಿದೆ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.

ಅರ್ಜುನ ಕೇಳುತ್ತಾನೆ, “ಕೃಷ್ಣ, ನಿನ್ನ ಶಕ್ತಿಗಳು ಹೇಗೆ ಕಾರ್ಯನಿರತವಾಗಿವೆ ಎಂಬುವುದನ್ನು ದಯೆಯಿಟ್ಟು ವಿವರಿಸು.”

ಕೃಷ್ಣನು 10ನೆಯ ಅಧ್ಯಾಯದಲ್ಲಿ ವಿವರಿಸುತ್ತಾನೆ. ಆಗ ಅವನು ಹೇಳುತ್ತಾನೆ,

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।

ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್‌ ॥

“ಅರ್ಜುನ, ನನ್ನ ಶಕ್ತಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬ ಬಗೆಗೆ ನಾನು ವಿವರಿಸುತ್ತಾ ಹೋಗಬಹುದು. ಆದರೆ ನೀನು ಅದನ್ನು ಸಂಕ್ಷಿಪ್ತಗೊಳಿಸಬಹುದು – ನಾನು ನನ್ನ ಪೂರ್ಣಾಂಶದ ಒಂದರಲ್ಲಿ ಲೌಕಿಕ ಲೋಕವನ್ನು ಪ್ರವೇಶಿಸಿರುವೆ. ಆದುದರಿಂದ ಅದು ವ್ಯವಸ್ಥಿತವಾಗಿ ಸಾಗುತ್ತಿದೆ.” (ಗೀತೆ, 10.42)

ಹೇಗೆ ನಮ್ಮ ಲೌಕಿಕ ದೇಹವು ನಮ್ಮ ನಿಜವಾದ ರೂಪವಲ್ಲವೋ ಹಾಗೆಯೇ ವಿಶ್ವರೂಪವು ಕೃಷ್ಣನ ವಾಸ್ತವಿಕ ರೂಪವಲ್ಲ. ನಮ್ಮ ದೇಹವನ್ನು ಉಡುಪು ಎಂದು ವರ್ಣಿಸಲಾಗಿದೆ. ಒಂದು ಉಡುಪನ್ನು ಯಾವಾಗ ಧರಿಸುವುದು ಸಾಧ್ಯ? ನಿಜವಾದ ರೂಪವಿದ್ದಾಗ ಮಾತ್ರ ಅದು ಸಾಧ್ಯ. ನಿಮಗೆ ಎರಡು ತೋಳುಗಳಿರುವುದರಿಂದ ನಿಮ್ಮ ಅಂಗಿಗೂ ಎರಡು ತೋಳುಗಳು. ಆದರೆ ನೀವು ಅಂಗಿಯಲ್ಲ. ಅದೇ ರೀತಿ ನಾವು ಆಧ್ಯಾತ್ಮಿಕ ರೂಪದವರಾದ ಕಾರಣ ನಾವು ನಮ್ಮ ಕೈ, ಕಾಲು, ತಲೆ ಎಲ್ಲವನ್ನೂ ಬೆಳೆಸಿಕೊಳ್ಳುತ್ತೇವೆ. ನಾವು ಲೌಕಿಕವಾಗಿ ಆವೃತರಾದವರು.

ದೊಡ್ಡವು ಮತ್ತು ಚಿಕ್ಕವು

ಜನರಿಗೆ ವಿಶ್ವರೂಪವೆಂದರೆ ತುಂಬ ಇಷ್ಟವೆಂದು ಇಲ್ಲಿ ವಿವರಿಸಲಾಗಿದೆ. ಕೃಷ್ಣನು ಒಬ್ಬ ವ್ಯಕ್ತಿ, ಇಷ್ಟೊಂದು ಅದ್ಭುತವಾಗಿ ನಿರ್ವಹಿಸಬಲ್ಲನೆಂದು ಜನರು ಊಹಿಸಿಕೊಳ್ಳಲಾರರು. ಅವನು ನಮ್ಮಂತೆ ಚಿಕ್ಕವನೆಂದು ಅವರು ಭಾವಿಸುತ್ತಾರೆ. ನಾವು ಸಣ್ಣ ಬೆಂಕಿಯಂತೆ ಮತ್ತು ಕೃಷ್ಣನು ಬೃಹತ್‌ ಬೆಂಕಿಯಂತೆ ಎಂಬುವುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಒಂದು ಕಿಡಿಯು ನಿಮ್ಮ ಬಟ್ಟೆಯ ಒಂದು ಭಾಗವನ್ನಷ್ಟೇ ಸುಡಬಹುದು, ಆದರೆ ದೊಡ್ಡ ಬೆಂಕಿಯು ಅತಿ ಹೆಚ್ಚಿನದನ್ನು ಸುಡುತ್ತದೆ. ಅದೇ ರೀತಿ, ಭಗವಂತ ಮತ್ತು ನಾವು ಗುಣಾತ್ಮಕವಾಗಿ ಒಂದೇ ಆಗಿದ್ದರೂ ಅವನು ದೊಡ್ಡವನು, ನಾವು ಚಿಕ್ಕವರು.

ನಮಗೂ ಭಗವಂತನಿಗಿರುವ ಗುಣಗಳಿವೆ, ಆದರೆ ಅದು ಅತಿ ಕಡಮೆ ಪ್ರಮಾಣದಲ್ಲಿ. ಚಂದ್ರನಲ್ಲಿಗೆ ಹೋಗುವ ಕೋಶದಂತಹ ಸಾಧನಗಳನ್ನು ಕಂಡುಹಿಡಿದು ನಾವು ಅದ್ಭುತವಾಗಿ ಆಡಬಹುದು. ಅಥವಾ ನಾವು ಆಕಾಶದಲ್ಲಿ ಏನನ್ನಾದರೂ ತೇಲಿಬಿಡಬಹುದು. ಆದರೆ ಅದು ಭಗವಂತನ ಅನುಕರಣೆ ಅಥವಾ ನಕಲು. ಪ್ರಭುವು ಸೂರ್ಯ ಮತ್ತು ಚಂದ್ರರಂತಹ ಬೃಹತ್‌ ಗ್ರಹಗಳನ್ನು ಗಗನದಲ್ಲಿ ತೇಲಿಬಿಟ್ಟಿದ್ದಾನೆ. ನಿಮಗೆ ಅದನ್ನು ಮಾಡುವುದು ಸಾಧ್ಯವಿಲ್ಲ. ನೀವು ಸಣ್ಣ ಸ್ಪೂಟ್ನಿಕ್‌ನಷ್ಟೇ ತೇಲಿಬಿಡಬಹುದು.

ನಿಮಗೆ ಸೃಷ್ಟಿಸುವ ಶಕ್ತಿ ಇದೆ. ದೇವರಿಗೂ ಸೃಷ್ಟಿಸುವ ಶಕ್ತಿ ಇದೆ. ಆದರೆ ಭಗವಂತನ ಸೃಷ್ಟಿ ಶಕ್ತಿಯೊಂದಿಗೆ ನಿಮ್ಮದನ್ನು ಹೋಲಿಸಲಾಗದು. ನೀವು ದೇವರಾಗುವುದು ಸಾಧ್ಯವಿಲ್ಲ. ನೀವು ಅನುಕರಿಸಬಹುದು ಅಥವಾ ಏನಾದರೂ ಚಿಕ್ಕದಾಗಿ ಮಾಡಬಹುದು, ಮಕ್ಕಳು ಸಣ್ಣ ಆಟಿಕೆಗಳೊಂದಿಗೆ ಆಡುತ್ತಿರುವಂತೆ. ನೀವು ಸಣ್ಣ ಆಟಿಕೆಗಳೊಂದಿಗೆ ಆಡಬಹುದು ಮತ್ತು ದೊಡ್ಡ ವಿಜ್ಞಾನಿಗಳೆಂದು ಪ್ರಚಾರ ಮಾಡಿಕೊಳ್ಳಬಹುದು. ಅಷ್ಟೇ. ಆದರೆ ನೀವು ಏನೂ ಅಲ್ಲ. ಅದನ್ನು ಅರಿತುಕೊಳ್ಳಬೇಕು.

ಆ ಅರಿವನ್ನೇ ಭಕ್ತಿಯೋಗ ಎಂದು ಕರೆಯುವುದು. ಮೂರ್ಖರು “ನಾನು ದೇವರು” ಎಂದು ಬೀಗುತ್ತಾರೆ. ನೀವು ಅದು ಹೇಗೆ ದೇವರಾಗುವುದು ಸಾಧ್ಯ? ನಿಮಗೆ ಪ್ರಭುವಿನ ಗುಣಗಳಲ್ಲಿ ತೃಣ ಮಾತ್ರದ್ದಿರಬಹುದು. ಆದರೆ ನೀವು ದೇವರೆಂದು ಹೇಳಿಕೊಳ್ಳುವುದು ಸಾಧ್ಯವಿಲ್ಲ. ಚಿನ್ನದ ಸಣ್ಣ ಚೂರೂ ಚಿನ್ನವೇ. ಆದರೆ ಅದನ್ನು ಚಿನ್ನದ ಗಣಿಗೆ ಹೋಲಿಸಲಾಗದು.

ಜನರು ಬೃಹತ್‌ ವಿಶ್ವರೂಪವನ್ನು ಮೆಚ್ಚುತ್ತಾರೆ. “ಓ, ನಾನು ಯಾಕೆ ಕೃಷ್ಣನನ್ನು ಪೂಜಿಸಬೇಕು? ನಾನು ಬೃಹತ್‌ ವಿಶ್ವರೂಪವನ್ನು ಆರಾಧಿಸುವೆ” ಎಂದು ನೀವು ಯೋಚಿಸಬಹುದು. ಆದರೆ ಈ ದೊಡ್ಡ ರೂಪವು ಕೃಷ್ಣನ ಶಕ್ತಿಯ ಒಂದು ಉತ್ಪನ್ನ. ಅವರಿಗೆ ಅದು ಗೊತ್ತಿಲ್ಲ. ಇಲ್ಲಿ ಹೀಗೆ ಹೇಳಿದೆ, ಮಾಯಾ ಗುಣೈರ್‌ ವಿರಚಿತಂ : ಕೃಷ್ಣನ ಲೌಕಿಕ ಶಕ್ತಿಯಿಂದ ಈ ವಿಶ್ವರೂಪವನ್ನು ಸೃಷ್ಟಿಸಲಾಗಿದೆ. ಆಧ್ಯಾತ್ಮಿಕ ಶಕ್ತಿಯ ಹಾಗೇ ಲೌಕಿಕ ಶಕ್ತಿಯೂ ಕೃಷ್ಣನ ದೇಹದಿಂದ ಬರುತ್ತದೆ. ನಾವು ಏನೇನು ನೋಡುತ್ತೇವೆಯೋ ಅದು ಕೃಷ್ಣನ ಭಿನ್ನ ಶಕ್ತಿಗಳಿಂದ ಕೂಡಿದೆ. ವಿಷ್ಣು ಪುರಾಣದಲ್ಲಿ ಹೀಗೆ ಹೇಳಿದೆ,

ಏಕ ದೇಶ ಸ್ಥಿತಸ್ಯಾಗ್ನೇರ್‌ ಜ್ಯೋತ್ಸ್ನಾ ವಿಸ್ತಾರಿಣೀ ಯಥಾ ।

ಪರಸ್ಯ ಬ್ರಹ್ಮಣಃ ಶಕ್ತಿಃ ತಥೇದಂ ಅಖಿಲಂ ಜಗತ್‌ ॥

ನೀವು ನೋಡುತ್ತಿರುವ ವ್ಯಾಪಕ ವಿಶ್ವರೂಪವು ಪರಸ್ಯ ಬ್ರಹ್ಮಣಃ ಶಕ್ತಿಃ, ಪರಮ ಪುರುಷನ ಶಕ್ತಿಯ ರೂಪವಲ್ಲದೆ ಬೇರೇನೂ ಅಲ್ಲ. ಹೇಗೆ? ಉದಾಹರಣೆಯನ್ನು ನೀಡಲಾಗಿದೆ – ಏಕ ದೇಶ ಸ್ಥಿತಸ್ಯಾಗ್ನೇಃ, ಬೆಂಕಿಯಂತೆ. ಜಗತ್ತಿನ ಅತಿ ದೊಡ್ಡ ಬೆಂಕಿಯಾದ ಸೂರ್ಯನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಸೂರ್ಯನು ಒಂದು ಕಡೆ ಇದ್ದಾನೆ, ಆದರೆ ಸೂರ್ಯನ ಬೆಳಕು ಎಲ್ಲ ಕಡೆಗೂ ಹರಡಿದೆ. ಸೂರ್ಯನ ಬೆಳಕು ಇಡೀ ವಿಶ್ವವನ್ನೇ ಆವರಿಸಬಹುದು, ಆದರೆ ಅದು ಅಷ್ಟು ಮುಖ್ಯವಾದುದಲ್ಲ. ಸೂರ್ಯ ಮಂಡಲ ಮುಖ್ಯ. ಅದೇ ರೀತಿ ಕೃಷ್ಣನು ತನ್ನ ಆಧ್ಯಾತ್ಮಿಕ ಧಾಮ ಗೋಲೋಕ ವೃಂದಾವನದಲ್ಲಿ ಗೋಪಿಯರೊಂದಿಗೆ ಆಡುತ್ತಿದ್ದಾನೆ ಮತ್ತು ಅವನ ತೇಜಸ್ಸು ಇಡೀ ವಿಶ್ವವನ್ನೇ ಸೃಷ್ಟಿಸುತ್ತಿದೆ. ಕೃಷ್ಣನು ಅಲ್ಲಿ ಆಡುತ್ತಿದ್ದಾನೆಂದರೆ ಅವನು ಬೇರೆ ಕಡೆ ಗೈರು ಹಾಜರೆಂದು ಭಾವಿಸಬಾರದು. ಇಲ್ಲ. ಗೋಲೋಕ ಏವ ನಿವಸತಿ ಅಖಿಲಾತ್ಮ ಭೂತಃ – ಕೃಷ್ಣನು ಗೋಲೋಕ ವೃಂದಾವನದಲ್ಲಿ ಇದ್ದಾನೆ, ಆದರೆ ಅವನು ಎಲ್ಲ ಕಡೆಯೂ ಇರುತ್ತಾನೆ. ಅದು ಕೃಷ್ಣ. ನಾನು ಇಲ್ಲಿ ಕುಳಿತಿರುವೆ, ಆದುದರಿಂದ ನಾನು ನನ್ನ ನಿವಾಸದಲ್ಲಿ ಇಲ್ಲ. ಅದು ನನ್ನ ಸ್ಥಿತಿ. ಆದರೆ ಕೃಷ್ಣನ ಸ್ಥಾನ ಬೇರೆ. ಅವನು ಯಾವಾಗಲೂ ಗೋಲೋಕ ವೃಂದಾವನದಲ್ಲಿದ್ದರೂ ಅವನು ಎಲ್ಲ ಕಡೆ ಇರುತ್ತಾನೆ.

ಹೇಗೆ? ಅಂಡಾಂತರಸ್ಥ ಪರಮಾಣು ಚಯಾಂತರ ಸ್ಥಂ : ಅವನು ಪ್ರತಿಯೊಂದು ವಿಶ್ವದೊಳಗೂ ಇದ್ದಾನೆ ಮತ್ತು ಪ್ರತಿ ಅಣುವಿನಲ್ಲಿಯೂ. ಅದು ಕೃಷ್ಣ. ಅವನು ಗೋಪಾಲ ಬಾಲಕರೊಂದಿಗೆ ಅಥವಾ ಗೋಪಿಯರೊಂದಿಗೆ ಆಡುತ್ತಿದ್ದಾನೆ ಎಂದ ಮಾತ್ರಕ್ಕೆ ಅವನನ್ನು ಸಾಮಾನ್ಯ ಮನುಷ್ಯನೆಂದು ಭಾವಿಸಬೇಡಿ.

ಮೂರ್ಖರು ಕೃಷ್ಣನನ್ನು ಅನುಕರಿಸುತ್ತಾರೆ. ಅವರು ಹೇಳುತ್ತಾರೆ, “ಓ, ಕೃಷ್ಣನು ಗೋಪಿಯರೊಂದಿಗೆ ಆನಂದಿಸಿದನೇ? ನಾನೂ ಕೂಡ ಒಂದಷ್ಟು ಬಾಲಕಿಯರನ್ನು ಸೇರಿಸಿಕೊಂಡು ಆನಂದಿಸುವೆ.”

ನಾವು ಹೇಳುತ್ತೇವೆ, “ಆದರೆ ಮೊದಲು ನೀವು ವಿಶ್ವಾದ್ಯಂತ ಎಲ್ಲ ಕಡೆ ಪ್ರಾತಿನಿಧ್ಯ ಪಡೆದುಕೊಳ್ಳಿ. ಅನಂತರ ಆನಂದಿಸಿ.”

ಆದರೆ ಮೂರ್ಖರಿಗೆ ಅದು ಸಾಧ್ಯವಿಲ್ಲ. ಯುವತಿಯರ ಮಧ್ಯೆ ಇದ್ದು ಹೇಗೆ ಆನಂದಿಸಬೇಕೆಂಬುದನ್ನು ಅವರು ಅನುಕರಣೆಯಷ್ಟೇ ಮಾಡಲು ಸಾಧ್ಯ. ಅದೇ ವ್ಯತ್ಯಾಸ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi